ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಕೋವಿಡ್-19 ಎದುರಿಸಲು ಬಾಂಬೆ ಐಐಟಿಯ ಎಸ್ಐಎನ್ಇ ಯಲ್ಲಿ ಕ್ಷಿಪ್ರ ಪ್ರತಿಸ್ಪಂದನಾ ಕೇಂದ್ರ ಸ್ಥಾಪಿಸಿದ ಡಿಎಸ್ ಟಿ

Posted On: 03 APR 2020 5:35PM by PIB Bengaluru

ಕೋವಿಡ್-19 ಎದುರಿಸಲು ಬಾಂಬೆ ಐಐಟಿಯ ಎಸ್ಐಎನ್ಇ ಯಲ್ಲಿ ಕ್ಷಿಪ್ರ ಪ್ರತಿಸ್ಪಂದನಾ ಕೇಂದ್ರ ಸ್ಥಾಪಿಸಿದ ಡಿಎಸ್ ಟಿ
 

ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕೋವಿಡ್-19 ಜಾಗತಿಕ ಸಾಂಕ್ರಾಮಿಕ ಎದುರಿಸುವ ಕ್ಷಿಪ್ರ ಪ್ರತಿಸ್ಪಂದನಾ ಕ್ರಮವಾಗಿ ಕೋವಿಡ್ರ-19 ಸವಾಲುಗಳನ್ನು ಎದುರಿಸಲು ಹೊಸ ಹೊಸ ಆವಿಷ್ಕಾರಗಳನ್ನು ಮತ್ತು ನವೋದ್ಯಮಗಳನ್ನು ಬೆಂಬಲಿಸಲು ಒಟ್ಟಾರೆ 56 ಕೋಟಿ ರೂ. ವೆಚ್ಚದಲ್ಲಿ ಕೋವಿಡ್-19 ಆರೋಗ್ಯ ಬಿಕ್ಕಟ್ಟು ಸಮರ ಎದುರಿಸುವ ಕೇಂದ್ರ(ಸಿಎಡಬ್ಲ್ಯೂಎಸಿಎಚ್) ಸ್ಥಾಪನೆಗೆ ಅನುಮೋದನೆ ನೀಡಿದೆ. ಬಾಂಬೆ ಐಐಟಿಯಲ್ಲಿರುವ ಸಂಪೋಷಣಾ ಕೇಂದ್ರ ತಾಂತ್ರಿಕ ವಾಣಿಜ್ಯ ಇನ್ ಕ್ಯುಬೇಟರ್, ಆವಿಷ್ಕಾರ ಮತ್ತು ಉದ್ಯಮಶೀಲ ಸೊಸೈಟಿ(ಎಸ್ಐಎನ್ಇ) ಬೆಂಬಲದೊಂದಿಗೆ ಡಿಎಸ್ ಟಿ ಯನ್ನು ಗುರುತಿಸಲಾಗಿದ್ದು, ಇದು ಸಿಎಡಬ್ಲ್ಯೂಎಸಿಎಚ್ ನ ಅನುಷ್ಠಾನಗೊಳಿಸುವ ಏಜೆನ್ಸಿಯಾಗಲಿದೆ.

ಕೋವಿಡ್-19 ಸಾಂಕ್ರಾಮಿಕ ರೋಗದ ಪರಿಣಾಮ ವಿಶ್ವದ ಎಲ್ಲ ರಾಷ್ಟ್ರಗಳಿಗೂ ತಟ್ಟಿದ್ದು, ಹಲವು ರಾಷ್ಟ್ರಗಳು ತಕ್ಷಣದ ಕ್ರಮಗಳಿಗೆ ಹಾಗೂ ಜನರ ಜೀವ ಉಳಿಸುವ, ಹರಡುವುದನ್ನು ತಪ್ಪಿಸುವ, ಚಿಕಿತ್ಸೆ ನೀಡುವ ಹಾಗೂ ರೋಗ ಪತ್ತೆ ಮಾಡುವ ಕ್ರಮಗಳ ಆವಿಷ್ಕಾರಗಳಿಗೆ ಮುಂದಾಗಿವೆ. ಆ ನಿಟ್ಟಿನಲ್ಲಿ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಭಾರತದ ಪ್ರಯತ್ನಗಳನ್ನು ತ್ವರಿತಗೊಳಿಸುವಲ್ಲಿ   ಡಿಎಸ್ ಟಿ ಅತ್ಯಂತ ಮಹತ್ವದ ಪಾತ್ರವಹಿಸಲಿದೆ.

ರಾಷ್ಟ್ರ, ಆರೋಗ್ಯ ತುರ್ತುಪರಿಸ್ಥಿತಿ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಹಲವು ಸಂಶೋಧನಾ ಸಂಸ್ಥೆಗಳು ಮತ್ತು ಪ್ರಯೋಗಾಲಯಗಳು ಸಾಂಕ್ರಾಮಿಕವನ್ನು ಎದುರಿಸಲು ನಾನಾ ಪರಿಹಾರಗಳನ್ನು ಕಂಡುಹಿಡಿಯುತ್ತಿವೆ. ಈ ಪ್ರಯತ್ನಗಳನ್ನು ಗುರುತಿಸಲು ಮತ್ತು ಕೋವಿಡ್-19 ನಿಂದಾಗುವ ಮತ್ತಷ್ಟು ಅನಾಹುತಗಳನ್ನು ತಪ್ಪಿಸಲು ನಾನಾ ರೂಪದಲ್ಲಿ ಸಂಪನ್ಮೂಲಗಳನ್ನು ಬಳಕೆ ಮಾಡಿಕೊಳ್ಳಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಹಲವು ತುರ್ತು ಕ್ರಮಗಳನ್ನು ಕೈಗೊಂಡಿವೆ.

ಡಿಎಸ್ ಟಿಯ ಪ್ರಯತ್ನಗಳು ಅತ್ಯಂತ ಸಕಾಲಿಕವಾಗಿದ್ದು, ಕೋವಿಡ್-19 ಎದುರಿಸಲು ಹಲವು ಸಮಗ್ರ ಪರಿಹಾರಗಳನ್ನು ಅಂದರೆ ವೆಂಟಿಲೇಟರ್, ಡಯಾಗ್ನಾಸ್ಟಿಕ್, ಥೆರಪೆಟಿಕ್ಸ್, ಇನ್ ಫಾರ್ ಮ್ಯಾಟಿಕ್ಸ್ ಮತ್ತಿತರ ಹೊಸ ಆವಿಷ್ಕಾರಗಳ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಬೆಂಬಲಿಸುವುದು ಅತ್ಯಗತ್ಯವಾಗಿದೆ.

ಅಲ್ಲದೆ ನಾನಾ ಹಂತಗಳಲ್ಲಿರುವ ನವೋದ್ಯಮಗಳನ್ನು ಬೆಂಬಲಿಸಿ, ಅವುಗಳು ವಾಣಿಜ್ಯ ರೂಪದಲ್ಲಿ ಪ್ರಕ್ರಿಯೆಗಳನ್ನು ನಡೆಸಲು ತ್ವರಿತ ಕ್ರಮ ಕೈಗೊಳ್ಳುವುದು ಮತ್ತು ದೀರ್ಘಕಾಲದಲ್ಲಿ ಪರಿಣಾಮ ಬೀರುವಂತಹ ಕ್ರಮಗಳನ್ನು ಉತ್ತೇಜಿಸುವುದು ಅಗತ್ಯವಾಗಿದೆ.

ಸಿಎಡಬ್ಲ್ಯೂಎಸಿಎಚ್, ಸಂಭಾವ್ಯ ನವೋದ್ಯಮಗಳಿಗೆ ಸಕಾಲದಲ್ಲಿ ಅಗತ್ಯ ಹಣಕಾಸು ನೆರವು ನೀಡುವ ಉದ್ದೇಶವನ್ನು ಹೊಂದಿದೆ ಮತ್ತು ಮುಂದಿನ ಆರು ತಿಂಗಳಲ್ಲಿ ಮಾರುಕಟ್ಟೆಯಲ್ಲಿ ಹೊಸ ಅನ್ವೇಷಣೆಗಳನ್ನು ತರುವಂತಹ ಯೋಜನೆಗಳಿಗೆ ನಿಧಿ ಒದಗಿಸುವ ಗುರಿ ಹೊಂದಿದೆ.

ಕೋವಿಡ್-19 ಎದುರಿಸಲು ಯಾವುದೇ ರೀತಿಯ ಪರಿಣಾಮಕಾರಿಯಾಗಿ ಕೆಲಸ ಮಾಡುವಂತಹ ಮಾಹಿತಿ, ಸೋಂಕು ನಿವಾರಣೆ, ಸೋಂಕು ಪತ್ತೆ, ಸೋಂಕು ಥೆರಪಿಗಳಿಗೆ ಹಾಗೂ ಕಡಿಮೆ ವೆಚ್ಚದಲ್ಲಿ ಸುರಕ್ಷಿತ ಮತ್ತು ಪರಿಣಾಮಕಾರಿ ವೆಂಟಿಲೇಟರ್, ಉಸಿರಾಟದ ಉಪಕರಣಗಳು, ರಕ್ಷಣಾ ಉಪಕರಣಗಳು ಮತ್ತಿತರ ವಿನೂತನ ಉಪಕರಣಗಳ ಅನ್ವೇಷಣೆ ಮತ್ತು ಸಂಶೋಧನೆಯಲ್ಲಿ ತೊಡಗಿರುವ 50 ನವೋದ್ಯಮಗಳನ್ನು ಸಿಎಡಬ್ಲ್ಯೂಎಸಿಎಚ್ ಗುರುತಿಸಲಿದೆ.

ದೇಶಾದ್ಯಂತ ಕೋವಿಡ್-19 ಬಿಕ್ಕಟ್ಟಿಗೆ ಪರಿಹಾರಗಳನ್ನು ಕಂಡು ಹಿಡಿಯಲು ಆದ್ಯತೆ ನೀಡುವಂತಹ ವಲಯಗಳನ್ನು ಗುರುತಿಸಿ ಅಂತಹ ಪರಿಹಾರಗಳು ಮತ್ತು ಉತ್ಪನ್ನಗಳ ಪರೀಕ್ಷೆ, ಪ್ರಾಯೋಗಿಕ ಬಳಕೆ ಮತ್ತು ಮಾರುಕಟ್ಟೆಗೆ ನಿಯೋಜಿಸುವ ಕ್ರಮಗಳಿಗೆ ಇದು ನೆರವು ನೀಡುತ್ತದೆ. ಕೋವಿಡ್-19ನಿಂದ  ದೇಶದ ಮೇಲಾಗುತ್ತಿರುವ ಭಾರೀ ಪರಿಣಾಮದಿಂದ ಎದುರಾಗಿರುವ ಸವಾಲುಗಳನ್ನು ಹತ್ತಿಕ್ಕಲು ಇದು ನೆರವಾಗುತ್ತದೆ.

“ಡಿಎಸ್ ಟಿಯ ಸಿಎಡಬ್ಲ್ಯೂಎಸಿಎಚ್ ಕಾರ್ಯಕ್ರಮ ಮುಖ್ಯವಾಗಿ ಯುವಜನರ ಜ್ಞಾನ ಮತ್ತು ಬುದ್ಧಿಶಕ್ತಿ  ಮತ್ತು ಅಪ್ರತಿಮ ಆವಿಷ್ಕಾರಿ ಸಾಮರ್ಥ್ಯವನ್ನು ಗುರುತಿಸಲು ಹಾಗೂ ತಾಂತ್ರಿಕ ಸಂಪೋಷಣಾ ಕೇಂದ್ರಗಳು ಮತ್ತು ನವೋದ್ಯಮಗಳು ಹಾಗೂ ಕೋವಿಡ್-19ನಿಂದ ಎದುರಾಗುತ್ತಿರುವ ಬಹು ಆಯಾಮದ ಸವಾಲುಗಳನ್ನು ಕ್ಷಿಪ್ರವಾಗಿ ಎದುರಿಸಲು ಉಸಿರಾಟದ ಉಪಕರಣಗಳು, ಸೋಂಕು ನಿವಾರಣಾ ವ್ಯವಸ್ಥೆ, ರಕ್ಷಣಾ ಉಪಕರಣಗಳು, ಕೋಟಿಂಗ್ಸ್, ಮಾಹಿತಿ ಮತ್ತು ನಿಗಾ ಸಹಕಾರ ವ್ಯವಸ್ಥೆ, ಸೋಂಕು ಪತ್ತೆ ಮತ್ತು ಇತರೆ ಅಗತ್ಯ ಉಪಕರಣ ಮತ್ತು ಪರಿಹಾರವನ್ನು ಕಂಡುಹಿಡಿಯುವ ಪ್ರಯತ್ನಗಳಿಗೆ ಆದ್ಯತೆ ನೀಡಿ, ಬೆಂಬಲಿಸಲಾಗುವುದು” ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಪ್ರೊ|| ಅಶುತೋಷ್ ಶರ್ಮ ತಿಳಿಸಿದ್ದಾರೆ.

ಆರೋಗ್ಯ ಬಿಕ್ಕಟ್ಟು ಸೃಷ್ಟಿಯಾಗಿ ಇಡೀ ರಾಷ್ಟ್ರ ಸಂಕಷ್ಟಕ್ಕೆ ಸಿಲುಕಿರುವ ಈ ಸಂದರ್ಭದಲ್ಲಿ ದೇಶಾದ್ಯಂತ ಇರುವ ನವೋದ್ಯಮಗಳು, ಆವಿಷ್ಕಾರಗಳು, ಸಂಪೋಷಣಾ ಕೇಂದ್ರಗಳು, ತಜ್ಞರು, ಸಂಶೋಧಕರು ಮತ್ತು ಬದ್ಧತೆ ಹೊಂದಿರುವ ಸಂಸ್ಥೆಗಳ ಜಾಲ ಹಾಗೂ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಪ್ರಯತ್ನವಾಗಿ ಡಿಎಸ್ ಟಿ ಮುಂಚೂಣಿಯಲ್ಲಿ ನಿಂತು ಈ ಕ್ರಮಗಳನ್ನು ಕೈಗೊಂಡಿದೆ.

ಹೆಚ್ಚಿನ ವಿವರಗಳಿಗೆ ಇವರನ್ನು ಸಂಪರ್ಕಿಸಿ:

ಟಿಬಿಐ ಸಂಪರ್ಕ: ಶ್ರೀಮತಿ ಪೋಯ್ನಿ ಭಟ್, ಮುಖ್ಯ ಕಾರ್ಯಕಾರಿ ಅಧಿಕಾರಿ,

ಆವಿಷ್ಕಾರ ಮತ್ತು ಉದ್ಯಮಶೀಲ ಸೊಸೈಟಿ(ಎಸ್ಐಎನ್ಇ)

ಭಾರತೀಯ ತಂತ್ರಜ್ಞಾನ ಸಂಸ್ಥೆ ಬಾಂಬೆ(ಐಐಟಿ ಬಾಂಬೆ)

ಫೋನ್+91 22 25767072

ಇ-ಮೇಲ್poyni.bhatt@sineiitb.org

www.sineiitb.org

ಡಿಎಸ್ ಟಿ ಸಂಪರ್ಕ: ಡಾ|| ಅನಿತಾ ಗುಪ್ತ, ವಿಜ್ಞಾನಿ-ಜಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ

ಮೊಬೈಲ್: +91-9811828996

ಇ-ಮೇಲ್: anigupta[at]nic[dot]in}(Release ID: 1610922) Visitor Counter : 256