ಪರಿಸರ ಮತ್ತು ಅರಣ್ಯ ಸಚಿವಾಲಯ

ರಾಷ್ಟ್ರೀಯ ಅಭಯಾರಣ್ಯಗಳು/ ವನ್ಯಧಾಮ/ ಹುಲಿ ಸಂರಕ್ಷಣಾ ಪ್ರದೇಶಗಳಲ್ಲಿ ಕೋವಿಡ್-19 ನಿರ್ವಹಣೆ ಮತ್ತು ನಿಯಂತ್ರಣ ಕುರಿತ ಮಾರ್ಗಸೂಚಿ

Posted On: 06 APR 2020 7:17PM by PIB Bengaluru

ರಾಷ್ಟ್ರೀಯ ಅಭಯಾರಣ್ಯಗಳು/ ವನ್ಯಧಾಮ/ ಹುಲಿ ಸಂರಕ್ಷಣಾ ಪ್ರದೇಶಗಳಲ್ಲಿ ಕೋವಿಡ್-19 ನಿರ್ವಹಣೆ ಮತ್ತು ನಿಯಂತ್ರಣ ಕುರಿತ ಮಾರ್ಗಸೂಚಿ

 

ಕೋವಿಡ್-19 ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಮತ್ತು ನ್ಯೂಯಾರ್ಕ್ ನಲ್ಲಿ ಹುಲಿಗೆ ಕೋವಿಡ್-19 ಸೋಂಕು ತಗುಲಿರುವ ಇತ್ತೀಚಿನ ಪತ್ರಿಕಾ ವರದಿ ಹಿನ್ನೆಲೆಯಲ್ಲಿ ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ ಸಚಿವಾಲಯ ರಾಷ್ಟ್ರೀಯ ಅಭಯಾರಣ್ಯಗಳು, ವನ್ಯಧಾಮಗಳು ಮತ್ತು ಹುಲಿ ಸಂರಕ್ಷಣಾ ಪ್ರದೇಶಗಳಲ್ಲಿ ಕೋವಿಡ್-19 ಸೋಂಕು ನಿರ್ವಹಣೆ ಮತ್ತು ನಿಯಂತ್ರಣ ಕುರಿತಂತೆ ಮಾರ್ಗಸೂಚಿಯನ್ನು ಹೊರಡಿಸಿದೆ. ಸೋಂಕು ಮಾನವನಿಂದ ಪ್ರಾಣಿಗಳಿಗೆ ಅಥವಾ ಪ್ರಾಣಿಗಳಿಂದ ಮಾನವನಿಗೆ ಹರಡುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಅಭಯಾರಣ್ಯಗಳು/ವನ್ಯಧಾಮಗಳು ಮತ್ತು ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸೋಂಕು ಹರಡದಂತೆ ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಸೂಚಿಸಲಾಗಿದೆ.

ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ವನ್ಯಜೀವಿ ವಾರ್ಡನ್ ಗಳಿಗೆ ಈ ಸೂಚನೆಗಳನ್ನು ನೀಡಲಾಗಿದೆ.

1. ರಾಷ್ಟ್ರೀಯ ಅಭಯಾರಣ್ಯಗಳು/ವನ್ಯಧಾಮಗಳು ಮತ್ತು ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸೋಂಕು ಮನುಷ್ಯರಿಂದ ಪ್ರಾಣಿಗಳಿಗೆ ಅಥವಾ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವುದನ್ನು ತಡೆಯಲು ತಕ್ಷಣ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.

2. ಮಾನವ ಮತ್ತು ವನ್ಯಜೀವಿ ಮುಖಾಮುಖಿಯಾಗುವುದನ್ನು ತಗ್ಗಿಸಬೇಕು.

3. ರಾಷ್ಟ್ರೀಯ ಅಭಯಾರಣ್ಯಗಳು/ವನ್ಯಧಾಮಗಳು ಮತ್ತು ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಜನ ಸಂಚಾರ ನಿರ್ಬಂಧಿಸಬೇಕು.

4. ಪರಿಸ್ಥಿತಿಯನ್ನು ಸಾಧ್ಯವಾದಷ್ಟು ತ್ವರಿತವಾಗಿ ನಿಭಾಯಿಸುವಂತೆ ಪಶು ವೈದ್ಯರು, ಮುಂಚೂಣಿ ಸಿಬ್ಬಂದಿ, ಕ್ಷೇತ್ರ ವ್ಯವಸ್ಥಾಪಕರನ್ನೊಳಗೊಂಡ ಕಾರ್ಯಪಡೆ/ಕ್ಷಿಪ್ರ ಕಾರ್ಯಪಡೆಗಳನ್ನು ರಚಿಸಬೇಕು.

5. ದಿನದ 24 ಗಂಟೆಗಳು ವರದಿ ನೀಡುವಂತಹ ಕಾರ್ಯತಂತ್ರ ಸ್ಥಾಪಿಸಬೇಕು ಮತ್ತು ಯಾವುದೇ ಪ್ರಕರಣಗಳನ್ನು ಗಮನಿಸಿದರೆ ತಕ್ಷಣ ವರದಿ ನೀಡಲು ನೋಡಲ್ ಅಧಿಕಾರಿಯನ್ನು ನೇಮಿಸಬೇಕು.

6. ಪ್ರಾಣಿಗಳಿಗೆ ತುರ್ತು ಚಿಕಿತ್ಸೆ ನೀಡಲು ಅವಶ್ಯಕ ಸೇವೆಗಳನ್ನು ಸ್ಥಾಪಿಸಬೇಕು ಮತ್ತು ಅಗತ್ಯಕ್ಕೆ ತಕ್ಕಂತೆ ಅವುಗಳನ್ನು ಸುರಕ್ಷಿತವಾಗಿ ಅವುಗಳ ಸ್ವಾಭಾವಿಕ ತಾಣಗಳಿಗೆ ಹಿಂತಿರುಗಿ ಬಿಡಲು ಕ್ರಮಗಳನ್ನು ಕೈಗೊಳ್ಳಬೇಕು.

7. ರೋಗದ ಮೇಲೆ ನಿಗಾ ಇಡಲು, ಗುರುತಿಸಲು ಮತ್ತು ನಿರ್ವಹಣೆ ಮಾಡಲು ನಾನಾ ಇಲಾಖೆಗಳ ಜೊತೆ ಸಮನ್ವಯದ ಪ್ರಯತ್ನಕ್ಕೆ ಕ್ರಮ ಕೈಗೊಳ್ಳಬೇಕು.

8. ರಾಷ್ಟ್ರೀಯ ಅಭಯಾರಣ್ಯಗಳು/ವನ್ಯಧಾಮಗಳು ಮತ್ತು ಹುಲಿ ಸಂರಕ್ಷಿತ ಪ್ರದೇಶಗಳ ಸುತ್ತಮುತ್ತ ಸಿಬ್ಬಂದಿ/ಪ್ರವಾಸಿಗರು ಮತ್ತು ಗ್ರಾಮಸ್ಥರ ಚಲನವಲನದ ಮೇಲೆ ನಿಗಾಇಡಲು ಆರೋಗ್ಯ ಸಚಿವಾಲಯ ಸೂಚಿಸುವ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.

9. ಸೋಂಕು ಹರಡದಂತೆ ನಿಯಂತ್ರಿಸಲು ಎಲ್ಲ ರೀತಿಯ ಸಂಭಾವ್ಯ ಕ್ರಮಗಳನ್ನು ಕೈಗೊಳ್ಳಬೇಕು.

10. ಈ ಸೂಚನೆಗಳ ಪಾಲನೆ ಬಗ್ಗೆ ಕ್ರಮ ಕೈಗೊಂಡು ಸಚಿವಾಲಯಕ್ಕೆ ವರದಿಯನ್ನು ಸಲ್ಲಿಸಬೇಕು.

 

***

 (Release ID: 1611839) Visitor Counter : 182