ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ

ಪಿಂಚಣಿದಾರರಿಗೆ ಜೀವನ್ ಪ್ರಮಾಣಪತ್ರ ನೀಡಲು ಸಿಎಸ್ ಸಿ ಜಾಲ ಬಳಸಿಕೊಳ್ಳಲು ಮುಂದಾದ ಇಪಿಎಫ್ ಒ

Posted On: 11 JUN 2020 4:45PM by PIB Bengaluru

ಪಿಂಚಣಿದಾರರಿಗೆ ಜೀವನ್ ಪ್ರಮಾಣಪತ್ರ ನೀಡಲು ಸಿಎಸ್ ಸಿ ಜಾಲ ಬಳಸಿಕೊಳ್ಳಲು ಮುಂದಾದ ಇಪಿಎಫ್

 

ಕೋವಿಡ್-19 ನಂತಹ ಸಾಂಕ್ರಾಮಿಕದ ಸವಾಲಿನ ವಿಶೇಷ ಸಂದರ್ಭದಲ್ಲಿ, ಇಪಿಎಸ್ ಪಿಂಚಣಿದಾರರ ಮನೆ ಬಾಗಿಲಿಗೆ ಸೇವೆಗಳನ್ನು ಒದಗಿಸುವ ಅಗತ್ಯವನ್ನು ಪರಿಗಣಿಸಿ, ಇಪಿಎಫ್ ಡಿಜಿಟಲ್ ಜೀವನ್ ಪ್ರಮಾಣಪತ್ರಗಳನ್ನು ಸಲ್ಲಿಸುವ ಸೌಕರ್ಯ ಒದಗಿಸಲು ಸಾಮಾನ್ಯ ಸೇವಾ ಕೇಂದ್ರಗಳು (ಸಿಎಸ್ ಸಿ) ಜೊತೆ ಕ್ರಿಯಾಶೀಲ ಸಹಭಾಗಿತ್ವ ಸಾಧಿಸಿದೆ. ಸುಮಾರು 65 ಲಕ್ಷ ಪಿಂಚಣಿದಾರರು ತಮ್ಮ ಮನೆಯ ಸಮೀಪದ ತಳಹಂತದ ಸಂಪರ್ಕ ಜಾಲ, 3.65 ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಡಿಜಿಟಲ್ ಜೀವನ್ ಪ್ರಮಾಣಪತ್ರಗಳನ್ನು ಪಡೆದು ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ. ನಿಯಮದಂತೆ ಇಪಿಎಸ್ ಪಿಂಚಣಿದಾರರು ತಾವು ಪಿಂಚಣಿ ಪಡೆಯುವುದನ್ನು ಮುಂದುವರಿಸಿಕೊಂಡು ಹೋಗಲು ಪ್ರತಿವರ್ಷ ಜೀವನ ಪ್ರಮಾಣಪತ್ರ/ ಜೀವಂತ ಪ್ರಮಾಣಪತ್ರಗಳನ್ನು ಸಲ್ಲಿಸುವ ಅಗತ್ಯವಿದೆ.

ಸಿಎಸ್ ಸಿ ಕೇಂದ್ರಗಳಲ್ಲದೆ, ಇಪಿಎಸ್ ಪಿಂಚಣಿದಾರರು 135 ಪ್ರಾದೇಶಿಕ ಕಚೇರಿಗಳು ಮತ್ತು 117 ಜಿಲ್ಲಾ ಕಚೇರಿಗಳು ಮತ್ತು ಪಿಂಚಣಿ ವಿತರಣಾ ಬ್ಯಾಂಕುಗಳ ಮೂಲಕವೂ ಜೀವನ್ ಪ್ರಮಾಣಪತ್ರಗಳನ್ನು ಸಲ್ಲಿಸಬಹುದಾಗಿದೆ. ಬಹುಹಂತದ ಮಾದರಿ ವ್ಯವಸ್ಥೆಯನ್ನು ಹೊಂದಿರುವ ಇಪಿಎಫ್ಓ, ಪಿಂಚಣಿದಾರರಿಗೆ ತಮ್ಮ ಅನುಕೂಲಕ್ಕೆ ತಕ್ಕಂತೆ ಸೇವಾ ವಿತರಣಾ ಸಂಸ್ಥೆಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಹಾಗೂ ಅಧಿಕಾರವನ್ನು ನೀಡಿದೆ.

ಅಲ್ಲದೆ, ಮತ್ತೊಂದು ಪ್ರಮುಖವಾದ ಅಂಶ ಎಂದರೆ ನೀತಿಯಲ್ಲಿ ಬದಲಾವಣೆ ಮಾಡಲಾಗಿದ್ದು, ಇಪಿಎಸ್ ಪಿಂಚಣಿದಾರರು ಪ್ರತಿ ವರ್ಷ ಯಾವುದೇ ಸಂದರ್ಭದಲ್ಲಿ ತಮಗೆ ಅನುಕೂಲವಾದಾಗ ಡಿಜಿಟಲ್ ಜೀವನ್ ಪ್ರಮಾಣಪತ್ರ ಸಲ್ಲಿಸಲು ಅವಕಾಶ ನೀಡಿದೆ. ಜೀವಂತ ಪ್ರಮಾಣಪತ್ರ ಸಲ್ಲಿಸಿದ ದಿನದಿಂದ ಒಂದು ವರ್ಷದ ಅವಧಿಗೆ ಮಾನ್ಯತೆ ಹೊಂದಿರುತ್ತದೆ. ಮೊದಲು, ಪಿಂಚಣಿದಾರರು ಪ್ರತಿವರ್ಷ ನವೆಂಬರ್ ತಿಂಗಳಲ್ಲಿ ಜೀವನ ಪ್ರಮಾಣಪತ್ರವನ್ನು ಸಲ್ಲಿಸಬೇಕಿತ್ತು. ಇದರಿಂದ ಪಿಂಚಣಿದಾರರು ತೊಂದರೆಗಳನ್ನು ಅನುಭವಿಸುತ್ತಿದ್ದರು ಮತ್ತು ಬಹುತೇಕ ಪಿಂಚಣಿದಾರರ ಪಿಂಚಣಿ ಸ್ಥಗಿತಗೊಂಡು ಸಾಕಷ್ಟು ಕುಂದುಕೊರತೆಗಳು ಎದುರಾಗಿದ್ದವು. ಒಂದು ವೇಳೆ ತಡವಾಗಿ ಲೈಫ್ ಸರ್ಟಿಫಿಕೇಟ್ ಸಲ್ಲಿಸಿದರೆ, ಅದು ಕೆಲವು ತಿಂಗಳು ಅಂದರೆ ನವೆಂಬರ್ ವರೆಗೆ ಮಾತ್ರ ಮಾನ್ಯವಾಗಿರುತ್ತದೆ. ಪಿಂಚಣಿದಾರರ ಸ್ನೇಹಿ ಕ್ರಮದಿಂದಾಗಿ ಇಪಿಎಸ್ ಪಿಂಚಣಿದಾರರಿಗೆ ಉಚಿತ ಸಾಮಾಜಿಕ ಭದ್ರತೆ ವ್ಯಾಪ್ತಿ ಒದಗಿಸುವಲ್ಲಿ ಯಾವುದೇ ಅಡೆತಡೆಗಳು ಎದುರಾಗುವುದಿಲ್ಲ.

ಸಕಾಲದಲ್ಲಿ ಪಿಂಚಣಿ ವಿತರಣೆ ವಿಶೇಷವಾಗಿ ಸಂಕಷ್ಟಗಳ ಸಮಯದಲ್ಲಿ ಸಕಾಲದಲ್ಲಿ ಪಿಂಚಣಿಯನ್ನು ವಿತರಿಸುವ ಮೂಲಕ ಇಪಿಎಫ್ ತನ್ನ 65 ಲಕ್ಷ ಇಪಿಎಸ್ ಪಿಂಚಣಿದಾರರ ಆರ್ಥಿಕ ಸ್ವಾತಂತ್ರ್ಯ ರಕ್ಷಿಸಲು ಬದ್ಧವಾಗಿದೆ.

***



(Release ID: 1631047) Visitor Counter : 261