ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳು ಮತ್ತು ಪ್ರಸಕ್ತ ಸ್ಥಿತಿಗತಿ ಕುರಿತು ಪರಾಮರ್ಶಿಸಿದ ಉನ್ನತಾಧಿಕಾರ ಸಮಿತಿ

Posted On: 09 APR 2020 5:54PM by PIB Bengaluru

ಕೋವಿಡ್-19 ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳು ಮತ್ತು ಪ್ರಸಕ್ತ ಸ್ಥಿತಿಗತಿ ಕುರಿತು ಪರಾಮರ್ಶಿಸಿದ ಉನ್ನತಾಧಿಕಾರ ಸಮಿತಿ

ಕೋವಿಡ್-19 ಕುರಿತು ಸುಳ್ಳು ಮಾಹಿತಿ ಹರಡುವುದನ್ನು ತಪ್ಪಿಸಲು ಆರೋಗ್ಯ ಸಚಿವಾಲಯ ಮತ್ತು ಸಂಬಂಧಿಸಿದ ಅಧಿಕೃತ ವೆಬ್ ಸೈಟ್ ಗಳ ಮಾಹಿತಿಗೆ ಒತ್ತು ನೀಡಲು ಡಾ. ಹರ್ಷವರ್ಧನ್ ಕರೆ

 

ಕೋವಿಡ್-19 ನಿಯಂತ್ರಣ ಕುರಿತಂತೆ ಸಚಿವರ ಸಮಿತಿಯನ್ನೊಳಗೊಂಡ ಉನ್ನತಾಧಿಕಾರ ಸಮಿತಿಯ ಸಭೆ ಇಲ್ಲಿನ ನಿರ್ಮಾಣ ಭವನದಲ್ಲಿ ಇಂದು ನಡೆಯಿತು. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಾಗರಿಕ ವಿಮಾನಯಾನ ಸಚಿವ ಶ್ರೀ ಹರ್ ದೀಪ್ ಸಿಂಗ್ ಪುರಿ, ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್, ಗೃಹ ಖಾತೆ ರಾಜ್ಯ ಸಚಿವ ಶ್ರೀ ನಿತ್ಯಾನಂದ ರೈ, ಬಂದರು ಮತ್ತು ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಶ್ರೀ ಮನ್ಸೂಖ್ ಮಾಂಡವೀಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವ ಶ್ರೀ ಅಶ್ವಿನ್ ಕುಮಾರ್ ಚೌಬೆ, ನೀತಿ ಆಯೋಗದ ಸದಸ್ಯ(ಆರೋಗ್ಯ) ಡಾ. ವಿನೋದ್ ಕೆ. ಪಾಲ್, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಶ್ರೀ ಬಿಪಿನ್ ರಾವತ್ ಪಾಲ್ಗೊಂಡಿದ್ದರು.

ಉನ್ನತಾಧಿಕಾರ ಸಮಿತಿ, ಕೋವಿಡ್-19 ನಿಯಂತ್ರಣ ಮತ್ತು ನಿರ್ವಹಣೆ ಕುರಿತಂತೆ ಸವಿವರವಾಗಿ ಚರ್ಚಿಸಿತು. ಸಮಿತಿ ಈವರೆಗೆ ಕೈಗೊಂಡಿರುವ ಕ್ರಮಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿರುವ ಸ್ಥಿತಿಗತಿ, ಮುಂಜಾಗ್ರತಾ ಕಾರ್ಯತಂತ್ರಗಳು ಮತ್ತು ಕೋವಿಡ್-19 ಹರಡದಂತೆ ರಾಜ್ಯಗಳು ಮತ್ತು ಕೇಂದ್ರಗಳು ಕೈಗೊಂಡಿರುವ ಕಠಿಣ ಕ್ರಮಗಳ ಬಗ್ಗೆ ಸಮಾಲೋಚಿಸಿತು. ಕೋವಿಡ್-19 ಎದುರಿಸಲು ಸಂಕಷ್ಟ ಯೋಜನೆಗಳನ್ನು ಇನ್ನಷ್ಟು ಬಲಗೊಳಿಸಬೇಕು ಮತ್ತು ಅದಕ್ಕೆ ಸಿದ್ಧಗೊಳ್ಳಬೇಕು ಎಂದು ಎಲ್ಲ ಜಿಲ್ಲೆಗಳಿಗೆ ಸೂಚಿಸಿತು. ಕೋವಿಡ್-19ಗೆ ಆಸ್ಪತ್ರೆಗಳನ್ನು ಮೀಸಲಿಡುವುದು, ವೈದ್ಯಕೀಯ ಸಂಸ್ಥೆಗಳಲ್ಲಿ ಪಿಪಿಇಗಳನ್ನು ಸಜ್ಜುಗೊಳಿಸುವುದು, ವೆಂಟಿಲೇಟರ್ ಮತ್ತು ಇತರೆ ಅವಶ್ಯಕ ಉಪಕರಣಗಳ ಮೂಲಕ ರಾಜ್ಯಗಳು ಸಾಮರ್ಥ್ಯವೃದ್ಧಿಗೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸಲಾಯಿತು. ಈಗಾಗಲೇ ಹೊರಡಿಸಿರುವ ಮಾರ್ಗಸೂಚಿಯಂತೆ ರಾಜ್ಯಗಳು ಕೋವಿಡ್-19 ಕೇಂದ್ರ/ ಆಸ್ಪತ್ರೆಗಳನ್ನು ಗುರುತಿಸುವಂತೆ ನಿರ್ದೇಶಿಸಲಾಯಿತು.

ಅಲ್ಲದೆ ಸಮಿತಿ, ದೇಶಾದ್ಯಂತ ಈಗ ಲಭ್ಯವಿರುವ ಪರೀಕ್ಷಾ ಕಿಟ್ ಗಳು ಮತ್ತು ಪರೀಕ್ಷಾ ಕಾರ್ಯತಂತ್ರದ ಬಗ್ಗೆ ಪರಾಮರ್ಶಿಸಿತು ಮತ್ತು ಕ್ಲಸ್ಟರ್ ನಿರ್ವಹಣೆ ಹಾಗೂ ಹಾಟ್ ಸ್ಪಾಟ್ ಗಳ ಕಾರ್ಯತಂತ್ರದ ಬಗ್ಗೆಯೂ ಪರಿಶೀಲಿಸಿತು. ಅಲ್ಲದೆ ಸಮಿತಿ ಪಿಪಿಇ, ಮಾಸ್ಕ್, ವೆಂಟಿಲೇಟರ್, ಔಷಧ ಹಾಗೂ ಇನ್ನಿತರ ಅವಶ್ಯಕ ಸಾಮಗ್ರಿಗಳ ಲಭ್ಯತೆ ಮತ್ತು ಅರ್ಹತೆ ಬಗ್ಗೆ ಪರಿಶೀಲಿಸಿತು. ಪಿಪಿಇಗಳ ಉತ್ಪಾದನೆಗೆ ದೇಶೀಯ ಉತ್ಪಾದಕರನ್ನು ಗುರುತಿಸಲಾಗಿದ್ದು, ಅವರುಗಳಿಗೆ ಈಗಾಗಲೇ ಬೇಡಿಕೆ ಸಲ್ಲಿಸಲಾಗಿದೆ ಎಂದು ಸಮಿತಿಗೆ ತಿಳಿಸಲಾಯಿತು. ಅಲ್ಲದೆ ವೆಂಟಿಲೇಟರ್ ಗಳಿಗೂ ಸಹ ಈಗಾಗಲೇ ಬೇಡಿಕೆ ಸಲ್ಲಿಸಲಾಗಿದೆ. ಕೋವಿಡ್-19 ಪರೀಕ್ಷೆಗೆ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸಾರ್ವಜನಿಕ ಮತ್ತು ಖಾಸಗಿ ಪ್ರಯೋಗಾಲಯಗಳ ಬಗ್ಗೆ ಮತ್ತು ಪ್ರತಿ ದಿನ ಆ ಪ್ರಯೋಗಾಲಯಗಳ ಜಾಲದ ಬಗ್ಗೆ ವಹಿಸುತ್ತಿರುವ ನಿಗಾ ಕುರಿತು ಸಮಿತಿಗೆ ಮಾಹಿತಿ ಒದಗಿಸಲಾಯಿತು. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅನುಷ್ಠಾನದ ಸ್ಥತಿಗತಿಯ ಬಗ್ಗೆಯೂ ಸಮಿತಿ ಪರಾಮರ್ಶಿಸಿತು. ಸಚಿವಾಲಯಗಳು ಹಾಗೂ ಉನ್ನತ ಮಟ್ಟದ ಸಮಿತಿಗಳು ಈವರೆಗೆ ಕೈಗೊಂಡಿರುವ ಕಾರ್ಯಗಳ ಬಗ್ಗೆ ಸಮಿತಿ ತೃಪ್ತಿ ವ್ಯಕ್ತಪಡಿಸಿತು.

ಉನ್ನತಾಧಿಕಾರ ಸಮಿತಿ ಅಧ್ಯಕ್ಷ ಹಾಗು ಕೇಂದ್ರ ಗೃಹ ಸಚಿವ ಡಾ. ಹರ್ಷವರ್ಧನ್, ಕೋವಿಡ್-19ನಿಂದ ನಮ್ಮನ್ನು ಉಳಿಸಲು ಆರೋಗ್ಯ ತುರ್ತು ಪರಿಸ್ಥಿತಿಯ ಈ ಸಂದರ್ಭದಲ್ಲಿ ಮುಂಚೂಣಿಯಲ್ಲಿ ನಿಂತು ಕಾರ್ಯನಿರ್ವಹಿಸುತ್ತಿರುವ ವೈದ್ಯರು ಮತ್ತು ಇತರೆ ವೈದ್ಯಕೀಯ ಸಿಬ್ಬಂದಿಯನ್ನು ಬಹಿಷ್ಕರಿಸದಂತೆ ಅವರು ಪ್ರತಿಯೊಬ್ಬರಲ್ಲಿ ಮನವಿ ಮಾಡುವುದಾಗಿ ಪುನರುಚ್ಚರಿಸಿದರು. ನಾವು ವದಂತಿಗಳನ್ನು ಮತ್ತು ಅಧಿಕೃತವಲ್ಲದ ಮಾಹಿತಿ ಹರಡುವುದನ್ನು ಸಾಧ್ಯವಾದಷ್ಟು ತಪ್ಪಿಸಬೇಕು ಎಂದರು. “ಆರೋಗ್ಯ ಸಚಿವಾಲಯದ ವೆಬ್ ಸೈಟ್ (www.mohfw.gov.in), ಐಸಿಎಂಆರ್ (www.icmr.nic.in), ಪಿಐಬಿ (www.pib.gov.in) ಮತ್ತು ಇತರೆ ಕೇಂದ್ರ ಸಚಿವಾಲಯಗಳ ವೆಬ್ ಸೈಟ್ ಗಳಲ್ಲಿ ಕೋವಿಡ್-19 ಕುರಿತ ಅಧಿಕೃತ ಮಾಹಿತಿ ಮೂಲಗಳಿವೆ ಮತ್ತು ಕೋವಿಡ್-19 ಕುರಿತಂತೆ ಯಾವುದೇ ತಾಂತ್ರಿಕ ವಿಷಯಗಳು, ಮಾರ್ಗಸೂಚಿಗಳು, ಸಲಹೆಗಳು ಮತ್ತು ನಿರ್ವಹಣಾ ವಿಷಯಗಳು ಬೇಕಿದ್ದರೆ ಇವುಗಳಿಂದ ಮಾತ್ರ ಪಡೆಯಬೇಕು. ಸಚಿವಾಲಯದ ವೆಬ್ ಸೈಟ್, ನಾಗರಿಕರಿಗೆ, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು/ ಆಸ್ಪತ್ರೆಗಳು ಮತ್ತು ಇನ್ನಿತರ ಸಂಬಂಧಿಸಿದವರಿಗೆ ಅಧಿಕೃತ ಮತ್ತು ಸಮಗ್ರ ಮಾಹಿತಿಯ ಮೂಲವಾಗಿದೆ” ಎಂದು ಹೇಳಿದರು. ಕೋವಿಡ್-19 ಕುರಿತ ತಾಂತ್ರಿಕ ಪ್ರಶ್ನೆಗಳನ್ನು ಈ ಇ-ಮೇಲ್ ಗೆ technicalquery.covid19[at]gov[dot]in, ಕಳುಹಿಸಬಹುದು ಎಂದರು.

ಡಾ ಹರ್ಷವರ್ಧನ್ ಅವರು, ಸಚಿವಾಲಯದ ವೆಬ್ ಸೈಟ್ ನಲ್ಲಿ ಯಾರು ಯಾವ ಬಗೆಯ ಮಾಸ್ಕ್ ಧರಿಸಬೇಕು ಮತ್ತು ಯಾರು ಪಿಪಿಇಗಳನ್ನು ಬಳಕೆ ಮಾಡಬೇಕು ಎಂಬ ಕುರಿತು ವಿವರವಾದ ಮಾರ್ಗಸೂಚಿಗಳು ಮತ್ತು ವಿಸ್ತೃತ ಸಲಹೆಗಳನ್ನು ಹಾಕಲಾಗಿದೆ. ಐಇಸಿ ಅಭಿಯಾನಗಳ ಮೂಲಕ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಪುನರುಚ್ಚರಿಸಿದರು. ಕೋವಿಡ್-19 ವಿರುದ್ಧ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಐಸೋಲೇಶನ್ ಅತ್ಯಂತ ಪರಿಣಾಮಕಾರಿ ಸಾಮಾಜಿಕ ಲಸಿಕೆಗಳಾಗಿವೆ ಎಂದ ಅವರು, ಈ ಲಾಕ್ ಡೌನ್ ಅವಧಿಯಲ್ಲಿ ವೈಯಕ್ತಿಕ ಶುಚಿತ್ವ ಮತ್ತು ಉಸಿರಾಟದ ಶಿಷ್ಟಾಚಾರಗಳನ್ನು ಪಾಲಿಸುವಂತೆ ಪ್ರತಿಯೊಬ್ಬರಲ್ಲೂ ಮನವಿ ಮಾಡಿದರು.

ಶ್ರೀಮತಿ ಪ್ರೀತಿ ಸೂದನ್, ಕಾರ್ಯದರ್ಶಿ (ಎಚ್ಎಫ್ ಡಬ್ಲ್ಯೂ), ಶ್ರೀ ರವಿ ಕಪೂರ್, ಕಾರ್ಯದರ್ಶಿ (ಜವಳಿ), ಶ್ರೀ ಪ್ರದೀಪ್ ಸಿಂಗ್ ಖರೋಲಾ, ಕಾರ್ಯದರ್ಶಿ (ನಾಗರಿಕ ವಿಮಾನಯಾನ), ಶ್ರೀ ಸಿ.ಕೆ. ಮಿಶ್ರಾ, ಕಾರ್ಯದರ್ಶಿ (ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ), ಶ್ರೀ ಪಿ.ಡಿ. ವಘೇಲಾ, ಕಾರ್ಯದರ್ಶಿ (ಫಾರ್ಮಸಿಟಿಕಲ್ಸ್), ಶ್ರೀ ಸಂಜೀವ್ ಕುಮಾರ್, ವಿಶೇಷ ಕಾರ್ಯದರ್ಶಿ (ಆರೋಗ್ಯ), ಶ್ರೀ ಅನಿಲ್ ಮಲಿಕ್, ಹೆಚ್ಚುವರಿ ಕಾರ್ಯದರ್ಶಿ (ಎಂಎಚ್ಎ), ಶ್ರೀ ಕೆ. ರಾಜಾರಾಮನ್, ಹೆಚ್ಚುವರಿ ಕಾರ್ಯದರ್ಶಿ (ಆರ್ಥಿಕ ವ್ಯವಹಾರಗಳು), ಡಾ. ರಾಜೀವ್ ಗರ್ಗ್, ಡಿಜಿಎಚ್ಎಸ್, ಶ್ರೀ ಅಮಿತ್ ಯಾದವ್, ಡಿಜಿ (ಡಿಜಿಎಫ್ ಟಿ), ಡಾ. ರಾಮನ್ ಗಂಗಾಖೇಡಕರ್, ಸಾಂಕ್ರಾಮಿಕ ರೋಗಗಳ ಮುಖ್ಯಸ್ಥರು, ಐಸಿಎಂಆರ್ ಮತ್ತು ಶ್ರೀ ಲವ ಅಗರವಾಲ್, ಜಂಟಿ ಕಾರ್ಯದರ್ಶಿ (ಎಂಒಎಚ್ಎಫ್ ಡಬ್ಲ್ಯೂ) ಅವರುಗಳೊಂದಿಗೆ ಸೇನೆ, ಐಟಿಬಿಪಿ, ಫಾರ್ಮ, ಡಿಜಿಸಿಎ ಮತ್ತು ಜವಳಿ ಸಚಿವಾಲಯದ ಇತರ ಅಧಿಕಾರಿಗಳು ಭಾಗವಹಿಸಿದ್ದರು.

ಕೋವಿಡ್-19 ಕುರಿತ ಯಾವುದೇ ಪ್ರಶ್ನೆಗಳಿದ್ದರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದು: +91-11-23978046 ಅಥವಾ 1075 (ಟೋಲ್ ಫ್ರೀ). ಕೋವಿಡ್-19 ಕುರಿತ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಸಹಾಯವಾಣಿ ಸಂಖ್ಯೆ ಇಲ್ಲಿ ಲಭ್ಯವಿದೆ. https://www.mohfw.gov.in/pdf/coronvavirushelplinenumber.pdf .

 

*****



(Release ID: 1612832) Visitor Counter : 214