ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಲಾಕ್‌ಡೌನ್‌ ಸಂದರ್ಭದಲ್ಲಿ ಎಫ್‌ಸಿಐ ಈಶಾನ್ಯ ವಿಭಾಗದ ಕಾರ್ಯಾಚರಣೆ

Posted On: 19 APR 2020 8:56PM by PIB Bengaluru

ಲಾಕ್ಡೌನ್ಸಂದರ್ಭದಲ್ಲಿ ಎಫ್ಸಿಐ ಈಶಾನ್ಯ ವಿಭಾಗದ ಕಾರ್ಯಾಚರಣೆ

25 ದಿನಗಳ ಲಾಕ್ಡೌನ್ಸಂದರ್ಭದಲ್ಲಿ 158 ರೈಲು ಲೋಡಗಳಲ್ಲಿ ಸುಮಾರು 4,42,000 ಮೆಟ್ರಿಕ್ಟನ್ಆಹಾರ ಧಾನ್ಯಗಳನ್ನು ಭಾರತೀಯ ಆಹಾರ ನಿಗಮ (ಎಫ್ಸಿಐ) ಈಶಾನ್ಯ ರಾಜ್ಯಗಳಿಗೆ ರವಾನಿಸಲಾಯಿತು. ಮೊದಲು ಪ್ರತಿ ತಿಂಗಳು ಸರಾಸರಿ 80 ರೈಲು ಲೋಡ್ಗಳಷ್ಟು ಕಳುಹಿಸಲಾಗಿತ್ತು. ಆದರೆ, ಬಾರಿ ದುಪ್ಪಟ್ಟು ಕಳುಹಿಸಲಾಯಿತು

ರೈಲಿನ ಜತೆ ಅಪಾರ ಸಂಖ್ಯೆಯಲ್ಲಿ ವಾಹನಗಳ ಮೂಲಕ ಈಶಾನ್ಯ ರಾಜ್ಯಗಳ ಮೂಲೆ ಮೂಲೆಗೂ ಆಹಾರ ಧಾನ್ಯಗಳನ್ನು ತಲುಪಿಸಲು ಕ್ರಮ
 

2020ರ ಮಾರ್ಚ್‌ 24ರಂದು ಲಾಕ್‌ಡೌನ್‌ ಘೋಷಣೆಯಾದ ಬಳಿಕ ಈಶಾನ್ಯ ರಾಜ್ಯಗಳ ಬಗ್ಗೆ ಎಫ್‌ಸಿಐ ಗಮನಹರಿಸಿತು. ಬೆಟ್ಟ ಗುಡ್ಡಗಳಿಂದ ಆವೃತವಾಗಿರುವ ಈ ಪ್ರದೇಶದಲ್ಲಿ ಸಂಚಾರ ಕಠಿಣ. ಜತೆಗೆ ಅತಿ ಕಡಿಮೆ ರೈಲು ಸಂಪರ್ಕವಿದೆ. ಸಂಚಾರ ವ್ಯವಸ್ಥೆ ಕಲ್ಪಿಸುವುದು ಸವಾಲಿನಿಂದ ಕೂಡಿದೆ. ಈ ಪ್ರದೇಶ ಸಾರ್ವಜನಿಕ ವಿತರಣೆ ವ್ಯವಸ್ಥೆ (ಪಿಡಿಎಸ್‌) ಮೇಲೆ ಅಪಾರ ಅವಲಂಬನೆಯಾಗಿರುವುದರಿಂದ ಅನಿಯಮಿತವಾಗಿ ಅಕ್ಕಿ ಮತ್ತು ಗೋಧಿಯನ್ನು ಕಳುಹಿಸಲು ಆದ್ಯತೆ ನೀಡಲಾಯಿತು.

ಆದ್ಯತೆಯ ಮೇರೆಗೆ, 25 ದಿನಗಳ ಲಾಕ್‌ಡೌನ್‌ ಸಂದರ್ಭದಲ್ಲಿ 158 ರೈಲು ಲೋಡಗಳಲ್ಲಿ ಸುಮಾರು 4,42,000 ಮೆಟ್ರಿಕ್‌ ಟನ್‌ ಆಹಾರ ಧಾನ್ಯಗಳನ್ನು (22,000 ಮೆಟ್ರಿಕ್‌ ಟನ್‌ ಗೋಧಿ ಮತ್ತು 4,20,000 ಮೆಟ್ರಿಕ್‌ ಟನ್‌ ಅಕ್ಕಿ) ಭಾರತೀಯ ಆಹಾರ ನಿಗಮ (ಎಫ್‌ಸಿಐ) ಈಶಾನ್ಯ ರಾಜ್ಯಗಳಿಗೆ ರವಾನಿಸಲಾಯಿತು. ಈ ಮೊದಲು ಪ್ರತಿ ತಿಂಗಳು ಸರಾಸರಿ 80 ರೈಲು ಲೋಡ್‌ಗಳಷ್ಟು ಕಳುಹಿಸಲಾಗಿತ್ತು. ಆದರೆ, ಈ ಬಾರಿ ದುಪ್ಪಟ್ಟು ಕಳುಹಿಸಲಾಯಿತು. ಆದರೆ, ಈಶಾನ್ಯ ರಾಜ್ಯದ ಎಲ್ಲ ಪ್ರದೇಶಗಳಿಗೂ ರೈಲು ಸಂಚಾರದ ವ್ಯವಸ್ಥೆ ಇಲ್ಲ. ಹೀಗಾಗಿ, ಸಾಗಾಣಿಕೆ ಸವಾಲಿನಿಂದ ಕೂಡಿತ್ತು. 7 ಈಶಾನ್ಯ ರಾಜ್ಯಗಳಲ್ಲಿರುವ ಎಫ್‌ಸಿಐನ 86 ಡಿಪೋಗಳಲ್ಲಿ 38ಕ್ಕೆ ಮಾತ್ರ ರೈಲಿನ ಮೂಲಕ ಆಹಾರ ಧಾನ್ಯಗಳನ್ನು ಸಾಗಾಣಿಕೆ ಮಾಡಲಾಗುತ್ತದೆ. ಮೇಘಾಲಯಕ್ಕೆ ಸಂಪೂರ್ಣವಾಗಿ ರಸ್ತೆ ಮೇಲೆ ಮಾತ್ರ ಅವಲಂಬನೆಯಾಗಿದೆ. ಅರುಣಾಚಲ ಪ್ರದೇಶದಲ್ಲಿರುವ 13 ಡಿಪೊಗಳಲ್ಲಿ ಕೇವಲ 2ರಲ್ಲಿ ಮಾತ್ರ ರೈಲಿನ ಮೂಲಕ ಸಾಗಿಸಲಾಗುತ್ತಿದೆ. ಮಣಿಪುರಕ್ಕೆ ನಾಗಾಲ್ಯಾಂಡ್‌ನ ದಿಮಾಪುರವರೆಗೆ ರೈಲಿನ ಮೂಲಕ ಸಾಗಿಸಿ ಬಳಿಕ ರಸ್ತೆ ಮೂಲಕ ಸಾಗಿಸಲಾಗುತ್ತಿದೆ. ಈ ಮೂಲಕ ಈಶಾನ್ಯ ಭಾರತಕ್ಕೆ ಸಕಾಲಕ್ಕೆ ಆಹಾರ ಧಾನ್ಯಗಳನ್ನು ತಲುಪಿಸಲಾಗುತ್ತಿದೆ.

ಅಸ್ಸಾಂನಲ್ಲಿ ಲಾರಿಗಳಲ್ಲಿ ಸರಕು ಸಾಗಾಣಿಕೆ ಮಾಡಲು ಆದ್ಯತೆ ನೀಡಲಾಗುತ್ತದೆ. 25 ದಿನಗಳ ಲಾಕ್‌ಡೌನ್‌ ಸಂದರ್ಭದಲ್ಲಿ 33,000 ಮೆಟ್ರಿಕ್‌ ಟನ್‌ ಆಹಾರ ಧಾನ್ಯಗಳನ್ನು ಮೇಘಾಲಯಕ್ಕೆ ಅಸ್ಸಾಂನಿಂದ ರಸ್ತೆ ಮೂಲಕ ಸಾಗಿಸಲಾಯಿತು. ಇದು ಪ್ರತಿ ತಿಂಗಳು ಕಳುಹಿಸುತ್ತಿದ್ದ ಸರಾಸರಿ 14,000 ಮೆಟ್ರಿಕ್‌ ಟನ್‌ಗಿಂತ 2.5 ಪಟ್ಟು ಹೆಚ್ಚು. ಇದೇ ರೀತಿ 11,000 ಮೆಟ್ರಿಕ್‌ ಟನ್‌ ಆಹಾರ ಧಾನ್ಯಗಳನ್ನು ಅರುಣಾಚಲ ಪ್ರದೇಶಕ್ಕೆ ರಸ್ತೆ ಮೂಲಕ ಕಳುಹಿಸಲಾಯಿತು. ಇದು ಸಹ ಪ್ರತಿ ತಿಂಗಳು ಕಳುಹಿಸಲಾಗುತ್ತಿದ್ದ ಸರಾಸರಿ 7000 ಮೆಟ್ರಿಕ್‌ಗಿಂತಲೂ ಹೆಚ್ಚಾಗಿತ್ತು. 14,000 ಮೆಟ್ರಿಕ್‌ ಟನ್‌ ಆಹಾರ ಧಾನ್ಯಗಳನ್ನು ದಿಮಾಪುರದಿಂದ (ನಾಗಾಲ್ಯಾಂಡ್‌) ಮಣಿಪುರಕ್ಕೆ ರಸ್ತೆ ಮೂಲಕ ಕಳುಹಿಸಲಾಯಿತು. ಜತೆಗೆ, 8000 ಮೆಟ್ರಿಕ್‌ ಟನ್‌ ಆಹಾರ ಧಾನ್ಯಗಳನ್ನು ಜಿರಿಬಾಮ್‌ ರೈಲು ಜಂಕ್ಷನ್‌ನಿಂದ ಮಣಿಪುರದ ವಿವಿಧ ಸ್ಥಳಗಳಿಗೆ ರವಾನಿಸಲಾಯಿತು. ಲಾರಿಗಳ ಸಂಚಾರವು ಅತ್ಯಂತ ಕಠಿಣ ಸವಾಲಿನಿಂದ ಕೂಡಿತ್ತು.

ಬೆಟ್ಟಗುಡ್ಡಗಳ ಪ್ರದೇಶ ಇರುವುದರಿಂದ ಬಹುತೇಕ ಉಗ್ರಾಣಗಳು ಸಣ್ಣ ಗಾತ್ರದಲ್ಲಿವೆ. ಅಸ್ಸಾಂನಲ್ಲಿ ಮಾತ್ರ ಕೆಲವು ಡಿಪೋಗಳು ದೊಡ್ಡದಾಗಿವೆ. ಇದರಿಂದಾಗಿ, ಪಿಡಿಎಸ್‌ ವ್ಯವಸ್ಥೆಯನ್ನು ನಿರಂತರವಾಗಿ ಜಾರಿ ಇಡಲು ನಿಯಮಿತವಾಗಿ ಆಹಾರ ಧಾನ್ಯಗಳ ಸಾಗಾಣಿಕೆ ಮಾಡಬೇಕಾಗುತ್ತದೆ. ಈಶಾನ್ಯ ರಾಜ್ಯಗಳಿಗೆ ಲಾರಿ ಸಂಚಾರದಲ್ಲಿ ಎದುರಾಗುವ ಸವಾಲುಗಳ ಜತೆಯಲ್ಲಿ ಲಾಕ್‌ಡೌನ್‌ನಿಂದಾಗಿ ರಾಜ್ಯಗಳ ಗಡಿಯಲ್ಲಿ ವಿಧಿಸಿರುವ ನಿರ್ಬಂಧಗಳನ್ನು ಸಹ ಎಫ್‌ಸಿಐ ಪಾಲಿಸಬೇಕಾಯಿತು.

ಆದರೆ, ಎಲ್ಲ ಕಷ್ಟಗಳ ನಡುವೆಯೂ ನಿರಂತರವಾಗಿ ಆಹಾರ ಧಾನ್ಯಗಳನ್ನು ಎಲ್ಲ ಈಶಾನ್ಯ ರಾಜ್ಯಗಳಿಗೆ ಪೂರೈಸುವಲ್ಲಿ ಎಫ್‌ಸಿಐ ಯಶಸ್ವಿಯಾಗಿದೆ. 25 ದಿನಗಳ ಲಾಕ್‌ಡೌನ್‌ ಸಂದರ್ಭದಲ್ಲಿ ಪ್ರಧಾನ ಮತ್ರಿ ಗರೀಬ್‌ ಕಲ್ಯಾಣ ಅನ್ನ ಯೋಜನಾ (ಪಿಎಂಜಿಕೆಎವೈ) ಸೇರಿದಂತೆ 3,51,000 ಮೆಟ್ರಿಕ್‌ ಟನ್‌ ಆಹಾರ ಧಾನ್ಯಗಳನ್ನು ಈ ಎಲ್ಲ ಈಶಾನ್ಯ ರಾಜ್ಯಗಳಿಗೆ ಪೂರೈಸಲಾಗಿದೆ. ರಾಜ್ಯವಾರು ವಿವರ ಈ ರೀತಿ ಇದೆ.

ಅಸ್ಸಾಂ 2,16,000 ಮೆಟ್ರಿಕ್‌ ಟನ್‌

ಅರುಣಚಾಲ ಪ್ರದೇಶ 17,000 ಮೆಟ್ರಿಕ್‌ ಟನ್‌

ಮಣಿಪುರ 18,000 ಮೆಟ್ರಿಕ್‌ ಟನ್‌

ಮಿಜೋರಾಂ 14,000 ಮೆಟ್ರಿಕ್‌ ಟನ್‌

ನಾಗಾಲ್ಯಾಂಡ್‌ 14,000 ಮೆಟ್ರಿಕ್‌ ಟನ್‌

ತ್ರಿಪುರಾ 33,000 ಮೆಟ್ರಿಕ್‌ ಟನ್‌

ಎನ್‌ಎಫ್‌ಎಸ್‌ಎ ಮತ್ತು ಪಿಎಂಜಿಕೆಎವೈ ಅಡಿಯಲ್ಲಿ ಆಹಾರ ಧಾನ್ಯಗಳನ್ನು ಪೂರೈಸುವ ಜತೆಗೆ ರಾಜ್ಯಗಳಿಗೆ ಹೆಚ್ಚುವರಿಯಾಗಿ ಅಕ್ಕಿ ಮತ್ತು ಗೋಧಿಯನ್ನು ಎಫ್‌ಸಿಐನಿಂದ ನೇರವಾಗಿ ಪೂರೈಸಲಾಗಿದೆ. ಇವುಗಳನ್ನು ಮುಕ್ತ ಮಾರುಕಟ್ಟೆ ಮಾರಾಟ ದರದಲ್ಲಿ ವಿತರಿಸಲಾಗಿದ್ದು, ಸರ್ಕಾರದ ಯೋಜನೆ ವ್ಯಾಪ್ತಿಯಲ್ಲಿ ಇಲ್ಲದ ಜನರಿಗೆ ಮತ್ತು ವಲಸೆ ಕಾರ್ಮಿಕರಿಗೆ ನೀಡಲಾಗುತ್ತಿದೆ. ಈಗಾಗಲೇ ಅಸ್ಸಾಂ, ಅರುಣಾಚಲ ಪ್ರದೇಶ, ಮೇಘಾಲಯ ಮತ್ತು ಮಣಿಪುರ ರಾಜ್ಯಗಳು ಈ ಯೋಜನೆ ಅಡಿಯಲ್ಲಿ ಆಹಾರ ಧಾನ್ಯಗಳನ್ನು ಎತ್ತುವಳಿ ಮಾಡುತ್ತಿವೆ.

ಕೆಲವು ಡಿಪೋಗಳು ಅತಿ ಕಡಿಮೆ ಸಾಮರ್ಥ್ಯದ್ದಾಗಿವೆ. ಕೇವಲ 500 ಮೆಟ್ರಿಕ್‌ ಟನ್‌ ಆಹಾರ ಧಾನ್ಯಗಳನ್ನು ಮಾತ್ರ ಸಂಗ್ರಹಿಸಿಡುವ ಸಾಮರ್ಥ್ಯ ಹೊಂದಿವೆ. ಇಂತಹ ಬಹುತೇಕ ಡಿಪೋಗಳು ಗಡಿ ಪ್ರದೇಶದಲ್ಲಿವೆ. ತವಾಂಗ್‌ (ಭೂತಾನ್‌ ಗಡಿ), ಅನಿನಿ (ಚೀನಾ ಗಡಿ), ಲುಂಗ್ಲೈ (ಬಾಂಗ್ಲಾದೇಶ ಗಡಿ), ಲವ್ಂಗ್ಲೈ (ಮ್ಯಾನ್ಮಾರ್‌ ಗಡಿ)ನಲ್ಲಿ ಈ ಡಿಪೋಗಳಿದ್ದು, ಲಾರಿಗಳು 200–250 ಕಿಲೋ ಮೀಟರ್‌ ಕಠಿಣವಾದ ಗುಡ್ಡಗಾಡು ಪ್ರದೇಶದ ಹಾದಿಯಲ್ಲಿ ಕ್ರಮಿಸಬೇಕಾಗಿದೆ. ಲಾಕ್‌ಡೌನ್‌ ಸಂದರ್ಭದಲ್ಲಿ ಈಶಾನ್ಯ ರಾಜ್ಯಗಳ ಪ್ರತಿಯೊಂದು ಸ್ಥಳಗಳಿಗೂ ಸಾಕಷ್ಟು ಪ್ರಮಾಣದಲ್ಲಿ ಆಹಾರ ಧಾನ್ಯಗಳನ್ನು ತಲುಪಿಸುವುದು ಅತ್ಯಂತ ಕಠಿಣ ಮತ್ತು ಸವಾಲಿನ ಕೆಲಸವಾಗಿದೆ. ಎಫ್‌ಸಿಐ ಈ ಕೈಂಕರ್ಯದಲ್ಲಿ ಯಶಸ್ವಿಯಾಗಿದೆ. ಎಂತಹ ಕಷ್ಟದ ಸಂದರ್ಭಗಳು ಮತ್ತು ಸವಾಲುಗಳಿಂದ ಕೂಡಿದ್ದರೂ ದೇಶದ ಪ್ರತಿಯೊಂದು ಭಾಗಕ್ಕೂ ಆಹಾರ ಧಾನ್ಯಗಳನ್ನು ತಲುಪಿಸಲು ಎಫ್‌ಸಿಐ ಬದ್ಧವಾಗಿದೆ.

***(Release ID: 1616277) Visitor Counter : 52