ಗೃಹ ವ್ಯವಹಾರಗಳ ಸಚಿವಾಲಯ

ಕೋವಿಡ್-19 ವಿರುದ್ಧದ ಲಾಕ್ ಡೌನ್ ಕಠಿಣ ಜಾರಿಗೆ ಎಲ್ಲ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಗೃಹ ಸಚಿವಾಲಯ ನಿರ್ದೇಶನ

Posted On: 10 APR 2020 3:58PM by PIB Bengaluru

ಕೋವಿಡ್-19 ವಿರುದ್ಧದ ಲಾಕ್ ಡೌನ್ ಕಠಿಣ ಜಾರಿಗೆ ಎಲ್ಲ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಗೃಹ ಸಚಿವಾಲಯ ನಿರ್ದೇಶನ

ಯಾವುದೇ ಧಾರ್ಮಿಕ/ ಸಾಮಾಜಿಕ ಸಭೆ, ಮೆರವಣಿಗೆಗೆ ಅವಕಾಶ ನೀಡದಂತೆ ಸೂಚನೆ

 

2020ರ ಏಪ್ರಿಲ್ ತಿಂಗಳಲ್ಲಿ ಹಲವು ಹಬ್ಬಗಳು ಇರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್ ಎ), ಕೋವಿಡ್-19 ವಿರುದ್ಧದ ಲಾಕ್ ಡೌನ್ ಕಠಿಣ ಜಾರಿಗೆ ಕ್ರಮ ಕೈಗೊಳ್ಳಬೇಕು ಮತ್ತು ಯಾವುದೇ ರೀತಿಯ ಧಾರ್ಮಿಕ/ ಸಾಮಾಜಿಕ ಸಭೆ, ಮೆರವಣಿಗೆಗೆ ಅವಕಾಶ ನೀಡಬಾರದು ಎಂದು ಎಲ್ಲ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ.

ಲಾಕ್ ಡೌನ್ ಕ್ರಮದ ಬಗ್ಗೆ ಹೊರಡಿಸಿರುವ ಸಮಗ್ರ ಮಾರ್ಗಸೂಚಿಯಲ್ಲಿ ಉಲ್ಲೇಖಿಸಿರುವಂತೆ ಎಲ್ಲ ಬಗೆಯ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಎಲ್ಲ ಜಿಲ್ಲಾಡಳಿತಗಳು ಮತ್ತು ಜಾರಿ ಸಂಸ್ಥೆಗಳಿಗೆ ಮಾಹಿತಿ ನೀಡಬೇಕು ಮತ್ತು ಸಾರ್ವಜನಿಕ ಶಾಂತಿ ಮತ್ತು ಸಾಮರಸ್ಯಕ್ಕೆ ಧಕ್ಕೆ ಆಗದಂತೆ ಎಲ್ಲ ಬಗೆಯ ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆಗೆ ಅಗತ್ಯ ಮುಂಜಾಗ್ರತಾ ಮತ್ತು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದಾದರೂ ಆಕ್ಷೇಪಾರ್ಹ ಮಾಹಿತಿ, ಸಂವಹನ ಜಾಹೀರಾತುಗಳು ಹರಿದಾಡುತ್ತಿದ್ದರೆ ಅದರ ವಿರುದ್ಧವೂ ಸೂಕ್ತ ನಿಗಾ ಇಡುವಂತೆ ಆದೇಶಿಸಲಾಗಿದೆ.

ಮಾರ್ಗಸೂಚಿಗಳಲ್ಲಿರುವ ಅಂಶಗಳನ್ನು ಎಲ್ಲ ಸಾರ್ವಜನಿಕ ಪ್ರಾಧಿಕಾರಗಳು, ಸಾಮಾಜಿಕ/ಧಾರ್ಮಿಕ ಸಂಸ್ಥೆಗಳು ಮತ್ತು ನಾಗರಿಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರಚಾರ ಮಾಡುವಂತೆಯೂ ಸಂವಹನದಲ್ಲಿ ಸೂಚಿಸಿ ಮನವಿ ಮಾಡಲಾಗಿದೆ. ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿದರೆ ವಿಪ್ಪತ್ತು ನಿರ್ವಹಣಾ ಕಾಯಿದೆ 2005ರಡಿ ಹಾಗೂ ಭಾರತೀಯ ದಂಡ ಸಂಹಿತೆಯ ನಿರ್ದಿಷ್ಟ ಕಲಂಗಳಡಿ ದಂಡನಾ ಕ್ರಮಗಳನ್ನು ಕಾನೂನು ಜಾರಿ ಸಂಸ್ಥೆಗಳು ಕೈಗೊಳ್ಳಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ 24.03.2020 ರಂದು ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ದೇಶಾದ್ಯಂತ ಲಾಕ್ ಡೌನ್ ನಿಯಮಗಳನ್ನು ಜಾರಿಗೊಳಿಸುವ ಕುರಿತು ಸಮಗ್ರ ಮಾರ್ಗಸೂಚಿಗಳನ್ನು ಒಳಗೊಂಡ ಆದೇಶ ಹೊರಡಿಸಿ ಅದನ್ನು ಭಾರತ ಸರ್ಕಾರದ ಎಲ್ಲ ಸಚಿವಾಲಯಗಳು/ಇಲಾಖೆಗಳು, ರಾಜ್ಯ ಸರ್ಕಾರಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಕಳುಹಿಸಿತ್ತು. ಆನಂತರ 25.03.2020, 27.03.2020, 2.04.2020 ಮತ್ತು 03.04.2020ರಂದು ಮಾರ್ಗಸೂಚಿಯಲ್ಲಿ ಕೆಲವು ತಿದ್ದುಪಡಿಗಳನ್ನು ಮಾಡಲಾಗಿತ್ತು. ಸಮಗ್ರ ಮಾರ್ಗಸೂಚಿಯ ಕಲಂ 9 ಮತ್ತು 10 ರಲ್ಲಿ ಯಾವುದೇ ಧಾರ್ಮಿಕ ಸಭೆ, ಸಮಾರಂಭಗಳಿಗೆ ಅನುಮತಿ ನೀಡಬಾರದು, ಎಲ್ಲ ಬಗೆಯ ಸಾಮಾಜಿಕ/ಸಾಂಸ್ಕೃತಿಕ/ಧಾರ್ಮಿಕ ಕಾರ್ಯಕ್ರಮಗಳು/ ಸಭೆ-ಸಮಾರಂಭ ಮತ್ತು ಕಾರ್ಯಕ್ರಮಗಳನ್ನು ನಿರ್ಬಂಧಿಸಲಾಗಿದೆ ಎಂದು ಆದೇಶಿಸಲಾಗಿದೆ.

*****

 



(Release ID: 1613072) Visitor Counter : 153