ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

COVID-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಿಂದ ದೇಶದ ಕೇಂದ್ರೀಯ ವಿಶ್ವವಿದ್ಯಾಲಯಗಳ ಉಪಕುಲಪತಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಂವಾದ

Posted On: 04 APR 2020 9:39PM by PIB Bengaluru

COVID-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಿಂದ ದೇಶದ ಕೇಂದ್ರೀಯ ವಿಶ್ವವಿದ್ಯಾಲಯಗಳ ಉಪಕುಲಪತಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಂವಾದ

ಸ್ವಯಂ ಮತ್ತು ಇತರ ಡಿಜಿಟಲ್ ವಿಧಾನಗಳ ಮೂಲಕ ವಿದ್ಯಾರ್ಥಿಗಳ ಶಿಕ್ಷಣ ಮುಂದುವರೆಸಲು ಸಚಿವರ ಒತ್ತು

ಆನ್ಲೈನ್ ಶಿಕ್ಷಣವನ್ನು ಉತ್ತೇಜಿಸಲು ಮತ್ತು ಆನ್ಲೈನ್ ಪರೀಕ್ಷೆಗೆ ಸಂಬಂಧಿಸಿದ ಸಲಹೆಗಳನ್ನು ನೀಡಲು IGNOU ಉಪಕುಲಪತಿ ಪ್ರೊ.ನಾಗೇಶ್ವರ ರಾವ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ:  ಮಾನವ ಸಂಪನ್ಮೂಲ ಸಚಿವರು

 

COVID-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ 'ನಿಶಾಂಕ್' ಅವರು, ದೇಶದ ಎಲ್ಲಾ ಕೇಂದ್ರೀಯ ವಿಶ್ವವಿದ್ಯಾಲಯಗಳ ಉಪಕುಲಪತಿಗಳೊಂದಿಗೆ ಸಂವಾದ ನಡೆಸಿದರು. ಸಭೆಯಲ್ಲಿ ಕೆಳಕಂಡ ಅಂಶಗಳನ್ನು ಚರ್ಚಿಸಲಾಯಿತು.

1.         ಹಾಸ್ಟೆಲ್ಗಳಲ್ಲಿ ವಾಸಿಸುವ ವಿದ್ಯಾರ್ಥಿಗಳು ಹಾಗೂ ವಿಶ್ವವಿದ್ಯಾಲಯದ ಶೈಕ್ಷಣಿಕ ಮತ್ತು ಶೈಕ್ಷಣಿಕೇತರ ಸಿಬ್ಬಂದಿಗಳ ಆರೋಗ್ಯದ ಬಗ್ಗೆ ತೆಗೆದುಕೊಳ್ಳಬೇಕಾದ ಕ್ರಮಗಳು.

2.         ವಿಶ್ವವಿದ್ಯಾಲಯದಲ್ಲಿ ಸಾಮಾಜಿಕ ಅಂತರ ಮತ್ತು ಪ್ರತ್ಯೇಕತೆಯ ಸೂಚನೆಗಳ ಸೂಕ್ತ ಪಾಲನೆ.

          3.         ವಿಶ್ವವಿದ್ಯಾಲಯದಲ್ಲಿ COVID-19 ಶಂಕಿತ ಪ್ರಕರಣಗಳ ಪರೀಕ್ಷೆಗೆ ಅವಕಾಶ.

4.         ವಿದ್ಯಾರ್ಥಿಗಳ ಶಿಕ್ಷಣವನ್ನು ಮುಂದುವರಿಕೆಗೆ ವ್ಯವಸ್ಥೆ

5.        ಆಡಳಿತದಿಂದ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಸವಾಲುಗಳ ನಿರ್ವಹಣೆ.

6.       ಎಲ್ಲಾ ಉದ್ಯೋಗಿಗಳ (ಶಾಶ್ವತ, ತಾತ್ಕಾಲಿಕ ಮತ್ತು ದೈನಂದಿನ ವೇತನ ಪಡೆಯುವವರು) ಸಂಬಳ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ.

7.       COVID-19 ಕ್ಕೆ ಸಂಬಂಧಿಸಿದ ಉಪಕ್ರಮಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ತಿಳಿಸುವುದು.

8.     COVID-19 ಕ್ಕೆ ಸಂಬಂಧಿಸಿದ ಸಂಶೋಧನೆಗಳನ್ನು ಕೈಗೊಳ್ಳುವುದು.

 

ಚರ್ಚೆಯ ಸಮಯದಲ್ಲಿ, ಸಂಕಷ್ಟದ ಸಮಯದಲ್ಲಿ  ಸವಾಲುಗಳನ್ನು ಎದುರಿಸಲು ಸಿದ್ಧವಿರುವುದಾಗಿ ಎಲ್ಲಾ ವಿಶ್ವವಿದ್ಯಾಲಯಗಳು ಭರವಸೆ ನೀಡಿದವು. ವಿಶ್ವವಿದ್ಯಾಲಯಗಳಲ್ಲಿ ವಾಸಿಸುವ ವಿದ್ಯಾರ್ಥಿಗಳ ಆಹಾರ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಸೂಕ್ತ ಕಾಳಜಿ ವಹಿಸಲಾಗುತ್ತಿದೆ. 40 ಹಾಸಿಗೆಗಳ ಪ್ರತ್ಯೇಕ (Isolation) ಕೋಣೆಗಳ ಸೌಲಭ್ಯವನ್ನು ಮಾಡಿರುವುದಾಗಿ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಮತ್ತು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ ತಿಳಿಸಿದವು. ಶೈಕ್ಷಣಿಕ ಅಧಿವೇಶನ ವಿಳಂಬವಾಗದಂತೆ ಬಹುತೇಕ ವಿಶ್ವವಿದ್ಯಾಲಯಗಳು ಕೋರ್ಸ್ಗಳನ್ನು ಡಿಜಿಟಲ್ ವೇದಿಕೆಯಲ್ಲಿ ನಡೆಸುತ್ತಿವೆ.

SWAYAM ಮತ್ತು SWAYAM PRAHAHA ವನ್ನು ಅಭಿಯಾನ ಮಾದರಿಯಲ್ಲಿ ಬಳಸಲು ಮತ್ತು ಇತರ ಆನ್ಲೈನ್ ಡಿಜಿಟಲ್ ಮಾಧ್ಯಮಗಳ ಮೂಲಕ ಶೈಕ್ಷಣಿಕ ಕಾರ್ಯಕ್ರಮವನ್ನು ಮುಂದುವರಿಸಲು ತಮ್ಮ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳನ್ನು ಪ್ರೇರೇಪಿಸುವಂತೆ ಎಲ್ಲಾ ಉಪಕುಲಪತಿಗಳಿಗೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರು ನಿರ್ದೇಶನ ನೀಡಿದರು. ಆನ್ಲೈನ್ ಶಿಕ್ಷಣವನ್ನು ಉತ್ತೇಜಿಸಲು ಮತ್ತು ಆನ್ಲೈನ್ ಪರೀಕ್ಷೆಗೆ ಸಂಬಂಧಿಸಿದಂತೆ ಸಲಹೆಗಳನ್ನು ನೀಡಲು IGNOU ಉಪ ಕುಲಪತಿ ಪ್ರೊ.ನಾಗೇಶ್ವರ ರಾವ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ ಎಂದು ಶ್ರೀ ಪೋಖ್ರಿಯಾಲ್ ಮಾಹಿತಿ ನೀಡಿದರು.

ಯು.ಜಿ.ಸಿ ಅಧ್ಯಕ್ಷರ ನೇತೃತ್ವದಲ್ಲಿ ಅಕಾಡೆಮಿಕ್ ಕ್ಯಾಲೆಂಡರ್ ಸಮಿತಿಯನ್ನು ರಚಿಸುವ ನಿರ್ಧಾರವನ್ನು ಸಚಿವರು ತೆಗೆದುಕೊಂಡರು. ಶೈಕ್ಷಣಿಕ ಅಧಿವೇಶನದಲ್ಲಿ ವಿಳಂಬದ ಸಮಸ್ಯೆಯನ್ನು ಎದುರಿಸುವ ಕ್ರಮಗಳನ್ನು ಸಮಿತಿಯು ಸೂಚಿಸುತ್ತದೆ.

ವಿದ್ಯಾರ್ಥಿಗಳ ಮಾನಸಿಕ ಸ್ವಾಸ್ಥ್ಯವನ್ನು ಖಚಿತಪಡಿಸಿಕೊಳ್ಳಲು, ಸಚಿವಾಲಯದ ಜಂಟಿ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸುವುದಾಗಿ ಕೇಂದ್ರ ಸಚಿವರು ಘೋಷಿಸಿದರು. ಸಮಿತಿಯು ಶಾಲೆಯ ವಿದ್ಯಾರ್ಥಿಗಳ ಜೊತೆಗೆ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳ ಮಾನಸಿಕ ಸ್ವಾಸ್ಥ್ಯವನ್ನು ನೋಡಿಕೊಳ್ಳಲಿದೆ.

ತಮ್ಮ ಹಾಸ್ಟೆಲ್ ಗಳಲ್ಲಿ ಯಾವುದೇ ರೀತಿಯ ಕೊರತೆ ಇರಬಾರದು ಎಂದು ಕೇಂದ್ರ ಸಚಿವರು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ ಮತ್ತು ಬಿ.ಎಚ್.ಯು. ಉಪಕುಲಪತಿಗಳಿಗೆ ನಿರ್ದೇಶನ ನೀಡಿದರು. ಕೆಲವು ವಿಶ್ವವಿದ್ಯಾಲಯಗಳು COVID-19 ವಿರುದ್ಧ ಹೋರಾಡಲು ಕೆಲವು ಸಂಶೋಧನೆಗಳನ್ನು ಮಾಡಿವೆ ಎಂದು ಹೇಳಿದ್ದು, ಇದು ಅಧಿಕೃತ ಏಜೆನ್ಸಿಗಳ ಅನುಮೋದನೆಯ ನಂತರ ಜನರನ್ನು ತಲುಪುತ್ತದೆ. ಇಂತಹ ಸಂಶೋಧನೆಗಳನ್ನು ತ್ವರಿತಗತಿಯಲ್ಲಿ ನಡೆಸಬೇಕೆಂದು ಸಚಿವರು ಮನವಿ ಮಾಡಿದರು. ಅಂತಹ ಸಂಶೋಧನೆಗಳಿಗೆ ಎಲ್ಲ ನೆರವು ನೀಡುವುದಾಗಿಯೂ ಅವರು ಭರವಸೆ ನೀಡಿದರು.

ಶಾಶ್ವತ, ತಾತ್ಕಾಲಿಕ ಮತ್ತು ದೈನಂದಿನ ವೇತನ ಪಡೆಯುವವರಿಗೆ ವೇತನವನ್ನು ಸಮಯಕ್ಕೆ ಸರಿಯಾಗಿದೆ ನೀಡಲಾಗುತ್ತಿದೆ ಮತ್ತು ಸಮಯದಲ್ಲಿ ಅವರು ಗೈರುಹಾಜರಾದ ದಿನಗಳಲ್ಲಿಯೂ ಸಂಬಳ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ಎಲ್ಲಾ ವಿಶ್ವವಿದ್ಯಾಲಯಗಳ ಉಪಕುಲಪತಿಗಳು ಹೇಳಿದರು.

ಕೇಂದ್ರ ಸಚಿವರು ಎಲ್ಲಾ ಉಪಕುಲಪತಿಗಳನ್ನು ಪಿಎಂ ಕೇರ್ಸ್ ನಿಧಿಗೆ ಕೊಡುಗೆ ನೀಡುವಂತೆ ವಿನಂತಿಸಿದರು. ಪ್ರಧಾನ ಮಂತ್ರಿಯವರ ಕರೆಯ ಮೇರೆಗೆ, 2020 ಏಪ್ರಿಲ್ 5 ರಂದು ರಾತ್ರಿ 9 ಗಂಟೆಗೆ ತಮ್ಮ ಮನೆಗಳ ವಿದ್ಯುತ್ ದೀಪಗಳನ್ನು 9 ನಿಮಿಷಗಳ ಕಾಲ ಸ್ವಿಚ್ ಆಫ್ ಮಾಡಿ ಮತ್ತು ಒಗ್ಗಟ್ಟನ್ನು ವ್ಯಕ್ತಪಡಿಸಲು ದೀಪ, ಮೋಂಬತ್ತಿ ಅಥವಾ ಮೊಬೈಲ್ ದೀಪಗಳನ್ನು ಬೆಳಗಿಸಬೇಕು ಎಂದು ಮನವಿ ಮಾಡಿದರು.

ಭಾರತ ಸರ್ಕಾರ ಅಭಿವೃದ್ಧಿಪಡಿಸಿರುವ ಆರೋಗ್ಯ ಸೇತು ಆ್ಯಪ್ ಅನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಂತೆ ಶ್ರೀ ನಿಶಾಂಕ್ ಅವರು ಮನವಿ ಮಾಡಿದರು. COVID-19 ಸಾಂಕ್ರಾಮಿಕವು ಹರಡುವುದನ್ನು ತಡೆಗಟ್ಟಲು ಆಯುಷ್ ಸಚಿವಾಲಯವು ಕಾಲಕಾಲಕ್ಕೆ ಹೊರಡಿಸುವ ಮಾರ್ಗಸೂಚಿಗಳನ್ನು ಅನುಸರಿಸುವಂತೆಯೂ ಅವರು ಹೇಳಿದರು.

ಅಂತಿಮವಾಗಿ, ಕೇಂದ್ರ ಸಚಿವರು ಕೆಳಕಂಡ ಅಂಶಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಎಲ್ಲಾ ಉಪ ಕುಲಪತಿಗಳು ಸೂಚಿಸಿದರು.

i)        ಆನ್ಲೈನ್ ಶಿಕ್ಷಣದ ಮೂಲಕ ಒಟ್ಟು ದಾಖಲಾತಿ ಅನುಪಾತವನ್ನು (ಜಿಇಆರ್) ಹೆಚ್ಚಿಸಲು ಪ್ರಯತ್ನಗಳು.

(ii)       ಓದುವಿಕೆ - ಓದುವ ಗುಣಮಟ್ಟ ಮತ್ತು ಮಾನದಂಡಗಳ ಮಟ್ಟವನ್ನು ಹೆಚ್ಚಿಸಲು ಪ್ರಯತ್ನಗಳು.

         (iii)     ವಿಶ್ವವಿದ್ಯಾಲಯ ಆವರಣದಲ್ಲಿ ಶಿಸ್ತು ಕಾಪಾಡಿಕೊಳ್ಳಲು ಸೂಕ್ತ ಕ್ರಮಗಳು.

(iv)      ಕೇಂದ್ರೀಯ ವಿಶ್ವವಿದ್ಯಾಲಯಗಳನ್ನು ಜ್ಞಾನ ಮತ್ತು ಶ್ರೇಷ್ಠತೆಯ ಕೇಂದ್ರಗಳಾಗಿ ಅಭಿವೃದ್ಧಿಪಡಿಸಲು ಸಮಂಜಸವಾದ ತಂತ್ರ.

(v)       ಸಾಮಾನ್ಯ ಸ್ಥಿತಿಯ ಪುನಃಸ್ಥಾಪನೆಯ ನಂತರ ಸುಗಮವಾಗಿ ಕಾರ್ಯನಿರ್ವಹಿಸಲು ಅನುವಾಗುವಂತೆ ಶೈಕ್ಷಣಿಕ ಕ್ಯಾಲೆಂಡರ್ ಪೂರ್ವಭಾವಿ ಯೋಜನೆ ಸಿದ್ಧಪಡಿಸಬೇಕು.

***


(Release ID: 1611283) Visitor Counter : 236