ರಕ್ಷಣಾ ಸಚಿವಾಲಯ

ಕೋವಿಡ್-19 ಮಾದರಿ ಸಂಗ್ರಹಕ್ಕಾಗಿ ಡಿ ಆರ್ ಡಿ ಓ ಸಂಸ್ಥೆಯಿಂದ ಕಿಯೋಸ್ಕ್ ಅಭಿವೃದ್ಧಿ

Posted On: 14 APR 2020 5:26PM by PIB Bengaluru

ಕೋವಿಡ್-19 ಮಾದರಿ ಸಂಗ್ರಹಕ್ಕಾಗಿ ಡಿ ಆರ್ ಡಿ ಓ ಸಂಸ್ಥೆಯಿಂದ ಕಿಯೋಸ್ಕ್ ಅಭಿವೃದ್ಧಿ

 

ಕೋವಿಡ್ ಸ್ಯಾಂಪಲ್ ಕಲೆಕ್ಷನ್ ಕಿಯೋಸ್ಕ್ (ಕೊವ್ ಸಾಕ್ - COVSACK) ಅನ್ನು ಅಭಿವೃದ್ಧಿಪಡಿಸುವ ಮೂಲಕ ಕೊರೊನಾವೈರಸ್ (ಕೋವಿಡ್-19) ಅನ್ನು ಎದುರಿಸಲು ಹೈದರಾಬಾದಿನ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯ (ಡಿ ಆರ್ ಡಿ ಎಲ್)ವು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿ ಆರ್ ಡಿ ಓ) ಗೆ ಮತ್ತೊಂದು ಉತ್ಪನ್ನವನ್ನು ಸೇರಿಸಿದೆ.

ಹೈದರಾಬಾದಿನ ನೌಕರರ ರಾಜ್ಯ ವಿಮಾ ನಿಗಮದ (ಇಎಸ್‌ಐಸಿ) ವೈದ್ಯರೊಂದಿಗೆ ಸಮಾಲೋಚಿಸಿ ಡಿಆರ್‌ಡಿಎಲ್ ಈ ಘಟಕವನ್ನು ಅಭಿವೃದ್ಧಿಪಡಿಸಿದೆ. ಕೋವ್ ಸಾಕ್ ಎನ್ನುವುದು ಆರೋಗ್ಯ ಕಾರ್ಯಕರ್ತರು ಶಂಕಿತ ಸೋಂಕಿತ ರೋಗಿಗಳಿಂದ ಕೋವಿಡ್-19 ಮಾದರಿಗಳನ್ನು ತೆಗೆದುಕೊಳ್ಳಲು ಬಳಸುವ ಕಿಯೋಸ್ಕ್ ಆಗಿದೆ. ಪರೀಕ್ಷೆಗೆ ಒಳಪಡುವ ರೋಗಿಯು ಕಿಯೋಸ್ಕ್ ನ ಒಳಗಡೆ ಹೋಗುತ್ತಾನೆ ಮತ್ತು ಮೂಗಿನ ಅಥವಾ ಗಂಟಲಿನ ಸ್ವ್ಯಾಬ್ ಅನ್ನು ನಿರ್ಮಿಸಿದ ಕೈಗವಸುಗಳ ಬಳಸಿ ವೈದ್ಯಕೀಯ ಸಿಬ್ಬಂದಿ ಹೊರಗಿನಿಂದ ತೆಗೆದುಕೊಳ್ಳುತ್ತಾರೆ.

ಈ ಘಟಕವು ಮಾನವನ ಅಗತ್ಯವಿಲ್ಲದೆ ಸ್ವಯಂಚಾಲಿತವಾಗಿ ಸೋಂಕುರಹಿತವಾಗಿರುತ್ತದೆ, ಇದರಿಂದಾಗಿ ಈ ಪ್ರಕ್ರಿಯೆಯಿಂದಾಗಿ ಸೋಂಕು ಹರಡುವುದಿಲ್ಲ. ಕಿಯೋಸ್ಕ್ ಕ್ಯಾಬಿನ್‌ನ ಗಾಜಿನ ಪರದೆಯು ಮಾದರಿಯನ್ನು ತೆಗೆದುಕೊಳ್ಳುವಾಗ ಸಿಬ್ಬಂದಿಗಳನ್ನು ಗಾಳಿಯಿಂದ/ ಹನಿ ಪ್ರಸರಣದಿಂದ ರಕ್ಷಿಸುತ್ತದೆ. ಇದು ಆರೋಗ್ಯ ಕಾರ್ಯಕರ್ತರಿಂದ ಪಿಪಿಇ ಬದಲಾವಣೆ ಮಾಡುವ ಅವಶ್ಯಕತೆಗಳನ್ನು ಕಡಿಮೆ ಮಾಡುತ್ತದೆ.

ರೋಗಿಯು ಕಿಯೋಸ್ಕ್ ನಿಂದ ಹೊರಗೆ ಹೋದ ನಂತರ, ಕಿಯೋಸ್ಕ್ ಕ್ಯಾಬಿನ್‌ನಲ್ಲಿ ಅಳವಡಿಸಲಾದ ನಾಲ್ಕು ನಳಿಕೆಯ ಸ್ಪ್ರೇಗಳು 70 ಸೆಕೆಂಡುಗಳ ಕಾಲ ಸೋಂಕುನಿವಾರಕ ಮಂಜನ್ನು ಸಿಂಪಡಿಸುವ ಮೂಲಕ ಖಾಲಿ ಕೋಣೆಯನ್ನು ಸೋಂಕುರಹಿತಗೊಳಿಸುತ್ತವೆ. ನಂತರಇದನ್ನು ಯುವಿ ಲೈಟ್ ಗಳ ಸೋಂಕುನಿವಾರಕ ಮತ್ತು ನೀರನ್ನು ಹರಿಸಿ ಶುದ್ಧಮಾಡಲಾಗುತ್ತದೆ. ಎರಡು ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಮುಂದಿನ ಬಳಕೆಗೆ ಘಟಕವು ಸಿದ್ಧವಾಗುತ್ತದೆ. ಕೋವ್ ಸಾಕ್ ನೊಂದಿಗೆ ಸಂಯೋಜಿಸಲ್ಪಟ್ಟ ದ್ವಿಮುಖ ಸಂವಹನ ವ್ಯವಸ್ಥೆಯ ಮೂಲಕ ವಾಯ್ಸ್ ಕಮ್ಯಾಂಡ್ ನೀಡಬಹುದು. ವೈದ್ಯಕೀಯ ಸಿಬ್ಬಂದಿಗೆ ಅಗತ್ಯವಿರುವಂತೆ ಒಳಗಿನಿಂದ ಅಥವಾ ಹೊರಗಿನಿಂದ ಬಳಸಲು ಕೋವ್ ಸಾಕ್ ಅನ್ನು ಅಣಿಗೊಳಿಸಬಹುದಾಗಿದೆ.

ಕೋವ್ ಸಾಕ್ ನ ವೆಚ್ಚ ಸುಮಾರು ಒಂದು ಲಕ್ಷ ರೂಪಾಯಿಗಳಾಗಿದ್ದು ಕರ್ನಾಟಕದ ಬೆಳಗಾವಿ ಮೂಲದ ಉದ್ಯಮವು ದಿನಕ್ಕೆ 10 ಘಟಕಗಳನ್ನು ತಯಾರಿಸ ಬಹುದಾಗಿದೆ. ಡಿಆರ್‌ಡಿಒ ಎರಡು ಘಟಕಗಳನ್ನು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದೆ ಮತ್ತು ಯಶಸ್ವಿ ಪರೀಕ್ಷೆಯ ನಂತರ ಇವುಗಳನ್ನು ಹೈದರಾಬಾದ್‌ನ ಇಎಸ್‌ಐಸಿ ಆಸ್ಪತ್ರೆಗೆ ಹಸ್ತಾಂತರಿಸಿದೆ.

***



(Release ID: 1614570) Visitor Counter : 139