ಉಪರಾಷ್ಟ್ರಪತಿಗಳ ಕಾರ್ಯಾಲಯ

ಲಾಕ್ ಡೌನ್ ಸಮಯದಲ್ಲಿ ಕೃಷಿ ಮತ್ತು ರೈತರಿಗೆ ಅಗ್ರ ಆದ್ಯತೆ ನೀಡಬೇಕು – ಕೇಂದ್ರ ಮತ್ತು ರಾಜ್ಯಗಳಿಗೆ ಉಪರಾಷ್ಟ್ರಪತಿ ಕರೆ

Posted On: 15 APR 2020 5:53PM by PIB Bengaluru

ಲಾಕ್ ಡೌನ್ ಸಮಯದಲ್ಲಿ ಕೃಷಿ ಮತ್ತು ರೈತರಿಗೆ ಅಗ್ರ ಆದ್ಯತೆ ನೀಡಬೇಕು – ಕೇಂದ್ರ ಮತ್ತು ರಾಜ್ಯಗಳಿಗೆ ಉಪರಾಷ್ಟ್ರಪತಿ ಕರೆ

ಕೃಷಿ ಉತ್ಪಾದಕರು ಮತ್ತು ಗ್ರಾಹಕರು, ಇಬ್ಬರ ಹಿತವನ್ನೂ ಕಾಯಬೇಕು - ಉಪರಾಷ್ಟ್ರಪತಿ

ರೈತರಿಂದ ನೇರವಾಗಿ ಕೃಷಿ ಉತ್ಪನ್ನಗಳ ಖರೀದಿಗೆ ಎಪಿಎಂಸಿ ಕಾಯ್ದೆ ಸಡಿಲಗೊಳಿಸಲು ಸಲಹೆ

ರಾಜ್ಯ/ ಜಿಲ್ಲಾ ಗಡಿಗಳಲ್ಲಿ ಯಾವುದೇ ಅಡೆತಡೆ ಇಲ್ಲದೆ ಕೃಷಿ ಉತ್ಪನ್ನ ಸುಗಮ ಸಾಗಾಣೆ ಖಾತ್ರಿಪಡಿಸುವಂತೆ ಉಪರಾಷ್ಟ್ರಪತಿ ಕರೆ

ಲಾಕ್ ಡೌನ್ ವೇಳೆ ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಕೇಂದ್ರ ಕೃಷಿ ಸಚಿವರೊಂದಿಗೆ ಸಮಾಲೋಚನೆ ನಡೆಸಿದ ಉಪರಾಷ್ಟ್ರಪತಿ

ರೈತರಿಗೆ ಸಹಾಯ ಮಾಡಲು ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಕೃಷಿ ಸಚಿವರಿಗೆ ಮೆಚ್ಚುಗೆ ಸೂಚಿಸಿದ ಉಪರಾಷ್ಟ್ರಪತಿ

 

ಭಾರತದ ಉಪರಾಷ್ಟ್ರಪತಿಗಳಾದ ಶ್ರೀ ಎಂ. ವೆಂಕಯ್ಯನಾಯ್ಡು ಅವರಿಂದು ಲಾಕ್ ಡೌನ್ ಸಮಯದಲ್ಲಿ ಕೃಷಿ ಮತ್ತು ರೈತರಿಗೆ ಅಗ್ರ ಆದ್ಯತೆ ನೀಡಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚಿಸಿದರು ಹಾಗೂ ಈ ಸಮಯದಲ್ಲಿ ಕೃಷಿ ಉತ್ಪನ್ನಗಳ ಸಾಗಾಣೆ ಮತ್ತು ಕೃಷಿ ಚಟುವಟಿಕೆಗಳು ಸುಗಮವಾಗಿ ನಡೆಯಲು ಎಲ್ಲ ರೀತಿಯ ಪೂರಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ಮಾಡಿದರು.

ಉಪರಾಷ್ಟ್ರಪತಿ ಭವನದಲ್ಲಿಂದು ಕೇಂದ್ರ ಕೃಷಿ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಅವರೊಂದಿಗೆ ಸಂವಾದ ನಡೆಸಿದ ಉಪರಾಷ್ಟ್ರಪತಿಗಳು, ರೈತ ವಲಯದ ಹಿತರಕ್ಷಣೆಗೆ ಕೃಷಿ ಸಚಿವಾಲಯ ಕೈಗೊಂಡಿರುವ ನಾನಾ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅವರು ಉತ್ಪಾದಕರು ಮತ್ತು ಗ್ರಾಹಕರು, ಇಬ್ಬರ ಹಿತರಕ್ಷಣೆ ಮಾಡಬೇಕು ಎಂದು ಹೇಳಿದರು.

“ಕೃಷಿಯಲ್ಲಿ ತೊಡಗಿರುವ ಉತ್ಪಾದಕರು ಸಂಘಟಿತರಾಗಿಲ್ಲ ಮತ್ತು ಹಾಗಾಗಿ ಅವರ ಧ್ವನಿಗಳು ಕೇಳುವುದಿಲ್ಲ, ಆದ್ಧರಿಂದ ಅವರ ಹಿತಗಳನ್ನು ಕಾಯುವುದು ಅಥವಾ ರಕ್ಷಿಸುವುದು ಸರ್ಕಾರಗಳ ಕರ್ತವ್ಯವಾಗಿದೆ’’ ಎಂದು ಶ್ರೀ ನಾಯ್ಡು ಅವರು ಹೇಳಿದರು. ಇದು ರಾಜ್ಯಗಳ ಪ್ರಮುಖ ಕರ್ತವ್ಯವಾದರೂ ಈ ವಿಚಾರದಲ್ಲಿ ಕಾಲ ಕಾಲಕ್ಕೆ ಅಗತ್ಯ ಮಾರ್ಗದರ್ಶನ ಮತ್ತು ಸಹಾಯವನ್ನು ಕೇಂದ್ರ ಸರ್ಕಾರ ಮಾಡಬೇಕು ಎಂದು ಹೇಳಿದರು.

  • ಬೇಗನೆ ಹಾಳಾಗುವ ಹಣ್ಣು ಮತ್ತು ತರಕಾರಿಗಳ ಕುರಿತಂತೆ ಹೆಚ್ಚಿನ ಗಮನಹರಿಸಬೇಕು ಎಂದ ಉಪರಾಷ್ಟ್ರಪತಿಗಳು, ಆ ಪದಾರ್ಥಗಳ ದಾಸ್ತಾನು ಮತ್ತು ಮಾರುಕಟ್ಟೆಗೆ ವಿಶೇಷ ಗಮನ ಹರಿಸಬೇಕು ಎಂದು ಹೇಳಿದರು. ರೈತರ ತೋಟಗಳಿಂದ ನೇರವಾಗಿ ಕೃಷಿ ಉತ್ಪನ್ನಗಳ ಖರೀದಿಗೆ ಅವಕಾಶವಾಗುವಂತೆ ಎಪಿಎಂಸಿ ಕಾಯ್ದೆಯನ್ನು ಸೂಕ್ತ ರೀತಿಯಲ್ಲಿ ಸಡಿಲಗೊಳಿಸಬೇಕುಎಂದು ಸಲಹೆ ಮಾಡಿದ ಅವರು, ಹಾಗೆ ಮಾಡಿದಾಗ ಯಾವೊಬ್ಬ ರೈತರೂ ಬಲವಂತದಿಂದ ಮಂಡಿಗೆ ಹೋಗಬೇಕಾಗುವುದಿಲ್ಲ ಎಂದರು. ಇದರಿಂದಾಗಿ ಹಣ್ಣು, ತರಕಾರಿ ಮತ್ತು ಇತರೆ ಕೃಷಿ ಉತ್ಪನ್ನಗಳು ಸಾಕಷ್ಟು ಪ್ರಮಾಣದಲ್ಲಿ ಗ್ರಾಹಕರಿಗೆ ಲಭ್ಯವಾಗಲು ಸಹಾಯಕವಾಗುತ್ತದೆ ಎಂದು ಶ್ರೀ ನಾಯ್ಡು ಅವರು ಹೇಳಿದರು.

ಕೃಷಿ ಉತ್ಪನ್ನಗಳ ಸುಗಮ ಸಾಗಾಣೆಗೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ ಎಂದ ಉಪರಾಷ್ಟ್ರಪತಿಗಳು, ಕೃಷಿ ಉತ್ಪನ್ನಗಳ ಸಾಗಾಣೆಗೆ ಯಾವುದೇ ಅಡೆತಡೆಗಳು ಎದುರಾಗದಂತೆ ಸಂಬಂಧಿಸಿದ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಕರೆ ನೀಡಿದರು. ಪ್ರಸಕ್ತ ಕಟಾವು ಹಂಗಾಮನ್ನು ಉಲ್ಲೇಖಿಸಿದ ಅವರು, ಆ ಹಿನ್ನೆಲೆಯಲ್ಲಿ ಕೃಷಿ ಯಂತ್ರೋಪಕರಣಗಳು ಮತ್ತು ಸಲಕರಣೆಗಳ ಮುಕ್ತ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದರು.

ರೈತರ ಹಿತರಕ್ಷಣೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಕೃಷಿ ಸಚಿವರು ಸಮಗ್ರ ವಿವರಗಳನ್ನು ಒದಗಿಸಿದರು. ಶ್ರೀ ತೋಮರ್ ಅವರು, ಕೇಂದ್ರ ಕೃಷಿ ಸಚಿವಾಲಯ, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಜೊತೆ ನಿಕಟ ರೀತಿಯಲ್ಲಿ ಕಾರ್ಯೋನ್ಮುಖವಾಗಿದೆ ಎಂದರು ಹಾಗೂ ಇಂತಹ ಸಂಕಷ್ಟದ ಸಮಯದಲ್ಲಿ ರೈತರಿಗೆ ಸಹಾಯ ನೀಡಲು ಎಲ್ಲ ಅಗತ್ಯ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ ಎಂದು ಅವರು ಉಪರಾಷ್ಟ್ರಪತಿಗಳಿಗೆ ಭರವಸೆ ನೀಡಿದರು.

***



(Release ID: 1614863) Visitor Counter : 240