ಗೃಹ ವ್ಯವಹಾರಗಳ ಸಚಿವಾಲಯ

ಕೋವಿಡ್-19 ಸಾಂಕ್ರಾಮಿಕ ನಿಯಂತ್ರಣಕ್ಕೆ ವಿಧಿಸಲಾಗಿರುವ ಲಾಕ್ ಡೌನ್ ನಿರ್ಬಂಧಗಳಲ್ಲಿ ಏಪ್ರಿಲ್ 20 ರಿಂದ ಅನ್ವಯವಾಗುವಂತೆ ಕೆಲವು ವಿನಾಯಿತಿಗಳನ್ನು ನೀಡುವ ಬಗ್ಗೆ ರಾಜ್ಯಗಳೊಂದಿಗೆ ಚರ್ಚಿಸಲು ಕೇಂದ್ರ ಗೃಹ ಸಚಿವರ ನಿರ್ದೇಶನ

Posted On: 19 APR 2020 4:59PM by PIB Bengaluru

ಕೋವಿಡ್-19 ಸಾಂಕ್ರಾಮಿಕ ನಿಯಂತ್ರಣಕ್ಕೆ ವಿಧಿಸಲಾಗಿರುವ ಲಾಕ್ ಡೌನ್ ನಿರ್ಬಂಧಗಳಲ್ಲಿ ಏಪ್ರಿಲ್ 20 ರಿಂದ ಅನ್ವಯವಾಗುವಂತೆ ಕೆಲವು ವಿನಾಯಿತಿಗಳನ್ನು ನೀಡುವ ಬಗ್ಗೆ ರಾಜ್ಯಗಳೊಂದಿಗೆ ಚರ್ಚಿಸಲು ಕೇಂದ್ರ ಗೃಹ ಸಚಿವರ ನಿರ್ದೇಶನ

 

ಕೇಂದ್ರ ಗೃಹ ವ್ಯವಹಾರಗಳ ಸಚಿವ ಶ್ರೀ ಅಮಿತ್ ಷಾ, ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕ ಸ್ಥಿತಿಗತಿ ಕುರಿತು ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ನಿನ್ನೆ ಪರಾಮರ್ಶೆ ನಡೆಸಿದರು. ಗೃಹ ಸಚಿವರು ಕೋವಿಡ್-19 ಸಾಂಕ್ರಾಮಿಕ ನಿಯಂತ್ರಣಕ್ಕೆ ವಿಧಿಸಲಾಗಿರುವ ಲಾಕ್ ಡೌನ್ ನಿರ್ಬಂಧಗಳನ್ನು ಏಪ್ರಿಲ್ 20ರಿಂದ ಅನ್ವಯವಾಗುವಂತೆ ಸ್ವಲ್ಪಮಟ್ಟಿಗೆ ಸಡಿಲಗೊಳಿಸುವ ಕುರಿತು ರಾಜ್ಯಗಳೊಂದಿಗೆ ಚರ್ಚಿಸುವಂತೆ ನಿರ್ದೇಶನ ನೀಡಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಇನ್ನೂ ಕೊರೊನಾ ವಿರುದ್ಧ ಸೆಣೆಸುತ್ತಿದೆ, ಹಾಗಾಗಿ ಲಾಕ್ ಡೌನ್ ನಿರ್ಬಂಧಗಳನ್ನು ಮತ್ತು ರಾಷ್ಟ್ರೀಯ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಗೃಹ ಸಚಿವರು ಹೇಳಿದರು.

ಪರಿಸ್ಥಿತಿಯನ್ನು ಪರಾಮರ್ಶಿಸಿದ ಅವರು, ಹಾಟ್ ಸ್ಪಾಟ್/ಕ್ಲಸ್ಟರ್/ಸೋಂಕು ವಲಯಗಳನ್ನು ಹೊರತುಪಡಿಸಿ, ಇತರೆ ಪ್ರದೇಶಗಳಲ್ಲಿ ಕೆಲವು ಚಟುವಟಿಕೆಗಳಿಗೆ ಅವಕಾಶ ನೀಡಲಾಗುವುದು. ಆ ವೇಳೆ ನೈಜ ವಿನಾಯಿತಿಗಳನ್ನು/ನಿಯಮ ಸಡಿಲಿಕೆಗಳನ್ನು ಮಾತ್ರ ಬಹಳ ಎಚ್ಚರಿಕೆಯಿಂದ ಮಾಡಬೇಕು ಎಂದು ಅವರು ಹೇಳಿದರು.

ಗ್ರಾಮೀಣ ಆರ್ಥಿಕತೆಯನ್ನು ಉತ್ತೇಜಿಸುವ ಸಲುವಾಗಿ ಗ್ರಾಮೀಣ ಪ್ರದೇಶದಲ್ಲಿ ಕೆಲವು ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ನೀಡಲಾಗುವುದು. ಅದರಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಗಳು/ಜಿಲ್ಲಾಧಿಕಾರಿಗಳು, ಉದ್ಯಮದವರ ಸಹಭಾಗಿತ್ವದಲ್ಲಿ ಆಯಾ ರಾಜ್ಯಗಳೊಳಗೆ ದುಡಿಯುವ ಸ್ಥಳಗಳಿಗೆ ಕಾರ್ಮಿಕರನ್ನು ಸ್ಥಳಾಂತರಿಸಲು ಸೂಕ್ತ ವ್ಯವಸ್ಥೆಯನ್ನು ಕೈಗೊಳ್ಳಬೇಕು. ಮೋದಿ ಅವರ ಸರ್ಕಾರ ಒಂದೆಡೆ ಇದು ಆರ್ಥಿಕ ಚಟುವಟಿಕೆಗೆ ಉತ್ತೇಜನ ನೀಡುತ್ತದೆ ಮತ್ತು ಇನ್ನೊಂದೆಡೆ ಕಾರ್ಮಿಕರಿಗೆ ಉದ್ಯೋಗಾವಕಾಶ ದೊರಕಿಸಿ ಕೊಡುತ್ತದೆ ಎಂದು ನಂಬಿದೆ.

ಅದೇ ರೀತಿ ರಾಜ್ಯಗಳು ದೊಡ್ಡ ಉದ್ದಿಮೆಗಳು, ಕೈಗಾರಿಕಾ ಎಸ್ಟೇಟ್ ಗಳು ಮತ್ತು ಕೈಗಾರಿಕಾ ಸಂಕೀರ್ಣಗಳಲ್ಲಿ ವಿಶೇಷವಾಗಿ ಸಮುಚ್ಛಯದೊಳಗೆ ಎಷ್ಟು ಕಾರ್ಮಿಕರನ್ನು ಹೊಂದಲು ಸಾಧ್ಯವೋ ಅಷ್ಟು ಮಂದಿಯನ್ನು ಮಾತ್ರ ಕೆಲಸದಲ್ಲಿ ತೊಡಗಿಸಿಕೊಳ್ಳಲು ಮುಂದಾಗಬೇಕು ಎಂದರು. ಇಂತಹ ಚಟುವಟಿಕೆಗಳು ಆರ್ಥಿಕ ಪುನಶ್ಚೇತನಕ್ಕೆ ಸಹಕಾರಿಯಾಗಲಿವೆ. ಆದರೆ ಕಾರ್ಮಿಕರಿಗೆ ಲಾಭದಾಯಕವಾಗುವಂತಹ ಉದ್ಯೋಗವನ್ನು ದೊರಕಿಸಿ ಕೊಡಬೇಕು ಎಂದರು. ಮೋದಿ ಸರ್ಕಾರ ಇಂತಹ ಸಂಕಷ್ಟದ ಸಮಯದಲ್ಲಿ ಸಮಾಜದ ಎಲ್ಲ ವರ್ಗದವರ ಹಕ್ಕುಗಳ ರಕ್ಷಣೆಗೆ ಬದ್ಧವಾಗಿದೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಗಳು/ ಡಿಸಿಗಳು ಮನ್ರೇಗಾ ಚಟುವಟಿಕೆಗಳು ಸೇರಿದಂತೆ ಕೃಷಿಯ ಮೂಲಕ ಕಾರ್ಮಿಕರಿಗೆ ಉದ್ಯೋಗಾವಕಾಶಗಳನ್ನು ದೊರಕಿಸಿ ಕೊಡುವ ಸಾಧ್ಯತೆಗಳ ಬಗ್ಗೆ ಪರಿಶೀಲಿಸಬೇಕು ಎಂದು ಗೃಹ ಸಚಿವರು ಹೇಳಿದರು.

ಪರಿಹಾರ ಶಿಬಿರಗಳಲ್ಲಿ ವಾಸ್ತವ್ಯ ಮುಂದುವರಿಸಿರುವ ಕಾರ್ಮಿಕರಿಗೆ ಸಂಬಂಧಿಸಿದಂತೆ ಅವರ ಕಲ್ಯಾಣಕ್ಕೆ ಹೆಚ್ಚಿನ ಗಮನಹರಿಸಬೇಕಾಗಿದೆ. ಅವರಿಗೆ ಗುಣಮಟ್ಟದ ಊಟವನ್ನು ಒದಗಿಸಬೇಕಾಗಿದೆ. ಈ ಪರಿಸ್ಥಿತಿ ಸವಾಲಿನದಾಗಿದ್ದರೂ ಅದನ್ನು ಅರ್ಥಮಾಡಿಕೊಂಡು ಎದುರಿಸಬೇಕಾಗಿದೆ ಎಂದರು.

ವೈದ್ಯಕೀಯ ತಂಡಗಳ ಮೂಲಕ ಸಮುದಾಯ ಆಧಾರಿತ ಸೋಂಕು ಪತ್ತೆ ಪರೀಕ್ಷಾ ಕಾರ್ಯಗಳನ್ನು ಇದೀಗ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದ ಗೃಹ ಸಚಿವರು, ಅಂತಹ ಪ್ರತಿಯೊಂದು ವೈದ್ಯಕೀಯ ತಂಡಗಳಿಗೆ ಸೂಕ್ತ ಭದ್ರತೆಯನ್ನು ರಾಜ್ಯ ಸರ್ಕಾರಗಳು ಖಾತ್ರಿಪಡಿಸಲು ವಿಶೇಷ ಗಮನಹರಿಸಬೇಕು ಎಂದರು. ತಂಡ ಪರೀಕ್ಷೆಗೆ ಸಮುದಾಯಕ್ಕೆ ತೆರಳುವ ಮುನ್ನ ಅಲ್ಲಿ ಸ್ಥಳೀಯ ಜವಾಬ್ದಾರಿಯುತ ನಾಯಕರನ್ನು ಸೇರಿಸಿಕೊಂಡು ಶಾಂತಿ ಸಮಿತಿಗಳನ್ನು ರಚಿಸಿ, ಅಗತ್ಯ ಕ್ಷೇತ್ರ ಕಾರ್ಯವನ್ನು ಮಾಡಬೇಕು. ಜನರಲ್ಲಿ ಕೋವಿಡ್-19ನ ನಾನಾ ಆಯಾಮಗಳು, ಪರೀಕ್ಷೆ ಮತ್ತು ಚಿಕಿತ್ಸೆ ಕುರಿತ ಭಯ ಮತ್ತು ಗೊಂದಲವನ್ನು ಹೋಗಲಾಡಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಕೋವಿಡ್-19 ವಿರುದ್ಧ ಹೋರಾಡಲು ರಾಷ್ಟ್ರೀಯ ನಿರ್ದೇಶನಗಳಂತೆ ಗ್ರಾಮೀಣ ಪ್ರದೇಶಗಳಲ್ಲಿ ನಿಗಾವಹಿಸಲು ಗಸ್ತನ್ನು ಹೆಚ್ಚಿಸಬೇಕು. ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಜಿಲ್ಲಾಧಿಕಾರಿಗಳು, ಪೊಲೀಸ್, ಪಂಚಾಯತ್ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಮತ್ತಿತರರ ಸಹಾಯ ಪಡೆದು, ನಿಯಮ ಪಾಲನೆಗೆ ಕ್ರಮ ಕೈಗೊಳ್ಳಬೇಕು ಎಂದರು.

***(Release ID: 1616209) Visitor Counter : 186