ಉಪರಾಷ್ಟ್ರಪತಿಗಳ ಕಾರ್ಯಾಲಯ

ಲಾಕ್ ಡೌನ್ ನಂತರದಲ್ಲಿ ಆರ್ಥಿಕತೆಗಿಂತ ಆರೋಗ್ಯದ ಕಾಳಜಿ ಆದ್ಯತೆಯಾಗಬೇಕು: ಉಪ ರಾಷ್ಟ್ರಪತಿ

Posted On: 07 APR 2020 12:04PM by PIB Bengaluru

ಲಾಕ್ ಡೌನ್ ನಂತರದಲ್ಲಿ ಆರ್ಥಿಕತೆಗಿಂತ ಆರೋಗ್ಯದ ಕಾಳಜಿ ಆದ್ಯತೆಯಾಗಬೇಕು: ಉಪ ರಾಷ್ಟ್ರಪತಿ

ಲಾಕ್ ಡೌನ್ ಕೊನೆಗೊಳಿಸುವ ನಿರ್ಧಾರ ತೆಗೆದುಕೊಳ್ಳಲು ಲಾಕ್ ಡೌನ್ ಮೂರನೇ ವಾರ ನಿರ್ಣಾಯಕವಾದ್ದು: ಉಪ ರಾಷ್ಟ್ರಪತಿ

ಕಷ್ಟಗಳು ಮುಂದುವರಿದರೂ ಜನರು ನಾಯಕತ್ವದ ನಿರ್ಧಾರಕ್ಕೆ ಸಹಕರಿಸಬೇಕು: ಉಪ ರಾಷ್ಟ್ರಪತಿ

ತಾಯ್ನಾಡಿನ ಆಧ್ಯಾತ್ಮಿಕ ಆಯಾಮದಿಂದಾಗಿ ಭಾರತೀಯರ ಪ್ರತಿಕ್ರಿಯೆ ಇದುವರೆಗೆ ಉತ್ತಮವಾಗಿದೆ: ಉಪ ರಾಷ್ಟ್ರಪತಿ

ತಬ್ಲಿಘಿ ಜಮಾತ್ ತಪ್ಪಿಸಬಹುದಾಗಿದ್ದ ಪ್ರಕರಣ: ಉಪ ರಾಷ್ಟ್ರಪತಿ

ಜಾಗತಿಕ ಸಮುದಾಯವು ಕೊರೊನಾ ಬಿಕ್ಕಟ್ಟಿನಿಂದ ಸೂಕ್ತ ಪಾಠಗಳನ್ನು ಕಲಿಯಬೇಕು: ಶ್ರೀ ವೆಂಕಯ್ಯನಾಯ್ಡು

 

ಕೊರೊನಾ ವೈರಸ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ 3 ವಾರಗಳ ರಾಷ್ಟ್ರವ್ಯಾಪಿ ಲಾಕ್ಡೌನ್ ಮುಕ್ತಾಯದ ಬಗ್ಗೆ ಚರ್ಚಿಸುತ್ತಿರುವಾಗ ಏಪ್ರಿಲ್ 14 ನಂತರ ದೇಶದ ಆರ್ಥಿಕತೆಯ ಸ್ಥಿರೀಕರಣಕ್ಕಿಂತ ಜನರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದು ಉಪ ರಾಷ್ಟ್ರಪತಿ ಶ್ರೀ ಎಂ ವೆಂಕಯ್ಯ ನಾಯ್ಡು ಒತ್ತಾಯಿಸಿದ್ದಾರೆ.

ಲಾಕ್ಡೌನ್ ಗೆ ಇಂದು ಎರಡು ವಾರಗಳು ಪೂರ್ಣಗೊಂಡಿರುವ ಸಂದರ್ಭದಲ್ಲಿ, ಮುಂದಿನ ದಾರಿಯ ಬಗ್ಗೆ ಅವರು ಮಾಡಿರುವ ಮೌಲ್ಯಮಾಪನದಲ್ಲಿ, ಮಾರ್ಚ್ 25 ರಿಂದ ಜಾರಿಯಲ್ಲಿರುವ ರಾಷ್ಟ್ರವ್ಯಾಪಿ ಲಾಕ್ಡೌನ್ ನಿಂದ ನಿರ್ಗಮಿಸುವ ಬಗ್ಗೆ ಮುಂದಿನ ವಾರ ನಿರ್ಣಾಯಕವಾದ್ದು ಎಂದು ಶ್ರೀ ನಾಯ್ಡು ಅಭಿಪ್ರಾಯಪಟ್ಟರು. ವೈರಸ್ ಸೋಂಕಿನ ಹರಡುವಿಕೆಯ ವ್ಯಾಪ್ತಿ ಮತ್ತು ಪ್ರಮಾಣಕ್ಕೆ ಸಂಬಂಧಿಸಿದ ಅಂಕಿಅಂಶಗಳು ಲಾಕ್ಡೌನ್ ನಿರ್ಗಮನ ತಂತ್ರದ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು.

ಲಾಕ್ಡೌನ್ ನಿರ್ಗಮನ ಕಾರ್ಯತಂತ್ರದ ಬಗ್ಗೆ ಪ್ರಧಾನಿ ಮತ್ತು ಮುಖ್ಯಮಂತ್ರಿಗಳ ನಡುವಿನ ಸಮಾಲೋಚನೆಗಳನ್ನು ಉಲ್ಲೇಖಿಸಿದ ಶ್ರೀ ನಾಯ್ಡು, ಏಪ್ರಿಲ್ 14 ನಂತರ ಕೈಗೊಳ್ಳುವ ನಿರ್ಧಾರಗಳು ಏನೇ ಇದ್ದರೂ, ಕಷ್ಟಗಳು ಮುಂದುವರೆದರೂ ಸಹ ಇದುವರೆಗೆ ಪ್ರದರ್ಶಿಸಲಾದ ಮನೋಭಾವದೊಂದಿಗೆ ಸಹಕರಿಸುವಂತೆ ಜನತೆಯನ್ನು ಕೋರಿದರು. ಸರಬರಾಜು ಸರಪಳಿಗಳ ಸುಗಮ ಕಾರ್ಯನಿರ್ವಹಣೆ ಮತ್ತು ದುರ್ಬಲ ವರ್ಗಗಳಿಗೆ ಸಾಕಷ್ಟು ಪರಿಹಾರ ಮತ್ತು ಬೆಂಬಲವನ್ನು ಸರ್ಕಾರಗಳು ಖಚಿತಪಡಿಸುತ್ತವೆ ಎಂದು ತಾವು ನಿರೀಕ್ಷಿಸಿರುವುದಾಗಿ ಅವರು ಹೇಳಿದರು.

ಮಾರ್ಚ್ 22 ರಂದು ಜನತಾ ಕರ್ಫ್ಯೂ, ಮಾರ್ಚ್ 25 ರಿಂದ ರಾಷ್ಟ್ರವ್ಯಾಪಿ ಲಾಕ್ಡೌನ್ ಮತ್ತು ಏಪ್ರಿಲ್ 5 ರಂದು ಮೋಂಬತ್ತಿಗಳನ್ನು ಬೆಳಗಿಸುವುದರ ಬಗ್ಗೆ ಜನರ ತೀವ್ರ ಪ್ರತಿಕ್ರಿಯೆಯನ್ನು ಸ್ಮರಿಸಿದ ಅವರು, ಇದು ಭಾರತೀಯ ನೀತಿಯ ತಿರುಳನ್ನು ರೂಪಿಸುವ ಆಧ್ಯಾತ್ಮಿಕತೆಯ ಸದ್ಗುಣವನ್ನು ಸೂಚಿಸುತ್ತದೆ ಎಂದು ಹೇಳಿದರು. ಆಧ್ಯಾತ್ಮಿಕ ಮೋಕ್ಷವು ಸ್ವಾರ್ಥವನ್ನು ನಾಶಪಡಿಸುವುದು ಮತ್ತು ಎಲ್ಲರ ಒಳಿತಿಗಾಗಿ ಶ್ರಮಿಸುವುದು ಮತ್ತು ದೇಶದ ಜನರು ಬಿಕ್ಕಟ್ಟಿನ ಸಮಯದಲ್ಲಿ ಅಪಾರವಾಗಿ ಮೌಲ್ಯವನ್ನು ಪ್ರದರ್ಶಿಸಿದ್ದಾರೆ ಮತ್ತು ಅಂತಹ ಮನೋಭಾವವು ಸವಾಲನ್ನು ಗೆಲ್ಲಲು.ನಮಗೆ ಸಹಾಯ ಮಾಡುತ್ತದೆ ಎಂದು ಶ್ರೀ ನಾಯ್ಡು ವಿವರಿಸಿದರು.

ರಾಷ್ಟ್ರ ರಾಜಧಾನಿಯ ತಬ್ಲಿಘಿ ಜಮಾತ್ ಸಭೆಯನ್ನು ಪ್ರಸ್ತಾಪಿಸಿದ ಅವರು, ಕೊರೊನಾವೈರಸ್ ಹರಡುವಿಕೆಯನ್ನು ನಿಗ್ರಹಿಸುತ್ತಿರುವ ಪ್ರಯತ್ನಗಳು ಫಲ ನೀಡುತ್ತಿರುವಾಗ ಅದೊಂದು ತಪ್ಪಿಸಬಹುದಾಗಿದ್ದ ಅಸಂಗತ ಪ್ರಕರಣ ಮತ್ತು ಇತರರಿಗೆ ಕಣ್ಣು ತೆರೆಸುವ ಘಟನೆಯಾಗಿದೆ ಎಂದು ಶ್ರೀ ನಾಯ್ಡು ಹೇಳಿದರು.

ಸಂಸ್ಥೆಗಳು, ಮೂಲಸೌಕರ್ಯ, ಮಾಹಿತಿ ಹಂಚಿಕೆ, ಜಾಗತಿಕ ಸಹಕಾರ ಮತ್ತು ವೈಯಕ್ತಿಕ ಕ್ರಿಯೆಗಳ ಪರಿಣಾಮಕಾರಿತ್ವಕ್ಕೆ ಸಂಬಂಧಿಸಿದ ಅಸಮರ್ಪಕತೆಗಳನ್ನು ಪರಿಹರಿಸುವ ಮೂಲಕ ಮುಂದಿನ ಸನ್ನಿಹಿತ ಸವಾಲನ್ನು ಎದುರಿಸಲು ಪ್ರಸ್ತುತ ಬಿಕ್ಕಟ್ಟಿನಿಂದ ಸೂಕ್ತ ಪಾಠಗಳನ್ನು ಕಲಿಯಬೇಕು ಎಂದು ಉಪ ರಾಷ್ಟ್ರಪತಿಯವರು ಒತ್ತಾಯಿಸಿದರು.

ಎರಡು ವಾರಗಳ ಲಾಕ್ಡೌನ್ ಮತ್ತು ಮುಂದಿನ ದಾರಿ ಕುರಿತು ಉಪ ರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯ ನಾಯ್ಡು ಅವರ ಹೇಳಿಕೆ ಹೀಗಿದೆ:

"ಮಾರ್ಚ್ 25 ರಿಂದ ಜಾರಿಗೆ ಬಂದಿರುವ ರಾಷ್ಟ್ರವ್ಯಾಪಿ ಲಾಕ್ಡೌನ್ ಇಂದಿಗೆ ಎರಡು ವಾರಗಳನ್ನು ಪೂರ್ಣಗೊಳಿಸಿದೆ. ಕೊರೊನಾವೈರಸ್ ಸಾಂಕ್ರಾಮಿಕದಿಂದ ಉಂಟಾಗಿರುವ ಬಿಕ್ಕಟ್ಟು ಶಮನಕ್ಕೆ ಪ್ರಸ್ತುತ ನಡೆಯುತ್ತಿರುವ ಪ್ರಯತ್ನಗಳ ಮಧ್ಯೆ ನನ್ನ ಅಭಿಪ್ರಾಯ ಮತ್ತು ಕಾಳಜಿಗಳೊಂದಿಗೆ ಜನರು ಮತ್ತು ದೇಶದ ನಾಯಕತ್ವವನ್ನು ತಲುಪುವುದು ಸೂಕ್ತವೆಂದು ನಾನು ಭಾವಿಸಿದ್ದೇನೆ.

ಪ್ರಧಾನ ಮಂತ್ರಿ ಮತ್ತು ಮುಖ್ಯಮಂತ್ರಿಗಳು ಸೇರಿದಂತೆ ನಾಯಕತ್ವವು ಲಾಕ್ಡೌನ್ ನಿಂದ ನಿರ್ಗಮಿಸುವ ಕುರಿತು ಸಮಾಲೋಚನೆಗಳನ್ನು ಪ್ರಾರಂಭಿಸಿದ್ದಕ್ಕೆ ನನಗೆ ಸಂತೋಷವಾಗಿದೆ. ದೇಶದ ವಿವಿಧ ಭಾಗಗಳಲ್ಲಿ ಕೊಲೆಗಡುಕ ವೈರಸ್ ಹರಡುವಿಕೆಯ ಪ್ರಮಾಣ ಮತ್ತು ವ್ಯಾಪ್ತಿಯ ಹಿನ್ನೆಲೆಯಲ್ಲಿ ಅವರು ಸಾಧ್ಯವಾದಷ್ಟು ಉತ್ತಮ ಪರಿಹಾರವನ್ನೇ ಸೂಚಿಸುತ್ತಾರೆ ಎಂದು ನನಗೆ ಖಚಿತವಾಗಿದೆ. ಜನರ ಆರೋಗ್ಯದ ಪರಿಗಣನೆಗಳು ಮತ್ತು ನಮ್ಮ ಆರ್ಥಿಕತೆಯ ಸ್ಥಿರೀಕರಣದ ನಡುವೆ ಚರ್ಚೆಯಾಗುತ್ತಿರುವಾಗ, ಆರ್ಥಿಕತೆಗಿಂತ ಜನರ ಆರೋಗ್ಯವೇ ಆದ್ಯತೆ ಪಡೆಯಬೇಕು. ನನ್ನ ದೃಷ್ಟಿಯಲ್ಲಿ, ಆರ್ಥಿಕತೆಯು ಮತ್ತೊಂದು ದಿನದವರೆಗೆ ಕಾಯಬಹುದು, ಆದರೆ ಆರೋಗ್ಯದ ವಿಷಯದಲ್ಲಿ ಇದು ಸಾಧ್ಯವಿಲ್ಲ.

ಅಂತಿಮವಾಗಿ ನಾಯಕತ್ವ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ಬದ್ಧರಾಗಿರಬೇಕು ಮತ್ತು ಏಪ್ರಿಲ್ 14 ರಿಂದಾಚೆಗೂ ಕಷ್ಟಗಳು ಮುಂದುವರೆದರೂ ಸಹ ಈಗ ನಡೆಯುತ್ತಿರುವ ರಾಷ್ಟ್ರೀಯ ಪ್ರಯತ್ನದಲ್ಲಿ ಅದೇ ಮನೋಭಾವದಿಂದ ಸಹಕರಿಸಬೇಕೆಂದು ನಾನು ಜನರಿಗೆ ಮನವಿ ಮಾಡುತ್ತೇನೆ. ಅಗತ್ಯ ಸರಕುಗಳ ಪೂರೈಕೆಯ ಸುಗಮ ಕಾರ್ಯನಿರ್ವಹಣೆ ಮತ್ತು ಬಡ ಮತ್ತು ದುರ್ಬಲ ವರ್ಗದವರಿಗೆ ಅಗತ್ಯವಾದ ಪರಿಹಾರ ಮತ್ತು ಬೆಂಬಲವನ್ನು ಸರ್ಕಾರಗಳು ಖಚಿತಪಡಿಸುತ್ತವೆ ಎಂದು ನನಗೆ ಖಾತ್ರಿಯಿದೆ .ವೈರಸ್ ಹರಡುವಿಕೆಗೆ ಸಂಬಂಧಿಸಿದ ದತ್ತಾಂಶದಿಂದ ನಿರ್ಗಮನ ಕಾರ್ಯತಂತ್ರವನ್ನು ರೂಪಿಸಲು ಮುಂದಿನ ಒಂದು ವಾರದ ಲಾಕ್ ಡೌನ್ ಬಹಳ ನಿರ್ಣಾಯಕವಾಗಿದೆ ಮತ್ತು ಮುಂದಿನ ವಾರದಲ್ಲಿ ಅದರ ಗತಿಯು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಪರಿಣಾಮ ಬೀರುತ್ತದೆ.

ಎಲ್ಲರ ಹಿತದೃಷ್ಟಿಯಿಂದ ಒಟ್ಟಾಗಿ ಸವಾಲನ್ನು ಎದುರಿಸಲು ನಮ್ಮ ದೇಶದ ಜನರು ಇಲ್ಲಿಯವರೆಗೆ ಆಧ್ಯಾತ್ಮಿಕತೆಯ ನಿಜವಾದ ಮನೋಭಾವದಲ್ಲಿ ಹೆಚ್ಚಿನ ದೃಢ ನಿಶ್ಚಯವನ್ನು ಪ್ರದರ್ಶಿಸಿದ್ದಾರೆ. ಆಧ್ಯಾತ್ಮಿಕತೆಯು ಒಬ್ಬರ ಸ್ವಂತ ಹಿತಾಸಕ್ತಿಗಳನ್ನು ನಾಶಪಡಿಸುವುದು ಮತ್ತು ಎಲ್ಲರ ಒಳಿತಿಗಾಗಿ ಮಾನವಕುಲದ ಸಾರ್ವತ್ರಿಕತೆಯ ತತ್ವವಾಗಿದೆ. ಇದು ಭಾರತೀಯ ನೀತಿಯ ತಿರುಳಾಗಿದೆ. ಮಾರ್ಚ್ 22 ರಂದು ಜನತಾ ಕರ್ಫ್ಯೂಗೆ ನಮ್ಮ ದೇಶದ ಜನರು ನೀಡಿದ ಸ್ವಯಂಪ್ರೇರಿತ ಪ್ರತಿಕ್ರಿಯೆ, ಮಾರ್ಚ್ 25 ರಿಂದ ರಾಷ್ಟ್ರವ್ಯಾಪಿ ಲಾಕ್ಡೌನ್ ಮತ್ತು ಏಪ್ರಿಲ್ 5 ರಂದು ಇತರರೊಂದಿಗೆ ಐಕಮತ್ಯದಲ್ಲಿ ಮೇಣದ ಬತ್ತಿಗಳು ಮತ್ತು ದೀಪಗಳನ್ನು ಬೆಳಗಿಸಿದ್ದು ಸ್ಪಷ್ಟವಾಗಿ ಪ್ರಬುದ್ಧ ಆಧ್ಯಾತ್ಮಿಕ ಮನೋಭಾವದ ಲಕ್ಷಣವಾಗಿದೆ. ಅಂತಹ ಸ್ಪಷ್ಟ ಮನೋಭಾವವು ಅದೃಶ್ಯ ವೈರಸ್ ವಿರುದ್ಧ ಜಯಗಳಿಸಲು ನಮ್ಮನ್ನು ಕರೆದೊಯ್ಯುತ್ತದೆ ಎಂದು ನನಗೆ ವಿಶ್ವಾಸವಿದೆ. ಇದಕ್ಕಾಗಿ ನಾನು ಜನರನ್ನು ಪ್ರಾಮಾಣಿಕವಾಗಿ ಅಭಿನಂದಿಸುತ್ತೇನೆ.

ಕೊರೊನಾವೈರಸ್ ಹರಡುವುದನ್ನು ತಡೆಗಟ್ಟುವಲ್ಲಿ ಯಶಸ್ಸಿನ ಸಂಕೇತಗಳನ್ನು ತೋರಿಸುವ ನಮ್ಮ ಸಾಮೂಹಿಕ ಪ್ರಯತ್ನಗಳ ಮಧ್ಯೆ, ತಬ್ಲಿಘಿ ಜಮಾತ್ ಸಭೆಯು ಬಂದಿತು, ಸಭೆಯು ಹೊಸ ಸೋಂಕಿತ ಪ್ರಕರಣಗಳ ಸ್ವರೂಪವನ್ನು ಬದಲಾಯಿಸಿತು. ಸಭೆಯಲ್ಲಿ ಭಾಗವಹಿಸಿದವರ ಪ್ರಮಾಣ ಮತ್ತು ಅದರ ದ್ವಿಗುಣ ಪರಿಣಾಮವು ನಮ್ಮ ನಿರೀಕ್ಷೆಗಳನ್ನು ಹುಸಿಗೊಳಿಸಿದೆ. ತಪ್ಪಿಸಬಹುದಾಗಿದ್ದ ಪ್ರಕರಣವು ವೈರಸ್ ಹರಡುವಿಕೆಯ ನಿಗ್ರಹಕ್ಕಿದ್ದ ಸಾಮಾಜಿಕ ಮತ್ತು ದೈಹಿಕ ಅಂತರದ ನಿಯಮಗಳನ್ನು ಉಲ್ಲಂಘಿಸಿತು. ತಪ್ಪಿಸಬಹುದಾಗಿದ್ದ ಅಸಂಗತ ಪ್ರಕರಣವು ಇತರರಿಗೆ ಕಣ್ಣು ತೆರೆಸುವಂತಾಗಬೇಕು.

ಹಲವಾರು ಅಭಿವೃದ್ಧಿ ಹೊಂದಿದ ದೇಶಗಳು ಕೊರೊನಾವೈರಸ್ ಅನ್ನು ನಿಭಾಯಿಸಲು ಇನ್ನೂ ಹೆಣಗಾಡುತ್ತಿರುವಾಗ, ಜಾಗತಿಕ ಸಮುದಾಯವು ಪ್ರಸ್ತುತ ಬಿಕ್ಕಟ್ಟಿನಿಂದ ಸೂಕ್ತ ಪಾಠಗಳನ್ನು ಕಲಿಯಬೇಕಾಗಿದೆ. ಭವಿಷ್ಯದ ಸವಾಲನ್ನು ಪರಿಣಾಮಕಾರಿಯಾಗಿ ಎದುರಿಸಲು ಸಂಸ್ಥೆಗಳು, ಮೂಲಸೌಕರ್ಯ, ಮಾಹಿತಿ ಹಂಚಿಕೆ, ಆಂತರಿಕ ಸಹಕಾರ ಮತ್ತು ವೈಯಕ್ತಿಕ ಕ್ರಮಗಳಿಗೆ ಸಂಬಂಧಿಸಿದಂತೆ ನ್ಯೂನತೆಗಳನ್ನು ಸರಿಪಡಿಸಬೇಕಾಗಿದೆ.

ವೈರಸ್ ವಿರುದ್ಧದ ಹೋರಾಟದ ಅವಧಿಯು ಸದ್ಯಕ್ಕೆ ಅನಿಶ್ಚಿತವಾಗಿರಬಹುದು. ಆದರೆ ಕೊನೆಯಲ್ಲಿ ನಾವು ಜಯಗಳಿಸುತ್ತೇವೆ. ಪ್ರಪಂಚದಾದ್ಯಂತದ ಜನರ ಆರೋಗ್ಯ ಮತ್ತು ಸಂಪತ್ತಿನ ವೆಚ್ಚವನ್ನು ಕಡಿಮೆ ಮಾಡುವುದರಲ್ಲಿ ಬುದ್ಧಿವಂತಿಕೆ ಇರುತ್ತದೆ. ಭಾರತವು ಹಾಗೆ ಮಾಡುವ ಮನೋಭಾವವನ್ನು ತೋರಿಸಿದೆ ಮತ್ತು ಇದನ್ನು ಕೊನೆಯವರೆಗೂ ಉಳಿಸಿಕೊಳ್ಳುವ ಅವಶ್ಯಕತೆಯಿದೆ. ಉತ್ತಮ ನಾಳೆಗಾಗಿ ಸ್ವಲ್ಪ ಕಾಲ ಕಷ್ಟಗಳೊಂದಿಗೆ ಬದುಕೋಣ.”

***



(Release ID: 1611953) Visitor Counter : 286