ಸಂಸದೀಯ ವ್ಯವಹಾರಗಳ ಸಚಿವಾಲಯ

ಸಂಸತ್ತಿನ ಮುಂಗಾರು ಅಧಿವೇಶನ 2020 ಮುಕ್ತಾಯ


ಲೋಕಸಭೆ ಕಲಾಪ ಅಂದಾಜು ಶೇ.167ರಷ್ಟು ಫಲಪ್ರದ ಮತ್ತು ರಾಜ್ಯಸಭೆ ಕಲಾಪ ಅಂದಾಜು ಶೇ.100.47ರಷ್ಟು ಫಲಪ್ರದ: ಪ್ರಹ್ಲಾದ್ ಜೋಶಿ

ಕಳೆದ ಅಧಿವೇಶನದ ನಂತರದ ಅವಧಿಯಲ್ಲಿ ಹೊರಡಿಸಿದ್ದ 11 ಸುಗ್ರೀವಾಜ್ಞೆಗಳ ಬದಲಿಗೆ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಸೂದೆಗಳ ಅಂಗೀಕಾರ

Posted On: 24 SEP 2020 2:06PM by PIB Bengaluru

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಹ್ಲಾದ್ ಜೋಶಿ ಅವರು, ಸಂಸತ್ತಿನ ಮುಂಗಾರು ಅಧಿವೇಶನ 2020 ಕುರಿತಂತೆ ಇಂದು ಹೇಳಿಕೆಯನ್ನು ನೀಡಿ, ಮುಂಗಾರು ಅಧಿವೇಶನ 2020ಯಲ್ಲಿ ಲೋಕಸಭೆಯ ಕಲಾಪ ಅಂದಾಜು ಶೇ.167ರಷ್ಟು ಮತ್ತು ರಾಜ್ಯಸಭೆಯ ಕಲಾಪ ಅಂದಾಜು ಶೇ.100.47ರಷ್ಟು ಫಲಪ್ರದವಾಗಿದೆ ಎಂದು ಹೇಳಿದ್ದಾರೆ. 

2020ರ ಸೆಪ್ಟೆಂಬರ್ 14ರಂದು ಆರಂಭವಾದ ಸಂಸತ್ತಿನ ಮುಂಗಾರು ಅಧಿವೇಶನ 2020ರ ಅಕ್ಟೋಬರ್ 1 ರಂದು ಮುಕ್ತಾಯಗೊಳ್ಳಬೇಕಾಗಿತ್ತು, ಆದರೆ ಕೋವಿಡ್-19 ಸಾಂಕ್ರಾಮಿಕದ ಭೀತಿ ಹಿನ್ನೆಲೆಯಲ್ಲಿ ಅಗತ್ಯ ಕಲಾಪಗಳನ್ನು ಪೂರ್ಣಗೊಳಿಸಿದ ನಂತರ ಬುಧವಾರ ರಾಜ್ಯಸಭೆ ಮತ್ತು ಲೋಕಸಭೆಯ ಕಲಾಪಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. 2020ರ ಸೆಪ್ಟೆಂಬರ್ 23ರ ವರೆಗೆ ಹತ್ತು ದಿನಗಳ ಕಾಲ ಎರಡೂ ಸದನಗಳ ಅಧಿವೇಶನದ ಕಲಾಪ ನಡೆದಿದೆ ಎಂದು ಶ್ರೀ ಜೋಶಿ ಹೇಳಿದ್ದಾರೆ. 

ಈ ಅವಧಿಯಲ್ಲಿ 22 ಮಸೂದೆಗಳನ್ನು(ಲೋಕಸಭೆಯಲ್ಲಿ 16, ರಾಜ್ಯಸಭೆಯಲ್ಲಿ 6) ಮಂಡಿಸಲಾಯಿತು. ಲೋಕಸಭೆ ಮತ್ತು ರಾಜ್ಯಸಭೆ ಪ್ರತ್ಯೇಕವಾಗಿ ತಲಾ 25 ಮಸೂದೆಗಳಿಗೆ ಅನುಮೋದನೆ ನೀಡಿವೆ. ಒಟ್ಟು ಸಂಸತ್ತಿನ ಎರಡೂ ಸದನಗಳು 27 ಮಸೂದೆಗಳನ್ನು ಅಂಗೀಕರಿಸಿದ್ದು, ಅದು ಪ್ರತಿ ದಿನದ ಸರಾಸರಿಯಲ್ಲಿ ಅತಿ ಹೆಚ್ಚಿನ ಪ್ರಮಾಣದ ಅನುಮೋದನೆ ಅಂದರೆ ದಿನಕ್ಕೆ 2.7 ಮಸೂದೆಗಳ ಅನುಮೋದನೆ ದೊರೆತಂತಾಗಿದೆ. ಈ ಅಧಿವೇಶದನಲ್ಲಿ ಮಂಡಿಸಲಾದ, ಪರ್ಯಾಲೋಚಿಸಲ್ಪಟ್ಟ ಮತ್ತು ಅನುಮೋದನೆ ನೀಡಿದ ಮಸೂದೆಗಳ ಶೀರ್ಷಿಕೆಗಳು ಹಾಗೂ ವಿವರಗಳನ್ನು ಅಡಕದಲ್ಲಿ ಲಗತ್ತಿಸಲಾಗಿದೆ. 

11 ಸುಗ್ರೀವಾಜ್ಞೆಗಳ ಕುರಿತು ಉಲ್ಲೇಖಿಸಿದ ಅವರು, 2020ರ ಮುಂಗಾರು ಅಧಿವೇಶನದ ವೇಳೆ ಕಳೆದ ಅಧಿವೇಶನದ ನಂತರ ಹೊರಡಿಸಲಾಗಿದ್ದ 11 ಸುಗ್ರೀವಾಜ್ಞೆಗಳ ಬದಲಿಗೆ ಹೊಸ ಮಸೂದೆಗಳನ್ನು ಮಂಡಿಸಲಾಗಿದೆ. ಲೋಕಸಭೆಯಲ್ಲಿ ಬಾಕಿ ಇದ್ದ ನಾಲ್ಕು ಹಳೆಯ ಮಸೂದೆ ಮತ್ತು ರಾಜ್ಯಸಭೆಯಲ್ಲಿ ಬಾಕಿ ಇದ್ದ ಒಂದು ಮಸೂದೆಯನ್ನು ವಾಪಸ್ ಪಡೆಯಲಾಗಿದೆ ಎಂದು ಸಚಿವರು ಹೇಳಿದರು. 

ಅಧಿವೇಶನದ ಸಮಯದಲ್ಲಿ 2020-21ನೇ ಸಾಲಿನ ಪೂರಕ ಬೇಡಿಕೆಗಳ ಅನುದಾನದ ಮೊದಲ ಪಟ್ಟಿಯನ್ನು ಮತ್ತು 2016-17ನೇ ಸಾಲಿಗೆ ಹೆಚ್ಚುವರಿ ಅನುದಾನ ಬೇಡಿಕೆಗಳ ಕುರಿತು ಚರ್ಚೆ ನಡೆಯಿತು ಮತ್ತು ಅವುಗಳಿಗೆ ಅನುಮೋದನೆ ದೊರೆಯಿತು ಹಾಗೂ ಸಂಬಂಧಿಸಿದ ಹಣಕಾಸು ವಿಧೇಯಕಗಳನ್ನು ಮಂಡಿಸಲಾಯಿತು ಮತ್ತು ಚರ್ಚೆಯ ನಂತರ ಲೋಕಸಭೆ 18.09.2020ರಂದು ಅನುಮೋದಿಸಿತು. ರಾಜ್ಯಸಭೆ ಈ ಮಸೂದೆಗಳನ್ನು 23.09.2020ರಂದು ಪುನಃ ಕಳುಹಿಸಿತು 

ಕೋವಿಡ್-19 ಸಾಂಕ್ರಾಮಿಕದ ನಡುವೆಯೇ ಅಧಿವೇಶನ ನಡೆಸಲು ಕೈಗೊಂಡಿದ್ದ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ಸಂಬಂಧಿಸಿದ ಎಲ್ಲ ಸಂಸ್ಥೆಗಳು ಮತ್ತು ಸಂಸತ್ತಿನ ಎರಡೂ ಕಾರ್ಯ ಸದನಗಳ ಕಲಾಪದಲ್ಲಿ ಭಾಗಿಯಾಗಿದ್ದ ಎಲ್ಲ ವ್ಯಕ್ತಿಗಳ ಅವಿರತ ಶ್ರಮದಿಂದಾಗಿ ಅತ್ಯುತ್ತಮ ಫಲಿತಾಂಶ ಹೊರಬಿದ್ದಿದೆ ಎಂದು ಅವರು ಹೇಳಿದರು. 

ಇದರಿಂದಾಗಿ ಸಂವಿಧಾನದ ಕಲಂ 85ರ ಅಡಿಯಲ್ಲಿ ಸಾಂವಿಧಾನಿಕ ಅಗತ್ಯತೆಗಳು ಪೂರ್ಣಗೊಂಡಿವೆ ಮತ್ತು ಕೋವಿಡ್-19ನಂತಹ ಸಾಂಕ್ರಾಮಿಕ ಸಂದರ್ಭದಲ್ಲಿ ಅಗತ್ಯ ಶಾಸನಾತ್ಮಕ ಮತ್ತು ಇತರೆ ಕಲಾಪಗಳನ್ನೊಳಗೊಂಡ ಅಧಿವೇಶನ ನಡೆಸಲು ಸಹಕಾರಿಯಾಗಿದೆ. ಅಧಿವೇಶನಕ್ಕಾಗಿ ಆಸನ ವ್ಯವಸ್ಥೆ, ಓಡಾಟ ಸೇರಿದಂತೆ ಹಲವು ಪ್ರತ್ಯೇಕ ಹೆಚ್ಚುವರಿ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿತ್ತು ಮತ್ತು ಆರೋಗ್ಯ ಮತ್ತು ಕುಟುಂಬ  ಕಲ್ಯಾಣ ಸಚಿವಾಲಯ ಹಾಗೂ ಗೃಹ ವ್ಯವಹಾರಗಳ ಸಚಿವಾಲಯದ ಎಲ್ಲ ಮಾರ್ಗಸೂಚಿಗಳನ್ನು ಪಾಲನೆ ಮಾಡಲಾಯಿತು ಎಂದು ಹೇಳಿದರು. 

ಸಂಸತ್ತಿನ ಸದನಗಳು ಅನುಮೋದಿಸಿದ ಕೆಲವು ಪ್ರಮುಖ ಮಸೂದೆಗಳ ವಿವರ ಈ ಕೆಳಗಿನಂತಿದೆ:

ಕೃಷಿ ವಲಯದ ಸುಧಾರಣೆಗಳು:

ರೈತರ ಉತ್ಪನ್ನ, ವ್ಯಾಪಾರ ಮತ್ತು ವಾಣಿಜ್ಯ(ಉತ್ತೇಜನ ಮತ್ತು ಪೂರಕ ನೆರವು) ವಿಧೇಯಕ – 2020, ಇದು ರೈತರು ಮತ್ತು ವ್ಯಾಪಾರಿಗಳಿಗೆ ಕೃಷಿ ಉತ್ಪನ್ನಗಳ ಮಾರಾಟ ಮತ್ತು ಖರೀದಿಗೆ ಸಂಬಂಧಿಸಿದಂತೆ ಸಂಪೂರ್ಣ ಸ್ವಾತಂತ್ರ್ಯ ಒದಗಿಸುವ ವ್ಯವಸ್ಥೆಯನ್ನು ಕಲ್ಪಿಸಲಿದೆ. ಜೊತೆಗೆ ಇದು ಪರ್ಯಾಯ ವ್ಯಾಪಾರ ಮಾರ್ಗಗಳ ಮೂಲಕ ಸ್ಪರ್ಧಾತ್ಮಕ ದರಗಳನ್ನು ಒದಗಿಸಲಿದೆ. ಅಂತಾರಾಜ್ಯ ವ್ಯಾಪಾರ ಮತ್ತು ಅಂತಾರಾಜ್ಯ ಪರಿಣಾಮಕಾರಿ ಮತ್ತು ತಡೆರಹಿತ ವ್ಯಾಪಾರಕ್ಕೆ ಉತ್ತೇಜನ ಮತ್ತು ಮಾರುಕಟ್ಟೆಗಳ ಭೌತಿಕ ಆವರಣದ ಹೊರಗೆ ಕೃಷಿ ಉತ್ಪನ್ನಗಳನ್ನು ಅಥವಾ ಅಧಿಸೂಚಿತ ಮಾರುಕಟ್ಟೆಗಳ ಹೊರಗೆ ಉತ್ಪನ್ನಗಳನ್ನು ಮಾರಾಟ ಮಾಡಲು ರಾಜ್ಯ ಕೃಷಿ ಉತ್ಪನ್ನ ಮಾರುಕಟ್ಟೆಗಳು ಮತ್ತು ವಿದ್ಯುನ್ಮಾನ ವ್ಯಾಪಾರಕ್ಕೆ ಅಗತ್ಯ ನೀತಿಯನ್ನು ಒದಗಿಸಲಿದೆ.

ರೈತರಿಗೆ ಬೆಲೆ ಖಾತ್ರಿ ಮತ್ತು ಕೃಷಿ ಸೇವೆಗಳ ಒಪ್ಪಂದ(ಸಬಲೀಕರಣ ಮತ್ತು ರಕ್ಷಣೆ) ವಿಧೇಯಕ 2020, ಇದು ಕೃಷಿ ಒಪ್ಪಂದಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ನೀತಿಯನ್ನು ಒದಗಿಸಲಿದೆ. ಅದರಡಿ ರೈತರ ರಕ್ಷಣೆ ಮತ್ತು ಸಬಲೀಕರಣಗೊಳಿಸಲಾಗುವುದು ಮತ್ತು ಅವರು ಕೃಷಿ ವ್ಯಾಪಾರಿ ಸಂಸ್ಥೆಗಳು, ಸಂಸ್ಕರಣಾದಾರರು, ಸಗಟು ಮಾರಾಟಗಾರರು, ರಫ್ತುದಾರರು ಅಥವಾ ಕೃಷಿ ಸೇವೆಗಳಲ್ಲಿ ತೊಡಗಿರುವ ಬೃಹತ್ ಚಿಲ್ಲರೆ ಮಾರಾಟಗಾರರ ಜೊತೆ ಒಪ್ಪಂದಗಳನ್ನು ಮಾಡಿಕೊಳ್ಳಲು ನೆರವಾಗಲಿದೆ ಹಾಗೂ ಪರಸ್ಪರ ಒಪ್ಪಿತ ಸ್ಪರ್ಧಾತ್ಮಕ ದರ ಚೌಕಟ್ಟಿನಡಿ ನ್ಯಾಯಯುತ ಮತ್ತು ಪಾರದರ್ಶಕ ರೀತಿಯಲ್ಲಿ ಭವಿಷ್ಯದಲ್ಲಿ ಕೃಷಿ ಉತ್ಪನ್ನಗಳ ಮಾರಾಟ ಮತ್ತು ಸೇವೆಗಳನ್ನು ಪಡೆದುಕೊಳ್ಳಲು ನೆರವಾಗಲಿದೆ. 

ಅವಶ್ಯಕ ವಸ್ತುಗಳ(ತಿದ್ದುಪಡಿ ಮಸೂದೆ 2020) ಇದು ಕೃಷಿ ವಲಯದಲ್ಲಿ ತಕ್ಷಣದ ಹೂಡಿಕೆಗೆ ಉತ್ತೇಜನ ನೀಡುತ್ತದೆ ಹಾಗೂ ಸ್ಪರ್ಧೆ ಹೆಚ್ಚಳ ಮಾಡಿ, ರೈತರ ಆದಾಯ ವೃದ್ಧಿಗೊಳಿಸುತ್ತದೆ. 

ಶಿಕ್ಷಣ ವಲಯ:

ರಾಷ್ಟ್ರೀಯ ವಿಧಿವಿಜ್ಞಾನಗಳ ವಿಶ್ವವಿದ್ಯಾಲಯ ವಿಧೇಯಕ 2020, ಇದು ರಾಷ್ಟ್ರೀಯ ವಿಧಿ ವಿಜ್ಞಾನಗಳ ವಿಶ್ವವಿದ್ಯಾಲಯ ಎಂದು ಹೆಸರಾಗಿರುವ ಸಂಸ್ಥೆಗಳನ್ನು ಸ್ಥಾಪಿಸಲು ಮತ್ತು ಘೋಷಿಸಲು ನೆರವಾಗಲಿದೆ. ಅವುಗಳು ರಾಷ್ಟ್ರೀಯ ಜೇಷ್ಠತಾ ಸಂಸ್ಥೆಗಳಾಗಿರಲಿದ್ದು, ವಿಧಿವಿಜ್ಞಾನ ವಲಯದಲ್ಲಿ ಶ್ರೇಷ್ಠತೆ ಸಾಧಿಸಲು ಅಧ್ಯಯನ ಮತ್ತು ಸಂಶೋಧನೆಗಳನ್ನು ಉತ್ತೇಜಿಸಲಿದೆ. ಅನ್ವಯಿಕ ವರ್ತನೆಯ ವಿಜ್ಞಾನಗಳ ಅಧ್ಯಯನ, ಕಾನೂನು, ಅಪರಾಧ ಶಾಸ್ತ್ರ ಮತ್ತು ಇತರೆ ಸಂಬಂಧಿ ಚಟುವಟಿಕೆಗಳು ಹಾಗೂ ತಂತ್ರಜ್ಞಾನ ಮತ್ತು ಇತರೆ ಸಂಬಂಧಿತ ವಲಯಗಳನ್ನು ಒಳಗೊಂಡಿರಲಿದೆ.

ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ ಮಸೂದೆ 2020, ಇದರಡಿ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ ಸ್ಥಾಪನೆ ಉದ್ದೇಶಿಸಲಾಗಿದ್ದು, ಅದನ್ನು ರಾಷ್ಟ್ರೀಯ ಜೇಷ್ಠತಾ ಸಂಸ್ಥೆಯನ್ನಾಗಿ ಘೋಷಿಸಲಾಗುವುದು ಮತ್ತು ಅದರ ಸ್ಥಾಪನೆಗೆ ನೆರವು ನೀಡಲಾಗುವುದು. ಈ ವಿಶ್ವವಿದ್ಯಾಲಯ ಬಹುಶಿಸ್ತೀಯ ವಿಶ್ವವಿದ್ಯಾಲಯವಾಗಿರಲಿದ್ದು, ಅದು ಸಂಶೋಧನೆ ಮತ್ತು ಸಹಭಾಗಿತ್ವದ ಮೂಲಕ ಹೊಸ ಜ್ಞಾನವನ್ನು ಸೃಷ್ಟಿಸಲಿದೆ. ನಾನಾ ಬಗೆಯ ಪಾಲುದಾರರೊಂದಿಗೆ ತರಬೇತಿ ಹೊಂದಿದ ವೃತ್ತಿಪರರ ತಂಡವನ್ನು ಮತ್ತು ಪೊಲೀಸ್ ವ್ಯವಸ್ಥೆಯ ಹಲವು ವಿಭಾಗಗಳಿಗೆ ಅಗತ್ಯ ಕೌಶಲ್ಯ ಹೊಂದಿದ ಸಿಬ್ಬಂದಿಯನ್ನು, ಕ್ರಿಮಿನಲ್ ನ್ಯಾಯ ವ್ಯವಸ್ಥೆ ಮತ್ತು ಆಡಳಿತ ವ್ಯವಸ್ಥೆಯನ್ನು ಸರಿಪಡಿಸುವಂತಹ ತರಬೇತಿಯನ್ನು ನೀಡಲಿದೆ. ಈ ವಿಶ್ವವಿದ್ಯಾಲಯ ಇತರೆ ದೇಶಗಳ ವಿಶ್ವದರ್ಜೆಯ ವಿಶ್ವವಿದ್ಯಾಲಯಗಳೊಂದಿಗೆ ಸಂಬಂಧ ಹೊಂದಲಿದ್ದು, ಅದು ಅಗತ್ಯತೆ ಆಧರಿಸಿರುತ್ತದೆ. ಜೊತೆಗೆ ಸಮಕಾಲೀನ ಸಂಶೋಧನಾ ವಿನಿಮಯ ಉದ್ದೇಶ, ಶೈಕ್ಷಣಿಕ ಸಹಭಾಗಿತ್ವ, ಕೋರ್ಸ್ ಗಳ ರೂಪುರೇಷೆ ಸಿದ್ಧಪಡಿಸುವುದು, ತಾಂತ್ರಿಕ ಅರಿವು ಮತ್ತು ತರಬೇತಿ ಹಾಗೂ ಕೌಶಲ್ಯಾಭಿವೃದ್ಧಿ ಅಂಶಗಳನ್ನೊಳಗೊಂಡಿರುತ್ತದೆ. 

ಕಾರ್ಮಿಕ ವಲಯದ ಸುಧಾರಣೆಗಳು: 

ಪ್ರಸಕ್ತ ಅಧಿವೇಶನದಲ್ಲಿ ಕಾರ್ಮಿಕ ವಲಯದ ಸುಧಾರಣೆಗಳ ಮೂರು ಐತಿಹಾಸಿಕ ಮಸೂದೆಗಳನ್ನು ಅಂಗೀಕರಿಸಲಾಗಿದೆ. 

ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ದುಡಿಯುವ ಸ್ಥಳಗಳ ಸ್ಥಿತಿಗತಿ ಸಂಹಿತೆ ಮಸೂದೆ 2020, ಇದು ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಉದ್ದಿಮೆಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳ ದುಡಿಯುವ ಸ್ಥಿತಿಗತಿಗಳನ್ನು ನಿಯಂತ್ರಿಸುವ ಹಲವು ಅಂಶಗಳನ್ನು ಏಕರೂಪಗೊಳಿಸುವ ಹಾಗೂ ಸರಳೀಕರಣಗೊಳಿಸುವ ಅಂಶಗಳು ಒಳಗೊಂಡಿವೆ. 

ಸಾಮಾಜಿಕ ಭದ್ರತಾ ಮಸೂದೆ ಸಂಹಿತೆ 2020, ಇದು ಸಂಘಟಿತ ಅಥವಾ ಅಸಂಘಟಿತ ಅಥವಾ ಇತರೆ ಯಾವುದೇ ವಲಯಗಳಲ್ಲಿ ದುಡಿಯುತ್ತಿರುವ ಎಲ್ಲ ನೌಕರರು ಮತ್ತು ಸಿಬ್ಬಂದಿಗಳಿಗೆ ಸಾಮಾಜಿಕ ಭದ್ರತೆ ವಿಸ್ತರಿಸುವ ಗುರಿಯನ್ನು ಒಳಗೊಂಡಿರುವ ಸಾಮಾಜಿಕ ಭದ್ರತೆಗೆ ಸಂಬಂಧಿಸಿರುವ ಕಾನೂನುಗಳನ್ನು ಏಕರೂಪಗೊಳಿಸುವ ಮತ್ತು ತಿದ್ದುಪಡಿ ಮಾಡುವ ಅಂಶಗಳನ್ನು ಒಳಗೊಂಡಿದೆ. 

ಕೈಗಾರಿಕಾ ಸಂಬಂಧಗಳ ಸಂಹಿತೆ ಮಸೂದೆ 2020, ಕಾರ್ಮಿಕ ಸಂಘಟನೆಗಳು, ಕೈಗಾರಿಕಾ ಸಂಸ್ಥೆಗಳಲ್ಲಿ ಉದ್ಯೋಗದ ಸ್ಥಿತಿಗತಿ ಅಥವಾ ಇತರೆ ಸಂಸ್ಥೆಗಳಲ್ಲಿ ಕೈಗಾರಿಕಾ ವ್ಯಾಜ್ಯಗಳ ಇತ್ಯರ್ಥ ಮತ್ತು ತನಿಖೆಗೆ ಸಂಬಂಧಿಸಿದ ಕಾನೂನುಗಳನ್ನು ತಿದ್ದುಪಡಿ ಮಾಡುವುದು ಮತ್ತು ಏಕರೂಪಗೊಳಿಸುವ ಉದ್ದೇಶ ಒಳಗೊಂಡಿದೆ. 

ಕೋವಿಡ್-19 ಸಂಬಂಧಿಸಿದ ಶಾಸನಗಳು:

ಶಾಸನಾತ್ಮಕ ಕ್ರಮಗಳ ಮೂಲಕ ಕೋವಿಡ್-19 ಸಾಂಕ್ರಾಮಿಕದಿಂದ ಎದುರಾಗುವ ಪರಿಣಾಮಗಳನ್ನು ತಗ್ಗಿಸಲು ಕೆಲವು ಸುಗ್ರೀವಾಜ್ಞೆಗಳನ್ನು ಹೊರಡಿಸಲಾಗಿತ್ತು. 

ಸಂಸದರ ವೇತನ, ಭತ್ಯೆ ಮತ್ತು ಪಿಂಚಣಿ (ತಿದ್ದುಪಡಿ ವಿಧೇಯಕ 2020) ಇದರಡಿ ಸಂಸತ್ ಸದಸ್ಯರಿಗೆ ಪಾವತಿಸುವ ವೇತನ 01.04.2020 ರಿಂದ ಅನ್ವಯವಾಗುವಂತೆ ಶೇ.30ರಷ್ಟು ಕಡಿತಗೊಳಿಸಲಾಗುವುದು.

ಸಚಿವರ ವೇತನ ಭತ್ಯೆಗಳು(ತಿದ್ದುಪಡಿ) ವಿಧೇಯಕ 2020, ಇದರಡಿ ಪ್ರತಿಯೊಬ್ಬ ಸಚಿವರಿಗೆ ಪಾವತಿಸಲಿರುವ ಆತಿಥ್ಯ ಭತ್ಯೆಗಳನ್ನು ಶೇ.30ರಷ್ಟು ಕಡಿತಗೊಳಿಸಲಾಗುವುದು. ಇದು 01.04.2020 ರಿಂದ ಒಂದು ವರ್ಷದ ಕಾಲ ಜಾರಿಯಲ್ಲಿರಲಿದೆ. 

ಸಾಂಕ್ರಾಮಿಕ ರೋಗಗಳ (ತಿದ್ದುಪಡಿ) ಮಸೂದೆ 2020, ಇದರಡಿ  ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಆರೋಗ್ಯ ರಕ್ಷಣಾ ಸಿಬ್ಬಂದಿಗಳ ಮೇಲೆ ಯಾವುದೇ ರೀತಿಯ ಹಿಂಸಾಚಾರ, ದೈಹಿಕ ಅಥವಾ ಮಾನಸಿಕ ದೌರ್ಜನ್ಯ ಹಾಗೂ ಆಸ್ತಿ ಹಾನಿ ಮಾಡುವುದನ್ನು ತಡೆಯುತ್ತದೆ ಹಾಗೂ ಆರೋಗ್ಯ ರಕ್ಷಣಾ ಸಿಬ್ಬಂದಿಗೆ ರಕ್ಷಣೆ ಒದಗಿಸಲಿದೆ. 

ದಿವಾಳಿತನ ಮತ್ತು ದಿವಾಳಿ ಸಂಹಿತೆ (ಎರಡನೇ ತಿದ್ದುಪಡಿ) ವಿಧೇಯಕ 2020, ಈ ಸಂಹಿತೆ ಅಡಿ ಕಾರ್ಪೊರೇಟ್ ದಿವಾಳಿ ನಿರ್ಣಯ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗುವುದು. ಆರಂಭದಲ್ಲಿ ಆ ಅವಧಿ ಆರು ತಿಂಗಳಾಗಿರುತ್ತದೆ ಅಥವಾ 2020ರ  ಮಾರ್ಚ್ 25 ರಿಂದ ಅನ್ವಯವಾಗುವಂತೆ ಒಂದು ವರ್ಷ ಮೀರದಂತೆ ಇರುತ್ತದೆ. ಇದರ ಮೂಲಕ ಕೋವಿಡ್-19ನಿಂದಾಗಿ ತೊಂದರೆಗೊಳಗಾಗಿರುವ ಕಂಪನಿಗಳಿಗೆ ಆರ್ಥಿಕ ಸಂಕಷ್ಟದಿಂದ ಚೇತರಿಸಿಕೊಳ್ಳಲು ನೆರವಾಗುವುದಲ್ಲದೆ, ತಕ್ಷಣಕ್ಕೆ ಆ ಕಂಪನಿಗಳನ್ನು ದಿವಾಳಿ ಪ್ರಕ್ರಿಯೆಗೆ ದೂಡುವಂತಹ ತಪ್ಪಿಸುವುದಾಗಿದೆ. 

ಆರೋಗ್ಯ ವಲಯ:

ಆಯುರ್ವೇದ ಬೋಧನೆ ಮತ್ತು ಸಂಶೋಧನಾ ಕೇಂದ್ರ  ಮಸೂದೆ 2020, ಇದರಡಿ ಮೂರು ಆಯುರ್ವೇದ ಸಂಸ್ಥೆಗಳಾದ (i) ಜಾಮ್ ನಗರದ ಆಯುರ್ವೇದ ಸಂಶೋಧನಾ ಮತ್ತು ಸ್ನಾತಕೋತ್ತರ ಬೋಧನಾ ಕೇಂದ್ರ, (ii) ಜಾಮ್ ನಗರದ ಶ್ರೀ ಗುಲಾಬ್ ಕುನಾವರ್ಬ್ ಆಯುರ್ವೇದ ಮಹಾವಿದ್ಯಾಲಯ ಮತ್ತು (iii) ಜಾಮ್ ನಗರದ ಆಯುರ್ವೇದ ಫಾರ್ಮಸಿಟಿಕಲ್ಸ್ ವಿಜ್ಞಾನಗಳ ಭಾರತೀಯ ಕೇಂದ್ರ ಈ ಮೂರು ಸಂಸ್ಥೆಗಳನ್ನು ಒಂದು ಸಂಸ್ಥೆಯನ್ನಾಗಿ ಆಯುರ್ವೇದ ಬೋಧನಾ  ಸಂಶೋಧನಾ ಕೇಂದ್ರವನ್ನಾಗಿ ಹೆಸರಿಡಲಾಗುವುದು. ಈ ಮಸೂದೆ ಸಂಸ್ಥೆಯನ್ನು ರಾಷ್ಟ್ರೀಯ ಜೇಷ್ಠತಾ ಸಂಸ್ಥೆಯನ್ನಾಗಿ ಘೋಷಿಸಲಿದೆ. 

ಭಾರತೀಯ ವೈದ್ಯ ವ್ಯವಸ್ಥೆಯ ರಾಷ್ಟ್ರೀಯ ಆಯೋಗ  ಮಸೂದೆ 2020, ಇದು 1970ರ ಭಾರತೀಯ ವೈದ್ಯಕೀಯ ಕೇಂದ್ರೀಯ ಮಂಡಳಿ ಕಾಯ್ದೆಯನ್ನು ನಿರಶನಗೊಳಿಸಲಿದೆ ಮತ್ತು ವೈದ್ಯಕೀಯ ಶಿಕ್ಷಣ ವ್ಯವಸ್ಥೆಯನ್ನು ಈ ಕೆಳಗಿನ ಅಂಶಗಳೊಂದಿಗೆ ಖಾತ್ರಿಪಡಿಸಲಿದೆ. (i) ಭಾರತೀಯ ವೈದ್ಯಕೀಯ ಪದ್ಧತಿಯ ಉತ್ತಮ ಗುಣಮಟ್ಟದ ವೈದ್ಯಕೀಯ ವೃತ್ತಿಪರರು ಸೂಕ್ತವಾಗಿ ಲಭ್ಯವಾಗುವಂತೆ ಮಾಡುವುದು, (ii) ಭಾರತೀಯ ವೈದ್ಯಕೀಯ ಪದ್ಧತಿಯಲ್ಲಿ ವೈದ್ಯಕೀಯ ವೃತ್ತಿಪರರು ಇತ್ತೀಚಿನ ವೈದ್ಯಕೀಯ ಸಂಶೋಧನೆಗಳನ್ನು ಅಳವಡಿಸಿಕೊಳ್ಳುವಂತೆ ಮಾಡುವುದು, (iii) ಕಾಲಕಾಲಕ್ಕೆ ವೈದ್ಯಕೀಯ ಸಂಸ್ಥೆಗಳ ಮೌಲ್ಯಮಾಪನ ಮತ್ತು (iv) ಪರಿಣಾಮಕಾರಿ ಕುಂದುಕೊರತೆಗಳ ಇತ್ಯರ್ಥ ಕಾರ್ಯತಂತ್ರ

ಹೋಮಿಯೋಪತಿ ರಾಷ್ಟ್ರೀಯ ಆಯೋಗ  ಮಸೂದೆ 2020, ಇದು 1973ರ ಹೋಮಿಯೋಪತಿ ಕೇಂದ್ರೀಯ ಮಂಡಳಿ ಕಾಯ್ದೆಯನ್ನು ನಿರಶನಗೊಳಿಸಲಿದೆ ಮತ್ತು ಈ ಕೆಳಗಿನ ಅಂಶಗಳ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯನ್ನು ಒದಗಿಸಲಿದೆ. (i) ಸೂಕ್ತ ಹಾಗೂ ಉತ್ತಮ ಗುಣಮಟ್ಟದ ಹೋಮಿಯೋಪತಿ ವೈದ್ಯಕೀಯ ವೃತ್ತಿಪರರು ಲಭ್ಯವಾಗುವಂತೆ ನೋಡಿಕೊಳ್ಳುವುದು, (ii) ಹೋಮಿಯೋಪತಿ ವೈದ್ಯಕೀಯ ವೃತ್ತಿಪರರು ಇತ್ತೀಚಿನ ವೈದ್ಯಕೀಯ ಸಂಶೋಧನೆಗಳನ್ನು ಅಳವಡಿಸಿಕೊಳ್ಳುವಂತೆ ಮಾಡುವುದು, (iii) ಕಾಲಕಾಲಕ್ಕೆ ವೈದ್ಯಕೀಯ ಸಂಸ್ಥೆಗಳ ಮೌಲ್ಯಮಾಪನ ಮತ್ತು (iv) ಪರಿಣಾಮಕಾರಿ ಕುಂದುಕೊರತೆಗಳ ಇತ್ಯರ್ಥ ಕಾರ್ಯತಂತ್ರ 

ಆರ್ಥಿಕ ವಲಯ / ವಾಣಿಜ್ಯ ಚಟುವಟಿಕೆಗಳಿಗೆ ಪೂರಕ ಕ್ರಮಗಳ:

ಪ್ರಸಕ್ತ ಅಧಿವೇಶನದ ವೇಳೆ ದೇಶದ ಆರ್ಥಿಕ ಅಗತ್ಯತೆಗಳಿಗೆ ಪೂರಕವಾದ ಕೆಲವು ಪ್ರಮುಖ ಶಾಸನಗಳಿಗೆ ಅನುಮೋದನೆ ನೀಡಲಾಯಿತು. 

ಬ್ಯಾಂಕಿಂಗ್ ನಿಯಂತ್ರಣ(ತಿದ್ದುಪಡಿ) ಮಸೂದೆ 2020,  ಇದು ಸಹಕಾರಿ ಬ್ಯಾಂಕ್ ಗಳ ನಿರ್ವಹಣೆ, ಬಂಡವಾಳ, ಲೆಕ್ಕಪರಿಶೋಧನೆ ಮತ್ತು ಲಿಕ್ವಿಡೇಷನ್ (ಋಣವಿಮೋಚನಾ) ಮೇಲೆ ಆರ್ ಬಿಐನ ನಿಯಂತ್ರಣ ಕ್ರಮಗಳನ್ನು ವಿಸ್ತರಿಸುವ ಉದ್ದೇಶ ಹೊಂದಿದೆ. ಆ ಮೂಲಕ ಸಹಕಾರಿ ಬ್ಯಾಂಕ್ ಗಳ ಸೂಕ್ತ ನಿರ್ವಹಣೆ ಮತ್ತು ನಿಯಂತ್ರಣವನ್ನು ಕಾಯ್ದುಕೊಳ್ಳುವುದಾಗಿದೆ ಹಾಗೂ ಸಹಕಾರಿ ಬ್ಯಾಂಕ್ ಗಳ ವ್ಯವಹಾರಗಳಲ್ಲಿ ಠೇವಣಿದಾರರ ಹಿತರಕ್ಷಣೆಯನ್ನು ಕಾಯ್ದುಕೊಳ್ಳುವ ಕ್ರಮ ಒಳಗೊಂಡಿದ್ದು, ಆರ್ ಬಿ ಐ ಮೂಲಕ ಬಲಿಷ್ಠ ಬ್ಯಾಂಕಿಂಗ್ ವ್ಯವಸ್ಥೆ ಹಾಗೂ ಆಡಳಿತ ವ್ಯವಸ್ಥೆ ಸುಧಾರಣೆ, ಬಂಡವಾಳ ಲಭ್ಯತೆ ಹಾಗೂ ವೃತ್ತಿಪರತೆ ಹೆಚ್ಚಿಸುವ ಗುರಿ ಹೊಂದಲಾಗಿದೆ. 

ಕಂಪನಿಗಳ (ತಿದ್ದುಪಡಿ) ವಿಧೇಯಕ 2020, ಕಂಪನಿಗಳ ಕಾಯ್ದೆ 2013ರ ಅಡಿ ಕೆಲವೊಂದು ತಾಂತ್ರಿಕ ಮತ್ತು ಪ್ರಕ್ರಿಯೆಯಲ್ಲಿನ ದೋಷಗಳನ್ನು ಅಪರಾಧ ಮುಕ್ತಗೊಳಿಸಲಾಗುವುದು, ಅವುಗಳನ್ನು ನಾಗರಿಕ ದೋಷಗಳೆಂದು ಪರಿಗಣಿಸಲಾಗುವುದು. ನ್ಯಾಯಾಲಯಗಳಲ್ಲಿ ಒಟ್ಟಾರೆ ಬಾಕಿ ಇರುವ ಪ್ರಕರಣಗಳನ್ನು ಪರಿಗಣಿಸಿ, ಇಂತಹ ನ್ಯೂನತೆಗಳನ್ನು ಅಪರಾಧಗಳೆಂದು ಪರಿಗಣಿಸುವುದನ್ನು ಕೈಬಿಟ್ಟು, ಸಾರ್ವಜನಿಕ ಹಿತದೃಷ್ಟಿಯನ್ನು ಒಳಗೊಂಡಂತೆ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಕಾರ್ಪೊರೇಟ್ ಗಳಿಗೆ ವಾಣಿಜ್ಯ ಚಟುವಟಿಕೆಗಳನ್ನು ಮತ್ತಷ್ಟು ಸುಲಭಗೊಳಿಸುವ ಗುರಿ ಹೊಂದಲಾಗಿದೆ. 

ಅರ್ಹತಾ ಹಣಕಾಸು ಒಪ್ಪಂದಗಳ ದ್ವಿಪಕ್ಷೀಯ ನೆಟ್ಟಿಂಗ್ ಮಸೂದೆ 2020, ಇದು ಆರ್ಥಿಕ ಸ್ಥಿರತೆಯನ್ನು ಖಾತ್ರಿಪಡಿಸುವುದಲ್ಲದೆ, ಭಾರತೀಯ ಹಣಕಾಸು ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತದೆ. ಆ ಮೂಲಕ ಅರ್ಹ ಹಣಕಾಸು ಒಪ್ಪಂದಗಳಲ್ಲಿ ದ್ವಿಪಕ್ಷೀಯ  ನೆಟ್ಟಿಂಗ್ ಜಾರಿಗೊಳಿಸಬಹುದಾಗಿದೆ.

ತೆರಿಗೆ ಮತ್ತು ಇತರೆ ಕಾನೂನುಗಳ(ಕೆಲವು ಅಂಶಗಳ ವಿನಾಯಿತಿ)  ಮಸೂದೆ 2020, ಇದರಡಿ ಪ್ರತ್ಯಕ್ಷ ತೆರಿಗೆಗಳು, ಪರೋಕ್ಷ ತೆರಿಗೆಗಳು ಮತ್ತು ಬೇನಾಮಿ ಆಸ್ತಿ ವಹಿವಾಟುಗಳ ನಿಷೇಧ ಸೇರಿ ಕೆಲವೊಂದು ನಿರ್ದಿಷ್ಟ ಕಾಯ್ದೆಗಳಲ್ಲಿ ಕೆಲವು ಅಂಶಗಳಿಂದ ವಿನಾಯಿತಿ ನೀಡಲಿದೆ. 

ಅಡಕಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

***



(Release ID: 1658745) Visitor Counter : 575