ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಆರ್ಥಿಕತೆ ಪುನಶ್ಚೇತನಕ್ಕೆ ಆದ್ಯತೆ ನೀಡಿ, ರಾಷ್ಟ್ರೀಯ ತಂತ್ರಜ್ಞಾನ ದಿನ ಆಚರಣೆ

Posted On: 10 MAY 2020 4:12PM by PIB Bengaluru

ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಆರ್ಥಿಕತೆ ಪುನಶ್ಚೇತನಕ್ಕೆ ಆದ್ಯತೆ ನೀಡಿ, ರಾಷ್ಟ್ರೀಯ ತಂತ್ರಜ್ಞಾನ ದಿನ ಆಚರಣೆ

ಸಮಾವೇಶದಲ್ಲಿ ಒಗ್ಗೂಡಲಿರುವ ವಿಜ್ಞಾನಿಗಳು, ತಂತ್ರಜ್ಞರು, ಸರ್ಕಾರಿ ಅಧಿಕಾರಿಗಳು, ರಾಯಭಾರಿಗಳು, ಡಬ್ಲ್ಯೂಎಚ್ಒ ಅಧಿಕಾರಿಗಳು ಹಾಗೂ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕೈಗಾರಿಕೆಗಳ ಗಣ್ಯರು, ಸಂಶೋಧನಾ ಸಂಸ್ಥೆಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳು

 

2020 ಮೇ 11 ಸೋಮವಾರದಂದು ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಆಚರಿಸಲು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ(ಡಿಎಸ್ ಟಿ) ಅಡಿ ಬರುವ ತಂತ್ರಜ್ಞಾನ ಅಭಿವೃದ್ಧಿ ಮಂಡಳಿ(ಟಿಡಿಬಿ), ಭಾರತೀಯ ಕೈಗಾರಿಕಾ ಒಕ್ಕೂಟ(ಸಿಐಐ) ಸಹಯೋಗದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಆರ್ಥಿಕ ಪುನಶ್ಚೇತನ ಹಾಗೂ ಸಂಶೋಧನಾ ಪರಿವರ್ತನೆಗಳು’ -ರಿಸ್ಟಾರ್ಟ್ ಹೆಸರಿನ ಉನ್ನತಮಟ್ಟದ ಡಿಜಿಟಲ್ ಸಮಾವೇಶವನ್ನು ಆಯೋಜಿಸಿದೆ.

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಭೂವಿಜ್ಞಾನಗಳ ಸಚಿವ ಡಾ. ಹರ್ಷವರ್ಧನ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಮತ್ತು ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಉದ್ದೇಶಿಸಿ ಮಾತನಾಡುವರು. ಕಾರ್ಯಕ್ರಮದಲ್ಲಿ ವಿಶೇಷ ಭಾಷಣಕಾರರಾಗಿ ನೀತಿ ಆಯೋಗದ ವಿಜ್ಞಾನ ಸದಸ್ಯ ವಿ.ಕೆ. ಸಾರಸ್ವತ್; ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರಾದ ಪ್ರೊ|| ಕೆ. ವಿಜಯ್ ರಾಘವನ್; ಡಬ್ಲ್ಯೂಎಚ್ಒ ಮುಖ್ಯ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್; ಡಿಎಸ್ ಟಿ ಕಾರ್ಯದರ್ಶಿ ಪ್ರೊ|| ಅಶುತೋಷ್ ಶರ್ಮಾ ಮತ್ತಿತರರು ಭಾಗವಹಿಸಲಿದ್ದು, ಅವರುಗಳಲ್ಲದೆ, ಟಿಡಿಬಿ, ಡಿಎಸ್ ಟಿ ಮತ್ತು ಸಿಐಐನ ಇತರ ಅಧಿಕಾರಿಗಳು ಪಾಲ್ಗೊಳ್ಳುವರು. ಜೈವಿಕ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಡಾ. ರೇಣು ಸ್ವರೂಪ್, ಸಿಎಸ್ಐಆರ್ ವ್ಯವಸ್ಥಾಪಕ ನಿರ್ದೇಶಕ, ಶೇಖರ್ ಸಿ. ಮಾಂಡೆ, ಭಾರತದಲ್ಲಿನ ಇಟಲಿಯ ರಾಯಭಾರಿ ಗೌರವಾನ್ವಿತ ಶ್ರೀ ವಿನ್ ಸೆನ್ಜೋ ಡಿ ಲುಕ ಅವರು, ನಾನಾ ಗೋಷ್ಠಿಗಳಲ್ಲಿ ವಿಶೇಷ ಭಾಷಣವನ್ನು ಮಾಡಲಿದ್ದಾರೆ.

ಕೋವಿಡ್-19 ಬಿಕ್ಕಟ್ಟಿನ ಸಮಯದಲ್ಲಿ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ತಂತ್ರಜ್ಞಾನ ಅತ್ಯಂತ ಮುಂಚೂಣಿಯಲ್ಲಿದೆ. ಇಡೀ ವಿಶ್ವ ಹೊಸ ಬಗೆಯ ಪರಿಸ್ಥಿತಿಗೆ ಹೊಂದಿಕೊಳ್ಳುತ್ತಿರುವಾಗಲೇ ಜಗತ್ತಿನಾದ್ಯಂತ ವಾಣಿಜ್ಯ ನಾಯಕರು, ಸ್ಥಿತಿ ಸ್ಥಾಪಕತ್ವಕ್ಕೆ ಸಹಕಾರಿಯಾಗುವ ತಂತ್ರಜ್ಞಾನವನ್ನು ಸದ್ಭಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಮತ್ತು ಸಂಕಷ್ಟಗಳಿಂದ ಹೊರಬಂದು ಮತ್ತೆ ಬಲಿಷ್ಠವಾಗುವ ನಿಟ್ಟಿನಲ್ಲಿ ಕಾರ್ಯತಂತ್ರಗಳ ಬಗ್ಗೆ ಆಲೋಚಿಸುತ್ತಿದ್ದಾರೆ.

ಸದ್ಯದ ಸನ್ನಿವೇಶದಲ್ಲಿ ಆರ್ಥಿಕ ಪುನಶ್ಚೇತನಕ್ಕೆ ಸಮಗ್ರ ಕ್ರಿಯಾ ಯೋಜನೆ ರೂಪಿಸುವುದಕ್ಕೆ ಸಕಾಲ ಎಂಬುದನ್ನು ಮನಗಂಡ ಟಿಡಿಬಿ, ರಾಷ್ಟ್ರೀಯ ತಂತ್ರಜ್ಞಾನ ದಿನದ ಆಚರಣೆಯಲ್ಲಿ ಅವುಗಳಿಗೆ ತಾಂತ್ರಿಕ ಪರಿಹಾರಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಮುಂದಾಗಿದೆ. ತಂತ್ರಜ್ಞಾನಗಳಲ್ಲಿ ವೈದ್ಯಕೀಯ ತಂತ್ರಜ್ಞಾನ, ಆಧುನಿಕ ತಂತ್ರಜ್ಞಾನ ಮತ್ತು ಕೋವಿಡ್ ನಂತರದ ಕಾಲದಲ್ಲಿ ಭಾರತವನ್ನು ಸಜ್ಜುಗೊಳಿಸುವ ಉತ್ಪಾದನಾ ವಲಯಗಳು ಸೇರಿವೆ.

ಸಮಾವೇಶದಲ್ಲಿ ವಿಜ್ಞಾನಿಗಳು, ತಂತ್ರಜ್ಞರು, ಸರ್ಕಾರಿ ಅಧಿಕಾರಿಗಳು, ರಾಯಭಾರಿಗಳು, ಡಬ್ಲ್ಯೂಎಚ್ಒ ಅಧಿಕಾರಿಗಳು ಹಾಗೂ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕೈಗಾರಿಕೆಗಳ ಗಣ್ಯರು, ಸಂಶೋಧನಾ ಸಂಸ್ಥೆಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳು ಒಂದೇ ವೇದಿಕೆಯಲ್ಲಿ ಸೇರಿ, ಜಾಗತಿಕ ಆರೋಗ್ಯ ಬಿಕ್ಕಟ್ಟನ್ನು ಎದುರಿಸುವಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರದ ಬಗ್ಗೆ ತಮ್ಮ ಒಳನೋಟಗಳನ್ನು ಹಂಚಿಕೊಳ್ಳಲಿದ್ದಾರೆ ಹಾಗೂ ಪರಿಹಾರಗಳನ್ನು ಕಂಡುಕೊಳ್ಳುವರು. ಇದು ಕೇವಲ ಪ್ರಸಕ್ತ ಸಾಂಕ್ರಾಮಿಕ ಎದುರಿಸಲು ಅಷ್ಟೇ ಅಲ್ಲದೆ, ಮುಂದಿನ ದಿನಗಳಲ್ಲಿ ಎದುರಾಗಲಿರುವ ಸವಾಲುಗಳಿಗೂ ನೆರವಾಗಲಿದೆ.

ಔಷಧ ಮತ್ತು ವೈದ್ಯಕೀಯ ತಂತ್ರಜ್ಞಾನಗಳು’, ‘ಮುಂದುವರಿದ ಮೆಟೀರಿಯಲ್ ಹೊಸ ತಂತ್ರಜ್ಞಾನದ ಆಯಾಮಗಳು’, ‘ಜಾಗತಿಕ ಅನ್ವೇಷಣೆ ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ಮುಂದುವರಿದ ಉತ್ಪಾದನಾ ತಂತ್ರಜ್ಞಾನಮತ್ತು ಜಾಗತಿಕ ಆರ್ಥಿಕ ನಾಯಕತ್ವಕ್ಕಾಗಿ ತಂತ್ರಜ್ಞಾನ ಮೈತ್ರಿ ವಿಷಯಗಳ ಕುರಿತ ತಾಂತ್ರಿಕ ಗೋಷ್ಠಿಗಳು ನಡೆಯಲಿವೆ.

ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಪರವಾಗಿ ದೇಶ ತಾಂತ್ರಿಕವಾಗಿ ಸಾಧಿಸಿರುವ ಹಿರಿಮೆ ಮತ್ತು ಆವಿಷ್ಕಾರಗಳ ಸಾಧನೆಗಳನ್ನು ಸ್ಮರಿಸಲು ಪ್ರತಿ ವರ್ಷ ಮೇ 11ರಂದು ರಾಷ್ಟ್ರೀಯ ತಂತ್ರಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ. ಮೇ 11 1998ರಂದು ಐತಿಹಾಸಿಕ ದಿನವಾಗಿದ್ದು, ಅಂದು ಭಾರತ ಪೋಖ್ರಾನ್ ನಲ್ಲಿ ಯಶಸ್ವಿಯಾಗಿ ಅಣು ಪರೀಕ್ಷೆಯನ್ನು ನಡೆಸುವ ಮೂಲಕ ತಾಂತ್ರಿಕವಾಗಿ ಅತ್ಯಂತ ಮಹತ್ವದ ಸಾಧನೆಗೈದಿತ್ತು. ಅಲ್ಲದೆ ಮೊದಲ ಸ್ವದೇಶಿ ವಿಮಾನ ಹನ್ಸ-3” ಅದೇ ದಿನ ಬೆಂಗಳೂರಿನಲ್ಲಿ ಹಾರಾಟ ನಡೆಸಿತ್ತು ಮತ್ತು ಅದೇ ದಿನ ಭಾರತ ತ್ರಿಶೂಲ್ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತ್ತು. ಹಾಗಾಗಿ 1999ರಿಂದ ಪ್ರತಿ ವರ್ಷ ಮೇ 11ರಂದು ರಾಷ್ಟ್ರೀಯ ತಂತ್ರಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ.

ತಂತ್ರಜ್ಞಾನ ದಿನ ಭಾರತದ ವೈಜ್ಞಾನಿಕ ಅನ್ವೇಷಣೆ, ತಾಂತ್ರಿಕ ಕ್ರಿಯಾಶೀಲತೆ ಮತ್ತು ಅನ್ವೇಷಣೆಗಳ ಸಂಕೇತವಾಗಿದೆ ಹಾಗೂ ಎಲ್ಲ ಅಭಿವೃದ್ಧಿಗಳನ್ನು ಒಗ್ಗೂಡಿಸಿ ಅವುಗಳನ್ನು ರಾಷ್ಟ್ರದ ಸಾಮಾಜಿಕ ಆರ್ಥಿಕ ಪ್ರಯೋಜನಕ್ಕೆ ಬಳಸಿಕೊಳ್ಳುವುದು ಮತ್ತು ಜಾಗತಿಕವಾಗಿ ಗುರುತಿಸಿ ಕೊಳ್ಳುವ ಉದ್ದೇಶವಿದೆ.

ಡಿಜಿಟಲ್ ಸಮಾವೇಶವಲ್ಲದೆ, ಟಿಡಿಬಿ ಬೆಂಬಲಿಸಿರುವ ಹಲವು ಕಂಪನಿಗಳ ತಂತ್ರಜ್ಞಾನಗಳ ಬಗ್ಗೆ ವರ್ಚ್ಯುಯಲ್ ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ಡಿಜಿಟಲ್ ಬಿ2ಬಿ ವೇದಿಕೆಗಳ ಮೂಲಕ ನಾನಾ ಸಂಸ್ಥೆಗಳು ಮತ್ತು ಕಂಪನಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲಿವೆ. ಜಗತ್ತಿನಾದ್ಯಂತ ಇರುವ ಜನರು ಸಮಾವೇಶದ ಮಳಿಗೆಗಳಿಗೆ ಭೇಟಿ ನೀಡಬಹುದಾಗಿದೆ.

ಸಮಾವೇಶದಲ್ಲಿ ಮತ್ತು ಪ್ರದರ್ಶನದಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವವರು ಲಿಂಕ್ :https://www.ciidigitalevents.in/SignUp.aspx?EventId=E000000003 ಬಳಸಿ, ಮೊದಲೇ ನೋಂದಣಿ ಮಾಡಿಕೊಳ್ಳಬಹುದಾಗಿದೆ.

***



(Release ID: 1622785) Visitor Counter : 1394