ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್-19 ಅಪ್ ಡೇಟ್
Posted On:
31 MAR 2020 6:29PM by PIB Bengaluru
ಕೋವಿಡ್-19 ಅಪ್ ಡೇಟ್
ದೇಶದಲ್ಲಿ ಕೋವಿಡ್-19ರ ತಡೆಗಟ್ಟುವಿಕೆ, ನಿಯಂತ್ರಣ ಮತ್ತು ನಿರ್ವಹಣೆಯನ್ನು ಉನ್ನತ ಮಟ್ಟದಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತಿದ್ದು ರಾಜ್ಯಗಳ ಸಹಯೋಗದೊಂದಿಗೆ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಾನ್ಯ ಪ್ರಧಾನಮಂತ್ರಿಯವರು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸಂಬಂಧಿತ ಸಚಿವಾಲಯ/ಇಲಾಖೆಗಳ ಉನ್ನತ ಅಧಿಕಾರಿಗಳೊಂದಿಗೆ ನಿಯಮಿತವಾಗಿ ಪರಾಮರ್ಶಿಸಿ ನಿಗಾ ವಹಿಸಿದ್ದಾರೆ.
ಕೋವಿಡ್ -19 ಪಿಡುಗಿನ ವಿರುದ್ಧ ಹೋರಾಡಲು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕುರಿತಂತೆ ಒತ್ತು ನೀಡಿ ಜಾಗೃತಿ ಮೂಡಿಸುತ್ತಿರುವ ಮತ್ತು ಬಡವರಿಗೆ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲು ವ್ಯವಸ್ಥೆ ಮಾಡುತ್ತಿರುವ ಸಮಾಜ ಕಲ್ಯಾಣ ಸಂಘಟನೆಗಳ ಪ್ರತಿನಿಧಿಗಳ ಸಕ್ರಿಯ ಪ್ರಯತ್ನಗಳನ್ನು ಮಾನ್ಯ ಪ್ರಧಾನಮಂತ್ರಿಯವರು ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ. ಜಾಗತಿಕವಾಗಿ ಕೋವಿಡ್ -19 ಮಹಾಮಾರಿಯ ಕುರಿತ ಪ್ರತ್ರಿಕ್ರಿಯೆ ಬಗ್ಗೆ ಚರ್ಚಿಸಲು ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಶ್ವಾದ್ಯಂತ ಇರುವ ಭಾರತೀಯ ರಾಯಭಾರ ಕಚೇರಿ ಮತ್ತು ಹೈಕಮಿಷನ್ ಗಳ ಮುಖ್ಯಸ್ಥರೊಂದಿಗೆ ಚರ್ಚಿಸಿದರು.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಡಾ. ಹರ್ಷವರ್ಧನ್ ಅವರು ಇಂದು ನಡೆದ ಸಚಿವರ ಗುಂಪಿನ (ಜಿ.ಓ.ಎಂ.)ನ 10ನೇ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಚಿವರ ಗುಂಪಿನ ಸದಸ್ಯರುಗಳಾದ ನಾಗರಿಕ ವಿಮಾನಯಾನ ಖಾತೆ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ, ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್, ಗೃಹ ಖಾತೆ ರಾಜ್ಯ ಸಚಿವ ಶ್ರೀ ನಿತ್ಯಾನಂದ ರೈ, ಶಿಪ್ಪಿಂಗ್, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ (ಸ್ವತಂತ್ರ ನಿರ್ವಹಣೆ) ರಾಜ್ಯ ಸಚಿವ ಶ್ರೀ ಮನ್ಸುಖ್ ಮಾಂಡವೀಯ ಮತ್ತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವ ಶ್ರೀ ಅಶ್ವಿನಿ ಕುಮಾರ್ ಚೌಬೆ ಹಾಜರಿದ್ದರು. ಲಾಕ್ ಡೌನ್ ಅನುಷ್ಠಾನ ಕುರಿತ ಹಲವು ವಿಚಾರಗಳು, ವಲಸೆ ಕಾರ್ಮಿಕರ ಸಮಸ್ಯೆಗಳು, ಹೊರಹೊಮ್ಮುತ್ತಿರುವ ಹಾಟ್ ಸ್ಪಾಟ್ ಗಳ ನಿಯಂತ್ರಣ ಕ್ರಮಗಳು, ಪಿಪಿಇಗಳು, ಮಾಸ್ಕ್ ಗಳು, ವೆಂಟಿಲೇಟರ್‌ಗಳು ಇತ್ಯಾದಿ ಅಗತ್ಯ ವಸ್ತುಗಳ ಸಮರ್ಪಕತೆಯನ್ನು ಖಾತರಿಪಡಿಸುವ ಕುರಿತಂತೆ ಗುಂಪು ವಿವರವಾಗಿ ಚರ್ಚಿಸಿತು.
ವಿಜ್ಞಾನ ಸಂಸ್ಥೆಗಳು, ವಿಜ್ಞಾನಿಗಳು, ಕೈಗಾರಿಕೆಗಳು ಮತ್ತು ನಿಯಂತ್ರಣ ಕಾಯಗಳೊಂದಿಗೆ ಸಹಯೋಗ ನಡೆಸಲು ನೀತಿ ಆಯೋಗದ ಸದಸ್ಯ ಪ್ರೊ. ವಿನೋದ್ ಪಾಲ್ ಮತ್ತು ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಪ್ರೊ. ಕೆ. ವಿಜಯ್ ರಾಘವನ್ ಅಧ್ಯಕ್ಷತೆಯಲ್ಲಿ ಕೋವಿಡ್ -19 ಸ್ಪಂದನೆಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಸಬಲೀಕರಣ ಸಮಿತಿಯನ್ನು ರಚಿಸಲಾಗಿದೆ. ಕೋವಿಡ್ -19 ರೋಗದ ಪರೀಕ್ಷಾ ಸೌಲಭ್ಯಗಳನ್ನು ಹೆಚ್ಚಿಸುವ ನಿರ್ಣಾಯಕ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಸಂಶೋಧನೆ ಮತ್ತು ಅಭಿವೃದ್ಧಿಯ ಕುರಿತು ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು, ಈ ಸಮಿತಿಯು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ(ಡಿಎಸ್ಟಿ), ಜೈವಿಕ ತಂತ್ರಜ್ಞಾನ ಇಲಾಖೆ (ಡಿಬಿಟಿ), ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿ.ಎಸ್.ಐ.ಆರ್.), ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿ.ಆರ್.ಡಿ.ಓ.) ಮತ್ತು ಭಾರತೀಯ ವಿಜ್ಞಾನ ಮಂದಿರ (ಐಐಎಸ್ಸಿ)ದೊಂದಿಗೆ ಕಾರ್ಯ ನಿರ್ವಹಿಸಲಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಜವಳಿ, ಔಷಧ ಸಚಿವಾಲಯ ಮತ್ತು ರಾಜ್ಯಗಳ ಸಹಯೋಗದಲ್ಲಿ ಪಿಪಿಇಗಳು, ಮಾಸ್ಕ್ ಗಳು ಮತ್ತು ವೆಂಟಿಲೇಟರ್ ಗಳು, ಅತ್ಯಾವಶ್ಯಕ ವಸ್ತುಗಳನ್ನು ಉತ್ಪಾದಿಸುವ ಕೈಗಾರಿಕೆಗ ನಿಗಾವಹಿಸಿದೆ ಮತ್ತು ಸಂಪರ್ಕಿತರ ವ್ಯಾಪಕ ಪತ್ತೆಗೆ ಎಲ್ಲ ರಾಜ್ಯಗಳೊಂದಿಗೆ ಸಹಯೋಗ ನೀಡುತ್ತಿದೆ. ಇದರಿಂದ ನಮ್ಮ ನಿಗ್ರಹ ಕಾರ್ಯತಂತ್ರದಂತೆ ಯಾವುದೇ ಪ್ರಕರಣ ಕೈತಪ್ಪದಂತೆ ಖಾತ್ರಿಪಡಿಸಲು ಸಹಾಯವಾಗಲಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ತರಬೇತಿ ಸಂಪನ್ಮೂಲಗಳನ್ನು ಎನ್.ಎಂ.ಗಳು, ಆಶಾಗಳು, ಅಂಗನವಾಡಿ ಕಾರ್ಯಕರ್ತರು, ಆಯುಷ್ ಪದ್ಧತಿ ಅಭ್ಯಾಸ ಮಾಡುತ್ತಿರುವವರು, ವೈದ್ಯರು, ಶುಶ್ರೂಷಕರು ಮತ್ತು ಇತರ ಆರೋಗ್ಯ ವೃತ್ತಿಪರರಿಗೆ ಕ್ಷೇತ್ರ ಕಣ್ಗಾವಲು, ಮೇಲ್ವಿಚಾರಣೆ, ಪ್ರಯೋಗಾಲಯ ಪರೀಕ್ಷೆ, ಕ್ಲಿನಿಕಲ್ ನಿರ್ವಹಣೆ, ಪ್ರತ್ಯೇಕೀಕರಣ ಸೌಲಭ್ಯ ನಿರ್ವಹಣೆ, ತೀವ್ರ ನಿಗಾ, ಸೋಂಕು ನಿಯಂತ್ರಣ ಮತ್ತು ಕೋವಿಡ್ 19 ದಿಗ್ಬಂಧನ (ಕ್ವಾರಂಟೈನ್) ಸೌಲಭ್ಯ ನಿರ್ವಹಣೆಯ ತರಬೇತಿಗಾಗಿ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದೆ. ಆರೋಗ್ಯ ಸಚಿವಾಲಯದಿಂದ ಮಾರ್ಚ್ 30ರಂದು ಎರಡು ವೆಬ್ ವಿಚಾರ ಸಂಕಿರಣಗಳನ್ನು (ವೆಬಿನಾರ್ಸ್) ಆಯೋಜಿಸಲಾಗಿತ್ತು. ಇದರಲ್ಲಿ 15 ಸಾವಿರ ದಾದಿಯರಿಗೆ ಆನ್ ಲೈನ್ ತರಬೇತಿ ನೀಡಲಾಯಿತು.
ಈವರೆಗೆ 1251 ಪ್ರಕರಣಗಳಲ್ಲಿ ಸೋಂಕು ದೃಢಪಟ್ಟಿದ್ದು, 32 ಮಂದಿ ಸಾವಿಗೀಡಾಗಿರುವುದಾಗಿ ವರದಿಯಾಗಿದೆ. ಕಳೆದ 24 ಗಂಟೆಗಳಲ್ಲಿ 227 ಹೊಸ ಪ್ರಕರಣಗಲ್ಲಿ ಸೋಂಕು ದೃಢಪಟ್ಟಿದೆ ಮತ್ತು ಮೂರು ಹೊಸ ಸಾವಿನ ವರದಿಗಳಾಗಿವೆ.
*****
(Release ID: 1609753)
Visitor Counter : 208
Read this release in:
Assamese
,
English
,
Urdu
,
Hindi
,
Marathi
,
Bengali
,
Gujarati
,
Odia
,
Tamil
,
Telugu
,
Malayalam