ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ

ಕೋವಿಡ್-19 ಸಂಬಂಧಿ ವೈದ್ಯಕೀಯ ವಸ್ತುಗಳನ್ನು ಉತ್ಪಾದಿಸುವ ಎಂ.ಎಸ್.ಎಂ.ಇ. ಗಳಿಗೆ ಆದ್ಯತೆ ಮೇಲೆ ಸವಲತ್ತುಗಳನ್ನು ಒದಗಿಸಬೇಕು: ಶ್ರೀ ನಿತಿನ್ ಗಡ್ಕರಿ

Posted On: 09 APR 2020 9:07PM by PIB Bengaluru

ಕೋವಿಡ್-19 ಸಂಬಂಧಿ ವೈದ್ಯಕೀಯ ವಸ್ತುಗಳನ್ನು ಉತ್ಪಾದಿಸುವ ಎಂ.ಎಸ್.ಎಂ.ಇ. ಗಳಿಗೆ ಆದ್ಯತೆ ಮೇಲೆ ಸವಲತ್ತುಗಳನ್ನು ಒದಗಿಸಬೇಕು: ಶ್ರೀ ನಿತಿನ್ ಗಡ್ಕರಿ

 

ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಪರಿಣಾಮದ ಹಿನ್ನೆಲೆಯಲ್ಲಿ ಸರಕಾರಿ ಯಂತ್ರದ ತಯಾರಿ ವ್ಯವಸ್ಥೆಯನ್ನು ಪರಾಮರ್ಶಿಸಲು ಕೇಂದ್ರ ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂ.ಎಸ್.ಎಂ.ಇ.) ಸಚಿವರಾದ ಶ್ರೀ ನಿತಿನ್ ಗಡ್ಕರಿ ಅವರು ಸಚಿವಾಲಯದ ಹಿರಿಯ ಅಧಿಕಾರಿಗಳ ಜೊತೆ ವೀಡಿಯೋ ಕಾನ್ಫರೆನ್ಸ್ ನಡೆಸಿದರು. ಎಂ.ಎಸ್.ಎಂ.ಇ. ಸಹಾಯಕ ಸಚಿವರಾದ ಶ್ರೀ ಪ್ರತಾಪ ಚಂದ್ರ ಸಾರಂಗಿ. ಕಾರ್ಯದರ್ಶಿ ಡಾ. ಅರುಣ್ ಕುಮಾರ್ ಪಾಂಡಾ, ಕೆ.ವಿ.ಐ.ಸಿ. ಅಧ್ಯಕ್ಷ ಶ್ರೀ ವಿ.ಕೆ. ಸಕ್ಸೇನಾ, ಎಸ್.ಎಸ್. ಮತ್ತು ಡಿ.ಸಿ.ಶ್ರೀ ರಾಮ ಮೋಹನ್ ಮಿಶ್ರಾ ಮತ್ತು ಸಚಿವಾಲಯದ ಇತರ ಅಧಿಕಾರಿಗಳು , ದೇಶದಲ್ಲಿಯ ವಿವಿಧ ಕ್ಷೇತ್ರ ಅಧಿಕಾರಿಗಳು ಸಂಪರ್ಕದಲ್ಲಿದ್ದರು. ಎರಡೂವರೆ ಗಂಟೆ ಕಾಲ ನಡೆದ ಈ ರಚನಾತ್ಮಕ ಚರ್ಚೆಯಲ್ಲಿ ಉದ್ಯಮ ವಲಯಕ್ಕೆ ದೊಡ್ಡ ಹೊಡೆತ ನೀಡಿರುವ ಜಾಗತಿಕ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಉಂಟಾಗಿರುವ ಪರಿಸ್ಥಿತಿ ಮತ್ತು ಕೈಗೊಂಡ ಕ್ರಮಗಳ ಬಗ್ಗೆ ಸಚಿವರು ಪರಾಮರ್ಶೆ ನಡೆಸಿದರು. ಹಣಕಾಸು ಸಚಿವಾಲಯ ಮತ್ತು ಆರ್.ಬಿ.ಐ. ಗಳು ಇದುವರೆಗೆ ಘೋಷಿಸಿದ ಕ್ರಮಗಳ ಬಗ್ಗೆಯೂ ಚರ್ಚಿಸಲಾಯಿತು ಮತ್ತು ಎಂ.ಎಸ್.ಎಂ.ಇ. ವಲಯದ ಮೇಲೆ ಕೋವಿಡ್ -19 ರ ಪರಿಣಾಮವನ್ನು ಕನಿಷ್ಟ ಪ್ರಮಾಣಕ್ಕೆ ಇಳಿಸಲು ಸಚಿವಾಲಯವು ಕೈಗೊಂಡ ಕ್ರಮಗಳ ಬಗ್ಗೆಯೂ ಚರ್ಚೆ ನಡೆಯಿತು.

ದೇಶವೀಗ ಎರಡು ಯುದ್ದಗಳನ್ನು ನಡೆಸಬೇಕಾಗಿದೆ, ಒಂದು ಯುದ್ದ ಕೋವಿಡ್ ವಿರುದ್ದ ಮತ್ತು ಇನ್ನೊಂದು ಯುದ್ದ ಆರ್ಥಿಕ ರಂಗದಲ್ಲಿ ನಡೆಸಬೇಕಾಗಿದೆ ಎಂದು ಸಚಿವರು ಹೇಳಿದರು. ಸಚಿವಾಲಯದ ಅಧಿಕಾರಿಗಳ ಶ್ರಮವನ್ನು ಶ್ಲಾಘಿಸಿದ ಅವರು ನೈರ್ಮಲ್ಯೀಕರಣ , ಸಾಮಾಜಿಕ ಅಂತರ ಪಾಲನೆ ಮತ್ತು ಪಿ.ಪಿ.ಇ.ಗಳಂತಹ ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು ಎಂಬ ಅಂಶದತ್ತ ಅವರು ಗಮನ ಸೆಳೆದರು. ಕೋವಿಡ್ -19 ರಿಂದಾಗಿ ವೆಂಟಿಲೇಟರ್, ಪಿ.ಪಿ.ಇ. ಕಿಟ್ ಗಳು, ಮಾಸ್ಕ್ ಗಳು ಮತ್ತು ಸ್ಯಾನಿಟೈಸರ್ ಗಳಂತಹ ವೈದ್ಯಕೀಯ ವಸ್ತುಗಳಿಗೆ ಬೇಡಿಕೆ ಕಳೆದ ಒಂದು ತಿಂಗಳಲ್ಲಿ ಇದ್ದಕ್ಕಿದ್ದಂತೆ ಹೆಚ್ಚಿದೆ ಮತ್ತು ಎಂ.ಎಸ್.ಎಂ.ಇ. ಗಳು ಈ ವಸ್ತುಗಳ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಅಂತರವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿವೆ . ಈ ಚಟುವಟಿಕೆಗಳಲ್ಲಿ ತೊಡಗಿರುವ ಎಂ.ಎಸ್.ಎಂ.ಇ. ಗಳಿಗೆ ಆದ್ಯತೆಯಾಧಾರದಲ್ಲಿ ಸೌಲಭ್ಯಗಳನ್ನು ಒದಗಿಸಿಕೊಡಬೇಕಾಗುತ್ತದೆ ಎಂದೂ ಅವರು ಹೇಳಿದರು. ಸಚಿವಾಲಯದ ವಿವಿಧ ಯೋಜನೆಗಳ ಅಡಿಯಲ್ಲಿ 2019-20 ನೇ ಸಾಲಿನ ನಿಧಿಯನ್ನು ಪೂರ್ಣ ಪ್ರಮಾಣದಲ್ಲಿ ವಿನಿಯೋಗಿಸಿ ಗರಿಷ್ಟ ವಿನಿಯೋಗದ ದಾಖಲೆಯನ್ನು ಸಚಿವಾಲಯ ಮಾಡಬಹುದು ಎಂಬುದರತ್ತ ಅವರು ಗಮನ ಸೆಳೆದರು. ಸಚಿವಾಲಯದ ಇತರ ಸಂಸ್ಥೆಗಳಾದ ಖಾದಿ ಮತ್ತು ಗ್ರಾಮೋದ್ಯೋಗ (ಕೆ.ವಿ.ಐ.ಸಿ.), ರಾಷ್ಟ್ರೀಯ ಸಣ್ಣ ಕೈಗಾರಿಕಾ ನಿಗಮ( ಎನ್.ಎಸ್.ಐ.ಸಿ.) , ನಾರು ಮಂಡಳಿ, ತಂತ್ರಜ್ಞಾನ ಕೇಂದ್ರಗಳು (ಟಿ.ಸಿ.ಗಳು) ಮತ್ತು ಅಭಿವೃದ್ದಿ ಸಂಸ್ಥೆಗಳು ಕೈಗೊಂಡ ಕ್ರಮಗಳನ್ನು ಅವರು ಪರಾಮರ್ಶಿಸಿದರು.

ಲಾಕ್ ಡೌನ್ ಇದ್ದಾಗ್ಯೂ ದೇಶದ ವಿವಿಧೆಡೆಗಳಲ್ಲಿ ಆಹಾರ ಪ್ಯಾಕೆಟ್ ಗಳನ್ನು ವಿತರಿಸುವಲ್ಲಿ ಸಚಿವಾಲಯದ ಎಲ್ಲಾ ವಿವಿಧ ಸಂಸ್ಥೆಗಳು ತೊಡಗಿರುವ ಬಗ್ಗೆ ಸಚಿವರಿಗೆ ಮಾಹಿತಿ ನೀಡಲಾಯಿತು. ಕೆ.ವಿ.ಐ.ಸಿ.ಯು ಕರಕುಶಲ ಕಲ್ಯಾಣ ನಿಧಿ (ಎ.ಡಬ್ಲ್ಯು. ಎಫ್.) ಟ್ರಸ್ಟಿನಿಂದ ಪ್ರತಿಯೊಬ್ಬ ನೊಂದಾಯಿತ ಕರಕುಶಲಕರ್ಮಿಗೆ ತಿಂಗಳಿಗೆ ತಲಾ 1000 ರೂ. ಬಿಡುಗಡೆ ಮಾಡಲು ನಿರ್ಧರಿಸಿದೆ. ಇದಲ್ಲದೆ ಖಾದಿ ಸಂಸ್ಥೆಗಳಿಗೆ ಎ.ಡಬ್ಲ್ಯು.ಎಫ್. ದೇಣಿಗೆಯನ್ನು ಕರಕುಶಲ ಕರ್ಮಿಗಳ ಬ್ಯಾಂಕ್ ಖಾತೆಗಳಿಗೆ ಮೂರು ಕಂತುಗಳಲ್ಲಿ ಬಿಡುಗಡೆ ಮಾಡಲು ನಿರ್ದೇಶನ ನೀಡಲಾಗಿದೆ. ನಾರು ಮಂಡಳಿ ಮತ್ತು ಉದ್ಯಮವು ಪಿ.ಎಂ. ಕೇರ್ಸ್ ನಿಧಿಗೆ 8 ಲಕ್ಷ ರೂ ದೇಣಿಗೆ ನೀಡುವ ಬಗ್ಗೆ ವರದಿ ಮಾಡಲಾಯಿತು. ಎನ್.ಎಸ್.ಐ.ಸಿ.ಯು ಅರ್ಹ ಎಂ.ಎಸ್.ಎಂ.ಇ. ಗಳಿಗೆ ಮೂರು ತಿಂಗಳ ಮರುಪಾವತಿಗೆ ರಿಯಾಯಿತಿ ನೀಡಲುದ್ದೇಶಿಸಿರುವ ಬಗ್ಗೆ ವರದಿ ಮಾಡಿತು. 01/03/2020, ಕ್ಕೆ ಮೊದಲು ಬಿ.ಜಿ.ಯಿಂದ ಆರ್.ಎಂ.ಎ. ಪಡೆದ ಎಂ.ಎಸ್.ಎಂ.ಇ. ಗಳು ಈ ರಿಯಾಯತಿ ಪಡೆಯಲು ಅರ್ಹತೆ ಹೊಂದಿವೆ. 01/03/2020, ರಿಂದ 30/06/2020 ರ ನಡುವೆ ಎಸ್.ಪಿ.ಆರ್.ಎಸ್. ಪಟ್ಟಿ ಪ್ರಮಾಣಪತ್ರದ ಅವಧಿ ಮುಕ್ತಾಯಗೊಳ್ಳುವಂತಿದ್ದರೆ ಅದನ್ನು ಮುಂದುವರಿಸಲಾಗುವುದು. ಎಂ.ಎಸ್.ಎಂ. ಇ . ಮಾರ್ಟ್ ಇತ್ಯಾದಿಗಳಲ್ಲಿ ವಾರ್ಷಿಕ ಸದಸ್ಯತ್ವಕ್ಕೆ ನೀಡುವ 50 % ರಿಯಾಯತಿ ವಿಸ್ತರಣೆ ಇತ್ಯಾದಿಗಳ ಬಗ್ಗೆ ಎನ್.ಎಸ್.ಐ.ಸಿ. ವರದಿ ಮಾಡಿತು. ಪಿ.ಎಂ. ಕೇರ್ಸ್ ನಿಧಿಗೆ ತನ್ನ ಸಿ.ಎಸ್.ಆರ್. ನಿಧಿಯಿಂದ 100 ಲಕ್ಷ ರೂ. ಮತ್ತು ಹೆಚ್ಚುವರಿಯಾಗಿ ಎನ್.ಎಸ್.ಐ.ಸಿ.ಸಿಬ್ಬಂದಿಗಳ ಒಂದು ದಿನದ ವೇತನ 15 ಲಕ್ಷ ರೂ. ಗಳನ್ನು ದೇಣಿಗೆಯಾಗಿ ನೀಡಿರುವ ಬಗ್ಗೆ ಎನ್.ಎಸ್.ಐ.ಸಿ .ವರದಿ ನೀಡಿತು.

ಎಂ.ಎಸ್.ಎಂ.ಇ. ತಂತ್ರಜ್ಞಾನ ಕೇಂದ್ರಗಳು (ಟಿ.ಸಿ.ಎಸ್.) ಸ್ಯಾನಿಟೈಸರ್ಸ್, ಮುಖಗವಸುಗಳು, ಗೌನ್ ಗಳು, ಮುಖಕವಚಗಳು ಮತ್ತು ಆಸ್ಪತ್ರೆ ಪೀಠೋಪಕರಣಗಳ ನಿರ್ಮಾಣದಲ್ಲಿ ತೊಡಗಿವೆ ಎಂದು ಅವುಗಳ ಪರವಾಗಿ ವರದಿ ನೀಡಲಾಯಿತು . ಟಿ.ಸಿ.ಗಳು ತಮ್ಮ ವ್ಯವಸ್ಥೆಯೊಳಗೆ ಉತ್ಪಾದನೆಯನ್ನು ಹೆಚ್ಚಿಸುವ ಮತ್ತು ಎಂ.ಎಸ್.ಎಂ.ಇ.ಗಳಿಗೆ ಈ ವಸ್ತುಗಳನ್ನು ಉತ್ಪಾದಿಸುವಲ್ಲಿ ನೆರವಾಗುವ ಬಗ್ಗೆ ತಮ್ಮ ಬದ್ದತೆಯನ್ನು ವ್ಯಕ್ತಪಡಿಸಿವೆ. ಈ ವಸ್ತುಗಳೆಲ್ಲ ದೊಡ್ದ ಪ್ರಮಾಣದಲ್ಲಿ ಬೇಕಾಗುವುದರಿಂದ ಇದನ್ನು ಆದಷ್ಟು ಬೇಗ ಮಾಡುವಂತೆ ಸಚಿವರು ಒತ್ತಿ ಹೇಳಿದರು. ಟಿ.ಸಿ. ಗಳು ತಜ್ಞರ ಜೊತೆ ಮತ್ತು ವೆಂಟಿಲೇಟರುಗಳ ಹಾಗು ಕೊರೊನಾ ಪರೀಕ್ಷಾ ಕಿಟ್ ಗಳನ್ನು ತಯಾರಿಸುವುದಕ್ಕೆ ಅನುಮೋದಿಸಲ್ಪಟ್ತ ತಂತ್ರಜ್ಞಾನ ಈಗಾಗಲೇ ಸಾಮರ್ಥ್ಯ ಸಾಬೀತಾದ ಏಜೆನ್ಸಿಗಳ ಜೊತೆಗೂಡಿ ವೈದ್ಯಕೀಯ ಮಾನದಂಡಗಳಿಗೆ ಅನುಗುಣವಾಗಿ ಅವುಗಳ ಬೃಹತ್ ಪ್ರಮಾಣದ ಉತ್ಪಾದನೆಯಲ್ಲಿ ತೊಡಗಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು. ಟಿ.ಸಿ.ಗಳು ತಮ್ಮ ಸೌಲಭ್ಯಗಳನ್ನು ಕಾರ್ಮಿಕರ ಬಳಕೆಗೆ , ಹಾಸ್ಟೆಲ್ ಗಳನ್ನು ಪೊಲೀಸರಿಗೆ ಮತ್ತು ಐಸೋಲೇಶನ್ ಕೇಂದ್ರಗಳ ಸ್ಥಾಪನೆಗೆ ಒದಗಿಸಿಕೊಟ್ಟಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕ್ಷೀಣ ಸಂಖ್ಯೆಯಲ್ಲಿ ಖಾಯಂ ಸಿಬ್ಬಂದಿಗಳನ್ನು ಹೊಂದಿದ್ದರೂ ಟಿ.ಸಿ.ಗಳು ಒಂದು ದಿನದ ವೇತನ 22 ಲಕ್ಷ ರೂಪಾಯಿಗಳನ್ನು ಪಿ.ಎಂ. ಕೇರ್ಸ್ ನಿಧಿಗೆ ದೇಣಿಗೆ ನೀಡಿವೆ.

ಕೊನೆಯಲ್ಲಿ ಸಚಿವರು ಎಂ.ಎಸ್.ಎಂ.ಇ.ಗಳ ನೆರವಿಗೆ ಎಲ್ಲಾ ರೀತಿಯಿಂದಲೂ ಧಾವಿಸುವಂತೆ ಅಧಿಕಾರಿಗಳನ್ನು ಕೋರಿದರು. ಯೋಜನೆಗಳ ಬಗ್ಗೆ ಮೂರನೇ ವ್ಯಕ್ತಿಯಿಂದ ಮೌಲ್ಯಮಾಪನ ಮಾಡಿಸಿ ಅವುಗಳನ್ನು ಪರಿಷ್ಕರಿಸುವಂತೆ ಮತ್ತು ವಿಸ್ತರಿಸುವಂತೆ ಅವರು ಸೂಚಿಸಿದರು. ಎಂ.ಎಸ್.ಎಂ.ಇ. ಗೆ ಸಮನ್ವಯದ ಪರಿಹಾರವನ್ನು ಒದಗಿಸಲು ಎಲ್ಲಾ ಭಾಗೀದಾರರ ಜೊತೆ ಸಂಪರ್ಕದಲ್ಲಿರುವಂತೆ ಅವರು ತಮ್ಮ ಅಧಿಕಾರಿಗಳನ್ನು ಕೋರಿದರು.

 

***


(Release ID: 1612871) Visitor Counter : 251