ಕೃಷಿ ಸಚಿವಾಲಯ

ಲಾಕ್ ಡೌನ್ ವೇಳೆ ಐಸಿಎಆರ್ ಚಟುವಟಿಕೆಗಳ ಪರಾಮರ್ಶೆ ನಡೆಸಿದ ಕೃಷಿ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್

Posted On: 14 APR 2020 5:46PM by PIB Bengaluru

ಲಾಕ್ ಡೌನ್ ವೇಳೆ ಐಸಿಎಆರ್ ಚಟುವಟಿಕೆಗಳ ಪರಾಮರ್ಶೆ ನಡೆಸಿದ ಕೃಷಿ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್

ಐಸಿಎಆರ್ ನ ಮೂರು ಕೇಂದ್ರಗಳು ಮಾನವರಲ್ಲಿನ ಕೋವಿಡ್-19 ಕುರಿತ ಪರೀಕ್ಷೆಯಲ್ಲಿ ನಿರತ

ಲಾಕ್ ಡೌನ್ ವೇಳೆ ರೈತರಿಗೆ ನೆರವಾಗಲು ಐಸಿಎಆರ್ ನಿಂದ ಹಲವು ಪ್ರಯತ್ನ; ದೇಶಾದ್ಯಂತ ಕೋಟ್ಯಾಂತರ ರೈತರಿಗೆ ಸಲಹೆ-ಸೂಚನೆ

ಎಲ್ಲಾ ಕೃಷಿ ವಿಶ್ವ ವಿದ್ಯಾಲಯಗಳಿಗೆ ಆನ್ ಲೈನ್ ತರಗತಿಗಳನ್ನು ನಡೆಸಲು ಶ್ರೀ ತೋಮರ್ ನಿರ್ದೇಶನ

 

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಅವರು, ಕೊರೊನಾ ಸೋಂಕು ಹರಡದಂತೆ ರಾಷ್ಟ್ರವ್ಯಾಪಿ ಲಾಕ್ ಡಾನ್ ಘೋಷಿಸಿರುವ ಹಿನ್ನೆಲೆಯಲ್ಲಿ ಮತ್ತು ಕೋವಿಡ್-19ನಿಂದಾಗಿ ಉಂಟಾಗಿರುವ ಸಮಸ್ಯೆಗಳಿಂದ ಹೊರಬರಲು ಭಾರತೀಯ ಕೃಷಿ ಸಂಶೋಧನಾ ಮಂಡಳಿ(ಐಸಿಎಆರ್) ರೈತರಿಗೆ ನೆರವಾಗಲು ಯಾವ್ಯಾವ ಚಟುವಟಿಕೆಗಳನ್ನು ಕೈಗೊಂಡಿದೆ ಎಂಬ ಕುರಿತು ಪರಾಮರ್ಶೆ ನಡೆಸಿದರು. ಈ ಮಧ್ಯೆ, ಐಸಿಎಆರ್ ನ ಮೂರು ಕೇಂದ್ರಗಳು ಮಾನವರಲ್ಲಿ ಕೋವಿಡ್-19 ಸೋಂಕು ಕುರಿತು ಪರೀಕ್ಷೆಗಳನ್ನು ನಡೆಸುತ್ತಿದೆ. ಐಸಿಎಆರ್, ಲಾಕ್ ಡೌನ್ ವೇಳೆ ರೈತರಿಗೆ ನೆರವಾಗಲು ಹಲವು ಕ್ರಮಗಳನ್ನು ಕೈಗೊಂಡಿದೆ ಮತ್ತು ದೇಶಾದ್ಯಂತ ಕೋಟ್ಯಂತರ ರೈತರಿಗೆ ಹಲವು ಸಲಹೆಗಳನ್ನು ನೀಡಿದೆ. ಶ್ರೀ ತೋಮರ್ ಅವರು, ಕೃಷಿ ವಿಶ್ವ ವಿದ್ಯಾಲಯಗಳಿಗೆ ಆನ್ ಲೈನ್ ತರಗತಿಗಳನ್ನು ನಡೆಸುವಂತೆ ನಿರ್ದೇಶನ ನೀಡಿದರು.

ಪರಿಶೀಲನಾ ಸಭೆಯ ವೇಳೆ ಐಸಿಎಆರ್ ನ ಪ್ರಧಾನ ನಿರ್ದೇಶಕರಾದ ಡಾ. ತ್ರಿಲೋಚನಾ ಮೊಹಪಾತ್ರ, ಐಸಿಎಆರ್ ರಾಷ್ಟ್ರೀಯ ಮತ್ತು ರಾಜ್ಯಗಳಿಗೆ ನಿರ್ದಿಷ್ಟವಾಗಿ ರೈತರಿಗೆ ಸಲಹೆಗಳನ್ನು ನೀಡಿದೆ ಮತ್ತು ಅವುಗಳನ್ನು 15 ಪ್ರಾದೇಶಿಕ ಭಾಷೆಗಳಿಗೆ ಅನುವಾದ ಮಾಡಿ, ಆ ಕುರಿತು ರೈತರಿಗೆ ಮಾಹಿತಿ ತಲುಪಿಸಲು ಡಿಜಿಟಲ್ ವೇದಿಕೆಗಳ ಮೂಲಕ ವ್ಯಾಪಕ ಪ್ರಚಾರ ನೀಡಲಾಗುತ್ತಿದೆ. ಲಾಕ್ ಡೌನ್ ವೇಳೆಯಲ್ಲಿ ಕೃಷಿ ಸಂಬಂಧಿ ಚಟುವಟಿಕೆಗಳಿಗೆ ನೀಡಲಾಗಿರುವ ವಿನಾಯಿತಿಗಳು ಮತ್ತು ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಯಾವ್ಯಾವ ಪ್ರಮುಖ ಕೃಷಿ ಕಾರ್ಯಾಚರಣೆಗಳನ್ನು ಕೈಗೊಳ್ಳಬಹುದು ಎಂಬ ಕುರಿತು ರೈತರಿಗೆ ಸೂಕ್ತ ಮಾಹಿತಿಯನ್ನು ಒದಗಿಸಿದೆ.

ಕೇಂದ್ರ ಕೃಷಿ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಅವರ ನಿರ್ದೇಶನದಂತೆ ಸುಮಾರು 5.48 ಕೋಟಿಗೂ ಅಧಿಕ ರೈತರಿಗೆ ಎಂಕಿಸಾನ್ ಪೋರ್ಟಲ್ ಮೂಲಕ, ಕೃಷಿ ವಿಜ್ಞಾನ ಕೇಂದ್ರಗಳಿಂದ 1,126 ಸಲಹೆಗಳನ್ನು ನೀಡಿ, ಅವರನ್ನು ತಲುಪಲಾಗಿದೆ. ಸಲಹೆಗಳ ಮಾರ್ಗಸೂಚಿಯನ್ನು ವಾಟ್ಸ್ ಅಪ್ ಗುಂಪು(4893 ಕೆವಿಕೆ ವಾಟ್ಸ್ ಅಪ್ ಗುಂಪುಗಳಲ್ಲಿ 5.75 ಲಕ್ಷ ರೈತರ ವ್ಯಾಪ್ತಿ)ಗಳ ಮೂಲಕ ಹಂಚಿಕೊಳ್ಳಲಾಗಿದೆ ಮತ್ತು ಇತರೆ ಡಿಜಿಟಲ್ ವೇದಿಕೆಗಳ ಮೂಲಕ(8.06 ಲಕ್ಷ ರೈತರನ್ನು) ತಲುಪಲಾಗಿದೆ. ಕೆವಿಕೆಗಳು ನೀಡಿದ್ದ ಸಲಹೆಗಳ ಕುರಿತು 936 ಸುದ್ದಿಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. 193 ರೇಡಿಯೋ ಭಾಷಣಗಳು ಮತ್ತು 57 ಟಿವಿ ಕಾರ್ಯಕ್ರಮಗಳ ಮೂಲಕ ಸಂದೇಶಗಳನ್ನು ಪಸರಿಸಲಾಗಿದೆ.

ಸಂಶೋಧನಾ ಕೇಂದ್ರಗಳು ತಜ್ಞರ ವ್ಯವಸ್ಥೆ ಮತ್ತು ಮೊಬೈಲ್ ಆಪ್ ಸೇರಿದಂತೆ ಐಸಿಟಿ ತಂತ್ರಗಳನ್ನು ಬಳಸಿಕೊಳ್ಳುತ್ತಿವೆ ಮತ್ತು ಭತ್ತ, ಗೋಧಿ, ಜೋಳ, ಬೇಳೆಕಾಳು, ಸಿರಿಧಾನ್ಯಗಳು, ಎಣ್ಣೆಬೀಜಗಳು, ಕಬ್ಬು, ನಾರಿನ ಬೆಳೆಗಳು ಮಾವು, ಕಿತ್ತಳೆ, ಬಾಳೆಹಣ್ಣು, ದಾಳಿಂಬೆ, ದ್ರಾಕ್ಷಿ, ಲಿಚಿ, ಸಾಂಬಾರ ಪದಾರ್ಥಗಳು, ಹೂವು, ತರಕಾರಿ ಮತ್ತು ಕಲ್ಲಂಗಡಿ, ತೋಟಗಾರಿಕಾ ಬೆಳೆಗಳಾದ ತೆಂಗು, ಅಡಿಕೆ ಕೋಕಾ ಮತ್ತು ಟ್ಯೂಬರ್ ಬೆಳೆಗಳ ಕುರಿತು ಸೂಕ್ತ ಬೆಳೆ ನಿರ್ವಹಣೆಗಳ ತಂತ್ರಜ್ಞಾನಗಳ ಬಗ್ಗೆ ಮಾಹಿತಿಗಳನ್ನು ಒದಗಿಸಲಾಗಿದೆ.

ಅಲ್ಲದೆ ಹೂವು, ತರಕಾರಿ ಮತ್ತು ಹಣ್ಣಿನ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮತ್ತು ಸಂಸ್ಕರಣೆ ಹಾಗೂ ಮಾರುಕಟ್ಟೆ ಮಾಡುವ ಬಗ್ಗೆ ಸಂಬಂಧಿಸಿದ ಸಂಸ್ಥೆಗಳಿಗೆ ಸಲಹೆಗಳನ್ನು ನೀಡಲಾಗಿದೆ. ಅವುಗಳನ್ನು ಉದ್ಯಮಿಗಳು, ಖಾಸಗಿ ಸಂಸ್ಥೆಗಳು ಮತ್ತು ರಾಜ್ಯ ಸರ್ಕಾರಗಳಿಗೂ ಸೂಚಿಸಲಾಗಿದೆ.

ಐಸಿಎಆರ್ ಅಡಿ ಬರುವ ಮೀನುಗಾರಿಕಾ ಸಂಶೋಧನಾ ಕೇಂದ್ರ, ಮೀನುಗಾರಿಕೆಯಲ್ಲಿ ತೊಡಗಿರುವವರಿಗೆ ವಿತರಿಸಲು ಮೀನು ಉತ್ಪಾದನೆ ಕುರಿತ ಮಾಹಿತಿ, ಶಿಕ್ಷಣ ಮತ್ತು ಸಂವಹನ(ಐಇಸಿ) ಸಾಮಗ್ರಿಗಳನ್ನು ಸಿದ್ಧಪಡಿಸಿದೆ. ಐಸಿಎಆರ್ ನ ಹೈನುಗಾರಿಕೆ, ಪಶುಸಂಗೋಪನೆ ಮತ್ತು ಕುಕ್ಕುಟ ಸಂಶೋಧನಾ ಕೇಂದ್ರಗಳು ಮೇವು ಹಾಕುವುದು, ಅವುಗಳನ್ನು ಬೆಳೆಸುವುದು ಮತ್ತು ಆ ಪ್ರಾಣಿಗಳ ಆರೋಗ್ಯ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸುತ್ತಿವೆ, ಅಲ್ಲದೆ ಕೋವಿಡ್-19 ಸೋಂಕಿನ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಹಾಲಿನ ಕನಿಷ್ಠ ಸಂಸ್ಕರಣೆ, ಮೊಟ್ಟೆ ಮತ್ತು ಚಿಕನ್ ಬಳಕೆ ಉತ್ತೇಜನಕ್ಕೂ ಕ್ರಮ ಕೈಗೊಂಡಿದೆ.

ಶ್ರೀ ತೋಮರ್ ಅವರ ಸಲಹೆಯಂತೆ ಐಸಿಎಆರ್, ಎಲ್ಲ ಕೃಷಿ ವಿಶ್ವವಿದ್ಯಾಲಯದ ಉಪ ಕುಲಪತಿಗಳಿಗೆ ಆನ್ ಲೈನ್ ಮೂಲಕ ತರಗತಿಗಳನ್ನು ತೆಗೆದುಕೊಳ್ಳಲು ನಿರ್ದೇಶನ ನೀಡಿತ್ತು ಮತ್ತು ಬಹುತೇಕ ಮಂದಿ ಆನ್ ಲೈನ್ ಉಪಯೋಗಿಸಿ ಈಗಾಗಲೇ ಆ ಕೆಲಸವನ್ನು ಮಾಡುತ್ತಿದ್ದಾರೆ. ಐಸಿಎಆರ್ ತನ್ನ ಮೂರು ಸಂಶೋಧನಾ ಕೇಂದ್ರಗಳಾದ ಬೋಪಾಲ್ ನ ನಿಹ್ಸಾದ್, ಇಝಾತ್ ನಗರದ ಐವಿಆರ್ ಐ ಮತ್ತು ಹಿಸಾರ್ ನ ಎನ್ ಆರ್ ಸಿ ಆನ್ ಇಕ್ವೈನ್ಸ್ ಗಳಲ್ಲಿ ಮಾನವರಿಗೆ ತಗುಲಿರುವ ಕೋವಿಡ್-19 ಪರೀಕ್ಷೆಗಳನ್ನು ನಡೆಸಲು ಅಧಿಸೂಚನೆ ಹೊರಡಿಸಿದೆ. ಈ ಸಂಸ್ಥೆಗಳನ್ನು ಮೃಗಾಲಯದಲ್ಲಿನ ಪ್ರಾಣಿಗಳ ಕೋವಿಡ್ ಮಾದರಿಗಳ ಪರೀಕ್ಷೆಗೆ ನಿಯೋಜಿಸಲ್ಪಟ್ಟಿದೆ, ಈ ಕುರಿತು ಪರಿಸರ ಮತ್ತು ಅರಣ್ಯ ಸಚಿವಾಲಯ ಆದೇಶಿಸಿದೆ. ಭೂಪಾಲ್ ನ ನಿಹ್ಸಾದ್, ಕೋವಿಡ್-19 ಮಾದರಿಗಳ 23 ಶಂಕಿತ ಪರೀಕ್ಷೆಗಳನ್ನು ನಡೆಸಲಾಗಿದೆ ಮತ್ತು ಎಲ್ಲವೂ ನೆಗೆಟಿವ್ ಎಂದು ಕಂಡುಬಂದಿದೆ. ಐಸಿಎಆರ್ ಹವಾಮಾನ ವೈಪರೀತ್ಯ, ರೋಗ ಸೂಕ್ಷ್ಮಾಣುಗಳ ವೈಜ್ಞಾನಿಕ ಅಧ್ಯಯನ ಮತ್ತು ಇತರೆ ರೋಗಗಳ ಕುರಿತು ಅಧ್ಯಯನಗಳು ನಡೆದಿವೆ ಎಂದು ಮೊಹಪಾತ್ರ ಹೇಳಿದರು. ಮೃಗಾಲಯಗಳಲ್ಲಿನ ಪ್ರಾಣಿಗಳು ಮತ್ತು ಪಕ್ಷಿಗಳಿಂದ ಸೋಂಕು ಹರಡುತ್ತಿರುವ ಕುರಿತು ಸಂಶೋಧನೆಗಳು ನಡೆಯುತ್ತಿವೆ. ಮನುಷ್ಯರಿಂದ ಪ್ರಾಣಿಗಳಿಗೆ ಮತ್ತು ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಕುರಿತು ಸಂಶೋಧನೆ ಪ್ರಗತಿಯಲ್ಲಿದೆ, ಬೆಳೆಗಳು ಇಂತಹ ಸವಾಲು ಎದುರಿಸಲು ನೆರವಾಗಲಿದೆಯೇ ಎಂಬುದರ ಬಗ್ಗೆಯೂ ಸಂಶೋಧನೆ ಪ್ರಗತಿಯಲ್ಲಿದೆ.

ಐಸಿಎಆರ್ ಕೇಂದ್ರಗಳು ಮತ್ತು ಕೆವಿಕೆಗಳು, ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಆರೋಗ್ಯ ಸೇತು ಮೊಬೈಲ್ ಅಪ್ಲಿಕೇಶನ್ ಬಳಕೆ ಕುರಿತ ಸಂದೇಶವನ್ನು ಪ್ರಮುಖವಾಗಿ ಪ್ರಚುರಪಡಿಸುತ್ತಿವೆ. ಅದರ ಪರಿಣಾಮ 2.92 ಲಕ್ಷ ರೈತರು ಮೊಬೈಲ್ ಆಪ್ ಅನ್ನು ಡೌನ್ ಲೋಡ್ ಮಾಡಿಕೊಂಡು ಅದನ್ನು ಬಳಕೆ ಮಾಡುತ್ತಿರುವುದರಿಂದ ಅದು ಒಟ್ಟು 25.04 ಲಕ್ಷ ರೈತರಿಗೆ ತಲುಪಿದಂತಾಗಿದೆ.

ಶ್ರೀ ತೋಮರ್ ಅವರ ನಿರ್ದೇಶನದಂತೆ ಐಸಿಎಆರ್, ದೇಶಾದ್ಯಂತ ಇರುವ ತನ್ನ ನಾನಾ ಸಂಸ್ಥೆಗಳಿಗೆ ಸೇರಿದ ಅತಿಥಿ ಗೃಹಗಳನ್ನು ಕ್ವಾರಂಟೈನ್ ಸೌಕರ್ಯಕ್ಕೆ ಮತ್ತು ಆರ್ ಟಿ-ಪಿಸಿಆರ್ ಉಪಕರಣಕ್ಕೆ ಹಾಗೂ ಕೋವಿಡ್-19 ವಿರುದ್ಧದ ಕಾರ್ಯಾಚರಣೆ ಸಿಬ್ಬಂದಿಗೆ ಒದಗಿಸಿದೆ. ಡಾ. ಮೊಹಪಾತ್ರ, ಐಸಿಎಆರ್ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ನೆರವು ನೀಡುತ್ತಿದೆ ಮತ್ತು ಉಚಿತ ಆಹಾರವನ್ನು ಪೂರೈಸಲಾಗುತ್ತಿದೆ. ಡಿಎಆರ್ ಇ/ ಐಸಿಎಆರ್ ಕುಟುಂಬ, ಪಿಎಂ - ಕೇರ್ಸ್ ನಿಧಿಗೆ 6.06 ಕೋಟಿ ರೂ. ದೇಣಿಗೆ ನೀಡಿದೆ.

 

***


(Release ID: 1614569) Visitor Counter : 143