ವಾರ್ತಾ ಮತ್ತು ಪ್ರಸಾರ ಸಚಿವಾಲಯ

ನಗರಗಳಾದ್ಯಂತ ಜನರ ಸಂಚಾರವಿಲ್ಲದಂತೆ ಕ್ರಮ ಕೈಗೊಳ್ಳಲು ಕೇಂದ್ರದಿಂದ ರಾಜ್ಯಗಳಿಗೆ ನಿರ್ದೇಶನ

Posted On: 29 MAR 2020 1:44PM by PIB Bengaluru

ನಗರಗಳಾದ್ಯಂತ ಜನರ ಸಂಚಾರವಿಲ್ಲದಂತೆ ಕ್ರಮ ಕೈಗೊಳ್ಳಲು ಕೇಂದ್ರದಿಂದ ರಾಜ್ಯಗಳಿಗೆ ನಿರ್ದೇಶನ

ಸಮಯಕ್ಕೆ ಸರಿಯಾಗಿ ವೇತನ ಪಾವತಿ ಸೇರಿದಂತೆ ವಲಸೆ ಕಾರ್ಮಿಕರಿಗೆ ಅವರ ಕೆಲಸದ ಸ್ಥಳದಲ್ಲೇ ಎಲ್ಲಾ ವ್ಯವಸ್ಥೆಗಳನ್ನು ಮಾಡಬೇಕು

ವಿದ್ಯಾರ್ಥಿಗಳು / ಕಾರ್ಮಿಕರನ್ನು ಮನೆ ಖಾಲಿ ಮಾಡುವಂತೆ ಕೇಳುವವರ ವಿರುದ್ಧ ಕ್ರಮ

 

ಸಂಪುಟ ಕಾರ್ಯದರ್ಶಿ ಮತ್ತು ಗೃಹ ಕಾರ್ಯದರ್ಶಿಗಳು, ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಡಿಜಿಪಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಸಂಪುಟ ಕಾರ್ಯದರ್ಶಿ ಮತ್ತು ಗೃಹ ಕಾರ್ಯದರ್ಶಿಯವರು ನಿನ್ನೆ ಸಂಜೆ ಮತ್ತು ಇಂದು ಬೆಳಿಗ್ಗೆ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಡಿಜಿಪಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು.

ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಾರ್ಗಸೂಚಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದೆ. ಅಗತ್ಯ ಸಾಮಗ್ರಿಗಳ ವಿತರಣೆಯನ್ನೂ ಸಹ ನಿರ್ವಹಿಸಲಾಗಿದೆ. ದಿನದ 24 ಗಂಟೆಯೂ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದ್ದು, ಅಗತ್ಯವಿರುವ ಕಡೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.

ಇಷ್ಟಾದರೂ, ದೇಶದ ಕೆಲವು ಭಾಗಗಳಲ್ಲಿ ವಲಸೆ ಕಾರ್ಮಿಕರ ಓಡಾಟ ಕಂಡುಬಂದಿದೆ. ಜಿಲ್ಲಾ ಮತ್ತು ರಾಜ್ಯ ಗಡಿಗಳನ್ನು ಪರಿಣಾಮಕಾರಿಯಾಗಿ ಮುಚ್ಚಬೇಕು ಎಂದು ನಿರ್ದೇಶನ ನೀಡಲಾಯಿತು. ನಗರಗಳಲ್ಲಿ ಅಥವಾ ಹೆದ್ದಾರಿಗಳಲ್ಲಿ ಜನರ ಓಡಾಟವಿಲ್ಲದಂತೆ ನೋಡಿಕೊಳ್ಳಲು ರಾಜ್ಯಗಳಿಗೆ ನಿರ್ದೇಶನ ನೀಡಲಾಯಿತು. ಸರಕು ಸಾಮಗ್ರಿಗಳ ಸಾಗಾಟಕ್ಕೆ ಮಾತ್ರ ಅನುಮತಿ ನೀಡಬೇಕು. ಡಿಎಂ ಕಾಯ್ದೆಯಡಿ ಹೊರಡಿಸಲಾದ ನಿರ್ದೇಶನಗಳ ಅನುಷ್ಠಾನಕ್ಕೆ ಡಿಎಂ ಮತ್ತು ಎಸ್ಪಿಗಳನ್ನು ವೈಯಕ್ತಿಕವಾಗಿ ಜವಾಬ್ದಾರರನ್ನಾಗಿ ಮಾಡಬೇಕು.

ವಲಸೆ ಕಾರ್ಮಿಕರು ಸೇರಿದಂತೆ ಬಡವರು ಮತ್ತು ನಿರ್ಗತಿಕರಿಗೆ ಆಹಾರ ಮತ್ತು ಆಶ್ರಯಕ್ಕಾಗಿ ಸಮರ್ಪಕ ವ್ಯವಸ್ಥೆಗಳನ್ನು ಅವರ ಕೆಲಸದ ಸ್ಥಳದಲ್ಲಿಯೇ ಮಾಡಬೇಕೆಂದು ಸೂಚಿಸಲಾಗಿದೆ. ಉದ್ದೇಶಕ್ಕಾಗಿ ಎಸ್ಡಿಆರ್ಎಫ್ ಹಣವನ್ನು ಬಳಸಲು ಕೇಂದ್ರವು ನಿನ್ನೆ ಆದೇಶ ಹೊರಡಿಸಿತ್ತು. ಇದರಡಿ ರಾಜ್ಯಗಳಿಗೆ ಸಾಕಷ್ಟು ಹಣ ಲಭ್ಯವಿದೆ.

ಲಾಕ್ ಡೌನ್ ಅವಧಿಯಲ್ಲಿ ಕಾರ್ಮಿಕರಿಗೆ ಅವರ ಕೆಲಸದ ಸ್ಥಳದಲ್ಲಿಯೇ ವೇತನವನ್ನು ಯಾವುದೇ ಕಡಿತವಿಲ್ಲದೆ ಸಕಾಲಿಕವಾಗಿ ಪಾವತಿಸುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳಿಗೆ ತಿಳಿಸಲಾಗಿದೆ. ಅವಧಿಯಲ್ಲಿ ಕಾರ್ಮಿಕರಿಂದ ಮನೆ ಬಾಡಿಗೆಗೆ ಒತ್ತಾಯಿಸಬಾರದು. ಕಾರ್ಮಿಕರು ಅಥವಾ ವಿದ್ಯಾರ್ಥಿಗಳನ್ನು ಮನೆಯಿಂದ ಖಾಲಿ ಮಾಡುವಂತೆ ಕೇಳುವವರ ವಿರುದ್ಧ ಕ್ರಮ ಕೈಗೊಳ್ಳಬೇಕು.

ಲಾಕ್ಡೌನ್ ಉಲ್ಲಂಘಿಸಿದವರು ಮತ್ತು ಲಾಕ್ಡೌನ್ ಅವಧಿಯಲ್ಲಿ ಪ್ರಯಾಣಿಸಿದವರನ್ನು ಸರ್ಕಾರಿ ಕ್ವಾರಂಟೈನ್ ಸೌಲಭ್ಯಗಳಲ್ಲಿ ಕನಿಷ್ಠ 14 ದಿನಗಳವರೆಗೆ ಕ್ವಾಂಟೈನ್ ಗೆ ಒಳಪಡಿಸಲಾಗುತ್ತದೆ.

ಕೊರೊನಾ ವೈರಸ್ ಹರಡದಂತೆ ತಡೆಯಲು ಮೂರು ವಾರಗಳ ಕಟ್ಟುನಿಟ್ಟಿನ ದಿಗ್ಬಂಧನದ ಜಾರಿಯ ಅಗತ್ಯವನ್ನು ಎಲ್ಲಾ ರಾಜ್ಯಗಳಿಗೆ ತಿಳಿಸಲಾಗಿದೆ. ಇದು ಪ್ರತಿಯೊಬ್ಬರ ಹಿತದೃಷ್ಟಿಗಾಗಿ.(Release ID: 1609122) Visitor Counter : 144