ಉಪರಾಷ್ಟ್ರಪತಿಗಳ ಕಾರ್ಯಾಲಯ

ಕೋವಿಡ್-19 ವಿರುದ್ಧ ಹೋರಾಡಲು ಸಂಸದರ ನಿಧಿಯಿಂದ ದೇಣಿಗೆ ನೀಡುವಂತೆ ರಾಜ್ಯಸಭಾ ಸದಸ್ಯರಿಗೆ ಉಪರಾಷ್ಟ್ರಪತಿ ಮನವಿ

Posted On: 29 MAR 2020 12:02PM by PIB Bengaluru

ಕೋವಿಡ್-19 ವಿರುದ್ಧ ಹೋರಾಡಲು ಸಂಸದರ ನಿಧಿಯಿಂದ ದೇಣಿಗೆ ನೀಡುವಂತೆ ರಾಜ್ಯಸಭಾ ಸದಸ್ಯರಿಗೆ ಉಪರಾಷ್ಟ್ರಪತಿ ಮನವಿ

 

ಸಂಕಷ್ಟದಲ್ಲಿ ಸಿಲುಕಿರುವ ವಲಸೆ ಕಾರ್ಮಿಕರಿಗೆ ಆಹಾರ ಮತ್ತು ವಸತಿ ಒದಗಿಸಲು ಸ್ವಯಂ ಸೇವಾ ಸಂಘಟನೆಗಳು ಮತ್ತು ಪರೋಪಕಾರಿ ಸಂಸ್ಥೆಗಳಿಗೆ ಉಪರಾಷ್ಟ್ರಪತಿ ಕರೆ

 

ಪಿಎಂ-ಕೇರ್ಸ್(CARES) ನಿಧಿಗೆ ನಾಗರಿಕರಿಗೆ ದೇಣಿಗೆ ನೀಡುವಂತೆ ಉಪರಾಷ್ಟ್ರಪತಿ ಮನವಿ

 

          ಭಾರತದ ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಅಧ್ಯಕ್ಷರಾದ ಶ್ರೀ ಎಂ. ವೆಂಕಯ್ಯನಾಯ್ಡು ಅವರು, ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಸರ್ಕಾರ ನಡೆಸುತ್ತಿರುವ ಪ್ರಯತ್ನಗಳಿಗೆ ಪೂರಕವಾಗಿ ಎಲ್ಲ ಸಂಸದರು ತಮ್ಮ ಸಂಸದರ ನಿಧಿಯಿಂದ ಆರಂಭಿಕವಾಗಿ ಕನಿಷ್ಠ ಒಂದು ಕೋಟಿ ರೂ. ದೇಣಿಗೆ ನೀಡುವಂತೆ ಮನವಿ ಮಾಡಿದ್ದಾರೆ.

        ಅವರು ಎಲ್ಲ ಸಂಸದರಿಗೆ ಪತ್ರವನ್ನು ಬರೆದು, ಕೋವಿಡ್-19ನಿಂದಾಗಿ ತೀವ್ರ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ ಎಂದು ಉಲ್ಲೇಖಿಸಿದ್ದಾರೆ ಹಾಗೂ ಭಾರತ ಸರ್ಕಾರ, ಖಾಸಗಿ ವಲಯ ಹಾಗೂ ಇತರೆ ಸಂಬಂಧಿಸಿದವರು ಪರಿಸ್ಥಿತಿಯನ್ನು ನಿಭಾಯಿಸಲು ಮತ್ತು ಜನರಿಗೆ ತೊಂದರೆಯನ್ನು ತಪ್ಪಿಸಲು  ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದ್ದಾರೆ.

        ಕೋವಿಡ್-19 ಯಶಸ್ವಿಯಾಗಿ ಎದುರಿಸಲು ಆರ್ಥಿಕ, ವಸ್ತುಗಳು ಮತ್ತು ಮಾನವ ಸಂಪನ್ಮೂಲ ಭಾರೀ ಪ್ರಮಾಣದಲ್ಲಿ ಅಗತ್ಯವಿದೆ ಎಂದು ಹೇಳಿರುವ ಶ್ರೀ ನಾಯ್ಡು ಅವರು, ಭಾರತ ಸರ್ಕಾರ ಹಣಕಾಸು ಸಂಪನ್ಮೂಲವನ್ನು ಕ್ರೂಢೀಕರಿಸಲು ರಾಷ್ಟ್ರ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ನಿಧಿಯನ್ನು ಸಂಗ್ರಹ ಮಾಡುವ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.

        ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಸಹಾಯ ಮಾಡಲು ಎಲ್ಲರ ಪ್ರಾಮಾಣಿಕ ಕೊಡುಗೆ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟಿರುವ ಉಪರಾಷ್ಟ್ರಪತಿಗಳು 2020-21ನೇ ಹಣಕಾಸು ವರ್ಷದಲ್ಲಿ ಸಂಸದರ ನಿಧಿ(ಎಂಪಿಲಾಡ್)ಯಡಿ ಕೇಂದ್ರ ಸರ್ಕಾರ ಮೀಸಲಿಟ್ಟಿರುವ ಹಣದಲ್ಲಿ ಆರಂಭಿಕವಾಗಿ ಕನಿಷ್ಠ ಒಂದು ಕೋಟಿ ರೂ. ಕೊಡುಗೆ ನೀಡಬೇಕು ಎಂದು ಎಲ್ಲ ಸಂಸದರಲ್ಲಿ ಮನವಿ ಮಾಡಿದ್ದಾರೆ.

        ಅಲ್ಲದೆ ಅವರು, ಕೋವಿಡ್-19 ನಿರ್ವಹಣೆಗೆ ಸಂಸದರ ನಿಧಿಯಿಂದ ಒಮ್ಮೆ ಹಣ ನೀಡಲು ಅಗತ್ಯ ಮಾರ್ಗಸೂಚಿ ಮತ್ತು ನಿಯಮಗಳನ್ನು ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ತಿದ್ದುಪಡಿಯನ್ನು ಮಾಡಲಿದೆ ಎಂದು ಹೇಳಿದರು.

        ಈ ಮಧ್ಯೆ, ಉಪರಾಷ್ಟ್ರಪತಿಗಳು ವಿಪತ್ತು ನಿರ್ವಹಣಾ ಸಾಮರ್ಥ್ಯದ ಬಲವರ್ಧನೆಗೆ ಪಿಎಂ-ಕೇರ್ಸ್(CARES) ನಿಧಿಗೆ ಸಾರ್ವಜನಿಕರು ಮುಂದೆ ಬಂದು ಉದಾರವಾಗಿ ದೇಣಿಗೆ ನೀಡಬೇಕು ಎಂದು ಕರೆ ನೀಡಿದರು. ಅಲ್ಲದೆ ಇಂತಹ ಸಂಕಷ್ಟದ ಸಮಯದಲ್ಲಿ ಅಗತ್ಯವಿರುವವರಿಗೆ ಮತ್ತು ಬಡವರಿಗೆ ನಾನಾ ಸಾಮಾಜಿಕ ಸಂಘಟನೆಗಳು ನೆರವು ನೀಡುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಸರ್ಕಾರ ಹೊರಡಿಸಿರುವ ನಿಯಮವನ್ನು ಜನರು ಕಡ್ಡಾಯವಾಗಿ ಪಾಲನೆ ಮಾಡಿ, ಮನೆಯಲ್ಲೇ ಸುರಕ್ಷಿತ ಮತ್ತು ಆರೋಗ್ಯವಾಗಿರಿ ಎಂದು ಮನವಿ ಮಾಡಿದರು.

        ಇದಕ್ಕೂ ಮುನ್ನ ಉಪರಾಷ್ಟ್ರಪತಿಗಳು, ಲೋಕಸಭೆಯ ಗೌರವಾನ್ವಿತ ಸ್ಪೀಕರ್ ಶ್ರೀ ಓಂ ಬಿರ್ಲಾ ಎರಡೂ ಸದನಗಳ ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಜ್ಯಸಭೆಯ ಉಪಸಭಾಧ್ಯಕ್ಷ ಹಾಗೂ ರಾಜ್ಯಸಭೆಯ ನಾನಾ ರಾಜಕೀಯ ಪಕ್ಷಗಳ ನಾಯಕರೊಂದಿಗೆ  ಸಂಸದರ ನಿಧಿ ಕುರಿತು ಸಮಾಲೋಚಿಸಿದರು. 

ಪಿಎಂ-ಕೇರ್ಸ್(CARES) ನಿಧಿಗೆ ಸಮಾಜದ ನಾನಾ ವರ್ಗಗಳ ಜನರು ಕೊಡುಗೆ ನೀಡುತ್ತಿರುವ ನಡವಳಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಇನ್ನೂ ಹೆಚ್ಚಿನ ಜನರು ಮುಂದೆ ಬಂದು, ಈ ಪವಿತ್ರ ಕಾರ್ಯಕ್ಕಾಗಿ ದಾನ ನೀಡಬೇಕು, ಆ ಮೂಲಕ ಭಾರತ ಪುರಾತನ ಕಾಲದಿಂದಲೂ ಪಾಲಿಸಿಕೊಂಡು ಬಂದಿರುವ ಹಂಚಿಕೊಂಡು ತಿನ್ನುವ ಮತ್ತು ಬೇರೆಯವರ ಬಗ್ಗೆ ಕಾಳಜಿ ತೋರುವ ಸಂಸ್ಕೃತಿ (ಶೇರ್ ಮತ್ತು ಕೇರ್)ಯನ್ನು ಮೆರೆಯಬೇಕು, ಅದು ನಮ್ಮ ತತ್ವಶಾಸ್ತ್ರದಲ್ಲಿಯೇ ಅಡಗಿದೆ ಎಂದರು. 

 ತಮ್ಮ ತಮ್ಮ ಪ್ರದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ವಲಸೆ ಕಾರ್ಮಿಕರ ಬಗ್ಗೆ ಕಾಳಜಿವಹಿಸುವಂತೆ ಎಲ್ಲರಿಗೂ ಮನವಿ ಮಾಡಿದ ಶ್ರೀ ನಾಯ್ಡು ಅವರು, ರಾಜ್ಯ ಸರ್ಕಾರಗಳು, ಸ್ವಯಂ ಸೇವಾ ಮತ್ತು ಜನೋಪಯೋಗಿ ಸಂಸ್ಥೆಗಳು ಅಂತಹವರಿಗೆ ಆಹಾರ ಮತ್ತು ವಸತಿ ಒದಗಿಸಬೇಕು ಎಂದರು. ಅಲ್ಲದೆ ವಲಸೆ ಕಾರ್ಮಿಕರಿಂದ ಕೆಲಸ ಮಾಡಿಸಿಕೊಳ್ಳುತ್ತಿರುವ ಸಂಸ್ಥೆಗಳು ಇಂತಹ ಸಮಯದಲ್ಲಿ ಅವರ ನೆರವಿಗೆ ಧಾವಿಸಬೇಕು ಎಂದು ಹೇಳಿದರು. 

ಉಪರಾಷ್ಟ್ರಪತಿಗಳು ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವ(ಸ್ವತಂತ್ರ ನಿರ್ವಹಣೆ) ಶ್ರೀ ಸಂತೋಷ್ ಕುಮಾರ್ ಗಂಗ್ವಾರ್ ಮತ್ತು ಭಾರತ ಸರ್ಕಾರದ ಸಂಪುಟ ಕಾರ್ಯದರ್ಶಿ ಶ್ರೀ ರಾಜೀವ್ ಗೌಬ ಅವರೊಂದಿಗೆ ಸಮಾಲೋಚಿಸಿದರು ಮತ್ತು ವಲಸೆ ಕಾರ್ಮಿಕರ ವಿಚಾರ ಸಂಬಂಧ ನಾನಾ ರಾಜ್ಯ ಸರ್ಕಾರಗಳೊಂದಿಗೆ ನಡೆಸುತ್ತಿರುವ ಸಮನ್ವಯದ ಕ್ರಮಗಳ ಬಗ್ಗೆ ವಿಚಾರಿಸಿದರು.

 

****


(Release ID: 1609199) Visitor Counter : 154