ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್ – 19 ಹೊಸ ಮಾಹಿತಿ: ಪಿಪಿಇ ಕಿಟ್‌ಗಳು, ಎನ್ 95 ಮುಖಗವಸುಗಳು ಮತ್ತು ವೆಂಟಿಲೇಟರ್‌ಗಳ ಲಭ್ಯತೆ

Posted On: 30 MAR 2020 3:45PM by PIB Bengaluru

ಕೋವಿಡ್ – 19 ಹೊಸ ಮಾಹಿತಿ: ಪಿಪಿಇ ಕಿಟ್‌ಗಳು, ಎನ್ 95 ಮುಖಗವಸುಗಳು ಮತ್ತು ವೆಂಟಿಲೇಟರ್‌ಗಳ ಲಭ್ಯತೆ

 

ದೇಶದಲ್ಲಿ ಕೋವಿಡ್-19 ತಡೆಗಟ್ಟುವಿಕೆ, ನಿಯಂತ್ರಣ ಮತ್ತು ನಿರ್ವಹಣೆಯನ್ನು ಉನ್ನತ ಮಟ್ಟದಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಮತ್ತು ರಾಜ್ಯಗಳ ಸಹಯೋಗದೊಂದಿಗೆ ವಿವಿಧ ಕ್ರಮಗಳನ್ನು ಆರಂಭಿಸಲಾಗಿದೆ.  ಪಿಪಿಇಗಳು  (ವೈಯಕ್ತಿಕ ರಕ್ಷಣಾ ಸಲಕರಣೆ) ,  ಮುಖವಾಡಗಳು ಮತ್ತು ವೆಂಟಿಲೇಟರ್‌ಗಳ ಅಗತ್ಯವನ್ನು ಪೂರೈಸುವ ಸಲುವಾಗಿ, ಅಗತ್ಯ ವಸ್ತುಗಳನ್ನು ಉತ್ಪಾದಿಸುವ ಕಾರ್ಖಾನೆಗಳು ಇಪ್ಪತ್ತ ನಾಲ್ಕು ಗಂಟೆಗಳ ಕಾಲ  ಕೆಲಸ ಮಾಡುತ್ತಿವೆ ಮತ್ತು ಆರ್ಡಿನೆನ್ಸ್ ಕಾರ್ಖಾನೆಗಳು ವೈದ್ಯಕೀಯ ಸಿಬ್ಬಂದಿಗೆ ವೈಯಕ್ತಿಕ ರಕ್ಷಣಾ ಸಾಧನಗಳನ್ನು ತಯಾರಿಸಲು ಪ್ರಯತ್ನಿಸುತ್ತಿವೆ. ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ವೆಂಟಿಲೇಟರ್ ತಯಾರಿಸಲು ತೊಡಗಿದ್ದರೆ, ಎಲ್ಲಾ ಔಷಧಿ ಕಂಪನಿಗಳು ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಯಾವುದೇ ಔಷಧಿಗಳ ಕೊರತೆ ಇರುವುದಿಲ್ಲ ಎಂದು ಸರ್ಕಾರಕ್ಕೆ ಭರವಸೆ ನೀಡಿವೆ ಮತ್ತು ವಾಹನ ತಯಾರಕರು ಸಹ ವೆಂಟಿಲೇಟರ್‌ಗಳನ್ನು ಅಭಿವೃದ್ಧಿಪಡಿಸಲು ಮತ್ತು ಉತ್ಪಾದಿಸಲು ಕೆಲಸ ಮಾಡುತ್ತಿದ್ದಾರೆ. ವೈದ್ಯಕೀಯ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದ್ದು, ಯಾವುದೇ ತುರ್ತು ಪರಿಸ್ಥಿತಿಗಳಿಗೆ ಸಂಪೂರ್ಣವಾಗಿ ಸಿದ್ಧರಾಗಿದ್ದಾರೆ.

ವೈಯಕ್ತಿಕ ಸಂರಕ್ಷಣಾ ಸಾಧನಗಳು (ಪಿಪಿಇ) ಕಿಟ್‌ಗಳನ್ನು ಪ್ರತ್ಯೇಕ ಪ್ರದೇಶಗಳಲ್ಲಿ ಮತ್ತು ತೀವ್ರ ನಿಗಾ ಘಟಕಗಳಲ್ಲಿ  ಕೆಲಸ ಮಾಡುವ ವೈದ್ಯಕೀಯ ಸಿಬ್ಬಂದಿಗಳಿಗೆ ಸೋಂಕು ತಗಲದಂತೆ ರಕ್ಷಿಸಲು ಬಳಸಲಾಗುತ್ತವೆ. ಅವುಗಳನ್ನು ದೇಶದಲ್ಲಿ ತಯಾರಿಸುತ್ತಿರಲಿಲ್ಲ. ಮುಂದಿನ ದಿನಗಳಲ್ಲಿ ಪಿಪಿಇಗಳ ಭಾರಿ ಅವಶ್ಯಕತೆಯ ನಿರೀಕ್ಷೆಯೊಂದಿಗೆ, ಭಾರತ ಸರ್ಕಾರವು ದೇಶದಲ್ಲಿ ತಮ್ಮ ಉತ್ಪಾದನೆಯನ್ನು ಉತ್ತೇಜಿಸಲು ಪೂರ್ವಭಾವಿ ಪ್ರಯತ್ನಗಳನ್ನು ಮಾಡಿದೆ.

ಜವಳಿ ಸಚಿವಾಲಯ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಈ ಸಾಧನೆಯಲ್ಲಿ ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ. ದೇಶೀಯ ತಯಾರಕರು ಈ ಸಂದರ್ಭದಲ್ಲಿ ಕೈಜೋಡಿಸಿದ್ದಾರೆ ಮತ್ತು ಇಲ್ಲಿಯವರೆಗೆ 11 ತಯಾರಕರು ಗುಣಮಟ್ಟದ ಪರೀಕ್ಷೆಗಳಲ್ಲಿ ಸಫಲರಾಗಿದ್ದಾರೆ.  ಆ ತಯಾರಕರಿಗೆ 21 ಲಕ್ಷ ಪಿಪಿಇ ಕವರಾಲ್‌ಗಳಿಗೆ ಆದೇಶ ನೀಡಲಾಗಿದೆ.  ಪ್ರಸ್ತುತ ಅವರು ದಿನಕ್ಕೆ 6-7,000 ಕವರಾಲ್‌ಗಳನ್ನು ಪೂರೈಸುತ್ತಿದ್ದಾರೆ ಮತ್ತು ಇದು ಮುಂದಿನ ವಾರದೊಳಗೆ ದಿನಕ್ಕೆ 15,000 ವರೆಗೆ ತಲುಪುವ ನಿರೀಕ್ಷೆಯಿದೆ. ಇನ್ನೂ ಒಬ್ಬ ತಯಾರಕರು ಇಂದು ಅರ್ಹತೆ ಪಡೆದಿದ್ದಾರೆ ಮತ್ತು ಅವರೊಂದಿಗೆ 5 ಲಕ್ಷ ಕವರಾಲ್‌ಗಳ ಆದೇಶವನ್ನು ನೀಡಲಾಗಿದೆ.

ಸಧ್ಯಕ್ಕೆ, ದೇಶದ ವಿವಿಧ ಆಸ್ಪತ್ರೆಗಳಲ್ಲಿ 3.34 ಲಕ್ಷ ಪಿಪಿಇಗಳು ಲಭ್ಯವಿವೆ. ಸುಮಾರು 60,000 ಪಿಪಿಇ ಕಿಟ್‌ಗಳನ್ನು ಈಗಾಗಲೇ ಭಾರತ ಸರ್ಕಾರ ಸಂಗ್ರಹಿಸಿ ಪೂರೈಸಿದೆ. ಭಾರತೀಯ ರೆಡ್ ಕ್ರಾಸ್ ಸೊಸೈಟಿ ಚೀನಾದಿಂದ 10,000 ಪಿಪಿಇಗಳನ್ನು ವ್ಯವಸ್ಥೆಗೊಳಿಸಿದೆ ಮತ್ತು ಅದನ್ನು ಸ್ವೀಕರಿಸಲಾಗಿದೆ ಮತ್ತು ವಿತರಿಸಲಾಗುತ್ತಿದೆ. ಇನ್ನೂ 3 ಲಕ್ಷ ದಾನ ಮಾಡಿದ ಪಿಪಿಇ ಕವರಾಲ್‌ಗಳು ಏಪ್ರಿಲ್ 4 ರೊಳಗೆ ಬರಲಿವೆ. 3 ಲಕ್ಷ ಪಿಪಿಇಗಳಿಗೆ ಆರ್ಡಿನೆನ್ಸ್ ಕಾರ್ಖಾನೆಗಳಿಗೆ ಆದೇಶವನ್ನು ಕೊಡಲಾಗಿದೆ.

ಪಿಪಿಇ ಕಿಟ್‌ಗಳ ವಿದೇಶಿ ಮೂಲಗಳು ಕೂಡ ವಿಶ್ವಾದ್ಯಂತ ಬೇಡಿಕೆಯಲ್ಲಿ ಭಾರಿ ಹೆಚ್ಚಳವನ್ನು ಎದುರಿಸುತ್ತಿವೆ. ಅವುಗಳನ್ನು  ವಿದೇಶಾಂಗ ಸಚಿವಾಲಯದ ಮೂಲಕ ಸಂಪರ್ಕಿಸಲಾಗುತ್ತಿದೆ. ಸಿಂಗಾಪುರ ಮೂಲದ ಆನ್‌ಲೈನ್ ಪ್ಲಾಟ್‌ಫಾರ್ಮ್ ಒಂದನ್ನು ಗುರುತಿಸಲಾಗಿದ್ದು, ಇದು 10 ಲಕ್ಷ ಪಿಪಿಇ ಕಿಟ್‌ಗಳನ್ನು ಪೂರೈಸಬಲ್ಲದು ಮತ್ತು ಅವುಗಳನ್ನು ಸಂಗ್ರಹಿಸಲು ವಿದೇಶಾಂಗ ಸಚಿವಾಲಯದ ಮೂಲಕ ಆದೇಶಿಸಲಾಗಿದೆ. ವಿಯೆಟ್ನಾಂ ಮತ್ತು ಟರ್ಕಿಯ ಉತ್ಪಾದನಾ ಕಂಪನಿಗಳೊಂದಿಗೆ  ಸಹಯೋಗ ಹೊಂದಿರುವ ಕೊರಿಯಾ ಮೂಲದ 1 ಲಕ್ಷ ಪಿಪಿಇ ಕಿಟ್‌ಗಳ ಉತ್ಪಾದನಾ ಸಾಮರ್ಥ್ಯವಿರುವ ಒಂದು ಸರಬರಾಜುದಾರರನ್ನು ಗುರುತಿಸಲಾಗಿದೆ. 20 ಲಕ್ಷ ಪಿಪಿಇ ಕಿಟ್‌ಗಳನ್ನು ಪೂರೈಸಲು ವಿದೇಶಾಂಗ ಸಚಿವಾಲಯದ ಮೂಲಕ ಈ ಕಂಪನಿಯ ಮೇಲೆ ಆದೇಶಗಳನ್ನು ಕೊಡಲಾಗುತ್ತಿದೆ.

ಎನ್ 95 ಮುಖಗವಸುಗಳನ್ನು ಇಬ್ಬರು ದೇಶೀಯ ಉತ್ಪಾದಕರು ತಯಾರಿಸುತ್ತಿದ್ದಾರೆ. ಅವರು ಈ ಸಮಯದಲ್ಲಿ ದಿನಕ್ಕೆ 50,000 ಮುಖಗವಸುಗಳನ್ನು ಪೂರೈಸಲು ಸಮರ್ಥರಾಗಿದ್ದಾರೆ, ಆದರೆ ಮುಂದಿನ ವಾರದೊಳಗೆ ದಿನಕ್ಕೆ 1 ಲಕ್ಷ ಮುಖಗವಸುಗಳನ್ನು ತಯಾರಿಸುವಷ್ಟು ಸಾಮರ್ಥ್ಯವನ್ನು ಹೆಚ್ಚಿಸುತ್ತಿದ್ದಾರೆ. ದಿನಕ್ಕೆ ಸುಮಾರು 20,000 ಎನ್ 99 ಮುಖಗವಸುಗಳನ್ನು ತಯಾರಿಸಲು ಡಿಆರ್‌ಡಿಒ ಸ್ಥಳೀಯ ತಯಾರಕರೊಂದಿಗೆ ಸಹಕರಿಸುತ್ತಿದೆ. ಇದು ಒಂದು ವಾರದ ಅವಧಿಯಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ.

ದೇಶದಲ್ಲಿನ ಆಸ್ಪತ್ರೆಗಳಲ್ಲಿ ಪ್ರಸ್ತುತ 11.95 ಲಕ್ಷ ಎನ್ 95 ಮುಖಗವಸುಗಳಿವೆ. ಕಳೆದ ಎರಡು ದಿನಗಳಲ್ಲಿ ಹೆಚ್ಚುವರಿ 5 ಲಕ್ಷ ಮುಖಗವಸುಗಳನ್ನು ವಿತರಿಸಲಾಗಿದ್ದು, ಇಂದು 1.40 ಲಕ್ಷ ಮುಖಗವಸುಗಳನ್ನು ವಿತರಿಸಲಾಗುತ್ತಿದೆ.  ಸಿಂಗಾಪುರದಿಂದ ಪಡೆಯಲಾಗುವ ಪಿಪಿಇ ಕಿಟ್‌ಗಳ ಭಾಗವಾಗಿ 10 ಲಕ್ಷ ಮುಖಗವಸುಗಳಿರುತ್ತವೆ.

ಕೋವಿಡ್ -19 ರೋಗಿಗಳಿಗೆ ವೆಂಟಿಲೇಟರ್‌ಗಳು ಬೇಕಾಗುತ್ತವೆ, ಏಕೆಂದರೆ ಅವರು ತೀವ್ರ ಉಸಿರಾಟ ತೊಂದರೆಯ ಬಳಲಿಕೆಗೆ (ಎಆರ್‌ಡಿಎಸ್) ಬಲಿಯಾಗುವ ಲಕ್ಷಣಗಳು ಹೆಚ್ಚಾಗಿರುತ್ತವೆ. ಈಗ 20 ಕ್ಕಿಂತ ಕಡಿಮೆ ಕೋವಿಡ್ -19 ರೋಗಿಗಳು ವೆಂಟಿಲೇಟರ್ ನ ಆಸರೆಯಲ್ಲಿದ್ದಾರೆ.  ಇದಕ್ಕೆ ವ್ಯತಿರಿಕ್ತವಾಗಿ, ಕೋವಿಡ್ -19 ರೋಗಿಗಳ ಚಿಕಿತ್ಸೆಗಾಗಿ ದೇಶದ ವಿವಿಧ ಆಸ್ಪತ್ರೆಗಳಲ್ಲಿ 14,000 ಕ್ಕೂ ಹೆಚ್ಚು ವೆಂಟಿಲೇಟರ್‌ಗಳನ್ನು ಗುರುತಿಸಲಾಗಿದೆ.

ನೋಯ್ಡಾದ ದೇಶೀಯ ತಯಾರಕರಾದ ಆಗ್ವಾ ಹೆಲ್ತ್‌ಕೇರ್ ಸೂಕ್ತವಾದ ವೆಂಟಿಲೇಟರ್‌ಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗಿದೆ ಮತ್ತು 10,000 ವೆಂಟಿಲೇಟರ್‌ಗಳ ಆದೇಶವನ್ನು ಅವರಿಗೆ ನೀಡಲಾಗಿದೆ. ಏಪ್ರಿಲ್ 2 ನೇ ವಾರದಲ್ಲಿ ಸರಬರಾಜುಗಳು ಪ್ರಾರಂಭವಾಗುವ ನಿರೀಕ್ಷೆಯಿದೆ. ಇದಲ್ಲದೆ, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನಲ್ಲಿ 30,000 ವೆಂಟಿಲೇಟರ್‌ಗಳಿಗೆ ಆದೇಶವನ್ನು ನೀಡಲಾಗಿದ್ದು, ಈ 

ನಿಟ್ಟಿನಲ್ಲಿ ದೇಶೀಯ ತಯಾರಕರೊಂದಿಗೆ ಸಹಕರಿಸಲಿದೆ. ಭಾರತೀಯ ವಾಹನ ತಯಾರಕರು ಸಹ ವೆಂಟಿಲೇಟರ್ ತಯಾರಿಸಲು ತಯಾರಿ ನಡೆಸುತ್ತಿದ್ದಾರೆ.

ಈ ಮಧ್ಯೆ, ಅಂತರರಾಷ್ಟ್ರೀಯ ಕಂಪನಿಗಳಾದ ಹ್ಯಾಮಿಲ್ಟನ್, ಮೈಂಡ್ರೇ ಮತ್ತು ಡ್ರೇಗರ್‌ಗೆ ವೆಂಟಿಲೇಟರ್‌ಗಳನ್ನು ಪೂರೈಸಲು ಆದೇಶಿಸಲಾಗಿದೆ. ಇದಲ್ಲದೆ, 10,000 ವೆಂಟಿಲೇಟರ್‌ಗಳಿಗಾಗಿ  ವಿದೇಶಾಂಗ ಸಚಿವಾಲಯವು ಚೀನಾದಲ್ಲಿ ಪೂರೈಕೆದಾರರನ್ನು ಸಂಪರ್ಕಿಸುತ್ತಿದೆ.


(Release ID: 1609395) Visitor Counter : 279