ಕಲ್ಲಿದ್ದಲು ಸಚಿವಾಲಯ
ಭುವನೇಶ್ವರದಲ್ಲಿ ಕೋವಿಡ್ -19 ಆಸ್ಪತ್ರೆಗೆ ಕೋಲ್ ಇಂಡಿಯಾ ಅಂಗ ಸಂಸ್ಥೆ ಎಂ.ಸಿ.ಎಲ್. ಹಣ ನೀಡಲಿದೆ: ಪ್ರಲ್ಹಾದ ಜೋಶಿ
Posted On:
06 APR 2020 2:31PM by PIB Bengaluru
ಭುವನೇಶ್ವರದಲ್ಲಿ ಕೋವಿಡ್ -19 ಆಸ್ಪತ್ರೆಗೆ ಕೋಲ್ ಇಂಡಿಯಾ ಅಂಗ ಸಂಸ್ಥೆ ಎಂ.ಸಿ.ಎಲ್. ಹಣ ನೀಡಲಿದೆ: ಪ್ರಲ್ಹಾದ ಜೋಶಿ
ಮಹಾನದಿ ಕೋಲ್ ಫೀಲ್ಡ್ ಲಿಮಿಟೆಡ್ (ಎಂಸಿಎಲ್) ಭುವನೇಶ್ವರದಲ್ಲಿನ ದೇಶದ ಎರಡನೇ ಅತಿ ದೊಡ್ಡ ಕೋವಿಡ್ -19 ಆಸ್ಪತ್ರೆಗೆ ರೋಗಿಗಳ ಚಿಕಿತ್ಸೆಯ ವೆಚ್ಚವೂ ಸೇರಿದಂತೆ ಸಂಪೂರ್ಣ ವೆಚ್ಚಕ್ಕೆ ಹಣಕಾಸು ಒದಗಿಸಲಿದ್ದು, ಇದಕ್ಕಾಗಿ ಎಂ.ಸಿ.ಎಲ್. ಈಗಾಗಲೇ 7.31 ಕೋಟಿ ರೂ.ಗಳನ್ನು ತತ್ ಕ್ಷಣದ ಮುಂಗಡವಾಗಿ ಬಿಡುಗಡೆ ಮಾಡಿದೆ. ಈ ಆಸ್ಪತ್ರೆ ಒಡಿಶಾದ ಜನತೆಗೆ ಶ್ರೇಷ್ಠ ವೈದ್ಯಕೀಯ ಆಸ್ತಿ ಆಗಲಿದೆ” ಎಂದು ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಶ್ರೀ ಪ್ರಲ್ಹಾದ ಜೋಶಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆದ ಆಸ್ಪತ್ರೆಯ ಉದ್ಘಾಟನಾ ಕಾರ್ಯಕ್ರಮದ ವೇಳೆ ತಿಳಿಸಿದ್ದಾರೆ.
ಕೋಲ್ ಇಂಡಿಯಾದ ಅಂಗ ಸಂಸ್ಥೆ ಮಹಾನದಿ ಕೋಲ್ ಫೀಲ್ಡ್ ಲಿಮಿಟೆಡ್ (ಎಂಸಿಎಲ್), 500 ಹಾಸಿಗೆಗಳು ಮತ್ತು 25 ತುರ್ತು ನಿಗಾ ಘಟಕ (ಐಸಿಯು) ಹಾಸಿಗೆ ಹಾಗೂ ವೆಂಟಿಲೇಟರ್ ಗಳನ್ನು ಒಳಗೊಂಡ ಆಸ್ಪತ್ರೆಯ ಪೂರ್ಣ ವೆಚ್ಚಕ್ಕೆ ಹಣಕಾಸು ಒದಗಿಸಲಿದೆ. ಒಡಿಶಾ ಮುಖ್ಯಮಂತ್ರಿ ಶ್ರೀ ನವೀನ್ ಪಟ್ನಾಯಕ್ ಈ ಆಸ್ಪತ್ರೆ ಉದ್ಘಾಟಿಸಿದರು. ಒಡಿಶಾ ರಾಜ್ಯ ಸರ್ಕಾರ ಭುವನೇಶ್ವರದಲ್ಲಿ ಇಂದು ಈ ಆಸ್ಪತ್ರೆ ಆರಂಭಿಸಿದೆ. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಮತ್ತು ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಶ್ರೀ ಪ್ರಲ್ಹಾದ ಜೋಶಿ ಅವರೂ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಶ್ರೀ ಪ್ರಲ್ಹಾದ ಜೋಶಿ, ಕೋವಿಡ್ -19 ವಿರುದ್ಧದ ಹೋರಾಟಕ್ಕೆ ರಾಜ್ಯ ಸರ್ಕಾರಗಳು ಜಿಲ್ಲಾ ಖನಿಜ ನಿಧಿ (ಡಿಎಂಎಫ್)ನಲ್ಲಿ ಲಭ್ಯವಿರುವ ಉಳಿಕೆ ನಿಧಿಯ ಶೇ.30ರಷ್ಟು ಬಳಸಿಕೊಳ್ಳಲು ಕೇಂದ್ರ ಸರ್ಕಾರ ಈಗಾಗಲೇ ಮಾರ್ಗಸೂಚಿಗಳನ್ನು ಹೊರಡಿಸಿದೆ ಎಂದರು. ಇದು ಖನಿಜ ಶ್ರೀಮಂತ ಒಡಿಶಾದಂಥ ರಾಜ್ಯಗಳಿಗೆ ಮಹಾಮಾರಿಯ ವಿರುದ್ಧದ ಹೋರಾಟಕ್ಕೆ ನೆರವಾಗಲಿದೆ ಎಂದರು.
“ನಾನು ವೈಯಕ್ತಿಕವಾಗಿ ಕಲ್ಲಿದ್ದಲು ಮತ್ತು ಗಣಿ ಸಚಿವಾಲಯದ ಪಿಎಸ್.ಯು.ಗಳಿಗೆ ಇಡೀ ವಿಶ್ವವನ್ನೇ ಆವರಿಸಿರುವ ಕೋವಿಡ್ -19 ವಿರುದ್ಧದ ಹೋರಾಟಕ್ಕೆ ಸಂಬಂಧಿತ ರಾಜ್ಯ ಸರ್ಕಾರಗಳಿಗೆ ಎಲ್ಲ ಸಾಧ್ಯ ನೆರವು ನೀಡುವಂತೆ ನಿರ್ದೇಶಿಸಿರುವುದಾಗಿ ಹೇಳಿದರು. ಈ ಪಿ.ಎಸ್.ಯು.ಗಳು ಸನ್ನಿವೇಶಕ್ಕೆ ಸೂಕ್ತವಾಗಿ ಸ್ಪಂದಿಸಿವೆ ಎಂಬ ಬಗ್ಗೆ ಹರ್ಷ ತಂದಿದೆ ಎಂದು ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವರು ತಿಳಿಸಿದರು.
ಕೋಲ್ ಇಂಡಿಯಾದ ಅಂಗ ಸಂಸ್ಥೆಗಳು 8 ರಾಜ್ಯಗಳಲ್ಲಿ 1500 ದಿಗ್ಭಂದನ/ಪ್ರತ್ಯೇಕೀಕರಣ ಹಾಸಿಗೆಗಳ ವ್ಯವಸ್ಥೆ ಸ್ಥಾಪಿಸಿವೆ. ಅದೇ ರೀತಿ ಭುವನೇಶ್ವರದಲ್ಲಿ ಕೇಂದ್ರ ಕಚೇರಿ ಹೊಂದಿರುವ ನೆಲ್ಕೋ ಉದ್ಯೋಗಿಗಳು ತಮ್ಮ ಒಂದು ದಿನದ ವೇತನದ ಮೊತ್ತ 2.5 ಕೋಟಿ ರೂ.ಗಳನ್ನು ಒಡಿಶಾ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುವುದಾಗಿ ಸಂಕಲ್ಪಿಸಿದ್ದಾರೆ.ಒಡಿಶಾ ಸರ್ಕಾರ ಕೋರಾಪಟ್ ಜಿಲ್ಲೆಯಲ್ಲಿ ಸ್ಥಾಪಿಸಲಿರುವ ಸಮರ್ಪಿತ ಕೋವಿಡ್ -19 ಆಸ್ಪತ್ರೆಗೆ ಹಣಕಾಸು ನೀಡಲು ತನ್ನ ಒಪ್ಪಿಗೆ ಸೂಚಿಸಿದೆ ಎಂದರು.
****
(Release ID: 1611727)
Visitor Counter : 197