ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ಕೋವಿಡ್ ಲಾಕ್ ಡೌನ್ ಸಂಕಷ್ಟದ ನಡುವೆಯೂ ಬಿಪಿಪಿಐನಿಂದ 2020-21ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಒಟ್ಟು ದಾಖಲೆಯ 146.59 ಕೋಟಿ ರೂ. ಮಾರಾಟ ವಹಿವಾಟು


2019-20ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ 75.48 ಕೋಟಿ ರೂ. ವಹಿವಾಟು ಹೋಲಿಸಿದರೆ ಗಮನಾರ್ಹ ಸಾಧನೆ

ಸುಸ್ಥಿರ ಮತ್ತು ನಿರಂತರ ಗಳಿಕೆಯೊಂದಿಗೆ ಸ್ವಯಂ ಉದ್ಯೋಗ ಒದಗಿಸಿ ಕೊಡುತ್ತಿರುವ ವಿಶ್ವದ ಅತಿ ದೊಡ್ಡ ಫಾರ್ಮ ಸರಣಿಯಿಂದ ಘೋಷವಾಕ್ಯ “ಸೇವಾ ಭಿ, ರೋಜ್ಗಾರ್ ಭಿ” ಅನುಗುಣವಾಗಿ ನ್ಯಾಯ


Posted On: 06 SEP 2020 4:44PM by PIB Bengaluru

ಕೋವಿಡ್-19 ಲಾಕ್ ಡೌನ್ ಸಂಕಷ್ಟದ ನಡುವೆಯೂ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ಭಾರತೀಯ ಸಾರ್ವಜನಿಕ ವಲಯದ ಫಾರ್ಮ ಸಂಸ್ಥೆಗಳ ಬ್ಯೂರೋ – ಬಿಪಿಪಿಐ, 2020-21ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ದಾಖಲೆಯ 146.59 ಕೋಟಿ ರೂ. ವಹಿವಾಟು ನಡೆಸಿದೆ. 2019-20ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ 75.48 ಕೋಟಿ ರೂ. ವಹಿವಾಟು ಸಾಧಿಸಲಾಗಿತ್ತು. ಅದಕ್ಕೆ ಹೋಲಿಸಿದರೆ ಈಗಿನ ಸಾಧನೆ ಅತ್ಯುತ್ತಮವಾಗಿದೆ. 2020ರ ಜುಲೈ ತಿಂಗಳೊಂದರಲ್ಲೇ ಬಿಪಿಪಿಐ, 48.66 ಕೋಟಿ ರೂ.  ವಹಿವಾಟು ನಡೆಸಿದೆ. ಒಟ್ಟಾರೆ ಜುಲೈ 31, 2020ರ ವರೆಗೆ 191.90 ಕೋಟಿ ರೂ. ವಹಿವಾಟು ನಡೆಸಿದೆ.

ಜನೌಷಧಿ ಕೇಂದ್ರಗಳು ಲಾಕ್ ಡೌನ್ ನಡುವೆಯೂ ಕಾರ್ಯನಿರ್ವಹಿಸಿವೆ ಮತ್ತು ಅತ್ಯವಶ್ಯಕ ಔಷಧಗಳನ್ನು ಲಭ್ಯವಾಗುವಂತೆ ಖಾತ್ರಿಪಡಿಸುವ ತಮ್ಮ ಬದ್ಧತೆಯ ಭಾಗವಾಗಿ ಕಾರ್ಯಾಚರಣೆಯನ್ನು ನಿರಂತರವಾಗಿ ಮಾಡುತ್ತಿವೆ. ಜನೌಷಧಿ ಕೇಂದ್ರಗಳು ಸುಮಾರು 15 ಲಕ್ಷ ಮುಖ ಗವಸುಗಳು, 80 ಲಕ್ಷ ಹೈಡ್ರಾಕ್ಸಿಕ್ಲೋರೋಕ್ವಿನ್  ಮಾತ್ರೆಗಳು ಮತ್ತು 100 ಲಕ್ಷ ಪ್ಯಾರಾಸಿಟಮಾಲ್ ಮಾತ್ರೆಗಳನ್ನು ಮಾರಾಟ ಮಾಡಿವೆ ಮತ್ತು ನಾಗರಿಕರಿಗೆ ಸುಮಾರು 1260 ಕೋಟಿ ರೂ. ಗಳನ್ನು ಉಳಿತಾಯ ಮಾಡಿವೆ.

ಪ್ರಸ್ತುತ ಜನೌಷಧಿ ಕೇಂದ್ರಗಳು 1250 ಬಗೆಯ ಔಷಧಿಗಳು ಮತ್ತು 204 ಶಸ್ತ್ರ ಚಿಕಿತ್ಸಾ ಸಾಧನಗಳನ್ನು ಮಾರಾಟ ಮಾಡುತ್ತಿವೆ. 2024ರ ಮಾರ್ಚ್ 31ರ ಅಂತ್ಯಕ್ಕೆ ಇವುಗಳ ಸಂಖ್ಯೆಯನ್ನು 2000 ಔಷಧಿಗಳು ಮತ್ತು 300 ಶಸ್ತ್ರ ಚಿಕಿತ್ಸಾ ಸಾಧನಗಳಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಆ ಮೂಲಕ ಚಿಕಿತ್ಸೆಗೆ ಅಗತ್ಯವಾದ ಔಷಧಿಗಳು, ಮಧುಮೇಹ ನಿರೋಧಕ, ಹೃದಯ ಸಂಬಂಧಿ ಔಷಧಿಗಳು, ಕ್ಯಾನ್ಸರ್ ನಿಗ್ರಹ ಔಷಧಗಳು, ನೋವು ನಿವಾರಕಗಳು ಮತ್ತು ಜ್ವರ ನಿವಾರಕ (ಆಂಟಿಪೈರಟಿಕ್ಸ್), ಆಂಟಿ ಅಲರ್ಜಿಕ್, ಕರುಳು ಸಂಬಂಧಿ ಔಷಧಗಳು, ವಿಟಮಿನ್, ಮಿನರಲ್ ಮತ್ತು ಆಹಾರ ಪೂರಕಗಳು, ಉಷ್ಣ ನಿವಾರಕ ಔಷಧಿಗಳು ಇತ್ಯಾದಿ ಸೇರಿ ಎಲ್ಲ ಅಗತ್ಯ ಔಷಧಗಳನ್ನು ಒದಗಿಸಲಾಗುವುದು.

          ಜನೌಷಧಿ ಕೇಂದ್ರಗಳಲ್ಲಿನ ಔಷಧಿಗಳ ದರ ಮಾರುಕಟ್ಟೆಯಲ್ಲಿ ದೊರಕುವ ಬ್ರಾಂಡೆಡ್ ಔಷಧಗಳ ದರಕ್ಕಿಂತ ಕನಿಷ್ಠ ಶೇ.50ರಷ್ಟು ಕಡಿಮೆ ಮತ್ತು ಕೆಲವು ಔಷಧಗಳಿಗೆ ಶೇ.80ರಿಂದ 90ರಷ್ಟು ಕಡಿಮೆಯಾಗುತ್ತದೆ. ಈ ಔಷಧಗಳನ್ನು ಮುಕ್ತ ಟೆಂಡರ್ ಆಧಾರದ ಮೇಲೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಒ) -ಜಿಎಂಪಿ ಮಾನದಂಡಗಳಿಗೆ ಅನುಗುಣವಾಗಿ ಔಷಧಗಳನ್ನು ಉತ್ಪಾದನೆ ಮಾಡುವವರಿಂದ ಮಾತ್ರ ಖರೀದಿಸಲಾಗುವುದು. ಆ ಔಷಧಗಳು ರಾಷ್ಟ್ರೀಯ ಪ್ರಮಾಣೀಕೃತ ಪ್ರಯೋಗಾಲಯಗಳಲ್ಲಿ ಎರಡು ಹಂತಗಳಲ್ಲಿ ಕಠಿಣ ಗುಣಮಟ್ಟ ತಪಾಸಣಾ ಪ್ರಕ್ರಿಯೆಯನ್ನು ಎದುರಿಸಬೇಕಾಗುತ್ತದೆ.

          ಜನೌಷಧಿ ಕೇಂದ್ರಗಳ ಸಂಖ್ಯೆಯ ನಿಟ್ಟಿನಲ್ಲಿ ಹೇಳುವುದಾದರೆ ಇದು ಬಹುಶಃ ವಿಶ್ವದ ಅತಿ ದೊಡ್ಡ ಸಗಟು ಫಾರ್ಮ ಸರಣಿಯಾಗಿದ್ದು, ಇದು ಸುಶಿಕ್ಷಿತ ನಿರುದ್ಯೋಗಿ ಯುವಕರಿಗೆ ಸ್ವಯಂ ಉದ್ಯೋಗದ ಒಳ್ಳೆಯ ಮೂಲವಾಗಿದೆ, ಅಲ್ಲದೆ ಇದು ಸುಸ್ಥಿರ ಮತ್ತು ನಿರಂತರ ಆದಾಯವನ್ನು ಒದಗಿಸಿ ಕೊಡುವ ಮೂಲಕ ಅವು ತನ್ನ ಘೋಷವಾಕ್ಯ “ಸೇವಾ ಭಿ, ರೋಜ್ಗಾರ್ ಭಿ” ಎಂಬುದಕ್ಕೆ ಅನುಗುಣವಾಗಿ ನಿಜವಾಗಿಯೂ ನ್ಯಾಯ ಒದಗಿಸುತ್ತಿವೆ. ಅಧಿಕೃತ ಅಂಕಿ-ಅಂಶಗಳ ಪ್ರಕಾರ ದೇಶಾದ್ಯಂತ ಈ ಯೋಜನೆಯಡಿ ತೊಡಗಿರುವ 11600ಕ್ಕೂ ಅಧಿಕ ಸುಶಿಕ್ಷಿತ ನಿರುದ್ಯೋಗಿ ಯುವಜನಾಂಗಕ್ಕೆ ಸುಸ್ಥಿರ ನೇರ ಉದ್ಯೋಗವನ್ನು ಒದಗಿಸಿಕೊಟ್ಟಿದೆ.

          ಜನೌಷಧಿ ಕೇಂದ್ರಗಳ ಮಾಲಿಕರಿಗೆ ನೀಡುತ್ತಿದ್ದ ಪ್ರೋತ್ಸಾಹಧನವನ್ನು ತಿಂಗಳ ಖರೀದಿಯ ಶೇ.15ರಷ್ಟು, ತಿಂಗಳಿಗೆ 15ಸಾವಿರ ಮಿತಿಗೆ ಒಳಪಟ್ಟು, ಹಾಲಿ ಇದ್ದ 2.50 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ. ನೀತಿ ಆಯೋಗ ಸೂಚಿಸಿರುವ ಆಶೋತ್ತರ ಜಿಲ್ಲೆಗಳು, ಹಿಂದುಳಿದ ಪ್ರದೇಶಗಳು, ದ್ವೀಪ ರಾಜ್ಯಗಳು, ಹಿಮಾಲಯದ ರಾಜ್ಯಗಳು, ಈಶಾನ್ಯ ರಾಜ್ಯಗಳಲ್ಲಿ ಅಥವಾ ಮಹಿಳಾ ಉದ್ಯಮಿಗಳು, ದಿವ್ಯಾಂಗರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ ಕೇಂದ್ರಗಳನ್ನು ತೆರೆದರೆ  ಒಮ್ಮೆ 2 ಲಕ್ಷ ರೂ.ಗಳ ವಿಶೇಷ ಪ್ರೋತ್ಸಾಹ ಧನವನ್ನು ಪೀಠೋಪಕರಣ ಅಥವಾ ಇತರೆ ನೆರವಿನ ರೂಪದಲ್ಲಿ ನೀಡಲಾಗುವುದು.

ಫಾರ್ಮಸಿಟಿಕಲ್ಸ್ ಇಲಾಖೆ 2008ರ ನವೆಂಬರ್ ನಲ್ಲಿ ದೇಶಾದ್ಯಂತ ಜನೌಷಧಿ ಯೋಜನೆಯನ್ನು ಆರಂಭಿಸಿತು. ಇದರ ಉದ್ದೇಶ ಸಮಾಜದ ಎಲ್ಲ ವರ್ಗದ ಜನರಿಗೆ ವಿಶೇಷವಾಗಿ ಬಡವರು ಮತ್ತು ದುರ್ಬಲ ವರ್ಗದವರಿಗೆ ಗುಣಮಟ್ಟದ ಔಷಧಗಳನ್ನು ಲಭ್ಯವಾಗುವಂತೆ ಮಾಡುವುದು.

   ***



(Release ID: 1651885) Visitor Counter : 200