ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕರ್ನಾಟಕದ ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನಗಳ ಕೇಂದ್ರದಲ್ಲಿ ಡಿಜಿಟಲ್ ಮೂಲಕ ಸೂಪರ್ ಸ್ಪೆಷಾಲಿಟಿ ಟ್ರಾಮಾ ಸೆಂಟರ್ ಉದ್ಘಾಟನೆ : ಕೇಂದ್ರ ಸಚಿವ ಡಾ. ಹರ್ಷವರ್ಧನ್

ಮಾಜಿ ಪ್ರಧಾನಮಂತ್ರಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಮತ್ತು ಮಾಜಿ ಆರೋಗ್ಯ ಸಚಿವೆ ಶ್ರೀಮತಿ ಸುಷ್ಮಾ ಸ್ವರಾಜ್ ಅವರನ್ನು ಸ್ಮರಿಸಿದ ಡಾ. ಹರ್ಷವರ್ಧನ್; “ಈ ಕೇಂದ್ರದ ಉದ್ಘಾಟನೆಯಿಂದ ಯಾರು ಸಂತೋಷ ಪಡುತ್ತಿದ್ದರೋ ಅವರು ನಮ್ಮೊಂದಿಗಿಲ್ಲ” ಎಂದು ಹೇಳಿಕೆ

ನವದೆಹಲಿ : ಸೆಪ್ಟಂಬರ್ 1,2020

Posted On: 31 AUG 2020 4:08PM by PIB Bengaluru

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್, ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನಗಳ ಕೇಂದ್ರದಲ್ಲಿ ಸೂಪರ್ ಸ್ಪೆಷಾಲಿಟಿ ಟ್ರಾಮಾ ಸೆಂಟರ್(ಎಸ್ಎಸ್ ಸಿಟಿ)ಅನ್ನು ಡಿಜಿಟಲ್ ಮೂಲಕ ರಾಷ್ಟ್ರಕ್ಕೆ ಸಮರ್ಪಿಸಿದರು. ನಂತರ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವ ಶ್ರೀ ಅಶ್ವಿನಿ ಕುಮಾರ್ ಛೌಬೆ, ಎಕ್ಸ್ ಪ್ರೆಸ್ ಫೀಡರ್ ಲೈನ್, ಐಸಿಯು ವಾರ್ಡ್ ಗಳು ಮತ್ತು 13 ಕೆಎಲ್ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಟ್ಯಾಂಕ್ ಸೌಕರ್ಯ ಉದ್ಘಾಟಿಸಿದರು.  ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್, ಅತ್ಯಾಧುನಿಕ ಸೌಕರ್ಯದ ಸಿಟಿ ಸ್ಕ್ಯಾನ್ ಉದ್ಘಾಟಿಸಿದರು.

ಈ ಎಸ್ಎಸ್ ಟಿಸಿಯನ್ನು ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ(ಪಿಎಂಎಸ್ಎಸ್ ವೈ) ಅಡಿಯಲ್ಲಿ 150 ಕೋಟಿ ರೂ. ಬಂಡವಾಳ ಹೂಡಿಕೆಯೊಂದಿಗೆ ನಿರ್ಮಿಸಲಾಗಿದೆ. ಇದರಲ್ಲಿ ತುರ್ತು ನಿಗಾ ಘಟಕ ಟ್ರಾಮಾ, ನ್ಯೂರೋ ಸರ್ಜರಿ ಮತ್ತು ಆರ್ಥೋಪೆಡಿಕ್ ವಿಭಾಗಗಳಿವೆ. ಈ ಹೊಸ ಬ್ಲಾಕ್ ನಲ್ಲಿ ಆರು ಮಾದರಿ ಶಸ್ತ್ರ ಚಿಕಿತ್ಸಾ ಕೊಠಡಿ ಸೇರಿ 8 ಆಪರೇಷನ್ ಥಿಯೇಟರ್ ಗಳು, 200 ಸೂಪರ್ ಸ್ಪೆಷಾಲಿಟಿ ಹಾಸಿಗೆಗಳು, 72 ಐಸಿಯು ಹಾಸಿಗೆಗಳು, 20 ವೆಂಟಿಲೇಟರ್ ಗಳು ಮತ್ತು ಅತ್ಯಾಧುನಿಕ ಸಿಟಿ ಸ್ಕ್ಯಾನ್ ಮತ್ತು ಡಿಜಿಟಲ್ ಎಕ್ಸ್ ರೇ ಯಂತ್ರ ಇವೆ. ಈ ಸೌಕರ್ಯದಲ್ಲಿ 27 ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳನ್ನು ತರಬೇತಿಗೊಳಿಸುವ ಸಾಮರ್ಥ್ಯ ಇದೆ.

ಮಾಜಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು, 2003ರ ತಮ್ಮ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಹೇಳಿದ್ದನ್ನು ಉಲ್ಲೇಖಿಸಿದ ಡಾ. ಹರ್ಷವರ್ಧನ್ ಅವರು, “ಸ್ವಾತಂತ್ರ್ಯಗಳಿಸಿ 56 ವರ್ಷಗಳ ನಂತರ ವಾಜಪೇಯಿ ಜಿ ಅವರ ದೂರದೃಷ್ಟಿಯಿಂದಾಗಿ ಹಾಲಿ ಇದ್ದ ಒಂದು ಏಮ್ಸ್ ಜೊತೆಗೆ ಹೊಸದಾಗಿ ಆರು ಏಮ್ಸ್ ಗಳೊಂದಿಗೆ ಭಾರತ ಸಮೃದ್ಧವಾಗುತ್ತಿದೆ ಮತ್ತು ಹಾಲಿ ಇರುವ 75 ಆಸ್ಪತ್ರೆಗಳನ್ನು ಏಮ್ಸ್ ಮಾದರಿಯಲ್ಲಿ ಸೇವೆ ನೀಡಲು ಮೇಲ್ದರ್ಜೆಗೇರಿಸಲಾಗುವುದು” ಎಂದು ಹೇಳಿದರು. ಅಲ್ಲದೆ ಆರೋಗ್ಯ ಸಚಿವೆ ಶ್ರೀಮತಿ ಸುಷ್ಮಾ ಸ್ವರಾಜ್ ಅವರು ಪಿಎಂಎಸ್ಎಸ್ ವೈ ಯೋಜನೆಗೆ ನೀಡಿರುವ ಅತ್ಯಮೂಲ್ಯ ಕೊಡುಗೆ ಹಾಗೂ ಅವರು ಬಳ್ಳಾರಿ ಜೊತೆ ಹೊಂದಿದ್ದ ವೈಯಕ್ತಿಕ ಬಾಂಧವ್ಯವನ್ನು ಡಾ .ಹರ್ಷವರ್ಧನ್ ಸ್ಮರಿಸಿದರು. “ಅವರು ಇಂದಿನ ಸಮಾರಂಭದಲ್ಲಿ ಇದ್ದಿದ್ದರೆ ತುಂಬಾ ಸಂತೋಷ ಪಡುತ್ತಿದ್ದರು. ಆದರೆ ಅವರು ಇಂದು ನಮ್ಮೊಡನಿಲ್ಲ” ಎಂದು ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ವೈಯಕ್ತಿಕವಾಗಿ ಗಮನಹರಿಸಿ ಮತ್ತು ಈ ಯೋಜನೆಯನ್ನು ಮುಂದುವರಿಸಿಕೊಂಡು ಹೋಗಲು ತಮ್ಮ ಶಕ್ತಿಯನ್ನು ವಿನಿಯೋಗಿಸಿದ್ದಾರೆ ತಮ್ಮವೈಯಕ್ತಿಕ ಅನುಭವವನ್ನು ನೆನಪಿಸಿಕೊಂಡರು ಡಾ. ಹರ್ಷವರ್ಧನ್, “ಪಿಎಂಎಸ್ಎಸ್ ವೈ ಯೋಜನೆಯ ಮೂರನೇ ಹಂತವನ್ನು 2019ರ ನಂತರ ಘೋಷಿಸಲಾಯಿತು ಮತ್ತು ಒಂದು ವರ್ಷದೊಳಗೆ ಬಳ್ಳಾರಿ ಟ್ರಾಮಾ ಕೇಂದ್ರವನ್ನು ಹೊಂದುವಂತಾಯಿತು’’ ಎಂದರು. ಇತರೆ ಆಶೋತ್ತರ ಜಿಲ್ಲೆಗಳ 74 ವೈದ್ಯಕೀಯ ಕಾಲೇಜುಗಳಲ್ಲಿ ಟ್ರಾಮಾ ಕೇಂದ್ರಗಳ ನಿರ್ಮಾಣ ಕಾರ್ಯ ಸಮರೋಪಾದಿಯಲ್ಲಿ ಸಾಗಿದೆ ಎಂದರು. ಕರ್ನಾಟಕ ರಾಜ್ಯಕ್ಕೆ ಹೊಸದಾಗಿ ಏಮ್ಸ್ ಮಂಜೂರು ಮಾಡಬೇಕೆಂಬ ಪ್ರಸ್ತಾವ ಗಂಭೀರ ಪರಿಶೀಲನೆಯಲ್ಲಿದೆ ಮತ್ತು ರಾಜ್ಯದಲ್ಲಿ 4 ಹೊಸ ವೈದ್ಯಕೀಯ ಕಾಲೇಜುಗಳನ್ನು ನಿರ್ಮಿಸಲಾಗುವುದು, ಅವುಗಳು ಆಶೋತ್ತರ ಜಿಲ್ಲೆಗಳಾದ ಚಿಕ್ಕಮಗಳೂರು, ಹಾವೇರಿ, ಯಾದಗಿರಿ ಮತ್ತು ಚಿಕ್ಕಬಳ್ಳಾಪುರದಲ್ಲಿ ಆರಂಭವಾಗುತ್ತಿವೆ ಎಂಬುದನ್ನು ರಾಜ್ಯದ ಪ್ರತಿಯೊಬ್ಬರಿಗೂ ತಿಳಿಸಬಯಸುತ್ತೇನೆ ಎಂದು ಹೇಳಿದರು. ಈವರೆಗೆ ಕೇಂದ್ರ ಸರ್ಕಾರದ ಆರ್ಥಿಕ ನೆರವು ಮತ್ತು ಸ್ಥಳೀಯ ರಾಜ್ಯ ಮೇಲ್ವಿಚಾರಣೆಯೊಂದಿಗೆ 157 ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಲಾಗಿದೆ ಎಂದರು.

2020ರ ಡಿಸೆಂಬರ್ 31 ರೊಳಗೆ 1.5 ಲಕ್ಷ ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಸೌಖ್ಯ ಕೇಂದ್ರಗಳನ್ನು ಕಾರ್ಯಾರಂಭ ಮಾಡಲು ಭಾರತ ಸರ್ಕಾರ ಬದ್ಧವಾಗಿದೆ ಎಂದು ಅವರು ಪುನರುಚ್ಛರಿಸಿದರು. ಅಲ್ಲದೆ ಸರ್ಕಾರ ಜಾಗತಿಕ ಗಡುವಿಗಿಂತ 5 ವರ್ಷ ಮುಂಚಿತವಾಗಿಯೇ 2025ರೊಳಗೆ ಕ್ಷಯರೋಗ, ಸಿಡುಬು ಮತ್ತು ಪೊಲಿಯೋವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು. ದಡಾರಾ ಮತ್ತು ರುಬೆಲ್ಲಾವನ್ನು ಕ್ರಮೇಣ ನಿರ್ಮೂಲನೆ ಮಾಡಲಾಗುವುದು ಎಂದು ಅವರು ಹೇಳಿದರು. ಸರ್ಕಾರ ಆರಂಭಿಸಿರುವ ‘ಈಟ್ ರೈಟ್ ಇಂಡಿಯಾ’ ಮತ್ತು ‘ಫಿಟ್ ಇಂಡಿಯಾ’ ಅಭಿಯಾನದ ಕುರಿತು ಅವರು ಮಾತನಾಡಿದರು. “ಇವುಗಳು ದೇಶವನ್ನು ಆರೋಗ್ಯವಾಗಿಡಲು ಪೂರಕ ರೀತಿಯಲ್ಲಿ ಮಹತ್ವದ ಪಾತ್ರವಹಿಸಲಿವೆ” ಎಂದು ಹೇಳಿದರು. ಅವರು ರಾಜ್ಯದ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು,ಕರ್ನಾಟಕದಲ್ಲಿ ಈ ಯೋಜನೆಗಳ ಜಾರಿ ಬಗ್ಗೆ ವೈಯಕ್ತಿಕವಾಗಿ ನಿಗಾವಹಿಸಬೇಕು ಮತ್ತು ಈ ಕಾರ್ಯಕ್ರಮಗಳ ಅನುಷ್ಠಾನದ ಹೊಣೆ ವಹಿಸಿಕೊಳ್ಳಬೇಕು ಎಂದರು.

ಕೋವಿಡ್-19 ಹರಡದಂತೆ ನಿಯಂತ್ರಿಸುವಲ್ಲಿ ಮತ್ತು ಸೋಂಕು ಪ್ರಸರಣವಾಗದಂತೆ ಸರಣಿಯನ್ನು ನಿಯಂತ್ರಿಸುವಲ್ಲಿ  ಕರ್ನಾಟಕ ಯಶಸ್ವಿಯಾಗಿದೆ ಎಂದು ಅಭಿನಂದಿಸಿದ ಕೇಂದ್ರ ಸಚಿವ ಶ್ರೀ ಅಶ್ವಿನ್ ಕುಮಾರ್ ಛೌಬೆ, “ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದಿಟ್ಟ ನಾಯಕತ್ವದಲ್ಲಿ, ಬಳ್ಳಾರಿಯಂತಹ ಹಿಂದುಳಿದ ಪ್ರದೇಶಗಳಿಗೂ ಅಭಿವೃದ್ಧಿಯ ಫಲ ದೊರಕಬೇಕು ಎಂಬ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಕೆಲಸ ಕಾರ್ಯಗಳು ನಡೆದಿವೆ” ಎಂದು ಹೇಳಿದರು.

          ಶ್ರೀ ಬಿ.ಎಸ್.ಯಡಿಯೂರಪ್ಪ ಅವರು, ಕರ್ನಾಟಕದಲ್ಲಿ ಆರೋಗ್ಯ ಮೂಲಸೌಕರ್ಯ ಬಲವರ್ಧನೆಯಲ್ಲಿ ಸಕ್ರಿಯ ಪಾತ್ರವಹಿಸುತ್ತಿರುವ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು. ಗುಲ್ಬರ್ಗಾದ ಇ ಎಸ್ ಐ ಆಸ್ಪತ್ರೆಯನ್ನು ಏಮ್ಸ್ ದರ್ಜೆಗೇರಿಸುವ ಪ್ರಸ್ತಾವವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಪರಿಶೀಲಿಸಬೇಕು, ಆ ಮೂಲಕ ಆ ಭಾಗದ ಜನರಿಗೆ ಉತ್ತಮ ಸೇವೆ ಸಲ್ಲಿಸಲು ನೆರವಾಗಬೇಕು ಎಂದು ಮನವಿ ಮಾಡಿದರು.

          ಕರ್ನಾಟಕ ಸರ್ಕಾರದ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಆನಂದ್ ಸಿಂಗ್, ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶ್ರೀ ಬಿ. ಶ್ರೀರಾಮುಲು, ಬಳ್ಳಾರಿ ವಿಮ್ಸ್ ನ ನಿರ್ದೇಶಕ ಡಾ. ಬಿ.ದಯಾನಂದ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇಡೀ ಕಾರ್ಯಕ್ರಮವನ್ನು ಕರ್ನಾಟಕದ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ ಬಿ.ನಾಗೇಂದ್ರ ಆಯೋಜಿಸಿದ್ದರು. 

****


(Release ID: 1650316) Visitor Counter : 277