ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ

ಲಾಕ್ ಡೌನ್ ಅವಧಿಯಲ್ಲಿ ರಸ್ತೆ ಸಾರಿಗೆ ಕ್ಷೇತ್ರವು ಸಾಮಾನ್ಯ ಜನರಿಗೆ ಸಹಾಯ ಮಾಡುತ್ತಿದೆ

Posted On: 17 APR 2020 5:30PM by PIB Bengaluru

ಲಾಕ್ ಡೌನ್ ಅವಧಿಯಲ್ಲಿ ರಸ್ತೆ ಸಾರಿಗೆ ಕ್ಷೇತ್ರವು ಸಾಮಾನ್ಯ ಜನರಿಗೆ ಸಹಾಯ ಮಾಡುತ್ತಿದೆ

 

ಕೋವಿಡ್-19 ಕಾರಣದಿಂದಾಗಿರುವ ರಾಷ್ಟ್ರವ್ಯಾಪಿ ಲಾಕ್ ಡೌನ್ ಸಮಯದಲ್ಲಿ ರಸ್ತೆಗಳಲ್ಲಿ ಜನರಿಗೆ ಸಹಾಯ ಮಾಡುವ ಸಾಮಾಜಿಕ ಜವಾಬ್ದಾರಿಯನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ವಹಿಸಿಕೊಂಡಿದೆ. ಕಳೆದ ತಿಂಗಳು 24 ರಂದು ಪ್ರಧಾನಿಯವರು ಪ್ರಕಟಿಸಿದ ಬೆನ್ನಲ್ಲೇ, ದೇಶದ ಉದ್ದ ಮತ್ತು ಅಗಲದಾದ್ಯಂತ ಸಚಿವಾಲಯದ ಕ್ಷೇತ್ರ ಘಟಕಗಳು ತಮ್ಮ ಕೆಲಸಗಾರರು/ ಕಾರ್ಮಿಕರು ಮತ್ತು ಸಾಮಾನ್ಯ ಜನರಿಗೆ ಅಗತ್ಯ ಸಹಾಯವನ್ನು ನೀಡುವಂತೆ ಕೋರಲಾಯಿತು.

ಸಚಿವಾಲಯದ ಎಲ್ಲಾ ಕ್ಷೇತ್ರ ಘಟಕಗಳು ಮತ್ತು ಕಚೇರಿಗಳು, ಮತ್ತು ಸಂಬಂಧಿತ ಸಂಸ್ಥೆಗಳಾದ ಎನ್‌ಎಚ್‌ಎಐ ಮತ್ತು ಎನ್‌ಎಚ್‌ಐಡಿಸಿಎಲ್ ಜನರ ತೊಂದರೆಗಳನ್ನು ತಗ್ಗಿಸಲು ಸಹಾಯ ಮಾಡಲು ಮುಂದೆ ಬಂದವು. ಜನರಿಗೆ ಹೇಗೆ ಉತ್ತಮ ರೀತಿಯಲ್ಲಿ ಸಹಾಯ ಮಾಡಲಾಯಿತು ಎಂಬುದರ ಕುರಿತು ದೇಶದ ಹಲವಾರು ಭಾಗಗಳಿಂದ ವರದಿಗಳು ನಿರಂತರವಾಗಿ ಬರುತ್ತಿವೆ.

ಮಹಾರಾಷ್ಟ್ರದಲ್ಲಿ, ಈ ವಾರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಮಕ್ಕಳು ಮತ್ತು ಕುಟುಂಬ ಸದಸ್ಯರೊಂದಿಗೆ ಸುಡುವ ಬಿಸಿಲಿನಲ್ಲಿ ತಮ್ಮ ಊರಿಗೆ ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳಿಗೆ ಹೋಗಲು ಪ್ರಾರಂಭಿಸಿದಾಗ ಅವರಿಗೆ ಥಾಣೆ ಘಟಕದಿಂದ ಆಹಾರ ಮತ್ತು ನೀರನ್ನು ನೀಡಲಾಯಿತು. ಸ್ಥಳೀಯ ಸರ್ಕಾರೇತರ ಸಂಸ್ಥೆ (ಎನ್.ಜಿ.ಒ.) ‘ಸಮತಾ ವಿಚಾರ್ ಪ್ರಸಾರಕ್ ಸಂಸ್ಥಾ ಕೂಡ ಆಹಾರ ಪ್ಯಾಕೆಟ್‌ಗಳ ವಿತರಣೆಯಲ್ಲಿ ಸಹಾಯ ಮಾಡಲು ಜೊತೆಯಾಯಿತು.

ಅದೇ ರೀತಿ ಉತ್ತರ ಪ್ರದೇಶದ ಪ್ರಯಾಗರಾಜ್ ಜಿಲ್ಲೆಯಲ್ಲಿ ಲಾಕ್ ಡೌನ್ ಕಾರಣದಿಂದ ಅನೇಕ ಕಾರ್ಮಿಕರು ಮತ್ತು ಟ್ರಕ್ ಚಾಲಕರು ಹೆದ್ದಾರಿಗಳಲ್ಲಿ ಸಿಲುಕಿಕೊಂಡರು. ಅವರು ಆಹಾರ ಮತ್ತು ನೀರಿಲ್ಲದೆ ಇದ್ದರು. ಅಂತಹ ಸ್ಥಿತಿಯಲ್ಲಿ, ಅವರಿಗೆ ಆಹಾರವನ್ನು ನೀಡುವ ಜವಾಬ್ದಾರಿಯನ್ನು ಯೋಜನಾ ನಿರ್ದೇಶನಾಲಯವು ವಹಿಸಿಕೊಂಡಿದೆ. ನಿರ್ದೇಶನಾಲಯದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಜವಾಬ್ದಾರಿಯನ್ನು ತೆಗೆದುಕೊಂಡಿದ್ದರ ಪರಿಣಾಮ ಪರೋಪಕಾರಿ ಕೆಲಸ ಮುಂದುವರೆದಿದೆ. ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯಲ್ಲೂ ಇದೇ ರೀತಿಯ ಘಟನೆಗಳಾಗಿವೆ, ಅಲ್ಲಿ ಹೆಚ್ಚಿನ ಸಂಖ್ಯೆಯ ಜನರು ಮತ್ತು ಟ್ರಕ್ ಚಾಲಕರು ಸಿಕ್ಕಿಹಾಕಿಕೊಂಡಿದ್ದರು ಮತ್ತು ರಸ್ತೆಬದಿಯ ಹೊಟೆಲ್ ಗಳು ಮುಚ್ಚಿದ್ದರಿಂದ ಅವರಿಗೆ ಆಹಾರವಿರಲಿಲ್ಲ. ಸ್ಥಳೀಯ ಕ್ಷೇತ್ರ ಕಚೇರಿ ಮುಂದೆ ಬಂದು ಆಹಾರ ಮತ್ತು ನೀರನ್ನು ಸಾರ್ವಜನಿಕರಿಗೆ ಒದಗಿಸಿತು.

ತಮಿಳುನಾಡಿನ ತಿರುಚಿ ಜಿಲ್ಲೆಯಲ್ಲಿ, ಎನ್‌ಎಚ್‌ಎಐ ಗಸ್ತು ತಂಡವು ಐದು ಜನರನ್ನು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 45 ರಲ್ಲಿ ಪಾಲೂರ್‌ನಲ್ಲಿ ಪತ್ತೆ ಮಾಡಿದೆ. ಅವರಿಗೆ ತಕ್ಷಣವೇ ಆಹಾರ ಮತ್ತು ನೀರು ನೀಡಲಾಯಿತು ಮತ್ತು ಅವರ ಸುರಕ್ಷತೆಗಾಗಿ ಮುಖಗವಸುಗಳನ್ನು ನೀಡಲಾಯಿತು. ನಂತರ ಅವರನ್ನು ಹತ್ತಿರದ ಆಶ್ರಯತಾಣಕ್ಕೆ ಕರೆದೊಯ್ಯಲಾಯಿತು, ಅಲ್ಲಿ ಇಲ್ಲಿಯವರೆಗೆ ಅವರನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತಿದೆ.

ಮಹಾರಾಷ್ಟ್ರದ ವಾರ್ಧಾದಲ್ಲಿನ ಎನ್‌ಎಚ್‌ಎಐ ಸಂಸ್ಥೆಯು ಲಾಕ್-ಡೌನ್ ಆರಂಭದಿಂದಲೂ ಸುಮಾರು 50 ಜನರಿಗೆ ಆಶ್ರಯ ನೀಡುತ್ತಿದೆ. ರಸ್ತೆಬದಿಯ ಹೊಟೆಲ್ ಗಳು ಮುಚ್ಚಿರುವುದರಿಂದ, ಅಗತ್ಯ ಕರ್ತವ್ಯದಲ್ಲಿರುವ ಚಾಲಕರು ಮತ್ತು ಪ್ರಯಾಣಿಕರು ಆಹಾರ ಮತ್ತು ನೀರನ್ನು ಪಡೆಯುವಲ್ಲಿ ತೊಂದರೆ ಎದುರಿಸುತ್ತಿದ್ದರು. ಸಾಮಾಜಿಕ ಅಂತರ ಮತ್ತು ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸಿ ಇವರಿಗೆ ನಿಯಮಿತವಾಗಿ ಆಹಾರ, ನೀರು, ಮತ್ತು ಕೈ ತೊಳೆಯುವ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.

***



(Release ID: 1615648) Visitor Counter : 132