ಪ್ರಧಾನ ಮಂತ್ರಿಯವರ ಕಛೇರಿ
75ನೇ ವಿಶ್ವ ಸಂಸ್ಥೆ ಸಾಮಾನ್ಯ ಸಭೆಯ (ಯು.ಎನ್.ಜಿ.ಎ.) ಅಧಿವೇಶನ 2020 ರಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ
Posted On:
26 SEP 2020 7:48PM by PIB Bengaluru
ಸಾಮಾನ್ಯ ಸಭೆಯ ಗೌರವಾನ್ವಿತ ಅಧ್ಯಕ್ಷರೇ, ಭಾರತದ 1.3 ಬಿಲಿಯನ್ ಜನತೆಯ ಪರವಾಗಿ ನಾನು ವಿಶ್ವ ಸಂಸ್ಥೆಯ 75 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರತೀಯೊಂದು ಸದಸ್ಯ ರಾಷ್ಟ್ರವನ್ನೂ ಅಭಿನಂದಿಸಲು ಬಯಸುತ್ತೇನೆ.ವಿಶ್ವ ಸಂಸ್ಥೆಯ ಸ್ಥಾಪಕ ಸದಸ್ಯರಲ್ಲಿ ಒಂದಾಗಿರುವುದಕ್ಕೆ ಭಾರತವು ಹೆಮ್ಮೆಪಡುತ್ತದೆ. ಈ ಚಾರಿತ್ರಿಕ ಸಂದರ್ಭದಲ್ಲಿ , ನಾನು ಈ ಜಾಗತಿಕ ವೇದಿಕೆಗೆ ಬಂದು ಭಾರತದ 1.3 ಬಿಲಿಯನ್ ಜನತೆಯ ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದೇನೆ.
ಗೌರವಾನ್ವಿತರೇ
1945 ರ ಜಗತ್ತು ಇಂದಿನ ಜಗತ್ತಿಗಿಂತ ಬಹಳ ಭಿನ್ನವಾಗಿತ್ತು. ಜಾಗತಿಕ ಪರಿಸ್ಥಿತಿಗಳು, ಮೂಲ –ಸಂಪನ್ಮೂಲಗಳು, ಸಮಸ್ಯೆಗಳು-ಪರಿಹಾರಗಳು; ಎಲ್ಲವೂ ಸಾಕಷ್ಟು ಬಿನ್ನತೆಯನ್ನು ಹೊಂದಿದ್ದವು. ಅದರ ಫಲಿತವಾಗಿ ಜಾಗತಿಕ ಕಲ್ಯಾಣಕ್ಕಾಗಿ ಸ್ಥಾಪನೆಯಾದ ಸಂಸ್ಥೆಗಳ ರೂಪ ಮತ್ತು ಸಂರಚನೆ ಆ ಕಾಲದಲ್ಲಿದ್ದ ಪರಿಸ್ಥಿತಿಗೆ ಅನುಗುಣವಾಗಿತ್ತು. ಇಂದು ನಾವು ಸಂಪೂರ್ಣವಾಗಿ ಭಿನ್ನವಾದ ಕಾಲಘಟ್ಟದಲ್ಲಿದ್ದೇವೆ. 21 ನೇ ಶತಮಾನದಲ್ಲಿ ನಮ್ಮ ವರ್ತಮಾನದ ಮತ್ತು ಭವಿಷ್ಯದ ಅವಶ್ಯಕತೆಗಳು ಮತ್ತು ಸವಾಲುಗಳು ಹಿಂದಿನದಕ್ಕಿಂತಲೂ ಭಾರೀ ಪ್ರಮಾಣದಲ್ಲಿ ಭಿನ್ನವಾಗಿವೆ. ಆದುದರಿಂದ ಅಂತಾರಾಷ್ಟ್ರೀಯ ಸಮುದಾಯವು ಇಂದು ಬಹಳ ಪ್ರಮುಖವಾದ ಪ್ರಶ್ನೆಯನ್ನು ಎದುರಿಸುತ್ತಿದೆ: 1945 ರ ಪರಿಸ್ಥಿತಿಯಲ್ಲಿ ಅಸ್ತಿತ್ವಕ್ಕೆ ಬಂದ ಸಂಸ್ಥೆಯ ಗುಣಲಕ್ಷಣ , ಇಂದೂ ಕೂಡಾ ಪ್ರಸ್ತುತವಾಗಿದೆಯೇ ?. ಶತಮಾನ ಬದಲಾಗಿ ಮತ್ತು ಅದಕ್ಕನುಗುಣವಾಗಿ ನಾವು ಬದಲಾಗದಿದ್ದರೆ , ಆಗ ಬದಲಾವಣೆಗಳನ್ನು ತರಬೇಕಾದ ಶಕ್ತಿ ಕುಂದುತ್ತದೆ. ವಿಶ್ವ ಸಂಸ್ಥೆಯ ಕಳೆದ 75 ವರ್ಷಗಳನ್ನು ಮೌಲ್ಯಮಾಪನ ಮಾಡಿದರೆ, ನಾವು ಹಲವಾರು ಸಾಧನೆಗಳನ್ನು ಕಾಣುತ್ತೇವೆ.
ಆದರೆ , ಇದೇ ಅವಧಿಯಲ್ಲಿ, ವಿಶ್ವಸಂಸ್ಥೆ ಆತ್ಮ ನಿರೀಕ್ಷಣೆ ಮಾಡಬೇಕಾದಂತಹ ಗಂಭೀರ ಅಗತ್ಯಗಳುಳ್ಳ ಹಲವಾರು ಘಟನೆಗಳಾಗಿವೆ. ಯಾರಾದರೂ ಹೇಳಬಹುದು, ನಾವು ಯಶಸ್ವಿಯಾಗಿ ಮೂರನೇ ಮಹಾಯುದ್ದವನ್ನು ತಪ್ಪಿಸಿದೆವು ಎಂದು, ಆದರೆ ನಾವು ಅಲ್ಲಿ ಹಲವಾರು ಯುದ್ದಗಳಾಗಿವೆ, ಅಂತಃಕಲಹಗಳಾಗಿವೆ ಎಂಬುದನ್ನು ನಿರಾಕರಿಸಲಾಗದು. ಹಲವಾರು ಭಯೋತ್ಪಾದಕ ದಾಳಿಗಳು ಮತ್ತು ರಕ್ತಪಾತಗಳು ವಿಶ್ವವನ್ನು ನಡುಗಿಸಿವೆ. ಈ ಯುದ್ದದಲ್ಲಿ ಮತ್ತು ದಾಳಿಗಳಲ್ಲಿ ಜೀವ ಕಳೆದುಕೊಂಡವರು ಮನುಷ್ಯರಾದ ನನ್ನಂತಹವರು ಮತ್ತು ನಿಮ್ಮಂತಹವರು. ಈ ಜಗತ್ತನ್ನು ಶ್ರೀಮಂತಗೊಳಿಸುತ್ತಿದ್ದ ಸಾವಿರಾರು ಮಕ್ಕಳು ಬೆಳೆಯುವುದಕ್ಕೆ ಮೊದಲೇ ನಮ್ಮನ್ನು ತೊರೆದುಹೋಗಿದ್ದಾರೆ. ಹಲವು ಮಂದಿ ತಮ್ಮ ಬದುಕಿನ ಉಳಿತಾಯವನ್ನು ಕಳೆದುಕೊಂಡಿದ್ದಾರೆ. ಮತ್ತು ವಸತಿರಹಿತರಾಗಿದ್ದಾರೆ. ಅಂತಹ ಸಂದರ್ಭಗಳಲ್ಲಿ ವಿಶ್ವಸಂಸ್ಥೆಯ ಪ್ರಯತ್ನಗಳು ಸಾಕಷ್ಟು ಪ್ರಮಾಣದಲ್ಲಿ ಆಗಿವೆಯೇ ಅಥವಾ ಈ ಪ್ರಯತ್ನಗಳು ಇಂದೂ ಸಾಕಷ್ಟಿವೆಯೇ ?. ಕಳೆದ 8-9 ತಿಂಗಳಿಂದ ಇಡೀ ವಿಶ್ವವು ಕೊರೊನಾ ಜಾಗತಿಕ ಸಾಂಕ್ರಾಮಿಕದ ವಿರುದ್ದ ಹೋರಾಡುತ್ತಿದೆ. ಈ ಜಾಗತಿಕ ಸಾಂಕ್ರಾಮಿಕದ ವಿರುದ್ದದ ಸಂಯುಕ್ತ ಹೋರಾಟದಲ್ಲಿ ವಿಶ್ವಸಂಸ್ಥೆ ಎಲ್ಲಿದೆ ? ಅದರ ಸಮರ್ಪಕ ಪ್ರತಿಕ್ರಿಯೆ ಎಲ್ಲಿದೆ ?
ಗೌರವಾನ್ವಿತರೇ
ವಿಶ್ವಸಂಸ್ಥೆಯ ಪ್ರತಿಕ್ರಿಯೆಗಳಲ್ಲಿ , ಪ್ರಕ್ರಿಯೆಗಳಲ್ಲಿ, ಗುಣಲಕ್ಷಣಗಳಲ್ಲಿ ಸುಧಾರಣೆ ಈ ಸಂದರ್ಭದ ಅವಶ್ಯಕತೆಯಾಗಿದೆ. ಭಾರತದಲ್ಲಿ ವಿಶ್ವಸಂಸ್ಥೆ ಹೊಂದಿರುವ ನಂಬಿಕೆ ಮತ್ತು ಗೌರವ ಹೋಲಿಕೆಗೆ ನಿಲುಕದ್ದೆಂಬುದು ಒಂದು ವಾಸ್ತವದ ಸಂಗತಿ. ಆದರೆ ಇದೇ ವೇಳೆಗೆ ಭಾರತೀಯ ಜನರು ವಿಶ್ವಸಂಸ್ಥೆಯಲ್ಲಿ ಸುಧಾರಣೆಗಳು ಪೂರ್ಣಗೊಳ್ಳಬೇಕು ಎಂದು ಬಹಳ ಧೀರ್ಘಾವಧಿಯಿಂದ ಕಾಯುತ್ತಿದ್ದಾರೆ ಎಂಬುದೂ ಅಷ್ಟೇ ಸತ್ಯ. ಈ ಸುಧಾರಣಾ ಪ್ರಕ್ರಿಯೆ ಎಂದಾದರೂ ತಾರ್ಕಿಕ ಅಂತ್ಯಕ್ಕೆ ತಲುಪುತ್ತದೆಯೇ ?, ಎಂಬುದರ ಬಗ್ಗೆ ಭಾರತದ ಜನತೆ ಇಂದು ಕಳವಳ ಹೊಂದಿದ್ದಾರೆ.
ವಿಶ್ವ ಸಂಸ್ಥೆಯ ನಿರ್ಧಾರ ಕೈಗೊಳ್ಳುವ ಸಂರಚನೆಯಿಂದ ಭಾರತವನ್ನು ಇನ್ನೆಷ್ಟು ಕಾಲ ಹೊರಗಿಡಲಾಗುತ್ತದೆ ?. ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವಾದೀ ದೇಶವಾಗಿ, ವಿಶ್ವದ ಜನಸಂಖ್ಯೆಯ 18% ಗೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿ, ನೂರಾರು ಭಾಷೆಗಳನ್ನು ಹೊಂದಿರುವ ದೇಶವಾಗಿ, ನೂರಾರು ಪಂಥಗಳು, ಹಲವಾರು ಚಿಂತನಾಮಾರ್ಗಗಳು, ತತ್ವಜ್ಞಾನಗಳನ್ನು ಹೊಂದಿರುವ ದೇಶವಾಗಿ, ಶತಮಾನಗಳಿಂದ ಜಾಗತಿಕ ಆರ್ಥಿಕತೆಯನ್ನು ಮುನ್ನಡೆಸುತ್ತಿರುವ ದೇಶವಾಗಿ ಮತ್ತು ನೂರಾರು ವರ್ಷ ವಿದೇಶೀ ಆಳ್ವಿಕೆಗೆ ಒಳಗಾದ ದೇಶವಾಗಿರುವ ಭಾರತವನ್ನು ಇನ್ನೆಷ್ಟು ದಿನ ಹೊರಗಿಡಲಾಗುತ್ತದೆ ?.
ಗೌರವಾನ್ವಿತರೇ
ನಾವು ಬಲಿಷ್ಟರಾಗಿರುವಾಗ , ನಾವು ವಿಶ್ವಕ್ಕೆ ತೊಂದರೆ ಕೊಟ್ಟವರಲ್ಲ. ನಾವು ದುರ್ಬಲರಾಗಿರುವಾಗ , ನಾವು ವಿಶ್ವಕ್ಕೆ ಭಾರವಾಗಲಿಲ್ಲ.
ಗೌರವಾನ್ವಿತರೇ
ಒಂದು ದೇಶದಲ್ಲಿ ಆಗುತ್ತಿರುವ ನದಲಾವಣೆಗಳು ವಿಶ್ವದ ಭಾಗದ ಮೇಲೆ ಪರಿಣಾಮ ಬೀರುತ್ತಿರುವಾಗ ಆ ದೇಶ ಇನ್ನೆಷ್ಟು ಕಾಲ ಕಾಯಬೇಕು ?.
ಗೌರವಾನ್ವಿತರೇ
ವಿಶ್ವ ಸಂಸ್ಥೆ ಯಾವ ಧ್ಯೇಯೋದ್ದೇಶಗಳ ಮೇಲೆ ಸ್ಥಾಪನೆಯಾಗಿದೆಯೋ , ಅಂತಹದೇ ಧ್ಯೆಯೋದ್ದೇಶ ಆದರ್ಶಗಳು ಭಾರತದ್ದೂ ಆಗಿವೆ. ಮತ್ತು ಅದರ ಮೂಲಭೂತ ತಾತ್ವಿಕತೆಗಿಂತ ಅವು ಭಿನ್ನವಾಗಿಲ್ಲ. ವಸುದೈವ ಕುಟುಂಬಕಂ ಎಂಬ ಮಾತುಗಳು ಇಡೀ ವಿಶ್ವವೇ ಒಂದು ಕುಟುಂಬ ಎಂದು ಪರಿಭಾವಿಸುತ್ತವೆ. ಇದು ನಮ್ಮ ಸಂಸ್ಕೃತಿಯ ಒಂದು ಭಾಗ. ಗುಣನಡತೆ ಮತ್ತು ಚಿಂತನಾಕ್ರಮದ ಅಂಗ. ವಿಶ್ವ ಸಂಸ್ಥೆಯಲ್ಲಿ ಕೂಡಾ ಭಾರತವು ಸದಾ ಇಡೀ ವಿಶ್ವದ ಏಳಿಗೆಗೆ ತನ್ನ ಪ್ರಧಾನಾದ್ಯತೆಯನ್ನು ನೀಡಿದೆ. ಭಾರತವು ಸುಮಾರು 50 ಶಾಂತಿ ಪಾಲನಾ ಪಡೆಗಳಿಗೆ ತನ್ನ ಶೌರ್ಯವಂತ ಸೈನಿಕರನ್ನು ಕಳುಹಿಸಿದೆ. ಶಾಂತಿ ಸ್ಥಾಪನೆಯ ಯತ್ನದಲ್ಲಿ ಗರಿಷ್ಟ ಸಂಖ್ಯೆಯ ತನ್ನ ಸೈನಿಕರನ್ನು ಕಳೆದುಕೊಂಡ ದೇಶ ಭಾರತ. ಇಂದು ವಿಶ್ವಸಂಸ್ಥೆಯಲ್ಲಿ ಭಾರತದ ಕೊಡುಗೆಯನ್ನು ನೋಡಿರುವ ಪ್ರತಿಯೊಬ್ಬ ಭಾರತೀಯರೂ , ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ವಿಸ್ತರಿತ ಪಾತ್ರ ಬೇಕೆಂಬ ಆಶಯವನ್ನು ಹೊಂದಿದ್ದಾರೆ.
ಗೌರವಾನ್ವಿತ ಅಧ್ಯಕ್ಷರೇ
’ಅಂತಾರಾಷ್ಟ್ರೀಯ ಅಹಿಂಸಾ ದಿನ” ವನ್ನು ಅಕ್ಟೋಬರ್ 2 ರಂದು ಮತ್ತು “ಅಂತಾರಾಷ್ಟ್ರೀಯ ಯೋಗ ದಿನ” ವನ್ನು ಜೂನ್ 21 ರಂದು ಆಚರಿಸುವುದಕ್ಕೆ ಮುನ್ನುಡಿ ಹಾಕಿದ್ದು ಭಾರತ. ವಿಪತ್ತು ಪುನಶ್ಚೇತನ ಮೂಲಸೌಕರ್ಯ ಮಿತ್ರಕೂಟ ಮತ್ತು ಅಂತಾರಾಷ್ಟ್ರೀಯ ಸೌರ ಮಿತ್ರಕೂಟಗಳು ಭಾರತದ ಪ್ರಯತ್ನಗಳ ಫಲವಾಗಿ ಇಂದು ರೂಪು ತಳೆದಿವೆ. ಭಾರತವು ತನ್ನ ಸ್ಥಾಪಿತ ಹಿತಾಸಕ್ತಿಗಳಿಗೆ ಬದಲು ಇಡೀ ಮಾನವ ಕುಲದ ಹಿತಾಸಕ್ತಿಯನ್ನು ಸದಾ ಗಮನದಲ್ಲಿಟ್ಟುಕೊಂಡು ಬಂದಿದೆ. ಈ ತಾತ್ವಿಕತೆ ಸದಾ ಭಾರತದ ನೀತಿಗಳ ಹಿಂದಿನ ಚಾಲಕ ಶಕ್ತಿಯಾಗಿದೆ. ಭಾರತದ ನೆರೆ ಹೊರೆಯವರು ಮೊದಲು ಎಂಬ ನೀತಿಯಿಂದ ಹಿಡಿದು ನಮ್ಮ ಪೂರ್ವದಲ್ಲಿ ಕಾರ್ಯಾಚರಿಸು ನೀತಿಯವರೆಗೆ ಗಮನಿಸಿದ ಯಾರಿಗೇ ಆದರೂ ಇದರ ಆಶಯಗಳ ನೋಟ ಸಿಗುತ್ತದೆ. ಈ ವಲಯದ ಎಲ್ಲರಿಗೂ ಭದ್ರತೆ ಮತ್ತು ಅಭಿವೃದ್ದಿ ಮತ್ತು ಭಾರತ ಫೆಸಿಫಿಕ್ ವಲಯದತ್ತ ನಮ್ಮ ಧೋರಣೆಗಳ ಚಿಂತನೆಯಲ್ಲೂ ಇದು ಅಡಕವಾಗಿದೆ. ಭಾರತದ ಸಹಭಾಗಿತ್ವಗಳು ಕೂಡಾ ಈ ತತ್ವದಿಂದ ನಿರ್ದೇಶಿಸಲ್ಪಟ್ಟಿವೆ. ಯಾವುದೇ ದೇಶದ ಜೊತೆ ಭಾರತದ ಮಿತೃತ್ವದ ನಿಲುವು ಬೇರಾವುದೇ ದೇಶದ ವಿರುದ್ದ ಅಲ್ಲ. ಭಾರತವು ತನ್ನ ಅಭಿವೃದ್ಧಿ ಸಹಭಾಗಿತ್ವವನ್ನು ಬಲಪಡಿಸಿಕೊಂಡಾಗ , ಅದರ ಹಿಂದೆ ಪಾಲುದಾರ ರಾಷ್ಟ್ರವನ್ನು ಪರಾವಲಂಬಿ ಅಥವಾ ನಿಸ್ಸಹಾಯಕವನ್ನಾಗಿ ಮಾಡುವ ದುರುದ್ದೇಶ ಇಲ್ಲ. ನಮ್ಮ ಅಭಿವೃದ್ಧಿಯ ಅನುಭವವನ್ನು ಹಂಚಿಕೊಳ್ಳಲು ನಾವೆಂದೂ ಹಿಂಜರಿದಿಲ್ಲ.
ಗೌರವಾನ್ವಿತರೇ
ಜಾಗತಿಕ ಸಾಂಕ್ರಾಮಿಕ ಆಕ್ರಮಿಸಿಕೊಳ್ಳುತ್ತಿರುವ ಈ ಕಠಿಣ ಸಂದರ್ಭದಲ್ಲಿಯೂ , ಭಾರತದ ಫಾರ್ಮಾ (ಔಷಧಿ ತಯಾರಿಕಾ ಉದ್ಯಮ) 150 ಕ್ಕೂ ಅಧಿಕ ದೇಶಗಳಿಗೆ ಅವಶ್ಯ ಔಷಧಿಗಳನ್ನು ಕಳುಹಿಸಿಕೊಟ್ಟಿದೆ. ವಿಶ್ವದ ಅತ್ಯಂತ ದೊಡ್ಡ ಲಸಿಕಾ ತಯಾರಿಕಾ ದೇಶವಾಗಿ , ನಾನು ಇಂದು ಜಾಗತಿಕ ಸಮುದಾಯಕ್ಕೆ ಇನ್ನೊಂದು ಆಶ್ವಾಸನೆಯನ್ನು ನೀಡಲು ಬಯಸುತ್ತೇನೆ, ಅದೆಂದರೆ ಭಾರತದ ಲಸಿಕಾ ಉತ್ಪನ್ನ ಮತ್ತು ಪೂರೈಕೆ ಸಾಮರ್ಥ್ಯವನ್ನು ಈ ಕಠಿಣ ಹೋರಾಟದ ಸಮಯದಲ್ಲಿ ಇಡೀ ಮಾನವತೆಗೆ ಸಹಾಯ ಮಾಡಲು ಬಳಸಲಾಗುತ್ತದೆ ಎಂಬುದಾಗಿ. ನಮ್ಮ ನೆರೆಹೊರೆಯಲ್ಲಿ ಮತ್ತು ಭಾರತದಲ್ಲಿ ಮೂರನೇ ಹಂತದ ಕ್ಲಿನಿಕಲ್ ಪರೀಕ್ಷೆಗಳು ಮುನ್ನಡೆಯುತ್ತಿವೆ. ಭಾರತವು ಎಲ್ಲಾ ದೇಶಗಳಿಗೂ ಲಸಿಕೆ ಪೂರೈಕೆ ಮಾಡಲು ಅವುಗಳ ಶೀತಲೀಕೃತ ದಾಸ್ತಾನು ಸರಪಳಿ ಮತ್ತು ದಾಸ್ತಾನು ಸಾಮರ್ಥ್ಯ ಹೆಚ್ಚಳ ಮಾಡಲು ಸಹಾಯ ಹಸ್ತ ನೀಡುತ್ತದೆ.
ಗೌರವಾನ್ವಿತರೇ
ಮುಂದಿನ ವರ್ಷದ ಜನವರಿಯಿಂದ ಭಾರತವು ಭದ್ರತಾ ಮಂಡಳಿಯ ಅಶಾಶ್ವತ (ಖಾಯಂ ಅಲ್ಲದ ) ಸದಸ್ಯತ್ವದ ಜವಾಬ್ದಾರಿಯನ್ನು ಪೂರ್ಣಗೊಳಿಸುತ್ತದೆ. ಭಾರತದ ಮೇಲೆ ತಮ್ಮ ನಂಬಿಕೆಯನ್ನು ಇಟ್ಟು ಬೆಂಬಲಿಸಿದ ಎಲ್ಲ ಸಹವರ್ತಿ ರಾಷ್ಟ್ರಗಳಿಗೆ ನಾನು ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ನಾವು ಅತಿ ದೊಡ್ಡ ಪ್ರಜಾಸತ್ತಾತ್ಮಕ ರಾಷ್ಟ್ರದ ಘನತೆ ಮತ್ತು ಅನುಭವವನ್ನು ಇಡೀ ವಿಶ್ವದ ಪ್ರಯೋಜನಕ್ಕಾಗಿ ವಿನಿಯೋಗಿಸುತ್ತೇವೆ. ನಮ್ಮ ಹಾದಿಯು ಮಾನವ ಕಲ್ಯಾಣದಿಂದ ಹಿಡಿದು ವಿಶ್ವ ಕಲ್ಯಾಣದವರೆಗೆ ಹೋಗುತ್ತದೆ. ಭಾರತವು ಸದಾ ಶಾಂತಿ, ಭದ್ರತೆ ಮತ್ತು ಸಮೃದ್ದಿಯನ್ನು ಬೆಂಬಲಿಸಿ ಮಾತನಾಡುತ್ತದೆ. ಮಾನವತೆಯ ವೈರಿಗಳ ವಿರುದ್ದ, ಮಾನವ ಕುಲದ ವೈರಿಗಳು ಮತ್ತು ಮಾನವ ಮೌಲ್ಯಗಳ ವಿರೋಧಿಗಳ ವಿರುದ್ದ, ಭಯೋತ್ಪಾದನೆ, ಅಕ್ರಮ ಶಸ್ತ್ರಾಸ್ತ್ರ ಕಳ್ಳಸಾಗಾಣಿಕೆ, ಮಾದಕ ದ್ರವ್ಯ ಮತ್ತು ಮನಿ ಲಾಂಡರಿಂಗ್ (ಅಕ್ರಮ ಹಣ ಸಂಗ್ರಹ) ವಿರುದ್ದ ಸದಾ ಧ್ವನಿ ಎತ್ತುತ್ತದೆ. ಭಾರತದ ಸಾಂಸ್ಕೃತಿಕ ಪರಂಪರೆ, ಸಂಪ್ರದಾಯ, ಸಾವಿರಾರು ವರ್ಷಗಳ ಪರಿಣಿತಿ ದೇಶಗಳ ಅಭಿವೃದ್ಧಿಗಾಗಿ ವಿನಿಯೋಗಿಸಲ್ಪಡುತ್ತದೆ. ಭಾರತದ ಅನುಭವಗಳು, ಅಭಿವೃದ್ಧಿಯ ಪಥ, ಅದರಲ್ಲಿ ಎದುರಾದ ಏರು-ಪೇರುಗಳು ವಿಶ್ವ ಕಲ್ಯಾಣದತ್ತಲಿನ ಹಾದಿಯನ್ನು ಬಲಪಡಿಸುತ್ತವೆ.
ಗೌರವಾನ್ವಿತರೇ
ಕಳೆದ ಕೆಲವು ವರ್ಷಗಳಿಂದ ಸುಧಾರಣೆ-ಅನುಸರಣೆ-ಪರಿವರ್ತನೆ ಮಂತ್ರವನ್ನು ಅನುಸರಿಸಿ ಭಾರತವು ತನ್ನ ಮಿಲಿಯಾಂತರ ನಾಗರಿಕರ ಬದುಕಿನಲ್ಲಿ ಪರಿವರ್ತನೆಯನ್ನು ತರಲು ಬೃಹತ್ ಪ್ರಯತ್ನಗಳನ್ನು ಮಾಡಿದೆ. ಈ ಅನುಭವಗಳು ನಮಗೆ ಉಪಯೋಗಕ್ಕೆ ಬಂದಂತೆ ವಿಶ್ವದ ಹಲವು ದೇಶಗಳಿಗೂ ಉಪಯುಕ್ತವಾಗಬಲ್ಲವು. ಬರೇ 4-5 ವರ್ಷಗಳಲ್ಲಿ 400 ಮಿಲಿಯನ್ ಜನರನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ತರುವುದು ಸಾಮಾನ್ಯ ಸಂಗತಿಯೇನಲ್ಲ. ಆದರೆ ಭಾರತ ಅದನ್ನು ಮಾಡಬಹುದು ಎಂದು ಸಾಬೀತು ಮಾಡಿದೆ. 4-5 ವರ್ಷಗಳಲ್ಲಿ 600 ಮಿಲಿಯನ್ ಜನರನ್ನು ಬಯಲು ಬಹುರ್ದೆಸೆಯಿಂದ ಮುಕ್ತ ಮಾಡುವುದು ಸುಲಭದ ಸಂಗತಿಯಲ್ಲ. ಆದರೆ ಭಾರತ ಅದನ್ನು ಸಾಧಿಸಿತು. 2-3 ವರ್ಷಗಳಲ್ಲಿ 500 ಮಿಲಿಯನ್ನಿಗೂ ಅಧಿಕ ಜನರಿಗೆ ಉಚಿತ ಆರೋಗ್ಯ ಸೇವೆಯ ಲಭ್ಯತೆಯನ್ನು ಒದಗಿಸುವುದೂ ಸುಲಭದ ಕೆಲಸವಲ್ಲ. ಆದರೆ ಭಾರತ ಇದನ್ನು ಮಾಡಲು ಸಮರ್ಥವಾಗಿದೆ. ಡಿಜಿಟಲ್ ವರ್ಗಾವಣೆಯಲ್ಲಿ ಭಾರತವು ಇಂದು ನಾಯಕ ರಾಷ್ಟ್ರಗಳ ಪಟ್ಟಿಯಲ್ಲಿದೆ. ಇಂದು ಭಾರತ ತನ್ನ ಮಿಲಿಯಾಂತರ ನಾಗರಿಕರಿಗೆ ಡಿಜಿಟಲ್ ಸಂಪರ್ಕ ವ್ಯವಸ್ಥೆಯನ್ನು ಒದಗಿಸುವ ಮೂಲಕ ಸಶಕ್ತೀಕರಣ ಮತ್ತು ಪಾರದರ್ಶಕತೆಯನ್ನು ಖಾತ್ರಿಪಡಿಸಿದೆ. ಇಂದು ಭಾರತವು 2025 ರೊಳಗೆ ಕ್ಷಯ ಮುಕ್ತ ಭಾರತಕ್ಕಾಗಿ ಬೃಹತ್ ಆಂದೋಲನವನ್ನು ನಡೆಸುತ್ತಿದೆ. ಇಂದು 150 ಮಿಲಿಯನ್ ಗ್ರಾಮೀಣ ಮನೆಗಳಿಗೆ ಕೊಳವೆ ಮೂಲಕ ಕುಡಿಯುವ ನೀರನ್ನು ಪೂರೈಸಲು ಕಾರ್ಯಕ್ರಮವನ್ನು ಅನುಷ್ಟಾನಿಸುತ್ತಿದೆ. ಇತ್ತೀಚೆಗೆ ಭಾರತವು 6 ಲಕ್ಷ ಗ್ರಾಮಗಳನ್ನು ಬ್ರಾಡ್ ಬ್ಯಾಂಡ್ ಆಪ್ಟಿಕಲ್ ಫೈಬರ್ ಮೂಲಕ ಸಂಪರ್ಕಿಸಲು ಬೃಹತ್ ಯೋಜನೆಯನ್ನು ಆರಂಭಿಸಿದೆ.
ಗೌರವಾನ್ವಿತರೇ
ಜಾಗತಿಕ ಸಾಂಕ್ರಾಮಿಕೋತ್ತರ ಕಾಲದಲ್ಲಿ ಬದಲಾದ ಪರಿಸ್ಥಿತಿಯಲ್ಲಿ ನಾವು “ಸ್ವಾವಲಂಬೀ ಭಾರತ” ಚಿಂತನೆಯೊಂದಿಗೆ ಮುಂದುವರೆಯುತ್ತಿದ್ದೇವೆ. ಸ್ವಾವಲಂಬಿ ಭಾರತ ಜಾಗತಿಕ ಆರ್ಥಿಕತೆಗೆ ಬಲವನ್ನು ಹೆಚ್ಚಿಸಬಲ್ಲದು. ಇಂದು ದೇಶದಲ್ಲಿ ಎಲ್ಲಾ ಯೋಜನೆಗಳ ಪ್ರಯೋಜನಗಳನ್ನು ಪ್ರತಿಯೊಬ್ಬ ನಾಗರಿಕರಿಗೂ ಒದಗಿಸಲಾಗುತ್ತಿದೆ, ಅದರಲ್ಲಿ ಪಕ್ಷಪಾತ ಮಾಡಲಾಗುತ್ತಿಲ್ಲ. ಮಹಿಳಾ ಉದ್ಯಮವನ್ನು ಮತ್ತು ನಾಯಕತ್ವವನ್ನು ಉತ್ತೇಜಿಸಲು ಭಾರತದಲ್ಲಿ ದೊಡ್ಡ ಪ್ರಮಾಣದ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಭಾರತೀಯ ಮಹಿಳೆ ಇಂದು ವಿಶ್ವದ ಬೃಹತ್ ಕಿರು ಸಾಲ ಯೋಜನೆಯ ಅತಿ ದೊಡ್ಡ ಫಲಾನುಭವಿಯಾಗಿದ್ದಾರೆ. ಮಹಿಳೆಯರಿಗೆ 26 ವಾರಗಳ ವೇತನ ಸಹಿತ ಹೆರಿಗೆ ರಜೆ ಒದಗಿಸುವ ದೇಶಗಳಲ್ಲಿ ಭಾರತವು ಒಂದಾಗಿದೆ. ಅವಶ್ಯಕ ಕಾನೂನು ಸುಧಾರಣೆಗಳೊಂದಿಗೆ ತೃತೀಯಲಿಂಗಿಗಳಿಗೆ ಹಕ್ಕುಗಳನ್ನೂ ಒದಗಿಸಲಾಗುತ್ತಿದೆ.
ಗೌರವಾನ್ವಿತರೇ
ಪ್ರಗತಿಯತ್ತ ತನ್ನ ಪ್ರಯಾಣದಲ್ಲಿ , ಭಾರತವು ವಿಶ್ವದಿಂದ ಕಲಿಯಲು ಇಚ್ಚಿಸುತ್ತದೆ ಮತ್ತು ತನ್ನ ಅನುಭವವನ್ನು ವಿಶ್ವದ ಜೊತೆ ಹಂಚಿಕೊಳ್ಳಲು ಇಚ್ಚಿಸುತ್ತದೆ. ವಿಶ್ವ ಸಂಸ್ಥೆಯು ತನ್ನ 75 ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ವಿಶ್ವಸಂಸ್ಥೆ ಮತ್ತು ಅದರ ಸದಸ್ಯ ರಾಷ್ಟ್ರಗಳು ಈ ಶ್ರೇಷ್ಟ ಸಂಸ್ಥೆಯ ಪ್ರಸ್ತುತತೆಯನ್ನು ಕಾಪಾಡಿಕೊಳ್ಳಲು ಬಲವಾದ ಬದ್ಧತೆಯನ್ನು ಕೈಗೊಳ್ಳುತ್ತವೆ ಎಂಬ ಬಗ್ಗೆ ನನಗೆ ವಿಶ್ವಾಸವಿದೆ. ವಿಶ್ವಸಂಸ್ಥೆಯಲ್ಲಿ ಸ್ಥಿರತೆ ಮತ್ತು ವಿಶ್ವಸಂಸ್ಥೆಯ ಸಶಕ್ತೀಕರಣ ವಿಶ್ವದ ಕಲ್ಯಾಣಕ್ಕೆ ಅತೀ ಅವಶ್ಯ. ವಿಶ್ವಸಂಸ್ಥೆಯ 75 ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ನಾವೆಲ್ಲರೂ ಮತ್ತೊಮ್ಮೆ ವಿಶ್ವದ ಕಲ್ಯಾಣಕ್ಕೆ ನಮ್ಮನ್ನು ಅರ್ಪಿಸಿಕೊಳ್ಳುವ ಪ್ರತಿಜ್ಞೆ ಮಾಡೋಣ
ಧನ್ಯವಾದಗಳು
***
(Release ID: 1659652)
Visitor Counter : 1810
Read this release in:
Hindi
,
Punjabi
,
Gujarati
,
Assamese
,
Manipuri
,
English
,
Urdu
,
Marathi
,
Bengali
,
Odia
,
Tamil
,
Telugu
,
Malayalam