ರೈಲ್ವೇ ಸಚಿವಾಲಯ
ಮಾರ್ಚ್ 23 ರಿಂದೀಚೆಗೆ ರೈಲ್ವೆಯಿಂದ ಅಂದಾಜು 6.75 ಲಕ್ಷ ವ್ಯಾಗನ್ ಗಳಲ್ಲಿ ಪದಾರ್ಥಗಳ ಸಾಗಾಣೆ
Posted On:
10 APR 2020 4:56PM by PIB Bengaluru
ಮಾರ್ಚ್ 23 ರಿಂದೀಚೆಗೆ ರೈಲ್ವೆಯಿಂದ ಅಂದಾಜು 6.75 ಲಕ್ಷ ವ್ಯಾಗನ್ ಗಳಲ್ಲಿ ಪದಾರ್ಥಗಳ ಸಾಗಾಣೆ
4.5 ಲಕ್ಷ ವ್ಯಾಗನ್ ಗಳಲ್ಲಿ ಆಹಾರ ಧಾನ್ಯ, ಉಪ್ಪು, ಸಕ್ಕರೆ, ಎಣ್ಣೆ, ಕಲ್ಲಿದ್ದಲು, ಪೆಟ್ರೋಲಿಯಂ ಉತ್ಪನ್ನಗಳು ಸೇರಿವೆ
ಕಳೆದ ಒಂದು ವಾರದಿಂದೀಚೆಗೆ 2.5 ಲಕ್ಷಕ್ಕೂ ಅಧಿಕ ವ್ಯಾಗನ್ ಪದಾರ್ಥಗಳ ಭರ್ತಿ; ಅದರಲ್ಲಿ 1.55 ಲಕ್ಷ ವ್ಯಾಗನ್ ಗಳಲ್ಲಿ ಅತ್ಯವಶ್ಯಕ ವಸ್ತುಗಳು
ಲಾಕ್ ಡೌನ್ ಅವಧಿಯಲ್ಲಿ ಭಾರತೀಯ ರೈಲ್ವೆಯಿಂದ ದೇಶಾದ್ಯಂತ ಎಲ್ಲಾ ಭಾಗಕ್ಕೂ ಅತ್ಯವಶ್ಯಕ ವಸ್ತುಗಳ ಸಾಗಾಣೆ ಮುಂದುವರಿಕೆ; ಕೃಷಿ, ರಾಸಾಯನಿಕ ಮತ್ತು ರಸಗೊಬ್ಬರ, ಆಹಾರ ಮತ್ತು ಸಾರ್ವಜನಿಕ ಪಡಿತರ ಸೇರಿದಂತೆ ಹಲವು ಸಚಿವಾಲಯಗಳು, ಸಂಘಟನೆಗಳೊಂದಿಗೆ ಅತ್ಯವಶ್ಯಕ ವಸ್ತುಗಳ ಲಭ್ಯತೆ ಖಾತ್ರಿಪಡಿಸಲು ನಿರಂತರ ಕಾರ್ಯ
ದೇಶಾದ್ಯಂತ ಕೋವಿಡ್-19 ಪ್ರತಿಕೂಲ ಪರಿಣಾಮ ಮತ್ತು ಸವಾಲುಗಳನ್ನು ನಿರ್ವಹಿಸಲು ಸರ್ಕಾರ ಕೈಗೊಂಡಿರುವ ಪ್ರಯತ್ನಗಳ ಬಲವರ್ಧನೆಗೆ ರಾಷ್ಟ್ರವ್ಯಾಪಿ ಲಾಕ್ ಡೌನ್ ವೇಳೆ ಭಾರತೀಯ ರೈಲ್ವೆ ತನ್ನ ಸರಕು ಸಾಗಾಣೆ ಸೇವೆಗಳ ಮೂಲಕ ಅತ್ಯವಶ್ಯಕ ಸಾಮಗ್ರಿಗಳನ್ನು ನಿರಂತರವಾಗಿ ಪೂರೈಸುವ ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರ ಅತ್ಯವಶ್ಯಕ ವಸ್ತುಗಳ ಪೂರೈಕೆ ಸರಣಿಯನ್ನು ಕಾಯ್ದುಕೊಳ್ಳಲು ವಿಶೇಷ ಒತ್ತು ನೀಡಿದೆ. ಅಲ್ಲದೆ ರಾಜ್ಯಗಳು ಮತ್ತು ಅಂತರ ರಾಜ್ಯಗಳ ನಡುವೆ ಕೃಷಿ ಉತ್ಪನ್ನವನ್ನು ಯಾವುದೇ ಅಡೆತಡೆ ಇಲ್ಲದೆ ಸಾಗಾಣೆ ಮಾಡಲು ಕ್ರಮಗಳನ್ನು ಕೈಗೊಂಡಿದೆ.
2020ರ ಮಾರ್ಚ್ 23 ರಿಂದೀಚೆಗೆ ರೈಲ್ವೆ, ಸುಮಾರು 6.75 ಲಕ್ಷ ವ್ಯಾಗನ್ ಗಳಲ್ಲಿ ಸರಕು ಸಾಮಗ್ರಿಗಳನ್ನು ಸಾಗಣೆ ಮಾಡಿದೆ. ಅವುಗಳಲ್ಲಿ 4.50 ಲಕ್ಷ ವ್ಯಾಗನ್ ಗಳಲ್ಲಿ ಅತ್ಯವಶ್ಯಕ ಸಾಮಗ್ರಿಗಳಾದ ಆಹಾರಧಾನ್ಯ, ಉಪ್ಪು, ಸಕ್ಕರೆ, ಎಣ್ಣೆ, ಕಲ್ಲಿದ್ದಲು ಮತ್ತು ಪೆಟ್ರೋಲಿಯಂ ಉತ್ಪನ್ನಗಳಿದ್ದವು. 2020ರ ಏಪ್ರಿಲ್ 2 ರಿಂದ 8ರ ವರೆಗಿನ ವಾರದಲ್ಲಿ ರೈಲ್ವೆ ಒಟ್ಟ 258503 ವ್ಯಾಗನ್ ಗಳಲ್ಲಿ ಸಾಮಗ್ರಿಗಳನ್ನು ಸಾಗಾಣೆ ಮಾಡಿದ್ದು, ಇವುಗಳಲ್ಲಿ 155512 ವ್ಯಾಗನ್ ಗಳು ಅತ್ಯವಶ್ಯಕ ಸಾಮಗ್ರಿಗಳಾಗಿವೆ. ಇವುಗಳಲ್ಲಿ 21247 ವ್ಯಾಗನ್ ಆಹಾರಧಾನ್ಯ, 11336 ವ್ಯಾಗನ್ ರಸಗೊಬ್ಬರ, 124759 ವ್ಯಾಗನ್ ಕಲ್ಲಿದ್ದಲು ಮತ್ತು 7665 ವ್ಯಾಗನ್ ಪೆಟ್ರೋಲಿಯಂ ಉತ್ಪನ್ನಗಳು ಸೇರಿವೆ.
ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ 21 ದಿನಗಳ ಲಾಕ್ ಡೌನ್ ಘೋಷಿಸಿದ್ದರೂ ಸಹ ಕೇಂದ್ರ ಸರ್ಕಾರ, ಕೃಷಿ ಮತ್ತು ಕೃಷ ಸಂಬಂಧಿ ಚಟುವಟಿಕೆಗಳಿಗೆ ಕೆಲವೊಂದು ವಿನಾಯಿತಿಗಳನ್ನು ಘೋಷಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಆ ಮೂಲಕ ರೈತರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಈ ಮಧ್ಯೆ, ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ರಸಗೊಬ್ಬರ ಇಲಾಖೆ, ಮುಂಬರುವ ಮುಂಗಾರು ಹಂಗಾಮಿಗಾಗಿ ಅಗತ್ಯ ರಸಗೊಬ್ಬರ ಪೂರೈಕೆಯನ್ನು ಖಾತ್ರಿಪಡಿಸಲು ಎಲ್ಲ ಕ್ರಮಗಳನ್ನು ಕೈಗೊಂಡಿದೆ. ರಸಗೊಬ್ಬರ ಇಲಾಖೆ, ರಸಗೊಬ್ಬರದ ಉತ್ಪಾದನೆ, ಸಾಗಾಣೆ ಮತ್ತು ಲಭ್ಯತೆ ಮೇಲೆ ತೀವ್ರ ನಿಗಾ ಇರಿಸಿದೆ ಮತ್ತು ಅದು ರಾಜ್ಯ ಸರ್ಕಾರಗಳು ಮತ್ತು ರೈಲ್ವೆ ಸಚಿವಾಲಯದ ಜೊತೆ ನಿರಂತರ ಸಂಪರ್ಕದಲ್ಲಿದೆ. ಕೋವಿಡ್-19 ಲಾಕ್ ಡೌನ್ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ, ಭಾರತೀಯ ಆಹಾರ ನಿಗಮದೊಂದಿಗೆ ನಿಕಟವಾಗಿ ಕಾರ್ಯೋನ್ಮುಖವಾಗಿದ್ದು, ಮಾರ್ಚ್ 24ರಿಂದೀಚೆಗೆ ದೇಶಾದ್ಯಂತ ಸುಮಾರು 20 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು 800ಕ್ಕೂ ಅಧಿಕ ರೇಕ್ ಗಳಲ್ಲಿ ಸಾಗಾಣೆ ಮಾಡಿದೆ. ಹೆಚ್ಚುತ್ತಿರುವ ಆಹಾರಧಾನ್ಯಗಳ ಬೇಡಿಕೆಯನ್ನು ಈಡೇರಿಸಲು ಎಫ್ ಸಿಐ ಸನ್ನದ್ಧವಾಗಿದ್ದು, ಅದು ಬಹುತೇಕ ರೈಲು ಮೂಲಕ ಅಕ್ಕಿ ಮತ್ತು ಗೋಧಿಯ ಬೇಡಿಕೆಯನ್ನು ಪೂರೈಸುತ್ತಿದೆ.
ರೈಲ್ವೆ 109 ಸರಕು ಸಾಗಾಣೆ ರೈಲುಗಳ ವೇಳಾಪಟ್ಟಿಯನ್ನು ಪರಿಚಯಿಸಿದೆ. ಅದರಲ್ಲಿ ಅತ್ಯವಶ್ಯಕ ವಸ್ತುಗಳಲ್ಲದೆ, ಹಾಳಾಗುವ ತೋಟಗಾರಿಕಾ ಉತ್ಪನ್ನಗಳು, ಬೀಜ, ಹಾಲು ಮತ್ತು ಹಾಲಿನ ಉತ್ಪನ್ನಗಳು ಸಹ ಸೇರಿವೆ. ಅಂದಾಜು 59 ಮಾರ್ಗಗಳಲ್ಲಿ(109 ರೈಲು) ರೈಲುಗಳು ವಿಶೇಷ ಪಾರ್ಸಲ್ ಸೇವೆಯನ್ನು ಲಾಕ್ ಡೌನ್ ನಂತರ ಒದಗಿಸುತ್ತಿವೆ. ಇದರೊಂದಿಗೆ ದೇಶಾದ್ಯಂತ ಬಹುತೇಕ ನಗರಗಳೊಂದಿಗೆ ಸಂಪರ್ಕ ಹೊಂದಿರುವ ರೈಲ್ವೆ, ಹಾಳಾಗಬಹುದಾದ ಪದಾರ್ಥಗಳನ್ನು ಅತ್ಯಂತ ವೇಗವಾಗಿ ತಲುಪಿಸುತ್ತಿದೆ. ಅಗತ್ಯಕ್ಕೆ ತಕ್ಕಂತೆ ಈ ಸೇವೆಗಳನ್ನು ಇನ್ನಷ್ಟು ಹೆಚ್ಚಿಸಲಾಗುವುದು.
ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ(ಎಂಎಚ್ಎ), ವಿಪತ್ತು ನಿರ್ವಹಣಾ ಕಾಯ್ದೆಯಡಿ ಹೊರಡಿಸಿರುವ ತನ್ನ ಆದೇಶದಲ್ಲಿ ಅತ್ಯವಶ್ಯಕ ವಸ್ತುಗಳಾದ ಆಹಾರಉತ್ಪನ್ನಗಳು/ಔಷಧಗಳು ಮತ್ತು ವೈದ್ಯಕೀಯ ಸಲಕರಣೆಗಳ ಉತ್ಪಾದನೆ ಮತ್ತು ಸಾಗಾಣೆ ಹಾಗೂ ಪೂರೈಕೆ ಸರಣಿ ಚಟುವಟಿಕೆಗಳನ್ನು ಮುಂದುವರಿಸಲು ಅವಕಾಶ ಮಾಡಿಕೊಡಲಾಗಿದೆ.
****
(Release ID: 1613143)
Visitor Counter : 162
Read this release in:
Assamese
,
English
,
Urdu
,
Hindi
,
Marathi
,
Bengali
,
Punjabi
,
Gujarati
,
Odia
,
Tamil
,
Telugu