ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಶ್ರೀ ಪ್ರಕಾಶ್ ಜಾವಡೇಕರ್ ಅವರಿಂದ ಚಲನಚಿತ್ರ ಪ್ರದರ್ಶನಕ್ಕೆ ಸಾಮಾನ್ಯ ಕಾರ್ಯವಿಧಾನ (ಎಸ್‌ಒಪಿ) ಬಿಡುಗಡೆ


ಶೇ. 50 ಆಸನ ಸಾಮರ್ಥ್ಯದೊಂದಿಗೆ ಚಿತ್ರ ಮಂದಿರಗಳಲ್ಲಿ ಪ್ರದರ್ಶನಕ್ಕೆ ಅವಕಾಶ

Posted On: 06 OCT 2020 11:59AM by PIB Bengaluru

ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಶ್ರೀ ಪ್ರಕಾಶ್ ಜಾವಡೇಕರ್ ಅವರು ಇಂದು ನವದೆಹಲಿಯಲ್ಲಿ ಚಲನಚಿತ್ರ ಪ್ರದರ್ಶನಕ್ಕಾಗಿ ಸಾಮಾನ್ಯ ಕಾರ್ಯವಿಧಾನಗಳನ್ನು (ಎಸ್ಒಪಿ) ಬಿಡುಗಡೆ ಮಾಡಿದರು. ಚಲನಚಿತ್ರ ಪ್ರದರ್ಶನದ ಪುನಾರಂಭಕ್ಕಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದೊಂದಿಗೆ ಸಮಾಲೋಚಿಸಿ ಸಿದ್ಧಪಡಿಸಲಾಗಿರುವ ಎಸ್ಒಪಿಯು ಸಾಂಕ್ರಾಮಿಕ ತಡೆಗಟ್ಟುವ ಕ್ರಮವಾಗಿದೆ.

ಎಸ್ಒಪಿ ಬಿಡುಗಡೆ ಮಾಡಿ ಮಾತನಾಡಿದ ಶ್ರೀ ಪ್ರಕಾಶ್ ಜಾವಡೇಕರ್, ಗೃಹ ಸಚಿವಾಲಯದ ನಿರ್ಧಾರದಂತೆ, 2020 ಅಕ್ಟೋಬರ್ 15 ರಿಂದ ಚಿತ್ರಮಂದಿರಗಳು ಮತ್ತೆ ತೆರೆಯುತ್ತವೆ. ನಿಟ್ಟಿನಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಎಸ್ಒಪಿಯನ್ನು ಸಿದ್ಧಪಡಿಸಿದೆ ಎಂದು ಹೇಳಿದರು.

ಎಸ್ಒಪಿಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ನೀಡಿರುವ ಸಾಮಾನ್ಯ ಮಾರ್ಗಸೂಚಿಗಳನ್ನು ಒಳಗೊಂಡಿರುತ್ತದೆ. ಇವುಗಳಲ್ಲಿ ಚಿತ್ರಮಂದಿರಕ್ಕೆ ಬರುವ ಸಿಬ್ಬಂದಿ ಸೇರಿ ಎಲ್ಲರಿಗೂ ತಾಪಮಾನ ಪರೀಕ್ಷೆ, ಸಾಕಷ್ಟು ದೈಹಿಕ ಅಂತರ, ಮುಖ ಕವಚ / ಮುಖಗವಸುಗಳ ಬಳಕೆ, ಆಗಾಗ್ಗೆ ಕೈ ತೊಳೆಯುವುದು, ಕೈಗಳ ನೈರ್ಮಲ್ಯಕಾರಕದ ಪೂರೈಕೆ ಮತ್ತು ಚಲನಚಿತ್ರಗಳ ಪ್ರದರ್ಶನಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟವಾಗಿ ಉಸಿರಾಟದ ಶಿಷ್ಟಾಚಾರಗಳನ್ನು ಪಾಲಿಸಬೇಕು.

ದೈಹಿಕ ಅಂತರ, ಗುರುತು ಮಾಡಿದ ನಿರ್ದಿಷ್ಟ ಸರತಿ ಸಾಲಿನಲ್ಲಿಯೇ ಪ್ರವೇಶ ಮತ್ತು ನಿರ್ಗಮನ, ನೈರ್ಮಲ್ಯೀಕರಣ, ಸಿಬ್ಬಂದಿಯ ಸುರಕ್ಷತೆ, ಸಂಪರ್ಕ ಕಡಿಮೆಗೊಳಿಸುವಿಕೆ ಸೇರಿದಂತೆ ಕ್ಷೇತ್ರದಲ್ಲಿ ಸೂಚಿಸಲಾದ ಅಂತರರಾಷ್ಟ್ರೀಯ ಅಭ್ಯಾಸಗಳನ್ನು ಗಣನೆಗೆ ತೆಗೆದುಕೊಂಡು ಸಾಮಾನ್ಯ ಎಸ್ಒಪಿಗಳನ್ನು ಸಚಿವಾಲಯ ರೂಪಿಸಿದೆ. ಆಸನ ವ್ಯವಸ್ಥೆಯನ್ನು ಶೇ.50ಕ್ಕೆ ಸೀಮಿತಗೊಳಿಸಲಾಗುತ್ತದೆ. ಜನದಟ್ಟಣೆಯನ್ನು ತಡೆಯಲು ಮಲ್ಟಿಪ್ಲೆಕ್ಸ್ ಗಳಲ್ಲಿ ಪ್ರದರ್ಶನ ಸಮಯಗಳನ್ನು ಹಂತಹಂತವಾಗಿ ನಿಗದಿಪಡಿಸಬೇಕು. ಚಿತ್ರಮಂದಿರದಲ್ಲಿ ತಾಪಮಾನವನ್ನು 24 ° - 30 ° ಸೆಲ್ಷಿಯಸ್ ನಲ್ಲಿ ಇಡಬೇಕು.

ಚಲನಚಿತ್ರ ಪ್ರದರ್ಶನವನ್ನು ಪುನರಾರಂಭಿಸುವಾಗ ಮಾರ್ಗದರ್ಶಿ ಸೂತ್ರ ಮತ್ತು ಎಸ್ಒಪಿಯನ್ನು ಎಲ್ಲಾ ರಾಜ್ಯಗಳು ಮತ್ತು ಇತರ ಪಾಲುದಾರರು ಮತ್ತು ರಾಜ್ಯ ಸರ್ಕಾರಗಳು ಬಳಸಬಹುದು.

ಚಲನಚಿತ್ರಗಳ ಪ್ರದರ್ಶನವು ನಮ್ಮ ದೇಶದ ಜಿಡಿಪಿಗೆ ಅಪಾರ ಕೊಡುಗೆ ನೀಡುವ ಪ್ರಮುಖ ಆರ್ಥಿಕ ಚಟುವಟಿಕೆಯಾಗಿದೆ. ಪ್ರಸ್ತುತ ಕೋವಿಡ್- 19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ಚಲನಚಿತ್ರಗಳ ಪ್ರದರ್ಶನಗಳಲ್ಲಿ ಭಾಗಿಯಾಗಿರುವ ವಿವಿಧ ಪಾಲುದಾರರು ತಮ್ಮ ಕಾರ್ಯಾಚರಣೆಗಳು ಮತ್ತು ಚಟುವಟಿಕೆಗಳನ್ನು ಪುನರಾರಂಭಿಸುವಾಗ ಸಾಂಕ್ರಾಮಿಕ ಹರಡುವಿಕೆಯನ್ನು ನಿರ್ಬಂಧಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯವಾಗಿದೆ.

ಗೃಹ ಸಚಿವಾಲಯವು 2020 ಸೆಪ್ಟೆಂಬರ್ 30 ಆದೇಶದಲ್ಲಿ, ಸಿನೆಮಾ/ ಚಿತ್ರಮಂದಿರಗಳು / ಮಲ್ಟಿಪ್ಲೆಕ್ಸ್ಗಳನ್ನು ಅವುಗಳ ಆಸನ ಸಾಮರ್ಥ್ಯದ ಶೇ.50 ರವರೆಗೆ ಪುನಃ ತೆರೆಯಲು ಮಾರ್ಗಸೂಚಿಗಳನ್ನು ಹೊರಡಿಸಿದೆ. ಇದು ಕಂಟೈನ್ಮೆಂಟ್ ವಲಯಗಳ ಹೊರಗಿನ ಪ್ರದೇಶಗಳಲ್ಲಿ 2020 ಅಕ್ಟೋಬರ್ 15 ರಿಂದ ಜಾರಿಗೆ ಬರುತ್ತದೆ.

ವಿವರವಾದ ಹೇಳಿಕೆಯನ್ನು ಕೆಳಗಿನ ಲಿಂಕ್ನಲ್ಲಿ ನೋಡಬಹುದು:

https://mib.gov.in/sites/default/files/SOP%20for%20exhibition%20of%20films.pdf

***



(Release ID: 1662061) Visitor Counter : 200