ಹಣಕಾಸು ಸಚಿವಾಲಯ
ವಲಸೆ ಕಾರ್ಮಿಕರು, ರೈತರು, ಸಣ್ಣ ಉದ್ಯಮಗಳು ಮತ್ತು ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಬಡವರಿಗೆ ಅಲ್ಪಾವಧಿ ಮತ್ತು ದೀರ್ಘಕಾಲೀನ ಕ್ರಮಗಳನ್ನು ಪ್ರಕಟಿಸಿದ ಹಣಕಾಸು ಸಚಿವರು
Posted On:
14 MAY 2020 6:59PM by PIB Bengaluru
ವಲಸೆ ಕಾರ್ಮಿಕರು, ರೈತರು, ಸಣ್ಣ ಉದ್ಯಮಗಳು ಮತ್ತು ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಬಡವರಿಗೆ ಅಲ್ಪಾವಧಿ ಮತ್ತು ದೀರ್ಘಕಾಲೀನ ಕ್ರಮಗಳನ್ನು ಪ್ರಕಟಿಸಿದ ಹಣಕಾಸು ಸಚಿವರು
- ವಲಸೆ ಕಾರ್ಮಿಕರಿಗೆ 2 ತಿಂಗಳವರೆಗೆ ಉಚಿತ ಆಹಾರ ಧಾನ್ಯಗಳ ಪೂರೈಕೆ
- ವಲಸೆ ಕಾರ್ಮಿಕರು ದೇಶದ ಯಾವುದೇ ನ್ಯಾಯಬೆಲೆ ಅಂಗಡಿಯಿಂದ ಪಡಿತರ ಪಡೆಯಲು ಅನುವು ಮಾಡಿಕೊಡುವ ತಂತ್ರಜ್ಞಾನ ವ್ಯವಸ್ಥೆಯನ್ನು 21 ಮಾರ್ಚ್, 2021 ರೊಳಗೆ ಬಳಸಲಾಗುವುದು - ಒಂದು ದೇಶ, ಒಂದು ಪಡಿತರ ಚೀಟಿ
- ವಲಸೆ ಕಾರ್ಮಿಕರು ಮತ್ತು ನಗರಗಳ ಬಡವರಿಗೆ ಕೈಗೆಟುಕುವ ಬಾಡಿಗೆ ವಸತಿ ಸಂಕೀರ್ಣಗಳ ಯೋಜನೆ
- ಶಿಶು ಮುದ್ರಾ ಸಾಲಗಾರರಿಗೆ 12 ತಿಂಗಳವರೆಗೆ ಶೇ.2 ಬಡ್ಡಿ ಸಹಾಯಧನ- 1500 ಕೋಟಿ ರೂ. ಪರಿಹಾರ
- ಬೀದಿಬದಿ ವ್ಯಾಪಾರಿಗಳಿಗೆ 5000 ಕೋಟಿ ರೂ. ಸಾಲ ಸೌಲಭ್ಯ
- ಪಿಎಂಎವೈ (ನಗರ) ಅಡಿಯಲ್ಲಿ ಎಂಐಜಿಗೆ ಸಾಲಾಧಾರಿತ ಸಹಾಯಧನ ಯೋಜನೆಯನ್ನು ವಿಸ್ತರಿಸುವ ಮೂಲಕ ವಸತಿ ವಲಯ ಮತ್ತು ಮಧ್ಯಮ ಆದಾಯದ ವರ್ಗಕ್ಕೆ 70,000 ಕೋಟಿ ರೂ. ಪ್ರೋತ್ಸಾಹ
- ಕಾಂಪಾ ಹಣವನ್ನು ಬಳಸಿಕೊಂಡು ಉದ್ಯೋಗ ಸೃಷ್ಟಿಸಲು 6,000 ಕೋಟಿ ರೂ
- ನಬಾರ್ಡ್ ಮೂಲಕ ರೈತರಿಗೆ 30,000 ಕೋಟಿ ರೂ. ಹೆಚ್ಚುವರಿ ತುರ್ತು ಮೂಲ ಬಂಡವಾಳ
- ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ 2.5 ಕೋಟಿ ರೈತರಿಗೆ 2 ಲಕ್ಷ ಕೋಟಿ ರೂ
ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಮೇ,12 2020 ರಂದು 20 ಲಕ್ಷ ಕೋಟಿ ರೂ.ಗಳ ವಿಶೇಷ ಆರ್ಥಿಕ ಮತ್ತು ಸಮಗ್ರ ಪ್ಯಾಕೇಜ್ ಘೋಷಿಸಿದ್ದಾರೆ - ಇದು ಭಾರತದ ಜಿಡಿಪಿಯ ಶೇ.10 ಕ್ಕೆ ಸಮಾನವಾಗಿದೆ. ಅವರು आत्मनिर्भर भारत अभियान ಅಥವಾ ಸ್ವಾವಲಂಬಿ ಭಾರತ ಅಭಿಯಾನಕ್ಕೆ ಸ್ಪಷ್ಟ ಕರೆ ನೀಡಿದರು. ಸ್ವಾವಲಂಬಿ ಭಾರತದ ಐದು ಸ್ತಂಭಗಳಾದ ಆರ್ಥಿಕತೆ, ಮೂಲಸೌಕರ್ಯ, ವ್ಯವಸ್ಥೆ, ಜನಸಂಖ್ಯೆ ಮತ್ತು ಬೇಡಿಕೆಯನ್ನು ಅವರು ವಿವರಿಸಿದ್ದರು.
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು, ವಲಸೆ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ನಗರಗಳ ವಲಸಿಗ ಬಡವರು, ಸಣ್ಣ ವ್ಯಾಪಾರಿಗಳು ಸ್ವಯಂ ಉದ್ಯೋಗಿಗಳು, ಸಣ್ಣ ರೈತರು ಮತ್ತು ವಸತಿ ಕ್ಷೇತ್ರವು ಸಂಕಷ್ಟಗಳನ್ನು ನಿವಾರಿಸುವ ಎರಡನೇ ಹಂತದ ಕ್ರಮಗಳನ್ನು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು. ವಲಸಿಗರು, ರೈತರು, ಸಣ್ಣ ಉದ್ಯಮಗಳು ಮತ್ತು ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಬಡವರಿಗೆ ಸಹಾಯ ಮಾಡುವ ಅಲ್ಪಾವಧಿಯ ಮತ್ತು ದೀರ್ಘಕಾಲೀನ ಕ್ರಮಗಳನ್ನು ಅವರು ವಿವರಿಸಿದರು.
ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ವಲಸೆ ಕಾರ್ಮಿಕರು ಮತ್ತು ರೈತರು ಸೇರಿದಂತೆ ಬಡವರು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಯಾವಾಗಲೂ ಕಾಳಜಿ ವಹಿಸುತ್ತಾರೆ ಎಂದು ಶ್ರೀಮತಿ ಸೀತಾರಾಮನ್ ಹೇಳಿದರು. ರೈತರು ಮತ್ತು ಕಾರ್ಮಿಕರು ಈ ರಾಷ್ಟ್ರದ ಬೆನ್ನೆಲುಬು. ಅವರು ನಮ್ಮೆಲ್ಲರಿಗೂ ತಮ್ಮ ಬೆವರು ಮತ್ತು ಶ್ರಮದಿಂದ ಸೇವೆ ಸಲ್ಲಿಸುತ್ತಾರೆ. ವಲಸೆ ಕಾರ್ಮಿಕರ ಸಾಮಾಜಿಕ ಭದ್ರತೆಗೆ ಹೆಚ್ಚುವರಿಯಾಗಿ ನಗರ ಪ್ರದೇಶಗಳಲ್ಲಿ ಕೈಗೆಟುಕುವ ಮತ್ತು ಅನುಕೂಲಕರ ಬಾಡಿಗೆ ಮನೆಗಳ ಅಗತ್ಯವಿದೆ. ವಲಸೆ ಮತ್ತು ಅಸಂಘಟಿತ ಕಾರ್ಮಿಕರು ಸೇರಿದಂತೆ ಬಡವರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಅವಶ್ಯಕತೆಯಿದೆ. ರೈತರಿಗೆ ಸಮಯೋಚಿತ ಮತ್ತು ಸಾಕಷ್ಟು ಸಾಲದ ಬೆಂಬಲ ಬೇಕು ಎಂದು ಅವರು ಹೇಳಿದರು.
ಆರ್ಥಿಕತೆ ಮತ್ತು ಸಮಾಜದ ಎಲ್ಲಾ ವರ್ಗಗಳ ಅಗತ್ಯಗಳ ಬಗ್ಗೆ ಸರ್ಕಾರವು ಗಮನ ಹರಿಸುತ್ತಿದೆ ಎಂದು ಶ್ರೀಮತಿ ಸೀತಾರಾಮನ್ ಹೇಳಿದರು. ಸಣ್ಣ ವ್ಯಾಪಾರಗಳು, ವಿಶೇಷವಾಗಿ ಬೀದಿ ಬದಿ ವ್ಯಾಪಾರಗಳಿಗೆ ಶಿಶು ಮುದ್ರಾ ಸಾಲಗಳ ಮೂಲಕ ಗೌರವದ ಜೀವನೋಪಾಯವನ್ನು ಬೆಂಬಲಿಸಲಾಗುವುದು. ಅವರ ವ್ಯವಹಾರಕ್ಕೆ ನಮ್ಮ ಪ್ರೋತ್ಸಾಹದ ಅಗತ್ಯವಿದೆ ಮತ್ತು ಸಾಮಾಜಿಕ ಭದ್ರತೆ ಮತ್ತು ವರ್ಧಿತ ಸಾಲದ ರೂಪದಲ್ಲಿಯೂ ಅವರ ಬಗ್ಗೆ ಗಮನ ಹರಿಸಬೇಕಿದೆ ಎಂದು ಅವರು ಹೇಳಿದರು.
ವಲಸೆ ಕಾರ್ಮಿಕರು, ರೈತರು, ಸಣ್ಣ ಉದ್ಯಮಗಳು ಮತ್ತು ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಬಡವರಿಗೆ ನೆರವಾಗುವ ಇಂದು ಘೋಷಿಸಲಾದ ಅಲ್ಪಾವಧಿ ಮತ್ತು ದೀರ್ಘಕಾಲೀನ ಕ್ರಮಗಳು:
1. ವಲಸೆ ಕಾರ್ಮಿಕರಿಗೆ ಎರಡು ತಿಂಗಳವರೆಗೆ ಉಚಿತ ಆಹಾರ ಧಾನ್ಯಗಳ ಸರಬರಾಜು
ಪ್ರತೀ ವಲಸೆ ಕಾರ್ಮಿಕನಿಗೆ 5 ಕೆಜಿ ಆಹಾರ ಧಾನ್ಯ ಮತ್ತು ಪ್ರತೀ ವಲಸೆ ಕಾರ್ಮಿಕನ ಕುಟುಂಬಕ್ಕೆ ತಿಂಗಳಿಗೆ 1 ಕೆಜಿ ಬೇಳೆಯನ್ನು ಎರಡು ತಿಂಗಳವರೆಗೆ ಅಂದರೆ 2020 ರ ಮೇ ಮತ್ತು ಜೂನ್ ನಲ್ಲಿ ಉಚಿತವಾಗಿ ಹಂಚಲಾಗುತ್ತದೆ. ಇದನ್ನು ಹೆಚ್ಚುವರಿಯಾಗಿ ಎಲ್ಲಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಪೂರೈಸಲಾಗುವುದು. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಇಲ್ಲದ ಅಥವಾ ರಾಜ್ಯ / ಕೇಂದ್ರಾಡಳಿತ ಪ್ರದೇಶಗಳ ಪಡಿತರ ಚೀಟಿ ಇಲ್ಲದ ವಲಸೆ ಕಾರ್ಮಿಕರು ಇದಕ್ಕೆ ಅರ್ಹರಾಗಿರುತ್ತಾರೆ. ಯೋಜನೆಯ ಉದ್ದೇಶಿತ ವಿತರಣೆಗೆ ವ್ಯವಸ್ಥೆಯನ್ನು ರೂಪಿಸುವಂತೆ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗುತ್ತದೆ. 8 ಲಕ್ಷ ಮೆ.ಟನ್ ಆಹಾರ-ಧಾನ್ಯ ಮತ್ತು 50,000 ಮೆ.ಟನ್ ಬೇಳೆಯನ್ನು ಹಂಚಿಕೆ ಮಾಡಲಾಗುತ್ತದೆ. ಇದರ ವೆಚ್ಚ 3500 ಕೋಟಿ ರೂ.ಗಳನ್ನು ಭಾರತ ಸರ್ಕಾರವೇ ಭರಿಸಲಿದೆ.
2. ವಲಸೆ ಕಾರ್ಮಿಕರು ಭಾರತದ ಯಾವುದೇ ನ್ಯಾಯಬೆಲೆ ಅಂಗಡಿಗಳಿಂದ ಪಡಿತರ ಪಡೆಯಲು ಅನುವು ಮಾಡಿಕೊಡುವ ತಂತ್ರಜ್ಞಾನ ವ್ಯವಸ್ಥೆಯನ್ನು ಮಾರ್ಚ್ 20, 2021 ರೊಳಗೆ ಬಳಸಲಾಗುವುದು – ಒಂದು ದೇಶ, ಒಂದು ಪಡಿತರ ಚೀಟಿ.
ಪಡಿತರ ಚೀಟಿಗಳ ಈ ಪ್ರಾಯೋಗಿಕ ಯೋಜನೆಯನ್ನು 23 ರಾಜ್ಯಗಳಿಗೆ ವಿಸ್ತರಿಸಲಾಗುವುದು. ಆ ಮೂಲಕ, ಪಡಿತರ ಜನಸಂಖ್ಯೆಯ ಶೇ.83 ರಷ್ಟು 67 ಕೋಟಿ ಫಲಾನುಭವಿಗಳು 2020 ರ ಆಗಸ್ಟ್ ವೇಳೆಗೆ ರೇಷನ್ ಕಾರ್ಡ್ಗಳ ರಾಷ್ಟ್ರೀಯ ಪೋರ್ಟಬಿಲಿಟಿ ವ್ಯಾಪ್ತಿಗೆ ಬರುತ್ತಾರೆ. ಶೇ.100 ರಷ್ಟು ರಾಷ್ಟ್ರೀಯ ಪೋರ್ಟಬಿಲಿಟಿಯನ್ನು ಮಾರ್ಚ್, 2021 ರ ವೇಳೆಗೆ ಸಾಧಿಸಲಾಗುವುದು. ಇದು ಪ್ರಧಾನಮಂತ್ರಿಯವರ ತಂತ್ರಜ್ಞಾನ ಚಾಲಿತ ವ್ಯವಸ್ಥೆಯ ಸುಧಾರಣೆಗಳ ಭಾಗವಾಗಿದೆ. ಇದರಿಂದ ದೇಶದ ಯಾವುದೇ ನ್ಯಾಯಬೆಲೆ ಅಂಗಡಿಯಿಂದ ವಲಸೆ ಕಾರ್ಮಿಕ ಮತ್ತು ಅವರ ಕುಟುಂಬ ಸದಸ್ಯರು ಪಡಿತರ ಪಡೆಯಲು ಅವಕಾಶವಾಗುತ್ತದೆ. ಸಂಚಾರದಲ್ಲಿರುವ ಜನರು, ವಿಶೇಷವಾಗಿ ವಲಸೆ ಕಾರ್ಮಿಕರು ದೇಶಾದ್ಯಂತ ಪಡಿತರದ ಪ್ರಯೋಜನ ಪಡೆಯುವುದನ್ನು ಇದು ಖಚಿತಪಡಿಸುತ್ತದೆ.
3. ವಲಸೆ ಕಾರ್ಮಿಕರಿಗೆ ಮತ್ತು ನಗರಗಳ ಬಡವರಿಗೆ ಕೈಗೆಟುಕುವ ಬಾಡಿಗೆ ವಸತಿ ಸಂಕೀರ್ಣಗಳ ಯೋಜನೆ.
ಕೇಂದ್ರ ಸರ್ಕಾರವು ವಲಸೆ ಕಾರ್ಮಿಕರು ಮತ್ತು ನಗರಗಳ ಬಡವರಿಗೆ ಕೈಗೆಟುಕುವ ಬಾಡಿಗೆಗೆ ಮನೆಗಳನ್ನು ಒದಗಿಸುವ ಯೋಜನೆಯನ್ನು ಪ್ರಾರಂಭಿಸುತ್ತದೆ. ಕೈಗೆಟುಕುವ ಬಾಡಿಗೆ ವಸತಿ ಸಂಕೀರ್ಣಗಳು ವಲಸೆ ಕಾರ್ಮಿಕರು, ನಗರಗಳ ಬಡವರು ಮತ್ತು ವಿದ್ಯಾರ್ಥಿಗಳಿಗೆ ಸಾಮಾಜಿಕ ಭದ್ರತೆ ಮತ್ತು ಗುಣಮಟ್ಟದ ಜೀವನವನ್ನು ಒದಗಿಸುತ್ತವೆ. ನಗರಗಳಲ್ಲಿನ ಸರ್ಕಾರಿ ಅನುದಾನಿತ ಮನೆಗಳನ್ನು ಪಿಪಿಪಿ ಮೋಡ್ ಅಡಿಯಲ್ಲಿ ರಿಯಾಯಿತಿಯ ಮೂಲಕ ಕೈಗೆಟುಕುವ ಬಾಡಿಗೆ ವಸತಿ ಸಂಕೀರ್ಣಗಳಾಗಿ (ಎಆರ್ಎಚ್ಸಿ) ಪರಿವರ್ತಿಸಲಾಗುವುದು. ಉತ್ಪಾದನಾ ಘಟಕಗಳು, ಕೈಗಾರಿಕೆಗಳು, ಸಂಸ್ಥೆಗಳು, ಸಂಘಗಳು ತಮ್ಮ ಖಾಸಗಿ ಭೂಮಿಯಲ್ಲಿ ಕೈಗೆಟುಕುವ ಬಾಡಿಗೆ ವಸತಿ ಸಂಕೀರ್ಣಗಳನ್ನು (ಎಆರ್ಎಚ್ಸಿ) ಅಭಿವೃದ್ಧಿಪಡಿಸಿ, ನಿರ್ವಹಿಸುತ್ತವೆ. ಅದೇ ರೀತಿ ರಾಜ್ಯ ಸರ್ಕಾರಿ ಸಂಸ್ಥೆಗಳು / ಕೇಂದ್ರ ಸರ್ಕಾರಿ ಸಂಸ್ಥೆಗಳು ಇದೇ ಮಾದರಿಯಲ್ಲಿ ಕೈಗೆಟುಕುವ ಬಾಡಿಗೆ ವಸತಿ ಸಂಕೀರ್ಣಗಳನ್ನು (ಎಆರ್ಎಚ್ಸಿ) ಅಭಿವೃದ್ಧಿಪಡಿಸುತ್ತವೆ ಮತ್ತು ನಿರ್ವಹಿಸುತ್ತವೆ. ಯೋಜನೆಯ ಸ್ಪಷ್ಟ ವಿವರಗಳನ್ನು ಸಚಿವಾಲಯ / ಇಲಾಖೆ ಬಿಡುಗಡೆ ಮಾಡುತ್ತದೆ.
4. ಶಿಶು ಮುದ್ರಾ ಸಾಲಗಾರರಿಗೆ 12 ತಿಂಗಳವರೆಗೆ ಶೇ 2 ಬಡ್ಡಿ ಸಹಾಯಧನ - 1,500 ಕೋಟಿ ರೂ. ಪರಿಹಾರ
50,000 ರೂ.ಗಿಂತ ಕಡಿಮೆ ಸಾಲ ಹೊಂದಿರುವ, ಪ್ರಾಮಾಣಿಕವಾಗಿ ಮರು ಪಾವತಿ ಮಾಡುತ್ತಿರುವ ಮುದ್ರಾ ಶಿಶು ಸಾಲಗಾರರಿಗೆ 12 ತಿಂಗಳ ಅವಧಿಗೆ ಶೇ. 2 ಬಡ್ಡಿ ಸಹಾಯಧನವನ್ನು ಭಾರತ ಸರ್ಕಾರ ಒದಗಿಸುತ್ತದೆ. ಮುದ್ರಾ ಶಿಶು ಸಾಲಗಳ ಪ್ರಸ್ತುತ ಬಂಡವಾಳವು ಸುಮಾರು 1.62 ಲಕ್ಷ ಕೋಟಿ ರೂ. ಇದೆ. ಇದು ಶಿಶು ಮುದ್ರಾ ಸಾಲಗಾರನಿಗೆ ಸುಮಾರು 1,500 ಕೋಟಿ ರೂ. ಪರಿಹಾರ ಒದಗಿಸುತ್ತದೆ.
5. ಬೀದಿ ಬದಿ ವ್ಯಾಪಾರಿಗಳಿಗೆ 5,000 ಕೋಟಿ ರೂ. ಸಾಲ ಸೌಲಭ್ಯ
ಸದ್ಯದ ಪರಿಸ್ಥಿತಿಯಿಂದಾಗಿ ಹೆಚ್ಚು ಸಂಕಷ್ಟ ಎದುರಿಸುತ್ತಿರುವ ಬೀದಿ ಬದಿ ವ್ಯಾಪಾರಿಗಳು ತಮ್ಮ ವ್ಯವಹಾರಗಳನ್ನು ಪುನರಾರಂಭಿಸಲು ಅನುವು ಮಾಡಿಕೊಡಲು ಅವರು ಸುಲಭವಾಗಿ ಸಾಲ ಪಡೆಯಲು ಸಾಧ್ಯವಾಗುವಂತೆ ಒಂದು ತಿಂಗಳಲ್ಲಿ ವಿಶೇಷ ಯೋಜನೆಯನ್ನು ಪ್ರಾರಂಭಿಸಲಾಗುವುದು,. ಈ ಯೋಜನೆಯಡಿ, ಆರಂಭಿಕ ಮೂಲ ಬಂಡವಾಳಕ್ಕೆ ಪ್ರತಿ ಉದ್ಯಮಕ್ಕೆ 10,000 ರೂ. ಬ್ಯಾಂಕ್ ಸಾಲ ನೀಡಲಾಗುವುದು. ಈ ಯೋಜನೆಯು ನಗರ ಮತ್ತು ಪಕ್ಕದ ನಗರ ಪ್ರದೇಶಗಳಲ್ಲಿ ವ್ಯಾಪಾರ ಮಾಡುವ ಗ್ರಾಮೀಣ ವ್ಯಾಪಾರಿಗಳನ್ನು ಒಳಗೊಂಡಿರುತ್ತದೆ. ಡಿಜಿಟಲ್ ಪಾವತಿಗಳ ಬಳಕೆ ಮತ್ತು ಸಮಯೋಚಿತ ಮರುಪಾವತಿ ಮಾಡುವವರನ್ನು ಹಣಕಾಸಿನ ಪ್ರತಿಫಲಗಳ ಮೂಲಕ ಪ್ರೋತ್ಸಾಹಿಸಲಾಗುತ್ತದೆ. ಈ ಯೋಜನೆಯಡಿ 50 ಲಕ್ಷ ಬೀದಿ ವ್ಯಾಪಾರಿಗಳಿಗೆ ಲಾಭವಾಗಲಿದ್ದು, 5,000 ಕೋಟಿ ರೂ.ಸಾಲ ಸೌಲಭ್ಯ ಇವರಿಗೆ ದೊರೆಯಲಿದೆ.
6. ಪಿಎಂಎವೈ (ನಗರ) ಅಡಿಯಲ್ಲಿ ಎಂಐಜಿಗೆ ಸಾಲಾಧಾರಿತ ಸಹಾಯಧನ ಯೋಜನೆಯನ್ನು ವಿಸ್ತರಿಸುವ ಮೂಲಕ ವಸತಿ ವಲಯ ಮತ್ತು ಮಧ್ಯಮ ಆದಾಯದ ಗುಂಪುಗಳಿಗೆ 70,000 ಕೋಟಿ ರೂ. ಪ್ರೋತ್ಸಾಹ
ಮಧ್ಯಮ ಆದಾಯದ ವರ್ಗದ (ವಾರ್ಷಿಕ ಆದಾಯ 6 ರಿಂದ 18 ಲಕ್ಷ ರೂ.) ಸಾಲಾಧಾರಿತ ಸಹಾಯಧನ ಯೋಜನೆಯನ್ನು ಮಾರ್ಚ್ 2021 ರವರೆಗೆ ವಿಸ್ತರಿಸಲಾಗುವುದು. ಇದು 2020-21ರ ಅವಧಿಯಲ್ಲಿ 2.5 ಲಕ್ಷ ಮಧ್ಯಮ ಆದಾಯದ ಕುಟುಂಬಗಳಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ವಸತಿ ವಲಯದಲ್ಲಿ 70,000 ಕೋಟಿ ರೂ.ಗಳ ಹೂಡಿಕೆಗೆ ಕಾರಣವಾಗುತ್ತದೆ. ವಸತಿ ಕ್ಷೇತ್ರಕ್ಕೆ ಉತ್ತೇಜನ ನೀಡುವ ಮೂಲಕ ಗಮನಾರ್ಹವಾದ ಉದ್ಯೋಗ ಸೃಷ್ಟಿಸುತ್ತದೆ ಮತ್ತು ಉಕ್ಕು, ಸಿಮೆಂಟ್, ಸಾರಿಗೆ ಮತ್ತು ಇತರ ನಿರ್ಮಾಣ ಸಾಮಗ್ರಿಗಳ ಬೇಡಿಕೆಯನ್ನು ಉತ್ತೇಜಿಸುತ್ತದೆ.
7. ಉದ್ಯೋಗ ಸೃಷ್ಟಿಗೆ 6,000 ಕೋಟಿ ರೂ. ಕಾಂಪಾ ಹಣದ ಬಳಕೆ
ನಗರ ಪ್ರದೇಶಗಳಲ್ಲೂ ಸೇರಿದಂತೆ ಅರಣ್ಯೀಕರಣ ಸಸಿ ನೆಡುವಿಕೆ, ಕೃತಕ ಪುನರುತ್ಪಾದನೆ, ನೆರವಿನ ನೈಸರ್ಗಿಕ ಪುನರುತ್ಪಾದನೆ, ಅರಣ್ಯ ನಿರ್ವಹಣೆ, ಮಣ್ಣು ಮತ್ತು ತೇವಾಂಶ ಸಂರಕ್ಷಣಾ ಕಾರ್ಯಗಳು, ಅರಣ್ಯ ಸಂರಕ್ಷಣೆ, ಅರಣ್ಯ ಸಂರಕ್ಷಣಾ ಕಾರ್ಯಗಳು ಮತ್ತು ವನ್ಯಜೀವಿ ಸಂಬಂಧಿತ ಮೂಲಸೌಕರ್ಯ ಅಭಿವೃದ್ಧಿ, ವನ್ಯಜೀವಿ ಸಂರಕ್ಷಣೆ ಮತ್ತು ನಿರ್ವಹಣೆ ಇತ್ಯಾದಿಗಳಲ್ಲಿ ಅರಣ್ಯೀಕರಣ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರದ (ಕಾಂಪಾ) 6000 ಕೋಟಿ ರೂ.ಗಳನ್ನು ಬಳಕೆ ಮಾಡಲಾಗುವುದು. ಈ ಯೋಜನೆಗಳಿಗೆ ಭಾರತ ಸರ್ಕಾರವು ತಕ್ಷಣ ಅನುಮೋದನೆ ನೀಡುತ್ತದೆ. ಇದು ನಗರ, ಪಟ್ಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಬುಡಕಟ್ಟು ಜನಾಂಗದವರಿಗೆ (ಆದಿವಾಸಿಗಳು) ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.
8. ನಬಾರ್ಡ್ ಮೂಲಕ ರೈತರಿಗೆ 30,000 ಕೋಟಿ ರೂ. ಹೆಚ್ಚುವರಿ ತುರ್ತು ಮೂಲ ಬಂಡವಾಳ
ಗ್ರಾಮೀಣ ಸಹಕಾರಿ ಬ್ಯಾಂಕುಗಳು ಮತ್ತು ಆರ್ಆರ್ಬಿಗಳ ಬೆಳೆ ಸಾಲದ ಅಗತ್ಯವನ್ನು ಪೂರೈಸಲು ನಬಾರ್ಡ್ 30,000 ಕೋಟಿ ರೂ.ಗಳ ಹೆಚ್ಚುವರಿ ಮರು ಹಣಕಾಸು ಬೆಂಬಲವನ್ನು ನೀಡಲಿದೆ. ಇದು 90,000 ಕೋಟಿ ರೂ.ಗಿಂತ ಹೆಚ್ಚಿನದಾಗಿದೆ ಮತ್ತು ಇದನ್ನು ಸಾಮಾನ್ಯ ಕೋರ್ಸ್‌ನಲ್ಲಿ ಈ ವಲಯಕ್ಕೆ ನಬಾರ್ಡ್ ಒದಗಿಸುತ್ತದೆ. ಇದು ಸುಮಾರು 3 ಕೋಟಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪ್ರಯೋಜನವನ್ನು ನೀಡುತ್ತದೆ, ಇದು ಅವರ ಹಿಂಗಾರಿನ ಸುಗ್ಗಿಯ ಮತ್ತು ಪ್ರಸ್ತುತ ಮುಂಗಾರಿನ ಅವಶ್ಯಕತೆಗಳನ್ನು ಪೂರೈಸುತ್ತದೆ.
9. ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ 2.5 ಕೋಟಿ ರೈತರಿಗೆ 2 ಲಕ್ಷ ಕೋಟಿ ರೂ ಸಾಲ
ಕಿಸಾನ್ ಕ್ರೆಡಿಟ್ ಕಾರ್ಡ್ಗಳ ಮೂಲಕ ಪಿಎಂ-ಕಿಸಾನ್ ಫಲಾನುಭವಿಗಳಿಗೆ ರಿಯಾಯಿತಿ ಸಾಲವನ್ನು ನೀಡುವ ವಿಶೇಷ ಯೋಜನೆ. ಮೀನುಗಾರರು ಮತ್ತು ಪಶು ಸಂಗೋಪನೆ ಕೃಷಿಕರನ್ನು ಸಹ ಈ ಯೋಜನೆಯಲ್ಲಿ ಸೇರಿಸಲಾಗುವುದು. ಇದು ಕೃಷಿ ಕ್ಷೇತ್ರದಲ್ಲಿ ಹೆಚ್ಚುವರಿ 2 ಲಕ್ಷ ಕೋಟಿ ರೂ. ಗಳ ಹಣದ ಹರಿವನ್ನು ಹೆಚ್ಚಿಸಲಿದ್ದು, 2.5 ಕೋಟಿ ರೈತರು ಇದರ ಪ್ರಯೋಜನ ಪಡೆಯಲಿದ್ದಾರೆ.
***
(Release ID: 1623930)
Visitor Counter : 1287
Read this release in:
Malayalam
,
English
,
Urdu
,
Marathi
,
Hindi
,
Bengali
,
Assamese
,
Punjabi
,
Gujarati
,
Odia
,
Tamil
,
Telugu