ಪ್ರಧಾನ ಮಂತ್ರಿಯವರ ಕಛೇರಿ
COVID-19 ನಿಭಾವಣೆಯ ಪ್ರಯತ್ನಗಳನ್ನು ಹೆಚ್ಚಿಸಲು ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಚರ್ಚೆ
Posted On:
02 APR 2020 2:32PM by PIB Bengaluru
COVID-19 ನಿಭಾವಣೆಯ ಪ್ರಯತ್ನಗಳನ್ನು ಹೆಚ್ಚಿಸಲು ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಚರ್ಚೆ
ವೈರಸ್ ಹರಡುವಿಕೆಯನ್ನು ತಡೆಯಲು ಎಲ್ಲಾ ರಾಜ್ಯಗಳು ಒಂದು ತಂಡವಾಗಿ ಕೆಲಸ ಮಾಡಿರುವುದು ನಿಜಕ್ಕೂ ಪ್ರಶಂಸನೀಯ: ಪ್ರಧಾನಿ
ಲಾಕ್ಡೌನ್ ಮುಗಿದ ನಂತರ ಜನರ ಪುನರುಜ್ಜೀವನವನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳು ಮತ್ತು ಕೇಂದ್ರವು ಸಾಮಾನ್ಯ ನಿರ್ಗಮನ ತಂತ್ರವನ್ನು ರೂಪಿಸಬೇಕು: ಪ್ರಧಾನಿ
ಪ್ರಾಣಹಾನಿಯನ್ನು ಕಡಿಮೆ ಮಾಡುವುದು ನಮ್ಮ ಗುರಿ: ಪ್ರಧಾನಿ
ಬಿಕ್ಕಟ್ಟಿನ ಸಮಯದಲ್ಲಿ ಪ್ರಧಾನ ಮಂತ್ರಿಯವರ ನಾಯಕತ್ವವನ್ನು ಶ್ಲಾಘಿಸಿದ ಮುಖ್ಯಮಂತ್ರಿಗಳು; ನಿಜಾಮುದ್ದೀನ್ ಮಾರ್ಕಾಜ್ ಪ್ರಕರಣಗಳನ್ನು ಕುರಿತ ಕ್ರಮಗಳ ಬಗ್ಗೆ ವಿವರಣೆ
ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಸಮುದಾಯಗಳ ನಾಯಕರು ಮತ್ತು ಸಾಮಾಜಿಕ ಕಲ್ಯಾಣ ಸಂಸ್ಥೆಗಳನ್ನು ಬಳಸಿಕೊಂಡು, ಸಮುದಾಯ-ವಿಧಾನವನ್ನು ಅಳವಡಿಸಿಕೊಳ್ಳಲು ಮುಖ್ಯಮಂತ್ರಿಗಳಿಗೆ ಪ್ರಧಾನಿ ಸಲಹೆ
COVID-19 ಎದುರಿಸುವ ಕ್ರಮಗಳ ಬಗ್ಗೆ ಚರ್ಚಿಸಲು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಂವಾದ ನಡೆಸಿದರು.
ಲಾಕ್ಡೌನ್ ನಿರ್ಧಾರವನ್ನು ಬೆಂಬಲಿಸಿದ್ದಕ್ಕಾಗಿ ರಾಜ್ಯಗಳಿಗೆ ಪ್ರಧಾನಿ ಧನ್ಯವಾದ ತಿಳಿಸಿದರು. ಇದರಿಂದಾಗಿ COVID-19 ಹರಡುವುದನ್ನು ಸೀಮಿತಗೊಳಿಸುವಲ್ಲಿ ಭಾರತ ಸ್ವಲ್ಪ ಯಶಸ್ಸನ್ನು ಸಾಧಿಸಿದೆ. ವೈರಸ್ ಹರಡುವಿಕೆಯನ್ನು ತಡೆಯಲು ಎಲ್ಲಾ ರಾಜ್ಯಗಳು ಒಂದು ತಂಡವಾಗಿ ಕೆಲಸ ಮಾಡಿವೆ ಎಂದು ಅವರು ಶ್ಲಾಘಿಸಿದರು. ಆದಾಗ್ಯೂ, ಜಾಗತಿಕ ಪರಿಸ್ಥಿತಿ ತೃಪ್ತಿಕರವಾಗಿಲ್ಲ ಎಂದ ಪ್ರಧಾನಿ, ಕೆಲವು ದೇಶಗಳಲ್ಲಿ ವೈರಸ್ ಎರಡನೇ ಬಾರಿಗೆ ಹರಡುವ ಸಂಭವದ ಬಗ್ಗೆ ಇರುವ ಊಹಾಪೋಹಗಳ ಬಗ್ಗೆ ಮಾಹಿತಿ ನೀಡಿದರು.
ಪ್ರಾಣಹಾನಿಯನ್ನು ಆದಷ್ಟು ಕಡಿಮೆ ಮಾಡುವುದು ದೇಶದ ಸಾಮಾನ್ಯ ಗುರಿಯಾಗಿದೆ ಎಂದು ಪ್ರಧಾನಿ ತಿಳಿಸಿದರು. ಮುಂದಿನ ಕೆಲವು ವಾರಗಳಲ್ಲಿ, ಪರೀಕ್ಷೆ, ಪತ್ತೆಹಚ್ಚುವಿಕೆ, ಪ್ರತ್ಯೇಕತೆ ಮತ್ತು ನಿರ್ಬಂಧಗಳ ಬಗ್ಗೆ ಗಮನ ಕೇಂದ್ರೀಕರಿಸಬೇಕು. ಅಗತ್ಯ ವೈದ್ಯಕೀಯ ಉತ್ಪನ್ನಗಳ ಸರಬರಾಜು, ಔಷಧಿಗಳ ತಯಾರಿಕೆಗೆ ಕಚ್ಚಾ ವಸ್ತುಗಳ ಲಭ್ಯತೆ ಮತ್ತು ವೈದ್ಯಕೀಯ ಉಪಕರಣಗಳ ಅಗತ್ಯತೆಯ ಮಹತ್ವವನ್ನು ಅವರು ತಿಳಿಸಿದರು. COVID-19 ರೋಗಿಗಳಿಗೆ ಪ್ರತ್ಯೇಕ, ಮೀಸಲಾದ ಆಸ್ಪತ್ರೆ ಸೌಲಭ್ಯಗಳನ್ನು ಖಚಿತಪಡಿಸಿಕೊಳ್ಳುವುದು ಅವಶ್ಯಕ ಎಂದು ಅವರು ಹೇಳಿದರು. ವೈದ್ಯರ ಲಭ್ಯತೆಯನ್ನು ಹೆಚ್ಚಿಸಲು, ಆಯುಷ್ ವೈದ್ಯರ ಸಂಪನ್ಮೂಲವನ್ನು ಬಳಸಿಕೊಳ್ಳುವಂತೆ, ಆನ್ಲೈನ್ ತರಬೇತಿಯನ್ನು ಆಯೋಜಿಸುವಂತೆ ಮತ್ತು ಅರೆ-ವೈದ್ಯಕೀಯ ಸಿಬ್ಬಂದಿ, ಎನ್ಸಿಸಿ ಮತ್ತು ಎನ್ಎಸ್ಎಸ್ ಸ್ವಯಂಸೇವಕರನ್ನು ಬಳಸಿಕೊಳ್ಳುವಂತೆ ಅವರು ರಾಜ್ಯಗಳಿಗೆ ತಿಳಿಸಿದರು.
ಸಂಘಟಿತ ಕ್ರಮಗಳ ಪ್ರಾಮುಖ್ಯತೆ ಮತ್ತು ಪಾಲುದಾರರ ಪ್ರಯತ್ನಗಳಲ್ಲಿ ಅತಿಕ್ರಮಣಗಳನ್ನು ತಪ್ಪಿಸುವ ಅಗತ್ಯವನ್ನು ಒತ್ತಿಹೇಳಿದ ಪ್ರಧಾನಿಯವರು, ಜಿಲ್ಲಾ ಮಟ್ಟದಲ್ಲಿ ಬಿಕ್ಕಟ್ಟು ನಿರ್ವಹಣಾ ತಂಡಗಳನ್ನು ಸ್ಥಾಪಿಸುವ ಅಗತ್ಯತೆ ಮತ್ತು ಜಿಲ್ಲಾ ಕಣ್ಗಾವಲು ಅಧಿಕಾರಿಗಳ ನೇಮಕ ಕುರಿತು ಮಾತನಾಡಿದರು. ಮಾನ್ಯತೆ ಪಡೆದ ಲ್ಯಾಬ್ಗಳಿಂದ ಪರೀಕ್ಷೆಯ ಡೇಟಾವನ್ನು ತೆಗೆದುಕೊಳ್ಳಬೇಕು. ಇದು ಜಿಲ್ಲೆ, ರಾಜ್ಯ ಮತ್ತು ಕೇಂದ್ರದ ದತ್ತಾಂಶಗಳಲ್ಲಿ ಏಕರೂಪತೆಯನ್ನು ಖಚಿತಪಡಿಸುತ್ತದೆ ಎಂದು ಅವರು ಹೇಳಿದರು. ಬ್ಯಾಂಕುಗಳಲ್ಲಿ ಜನಟ್ಟಣೆಯನ್ನು ತಪ್ಪಿಸಲು ಪಿಎಂ ಗರಿಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಸ್ಥಗಿತಗೊಂಡ ಹಣವನ್ನು ಬಿಡುಗಡೆ ಮಾಡುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು.
ಇದು ಬೆಳೆಗಳ ಕೊಯ್ಲಿನ ಸಮಯ ಎಂಬುದನ್ನು ಪರಿಗಣಿಸಿ, ಸರ್ಕಾರವು ರೈತರಿಗೆ ಲಾಕ್ಡೌನ್ನಿಂದ ಸ್ವಲ್ಪ ವಿನಾಯ್ತಿ ನೀಡಿದೆ. ಆದರೆ ಸಾಧ್ಯವಾದಷ್ಟು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಅಗತ್ಯವಾಗಿದೆ ಎಂದು ಪ್ರಧಾನಿ ಹೇಳಿದರು. ಎಪಿಎಂಸಿ ಹೊರತುಪಡಿಸಿ ಧಾನ್ಯಗಳನ್ನು ಸಂಗ್ರಹಿಸಲು ಇತರ ಪ್ಲಾಟ್ಫಾರ್ಮ್ಗಳ ಬಗ್ಗೆ ಯೋಚಿಸುವಂತೆ ಅವರು ರಾಜ್ಯಗಳಿಗೆ ತಿಳಿಸಿದರು. ರೈಡ್ ಶೇರಿಂಗ್ ಅಪ್ಲಿಕೇಶನ್ಗಳಲ್ಲಿರುವಂತೆ ಗ್ರಾಮೀಣ ಪ್ರದೇಶಗಳಿಗೆ ಪೂಲಿಂಗ್ ಪ್ಲಾಟ್ಫಾರ್ಮ್ಗಳನ್ನು ರಚಿಸುವ ಸಾಧ್ಯತೆಯನ್ನು ಹುಡುಕಿ, ಅದನ್ನು ಈ ಉದ್ದೇಶಕ್ಕಾಗಿ ಬಳಸಬಹುದು ಎಂದರು.
ಈ ಸಂಕಷ್ಟದ ಸಮಯದಲ್ಲಿ ತಮ್ಮ ನಾಯಕತ್ವ, ನಿರಂತರ ಮಾರ್ಗದರ್ಶನ ಮತ್ತು ಬೆಂಬಲಕ್ಕಾಗಿ ಪ್ರಧಾನಿಯವರಿಗೆ ಮುಖ್ಯಮಂತ್ರಿಗಳು ಧನ್ಯವಾದ ಹೇಳಿದರು. ದೇಶದಲ್ಲಿ ವೈರಸ್ ಹರಡುವುದನ್ನು ತಡೆಯಲು ಸಹಾಯ ಮಾಡಿದ ಲಾಕ್‌ಡೌನ್‌ನ ದಿಟ್ಟ ಮತ್ತು ಸಮಯೋಚಿತ ನಿರ್ಧಾರವನ್ನು ಕೈಗೊಂಡಿದ್ದಕ್ಕಾಗಿ ಅವರು ಪ್ರಧಾನಮಂತ್ರಿಯವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು, ಶಂಕಿತ ಪ್ರಕರಣಗಳನ್ನು ಪತ್ತೆಹಚ್ಚುವುದು, ನಿಜಾಮುದ್ದೀನ್ ಮಾರ್ಕಾಜ್ ನಿಂದ ಉದ್ಭವಿಸಿರುವ ಶಂಕಿತ ಪ್ರಕರಣಗಳನ್ನು ಗುರುತಿಸುವುದು ಮತ್ತು ನಿರ್ಬಂಧಿಸುವುದು, ಸಮುದಾಯ ಪ್ರಸರಣವನ್ನು ನಿಗ್ರಹಿಸುವುದು, ವೈದ್ಯಕೀಯ ಮೂಲಸೌಕರ್ಯಗಳನ್ನು ಹೆಚ್ಚಿಸುವುದು, ವೈದ್ಯಕೀಯ ಕಾರ್ಯಪಡೆಗಳನ್ನು ಬಲಪಡಿಸುವುದು, ಟೆಲಿ-ಮೆಡಿಸಿನ್, ಮಾನಸಿಕ ಆರೋಗ್ಯ ಸಮಾಲೋಚನೆ, ಅಗತ್ಯವಿರುವವರಿಗೆ ಆಹಾರ ಮತ್ತು ಇತರ ಅಗತ್ಯ ವಸ್ತುಗಳ ವಿತರಣೆ ಮತ್ತು ವಲಸೆ ಕಾರ್ಮಿಕರ ಯೋಗಕ್ಷೇಮದ ಬಗ್ಗೆ ತಮ್ಮ ಪ್ರಯತ್ನಗಳನ್ನು ವಿವರಿಸಿದರು. ಬಿಕ್ಕಟ್ಟನ್ನು ತಗ್ಗಿಸಲು ಆರ್ಥಿಕ ಮತ್ತು ವೈದ್ಯಕೀಯ ಸಂಪನ್ಮೂಲಗಳು ಒಟ್ಟುಗೂಡಿಸುವ ಮಹತ್ವದ ಬಗ್ಗೆ ರಾಜ್ಯಗಳ ಮುಖ್ಯಮಂತ್ರಿಗಳು ಮಾತನಾಡಿದರು.
ಮುಖ್ಯಮಂತ್ರಿಗಳ ಸಲಹೆಗಳಿಗಾಗಿ ಮತ್ತು ಪರಿಸ್ಥಿತಿಯ ಬಗ್ಗೆ ತಿಳಿಸಿದ್ದಕ್ಕಾಗಿ ಪ್ರಧಾನಿಯವರು ಧನ್ಯವಾದ ತಿಳಿಸಿದರು. ಯುದ್ಧೋಪಾದಿಯಲ್ಲಿ ಕೆಲಸ ಮಾಡುವುದು, ವೈರಸ್‌ನ ಹಾಟ್‌ಸ್ಪಾಟ್‌ಗಳನ್ನು ಗುರುತಿಸುವುದು, ಅವುಗಳನ್ನು ಸುತ್ತುವರಿಯುವುದು ಮತ್ತು ವೈರಸ್ ಹರಡದಂತೆ ನೋಡಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಅವರು ಹೇಳಿದರು. ದೇಶಾದ್ಯಂತ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವುದು ಮುಖ್ಯವಾಗಿದೆ ಎಂದರು. COVID-19 ನಮ್ಮ ನಂಬಿಕೆ ಮತ್ತು ವಿಶ್ವಾಸದ ಮೇಲೆ ಆಕ್ರಮಣ ಮಾಡಿದೆ ಮತ್ತು ನಮ್ಮ ಜೀವನ ವಿಧಾನಕ್ಕೇ ಧಕ್ಕೆ ತರುತ್ತಿದೆ ಎಂದು ಅವರು ಹೇಳಿದರು. ರಾಜ್ಯ, ಜಿಲ್ಲೆ, ಪಟ್ಟಣ ಮತ್ತು ಬ್ಲಾಕ್ ಮಟ್ಟಗಳಲ್ಲಿ ಸಮುದಾಯಗಳ ಮುಖಂಡರು ಮತ್ತು ಸಾಮಾಜಿಕ ಕಲ್ಯಾಣ ಸಂಸ್ಥೆಗಳನ್ನು ಬಳಸಿಕೊಂಡು ಸಾಂಕ್ರಾಮಿಕ ರೋಗದ ವಿರುದ್ಧದ ಯುದ್ಧದಲ್ಲಿ ಸಮುದಾಯ-ವಿಧಾನದ ಆಧಾರದ ಮೇಲೆ ಯುನೈಟೆಡ್ ಫ್ರಂಟ್ ಅನ್ನು ರಚಿಸುವಂತೆ ಅವರು ರಾಜ್ಯಗಳ ನಾಯಕರಿಗೆ ಮನವಿ ಮಾಡಿದರು.
ಲಾಕ್‌ಡೌನ್ ಮುಗಿದ ನಂತರ ಜನರ ಪುನರುಜ್ಜೀವನವನ್ನು ಖಚಿತಪಡಿಸಿಕೊಳ್ಳಲು ಸಾಮಾನ್ಯ ನಿರ್ಗಮನ ತಂತ್ರವನ್ನು ರೂಪಿಸುವುದು ಮುಖ್ಯವಾಗಿದೆ ಎಂದು ಪ್ರಧಾನಿ ಹೇಳಿದರು. ನಿರ್ಗಮನ ತಂತ್ರಕ್ಕಾಗಿ ಅಭಿಪ್ರಾಯ, ಸಲಹೆಗಳನ್ನು ಕಳುಹಿಸುವಂತೆ ಅವರು ರಾಜ್ಯಗಳನ್ನು ಕೇಳಿದರು. COVID-19 ಹರಡುವುದನ್ನು ತಡೆಗಟ್ಟುವಲ್ಲಿ ಸಾಮಾಜಿಕ ಅಂತರದ ಮಹತ್ವವನ್ನು ಅವರು ಪುನರುಚ್ಚರಿಸಿದರು.
ಕೆಲವು ರಾಜ್ಯಗಳಲ್ಲಿ ಲಾಕ್‌ಡೌನ್ ಅನ್ನು ಹೆಚ್ಚು ಕಟ್ಟುನಿಟ್ಟಾಗಿ ಜಾರಿಗೆ ತರುವ ಅಗತ್ಯತೆ ಮತ್ತು ಕೇಂದ್ರ ಹೊರಡಿಸಿದ ಮಾರ್ಗಸೂಚಿಗಳನ್ನು ಜಿಲ್ಲಾ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕಾದ ಮಹತ್ವದ ಕುರಿತು ಕೇಂದ್ರ ಗೃಹ ಸಚಿವರು ಮಾತನಾಡಿದರು.
ಭಾರತದಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿನ ಏರಿಕೆ, ನಿಜಾಮುದ್ದೀನ್ ಮಾರ್ಕಾಜ್ ನಿಂದ ಹರಡಿದ ಪ್ರಕರಣಗಳು, ವೈರಸ್ ಹರಡುವುದರಿಂದ ಉಂಟಾಗುವ ವೈದ್ಯಕೀಯ ಪ್ರಕರಣಗಳನ್ನು ನಿಭಾಯಿಸುವ ಸಿದ್ಧತೆಗಳು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ದೃಢಪಟ್ಟ ಜಿಲ್ಲೆಗಳಲ್ಲಿ ಪ್ರಸರಣ ಸರಪಳಿಯನ್ನು ಮುರಿಯುವ ಅಗತ್ಯತೆಯ ಬಗ್ಗೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ವಿವರಿಸಿದರು.
ಕೇಂದ್ರ ರಕ್ಷಣಾ ಸಚಿವರು, ಆರೋಗ್ಯ ಸಚಿವರು, ಪ್ರಧಾನ ಕಾರ್ಯದರ್ಶಿ, ಸಂಪುಟ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ ಮತ್ತು ಐಸಿಎಂಆರ್ ಮಹಾ ನಿರ್ದೇಶಕರು ಸಹ ಸಂವಾದದಲ್ಲಿ ಭಾಗವಹಿಸಿದ್ದರು. ವಿಡಿಯೋ ಸಮ್ಮೇಳನದಲ್ಲಿ ಮುಖ್ಯಮಂತ್ರಿಗಳ ಜೊತೆಗೆ ಆಯಾ ರಾಜ್ಯಗಳ ಗೃಹ ಸಚಿವರು, ಆರೋಗ್ಯ ಸಚಿವರು, ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ ಮತ್ತು ಆರೋಗ್ಯ ಕಾರ್ಯದರ್ಶಿಗಳು ಭಾಗವಹಿಸಿದ್ದರು.
(Release ID: 1610365)
Visitor Counter : 193
Read this release in:
English
,
Urdu
,
Marathi
,
Hindi
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam