ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ
ಭಾರತೀಯ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಕೃಷಿ ತಂತ್ರಜ್ಞಾನ ಮತ್ತು ಆವಿಷ್ಕಾರಗಳ ಉತ್ತೇಜನ ಹಾಗೂ ಪ್ರಸಾರ ಕುರಿತ ಒಡಂಬಡಿಕೆಗೆ ಇಫ್ಕೊ ಮತ್ತು ಪ್ರಸಾರ ಭಾರತಿ ಸಹಿ
Posted On:
06 OCT 2020 5:38PM by PIB Bengaluru
ವಿಶ್ವದ ಅತಿದೊಡ್ಡ ರಾಸಾಯನಿಕ ರಸಗೊಬ್ಬರ ಸಹಕಾರಿ ಒಕ್ಕೂಟ, ಭಾರತೀಯ ರೈತರ ರಸಗೊಬ್ಬರ ಸಹಕಾರ ನಿಯಮಿತ (ಇಫ್ಕೊ) ಮತ್ತು ಪ್ರಸಾರ ಭಾರತಿ ಹೊಸ ಕೃಷಿ ತಂತ್ರಜ್ಞಾನ ಮತ್ತು ಆವಿಷ್ಕಾರಗಳ ಉತ್ತೇಜನ ಹಾಗೂ ಪ್ರಸಾರ ಕುರಿತಂತೆ ಸೋಮವಾರ ಒಡಂಬಡಿಕೆಗೆ ಸಹಿ ಹಾಕಿದವು. ನವದೆಹಲಿಯ ಪೃಥ್ವಿ ಭವನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಒಪ್ಪಂದದ ಪ್ರಕಾರ ಡಿಡಿ ಕಿಸಾನ್ ಚಾನಲ್ ರೈತರಿಗೆ ಅನುಕೂಲವಾಗುವಂತೆ ಕೃಷಿ ವಲಯದಲ್ಲಿ ಅಳವಡಿಸಿಕೊಂಡಿರುವ ವಿನೂತನ ತಂತ್ರಜ್ಞಾನಗಳ ಕುರಿತು ಸರಳ ಭಾಷೆಯಲ್ಲಿ 30 ನಿಮಿಷಗಳ ಸರಣಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿದೆ.
ರೈತರನ್ನು ಆತ್ಮನಿರ್ಭರ (ಸ್ವಾವಲಂಬಿ)ಗೊಳಿಸಲು ಹೊಸ ಕೃಷಿ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದ್ದು, ಅವುಗಳನ್ನು ಅಳವಡಿಸಿಕೊಳ್ಳಲು ರೈತರಿಗೆ ಅಗತ್ಯ ವಿವರಣೆಯನ್ನು ನೀಡಲಾಗುವುದು. ಈ ಒಡಂಬಡಿಕೆಯಿಂದಾಗಿ ಉದ್ದೇಶ ಸಾಧನೆಗೆ ನೆರವಾಗಲಿದೆ. ಇಫ್ಕೊದ ವಿನೂತನ ಆವಿಷ್ಕಾರಗಳನ್ನು ಸುಮಾರು 25 ಕಂತುಗಳಲ್ಲಿ (ಎಪಿಸೋಡ್) ಡಿಡಿ ಕಿಸಾನ್ ವಾಹಿನಿಯ ಮೂಲಕ ಸರಳ ಭಾಷೆಯಲ್ಲಿ ರೈತರಿಗೆ ಮಾಹಿತಿಯನ್ನು ಒದಗಿಸಲಾಗುವುದು.
ಇಫ್ಕೊದ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಯು.ಎಸ್. ಅಶ್ವತಿ ಅವರು “ಇಫ್ಕೊ, ಪರ್ಯಾಯ ಯೂರಿಯಾವನ್ನು ಅಭಿವೃದ್ಧಿಪಡಿಸಿದ್ದು, ಅದು ನ್ಯಾನೊ ತಂತ್ರಜ್ಞಾನ ಆಧರಿಸಿದೆ ಮತ್ತು ಅದು ರೈತರಿಗೆ ನೆರವಾಗಲಿದೆ’’ ಎಂದರು. ರೈತರಿಗೆ ಭಾರೀ ಪ್ರಮಾಣದಲ್ಲಿ ಅನುಕೂಲ ಮಾಡಿಕೊಡುವ ಆವಿಷ್ಕಾರಗಳನ್ನು ಇದೀಗ ಡಿಡಿ ಕಿಸಾನ್ ವಾಹಿನಿಯ ಮೂಲಕ ಪ್ರಸಾರ ಮಾಡುವುದು ಅತ್ಯಂತ ಸಂತೋಷಕರ ಸಂಗತಿ. ಇದು 2022ರ ವೇಳೆಗೆ ರೈತರ ಆದಾಯವನ್ನು ದುಪ್ಪಟ್ಟುಗೊಳಿಸುವ ಗುರಿ ಸಾಧನೆಗೆ ಸಹಕಾರಿಯಾಗಲಿದೆ ಎಂದರು.
ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರಾದ ಕೆ. ವಿಜಯ ರಾಘವನ್, ರೈತರ ಸಬಲೀಕರಣ ನಿಟ್ಟಿನಲ್ಲಿ ಇದೊಂದು ಐತಿಹಾಸಿಕ ಕ್ರಮವಾಗಿದೆ ಎಂದು ಬಣ್ಣಿಸಿದರು.
ಇಫ್ಕೊ, ರೈತರಿಗಾಗಿ ವಿನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಿದೆ ಮತ್ತು ದೂರದರ್ಶನ ದೇಶಾದ್ಯಂತ ಅತ್ಯಂತ ಬೃಹತ್ ಜಾಲವನ್ನು ಹೊಂದಿದೆ. ಅತಿ ದೊಡ್ಡ ಜಾಲವನ್ನು ಹೊಂದಿರುವ ದೂರದರ್ಶನ ಕೃಷಿ ಆವಿಷ್ಕಾರಗಳನ್ನು ರೈತರಿಗೆ ಸರಳವಾದ ಭಾಷೆಯಲ್ಲಿ ವಿವರಿಸುವುದರಿಂದ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಅನುಕೂಲವಾಗಲಿದೆ.
ಪ್ರಸಾರ ಭಾರತಿ ಸಿಇಒ ಶಶಿಶೇಖರ್ ವೆಂಪತಿ, ಇದು ಹೆಮ್ಮೆಯ ವಿಷಯ, ಈ ಮಾಧ್ಯಮದ ಮೂಲಕ ರೈತರಿಗೆ ಅತ್ಯಂತ ಸರಳ ಭಾಷೆಯಲ್ಲಿ ಮಾಹಿತಿಯನ್ನು ಒದಗಿಸಲಾಗುವುದು ಎಂದರು. ಈ ಕಾರ್ಯಕ್ರಮಗಳನ್ನು ಡಿಜಿಟಲ್ ಮಾಧ್ಯಮದ ಮೂಲಕ ಪ್ರಸಾರ ಮಾಡಲಾಗುವುದರಿಂದ ಯುವ ರೈತರು ಇದರಿಂದ ಹೆಚ್ಚಿನ ಅನುಕೂಲ ಪಡೆದುಕೊಳ್ಳಬಹುದು ಎಂದರು
ದೂರದರ್ಶನದ ಮಹಾನಿರ್ದೇಶಕ ಮಾಯಾಂಕ್ ಅಗರವಾಲ್, ಈ ಒಪ್ಪಂದದಿಂದ ಪ್ರಯೋಗಾಲಯಗಳಲ್ಲಿ ವಿಜ್ಞಾನಿಗಳು ಮಾಡುವ ಆವಿಷ್ಕಾರಗಳನ್ನು ಉತ್ತೇಜಿಸಲು ನೆರವಾಗುವುದಲ್ಲದೆ, ರೈತರು ತಮ್ಮ ಹೊಲಗಳಲ್ಲಿ ಮಾಡುವ ಪ್ರಯೋಗಗಳನ್ನು ತಿಳಿಸಲು ಸಾಧ್ಯವಾಗಲಿದೆ. ಅವು ಯುವ ರೈತರಿಗೆ ಹೆಚ್ಚಿನ ಪ್ರಯೋಜನ ದೊರಕಿಸಿಕೊಡಲಿವೆ ಎಂದು ಹೇಳಿದರು.
***
(Release ID: 1662069)
Visitor Counter : 294