ಪ್ರಧಾನ ಮಂತ್ರಿಯವರ ಕಛೇರಿ

ಮಧ್ಯಪ್ರದೇಶದ ಬೀದಿ ಬದಿ ವ್ಯಾಪಾರಿಗಳೊಂದಿಗೆ 'ಸ್ವನಿಧಿ ಸಂವಾದ' ನಡೆಸಿದ ಪ್ರಧಾನಿ


ಸಾಂಕ್ರಾಮಿಕದಿಂದ ಬಾಧಿತ ಬೀದಿ ಬದಿ ವ್ಯಾಪಾರಿಗಳ ಜೀವನೋಪಾಯಕ್ಕೆ ಸ್ವನಿಧಿ ಯೋಜನೆ ನೆರವು

ಯೋಜನೆ ಶೇ.7ರವರೆಗೆ ಬಡ್ಡಿ ರಿಯಾಯಿತಿ ಒದಗಿಸಲಿದ್ದು, ಒಂದು ವರ್ಷದೊಳಗೆ ಸಾಲ ಮರು ಪಾವತಿ ಮಾಡಿದರೆ ಇನ್ನೂ ಹೆಚ್ಚಿನ ಪ್ರಯೋಜನ

ಬೀದಿ ಬದಿ ವ್ಯಾಪಾರಿಗಳ ವ್ಯಾಪಾರ ಮತ್ತು ಡಿಜಿಟಲ್ ವಹಿವಾಟಿಗೆ ಓಟಿಟಿ ವೇದಿಕೆಯ ಪ್ರವೇಶಾವಕಾಶ:

ಪ್ರಧಾನಮಂತ್ರಿ ನರೇಂದ್ರ ಮೋದಿ

Posted On: 09 SEP 2020 2:02PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ಬೀದಿ ಬದಿ ವ್ಯಾಪಾರಿಗಳೊಂದಿಗೆ ಸ್ವನಿಧಿ ಸಂವಾದ ನಡೆಸಿದರು. ಭಾರತ ಸರ್ಕಾರ, ಕೋವಿಡ್ 19ರಿಂದ ಬಾಧಿತರಾಗಿರುವ ಬೀದಿ ಬದಿ ವ್ಯಾಪಾರಿಗಳಿಗೆ ತಮ್ಮ ಜೀವನೋಪಾಯ ಪುನಾರಂಭಿಸಲು ನೆರವಾಗುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಸ್ವನಿಧಿ ಯೋಜನೆಯನ್ನು 2020 ಜೂನ್ 1ರಂದು ಆರಂಭಿಸಿದೆ. 4.5 ಲಕ್ಷ ಬೀದಿ ಬದಿ ವ್ಯಾಪಾರಿಗಳು ಮಧ್ಯಪ್ರದೇಶದಲ್ಲಿ ನೋಂದಾಯಿಸಿಕೊಂಡಿದ್ದು, ಸುಮಾರು 1.4 ಲಕ್ಷ ಬೀದಿ ಬದಿ ವ್ಯಾಪಾರಿಗಳನ್ನು ಅನುಮೋದಿಸಿ ಒಟ್ಟು 140 ಕೋಟಿ ರೂ. ಮಂಜೂರು ಮಾಡಲಾಗಿದೆ. ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಮತ್ತೆ ಪುಟಿದೆದ್ದ ಬೀದಿ ಬದಿ ವ್ಯಾಪಾರಿಗಳ ಪ್ರಯತ್ನ ಮತ್ತು ಆತ್ಮ ವಿಶ್ವಾಸ, ದೃಢತೆ ಮತ್ತು ಕಠಿಣ ಪರಿಶ್ರಮವನ್ನು ಶ್ಲಾಘಿಸಿದರು.

ಸಾಂಕ್ರಾಮಿಕದ ಪರಿಣಾಮವನ್ನೂ ಲೆಕ್ಕಿಸದೆ 4.5 ಲಕ್ಷ ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸಿದ್ದಕ್ಕಾಗಿ ಮತ್ತು 1 ಲಕ್ಷ ವ್ಯಾಪಾರಿಗಳಿಗೆ ಕೇವಲ 2 ತಿಂಗಳಗಳ ಅವಧಿಯಲ್ಲಿ ಸಾಲ ಸೌಲಭ್ಯ ಒದಗಿಸಲು ಪ್ರಕ್ರಿಯೆ ಪೂರ್ಣಗೊಳಿಸಿದ್ದಕ್ಕಾಗಿ ಮಧ್ಯಪ್ರದೇಶ ಸರ್ಕಾರದ ಪ್ರಯತ್ನವನ್ನೂ ಶ್ಲಾಘಿಸಿದರು.

ಯಾವುದೇ ವಿಕೋಪ ಮೊದಲಿಗೆ ಬಡವರ ಉದ್ಯೋಗ, ಆಹಾರ ಮತ್ತು ಉಳಿತಾಯದ ಮೇಲೆ ಪರಿಣಾಮ ಬೀರುತ್ತದೆ ಎಂದರು.

ಬಹುತೇಕ ಬಡ ವಲಸೆ ಕಾರ್ಮಿಕರು ತಮ್ಮ ಗ್ರಾಮಗಳಿಗೆ ಮರಳಿರುವ ಸಂಕಷ್ಟದ ಕಾಲದ ಬಗ್ಗೆ ಅವರು ಉಲ್ಲೇಖಿಸಿದರು.

ಸರ್ಕಾರ ಮೊದಲ ದಿನದಿಂದಲೂ ಬಡವರು ಮತ್ತು ಕೆಳ ಮಧ್ಯಮವರ್ಗದವರು ಸಾಂಕ್ರಾಮಿಕದ ಕಾರಣ ವಿಧಿಸಲಾದ ಲಾಕ್ ಡೌನ್ ನಿಂದಾಗಿ ಎದುರಿಸಿದ ಸಂಕಷ್ಟದ ಪ್ರಮಾಣವನ್ನು ತಗ್ಗಿಸಲು ಕಟಿಬದ್ಧವಾಗಿತ್ತು ಎಂದು ಶ್ರೀ ಮೋದಿ ತಿಳಿಸಿದರು. ಸರ್ಕಾರ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ರೋಜ್ಗಾರ್ ಯೋಜನೆ ಅಭಿಯಾನದಡಿ ಉದ್ಯೋಗ ನೀಡುವುದರ ಜೊತೆಗೆ ಉಚಿತ ಅಡುಗೆ ಅನಿಲ ಸಿಲಿಂಡರ್, ಉಚಿತ ಆಹಾರಧಾನ್ಯ ಮತ್ತು ಆಹಾರ ಒದಗಿಸಲು ಸರ್ವ ಪ್ರಯತ್ನ ಮಾಡಿತು ಎಂದು ತಿಳಿಸಿದರು.

ಮತ್ತೊಂದು ದುರ್ಬಲ ವರ್ಗವಾದ ಬೀದಿ ಬದಿ ವ್ಯಾಪಾರಿಗಳ ಬಗ್ಗೆಯೂ ಸರ್ಕಾರ ಗಮನಹರಿಸಿದ್ದು, ಮಾರಾಟಗಾರರಿಗೆ ಅಗ್ಗದ ಬಡ್ಡಿ ದರದಲ್ಲಿ ಬಂಡವಾಳವನ್ನು ಒದಗಿಸುವ ಸಲುವಾಗಿ ಪ್ರಧಾನಿ ಸ್ವನಿಧಿ ಯೋಜನೆಯನ್ನು ಘೋಷಿಸಲಾಗಿದೆ, ಇದರಿಂದ ಅವರು ತಮ್ಮ ಜೀವನೋಪಾಯ ವ್ಯವಹಾರಗಳನ್ನು ಪುನರಾರಂಭಿಸಬಹುದು ಎಂದು ಪ್ರಧಾನಮಂತ್ರಿ ತಿಳಿಸಿದರು. ಇದೇ ಮೊದಲ ಬಾರಿಗೆ ಲಕ್ಷಾಂತರ ಬೀದಿಬದಿ ವ್ಯಾಪಾರಿಗಳು ವ್ಯವಸ್ಥೆಯೊಂದಿಗೆ ನೇರವಾಗಿ ಸಂಪರ್ಕಕ್ಕೆ ಬಂದಿದ್ದು, ಇದರಿಂದ ಅವರು ಪ್ರಯೋಜನ ಪಡೆಯಲು ಪ್ರಾರಂಭಿಸುತ್ತಾರೆ ಎಂದು ಶ್ರೀ ಮೋದಿ ಹೇಳಿದರು.

ಸ್ವನಿಧಿ ಯೋಜನೆಯ ಗುರಿ, ಬೀದಿ ಬದಿ ವ್ಯಾಪಾರಿಗಳಿಗೆ ಸ್ವಯಂ ಉದ್ಯೋಗ, ಸ್ವಾವಲಂಬನೆ ಮತ್ತು ಸ್ವಾಭಿಮಾನ ಒದಗಿಸುವುದಾಗಿದೆ ಎಂದರು.

ಪ್ರತಿಯೊಬ್ಬ ಬೀದಿಬದಿ ವ್ಯಾಪಾರಿಗಳಿಗೂ ಯೋಜನೆಯ ಬಗ್ಗೆ ಪೂರ್ಣ ತಿಳಿಯುವಂತೆ ಮಾಡುವುದು ಅತಿ ಮುಖ್ಯ ಎಂದು ಪ್ರಧಾನಿ ಪ್ರತಿಪಾದಿಸಿದರು. ಯೋಜನೆಯನ್ನು ಎಷ್ಟು ಸರಳಗೊಳಿಸಲಾಗಿದೆ ಎಂದರೆ, ಇದರೊಂದಿಗೆ ಸಾಮಾನ್ಯ ಜನರೂ ಸಂಪರ್ಕಿತರಾಗಬಹುದು ಎಂದರು. ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಅಥವಾ ಪುರಸಭೆಯ ಕಚೇರಿಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಅಪ್ ಲೋಡ್ ಮಾಡುವ ಮೂಲಕ ಯಾರು ಬೇಕಾದರೂ ಯೋಜನೆಯಲ್ಲಿ ನೋಂದಾಯಿಸಿಕೊಳ್ಳಬಹುದು, ಇದಕ್ಕೆ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ ಎಂದರು. ಬ್ಯಾಂಕ್ ಪ್ರತಿನಿಧಿ ಮಾತ್ರವಲ್ಲದೆ ಬೀದಿ ಬದಿ ವ್ಯಾಪಾರಿಗಳಿಂದ ಪುರಸಭೆಯ ಸಿಬ್ಬಂದಿ ಸಹ ವ್ಯಾಪಾರ ಅರ್ಜಿಯನ್ನೂ ತೆಗೆದುಕೊಳ್ಳಬಹುದು ಎಂದರು..

ಯೋಜನೆ ಶೇ.7ರವರೆಗೆ ಬಡ್ಡಿ ವಿನಾಯಿತಿ ನೀಡಲಿದ್ದು, ಬ್ಯಾಂಕ್ ನಿಂದ ಪಡೆದ ಸಾಲವನ್ನು ಯಾರಾದರೂ ಒಂದು ವರ್ಷದೊಳಗೆ ಮರು ಪಾವತಿ ಮಾಡಿದರೆ, ಅವರಿಗೆ ಬಡ್ಡಿ ವಿನಾಯಿತಿ ಸೌಲಭ್ಯ ಸಿಗಲಿದೆ ಎಂದರು. ಡಿಜಿಟಲ್ ವಹಿವಾಟಿನಲ್ಲಿ ಹಣ ಮರಳುವುದೂ (ಕ್ಯಾಷ್ ಬ್ಯಾಕ್) ಇರುತ್ತದೆ ಎಂದರು. ರೀತಿ, ಒಟ್ಟು ಉಳಿತಾಯವು ಒಟ್ಟು ಬಡ್ಡಿಗಿಂತ ಹೆಚ್ಚಾಗಿರುತ್ತದೆ. ದೇಶದಲ್ಲಿನ ಡಿಜಿಟಲ್ ವಹಿವಾಟಿನ ಪ್ರವೃತ್ತಿ 3-4 ವರ್ಷಗಳಿಂದ ತ್ವರಿತವಾಗಿ ಹೆಚ್ಚಾಗುತ್ತಿದೆ ಎಂದರು.

" ಯೋಜನೆ ಜನರಿಗೆ ಹೊಸದಾಗಿ ವ್ಯಾಪಾರ ಆರಂಭಿಸಲು ಸುಲಭ ಬಂಡವಾಳ ಒದಗಿಸುತ್ತದೆ. ಇದೇ ಮೊದಲ ಬಾರಿಗೆ ಲಕ್ಷಾಂತರ ಬೀದಿ ಬದರಿ ವ್ಯಾಪಾರಿಗಳ ಜಾಲವನ್ನು ವ್ಯವಸ್ಥೆಯೊಂದಿಗೆ ಸಂಪರ್ಕಿಸಲಾಗಿದ್ದು, ಅವರಿಗೆ ಒಂದು ಮಾನ್ಯತೆ ದೊರೆತಿದೆ" ಎಂದರು.

"ಯೋಜನೆ ಅವರಿಗೆ ಬಡ್ಡಿಯಿಂದ ಸಂಪೂರ್ಣವಾಗಿ ಮುಕ್ತಿ ಪಡೆಯಲು ನೆರವಾಗುತ್ತದೆ. ಯೋಜನೆ ಅಡಿಯಲ್ಲಿ ಶೇ.7ರವರೆಗೆ ಬಡ್ಡಿ ವಿನಾಯಿತಿ ದೊರಕಲಿದೆ. ನಮ್ಮ ಬೀದಿ ಬದಿ ವ್ಯಾಪಾರಿಗಳು ಡಿಜಿಟಲ್ ಅಂಗಡಿ ನಿರ್ವಹಣೆಯಲ್ಲಿ ಹಿಂದುಳಿಯದಂತೆ ನೋಡಿಕೊಳ್ಳಲು ಬ್ಯಾಂಕುಗಳು ಮತ್ತು ಡಿಜಿಟಲ್ ಪಾವತಿ ಸೌಲಭ್ಯಗಳ ಸಹಯೋಗದೊಂದಿಗೆ ಹೊಸ ಆರಂಭವನ್ನು ಮಾಡಲಾಗಿದೆ, ”ಎಂದು ಅವರು ಹೇಳಿದರು.

ಕೊರೊನಾ ಕಾಲದಲ್ಲಿ ಗ್ರಾಹಕರು ನಗದು ವಹಿವಾಟಿಗಿಂತ ಹೆಚ್ಚು ಡಿಜಿಟಲ್ ವಹಿವಾಟು ನಡೆಸುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು. ಬೀದಿ ಬದಿ ವ್ಯಾಪಾರಿಗಳು ಕೂಡ ಡಿಜಿಟಲ್ ವಹಿವಾಟು ಅಳವಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಸರ್ಕಾರ ಈಗ ಓಟಿಟಿ ವೇದಿಕೆತರುತ್ತಿದ್ದು, ಎಲ್ಲ ಬೀದಿ ಬದಿ ವ್ಯಾಪಾರಿಗಳೂ ಡಿಜಿಟಲ್ ವಹಿವಾಟಿನ ಮೂಲಕ ತಮ್ಮ ವ್ಯಾಪಾರ ನಡೆಸಬಹುದು ಎಂದರು.

ಸ್ವನಿಧಿ ಯೋಜನೆ ಫಲಾನುಭವಿಗಳಿಗೆ ಉಜ್ವಲ ಅನಿಲ ಯೋಜನೆ, ಆಯುಷ್ಮಾನ ಭಾರತ ಯೋಜನೆ ಇತ್ಯಾದಿಯಲ್ಲೂಆದ್ಯತೆಯ ಮೇಲೆ ಪ್ರವೇಶಾವಕಾಶ ಇರುತ್ತದೆ ಎಂದು ಪ್ರಧಾನಮಂತ್ರಿತಿಳಿಸಿದರು.

40 ಕೋಟಿಗೂ ಅಧಿಕ ಬಡ ಮತ್ತು ಕೆಳ ಮಧ್ಯಮ ವರ್ಗದ ಜನರು ಪ್ರಧಾನಮಂತ್ರಿ ಜನ್ ಧನ್ ಯೋಜನೆ ಮೂಲಕ ಬ್ಯಾಂಕ್ ಖಾತೆಗಳನ್ನು ತೆರೆದಿದ್ದು ಈಗ ಅವರು ನೇರವಾಗಿ ಎಲ್ಲ ಸವಲತ್ತುಗಳನ್ನೂ ತಮ್ಮ ಖಾತೆಗೆ ಪಡೆಯುತ್ತಿದ್ದಾರೆ. ಇದು ಅವರಿಗೆ ಸಾಲ ಪಡೆಯಲು ನೆರವಾಗುತ್ತಿದೆ ಎಂದರು. ಡಿಜಿಟಲ್ ಆರೋಗ್ಯ ಅಭಿಯಾನ, ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನಾ, ಪ್ರಧಾನಮಂತ್ರಿ ಜೀವನ್ ಜ್ಯೋತಿ ಯೋಜನಾ ಮತ್ತು ಆಯುಷ್ಮಾನ ಭಾರತ ಯೋಜನೆಯಂತ ಇತರ ಯೋಜನೆಗಳಲ್ಲೂ ಇದೇ ಸ್ವರೂಪದ ಸಾಧನೆ ಮಾಡಲಾಗಿದೆ ಎಂದು ಪಟ್ಟಿ ಮಾಡಿದರು.

ಕಳೆದ ಆರು ವರ್ಷಗಳಲ್ಲಿ ದೇಶದ ಬಡವರ ಬದುಕನ್ನು ಸುಗಮಗೊಳಿಸಲು ಹಲವಾರು ಕ್ರಮಗಳನ್ನು ಜಾರಿ ಮಾಡಲಾಗಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಸರ್ಕಾರ ಕೈಗೆಟಕುವ ಬಾಡಿಗೆ ದರದಲ್ಲಿ ಪ್ರಮುಖ ನಗರಗಳು ಮತ್ತು ಪ್ರಮುಖ ಪಟ್ಟಣಗಳಲ್ಲಿ ವಸತಿ ಕಲ್ಪಿಸಲು ಯೋಜನೆ ರೂಪಿಸಿದೆ ಎಂದರು.

ಒಂದು ರಾಷ್ಟ್ರ ಒಂದು ಪಡಿತರ ಚೀಟಿಯ ಪ್ರಸ್ತಾಪ ಮಾಡಿದ ಅವರು, ಇದು ಪ್ರತಿಯೊಬ್ಬರಿಗೂ ದೇಶದ ಯಾವುದೇ ಕಡೆ ಪಡಿತರ ಪಡೆಯಲು ನೆರವಾಗಲಿದೆ ಎಂದರು.

ಪ್ರಧಾನಮಂತ್ರಿಯವರು ಪ್ರಸಕ್ತ ಪ್ರಗತಿಯಲ್ಲಿರುವ 6 ಲಕ್ಷ ಗ್ರಾಮಗಳಿಗೆ ಮುಂದಿನ 1000 ದಿನಗಳಲ್ಲಿ ಆಪ್ಟಿಕಲ್ ಫೈಬರ್ ಅಳವಡಿಕೆಯ ಯೋಜನೆಯ ಪ್ರಸ್ತಾಪಿಸಿದರು. ಇದು ಇಡೀ ಗ್ರಾಮೀಣ ಭಾರತವನ್ನು ದೇಶ ಮತ್ತು ವಿದೇಶೀ ಮಾರುಕಟ್ಟೆಯೊಂದಿಗೆ ಸಂಪರ್ಕಿಸಲಿದೆ ಮತ್ತು ಗ್ರಾಮೀಣ ಜೀವನೋಪಾಯಕ್ಕೆ ಮತ್ತಷ್ಟು ಉತ್ತೇಜನ ನೀಡಲಿದೆ ಎಂದರು.,

ಪ್ರಧಾನಮಂತ್ರಿಯವರು ಬೀದಿ ಬದಿ ವ್ಯಾಪಾರಿಗಳಿಗೆ ಸ್ವಚ್ಛತೆ ಕಾಪಾಡುವಂತೆ ಮತ್ತು ಕೋವಿಡ್-19 ಹರಡದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮ ಪಾಲಿಸುವಂತೆ ತಿಳಿಸಿದರು. ಇದು ಅವರಿಗೆ ತಮ್ಮ ವ್ಯಾಪಾರ ವೃದ್ಧಿಗೆ ನೆರವಾಗಲಿದೆ ಎಂದರು.

***



(Release ID: 1652659) Visitor Counter : 412