ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

"ಕಪ್ಪು ಮೋಡದ ನಡುವೆಯೂ  ಬೆಳ್ಳಿಗೆರೆ ಇದ್ದೇ ಇರುತ್ತದೆ ": ಡಾ. ಹರ್ಷವರ್ಧನ್

Posted On: 14 APR 2020 9:31PM by PIB Bengaluru

"ಕಪ್ಪು ಮೋಡದ ನಡುವೆಯೂ  ಬೆಳ್ಳಿಗೆರೆ ಇದ್ದೇ ಇರುತ್ತದೆ ": ಡಾ. ಹರ್ಷವರ್ಧನ್

ಭಾರತೀಯ ಉದ್ಯಮಗಳ ಒಕ್ಕೂಟದ (ಸಿಐಐ) ಪ್ರಮುಖರೊಂದಿಗೆ ಡಾ. ಹರ್ಷವರ್ಧನ್ ಚರ್ಚೆ

 

ಭಾರತೀಯ ಉದ್ಯಮಗಳ ಒಕ್ಕೂಟ (ಸಿಐಐ) ಆಯೋಜಿಸಿದ್ದ 50 ಕ್ಕೂ ಹೆಚ್ಚು ಭಾರತೀಯ ಉದ್ಯಮಿಗಳೊಂದಿಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ಅವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂವಾದ ನಡೆಸಿದರು. ಸಮ್ಮೇಳನದಲ್ಲಿ ಅವರು ಸಿಐಐ ಅಧ್ಯಕ್ಷ ಶ್ರೀ ವಿಕ್ರಮ್ ಕಿರ್ಲೋಸ್ಕರ್, ಸಿಐಐ ನಿಯೋಜಿತ ಅಧ್ಯಕ್ಷ ಶ್ರೀ ಉದಯ ಕೊಟಕ್, ಸಿಐಐ ಮಹಾನಿರ್ದೇಶಕ ಶ್ರೀ ಚಂದ್ರಜಿತ್ ಬ್ಯಾನರ್ಜಿ, ಸಿಐಐ ರಾಷ್ಟ್ರೀಯ ಆರೋಗ್ಯ ಮಂಡಳಿ ಅಧ್ಯಕ್ಷ ಮತ್ತು ಮೆದಾಂತ ಸಿಎಂಡಿ ಡಾ.ನರೇಶ್ ಟ್ರೆಹಾನ್, ಶ್ರೀ ಸುನಿಲ್ ಕಾಂತ್ ಮುಂಜಾಲ್ , ಹೀರೋ ಎಂಟರ್ಪ್ರೈಸ್ ಅಧ್ಯಕ್ಷರು, ಶ್ರೀಮತಿ ವಿನಿತಾ ಬಾಲಿ, ಗ್ಲೋಬಲ್ ಅಲೈಯನ್ಸ್ ಫಾರ್ ಇಂಪ್ರೂವ್ಡ್ ನ್ಯೂಟ್ರಿಷನ್ (ಗೇನ್) ಮಾಜಿ ಅಧ್ಯಕ್ಷರು, ಮಹೀಂದ್ರಾ ಮತ್ತು ಮಹೀಂದ್ರಾ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಡಾ.ಪವನ್ ಗೋಯೆಂಕಾ, ಆರ್ಸಿಬಿ ಕನ್ಸಲ್ಟಿಂಗ್ ಅಧ್ಯಕ್ಷ ಡಾ.ಪಿ.ಆರ್.ಭಾರ್ಗವ ಮತ್ತು ಡಾ.ಕಿರಣ್ ಮಜುಂದಾರ್ ಶಾ , ಸಿಐಐ ಜೈವಿಕ ತಂತ್ರಜ್ಞಾನ ರಾಷ್ಟ್ರೀಯ ಸಮಿತಿಯ ಸದಸ್ಯೆ ಮತ್ತು ಸಂಸ್ಥಾಪಕರು ಇವರೊಂದಿಗೆ ಸಚಿವರು ಸಂವಾದ ನಡೆಸಿದರು.

ಕೋವಿಡ್-19 ನಿಗ್ರಹಕ್ಕೆ ಸರ್ಕಾರವು ಕೈಗೊಳ್ಳುತ್ತಿರುವ ವಿವಿಧ ಪರಿಹಾರ ಕ್ರಮಗಳ ಕುರಿತು ಡಾ.ಹರ್ಷವರ್ಧನ್ ಅವರು ಉದ್ಯಮಕ್ಕೆ ಮಾಹಿತಿ ನೀಡಿದರು. ಸಂಭವನೀಯ ಪೂರೈಕೆ ಸರಪಳಿಯ ಅಡೆತಡೆಗಳು ಮತ್ತು ಆರೋಗ್ಯ ಕ್ಷೇತ್ರವು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಸಂಬಂಧಿಸಿದ ಅನೇಕ ನಿರ್ಣಾಯಕ ವಿಷಯಗಳಿಗೆ ಸಚಿವರು ಪ್ರತಿಕ್ರಿಯಿಸಿದರು. ಕೋವಿಡ್-19 ವಿರುದ್ಧದ ಹೋರಾಟದ ಸಂದರ್ಭದಲ್ಲಿ ಆರ್ಥಿಕತೆಯ ಪುನರುಜ್ಜೀವನ, ಪರೀಕ್ಷಾ ಸೌಲಭ್ಯಗಳ ಲಭ್ಯತೆ, ಕ್ವಾರಂಟೈನ್ ಸೌಲಭ್ಯಗಳು, ಔಷಧೀಯ ಉದ್ಯಮಕ್ಕೆ ಕಚ್ಚಾ ವಸ್ತುಗಳು, ರೋಗಗಳ ಕಣ್ಗಾವಲು, ಟೆಲಿಮೆಡಿಸಿನ್ ಸೌಲಭ್ಯಗಳ ಬಳಕೆ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಅವರು ಉದ್ಯಮಿಗಳ ಕಳವಳಗಳನ್ನು ನಿವಾರಿಸಿದರು. "ಪ್ರತಿಯೊಂದು ಕಪ್ಪು ಮೋಡದ ಮರೆಯಲ್ಲಿ ಬೆಳ್ಳಿಗೆರೆ ಇದ್ದೇ ಇರುತ್ತದೆ ಮತ್ತು ಪ್ರಸ್ತುತ ಪರಿಸ್ಥಿತಿಯಲ್ಲಿ ನಾವು ಉತ್ಸಾಹವನ್ನು ಬಿಟ್ಟುಕೊಡಬಾರದು. ಆಗ ನಾವು ಇದರಿಂದ ಹೊರಬರುತ್ತೇವೆ. ಫೀನಿಕ್ಸ್ನಂತೆ ವಿಜಯಶಾಲಿಯಾಗುತ್ತೇವೆ. ಇದು ಜಗತ್ತಿನ ಆಧುನಿಕ ಇತಿಹಾಸದ ಕರಾಳ ಅಧ್ಯಾಯಗಳಲ್ಲಿ ಒಂದಾಗಿದೆ ಮತ್ತು ಮನುಕುಲವು ಇದರಿಂದ ಹೊರಬರಬೇಕು" ಎಂದು ಅವರು ಹೇಳಿದರು.

ಉತ್ಸಾಹವನ್ನು ಹೆಚ್ಚಿಸಿಕೊಳ್ಳುವಂತೆ ಮತ್ತು ಕೋವಿಡ್ ಒಡ್ಡಿರುವ ಹೆಲ್ತ್ಕೇರ್ ಸವಾಲುಗಳನ್ನು ಮೇಕ್ ಇನ್ ಇಂಡಿಯಾ ಅವಕಾಶವಾಗಿ ಉತ್ತಮವಾಗಿ ಬಳಸಿಕೊಳ್ಳುವಂತೆ ಡಾ. ಹರ್ಷವರ್ಧನ್ ಸಲಹೆ ನೀಡಿದರು. ಇದರಿಂದಾಗಿ ಸಾಂಕ್ರಾಮಿಕ ರೋಗದೊಂದಿಗೆ ಸಮರ್ಥವಾಗಿ ಹೋರಾಡಲು ನಿರ್ಣಾಯಕ ಆರೋಗ್ಯ ರಕ್ಷಣಾ ಸಾಧನಗಳನ್ನು ಒದಗಿಸಲು ದೇಶವು ಹೆಚ್ಚು ಚೇತರಿಸಿಕೊಳ್ಳುತ್ತದೆ ಮತ್ತು ಸ್ವಾವಲಂಬಿಯಾಗುತ್ತದೆ ಎಂದರು. "ಕೈಗಾರಿಕಾ ಚಟುವಟಿಕೆಗಳನ್ನು ಹಂತ ಹಂತವಾಗಿ ಮತ್ತು ಸುರಕ್ಷಿತ ರೀತಿಯಲ್ಲಿ ಪುನರಾರಂಭಿಸುವುದು ಹೇಗೆ" ಎಂದು ಸರ್ಕಾರ ಚರ್ಚಿಸುತ್ತಿದೆ ಎಂದು ಸಚಿವರು ಅವರಿಗೆ ಮಾಹಿತಿ ನೀಡಿದರು.

ಇಂತಹ ಪರೀಕ್ಷೆಯ ಸಂದರ್ಭದಲ್ಲಿ ಸರ್ಕಾರದ ಪರವಾಗಿ ನಿಂತು ಪಿಎಂ ಕೇರ್ಸ್ ನಿಧಿಗೆ ಧಾರಾಳವಾಗಿ ಕೊಡುಗೆ ನೀಡಿದ್ದಕ್ಕಾಗಿ ಎಲ್ಲರಿಗೂ ಡಾ. ಹರ್ಷವರ್ಧನ್ ಧನ್ಯವಾದಗಳನ್ನು ತಿಳಿಸಿದರು. "ಕೋವಿಡ್ ಸಾಮಕ್ರಾಮಿಕದ ಕಾರಣದಿಂದಾಗಿ ದೇಶದ ಕೈಗಾರಿಕಾ ವಲಯವು ದೊಡ್ಡ ಕುಸಿತವನ್ನು ಕಂಡಿದೆ ಮತ್ತು ಮುಂಬರುವ ದಿನಗಳಲ್ಲಿ ಅದು ಮತ್ತೆ ಪುಟಿದೇಳಬಲ್ಲುದು ಎಂಬುದನ್ನು ಖಚಿತಪಡಿಸಿಕೊಳ್ಳುವುದು ಹೇಗೆ ಎಂಬುದರ ಕುರಿತು ಸರ್ಕಾರ ಈಗಾಗಲೇ ಚರ್ಚೆ ಮಾಡಿದೆ" ಎಂದು ಅವರು ಹೇಳಿದರು.

ವಿಶಾಲ ಭಾರತದ ಬೆಳವಣಿಗೆಯಲ್ಲಿ ಕೈಗಾರಿಕಾ ವಲಯ ಪ್ರಮುಖ ಪಾತ್ರ ವಹಿಸುತ್ತದೆ ಎಂದ ಅವರು, ಮೇಕ್ ಇನ್ ಇಂಡಿಯಾಕ್ಕೆ ಹೆಲ್ತ್ಕೇರ್ ಅನೇಕ ಅವಕಾಶಗಳನ್ನು ಒದಗಿಸುತ್ತಿದೆ ಮತ್ತು ಕೋವಿಡ್ ಸಾಂಕ್ರಾಮಿಕ ರೋಗದ ತೀವ್ರ ಸಂಕಷ್ಟದ ಸಮಯದಲ್ಲಿ ಇದನ್ನು ಬಳಸಿಕೊಂಡು ಭಾರತಕ್ಕೆ ಪ್ರಯೋಜನ ಮಾಡುವಂತೆ ಉದ್ಯಮದ ಮುಖಂಡರನ್ನು ಒತ್ತಾಯಿಸಿದರು.

***(Release ID: 1614648) Visitor Counter : 71