ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ

ಕೋವಿಡ್-19 ಸೋಂಕಿನಿಂದ ಬಳಲುತ್ತಿದ್ದ ಭಾರತದ ಲೋಕಪಾಲ ಸಂಸ್ಥೆಯ ನ್ಯಾಯಾಂಗ ಸದಸ್ಯ, ನ್ಯಾಯಮೂರ್ತಿ ಅಜಯ್ ಕುಮಾರ್ ತ್ರಿಪಾಠಿ ನಿಧನ

प्रविष्टि तिथि: 03 MAY 2020 5:04PM by PIB Bengaluru

ಕೋವಿಡ್-19 ಸೋಂಕಿನಿಂದ ಬಳಲುತ್ತಿದ್ದ ಭಾರತದ ಲೋಕಪಾಲ ಸಂಸ್ಥೆಯ ನ್ಯಾಯಾಂಗ ಸದಸ್ಯ, ನ್ಯಾಯಮೂರ್ತಿ ಅಜಯ್ ಕುಮಾರ್ ತ್ರಿಪಾಠಿ ನಿಧನ

 

ಭಾರತದ ಲೋಕಪಾಲ ಸಂಸ್ಥೆಯ ನ್ಯಾಯಾಂಗ ಸದಸ್ಯ, ನ್ಯಾಯಮೂರ್ತಿ ಅಜಯ್ ಕುಮಾರ್ ತ್ರಿಪಾಠಿ ಅವರು ನವದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ 2020 ಮೇ 2ರಂದು 8.45 ಸುಮಾರಿಗೆ ನಿಧನರಾದರು ಎಂದು ತಿಳಿಸಲು ವಿಷಾದಿಸುತ್ತೇವೆ. ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಅವರು 2020 ಏಪ್ರಿಲ್ 2ರಂದು ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ನಂತರ ಏಮ್ಸ್ ಗೆ ದಾಖಲಾಗಿದ್ದರು.

ದಿವಂಗತ ನ್ಯಾಯಮೂರ್ತಿ ಅಜಯ್ ಕುಮಾರ್ ತ್ರಿಪಾಠಿ ಅವರು 1957 ನವೆಂಬರ್ 12ರಂದು ಜನಿಸಿದ್ದರು. ಅವರು ಶ್ರೀ ರಾಮ್ ವಾಣಿಜ್ಯ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಪದವಿಯನ್ನು(ಹಾನರ್ಸ್) ಪಡೆದಿದ್ದರು ಮತ್ತು ಆನಂತರ ದೆಹಲಿ ವಿಶ್ವವಿದ್ಯಾಲಯದ ಕ್ಯಾಂಪಸ್ ಲಾ ಸೆಂಟರ್ ನಲ್ಲಿ ಕಾನೂನು ಪದವಿ ಅಧ್ಯಯನ ಮಾಡಿದ್ದರು. ಅವರು ಪಾಟ್ನಾ ಹೈಕೋರ್ಟ್ ನಲ್ಲಿ ವಕೀಲಿಕೆ ಆರಂಭಿಸಿದ್ದರು ಮತ್ತು 2006 ಅಕ್ಟೋಬರ್ 9ರಂದು ಪಾಟ್ನಾ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಬಡ್ತಿ ಹೊಂದಿದ್ದರು ಮತ್ತು 2007 ನವೆಂಬರ್ 21ರಂದು ಅವರು ಹೈಕೋರ್ಟ್ ಕಾಯಂ ನ್ಯಾಯಮೂರ್ತಿಗಳಾಗಿ ಪ್ರಮಾಣವಚನ ಸ್ವೀಕರಿಸಿದ್ದರು. 2018 ಜುಲೈ 7ರಂದು ಛತ್ತೀಸ್ ಗಢ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ಅಧಿಕಾರ ಸ್ವೀಕರಿಸಿದ್ದರು.

ನ್ಯಾಯಮೂರ್ತಿ ತ್ರಿಪಾಠಿ ಅವರು, 2019 ಮಾರ್ಚ್ 27ರಂದು ಭಾರತೀಯ ಲೋಕಪಾಲ ಸಂಸ್ಥೆಯ ನ್ಯಾಯಾಂಗ ಸದಸ್ಯರಾಗಿ ಅಧಿಕಾರ ಸ್ವೀಕರಿಸಿದ್ದರು. ಅವರು ತಮ್ಮ ವಿನೂತನ ಚಿಂತನೆಗಳು ಮತ್ತು ಅನುಭವದ ಮೂಲಕ ದೇಶದಲ್ಲಿ ಲೋಕಪಾಲ ಸಂಸ್ಥೆ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಅವರ ನಿಧನದಿಂದ ಭಾರತೀಯ ಲೋಕಪಾಲ ಸಂಸ್ಥೆಗೆ ಶೋಕ ಉಂಟಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಮತ್ತು ಅಪಾರ ನಷ್ಟವನ್ನು ಎದುರಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ದೇವರು ಕರುಣಿಸಲಿ.

***


(रिलीज़ आईडी: 1620721) आगंतुक पटल : 300
इस विज्ञप्ति को इन भाषाओं में पढ़ें: Punjabi , English , Urdu , हिन्दी , Marathi , Manipuri , Bengali , Odia , Tamil , Telugu