ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಿ ಮತ್ತು ಇಂಡೋನೇಷಿಯಾ ಅಧ್ಯಕ್ಷರ ನಡುವೆ ದೂರವಾಣಿ ಮಾತುಕತೆ

Posted On: 28 APR 2020 3:27PM by PIB Bengaluru

ಪ್ರಧಾನಿ ಮತ್ತು ಇಂಡೋನೇಷಿಯಾ ಅಧ್ಯಕ್ಷರ ನಡುವೆ ದೂರವಾಣಿ ಮಾತುಕತೆ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಇಂಡೋನೇಷಿಯಾದ ಅಧ್ಯಕ್ಷ ಘನತೆವೆತ್ತ ಜೋಕೋ ವಿಡೊಡೋ ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಿದರು.

ಇಬ್ಬರೂ ನಾಯಕರು ತಮ್ಮ ವಲಯದಲ್ಲಿ ಮತ್ತು ವಿಶ್ವದಲ್ಲಿ ಕೋವಿಡ್ -19 ಸಾಂಕ್ರಾಮಿಕದ ಹರಡುವಿಕೆ ಕುರಿತಂತೆ ತಮ್ಮ ಅಭಿಪ್ರಾಯ ಹಂಚಿಕೊಂಡರು. 

ಇಂಡೋನೇಷಿಯಾಕ್ಕೆ ಔಷಧ ಸಾಮಗ್ರಿಗಳ ಪೂರೈಕೆಗಾಗಿ  ಭಾರತ ಸರ್ಕಾರ ಮಾಡಿಕೊಟ್ಟ ಅನುಕೂಲಕ್ಕಾಗಿ ಇಂಡೋನೇಷಿಯಾದ ಅಧ್ಯಕ್ಷರು ಮೆಚ್ಚುಗೆ ವ್ಯಕ್ತಪಡಿಸಿದರು. ಎರಡೂ ದೇಶಗಳ ನಡುವೆ ವೈದ್ಯಕೀಯ ಉತ್ಪನ್ನ ಅಥವಾ ಇತರ ಸಾಮಗ್ರಿಗಳ ಪೂರೈಕೆಯಲ್ಲಿ ಯಾವುದೇ ಅಡಚಣೆಯಾಗದಂತೆ ನೋಡಿಕೊಳ್ಳುವ ಭರವಸೆಯನ್ನು ಪ್ರಧಾನಿ ನೀಡಿದರು.

ಇಬ್ಬರೂ ನಾಯಕರು ಪರಸ್ಪರರ ದೇಶದಲ್ಲಿರುವ ತಮ್ಮ ಪ್ರಜೆಗಳಿಗೆ ಸಂಬಂಧಿಸಿದ ವಿಷಯಗಳ ಕುರಿತಂತೆಯೂ ಚರ್ಚಿಸಿದರು ಮತ್ತು ಈ ನಿಟ್ಟಿನಲ್ಲಿ ಎಲ್ಲ ಸಾಧ್ಯ ಸೌಲಭ್ಯ ಕಲ್ಪಿಸಲು ತಮ್ಮ ತಂಡಗಳು ನಿರಂತರ ಸಂಪರ್ಕದಲ್ಲಿರಲು ಸಮ್ಮತಿಸಿದರು.

ಇಂಡೋನೇಷಿಯಾ, ಭಾರತದ ವಿಸ್ತರಿತ ನೆರೆರಾಷ್ಟ್ರಗಳಲ್ಲಿ ಮಹತ್ವದ ಸಾಗರ ಪಾಲುದಾರ ರಾಷ್ಟ್ರ  ಎಂಬ ಅಂಶವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯ, ಸಾಂಕ್ರಾಮಿಕದ ಪರಿಣಾಮಗಳ ವಿರುದ್ಧ ಹೋರಾಡಲು ನೆರವಾಗುತ್ತದೆ ಎಂದು ಹೇಳಿದರು.

ಇಂಡೋನೇಷಿಯಾದ ಸ್ನೇಹಪರ ಜನತೆಗೆ ಮತ್ತು ಅಧ್ಯಕ್ಷ ಘನತೆವೆತ್ತ ವಿಡೊಡೋ ಅವರಿಗೆ ರಂಜಾನ್ ಪವಿತ್ರ ಮಾಸದ ಶುಭಾಶಯಗಳನ್ನು ಪ್ರಧಾನಿ ತಿಳಿಸಿದರು.

***



(Release ID: 1618981) Visitor Counter : 182