ನೀತಿ ಆಯೋಗ

ನೀತಿ ಆಯೋಗದಿಂದ ರಫ್ತು ಸಿದ್ಧತೆ ಸೂಚ್ಯಂಕ (ಇಪಿಐ) 2020 ಬಿಡುಗಡೆ

Posted On: 26 AUG 2020 1:53PM by PIB Bengaluru

ನೀತಿ ಆಯೋಗವು ಸ್ಪರ್ಧಾತ್ಮಕತ ಸಂಸ್ಥೆಯ ಸಹಯೋಗದೊಂದಿಗೆ ಇಂದು ರಫ್ತು ಸಿದ್ಧತೆ ಸೂಚ್ಯಂಕ (ಇಪಿಐ) 2020 ಅನ್ನು ಬಿಡುಗಡೆ ಮಾಡಿದೆ. ಭಾರತದ ರಾಜ್ಯಗಳ ರಫ್ತು ಸಿದ್ಧತೆ ಮತ್ತು ಕಾರ್ಯಕ್ಷಮತೆಯನ್ನು ಪರಿಶೀಲಿಸುವ ಮೊದಲ ವರದಿಯು, ಇಪಿಐ ಸವಾಲುಗಳು ಮತ್ತು ಅವಕಾಶಗಳನ್ನು ಗುರುತಿಸಲು ಉದ್ದೇಶಿಸಿದೆ; ಸರ್ಕಾರದ ನೀತಿಗಳ ಪರಿಣಾಮವನ್ನು ಹೆಚ್ಚಿಸುವುದು ಮತ್ತು ಅನುಕೂಲಕರ ನಿಯಂತ್ರಕ ಚೌಕಟ್ಟನ್ನು ಪ್ರೋತ್ಸಾಹಿಸಲು ಈ ವರದಿ ಉದ್ದೇಶಿಸಿದೆ.

ಇಪಿಐನ ರಚನೆಯು ನೀತಿ, ವ್ಯಾಪಾರ ವ್ಯವಸ್ಥೆ, ರಫ್ತು ವ್ಯವಸ್ಥೆ ಮತ್ತು ರಫ್ತು ಕಾರ್ಯಕ್ಷಮತೆ ಎಂಬ 4 ಸ್ತಂಭಗಳನ್ನು ಒಳಗೊಂಡಿದೆ. ಹಾಗೆಯೇ ರಫ್ತು ಪ್ರಚಾರ ನೀತಿ; ಸಾಂಸ್ಥಿಕ ಚೌಕಟ್ಟು; ವ್ಯಾವಹಾರಿಕ ವಾತಾವರಣ; ಮೂಲಸೌಕರ್ಯ; ಸಾರಿಗೆ ಸಂಪರ್ಕ; ಹಣಕಾಸು ಲಭ್ಯತೆ; ರಫ್ತು ಮೂಲಸೌಕರ್ಯ; ವ್ಯಾಪಾರ ಬೆಂಬಲ; ಸಂಶೋಧನೆ ಮತ್ತು ಅಭಿವೃದ್ಧಿ ಮೂಲಸೌಕರ್ಯ; ರಫ್ತು ವೈವಿಧ್ಯೀಕರಣ; ಮತ್ತು ಬೆಳವಣಿಗೆಯ ದೃಷ್ಟಿಕೋನ ಎಂಬ11 ಉಪ ಸ್ತಂಭಗಳನ್ನು ಹೊಂದಿದೆ.

 

 

"ಭಾರತದ ಆರ್ಥಿಕತೆಯು ಜಾಗತಿಕ ವೇದಿಕೆಯಲ್ಲಿ ಪ್ರಬಲ ರಫ್ತುದಾರನಾಗಲು ಅಪಾರ ಸಾಮರ್ಥ್ಯವನ್ನು ಹೊಂದಿದೆ. ಈ ಸಾಮರ್ಥ್ಯವನ್ನು ತಿಳಿದುಕೊಳ್ಳಲು, ಭಾರತವು ತನ್ನ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳತ್ತ ಗಮನ ಹರಿಸುವುದು ಮತ್ತು ದೇಶದ ರಫ್ತು ಪ್ರಯತ್ನಗಳಲ್ಲಿ ಅವು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವುದು ಬಹಳ ಮುಖ್ಯವಾಗಿದೆ. ಈ ದೃಷ್ಟಿಕೋನವನ್ನು ಸಾಕಾರಗೊಳಿಸುವ ಪ್ರಯತ್ನದಲ್ಲಿ, ರಫ್ತು ಸಿದ್ಧತೆ ಸೂಚ್ಯಂಕ 2020 ರಾಜ್ಯಗಳ ಶಕ್ತಿ ಮತ್ತು ಸಾಮರ್ಥ್ಯಗಳನ್ನು ಮೌಲ್ಯಮಾಪನ ಮಾಡುತ್ತದೆ. ಈ ಸೂಚ್ಯಂಕದ ವಿವರವಾದ ಒಳನೋಟಗಳು ಎಲ್ಲಾ ಪಾಲುದಾರರಿಗೆ ರಾಷ್ಟ್ರೀಯ ಮತ್ತು ಉಪ-ರಾಷ್ಟ್ರೀಯ ಮಟ್ಟದಲ್ಲಿ ರಫ್ತು ವ್ಯವಸ್ಥೆಯನ್ನು ಬಲಪಡಿಸಲು ಮಾರ್ಗದರ್ಶನ ನೀಡುತ್ತವೆ” ಎಂದು ನೀತಿ ಆಯೋಗದ ಉಪಾಧ್ಯಕ್ಷ ಡಾ.ರಾಜೀವ್ ಕುಮಾರ್ ಹೇಳಿದರು.

ನೀತಿ ಆಯೋಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮಿತಾಭ್ ಕಾಂತ್ ಮಾತನಾಡಿ, “ರಫ್ತು ಸಿದ್ಧತೆ ಸೂಚ್ಯಂಕವು ಉಪ-ರಾಷ್ಟ್ರೀಯ ಮಟ್ಟದಲ್ಲಿ ರಫ್ತು ಉತ್ತೇಜನಕ್ಕೆ ಪ್ರಮುಖ ಕ್ಷೇತ್ರಗಳನ್ನು ಗುರುತಿಸುವ ದತ್ತಾಂಶ-ಚಾಲಿತ ಪ್ರಯತ್ನವಾಗಿದೆ. ಸುಸ್ಥಿರ ರಫ್ತು ಬೆಳವಣಿಗೆಯನ್ನು ಸಾಧಿಸಲು ಯಾವುದೇ ವಿಶಿಷ್ಟ ಆರ್ಥಿಕ ಘಟಕಕ್ಕೆ ನಿರ್ಣಾಯಕವಾದ ನಿಯತಾಂಕಗಳ ಮೇಲೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಮೌಲ್ಯಮಾಪನ ಮಾಡಲಾಗಿದೆ. ರಫ್ತು ಉತ್ತೇಜನಕ್ಕೆ ಸಂಬಂಧಿಸಿದಂತೆ ಪ್ರಾದೇಶಿಕ ಕಾರ್ಯಕ್ಷಮತೆಯನ್ನು ಮಾನದಂಡವಾಗಿಸಿಕೊಳ್ಳಲು ರಾಜ್ಯ ಸರ್ಕಾರಗಳಿಗೆ ಈ ಸೂಚ್ಯಂಕ ಮಾರ್ಗದರ್ಶಿಯಾಗಿದೆ. ಆದ್ದರಿಂದ ಅದನ್ನು ಹೇಗೆ ಸುಧಾರಿಸುವುದು ಮತ್ತು ವೃದ್ಧಿಸುವುದು ಎಂಬುದರ ಕುರಿತು ಒಳನೋಟಗಳನ್ನು ನೀಡುತ್ತದೆ.” ಎಂದರು.

ಇಪಿಐನ ಈ ಆವೃತ್ತಿಯು ಸ್ಪಷ್ಟಪಡಿಸಿರುವ ಸಂಗತಿಯೆಂದರೆ, ಭಾರತದ ಬಹುತೇಕ ರಾಜ್ಯಗಳು ರಫ್ತು ವೈವಿಧ್ಯೀಕರಣ, ಸಾರಿಗೆ ಸಂಪರ್ಕ ಮತ್ತು ಮೂಲಸೌಕರ್ಯಗಳ ಉಪ ಸ್ತಂಭಗಳಲ್ಲಿ ಸರಾಸರಿಯಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿವೆ. ಈ ಮೂರು ಉಪ ಸ್ತಂಭಗಳಲ್ಲಿ  ರಾಜ್ಯಗಳ ಸರಾಸರಿ ಸ್ಕೋರ್ ಶೇ.50 ಕ್ಕಿಂತ ಹೆಚ್ಚಿತ್ತು. ಆದಾಗ್ಯೂ, ರಫ್ತು ಸ್ಪರ್ಧಾತ್ಮಕತೆಯನ್ನು ಸುಧಾರಿಸಲು ರಾಜ್ಯಗಳು ಇತರ ಪ್ರಮುಖ ಅಂಶಗಳತ್ತ ಗಮನ ಹರಿಸಬೇಕಿದೆ.

ಒಟ್ಟಾರೆಯಾಗಿ, ಬಹುತೇಕ ಕರಾವಳಿ ರಾಜ್ಯಗಳು ಅತ್ಯುತ್ತಮ ಪ್ರದರ್ಶನ ನೀಡಿವೆ. ಗುಜರಾತ್, ಮಹಾರಾಷ್ಟ್ರ ಮತ್ತು ತಮಿಳುನಾಡು ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಪಡೆದಿವೆ. ಎಂಟು ಕರಾವಳಿ ರಾಜ್ಯಗಳಲ್ಲಿ ಆರು ರಾಜ್ಯಗಳು ಮೊದಲ ಹತ್ತು ಶ್ರೇಯಾಂಕಗಳಲ್ಲಿ ಸ್ಥಾನ ಪಡೆದಿವೆ, ಒಳನಾಡಿನ ರಾಜ್ಯಗಳಲ್ಲಿ, ರಾಜಸ್ಥಾನವು ಅತ್ಯುತ್ತಮ ಪ್ರದರ್ಶನ ನೀಡಿದೆ, ನಂತರದ ಸ್ಥಾನಗಳಲ್ಲಿ ತೆಲಂಗಾಣ ಮತ್ತು ಹರಿಯಾಣ ಇವೆ. ಹಿಮಾಲಯನ್ ರಾಜ್ಯಗಳಲ್ಲಿ ಉತ್ತರಾಖಂಡವು ಮೊದಲ ಸ್ಥಾನದಲ್ಲಿದ್ದರೆ, ತ್ರಿಪುರ ಮತ್ತು ಹಿಮಾಚಲ ಪ್ರದೇಶ ನಂತರದ ಸ್ಥಾನದಲ್ಲಿವೆ. ಕೇಂದ್ರಾಡಳಿತ ಪ್ರದೇಶಗಳಲ್ಲಿ, ದೆಹಲಿ ಅತ್ಯುತ್ತಮ ಪ್ರದರ್ಶನ ನೀಡಿದರೆ, ಗೋವಾ ಮತ್ತು ಚಂಡೀಗಢ ನಂತರದ ಸ್ಥಾನದಲ್ಲಿವೆ.

ರಫ್ತು ದೃಷ್ಟಿಕೋನ ಮತ್ತು ಸಿದ್ಧತೆ ಕೇವಲ ಸಮೃದ್ಧ ರಾಜ್ಯಗಳಿಗೆ ಸೀಮಿತವಾಗಿಲ್ಲ ಎಂಬುದನ್ನು ವರದಿಯು ಹೇಳುತ್ತದೆ. ಉದಯೋನ್ಮುಖ ರಾಜ್ಯಗಳು ಸಹ ಕ್ರಿಯಾತ್ಮಕ ರಫ್ತು ನೀತಿ ಕ್ರಮಗಳನ್ನು ಕೈಗೊಳ್ಳಬಹುದು, ಕಾರ್ಯನಿರ್ವಹಿಸುವ ಪ್ರೋತ್ಸಾಹಕ ಮಂಡಳಿಗಳನ್ನು ಹೊಂದಬಹುದು ಮತ್ತು ತಮ್ಮ ರಫ್ತುಗಳನ್ನು ಹೆಚ್ಚಿಸಲು ರಾಷ್ಟ್ರೀಯ ವ್ಯವಸ್ಥಾಪನಾ ಯೋಜನೆಗಳೊಂದಿಗೆ ಸಂಯೋಜನೆ ಮಾಡಬಹುದು. ಒಳನಾಡಿನ ರಾಜ್ಯಗಳಾದ ಛತ್ತೀಸ್ ಗಢ ಮತ್ತು ಜಾರ್ಖಂಡ್ ರಾಜ್ಯಗಳು ರಫ್ತು ಉತ್ತೇಜಿಸಲು ಹಲವಾರು ಕ್ರಮಗಳನ್ನು ಕೈಗೊಂಡಿವೆ. ಇದೇ ರೀತಿಯ ಸಾಮಾಜಿಕ-ಆರ್ಥಿಕ ಸವಾಲುಗಳನ್ನು ಎದುರಿಸುತ್ತಿರುವ ಇತರ ರಾಜ್ಯಗಳು ಛತ್ತೀಸ್ ಗಢ ಮತ್ತು ಜಾರ್ಖಂಡ್ ಕೈಗೊಂಡ ಕ್ರಮಗಳತ್ತ ನೋಡಬಹುದು ಮತ್ತು ತಮ್ಮ ರಫ್ತು ಹೆಚ್ಚಿಸಲು ಈ ಕ್ರಮಗಳನ್ನು ಕಾರ್ಯಗತಗೊಳಿಸಲು ಪ್ರಯತ್ನಿಸಬಹುದು.

ಬೆಳವಣಿಗೆಯ ದೃಷ್ಟಿಕೋನ ಉಪ-ಸ್ತಂಭದ ಅಡಿಯಲ್ಲಿರುವ ಅನೇಕ ಈಶಾನ್ಯ ರಾಜ್ಯಗಳು ತಮ್ಮ ಸ್ಥಳೀಯ ಉತ್ಪನ್ನಗಳ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ ಹೆಚ್ಚು ರಫ್ತು ಮಾಡಲು ಸಾಧ್ಯವಾಗಿದೆ. ಅಂತಹ ಸ್ಥಳೀಯ ಉತ್ಪನ್ನಗಳ (ಮಸಾಲೆ ಪದಾರ್ಥಗಂತಹವು) ಕೇಂದ್ರೀಕೃತ ಅಭಿವೃದ್ಧಿಯು ಒಂದೆಡೆ ರಫ್ತಿಗೆ ಕಾರಣವಾದರೆ, ಮತ್ತೊಂದೆಡೆ ಈ ರಾಜ್ಯಗಳಲ್ಲಿ ರೈತರ ಆದಾಯವನ್ನು ಸುಧಾರಿಸುತ್ತದೆ.

ವರದಿಯು ಕಂಡುಕೊಂಡಂತೆ, ಭಾರತದಲ್ಲಿ ರಫ್ತು ಹೆಚ್ಚಳವು ಮೂರು ಮೂಲಭೂತ ಸವಾಲುಗಳನ್ನು ಎದುರಿಸುತ್ತಿದೆ: ರಫ್ತು ಮೂಲಸೌಕರ್ಯದಲ್ಲಿನ ಅಂತರ ಹಾಗೂ ಪ್ರಾದೇಶಿಕ ಅಸಮಾನತೆಗಳು; ಕಳಪೆ ವ್ಯಾಪಾರ ಬೆಂಬಲ ಹಾಗೂ ರಾಜ್ಯಗಳಲ್ಲಿ ಬೆಳವಣಿಗೆಯ ದೃಷ್ಟಿಕೋನ ಹಾಗೂ ಸಂಕೀರ್ಣ ಮತ್ತು ವಿಶಿಷ್ಟ ರಫ್ತುಗಳನ್ನು ಉತ್ತೇಜಿಸಲು ಸಂಶೋಧನೆ ಮತ್ತು ಅಭಿವೃದ್ಧಿ ಮೂಲಸೌಕರ್ಯಗಳ ಕೊರತೆ.

ಈ ಸವಾಲುಗಳನ್ನು ಎದುರಿಸಲು ರಫ್ತು ಮೂಲಸೌಕರ್ಯಗಳ ಜಂಟಿ ಅಭಿವೃದ್ಧಿ, ಉದ್ಯಮ-ಅಕಾಡೆಮಿಯಾ ಸಂಪರ್ಕಗಳನ್ನು ಬಲಪಡಿಸುವುದು ಮತ್ತು ಆರ್ಥಿಕ ರಾಜತಾಂತ್ರಿಕತೆಗಾಗಿ ರಾಜ್ಯಮಟ್ಟದ ಒಪ್ಪಂದಗಳನ್ನು ರೂಪಿಸುವಂತಹ ಪ್ರಮುಖ ಕಾರ್ಯತಂತ್ರಗಳಿಗೆ ಒತ್ತು ನೀಡುವ ಅವಶ್ಯಕತೆಯಿದೆ. ಕೇಂದ್ರ ಸರ್ಕಾರದ ಬೆಂಬಲದೊಂದಿಗೆ, ಸ್ಥಳೀಯ ಉತ್ಪನ್ನಗಳಿಗೆ ಪರಿಷ್ಕರಿಸಿದ ವಿನ್ಯಾಸಗಳು ಮತ್ತು ಮಾನದಂಡಗಳು ಮತ್ತು ಅಂತಹ ಉತ್ಪನ್ನಗಳಿಗೆ ಬಳಕೆಯ ಹೊಸ ಸಂದರ್ಭಗಳನ್ನು ಒದಗಿಸುವ ಮೂಲಕ ಈ ತಂತ್ರಗಳನ್ನು ಬೆಂಬಲಿಸಬಹುದು.

‘ಆತ್ಮನಿರ್ಭರ ಭಾರತ’ವನ್ನು ಕೇಂದ್ರವಾಗಿಟ್ಟುಕೊಳ್ಳುವ ಮೂಲಕ ಭಾರತವನ್ನು ಅಭಿವೃದ್ಧಿ ಹೊಂದಿದ ಆರ್ಥಿಕತೆಯನ್ನಾಗಿ ಮಾಡುವ ಗುರಿಯನ್ನು ಸಾಧಿಸಲು, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ರಫ್ತು ಹೆಚ್ಚಿಸುವ ಅವಶ್ಯಕತೆಯಿದೆ. ರಾಜ್ಯಗಳು ಈ ಗುರಿಯನ್ನು ಹೇಗೆ ಸಾಧಿಸಬಹುದು ಎಂಬ ಬಗ್ಗೆ ಇಪಿಐ ಅಮೂಲ್ಯವಾದ ಒಳನೋಟಗಳನ್ನು ಒದಗಿಸುತ್ತದೆ.

ಇಪಿಐನ ಅಂತಿಮ ಚೌಕಟ್ಟು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಎಕ್ಸಿಮ್ ಬ್ಯಾಂಕ್, ಐಐಎಫ್ಟಿ ಮತ್ತು ಡಿಜಿಸಿಐಎಸ್ ನಂತಹ ಸಂಸ್ಥೆಗಳ ಪ್ರತಿಕ್ರಿಯೆಯನ್ನು ಆಧರಿಸಿದೆ. ಡೇಟಾವನ್ನು ಪ್ರಾಥಮಿಕವಾಗಿ ರಾಜ್ಯ ಸರ್ಕಾರಗಳು ಒದಗಿಸಿವೆ. ಕೆಲವು ಸೂಚಕಗಳಿಗಾಗಿ, ಆರ್‌ಬಿಐ, ಡಿಜಿಸಿಐಎಸ್ ಮತ್ತು ಕೇಂದ್ರ ಸಚಿವಾಲಯಗಳನ್ನು ಸಂಪರ್ಕಿಸಲಾಯಿತು.

ಚೌಕಟ್ಟು

ನಾಲ್ಕು ಸ್ತಂಭಗಳು ಮತ್ತು ಅವುಗಳ ಆಯ್ಕೆಯ ಹಿಂದಿನ ತಾರ್ಕಿಕತೆಯನ್ನು ಕೆಳಗೆ ನೀಡಲಾಗಿದೆ:

i. ನೀತಿ: ಸಮಗ್ರ ವ್ಯಾಪಾರ ನೀತಿಯು ರಫ್ತು ಮತ್ತು ಆಮದುಗಳಿಗೆ ಕಾರ್ಯತಂತ್ರದ ನಿರ್ದೇಶನವನ್ನು ನೀಡುತ್ತದೆ.

ii. ವ್ಯಾಪಾರ ವ್ಯವಸ್ಥೆ: ದಕ್ಷ ವ್ಯಾಪಾರ ಪರಿಸರ ವ್ಯವಸ್ಥೆಯು ರಾಜ್ಯಗಳು ಹೂಡಿಕೆಗಳನ್ನು ಆಕರ್ಷಿಸಲು ಸಹಾಯ ಮಾಡುತ್ತದೆ ಮತ್ತು ಸ್ಟಾರ್ಟ್ ಅಪ್ ಗಳನ್ನು ಪ್ರಾರಂಭಿಸಲು ವ್ಯಕ್ತಿಗಳಿಗೆ ಮೂಲಸೌಕರ್ಯವನ್ನು ಸೃಷ್ಟಿಸುತ್ತದೆ.

iii. ರಫ್ತು ವ್ಯವಸ್ಥೆ: ಈ ಸ್ತಂಭವು ವ್ಯಾಪಾರ ವಾತಾವರಣವನ್ನು ನಿರ್ಣಯಿಸುವ ಗುರಿಯನ್ನು ಹೊಂದಿದೆ, ಇದು ನಿರ್ದಿಷ್ಟವಾಗಿ ರಫ್ತಿಗೆ ಸಂಬಂಧಿಸಿದೆ.

iv. ರಫ್ತು ಕಾರ್ಯಕ್ಷಮತೆ: ಇದು ಫಲಿತಾಂಶ ಆಧಾರಿತ ಏಕೈಕ ಸ್ತಂಭವಾಗಿದೆ ಮತ್ತು ರಾಜ್ಯಗಳ ರಫ್ತು ವ್ಯಾಪ್ತಿಯನ್ನು ಪರಿಶೀಲಿಸುತ್ತದೆ.

 

ವರದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

https://niti.gov.in/sites/default/files/2020-08/Digital_ExportPreparednessIndex2020_0.pdf

ಕಾರ್ಯಕ್ರಮದ ವೀಕ್ಷಣೆಗಾಗಿ ಈ ಲಿಂಕ್ ಕ್ಲಿಕ್ ಮಾಡಿ

https://www.youtube.com/watch?v=pQlW73yV4lY

***(Release ID: 1648798) Visitor Counter : 407