ಪ್ರಧಾನ ಮಂತ್ರಿಯವರ ಕಛೇರಿ

ಮಣಿಪುರ ನೀರು ಸರಬರಾಜು ಯೋಜನೆಗೆ ಪ್ರಧಾನಿ ಶಿಲಾನ್ಯಾಸ

Posted On: 23 JUL 2020 1:47PM by PIB Bengaluru

ಯೋಜನೆಯಿಂದ ಲಕ್ಷಾಂತರ ಜನರಿಗೆ ಮನೆಯಲ್ಲಿ ಶುದ್ಧ ಕುಡಿಯುವ ನೀರು ಲಭ್ಯ

ಸುಗಮ ಜೀವನವು ಉತ್ತಮ ಬದುಕಿನ ಮೊದಲ ಅಗತ್ಯವಾಗಿದೆ ಮತ್ತು ಇದು ಬಡವರು ಸೇರಿದಂತೆ ಎಲ್ಲರ ಹಕ್ಕು:

ಪ್ರಧಾನಿ ನರೇಂದ್ರ ಮೋದಿ

 

ಮಣಿಪುರದಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಗೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಇಂದು  ವಿಡಿಯೋ ಕಾನ್ಫರೆನ್ಸ್ ಮೂಲಕ ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿಯವರು, ಕೋವಿಡ್-19ರ ವಿರುದ್ಧ ದೇಶವು ಹೋರಾಡುತ್ತಿರುವಾಗ, ಪೂರ್ವ ಮತ್ತು ಈಶಾನ್ಯ ಭಾರತವು ಭಾರಿ ಮಳೆ ಮತ್ತು ಪ್ರವಾಹದಂತಹ ಉಭಯ ಸವಾಲುಗಳನ್ನು ಎದುರಿಸಬೇಕಾಯಿತು. ಇದರಿಂದಾಗಿ ಅನೇಕ ಜೀವಹಾನಿಗಳಾಗಿವೆ ಮತ್ತು ಅನೇಕರು ನಿರಾಶ್ರಿತರಾಗಿದ್ದಾರೆ ಎಂದರು.

ಲಾಕ್ ಡೌನ್ ಸಮಯದಲ್ಲಿ ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಮಣಿಪುರ ಸರ್ಕಾರ ಮಾಡಿದೆ ಮತ್ತು ವಲಸಿಗರು ತಮ್ಮ ಊರುಗಳಿಗೆ ಮರಳಲು ವಿಶೇಷ ವ್ಯವಸ್ಥೆ ಮಾಡಿದೆ ಎಂದು ಪ್ರಧಾನಿ ಹೇಳಿದರು.

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ ಮಣಿಪುರದ ಸುಮಾರು 25 ಲಕ್ಷ ಬಡವರು ಉಚಿತ ಆಹಾರ ಧಾನ್ಯಗಳನ್ನು ಪಡೆದಿದ್ದಾರೆ. ಹಾಗೆಯೇ, ಮಣಿಪುರದ 1.5 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಉಜ್ವಲಾ ಯೋಜನೆಯಡಿ ಉಚಿತ ಗ್ಯಾಸ್ ಸಿಲಿಂಡರ್ ಸೌಲಭ್ಯವನ್ನು ಒದಗಿಸಲಾಗಿದೆ ಎಂದು ಅವರು ಹೇಳಿದರು.

3000 ಕೋಟಿ ರೂ.ಗಳ ವೆಚ್ಚದಲ್ಲಿ ಜಾರಿಗೆ ತರಲಾಗುತ್ತಿರುವ ನೀರು ಸರಬರಾಜು ಯೋಜನೆಯ ಬಗ್ಗೆ ಪ್ರಸ್ತಾಪಿಸಿದ ಅವರು, ಇದು ರಾಜ್ಯದ ನೀರಿನ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ ಮತ್ತು ವಿಶೇಷವಾಗಿ ರಾಜ್ಯದ ಮಹಿಳೆಯರಿಗೆ ಹೆಚ್ಚು ಪ್ರಯೋಜನ ನೀಡಲಿದೆ ಎಂದು ಹೇಳಿದರು. ಈ ಯೋಜನೆಯು ಗ್ರೇಟರ್ ಇಂಫಾಲ್ ಅಲ್ಲದೇ, ರಾಜ್ಯದ 25 ಸಣ್ಣ ಪಟ್ಟಣಗಳು ಮತ್ತು 1700 ಹಳ್ಳಿಗಳಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಶ್ರೀ ಮೋದಿ ಹೇಳಿದರು. ಮುಂದಿನ ಎರಡು ದಶಕಗಳ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ಇಂದಿನ ಈ ಯೋಜನೆಯಿಂದ ಲಕ್ಷಾಂತರ ಜನರಿಗೆ ತಮ್ಮ ಮನೆಯಲ್ಲಿ ಶುದ್ಧ ಕುಡಿಯುವ ನೀರು ಲಭ್ಯವಾಗುತ್ತದೆ ಮತ್ತು ಸಾವಿರಾರು ಜನರಿಗೆ ಉದ್ಯೋಗ ಸಿಗಲಿದೆ ಎಂದರು.

15 ಕೋಟಿಗೂ ಹೆಚ್ಚು ಮನೆಗಳಿಗೆ ಕೊಳವೆ ನೀರು ಒದಗಿಸುವ ಗುರಿಯೊಂದಿಗೆ ಕಳೆದ ವರ್ಷ ಜಲ ಜೀವನ್ ಮಿಷನ್ ಅನ್ನು ದೇಶದಲ್ಲಿ ಪ್ರಾರಂಭಿಸಲಾಗಿದೆ ಮತ್ತು ಇಂದು ಜನರ ಸಹಭಾಗಿತ್ವದಲ್ಲಿ ದೇಶದಲ್ಲಿ ಪ್ರತಿದಿನ ಸುಮಾರು ಒಂದು ಲಕ್ಷ ನೀರಿನ ಸಂಪರ್ಕವನ್ನು ಒದಗಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು.

ಸುಗಮ ಜೀವನವು ಉತ್ತಮ ಜೀವನಕ್ಕೆ ಅಗತ್ಯವಾಗಿದೆ ಮತ್ತು ಇದು ಬಡವರು ಸೇರಿದಂತೆ ಎಲ್ಲರ ಹಕ್ಕು ಎಂದು ಪ್ರಧಾನಿ ಹೇಳಿದರು.

ಕಳೆದ 6 ವರ್ಷಗಳಲ್ಲಿ, ಪ್ರತಿ ಹಂತದಲ್ಲೂ, ಪ್ರತಿಯೊಂದು ಕ್ಷೇತ್ರದಲ್ಲೂ, ವಿಶೇಷವಾಗಿ ಬಡವರ ಬದುಕನ್ನು ಸುಗಮವಾಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು. ಇಂದು ಮಣಿಪುರ ಸೇರಿದಂತೆ ಇಡೀ ಭಾರತ ಬಯಲು ಮಲವಿಸರ್ಜನೆಯಿಂದ ಮುಕ್ತವಾಗಿದೆ ಎಂದು ಅವರು ಸಂತೋಷ ವ್ಯಕ್ತಪಡಿಸಿದರು. ಎಲ್‌ಪಿಜಿ ಅನಿಲ ಬಡವರಿಗೆ ತಲುಪಿದೆ, ಪ್ರತಿ ಹಳ್ಳಿಯು ಉತ್ತಮ ರಸ್ತೆಗಳಿಂದ ಸಂಪರ್ಕ ಹೊಂದಿದೆ ಮತ್ತು ಮನೆಯಿಲ್ಲದವರಿಗೆ ಪಕ್ಕಾ ಮನೆಗಳನ್ನು ಒದಗಿಸಲಾಗುತ್ತಿದೆ ಎಂದು ಅವರು ಹೇಳಿದರು.

ಪ್ರತಿ ಮನೆಗೆ ಸುರಕ್ಷಿತ ಕುಡಿಯುವ ನೀರು ಒದಗಿಸುವ ಕಾರ್ಯವು ಅಭಿಯಾನ ಮಾದರಿಯಲ್ಲಿ ನಡೆಯುತ್ತಿದೆ ಎಂದು ಪ್ರಧಾನಿ ಹೇಳಿದರು.

ಉತ್ತಮ ಜೀವನವು ನೇರವಾಗಿ ಸಂಪರ್ಕದೊಂದಿಗೆ ಬೆಸೆದುಕೊಂಡಿದೆ ಎಂದ ಪ್ರಧಾನಿಯವರು, ಸುರಕ್ಷಿತ ಮತ್ತು ಖಚಿತವಾದ ಆತ್ಮನಿರ್ಭರ ಭಾರತಕ್ಕೆ ಈಶಾನ್ಯದ ಸಂಪರ್ಕವು ಅವಶ್ಯಕವಾಗಿದೆ ಎಂದು ಹೇಳಿದರು. ಇದು ಭಾರತದ ಈಶಾನ್ಯದೆಡೆಗೆ ನೀತಿಗೆ ಉತ್ತೇಜನ ನೀಡುತ್ತದೆ ಮತ್ತು ಇದು ದೇಶದ ಪ್ರಯಾಣ ಮತ್ತು ಪ್ರವಾಸೋದ್ಯಮ ಕ್ಷೇತ್ರಕ್ಕೆ ಬಾಗಿಲು ತೆರೆಯುತ್ತದೆ ಎಂದು ಅವರು ಹೇಳಿದರು.

ರಸ್ತೆ ಮಾರ್ಗಗಳು, ಹೆದ್ದಾರಿಗಳು, ವಾಯುಮಾರ್ಗಗಳು, ಜಲಮಾರ್ಗಗಳು ಮತ್ತು ಐ-ವೇಗಳು ಮತ್ತು ಅನಿಲ ಪೈಪ್‌ಲೈನ್‌ಗಳ ಜೊತೆಗೆ ಈಶಾನ್ಯದಲ್ಲಿ ಆಧುನಿಕ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಕಳೆದ 6 ವರ್ಷಗಳಲ್ಲಿ, ಇಡೀ ಈಶಾನ್ಯದಲ್ಲಿ, ಮೂಲಸೌಕರ್ಯಗಳ ಅಭಿವೃದ್ಧಿಗೆ ಸಾವಿರಾರು ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಾಗಿದೆ ಎಂದರು.

ನಾಲ್ಕು ಈಶಾನ್ಯ ರಾಜ್ಯಗಳ ರಾಜಧಾನಿಗಳ ನಡುವೆ ಸಂಪರ್ಕ, ಜಿಲ್ಲಾ ಕೇಂದ್ರಕ್ಕೆ ಎರಡು ಪಥದ ರಸ್ತೆಗಳು ಮತ್ತು ಎಲ್ಲಾ ಹಳ್ಳಿಗಳಿಗೆ ಸರ್ವಋತು ರಸ್ತೆಗಳನ್ನು ನಿರ್ಮಿಸಲು ಪ್ರಯತ್ನಿಸಲಾಗಿದೆ ಎಂದು ಪ್ರಧಾನಿ ಹೇಳಿದರು. ಇದನ್ನು ಸಾಧಿಸಲು ಸುಮಾರು 3000 ಕಿಲೋಮೀಟರ್ ರಸ್ತೆಗಳನ್ನು ನಿರ್ಮಿಸಲಾಗಿದೆ ಮತ್ತು ಇನ್ನೂ 60000 ಕಿಲೋಮೀಟರ್ ರಸ್ತೆಗಳನ್ನು ಹಾಕುವ ನಿರ್ಮಿಸುವ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದರು.

ಹೊಸ ರೈಲ್ವೆ ನಿಲ್ದಾಣಗಳನ್ನು ನಿರ್ಮಿಸಲು ಮತ್ತು ಅಸ್ತಿತ್ವದಲ್ಲಿರುವ ರೈಲು ಜಾಲವನ್ನು ಬ್ರಾಡ್ ಗೇಜ್ ಗೆ ಪರಿವರ್ತಿಸುವ ಯೋಜನೆಗಳೊಂದಿಗೆ ಈಶಾನ್ಯದಲ್ಲಿ ರೈಲು ಸಂಪರ್ಕ ಕ್ಷೇತ್ರದಲ್ಲಿ ಭಾರಿ ಸುಧಾರಣೆಯಾಗಿದೆ. ಅಂತೆಯೇ, ಈಶಾನ್ಯದ ಪ್ರತಿಯೊಂದು ರಾಜ್ಯದ ರಾಜಧಾನಿಗಳನ್ನು ರೈಲ್ವೆ ಜಾಲದೊಂದಿಗೆ ಸಂಪರ್ಕಿಸುವ ಕೆಲಸ ಕಳೆದ 2 ವರ್ಷಗಳಿಂದ ವೇಗವಾಗಿ ನಡೆಯುತ್ತಿದೆ ಎಂದು ಅವರು ಹೇಳಿದರು.

ರಸ್ತೆಗಳು ಮತ್ತು ರೈಲ್ವೆಗಳ ಹೊರತಾಗಿ, ಈಶಾನ್ಯದಲ್ಲಿ ವಾಯು ಸಂಪರ್ಕವೂ ಅಷ್ಟೇ ಮುಖ್ಯವಾಗಿದೆ. ಇಂದು ಈಶಾನ್ಯದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಸುಮಾರು 13 ವಿಮಾನ ನಿಲ್ದಾಣಗಳಿವೆ. ಇಂಫಾಲ್ ವಿಮಾನ ನಿಲ್ದಾಣ ಸೇರಿದಂತೆ ಈಶಾನ್ಯದಲ್ಲಿ ಅಸ್ತಿತ್ವದಲ್ಲಿರುವ ವಿಮಾನ ನಿಲ್ದಾಣಗಳನ್ನು ಆಧುನೀಕರಿಸಲು 3 ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆ ಎಂದರು.

ಈಶಾನ್ಯವನ್ನು ಒಳಗೊಂಡಂತೆ ತಡೆರಹಿತ ಸಂಪರ್ಕವನ್ನು ಒದಗಿಸುವ 20 ಕ್ಕೂ ಹೆಚ್ಚು ರಾಷ್ಟ್ರೀಯ ಜಲಮಾರ್ಗಗಳ ಬಗ್ಗೆ ಪ್ರಧಾನಿ ಉಲ್ಲೇಖಿಸಿದರು,

ಈಶಾನ್ಯವು ಭಾರತದ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಸಾಂಸ್ಕೃತಿಕ ಶಕ್ತಿಯ ಪ್ರತಿನಿಧಿಯಾಗಿದೆ ಎಂದು ಪ್ರಧಾನಿ ಹೇಳಿದರು. ಇದು ಇನ್ನೂ ಬೆಳಕಿಗೆ ಬಾರದ ಉತ್ತಮ ಪ್ರವಾಸೋದ್ಯಮ ಸಾಮರ್ಥ್ಯವನ್ನು ಹೊಂದಿದೆ, ಈಶಾನ್ಯವು ದೇಶದ ಬೆಳವಣಿಗೆಯ ಎಂಜಿನ್ ಆಗಬೇಕು ಎಂದು ಪ್ರಧಾನಿ ಹೇಳಿದರು.

ಇಂದು ಈಶಾನ್ಯದ ಯುವಕರು ಮತ್ತು ಜನರು ಹಿಂಸಾಚಾರವನ್ನು ತೊರೆದು ಅಭಿವೃದ್ಧಿ ಮತ್ತು ಪ್ರಗತಿಯನ್ನು ಆರಿಸಿಕೊಳ್ಳುತ್ತಿದ್ದಾರೆ ಎಂದು ಪ್ರಧಾನಿ ಹೇಳಿದರು. ಮಣಿಪುರದಲ್ಲಿ ದಿಗ್ಬಂಧನಗಳು ಈಗ ಇತಿಹಾಸ ಸೇರಿವೆ ಎಂದು ಅವರು ಹೇಳಿದರು.

ಅಸ್ಸಾಂ, ತ್ರಿಪುರ ಮತ್ತು ಮಿಜೋರಾಂನಲ್ಲಿನ ಜನರು ಈಗ ಹಿಂಸಾಚಾರದ ಹಾದಿಯನ್ನು ತ್ಯಜಿಸಿದ್ದಾರೆ ಬ್ರೂ-ರಿಯಾಂಗ್ ನಿರಾಶ್ರಿತರು ಉತ್ತಮ ಜೀವನದತ್ತ ಸಾಗುತ್ತಿದ್ದಾರೆ ಎಂದು ಎಂದು ಶ್ರೀ ಮೋದಿ ಹೇಳಿದರು.

ಈಶಾನ್ಯದ ಬಿದಿರಿನ ಉದ್ಯಮದ ಸಾಮರ್ಥ್ಯ ಮತ್ತು ಸಾವಯವ ಉತ್ಪನ್ನಗಳ ಸಾಮರ್ಥ್ಯವನ್ನು ಉಲ್ಲೇಖಿಸಿದ ಪ್ರಧಾನಿಯವರು, ಆತ್ಮನಿರ್ಭರ ಭಾರತ ಅಭಿಯಾನದ ಅಡಿಯಲ್ಲಿ ಸ್ಥಳೀಯ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಮಾರಾಟಕ್ಕಾಗಿ ಕ್ಲಸ್ಟರ್‌ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಿದರು.

ಕೃಷಿ ಸ್ಟಾರ್ಟ್ ಅಪ್‌ಗಳು ಮತ್ತು ಇತರ ಕೈಗಾರಿಕೆಗಳು ಈ ಕ್ಲಸ್ಟರ್‌ಗಳಿಂದ ಪ್ರಯೋಜನ ಪಡೆಯಲಿವೆ ಎಂದು ಅವರು ಹೇಳಿದರು. ಭಾರತದ ಬಿದಿರಿನ ಆಮದನ್ನು ಸ್ಥಳೀಯ ಉತ್ಪಾದನೆಯೊಂದಲೇ ಪೂರೈಸುವ ಸಾಮರ್ಥ್ಯ ಈಶಾನ್ಯಕ್ಕೆ ಇದೆ ಎಂದು ಅವರು ಹೇಳಿದರು. ದೇಶದಲ್ಲಿ ಊದುಕಡ್ಡಿಗಳಿಗೆ ದೊಡ್ಡ ಬೇಡಿಕೆಯಿದೆ, ಆದರೆ ಇನ್ನೂ ನಾವು ಶತಕೋಟಿ ರೂಪಾಯಿ ಮೌಲ್ಯದ ಊದುಕಡ್ಡಿಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ ಎಂದರು. ಬಿದಿರಿನ ರೈತರು, ಕರಕುಶಲ ವಸ್ತುಗಳು ಮತ್ತು ಇತರ ಸೌಲಭ್ಯಗಳಿಗೆ ಸಂಬಂಧಿಸಿದ ಕುಶಲಕರ್ಮಿಗಳಿಗಾಗಿ ರಾಷ್ಟ್ರೀಯ ಬಿದಿರು ಮಿಷನ್ ಅಡಿಯಲ್ಲಿ ನೂರಾರು ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಾಗುತ್ತಿದೆ. ಇದು ಈಶಾನ್ಯದ ಯುವಕರಿಗೆ, ಇಲ್ಲಿನ ಸ್ಟಾರ್ಟ್ ಅಪ್‌ಗಳಿಗೆ ಅನುಕೂಲವಾಗಲಿದೆ.ಎಂದು ಪ್ರಧಾನಿ ಹೇಳಿದರು.

ಆರೋಗ್ಯ, ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ಸ್ಟಾರ್ಟ್ ಅಪ್ ಮತ್ತು ಇತರ ತರಬೇತಿಗಾಗಿ ಈಶಾನ್ಯದಲ್ಲಿ ಈಗ ಅನೇಕ ಸಂಸ್ಥೆಗಳನ್ನು ನಿರ್ಮಿಸಲಾಗುತ್ತಿದೆ. ಕ್ರೀಡಾ ವಿಶ್ವವಿದ್ಯಾಲಯ ಮತ್ತು ವಿಶ್ವ ದರ್ಜೆಯ ಕ್ರೀಡಾಂಗಣಗಳನ್ನು ಪ್ರಾರಂಭಿಸುವುದರೊಂದಿಗೆ ಮಣಿಪುರವು ದೇಶದ ಕ್ರೀಡಾ ಪ್ರತಿಭೆಗಳಿಗೆ ಪ್ರಮುಖ ಕೇಂದ್ರವಾಗಲಿದೆ ಎಂದು ಪ್ರಧಾನಿ ಹೇಳಿದರು.

***



(Release ID: 1641087) Visitor Counter : 205