ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ‘ಮನ್ ಕಿ ಬಾತ್ 2.0’ – 10 ನೇ ಕಂತು

Posted On: 29 MAR 2020 12:42PM by PIB Bengaluru

ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಮನ್ ಕಿ ಬಾತ್ 2.0’ – 10 ನೇ ಕಂತು

 

ನನ್ನ ಪ್ರಿಯ ದೇಶವಾಸಿಗಳೇ, ‘ಮನದ ಮಾತಿನಲ್ಲಿಸಾಮಾನ್ಯವಾಗಿ ನಾನು ಹಲವಾರು ವಿಷಯಗಳನ್ನು ಚರ್ಚಿಸುತ್ತೇನೆ. ಆದರೆ ಇಂದು ದೇಶ ಮತ್ತು ವಿಶ್ವದ ಮನದಲ್ಲಿ ಕೇವಲ ಒಂದೇ ಒಂದು ಮಾತಿದೆ – ‘ಕರೋನಾ ಜಾಗತಿಕ ಮಹಾಮಾರಿಯಿಂದ ಬಂದಂತಹ ಈ ಭಯಾನಕ ಸಂಕಟ. ಇಂಥದರಲ್ಲಿ ನಾನು ಬೇರೆ ವಿಷಯಗಳ ಬಗ್ಗೆ ಮಾತನಾಡುವುದು ಉಚಿತವಲ್ಲ. ಆದರೆ ಎಲ್ಲಕ್ಕಿಂತ ಮೊದಲು ದೇಶಬಾಂಧವರಲ್ಲಿ ಕ್ಷಮೆ ಕೇಳುತ್ತೇನೆ. ನೀವು ನನ್ನನ್ನು ಖಂಡಿತ ಕ್ಷಮಿಸುತ್ತೀರಿ ಎಂದು ನನ್ನ ಮನಸ್ಸು ಹೇಳುತ್ತಿದೆ. ಏಕೆಂದರೆ ನೀವು ಹಲವು ಬಗೆಯ ಸಮಸ್ಯೆಗಳನ್ನು ಎದುರಿಸುವಂತಹ ನಿರ್ಣಯಗಳನ್ನು ಕೈಗೊಳ್ಳಬೇಕಾಯಿತು. ವಿಶೇಷವಾಗಿ ನನ್ನ ಬಡ ಸೋದರ ಸೋದರಿಯರಿಗೆ ಎಂಥ ಪ್ರಧಾನ ಮಂತ್ರಿ ಇವರು, ನಮ್ಮನ್ನು ಸಂಕಷ್ಟಕ್ಕೆ ಈಡು ಮಾಡಿದ್ದಾರೆ ಎಂದೆನಿಸಬಹುದು. ಅವರಲ್ಲೂ ನಾನು ವಿಶೇಷವಾಗಿ ಕ್ಷಮೆ ಯಾಚಿಸುತ್ತೇನೆ. ಬಹುಶಃ ಬಹಳಷ್ಟು ಜನರು ಹೇಗೆ ನಮ್ಮನ್ನು ಮನೆಯಲ್ಲಿ ಕೂಡಿಹಾಕಿದ್ದಾರೆ ಎಂದು ನನ್ನ ಮೇಲೆ ಬೇಸರಗೊಂಡಿರಬಹುದು. ನಿಮ್ಮ ಕಷ್ಟವನ್ನು ನಾನು ಬಲ್ಲೆ, ನಿಮ್ಮ ಚಿಂತೆಯನ್ನೂ ನಾನು ಬಲ್ಲೆ. ಆದರೆ ಭಾರತದಂತಹ 130 ಕೋಟಿ ಜನಸಂಖ್ಯೆಯ ದೇಶಕ್ಕೆ ಕರೋನಾ ವಿರುದ್ಧದ ಹೋರಾಟಕ್ಕೆ ಈ ಮಾರ್ಗ ಬಿಟ್ಟು ಬೇರಾವ ದಾರಿಯೂ ಇರಲಿಲ್ಲ. ಕರೋನಾ ವಿರುದ್ಧದ ಯುದ್ಧ ಜೀವನ ಮತ್ತು ಮೃತ್ಯುವಿನೊಡನೆಯ ಯುದ್ಧವಾಗಿದೆ. ಈ ಯುದ್ಧದಲ್ಲಿ ನಾವು ಗೆಲ್ಲಬೇಕಿದೆ. ಆದ್ದರಿಂದಲೇ ಈ ಕಠೋರ ಕ್ರಮ ಕೈಗೊಳ್ಳುವುದು ಬಹಳ ಅವಶ್ಯಕವಾಗಿತ್ತು. ಇಂಥ ಕ್ರಮ ಕೈಗೊಳ್ಳಲು ಯಾರಿಗೂ ಮನಸ್ಸಿರುವುದಿಲ್ಲ. ಆದರೆ ವಿಶ್ವದ ಪರಿಸ್ಥಿತಿಯನ್ನು ನೋಡಿದ ಮೇಲೆ ಇದೊಂದೇ ಉಳಿದಿರುವ ಮಾರ್ಗ ಎಂದೆನ್ನಿಸುತ್ತದೆ. ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಸುರಕ್ಷಿತವಾಗಿಡಬೇಕು. ನಾನು ಮತ್ತೊಮ್ಮೆ ನಿಮಗೆ ಉಂಟಾದ ಸಮಸ್ಯೆ ಮತ್ತು ಅನಾನುಕೂಲತೆಗೆ ಕ್ಷಮೆ ಯಾಚಿಸುತ್ತೇನೆ.

ಸ್ನೇಹಿತರೇ, ನಮ್ಮಲ್ಲಿ ಹೀಗೆ ಹೇಳಲಾಗಿದೆ: ಏವಂ ಏವಂ ವಿಕಾರಃ : ಅಪಿ ತರುನ್ಹಾ ಸಾಧ್ಯತೆ ಸುಖಂಅಂದರೆ ರೋಗ ಮತ್ತು ಅದರ ಪ್ರಕೋಪವನ್ನು ಆರಂಭದಲ್ಲೇ ನಿಭಾಯಿಸಬೇಕು. ನಂತರ ರೋಗ ಅಸಾಧ್ಯವಾಗಿಬಿಡುತ್ತದೆ. ಆಗ ಚಿಕಿತ್ಸೆಯೂ ಅಸಾಧ್ಯವಾಗುತ್ತದೆ. ಮತ್ತು ಇಂದು ಸಂಪೂರ್ಣ ಭಾರತ, ಪ್ರತಿ ಭಾರತೀಯ ಅದನ್ನೇ ಮಾಡುತ್ತಿದ್ದಾನೆ. ಸೋದರ ಸೋದರಿಯರೇ, ಮಾತೆಯರೇ, ಹಿರಿಯರೇ ಕೊರೊನಾ ವೈರಸ್ ವಿಶ್ವವನ್ನೇ ಬಂಧಿಸಿಬಿಟ್ಟಿದೆ. ಇದು ಜ್ಞಾನ, ವಿಜ್ಞಾನ, ಬಡವ, ಬಲ್ಲಿದ, ಅಶಕ್ತ, ಶಕ್ತಿವಂತ ಎಲ್ಲರಿಗೂ ಸವಾಲೆಸೆಯುತ್ತಿದೆ. ಇದು ಕೇವಲ ರಾಷ್ಟ್ರದ ಗಡಿಯಲ್ಲಿ ಉಳಿದಿಲ್ಲ, ಯಾವುದೇ ಕ್ಷೇತ್ರವನ್ನು ಯಾವುದೇ ಋತುಮಾನವನ್ನು ಪರಿಗಣಿಸುವುದಿಲ್ಲ. ಈ ವೈರಾಣು ಮಾನವನನ್ನು ಕೊಂದು ಬಿಡುವ, ನಾಶ ಮಾಡುವ ಹಠ ತೊಟ್ಟಿದೆ. ಅದಕ್ಕಾಗಿಯೇ ವೈರಾಣುವನ್ನು ನಾಶ ಮಾಡಲು ಎಲ್ಲರೂ, ಸಂಪೂರ್ಣ ಮಾನವ ಜಾತಿ ಒಗ್ಗಟ್ಟಾಗಿ ಸಂಕಲ್ಪ ಮಾಡಲೇಬೇಕಿದೆ. ತಾವು ಲಾಕ್ ಡೌನ್ ಪಾಲನೆ ಮಾಡುವ ಮೂಲಕ ಯಾರಿಗೋ ಉಪಕಾರ ಮಾಡುತ್ತಿದ್ದೇವೆ ಎಂದು ಕೆಲ ಜನರಿಗೆ ಅನ್ನಿಸುತ್ತಿದೆ. ಸೋದರರೇ ಈ ಭ್ರಮೆಯಲ್ಲಿರುವುದು ಉಚಿತವಲ್ಲ. ಈ ಲಾಕ್ ಡೌನ್ ನಿಮ್ಮನ್ನು ನೀವು ಕಾಪಾಡಿಕೊಳ್ಳುವ ಸಲುವಾಗಿ. ನೀವು ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳಬೇಕಿದೆ. ಮುಂಬರುವ ಕೆಲ ದಿನಗಳವರೆಗೆ ಈ ಧೈರ್ಯವನ್ನು ತೋರಲೇಬೇಕಿದೆ. ಲಕ್ಷ್ಮಣ ರೇಖೆಯನ್ನು ಪಾಲಿಸಲೇಬೇಕಿದೆ. ಸ್ನೇಹಿತರೇ, ಯಾರೂ ಕಾನೂನಿಗೆ ವಿರುದ್ಧವಾಗಿ ಹೋಗಲು ಬಯಸುವುದಿಲ್ಲ, ನಿಯಮ ಉಲ್ಲಂಘನೆ ಮಾಡಬಯಸುವುದಿಲ್ಲ ಎಂದು ನನಗೆ ಗೊತ್ತು. ಆದರೆ ಕೆಲ ಜನರು ಹೀಗೆ ಮಾಡುತ್ತಿದ್ದಾರೆ. ಏಕೆಂದರೆ ಅವರಿಗೆ ಈಗಲೂ ಪರಿಸ್ಥಿತಿಯ ಗಂಭೀರತೆಯ ಬಗ್ಗೆ ಅರಿವಿಲ್ಲ. ಲಾಕ್ ಡೌನ್ ನಿಯಮ ಪಾಲಿಸದಿದ್ದಲ್ಲಿ ಕರೋನಾ ವೈರಾಣುವಿನಿಂದ ಪಾರಾಗುವುದು ಕಷ್ಟ ಎಂದು ಇಂಥಹ ಜನರಿಗೆ ಹೇಳಬಯಸುತ್ತೇನೆ. ವಿಶ್ವದೆಲ್ಲೆಡೆ ಬಹಳಷ್ಟು ಜನರಿಗೆ ಇಂಥದೇ ಭ್ರಮೆ ಇತ್ತು. ಇಂದು ಅವರೆಲ್ಲ ಪಶ್ಚಾತ್ತಾಪಪಡುತ್ತಿದ್ದಾರೆ. ಸ್ನೇಹಿತರೇ, ನಮ್ಮಲ್ಲಿ ಹೀಗೆ ಹೇಳಲಾಗಿದೆ – ‘ಆರೋಗ್ಯಂ ಪರಮ ಭಾಗ್ಯಂ, ಸ್ವಾಸ್ಥ್ಯಂ ಸರ್ವಾರ್ಥ ಸಾಧನಂಅಂದರೆ ಆರೋಗ್ಯವೇ ಭಾಗ್ಯ. ವಿಶ್ವದಲ್ಲಿ ಎಲ್ಲ ಸುಖಕ್ಕೆ ಆರೋಗ್ಯವೇ ಸಾಧನವಾಗಿದೆ. ಇಂಥದ್ದರಲ್ಲಿ ನಿಯಮ ಉಲ್ಲಂಘನೆ ಮಾಡುವವರು ತಮ್ಮ ಜೀವನದೊಂದಿಗೆ ಬಹು ದೊಡ್ಡ ಚೆಲ್ಲಾಟ ಆಡುತ್ತಿದ್ದಾರೆ. ಸ್ನೇಹಿತರೇ, ಈ ಯುದ್ಧದ ಅನೇಕ ಯೋಧರು ಮನೆಯಲ್ಲಿರದೇ ಮನೆಯಿಂದ ಹೊರಬಂದು ಕರೋನಾ ವಿರುದ್ಧ ಹೋರಾಡುತ್ತಿದ್ದಾರೆ. ಅವರು ನಮ್ಮ ಮುಂಚೂಣಿಯ ಸೇನಾನಿಗಳಾಗಿದ್ದಾರೆ. ವಿಶೇಷವಾಗಿ ನಮ್ಮ ಸುಶ್ರೂಷಕ ಸೋದರಿಯರು. ಸುಶ್ರೂಷಕ ಕೆಲಸ ಮಾಡುವ ಸೋದರರು, ವೈದ್ಯರು, ಪ್ಯಾರಾ ಮೆಡಿಕಲ್ ಸಿಬ್ಬಂದಿ. ಇಂಥ ಸ್ನೇಹಿತರು, ಕರೋನಾವನ್ನು ಮೆಟ್ಟಿ ನಿಂತಿದ್ದಾರೆ. ಇಂದು ಅವರಿಂದ ನಾವು ಸ್ಪೂರ್ತಿ ಪಡೆಯಬೇಕಿದೆ. ಕಳೆದ ದಿನಗಳಲ್ಲಿ ನಾನು ಇಂಥ ಕೆಲ ಜನರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದೇನೆ. ಅವರ ಉತ್ಸಾಹವನ್ನು ಹೆಚ್ಚಿಸಿದ್ದೇನೆ. ಅವರೊಂದಿಗೆ ಮಾತನಾಡಿ ನನಗೂ ಹೊಸ ಹುಮ್ಮಸ್ಸು ಲಭಿಸಿದೆ. ಅವರಿಂದ ನಾನು ಬಹಳಷ್ಟು ಕಲಿತಿದ್ದೇನೆ. ಈ ಬಾರಿ ಮನದ ಮಾತಿನಲ್ಲಿ ಇಂಥ ಸ್ನೇಹಿತರ ಅನುಭವ, ಅವರೊಂದಿಗೆ ನಡೆದ ಮಾತುಕತೆ, ಆ ಕೆಲವು ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆಂದು ನನ್ನ ಮನಸ್ಸು ಬಯಸಿತ್ತು. ಎಲ್ಲಕ್ಕಿಂತ ಮೊದಲು ನಮ್ಮೊಂದಿಗೆ ಶ್ರೀ ರಾಮ್ ಗಂಪಾ ತೇಜಾ ಅವರು ಮಾತನಾಡಲಿದ್ದಾರೆ. ಅವರು ಐ ಟಿ ಉದ್ಯೋಗಿ. ಬನ್ನಿ ಅವರ ಅನುಭವವನ್ನು ಕೇಳೋಣ. ಹೇಳಿ ರಾಮ್

ರಾಮ್ ಗಂಪಾ ತೇಜಾ : ನಮಸ್ತೆ ಸರ್

ಮೋದಿಜಿ: ಹಾಂ ರಾಮ್ ನಮಸ್ತೆ

ರಾಮ್ ಗಂಪಾ ತೇಜಾ : ನಮಸ್ತೆ.. ನಮಸ್ತೆ..

ಮೋದಿಜಿ: ನೀವು ಕರೋನಾ ವೈರಾಣುವಿನ ಈ ಗಂಭೀರ ಸಂಕಷ್ಟದಿಂದ ಪಾರಾಗಿದ್ದೀರಿ ಎಂದು ನಾನು ಕೇಳಿದ್ದೇನೆ.

ರಾಮ್ ಗಂಪಾ ತೇಜಾ: ಹೌದು ಸರ್

ಮೋದಿಜಿ: ನಾನು ಖಂಡಿತ ನಿಮ್ಮೊಂದಿಗೆ ಮಾತನಾಡ ಬಯಸಿದ್ದೆ. ಈ ಎಲ್ಲ ಸಂಕಷ್ಟದಿಂದ ನೀವು ಪಾರಾಗಿದ್ದೀರಲ್ಲವೇ ನಿಮ್ಮ ಅನುಭವ ತಿಳಿದುಕೊಳ್ಳಬಯಸುವೆ.

ರಾಮ್ ಗಂಪಾ ತೇಜಾ: ನಾನು ಐ ಟಿ ಸೆಕ್ಟರ್ ಉದ್ಯೋಗಿಯಾಗಿದ್ದೇನೆ. ಕೆಲಸದ ನಿಮಿತ್ತ ದುಬೈಗೆ ಮೀಟಿಂಗ್ ಗಾಗಿ ತೆರಳಿದ್ದೆ. ಅಲ್ಲಿ ನನಗೆ ಅರಿವಿಲ್ಲದೇ ಹೀಗಾಯಿತು. ಮರಳಿ ಬಂದಾಗ ಜ್ವರ ಮುಂತಾದ ತೊಂದರೆಯಾಯ್ತು. 5-6 ದಿನಗಳ ನಂತರ ವೈದ್ಯರು ಕರೋನಾ ವೈರಾಣು ಪರೀಕ್ಷೆ ಮಾಡಿದರು. ಆಗ ಪಾಸಿಟಿವ್ ಬಂದಿತ್ತು. ಆಗ ಹೈದ್ರಾಬಾದ್ ನ ಗಾಂಧಿ ಆಸ್ಪತ್ರೆ, ಸರ್ಕಾರಿ ಆಸ್ಪತ್ರೆಯಲ್ಲಿ ನನ್ನನ್ನು ಸೇರಿಸಿದರು. 14 ದಿನಗಳ ನಂತರ ಹುಷಾರಾಗಿದ್ದೆ, ಡಿಸ್ಚಾರ್ಜ ಆಗಿದ್ದೆ. ಇವೆಲ್ಲ ನನಗೆ ಹೆದರಿಕೆಯಾಗುವಂತಿತ್ತು.

ಮೋದಿಜಿ: ಅಂದರೆ ನಿಮಗೆ ರೋಗ ಪತ್ತೆಯಾದ ನಂತರ..

ರಾಮ್ ಗಂಪಾ ತೇಜಾ : ಹೌದು

ಮೋದಿಜಿ : ಅದಕ್ಕೂ ಮೊದಲು ಈ ವೈರಾಣು ಬಹಳ ಭಯಂಕರವಾದದ್ದು ಎಂದು ನಿಮಗೆ ತಿಳಿದಿರಬೇಕಲ್ಲವೇ?

ರಾಮ್ ಗಂಪಾ ತೇಜಾ : ಹೌದು

ಮೋದಿಜಿ : ಹಾಗಾದರೆ ನಿಮಗೆ ಸೋಂಕು ತಗುಲಿದಾಗ ನಿಮ್ಮ ತಕ್ಷಣದ ಪ್ರತಿಕ್ರಿಯೆ ಏನು?

ರಾಮ್ ಗಂಪಾ ತೇಜಾ : ಮೊದಲು ಬಹಳ ಹೆದರಿದ್ದೆ, ಆರಂಭದಲ್ಲಿ ನನಗೆ ಸೋಂಕು ತಗುಲಿದೆ ಎಂಬುದನ್ನು ನಂಬಿರಲೂ ಇಲ್ಲ. ಏಕೆಂದರೆ ಭಾರತದಲ್ಲಿ ಇಬ್ಬರು ಮೂವರಿಗೆ ಮಾತ್ರ ಬಂದಿತ್ತು. ಹಾಗಾಗಿ ಅದರ ಬಗ್ಗೆ ಏನೂ ಗೊತ್ತಿರಲಿಲ್ಲ. ಆಸ್ಪತ್ರೆಯಲ್ಲಿ ದಾಖಲಿಸಿದಾಗ ನನ್ನನ್ನು ಪ್ರತ್ಯೇಕವಾಗಿರಿಸಲಾಗಿತ್ತು. ಆಗಂತೂ ಮೊದಲ 2-3 ದಿನ ಹೀಗೆ ಸಾಗಿದ್ದವು. ಆದರೆ ಅಲ್ಲಿಯ ವೈದ್ಯರು ಮತ್ತು ಸುಶ್ರೂಷಕರು.

ಮೋದಿಯವರು : ಹಾಂ

ರಾಮ್ ಗಂಪಾ ತೇಜಾ: ಅವರು ನನ್ನೊಂದಿಗೆ ಚೆನ್ನಾಗಿ ವರ್ತಿಸುತ್ತಿದ್ದರು. ಪ್ರತಿದಿನ ನನ್ನೊಂದಿಗೆ ದೂರವಾಣಿ ಮೂಲಕ ಮಾತನಾಡುತ್ತಿದ್ದರು. ಏನೂ ಆಗುವುದಿಲ್ಲ ನೀವು ಗುಣಮುಖರಾಗುತ್ತೀರಿ ಎಂದು ಭರವಸೆ ನೀಡುತ್ತಿದ್ದರು. ದಿನಕ್ಕೆ ಒಂದೆರಡು ಬಾರಿ ವೈದ್ಯರು ಮತ್ತು ಸುಶ್ರೂಷಕರು ಮಾತನಾಡುತ್ತಿದ್ದರು. ಹಾಗಾಗಿ ಆರಂಭದಲ್ಲಿ ಭಯ ಇತ್ತು ನಂತರ ಇಂಥ ಸ್ನೇಹಮಯ ಜನರೊಂದಿಗೆ ಇದ್ದೇನೆ, ಅವರಿಗೆ ಏನು ಮಾಡಬೇಕೆಂದು ತಿಳಿದಿದೆ ಮತ್ತು ನಾನು ಗುಣಮುಖನಾಗುತ್ತೇನೆ ಎಂದೆನ್ನಿಸಿತ್ತು.

ಮೋದಿಜಿ: ಕುಟುಂಬದವರ ಮನಸ್ಥಿತಿ ಹೇಗಿತ್ತು?

ರಾಮ್ ಗಂಪಾ ತೇಜಾ: ನಾನು ಆಸ್ಪತ್ರೆಯಲ್ಲಿ ದಾಖಲಾದಾಗ ಎಲ್ಲರೂ ಬಹಳ ಆತಂಕದಲ್ಲಿದ್ದರು. ಹೆಚ್ಚಿನ ಗಮನ ಕೇಂದ್ರೀಕರಿಸಲಾಗಿತ್ತು. ಆದರೆ ಎಲ್ಲಕ್ಕಿಂತ ಮೊದಲು ಕುಟುಂಬದವರ ಪರೀಕ್ಷೆಯನ್ನೂ ಮಾಡಲಾಗಿತ್ತು. ಎಲ್ಲರ ಫಲಿತಾಂಶ ನೆಗೆಟಿವ್ ಬಂದಿತ್ತು. ಇದು ನಮಗೆ, ನನ್ನ ಕುಟುಂಬಕ್ಕೆ ಮತ್ತು ನನ್ನ ಸುತ್ತಮುತ್ತ ಇರುವವರಿಗೆ ದೊಡ್ಡ ವರದಾನವಾಗಿತ್ತು. ತದನಂತರ ಪ್ರತಿದಿನ ಚೇತರಿಕೆ ಕಂಡುಬಂತು. ವೈದ್ಯರು ನಮ್ಮೊಂದಿಗೆ ಮಾತನಾಡುತ್ತಿದ್ದರು. ಕುಟುಂಬದವರಿಗೂ ತಿಳಿಸುತ್ತಿದ್ದರು.

ಮೋದಿಜಿ: ಸ್ವತಃ ನೀವು ಏನೇನು ಮುಂಜಾಗೃತಾ ಕ್ರಮ ಕೈಗೊಂಡಿರಿ? ಕುಟುಂಬದವರಿಗಾಗಿ ಏನು ಮುಂಜಾಗೃತೆ ವಹಿಸಿದಿರಿ?

ರಾಮ್ ಗಂಪಾ ತೇಜಾ: ಕುಟುಂಬದವರಿಗೆ ವಿಷಯ ತಿಳಿದಾಗ ನನ್ನನ್ನು ಪ್ರತ್ಯೇಕವಾಗಿರಿಸಲಾಗಿತ್ತು. ಆದರೆ ಕ್ವಾರಂಟೈನ್ ನಂತರವೂ 14 ದಿನಗಳವರೆಗೆ ಮನೆಯಲ್ಲೇ ಪ್ರತ್ಯೇಕ ಕೋಣೆಯಲ್ಲಿರಬೇಕು ಮತ್ತು ಸ್ವತಃ ನನ್ನನ್ನು ಕ್ವಾರಂಟೈನ್ ನಲ್ಲಿರಿಸಿಕೊಳ್ಳುವಂತೆ ವೈದ್ಯರು ತಿಳಿಸಿದ್ದರು. ಹಾಗಾಗಿ ಆಸ್ಪತ್ರೆಯಿಂದ ಬಂದ ನಂತರವೂ ಮನೆಯಲ್ಲೇ ಇದ್ದೇನೆ. ಹೆಚ್ಚಾಗಿ ನನ್ನ ಕೋಣೆಯಲ್ಲೇ ಇರುತ್ತೇನೆ. ದಿನಪೂರ್ತಿ ಮಾಸ್ಕ್ ಹಾಕಿಕೊಂಡೇ ಇರುತ್ತೇನೆ. ಎನನ್ನೇ ತಿನ್ನಬೇಕೆಂದಿದ್ದರೂ ಸಾಬೂನಿನಿಂದ ಸ್ವಚ್ಛವಾಗಿ ಕೈ ತೊಳೆಯುವುದು ಅವಶ್ಯಕ.

ಮೋದಿಯವರು : ಆಯ್ತು ರಾಮ್ ನೀವು ಸ್ವಸ್ಥರಾಗಿ ಬಂದಿದ್ದೀರಿ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ನನ್ನ ಅನಂತ ಶುಭಾಷಯಗಳು

ರಾಮ್ ಗಂಪಾ ತೇಜಾ : ಧನ್ಯವಾದಗಳು

ಮೋದಿಯವರು : ಆದರೆ ನಿಮ್ಮ ಈ ಅನುಭವವನ್ನು

ರಾಮ್ ಗಂಪಾ ತೇಜಾ : ಹಾಂ. .

ಮೋದಿಯವರು : ನೀವು ಐ ಟಿ ವೃತ್ತಿಯಲ್ಲಿದ್ದೀರಿ ಅಲ್ಲವೇ?

ರಾಮ್ ಗಂಪಾ ತೇಜಾ : ಹಾಂ. . .

ಮೋದಿಯವರು : ಹಾಗಾಗಿ ನಿಮ್ಮ ಅನುಭವವನ್ನು ಧ್ವನಿ ಮುದ್ರಿಸಿ

ರಾಮ್ ಗಂಪಾ ತೇಜಾ : ಹಾಂ. . .

ಮೋದಿಯವರು : ಜನರೊಂದಿಗೆ ಹಂಚಿಕೊಳ್ಳಿ. ಸಾಕಷ್ಟು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಮಾಡಿ. ಇದರಿಂದ ಜನರು ಹೆದರುವುದೂ ಇಲ್ಲ ಮತ್ತು ಅದೇ ಸಮಯದಲ್ಲಿ ಸೂಕ್ತ ಕಾಳಜಿವಹಿಸುವುದರಿಂದ ಹೇಗೆ ಕಾಪಾಡಿಕೊಳ್ಳಬಹುದು ಎಂಬುದು ಜನರಿಗೆ ತಲುಪುತ್ತದೆ.

ರಾಮ್ ಗಂಪಾ ತೇಜಾ : ಹೌದು ಸರ್..ನಾನು ಹೊರಗೆ ಬಂದು ನೋಡಿದಾಗ ಕ್ವಾರಂಟೈನ್ ಎಂದರೆ ಜೈಲಿಗೆ ಹೋದಂತೆ ಎಂದು ಜನರು ಯೋಚಿಸುತ್ತಿದ್ದಾರೆ. ಆದರೆ ಅದು ಹಾಗಿಲ್ಲ. ಸರ್ಕಾರಿ ಕ್ವಾರಂಟೈನ್ ತಮಗೆ ಮತ್ತು ತಮ್ಮ ಕುಟುಂಬಕ್ಕಾಗಿಯೇ ಇದೆ ಎಂದು ಎಲ್ಲರಿಗೂ ತಿಳಿಯಬೇಕು. ಹಾಗಾಗಿ ಈ ವಿಷಯದ ಕುರಿತು ಜನರಿಗೆ ಪರೀಕ್ಷೆ ಮಾಡಿಸಿಕೊಳ್ಳಿ, ಕ್ವಾರಂಟೈನ್ ನಿಂದ ಹೆದರಬೇಡಿ, ಗಾಬರಿಯಾಗಬೇಡಿ ಎಂದು ಹೇಳಬಯಸುತ್ತೇನೆ.

ಮೋದಿಯವರು : ಆಯ್ತು ರಾಮ್, ನಿಮಗೆ ಅನಂತ ಶುಭ ಹಾರೈಕೆಗಳು

ರಾಮ್ ಗಂಪಾ ತೇಜಾ : ಧನ್ಯವಾದಗಳು ಸರ್,

 ಸ್ನೇಹಿತರೆ, ರಾಮ್ ಅವರು ಹೇಳಿದಂತೆ ಅವರು ಕರೋನಾ ಸೋಂಕು ಪತ್ತೆಯಾದ ಮೇಲೆ ವೈದ್ಯರು ನೀಡಿದ ಪ್ರತಿಯೊಂದು ನಿರ್ದೇಶನಗಳ ಪಾಲನೆ ಮಾಡಿದರು. ಪರಿಣಾಮ ಇಂದು ಅವರು ಆರೋಗ್ಯದಿಂದ ಸಹಜ ಜೀವನ ನಡೆಸುತ್ತಿದ್ದಾರೆ. ಕರೋನಾವನ್ನು ಸೋಲಿಸಿದಂತಹ ಇಂಥ ಮತ್ತೊಬ್ಬ ವ್ಯಕ್ತಿ ಇಂದು ನಮ್ಮೊಂದಿಗಿದ್ದಾರೆ. ಅವರ ಸಂಪೂರ್ಣ ಕುಟುಂಬವೇ ಈ ಸಂಕಷ್ಟಕ್ಕೆ ಸಿಲುಕಿತ್ತು. ಅವರ ಮಗನೂ ಈ ಸಂಕಷ್ಟಕ್ಕೆ ಸಿಲುಕಿದ್ದ. ಬನ್ನಿ ಆಗ್ರಾದ ಶ್ರೀಯುತ ಅಶೋಕ್ ಕಪೂರ್ ಅವರೊಂದಿಗೆ ಮಾತಾಡೋಣ.

ಮೋದಿಯವರು : ಅಶೋಕ್ ಅವರೇ ನಮಸ್ತೆ.

ಅಶೋಕ್ ಕಪೂರ್ : ನಮಸ್ತೆ ಸರ್, ನಿಮ್ಮೊಂದಿಗೆ ಮಾತಾಡುತ್ತಿರುವುದು ನನ್ನ ಸೌಭಾಗ್ಯ

ಮೋದಿಯವರು : ಇದು ನನ್ನ ಸೌಭಾಗ್ಯವೂ ಹೌದು. ನಿಮ್ಮ ಸಂಪೂರ್ಣ ಕುಟುಂಬವೇ ಈ ಸಂಕಷ್ಟಕ್ಕೆ ಸಿಲುಕಿತ್ತು ಎಂಬುದರ ಕುರಿತು ನಾನು ಕರೆ ಮಾಡಿದ್ದೇನೆ.

ಅಶೋಕ್ ಕಪೂರ್ : ಹೌದು ಸರ್

ಮೋದಿಯವರು : ಹಾಗಾಗಿ, ನಿಮಗೆ ಈ ಸಮಸ್ಯೆ, ಈ ಸೋಂಕಿನ ಬಗ್ಗೆ ಹೇಗೆ ತಿಳಿಯಿತು? ಏನಾಯಿತು? ಆಸ್ಪತ್ರೆಯಲ್ಲಿ ಏನಾಯಿತು? ಎಂದು ತಿಳಿಯಬಯಸುತ್ತೇನೆ. ನಿಮ್ಮ ಮಾತುಗಳನ್ನು ಕೇಳಿ ದೇಶಕ್ಕೆ ಏನಾದರೂ ವಿಷಯ ತಿಳಿಸಬಹುದಾಗಿದ್ದರೆ ಅದನ್ನು ಹಂಚಿಕೊಳ್ಳುತ್ತೇನೆ.

ಅಶೋಕ್ ಕಪೂರ್ : ಖಂಡಿತ ಸರ್. ನನಗೆ ಇಬ್ಬರು ಗಂಡುಮಕ್ಕಳಿದ್ದಾರೆ. ಅವರು ಇಟಲಿಗೆ ಹೋಗಿದ್ದರು. ಅಲ್ಲಿ ಶೂ ಮೇಳ ನಡೆಯುತ್ತಿತ್ತು. ನಾವು ಇಲ್ಲಿ ಪಾದರಕ್ಷೆಗಳನ್ನು ತಯಾರಿಸುವ ಕಾರ್ಖಾನೆ ಹೊಂದಿದ್ದೇವೆ.

ಮೋದಿಯವರು : ಹಾಂ

ಅಶೋಕ್ ಕಪೂರ್ : ಹಾಗಾಗಿ ಇಟಲಿಗೆ ಮೇಳಕ್ಕೆ ಹೋಗಿದ್ದರು. ಇವರು ಮರಳಿ ಬಂದ ಮೇಲೆ

ಮೋದಿಯವರು : ಹಾಂ

ಅಶೋಕ್ ಕಪೂರ್ : ನನ್ನ ಅಳಿಯನೂ ಹೋಗಿದ್ದ. ಅವರು ದೆಹಲಿಯಲ್ಲಿರುತ್ತಾರೆ. ಅವರಿಗೆ ಸ್ವಲ್ಪ ತೊಂದರೆಯಾಗಿತ್ತು. ಹಾಗಾಗಿ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ತೆರಳಿದ್ದರು.

ಮೋದಿಯವರು : ಹಾಂ

ಅಶೋಕ್ ಕಪೂರ್ : ಅಲ್ಲಿ ಅವರಿಗೆ ಪಾಸಿಟಿವ್ ಎಂದು ಹೇಳಲಾಯಿತು. ಅವರನ್ನು ಸಫ್ದರ್ ಜಂಗ್ ಗೆ ವರ್ಗಾಯಿಸಿದರು.

ಮೋದಿಯವರು : ಹಾಂ

ಅಶೋಕ್ ಕಪೂರ್ : ನೀವೂ ಅವರೊಂದಿಗೆ ಹೋಗಿದ್ದಿರಿ, ನೀವೂ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಹೇಳಲು ಅಲ್ಲಿಂದ ನಮಗೆ ಫೆÇೀನ್ ಬಂದಿತ್ತು. ಹಾಗಾಗಿ ಇಲ್ಲಿಯ ಆಗ್ರಾ ಜಿಲ್ಲಾ ಆಸ್ಪತ್ರೆಗೆ ಇಬ್ಬರೂ ಮಕ್ಕಳು ಪರೀಕ್ಷೆ ಮಾಡಿಸಲು ಹೋದರು. ಆಗ್ರಾ ಜಿಲ್ಲಾ ಆಸ್ಪತ್ರೆಯವರು ಇವರಿಗೆ ಕುಟುಂಬದವರನ್ನೂ ಕರೆಸಲು ಹೇಳಿದರು. ಕೊನೆಗೆ ನಾವೆಲ್ಲರೂ ಹೋದೆವು.

ಮೋದಿಯವರು : ಹಾಂ

ಅಶೋಕ್ ಕಪೂರ್ : ಹಾಗಾಗಿ ಮಾರನೆ ದಿನ ನನ್ನ ಇಬ್ಬರು ಮಕ್ಕಳು, ನಾನು ನನ್ನ ಮಡದಿಅಂದ ಹಾಗೆ ನಾನು 73 ವರ್ಷದವನಿದ್ದೇನೆ. ನನ್ನ ಮಡದಿ ಮತ್ತು ನನ್ನ ಸೊಸೆ ಹಾಗೂ ನನ್ನ 16 ವರ್ಷದ ಮೊಮ್ಮಗ ಹೀಗೆ 6 ಜನರಿಗೆ ಅವರು ಪಾಸಿಟಿವ್ ಎಂದು ಹೇಳಿದರು ಮತ್ತು ದೆಹಲಿಗೆ ಕರೆದೊಯ್ಯಬೇಕೆಂದು ತಿಳಿಸಿದರು.

ಮೋದಿಯವರು : ಓ ಮೈ ಗಾಡ್

ಅಶೋಕ್ ಕಪೂರ್ : ನಾವು ಹೆದರಲಿಲ್ಲ ಸರ್, ನಮಗೆ ತಿಳಿದಿದ್ದು ಒಳ್ಳೆಯದೇ ಆಯಿತು ಎಂದೆವು. ನಾವು ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಗೆ ಹೋದೆವು. ಆಗ್ರಾದವರೇ 2 ಆಂಬುಲೆನ್ಸ್ ನೀಡಿ ನಮ್ಮನ್ನು ಕಳುಹಿಸಿದರು. ಯಾವುದೇ ಶುಲ್ಕವನ್ನೂ ವಿಧಿಸಲಿಲ್ಲ. ಆಗ್ರಾದ ವೈದ್ಯರು, ಆಡಳಿತ ಸಿಬ್ಬಂದಿಗೆ ನಾವು ಆಭಾರಿಯಾಗಿದ್ದೇವೆ. ಅವರು ನಮಗೆ ಸಂಪೂರ್ಣ ಸಹಕಾರ ನೀಡಿದರು.

ಮೋದಿಯವರು : ನೀವು ಆಂಬುಲೆನ್ಸ್ ನಲ್ಲಿ ಬಂದಿರಾ?

ಅಶೋಕ್ ಕಪೂರ್ : ಹೌದು ಆಂಬುಲೆನ್ಸ್ ನಲ್ಲಿ. ಆರಾಮಾಗೇ ಕುಳಿತುಕೊಂಡು ಬಂದೆವು. ನಮ್ಮೊಂದಿಗೆ ವೈದ್ಯರೂ ಬಂದಿದ್ದರು. ನಮ್ಮನ್ನು ಸಫ್ದರ್ ಜಂಗ್ ಆಸ್ಪತ್ರೆಗೆ ತಲುಪಿಸಿದರು. ಸಫ್ದರ್ ಜಂಗ್ ಆಸ್ಪತ್ರೆಯ ವೈದ್ಯರು ಆಗಲೇ ಗೇಟ್ ಬಳಿ ಕಾಯುತ್ತಿದ್ದರು. ಅವರು ನಮ್ಮನ್ನು ಮೀಸಲಿಟ್ಟ ವಾರ್ಡ್ ಗಳಿಗೆ ವರ್ಗಾಯಿಸಿದರು. 6 ಜನರಿಗೆ ಪ್ರತ್ಯೇಕ ಕೋಣೆಗಳನ್ನು ನೀಡಿದರು. ಕೊಠಡಿಗಳು ಚೆನ್ನಾಗಿದ್ದವು. ಸರ್, ನಾವು ಆಸ್ಪತ್ರೆಯಲ್ಲಿ 14 ದಿನ ಏಕಾಂಗಿಯಾಗಿದ್ದೆವು. ವೈದ್ಯರು ಬಹಳ ಸಹಕಾರಿಯಾಗಿದ್ದರು. ಸಿಬ್ಬಂದಿ ಸೇರಿದಂತೆ ಎಲ್ಲರೂ ನಮ್ಮನ್ನು ಬಹಳ ಚೆನ್ನಾಗಿ ನೋಡಿಕೊಂಡರು. ಅವರು ತಮ್ಮ ಸಮವಸ್ತ್ರ ಧರಿಸಿ ಬರುತ್ತಿದ್ದುದರಿಂದ ಅವರು ವೈದ್ಯರೇ, ನರ್ಸೆ, ಅಥವಾ ವಾರ್ಡ್ ಬಾಯ್ ಎಂದು ತಿಳಿಯುತ್ತಿರಲಿಲ್ಲ. ಅವರು ಹೇಳುವುದನ್ನು ನಾವು ಪಾಲಿಸುತ್ತಿದ್ದೆವು. ನಮಗೆ ಅಲ್ಲಿ ಶೇಕಡಾ ಒಂದರಷ್ಟೂ ಸಮಸ್ಯೆ ಇರಲಿಲ್ಲ.

ಮೋದಿಯವರು : ನಿಮ್ಮ ಆತ್ಮವಿಶ್ವಾಸವೂ ಬಹಳ ಧೃಡವಾಗಿದೆ.

ಅಶೋಕ್ ಕಪೂರ್ : ಹೌದು ಸರ್, ನಾನು ಪರ್‍ಫೆಕ್ಟ್ ಆಗಿದ್ದೀನಿ. ನಾನು ನನ್ನ ಮೊಣಗಾಲಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದೇನೆ. ಆದರೂ ಆರಾಮಾಗಿದ್ದೇನೆ.

ಮೋದಿಯವರು : ಆದರೂ ಇಂಥ ದೊಡ್ಡ ವಿಪತ್ತು ಇಡೀ ಕುಟುಂಬಕ್ಕೆ ಬಂದೆರಗಿದಾಗ ಅಲ್ಲದೇ 16 ರ ವಯಸ್ಸಿನ ಮೊಮ್ಮಗನಿಗೂ ಬಂದಿತ್ತು. . .

ಅಶೋಕ್ ಕಪೂರ್ : ಅವನ ಪರೀಕ್ಷೆ ಇತ್ತು ಸರ್, ಐ ಸಿ ಎಸ್ ಸಿ ಪರೀಕ್ಷೆ ನಡೆಯುತ್ತಿದ್ದವು. ಆದರೂ ನಾವು ಪರೀಕ್ಷೆಗೆ ಹಾಜರುಪಡಿಸಲಿಲ್ಲ. ನಂತರ ಬರೆದರಾಯಿತು ಎಂದು ನಾನು ಹೇಳಿದೆ. ಜೀವಂತವಿದ್ದರೆ ಎಲ್ಲ ಪರೀಕ್ಷೆಗಳು ಬರೆಯಬಹುದು, ಚಿಂತಿಸಬೇಡ ಎಂದೆ.

ಮೋದಿಯವರು : ಸರಿಯಾಗಿ ಹೇಳಿದಿರಿ. . . ನಿಮ್ಮ ಅನುಭವ ಇಲ್ಲಿ ನೆರವಾಯಿತು. ಸಂಪೂರ್ಣ ಕುಟುಂಬಕ್ಕೆ ವಿಶ್ವಾಸ ನೀಡಿತು ಮತ್ತು ಧೈರ್ಯವನ್ನೂ ತುಂಬಿತು.

ಅಶೋಕ್ ಕಪೂರ್ : ಹೌದು, ಸಂಪೂರ್ಣ ಕುಟುಂಬದವರು ಹೋಗಿದ್ದೆವು, ಒಬ್ಬೊರಿಗೊಬ್ಬರು ನೆರವಾಗಿದ್ದೆವು ಆದರೆ ಭೇಟಿ ಮಾಡುತ್ತಿರಲಿಲ್ಲ. ಫೋನ್ ನಲ್ಲಿ ಮಾತನಾಡುತ್ತಿದ್ದೆವು. ಭೇಟಿಯಾಗುತ್ತಿರಲಿಲ್ಲ. ಆದರೆ ವೈದ್ಯರು ನಮಗೆ ಸಾಧ್ಯವಾದಷ್ಟು ಉಪಚಾರ ಮಾಡಿದರು. ನಾವು ಅವರಿಗೆ ಋಣಿಯಾಗಿದ್ದೇವೆ. ಸ್ಟಾಫ್ ನರ್ಸ್‍ಗಳು ನಮಗೆ ಸಂಪೂರ್ಣ ಸಹಕಾರ ನೀಡಿದರು.

ಮೋದಿಯವರು : ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಅನಂತ ಅನಂತ ಶುಭ ಹಾರೈಕೆಗಳು

ಅಶೋಕ್ ಕಪೂರ್ : ಧನ್ಯವಾದಗಳು ಸರ್, ನಿಮ್ಮೊಂದಿಗೆ ಮಾತನಾಡಿ ನನಗೆ ಬಹಳ ಸಂತೋಷವಾಗಿದೆ.

ಮೋದಿಯವರು : ನನಗೂ ಸಂತೋಷವಾಗಿದೆ

ಅಶೋಕ್ ಕಪೂರ್ : ತದನಂತರವೂ ಜಾಗೃತಿ ಮೂಡಿಸಲು ಎಲ್ಲಿಗೇ ಹೋಗಬೇಕಾದಲ್ಲಿ ನಾವು ಸದಾಸಿದ್ಧರಿದ್ದೇವೆ.

ಮೋದಿಯವರು : ನೀವು ನಿಮ್ಮದೇ ಶೈಲಿಯಲ್ಲಿ ಆಗ್ರಾದಲ್ಲಿ ಸೇವೆ ಸಲ್ಲಿಸಿ. ಯಾರಾದರೂ ಹಸಿವಿನಿಂದಿದ್ದರೆ ಊಟ ಮಾಡಿಸಿ,

ಅಶೋಕ್ ಕಪೂರ್ : ಖಂಡಿತ ಖಂಡಿತ….

ಮೋದಿಯವರು: ಬಡವರ ಬಗ್ಗೆ ಕಾಳಜಿವಹಿಸಿ, ನಿಯಮಗಳನ್ನು ಜನರು ಪಾಲಿಸುವಂತೆ ತಿಳಿ ಹೇಳಿ. ನಿಮ್ಮ ಕುಟುಂಬ ಈ ಸಂಕಷ್ಟದಲ್ಲಿ ಸಿಲುಕಿತ್ತು, ಆದರೆ ನಿಯಮಗಳನ್ನು ಪಾಲಿಸಿ ಹೇಗೆ ನಿಮ್ಮ ಕುಟುಂಬದವರನ್ನು ರಕ್ಷಿಸಿದಿರಿ ಎಂದು ಜನರಿಗೆ ತಿಳಿಸಿ. ಎಲ್ಲರೂ ನಿಯಮಗಳನ್ನು ಪಾಲಿಸಿದರೆ ದೇಶವು ಸುರಕ್ಷಿತವಾಗಿರುತ್ತದೆ.

ಅಶೋಕ್ ಕಪೂರ್ : ಮೋದಿಯವರೇ, ನಾವು ನಮ್ಮ ವಿಡಿಯೋ ಚಿತ್ರಿಕರಿಸಿ ಚಾನಲ್ ಗಳಿಗೆ ನೀಡಿದ್ದೇವೆ.

ಮೋದಿಯವರು : ಹೌದಾ. . .

ಅಶೋಕ್ ಕಪೂರ್ : ಜನರಲ್ಲಿ ಜಾಗೃತಿ ಮೂಡಿಸಲು ಚಾನಲ್ ನವರು ಇದನ್ನು ಬಿತ್ತರಿಸಿದ್ದಾರೆ.

ಮೋದಿಯವರು : ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಪ್ರಸಿದ್ಧಿಗೊಳಿಸಬೇಕು.

ಅಶೋಕ್ ಕಪೂರ್ : ಹೌದು, ನಾವಿರುವ ನಮ್ಮ ಕಾಲೋನಿಯಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುತ್ತಿದ್ದೇವೆ ಮತ್ತು ನಾವು ಮರಳಿ ಬಂದಿದ್ದೇವೆ, ಹೆದರಬೇಡಿ, ಯಾರಿಗೆ ಏನೇ ಸಮಸ್ಯೆ ಇದ್ದರೂ ಪರೀಕ್ಷೆ ಮಾಡಿಸಿಕೊಳ್ಳಿ ನಮ್ಮ ಸಂಪರ್ಕಕ್ಕೆ ಬಂದವರು ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಹೇಳುತ್ತಿದ್ದೇವೆ. ಮತ್ತು ದೇವರ ದಯೆಯಿಂದ ಎಲ್ಲರೂ ಕ್ಷೇಮವಾಗಿರಲಿ.

ಮೋದಿಯವರು : ಸರಿ, ಎಲ್ಲರಿಗೂ ಅನಂತ ಶುಭ ಹಾರೈಕೆಗಳು

 ಸ್ನೇಹಿತರೆ, ನಾವು ಅಶೋಕ್‍ರವರು ಮತ್ತು ಅವರ ಕುಟುಂಬದವರ ದಿರ್ಘಾಯುಷ್ಯಕ್ಕೆ ಪ್ರಾರ್ಥಿಸುತ್ತೇವೆ, ಅವರು ಹೇಳಿದಂತೆ ಆತಂಕಗೊಳ್ಳದೇ ಹೆದರದೇ, ಸೂಕ್ತ ಕಾಲದಲ್ಲಿ ಸೂಕ್ತ ಕ್ರಮ ಕೈಗೊಳ್ಳಿ. ಸರಿಯಾದ ಸಮಯಕ್ಕೆ ವೈದ್ಯರನ್ನು ಸಂಪರ್ಕಿಸಿ ಮತ್ತು ಸೂಕ್ತ ಮುಂಜಾಗೃತೆ ಕೈಗೊಳ್ಳುವ ಮೂಲಕ ಈ ಮಹಾಮಾರಿಯನ್ನು ಸೋಲಿಸಬಹುದಾಗಿದೆ. ಸ್ನೇಹಿತರೆ, ನಾವು ವೈದ್ಯಕೀಯ ಮಟ್ಟದಲ್ಲಿ ಈ ಮಹಾಮಾರಿಯನ್ನು ಹೇಗೆ ನಿಭಾಯಿಸುತ್ತಿದ್ದೇವೆ ಎಂದು ತಿಳಿದುಕೊಳ್ಳಲು ಈ ಸಮರದಲ್ಲಿ ಮುಂಚೂಣಿಯಲ್ಲಿದ್ದು ಹೋರಾಡುತ್ತಿರುವ ಕೆಲವು ವೈದ್ಯರೊಂದಿಗೂ ನಾನು ಮಾತನಾಡಿದೆ. ಪ್ರತಿದಿನದ ಅವರ ಕಾರ್ಯದಲ್ಲಿ ಇಂಥ ರೋಗಿಗಳನ್ನು ಅವರು ನಿಭಾಯಿಸಬೇಕು. ಬನ್ನಿ ದಿಲ್ಲಿಯಿಂದ ಡಾ. ನಿತೇಶ್ ಗುಪ್ತಾ ನಮ್ಮೊಂದಿಗಿದ್ದಾರೆ.

ಮೋದಿಯವರು : ನಮಸ್ತೆ ಡಾಕ್ಟರ್

ಡಾ. ನಿತೇಶ್ ಗುಪ್ತಾ : ನಮಸ್ತೆ ಸರ್

ಮೋದಿಯವರು : ನಮಸ್ತೆ ನಿತೇಶ್ ಅವರೇನೀವಂತೂ ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದ್ದೀರಿ. ಹಾಗಾಗಿ ಆಸ್ಪತ್ರೆಯಲ್ಲಿ ನಿಮ್ಮ ಸಹೋದ್ಯೋಗಿಗಳ ಮನಸ್ಥಿತಿ ಹೇಗಿದೆ ಎಂದು ತಿಳಿದುಕೊಳ್ಳಬಯಸುತ್ತೇನೆ? ನೀವು ಸ್ವಲ್ಪ

ಡಾ. ನಿತೇಶ್ ಗುಪ್ತಾ : ಎಲ್ಲರ ಮನಃಸ್ಥಿತಿ ಹುರುಪಿನಿಂದಿದೆ. ಎಲ್ಲರ ಮೇಲೆ ನಿಮ್ಮ ಆಶೀರ್ವಾದವಿದೆ. ನೀವು ಎಲ್ಲಾ ಆಸ್ಪತ್ರೆಗಳಿಗೆ ಸಾಕಷ್ಟು ನೆರವು ನೀಡುತ್ತಿದ್ದೀರಿ. ನಾವು ಕೇಳುವುದೆಲ್ಲವನ್ನೂ ನೀವು ನೀಡುತ್ತಿದ್ದೀರಿ. ಹಾಗಾಗಿ ನಾವು ಸೇನೆ ಗಡಿಯಲ್ಲಿ ಹೋರಾಡುವಂತೆ ಇಲ್ಲಿ ಕಾರ್ಯನಿರ್ವಹಿಸುತ್ತೀದ್ದೇವೆ ಮತ್ತು ರೋಗಿ ಆರೋಗ್ಯವಂತರಾಗಿ ಮನೆಗೆ ತೆರಳಲಿ ಎಂಬುದೊಂದೇ ನಮ್ಮ ಏಕೈಕ ಕರ್ತವ್ಯವಾಗಿದೆ

ಮೋದಿಯವರು : ನಿಮ್ಮ ಮಾತು ಸರಿಯಾಗಿಯೇ ಇದೆ. ಇದೊಂದು ಯುದ್ಧದಂತಹ ಸ್ಥಿತಿ ಮತ್ತು ನೀವೆಲ್ಲರೂ ಸಹ ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದ್ದೀರಿ.

ಡಾ. ನಿತೇಶ್ ಗುಪ್ತಾ : ಹೌದು ಸರ್.

ಮೋದಿಯವರು : ನೀವು ಚಿಕಿತ್ಸೆಯ ಜೊತೆ ಜೊತೆಗೆ ರೋಗಿಯ ಆಪ್ತ ಸಮಾಲೋಚನೆಯನ್ನೂ ಮಾಡಬೇಕಾಗುತ್ತದಲ್ಲವೇ?

ಡಾ. ನಿತೇಶ್ ಗುಪ್ತಾ : ಹೌದು ಸರ್. ಅದು ಎಲ್ಲಕ್ಕಿಂತ ಮಹತ್ವದ ವಿಷಯವಾಗಿದೆ. ಏಕೆಂದರೆ, ರೋಗಿ ವಿಷಯ ತಿಳಿದ ಕೂಡಲೇ ತನಗೆ ಏನಾಗುತ್ತಿದೆ ಎಂದು ಹೆದರಿ ಬಿಡುತ್ತಾನೆ. ಅವರಿಗೆ ಏನೂ ಆಗಿಲ್ಲ, ಮುಂದಿನ 14 ದಿನಗಳಲ್ಲಿ ನೀವು ಹುμÁರಾಗಿ ಮನೆಗೆ ಹೋಗುತ್ತೀರಿ ಎಂದು ತಿಳಿ ಹೇಳಬೇಕಾಗುತ್ತದೆ. ನಾವು ಇಲ್ಲಿಯವರೆಗೆ ಇಂಥ 16 ರೋಗಿಗಳನ್ನು ಮನೆಗೆ ಕಳುಹಿಸಿದ್ದೇವೆ.

ಮೋದಿಯವರು : ನೀವು ಮಾತನಾಡಿದಾಗ ಒಟ್ಟಾರೆ ಏನು ತಿಳಿದು ಬರುತ್ತದೆ, ಹೆದರಿದ ಜನರಿಗೆ ಯಾವ ರೀತಿಯ ಚಿಂತೆ ಸತಾಯಿಸುತ್ತದೆ?

ಡಾ. ನಿತೇಶ್ ಗುಪ್ತಾ : ಮುಂದೆ ಏನಾಗುತ್ತದೆ? ಈಗ ಏನಾಗುವುದು? ಎಂಬುದೇ ಅವರ ಚಿಂತೆ. ಹೊರಗಿನ ಜಗತ್ತಿನಲ್ಲಿ ಇμÉ್ಟೂಂದು ಜನ ಸಾವನ್ನಪ್ಪುತ್ತಿದ್ದಾರಾದ್ದರಿಂದ ನಮಗೂ ಅಂಥದ್ದೇ ಸ್ಥಿತಿ ಬರಬಹುದು ಎಂದು ಅವರಿಗೆ ಅನ್ನಿಸುತ್ತದೆ. ನಾವು ಅವರಿಗೆ ನಿಮಗೆ ಯಾವ ತೊಂದರೆ ಇದೆ, ಯಾವಾಗ ಆರಾಮವಾಗುತ್ತದೆ ಎಂಬುದನ್ನು ತಿಳಿಹೇಳುತ್ತೇವೆ. ನಿಮ್ಮ ಕೇಸ್ ಬಹಳ ಮೈಲ್ಡ್ ಆದದ್ದು. ಸಾಮಾನ್ಯ ಕೆಮ್ಮು ನೆಗಡಿಯಂತಹ ಕೇಸ್ ಆಗಿದೆ. ಹಾಗಾಗಿ 5-6 ದಿನಗಳಲ್ಲಿ ಗುಣವಾದ ನಂತರ ನೀವು ಆರಾಮದಿಂದಿರುತ್ತೀರಿ. ನಂತರ ನಾವು ನಿಮ್ಮ ಪರೀಕ್ಷೆ ಮಾಡುತ್ತೇವೆ. ಅದು ನೆಗಟಿವ್ ಬಂದಲ್ಲಿ ನಿಮ್ಮನ್ನು ಮನೆಗೆ ಕಳುಹಿಸುತ್ತೇವೆ ಎಂದು ಸಾಂತ್ವಾನ ನೀಡುತ್ತೇವೆ. ದಿನದಲ್ಲಿ 2-3-4 ಗಂಟೆಗಳಿಗೊಮ್ಮೆ ರೋಗಿಯ ಬಳಿ ಹೋಗುತ್ತೇವೆ, ಭೇಟಿಯಾಗುತ್ತೇವೆ, ಮಾತನಾಡಿಸುತ್ತೇವೆ. ಅವರಿಗೆ ದಿನ ಪೂರ್ತಿ ಅನುಕೂಲವಾದಲ್ಲಿ ಅವರು ಸಂತೋಷದಿಂದಿರುತ್ತಾರೆ.

ಮೋದಿಯವರು : ಅವರ ಆತ್ಮ ವಿಶ್ವಾಸ ಹೆಚ್ಚುತ್ತದೆ. ಆರಂಭದಲ್ಲಿ ಹೆದರುತ್ತಾರೆಯೇ?

ಡಾ. ನಿತೇಶ್ ಗುಪ್ತಾ : ಆರಂಭದಲ್ಲಿ ಹೆದರುತ್ತಾರೆ. ಆದರೆ, ನಾವು ತಿಳಿಸಿ ಹೇಳಿದಾಗ, 2-3 ದಿನಗಳ ನಂತರ ಅವರು ಚೇತರಿಸಿಕೊಳ್ಳುವುದನ್ನು ಕಂಡಾಗ, ಅವರಿಗೆ ನಾವು ಗುಣಮುಖರಾಗುತ್ತೇವೆ ಎಂದು ಭರವಸೆ ಮೂಡಲಾರಂಭಿಸುತ್ತದೆ.

ಮೋದಿಯವರು : ಎಲ್ಲ ವೈದ್ಯರಿಗೆ, ಜೀವನದಲ್ಲಿ ಸೇವೆ ಮಾಡುವ ಬಹು ದೊಡ್ಡ ಕೆಲಸ ತಮ್ಮ ಜಾವಾಬ್ದಾರಿಯಾಗಿ ಬಂದಿದೆ ಎಂದು ಅನ್ನಿಸುತ್ತದೆಯೇ?

ಡಾ. ನಿತೇಶ್ ಗುಪ್ತಾ : ಹೌದು ಸರ್. ಖಂಡಿತಾ ಅದೇ ಭಾವನೆ ಇದೆ. ನಾವು ನಮ್ಮ ತಂಡವನ್ನು ಹೆದರುವ ಅವಶ್ಯಕತೆ ಇಲ್ಲ ಎಂದು ಪೆÇ್ರೀತ್ಸಾಹಿಸುತ್ತಲೇ ಇರುತ್ತೇವೆ. ನಾವು ಸಂಪೂರ್ಣ ಮುಂಜಾಗ್ರತೆವಹಿಸಿದಲ್ಲಿ, ನೀವು ಹೀಗೆ ಮಾಡಿದಲ್ಲಿ ಎಲ್ಲವೂ ಸರಿಹೋಗುತ್ತದೆ ಎಂದು ರೋಗಿಗೂ ಅಚ್ಚುಕಟ್ಟಾಗಿ ಮುಂಜಾಗ್ರತೆ ಕುರಿತು ತಿಳಿಸುತ್ತೇವೆ.

ಮೋದಿಯವರು : ವೈದ್ಯರೇ, ನಿಮ್ಮ ಬಳಿ ಬಹು ದೊಡ್ಡ ಸಂಖ್ಯೆಯಲ್ಲಿ ರೋಗಿಗಳು ಬರುತ್ತಾರೆ ಮತ್ತು ನೀವು ಮನಸಾರೆ ಕಾರ್ಯ ನಿರ್ವಹಿಸುತ್ತಿದ್ದೀರಿ. ನಿಮ್ಮೊಂದಿಗೆ ಮಾತನಾಡಿ ಸಂತೋಷವಾಯಿತು. ಸಮರ ಮುಂದುವರೆಸಿ. ನಿಮ್ಮೊಂದಿಗೆ ನಾನಿದ್ದೇನೆ.

ಡಾ. ನಿತೇಶ್ ಗುಪ್ತಾ : ನಿಮ್ಮ ಆಶೀರ್ವಾದವಿರಲಿ ಎಂದು ನಾವು ಬಯಸುತ್ತೇವೆ.

ಮೋದಿಯವರು : ಅನಂತ ಅನಂತ ಶುಭಹಾರೈಕೆಗಳು ಸೋದರ.

ಡಾ. ನಿತೇಶ್ ಗುಪ್ತಾ : ಸರ್. ಧನ್ಯವಾದಗಳು

ಮೋದಿಯವರು : ಧನ್ಯವಾದಗಳು. ನಿತೇಶ್ ಅವರೇ ನಿಮಗೆ ಅನಂತ ಅನಂತ ಧನ್ಯವಾದಗಳು. ನಿಮ್ಮಂಥವರ ಪ್ರಯತ್ನಗಳಿಂದಲೇ ಭಾರತ, ಕೊರೊನಾ ವಿರುದ್ಧ ಹೋರೋಟದಲ್ಲಿ ಖಂಡಿತಾ ಜಯಗಳಿಸುತ್ತದೆ. ನೀವು ನಿಮ್ಮ ಬಗ್ಗೆ ಕಾಳಜಿವಹಿಸಿ ಎಂದು ನಾನು ಮನವಿ ಮಾಡಿಕೊಳ್ಳುತ್ತೇನೆ. ನಿಮ್ಮ ಸಹೋದ್ಯೋಗಿಗಳ ಬಗ್ಗೆ ಕಾಳಜಿವಹಿಸಿ, ನಿಮ್ಮ ಕುಟುಂಬದವರ ಬಗ್ಗೆ ಕಾಳಜಿವಹಿಸಿ. ಈ ರೋಗದ ಸೋಂಕಿನಿಂದ ಬಳಲುತ್ತಿರುವವರ ಸಂಖ್ಯೆ ಇದ್ದಕ್ಕಿದ್ದಂತೆ ಹೆಚ್ಚಾಗುತ್ತಿದೆ ಎಂದು ವಿಶ್ವವೇ ತನ್ನ ಅನುಭವದಿಂದ ಸಾರುತ್ತಿದೆ. ಇದ್ದಕ್ಕಿದ್ದಂತೆ ರೋಗ ವೃದ್ಧಿಸುತ್ತಿರುವುದರಿಂದ ವಿದೇಶಗಳಲ್ಲಿ ಅತ್ಯುತ್ತಮ ಆರೋಗ್ಯ ಕೇಂದ್ರಗಳು ಕೈಚೆಲ್ಲಿ ಕೂತಿರುವುದನ್ನು ನಾವು ಕಂಡಿದ್ದೇವೆ. ಭಾರತದಲ್ಲಿ ಇಂಥ ಪರಿಸ್ಥಿತಿ ಬರದಿರಲಿ ಎಂಬುದಕ್ಕಾಗಿ ನಾವು ನಿರಂತರ ಪ್ರಯತ್ನ ಮಾಡಬೇಕಿದೆ. ಪುಣೆಯಿಂದ ಮತ್ತೊಬ್ಬ ವೈದ್ಯರು ನಮ್ಮ ಸಂಪರ್ಕದಲ್ಲಿದ್ದಾರೆಶ್ರೀಯುತ ಡಾ. ಭೋರ್ಸೆ

ಮೋದಿಯವರು: ನಮಸ್ತೆ ಡಾಕ್ಟರ್

ಡಾ. ಭೋರ್ಸೆ: ನಮಸ್ತೆ.. ನಮಸ್ತೆ..

ಮೋದಿಯವರು: ನಮಸ್ತೆ. ನೀವಂತೂ ಜನಸೇವೆಯೇ ಜನಾರ್ಧನ ಸೇವೆ ಎಂಬ ಭಾವನೆಯಿಂದ ಕೆಲಸ ಮಾಡುತ್ತಿದ್ದೀರಿ. ಇಂದು ನಿಮ್ಮೊಂದಿಗೆ ಕೆಲ ವಿಷಯಗಳನ್ನು ಮಾತನಾಡಬಯಸುತ್ತೇನೆ. ದೇಶಬಾಂಧವರಿಗಾಗಿ ನಿಮ್ಮ ಸಂದೇಶ ತಿಳಿಸಿ. ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು ಮತ್ತು ಯವಾಗ ಕರೋನಾ ಪರೀಕ್ಷೆ ಮಾಡಿಸಬೇಕು ಎಂಬ ಪ್ರಶ್ನೆ ಅನೇಕ ಜನರಲ್ಲಿದೆ. ಒಬ್ಬ ವೈದ್ಯರಾಗಿ ನೀವು ನಿಮ್ಮನ್ನು ಸಂಪೂರ್ಣವಾಗಿ ಕರೋನಾ ರೋಗಿಗಳಿಗೆಂದೇ ಸಮರ್ಪಿಸಿಕೊಂಡಿದ್ದೀರಿ. ಹಾಗಾಗಿ ನಿಮ್ಮ ಮಾತಿನಲ್ಲಿ ಬಹಳ ಶಕ್ತಿಯಿದೆ. ನಾನು ಕೇಳಬಯಸುತ್ತೇನೆ.

ಡಾ. ಭೋರ್ಸೆ: ಸರ್, ಇಲ್ಲಿಯ ಬಿ ಜೆ ಮೆಡಿಕಲ್ ಕಾಲೇಜ್ ಪುಣೆಯಲ್ಲಿ ನಾನು ಫೆÇ್ರಫೆಸರ್ ಆಗಿದ್ದೇನೆ ಮತ್ತು ನಮ್ಮ ಪುಣೆಯಲ್ಲಿ ನಾಯ್ಡು ಆಸ್ಪತ್ರೆ ಹೆಸರಿನಲ್ಲಿ ಪುರಸಭೆ ಆಸ್ಪತ್ರೆಯಿದೆ. ಅಲ್ಲಿ ಜನವರಿ 2020 ರಿಂದಲೇ ಪರಿವೀಕ್ಷಣಾ ಕೇಂದ್ರ ಆರಂಭಗೊಂಡಿದೆ. ಇಲ್ಲಿವರೆಗೆ 16 ಕೋವಿಡ್ – 19 ರ ಪಾಸಿಟಿವ್ ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ. ಈ 16 ಕೋವಿಡ್ – 19 ರ ಪಾಸಿಟಿವ್ ಪ್ರಕರಣಗಳ ರೋಗಿಗಳನ್ನು ನಾವು ಕ್ವಾರೆಂಟೈನ್ ಮಾಡಿ, ಪ್ರತ್ಯೇಕವಾಗಿರಿಸಿ, ಚಿಕಿತ್ಸೆ ನೀಡಿ, 7 ಜನರನ್ನು ಈಗಾಗಲೇ ಡಿಸ್ಚಾರ್ಜ್ ಮಾಡಿದ್ದೀವಿ ಸರ್. ಇನ್ನುಳಿದ 9 ಪ್ರಕರಣಗಳ ರೋಗಿಗಳು ಚೇತರಿಸಿಕೊಳ್ಳುತ್ತಿದ್ದಾರೆ. ವೈರಾಣು ದೇಹದಲ್ಲಿದ್ದರೂ ಅವರು ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಕರೋನಾದಿಂದ ಗುಣಮುಖರಾಗುತ್ತಿದ್ದಾರೆ. ಈಗ ಪ್ರಸ್ತುತ ನೀಡಿದ ಉದಾಹರಣೆ ಪ್ರಮಾಣ ಅಂದರೆ 16 ಪ್ರಕರಣಗಳ ಸಂಖ್ಯೆ ಬಹಳ ಕಡಿಮೆಯಾದದ್ದು ಆದರೆ ಯುವ ಪೀಳಿಗೆಯೂ ಇದಕ್ಕೆ ಬಲಿಯಾಗುತ್ತಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಯುವ ಜನತೆಗೆ ಹರಡುತ್ತಿರುವ ಈ ರೋಗ ಅಂಥ ಗಂಭೀರವಾದದ್ದೇನಲ್ಲ. ಅದು ಬಹಳ ಮೈಲ್ಡ್ ಆಗಿದೆ. ಅವರೆಲ್ಲರೂ ಗುಣಮುಖರಾಗುತ್ತಿದ್ದಾರೆ ಮತ್ತು ಇಲ್ಲಿ ಬಾಕಿ ಇರುವ 9 ಜನರೂ ಗುಣಮುಖರಾಗಲಿದ್ದಾರೆ. ಅವರ ಮೇಲೆ ನಿತ್ಯವೂ ನಿಗಾ ಇಡುತ್ತಿದ್ದೇವೆ. ಮುಂಬರುವ 4-5 ದಿನಗಳಲ್ಲಿ ಅವರು ಸಂಪೂರ್ಣ ಚೇತರಿಸಿಕೊಳ್ಳುವ ಸಂಭವವಿದೆ. ನಮ್ಮಲ್ಲಿ ಸೋಂಕಿನ ಸಂಶಯದಿಂದ ಬರುವವರು ಅಂತರಾಷ್ಟ್ರೀಯ ಪ್ರಯಾಣಿಕರಾಗಿದ್ದಾರೆ. ಸೋಂಕು ತಗುಲಿದವರ ಸ್ವಾಬ್ ಮಾದರಿ ಪಡೆಯುತ್ತಿದ್ದೇವೆ. oropharyngeal ಮತ್ತು nasal ಮಾದರಿಯನ್ನು ಪರೀಕ್ಷೆಗೆ ಪಡೆಯಲಾಗುತ್ತಿದೆ. ಇವರ ಫಲಿತಾಂಶ ಪಾಸಿಟಿವ್ ಬಂದಲ್ಲಿ ಪಾಸಿಟಿವ್ ವಾರ್ಡ್ ಗಳಿಗೆ ದಾಖಲಿಸಲಾಗುತ್ತಿದೆ. ನೆಗೆಟಿವ್ ಫಲಿತಾಂಶ ಬಂದಲ್ಲಿ ಹೋಂ ಕ್ವಾರೆಂಟೈನ್ ಮಾಡಿಕೊಳ್ಳಲು ಸಲಹೆ ನೀಡುತ್ತಿದ್ದೇವೆ. ಜೊತೆಗೆ ಹೋಂ ಕ್ವಾರೆಂಟೈನ್ ಹೇಗೆ ಮಾಡಿಕೊಳ್ಳಬೇಕು, ಮನೆಯಲ್ಲಿ ಏನೇನು ಮಾಡಬೇಕು ಎಂಬ ಸಲಹೆ ನೀಡಿ ಮನೆಗೆ ಕಳುಹಿಸುತ್ತಿದ್ದೇವೆ.

ಮೋದಿಯವರು: ಮನೆಯಲ್ಲಿರಲು ಏನೇನು ಮಾಡಬೇಕೆಂದು ನೀವು ಸಲಹೆ ನೀಡುತ್ತೀರಿ? ತಿಳಿಸಿ

ಡಾ. ಭೋರ್ಸೆ: ಮನೆಯಲ್ಲಿಯೇ ಇರುವುದಾದರೆ ಮನೆಯಲ್ಲೇ ಕ್ವಾರೆಂಟೈನ್ ಮಾಡಿಕೊಳ್ಳಬೇಕಾಗುತ್ತದೆ. ಮೊದಲನೇದಾಗಿ ಕನಿಷ್ಟ 6 ಅಡಿ ಅಂತರ ಕೈಗೊಳ್ಳಬೇಕು. ಎರಡನೇದಾಗಿ ಮಾಸ್ಕ ಬಳಸಿಕೊಳ್ಳಬೇಕು ಮತ್ತು ಪದೇ ಪದೇ ಕೈ ತೊಳೆಯಬೇಕು. ನಿಮ್ಮ ಬಳಿ ಸ್ಯಾನಿಟೈಸರ್ ಇಲ್ಲದಿದ್ದರೆ ಸಾಮಾನ್ಯ ಸಾಬೂನಿನಿಂದಲೇ ಪದೇ ಪದೇ ಕೈತೊಳೆಯಿರಿ. ನಿಮಗೆ ಕೆಮ್ಮು ಬಂದರೆ, ಕರವಸ್ತ್ರ, ಸಾಮಾನ್ಯ ಕರವಸ್ತ್ರವನ್ನೇ ಅಡ್ಡವಾಗಿಟ್ಟು ಕೆಮ್ಮಿರಿ. ಇದರಿಂದ ಡ್ರಾಪ್ ಲೆಟ್ಸ್ ದೂರದವರೆಗೆ ಹರಡುವುದಿಲ್ಲ ಮತ್ತು ಭೂಮಿಯ ಮೇಲೆ ಬೀಳುವುದಿಲ್ಲವಾದ್ದರಿಂದ ಹೆಚ್ಚು ಜನರು ಸ್ಪರ್ಷಿಸುವುದಿಲ್ಲ ಮತ್ತು ಹೆಚ್ಚು ಜನರಿಗೆ ಹರಡುವುದು ಸಾಧ್ಯವಾಗುವುದಿಲ್ಲ ಎಂದು ತಿಳುವಳಿಕೆ ನೀಡುತ್ತಿದ್ದೇವೆ ಸರ್. 2 ನೇ ದಾಗಿ ಅವರು ಮನೆಯಲ್ಲೇ ಕ್ವಾರೆಂಟೈನ್ ಆಗಿರಬೇಕು ಮತ್ತು ಮನೆಯಿಂದ ಹೊರಗೆಲ್ಲೂ ಹೋಗಕೂಡದು ಎಂದು ತಿಳಿಹೇಳುತ್ತಿದ್ದೇವೆ. ಈಗಂತೂ ಲಾಕ್‍ಡೌನ್ ಘೋಷಿಸಲಾಗಿದೆ. ಆದರೂ ಅವರು 14 ದಿನಗಳವರೆಗೆ ಸೂಕ್ತ ರೀತಿಯಲ್ಲಿ ಹೋಂ ಕ್ವಾರೆಂಟೈನ್ ನಲ್ಲಿ ಇರಬೇಕು ಎಂದು ಅವರಿಗೆ ಸೂಚಿಸುತ್ತಿದ್ದೇವೆ, ಸಂದೇಶ ನೀಡುತ್ತಿದ್ದೇವೆ ಸರ್

ಮೋದಿಯವರು: ಸರಿ ಡಾಕ್ಟರ್, ನೀವು ಸಮರ್ಪಣಾಭಾವದಿಂದ ತುಂಬಾ ಒಳ್ಳೆಯ ಸೇವೆ ಮಾಡುತ್ತಿದ್ದೀರಿ. ನಿಮ್ಮ ಸಂಪೂರ್ಣ ತಂಡ ಸೇವೆಯಲ್ಲಿ ತೊಡಗಿರುವುದರಿಂದ ಎಲ್ಲಾ ರೋಗಿಗಳು ಗುಣಮುಖರಾಗಿ ಸುರಕ್ಷಿತವಾಗಿ ಮನೆಗೆ ಹಿಂದಿರುಗುತ್ತಾರೆ ಎಂಬ ವಿಶ್ವಾಸ ನನಗಿದೆ. ನಿಮ್ಮೆಲ್ಲರ ಸಹಕಾರದಿಂದ ದೇಶದಲ್ಲೂ ಈ ಸಮರದಲ್ಲಿ ನಾವು ವಿಜಯಿಯಾಗಲಿದ್ದೇವೆ.

ಡಾ. ಭೋರ್ಸೆ: ಈ ಸಮರವನ್ನು ನಾವು ಜಯಿಸಲಿದ್ದೇವೆ ಎಂಬ ವಿಶ್ವಾಸ ನನಗಿದೆ.

ಮೋದಿಯವರು: ಡಾಕ್ಟರ್ ನಿಮಗೆ ಅನಂತ ಶುಭಹಾರೈಕೆಗಳು. ಧನ್ಯವಾದಗಳು ಡಾಕ್ಟರ್.

ಡಾ. ಭೋರ್ಸೆ: ಧನ್ಯವಾದಗಳು ಸರ್.

 ಸ್ನೇಹಿತರೆ, ನಮ್ಮ ಎಲ್ಲ ಸ್ನೇಹಿತರು ನಿಮ್ಮನ್ನು, ಇಡೀ ದೇಶವನ್ನು ಈ ಸಂಕಷ್ಟದಿಂದ ಪಾರು ಮಾಡುವಲ್ಲಿ ತೊಡಗಿದ್ದಾರೆ. ಇವರು ಹೇಳುವ ಮಾತುಗಳನ್ನು ಕೇಳಿಸಿಕೊಳ್ಳುವುದ್ಷ್ಟೇ ಅಲ್ಲ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ಇಂದು ವೈದ್ಯರ ತ್ಯಾಗ, ತಪಸ್ಸು, ಸಮರ್ಪಣೆಯನ್ನು ನೋಡುತ್ತಿದ್ದರೆ, ಆಚಾರ್ಯ ಚರಕರು ಹೇಳಿದ ಹಲವಾರು ಮಾತುಗಳು ನೆನಪಿಗೆ ಬರುತ್ತಿವೆ. ಆಚಾರ್ಯ ಚರಕರು ವೈದ್ಯರಿಗಾಗಿ ನಿಖರವಾದ ಮಾತನ್ನು ಹೇಳಿದ್ದರು ಮತ್ತು ಇಂದು ನಾವು ಅದನ್ನು ವೈದ್ಯರ ಜೀವನದಲ್ಲಿ ಕಾಣುತ್ತಿದ್ದೇವೆ. ಆಚಾರ್ಯ ಚರಕರು ಹೀಗೆ ಹೇಳಿದ್ದರು.

ನ ಆತ್ಮಾಥರ್ಂ ನ ಅಪಿ ಕಾಮಾಥರ್ಂ ಅತಭೂತ ದಯಾಂ ಪ್ರತಿ

ವತರ್ತೆ ಯತ್ ಚಿಕಿತ್ಸಾಯಾಂ ಸ ಸವರ್ಂ ಇತಿ ವರ್ತತೆ

ಅಂದರೆ ಧನ ಅಥವಾ ವಿಶೇಷ ಬಯಕೆಯಿಂದಲ್ಲ, ಬದಲಾಗಿ ರೋಗಿಯ ಸೇವೆಗಾಗಿ ದಯೆಯ ಭಾವನೆಯಿಂದ ಯಾರು ಕಾರ್ಯನಿರ್ವಹಿಸುತ್ತಾರೋ ಅವರೇ ಸರ್ವಶ್ರೇಷ್ಠ ಚಿಕಿತ್ಸಕರಾಗಿರುತ್ತಾರೆ.

ಮಿತ್ರರೇ, ಮಾನವತೆ ತುಂಬಿಕೊಂಡಿರುವ ಪ್ರತಿಯೊಬ್ಬ ಶುಶ್ರೂಶಕಿಗೂ ನಾನು ಇಂದು ನಮಸ್ಕರಿಸುತ್ತೇನೆ. ನೀವೆಲ್ಲ ಯಾವ ಸೇವಾ ಮನೋಭಾವದಿಂದ ಕೆಲಸ ಮಾದುತ್ತಿರುವಿರೋ ಅದು ಅಸಾಮಾನ್ಯವಾದುದು. ಇದರ ಜೊತೆಗೆ ಇಡೀ ವಿಶ್ವವು 2020 ನೆ ಇಸವಿಯನ್ನು International year of the Nurse and Midwife ಎಂದು ಆಚರಿಸುತ್ತಿದೆ. ಇದರ ಸಂಬಂಧ 200 ವರ್ಷದ ಕೆಳಗೆ 1820 ರಲ್ಲಿ ಜನಿಸಿದ ಫ್ಲಾರೆನ್ಸ್ ನೈಟಿಂಗೇಲ್ ಅವರ ಜೊತೆ ಸೇರಿಕೊಂಡಿದೆ. ಇವರು ಮಾನವ ಸೇವೆಗೆ, ನಸಿರ್ಂಗ್ ಗೆ ಒಂದು ಹೊಸ ಅಸ್ಮಿತೆಯನ್ನು ನೀಡಿದರು. ಒಂದು ಹೊಸ ಎತ್ತರಕ್ಕೆ ತಲುಪಿಸಿದರು. ಜಗತ್ತಿನ ಪ್ರತಿ ಶುಶ್ರೂಷಕಿಯ ಸೇವಾಭಾವನೆಗೆ ಸಮರ್ಪಿತವಾದ ಈ ವರ್ಷ ಇಡೀ ನಸಿರ್ಂಗ್ ಸಮುದಾಯಕ್ಕೆ ಬಹು ದೊಡ್ಡ ಪರೀಕ್ಷೆಯ ಸಮಯವಾಗಿ ಬಂದಿದೆ. ನೀವೆಲ್ಲರೂ ಈ ಪರೀಕ್ಷೆಯಲ್ಲಿ ಸಫಲರಾಗುತ್ತೀರಿ ಮತ್ತು ಅನೇಕ ಜೀವಗಳನ್ನು ಉಳಿಸುತ್ತೀರಿ ಎನ್ನುವ ಭರವಸೆ ನನಗಿದೆ.

ನಿಮ್ಮಂತಹ ಎಲ್ಲ ಸ್ನೇಹಿತರ ಧೈರ್ಯ ಮತ್ತು ಉತ್ಸಾಹದ ಕಾರಣದಿಂದಲೇ ಇಂತಹ ದೊಡ್ಡ ಯುದ್ಧವನ್ನು ನಾವು ಎದುರಿಸುತ್ತಿದ್ದೇವೆ. ನಿಮ್ಮಂತಹ ಜೊತೆಗಾರರು ಅವರು ವೈದ್ಯರಾಗಿರಲಿ, ನರ್ಸ್ ಆಗಿರಲಿ, ಅರೆ ವೈದ್ಯಕೀಯ ಸಹಾಯಕರಾಗಿರಲಿ, ಆಶಾ ಮತ್ತು ಎ ಎನ್ ಎಂ ಕಾರ್ಯಕರ್ತರು, ಪೌರ ಕಾರ್ಮಿಕರಾಗಿರಲಿ, - ನಿಮ್ಮ ಆರೋಗ್ಯದ ಬಗ್ಗೆ ದೇಶಕ್ಕೆ ಬಹಳ ಯೋಚನೆ ಇದೆ. ಇದನ್ನು ಗಮನಿಸಿಯೇ ನೀವು ಈ ಯುದ್ಧದಲ್ಲಿ ಇನ್ನೂ ಹೆಚ್ಚಿನ ಆತ್ಮವಿಶ್ವಾಸದೊಂದಿಗೆ ದೇಶದ ನೇತೃತ್ವ ವಹಿಸಿಕೊಳ್ಳಲಿ ಎನ್ನುವ ಆಶಯದೊಂದಿಗೆ ನಿಮ್ಮಂತಹ ಸುಮಾರು 20 ಲಕ್ಷ ಮಿತ್ರರಿಗೆ 50 ಲಕ್ಷ ರೂಪಾಯಿಗಳವರೆಗೆ ಆರೋಗ್ಯ ವಿಮೆಯನ್ನು ಸರ್ಕಾರ ಘೋಷಿಸಿದೆ. 

ನನ್ನ ಪ್ರೀತಿಯ ದೇಶವಾಸಿಗಳೇ, ಕೊರೊನಾ ವೈರಸ್‍ನ ವಿರುದ್ಧದ ಈ ಯುದ್ಧದಲ್ಲಿ, ಇಂತಹ ಪರಿಸ್ಥಿತಿಯಲ್ಲೂ ಸಹ ಎಲ್ಲರಿಗಿಂತ ಮುಂದೆ ನಿಂತಿರುವ ಸಮಾಜದ ನಿಜವಾದ ಹೀರೋಗಳು ನಮ್ಮ ಸುತ್ತಮುತ್ತಲಿನಲ್ಲೇ ಅನೇಕ ಜನರಿದ್ದಾರೆ. ಬೆಂಗಳೂರಿನ ನಿರಂಜನ್ ಸುಧಾಕರ್ ಹೆಬ್ಬಾಲೆ ಅವರು ಇಂತಹ ಜನರು ನಿಜ ಜೀವನದ ಹೀರೋಗಳುಎಂದು ನನಗೆ Namo App ನಲ್ಲಿ ಬರೆದು ತಿಳಿಸಿದ್ದಾರೆ. ಈ ಮಾತು ನಿಜ ಕೂಡ. ಇವರುಗಳ ಕಾರಣದಿಂದಲೇ ನಮ್ಮ ದಿನನಿತ್ಯದ ಜೀವನ ಬಹಳ ಸುಲಭವಾಗಿ ನಡೆಯುತ್ತಿದೆ. ಒಂದು ದಿನ ನಿಮ್ಮ ಮನೆಯಲ್ಲಿ ನಲ್ಲಿಯಲ್ಲಿ ಬರುತ್ತಿರುವ ನೀರು ನಿಂತು ಹೋದಂತೆ, ನಿಮ್ಮ ಮನೆಯ ವಿದ್ಯುತ್ ಹಠಾತ್ತಾಗಿ ಕಟ್ ಆದಂತೆ  ನೀವು ಒಂದು ಬಾರಿ ಕಲ್ಪನೆ ಮಾಡಿಕೊಳ್ಳಿ. ಅಂತಹ ಸಮಯದಲ್ಲಿ ನಮ್ಮ ಕಷ್ಟಗಳನ್ನು ದೂರ ಮಾಡುವವರು ಈ ನಿಜಜೀವನದ ಹೀರೋಗಳೇ.. ನಿಮ್ಮ ನೆರೆಹೊರೆಯಲ್ಲಿರುವ ಸಣ್ಣ ಕಿರಾಣಿ ಅಂಗಡಿಯ ಬಗ್ಗೆ ಯೋಚಿಸಿ. ಇಂದಿನ ಇಂತಹ ಕಠಿಣ ಪರಿಸ್ಥಿತಿಯಲ್ಲಿ ಆ ಅಂಗಡಿಯವನೂ ಸಹ ಅಪಾಯವನ್ನು ಹೊತ್ತುಕೊಳ್ಳುತ್ತಿದ್ದಾನೆ. ಆದರೆ ಯಾರಿಗಾಗಿ? ನಿಮಗೆ ಅವಶ್ಯಕ ವಸ್ತುಗಳು ಸಿಗುವುದಕ್ಕೆ ಕಷ್ಟವಾಗದಿರಲಿ ಎಂದು ಅಲ್ಲವೇ? ಇದೇ ರೀತಿ ದೇಶದೆಲ್ಲೆಡೆ ಅವಶ್ಯಕ ವಸ್ತುಗಳ supply chain ನಲ್ಲಿ ಯಾವುದೇ ಅಡೆತಡೆ ಬರಬಾರದು ಎಂದು ತಮ್ಮ ಕೆಲಸದಲ್ಲಿ ತೊಡಗಿಕೊಂಡಿರುವ ಆ ಚಾಲಕರು, ಕೆಲಸಗಾರರು ಇವರುಗಳ ಬಗ್ಗೆ ಯೋಚಿಸಿ. ಬ್ಯಾಂಕಿಂಗ್ ಸೇವೆಗಳನ್ನು ಸರ್ಕಾರ ತೆರೆದಿಟ್ಟಿದೆ ಎನ್ನುವುದನ್ನು ನೀವು ನೋಡಿರಬಹುದು. ಬ್ಯಾಂಕಿಂಗ್ ಕ್ಷೇತ್ರದ ನಮ್ಮ ಜನರು ಸಂಪೂರ್ಣ ಉತ್ಸಾಹದಿಂದ, ಪೂರ್ಣ ಮನಸ್ಸಿನಿಂದ ಈ ಯುದ್ಧದ ನೇತೃತ್ವ ವಹಿಸುತ್ತ ಬ್ಯಾಂಕ್‍ಗಳನ್ನು ನಡೆಸುತ್ತಿದ್ದಾರೆ, ನಿಮ್ಮ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಇಂತಹ ಸಮಯದಲ್ಲಿ ಈ ಸೇವೆ ಸಣ್ಣದಲ್ಲ. ಆ ಬ್ಯಾಂಕ್ ಕೆಲಸಗಾರರಿಗೆ ನಾವು ಎಷ್ಟು ಧನ್ಯವಾದ ಹೇಳಿದರೂ ಅದು ಕಡಿಮೆಯೇ. ಬಹಳಷ್ಟು ಜನ ನಮ್ಮ ಸ್ನೇಹಿತರು e-Commerce ನಲ್ಲಿ ತೊಡಗಿಕೊಂಡ ಕಂಪನಿಗಳಲ್ಲಿ delivery personnel ಗಳಾಗಿ ಕೆಲಸ ಮಾಡುತ್ತಿದ್ದಾರೆ. ಇವರೂ ಸಹ ಇಂತಹ ಕಠಿಣ ಪರಿಸ್ಥಿತಿಯಲ್ಲಿ ದಿನಸಿ ಸಾಮಾನುಗಳ delivery ನೀಡುವುದರಲ್ಲಿ ವ್ಯಸ್ತರಾಗಿದ್ದಾರೆ. ಸ್ವಲ್ಪ ಯೋಚಿಸಿ ನೀವು ಲಾಕ್‍ಡೌನ್ ನಮಯದಲ್ಲಿ ಕೂಡ ಟಿವಿ ನೋಡುತ್ತಿದ್ದೀರಿ, ಮನೆಯಲ್ಲಿ ಇದ್ದರೂ ಕೂಡ ಫೆÇೀನ್ ಮತ್ತು ಇಂಟರ್ನೆಟ್ ಉಪಯೋಗಿಸುತ್ತಿದ್ದೀರಿ. ಇವೆಲ್ಲವನ್ನೂ ಸರಿಯಾಗಿ ಇಟ್ಟಿರುವುದಕ್ಕೆ ಬೇರೆ ಯಾರಾದರೂ ತಮ್ಮ ಜೀವನವನ್ನು ಪಣವಾಗಿ ಇಟ್ಟಿದ್ದಾರೆ. ಇಂದಿನ ದಿನಗಳಲ್ಲಿ ನಿಮ್ಮಲ್ಲಿ ಬಹಳಷ್ಟು ಜನ ಡಿಜಿಟಲ್ ಪೇಮೆಂಟ್ ಬಹಳ ಸುಲಭವಾಗಿ ಮಾಡುತ್ತಿದ್ದೀರಿ, ಅದರ ಹಿಂದೆ ಕೂಡ ಬಹಳಷ್ಟು ಜನ ಕೆಲಸ ಮಾಡುತ್ತಿದ್ದಾರೆ. ಲಾಕ್‍ಡೌನ್‍ನ ಈ ಸಮಯದಲ್ಲಿ ಇಂತಹ ಜನರೇ ಇಡೀ ದೇಶದ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ. ಇಂದು ಎಲ್ಲಾ ದೇಶವಾಸಿಗಳ ಪರವಾಗಿ, ನಾನು ಈ ಎಲ್ಲಾ ಜನರಿಗೆ ವಂದನೆಗಳನ್ನು ಹೇಳುತ್ತಿದ್ದೇನೆ. ಹಾಗೆಯೇ, ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಿ, ನಿಮ್ಮ ಬಗ್ಗೆಯೂ ಕಾಳಜಿ ವಹಿಸಿ, ನಿಮ್ಮ ಪರಿವಾರದವರ ಬಗ್ಗೆಯೂ ಕೂಡ ಕಾಳಜಿ ವಹಿಸಿ ಎಂದು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ.

ನನ್ನ ಪ್ರೀತಿಯ ದೇಶವಾಸಿಗಳೇ, ಕೊರೊನಾ ವೈರಸ್ ವಿಷಯದಲ್ಲಿ ಯಾರನ್ನು home quarantine ನಲ್ಲಿ ಇರಲು ಹೇಳಿದ್ದೆವೋ ಅವರ ಜೊತೆ ಕೆಲವರು ತುಂಬಾ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದಾರೆ ಎನ್ನುವ ಕೆಲವು ಘಟನೆಗಳು ನನಗೆ ಗೊತ್ತಾಗಿವೆ. ಇಂತಹ ಮಾತುಗಳನ್ನು ಕೇಳಿ ನನಗೆ ಅತ್ಯಂತ ನೋವಾಗುತ್ತಿದೆ. ಇದು ತುಂಬಾ ದೌರ್ಭಾಗ್ಯಪೂರ್ಣವಾದುದು. ಇಂತಹ ಪರಿಸ್ಥಿತಿಯಲ್ಲಿ ನಾವೆಲ್ಲ ಒಬ್ಬರಿಗೊಬ್ಬರು Social distance ಕಾಪಾಡಿ ಕೊಳ್ಳಬೇಕೇ ಹೊರತು emotional  ಅಥವಾ human distance ಅಲ್ಲ. ಈ ಜನರು ಅಪರಾಧಿಗಳಲ್ಲ, ಆದರೆ ವೈರಸ್ ನಿಂದ ಪೀಡಿತರಾದ ಸಂಭಾವಿತರು. ಈ ಜನರು ಬೇರೆಯವರಿಗೆ ವೈರಸ್ ಹರಡುವುದನ್ನು ತಡೆಯಲು ತಾವೇ ದೂರವಾಗಿದ್ದಾರೆ ಮತ್ತು quarantine ನಲ್ಲಿ ಇದ್ದಾರೆ. ಜನರು ತಮ್ಮ ಈ ಜವಾಬ್ದಾರಿಯನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಇಲ್ಲಿಯವರೆಗೂ ವೈರಸ್ ನ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳದಿದ್ದರೂ ಅವರೆಲ್ಲ ತಮ್ಮನ್ನು ತಾವೇ  quarantine ಮಾಡಿಕೊಂಡಿದ್ದಾರೆ. ಅವರು ಏಕೆ ಹೀಗೆ ಮಾಡಿಕೊಂಡಿದ್ದಾರೆ ಎಂದರೆ ಅವರು ವಿದೇಶದಿಂದ ಹಿಂತಿರುಗಿ ಬಂದಿದ್ದಾರೆ ಮತ್ತು ಎರಡನೆಯದಾಗಿ ಮುನ್ನೆಚ್ಚರಿಕೆ ತೆಗೆದುಕೊಳ್ಳುತ್ತಿದ್ದಾರೆ. ಎಂತಹ ಸಂದರ್ಭದಲ್ಲೂ ಯಾವುದೇ ವ್ಯಕ್ತಿಯೂ ಈ ವೈರಸ್‍ನಿಂದ ಸೋಂಕಿತರಾಗಬಾರದು ಎನ್ನುವುದನ್ನು ಅವರು ಖಾತ್ರಿ ಮಾಡಿಕೊಳ್ಳಲು ಬಯಸುತ್ತಾರೆ. ಆದ್ದರಿಂದ ಸ್ವತಃ ಈ ಜನರು ಇಷ್ಟೊಂದು ಜವಾಬ್ದಾರಿ ತೋರಿಸುತ್ತಿದ್ದಾಗ ಅವರ ಜೊತೆ ಕೆಟ್ಟದ್ದಾಗಿ ವ್ಯವಹರಿಸುವುದು ಯಾವುದೇ ರೀತಿಯ ಸಮರ್ಥನೆಗೂ ಯೋಗ್ಯವಾದುದಲ್ಲ. ಬದಲಾಗಿ ಅವರ ಜೊತೆ ಸಹಾನುಭೂತಿಯಿಂದ ಕೈಜೋಡಿಸುವ ಅವಶ್ಯಕತೆ ಇದೆ.

ಕೊರೊನಾ ವೈರಸ್ ವಿರುದ್ಧ ಹೋರಾಡುವ ಎಲ್ಲಕ್ಕಿಂತ ಸುಲಭ ವಿಧಾನ Social distancing ಆಗಿದೆ, ಆದರೆ Social distancing ನ ಅರ್ಥ social interaction ಸಂಪೂರ್ಣವಾಗಿ ನಿಲ್ಲಿಸುವುದು ಎನ್ನುವುದಲ್ಲ ಎಂದು ನಾವು ತಿಳಿದುಕೊಳ್ಳಬೇಕಿದೆ. ವಾಸ್ತವದಲ್ಲಿ ಇದು ನಮ್ಮ ಎಲ್ಲಾ ಹಳೆಯ ಸಾಮಾಜಿಕ ಸಂಬಂಧಗಳಿಗೆ ಹೊಸ ಜೀವ ತುಂಬುವ ಸಮಯವಾಗಿದೆ, ಆ ಸಂಬಂಧಗಳನ್ನು ಹೊಚ್ಚ ಹೊಸದಾಗಿ ಮಾಡುವುದಾಗಿದೆ. ಒಂದು ರೀತಿಯಲ್ಲಿ ಈ ಸಮಯವು Social distancing ಹೆಚ್ಚಿಸಿ ಮತ್ತು emotional distance ಕಡಿಮೆ ಮಾಡಿಎನ್ನುವುದನ್ನು ಸಹಾ ಹೇಳುತ್ತಿದೆ. ನಾನು ಮತ್ತೆ ಹೇಳುತ್ತಿದ್ದೇನೆ -  Social distancing ಹೆಚ್ಚಿಸಿ ಮತ್ತು emotional distance ಕಡಿಮೆ ಮಾಡಿ”.

ಕೋಟಾದಿಂದ ಯಶ್‍ವರ್ಧನ್ ಹಾಗೂ ಮೇಘ್ ಅವರು Namo app ನಲ್ಲಿ ನಾವು ಲಾಕ್‍ಡೌನ್ ಸಮಯದಲ್ಲಿ family bonding ಗಟ್ಟಿ ಮಾಡಿಕೊಳ್ಳುತ್ತಿದ್ದೇವೆ,” ಎಂದು ಬರೆದಿದ್ದಾರೆ. ಮಕ್ಕಳ ಜೊತೆ board games ಮತ್ತು ಕ್ರಿಕೆಟ್ ಆಡುತ್ತಿದ್ದಾರೆ, ಅಡುಗೆಮನೆಯಲ್ಲಿ ಹೊಸ ಹೊಸ ಅಡುಗೆಗಳನ್ನು ಮಾಡುತ್ತಿದ್ದಾರೆ. ಜಬಲ್ಪುರದ ನಿರುಪಮಾ ಅವರು Namo App ಏನು ಬರೆದಿದ್ದಾರೆ ಎಂದರೆ ಅವರಿಗೆ ಮೊದಲ ಬಾರಿಗೆ ರಜಾಯಿ ತಯಾರಿಸುವ ಅವರ ಹವ್ಯಾಸವನ್ನು ಪೂರ್ಣಗೊಳಿಸಿಕೊಳ್ಳುವ ಅವಕಾಶ ಸಿಕ್ಕಿದೆಯಂತೆ,  ಇದರ ಜೊತೆಗೆ ತೋಟಗಾರಿಕೆಯ ಹವ್ಯಾಸವನ್ನೂ ಪೂರ್ಣಗೊಳಿಸಿಕೊಳ್ಳುತ್ತಿದ್ದಾರಂತೆ. ಹಾಗೆಯೇ ರಾಯಪುರದ ಪರೀಕ್ಷಿತ್, ಗುರುಗ್ರಾಮದ ಆರ್ಯಮನ್ ಮತ್ತು ಝಾಖರ್ಂಡ್ ನ ಸೂರಜ್ ಇವರುಗಳ ಪೊಸ್ಟ್ ಗಳೂ ಓದುವುದಕ್ಕೆ ಸಿಕ್ಕಿದವು. ಇದರಲ್ಲಿ ಅವರುಗಳು ಶಾಲೆಯ ಸ್ನೇಹಿತರ e-reunion ಮಾಡುವ ಚರ್ಚೆ ಮಾಡಿದ್ದಾರೆ. ಇವರ ಈ ಐಡಿಯಾ ಬಹಳ ರೋಚಕವಾಗಿದೆ. ನಿಮಗೂ ಸಹ ದಶಕಗಳಿಂದ ನಿಮ್ಮ ಶಾಲಾ ಕಾಲೇಜುಗಳ ಸ್ನೇಹಿತರೊಂದಿಗೆ ಮಾತನಾಡುವ ಅವಕಾಶ ಸಿಕ್ಕಿಲ್ಲದೆ ಇರಬಹುದು. ನೀವೂ ಸಹ ಈ ಮಾರ್ಗವನ್ನು ಅನುಸರಿಸಿ ನೋಡಿ. ಭುವನೇಶ್ವರದ ಪ್ರತ್ಯೂಶ್ ಮತ್ತು ಕೊಲ್ಕತ್ತಾದ ವಸುಧಾ ಅವರು ಈ ದಿನಗಳಲ್ಲಿ ಇವತ್ತಿನವರೆಗೂ ಓದಲು ಸಾಧ್ಯವಾಗದ ಪುಸ್ತಕಗಳನ್ನು ಓದುತ್ತಿದ್ದೇವೆ ಎಂದು ಹೇಳಿದ್ದಾರೆ. ಕೆಲವರು ವರ್ಷಗಳಿಂದ ಮನೆಯಲ್ಲಿ ಇಟ್ಟಿರುವ ತಬಲಾ, ವೀಣೆ ಮುಂತಾದ ಸಂಗೀತ ವಾದ್ಯಗಳನ್ನು ಹೊರತೆಗೆದು ಅಭ್ಯಾಸ ಮಾಡಲು ತೊಡಗಿದ್ದಾರೆ, ಇದನ್ನು ನಾನು ಸಾಮಾಜಿಕ ಮಾಧ್ಯಮಗಳಲ್ಲಿ ನೋಡಿದ್ದೇನೆ. ನೀವೂ ಸಹ ಹೀಗೆಯೇ ಮಾಡಬಹುದು. ಇದರಿಂದ ನಿಮಗೆ ಸಂಗೀತದ ಆನಂದ ಸಿಗುವುದರ ಜೊತೆಗೆ ಹಳೆಯ ನೆನಪುಗಳು ಕೂಡ ಹೊಸದಾಗಿ ಹೊರಹೊಮ್ಮುತ್ತದೆ. ಅಂದರೆ, ಕಷ್ಟದ ಈ ಸಮಯದಲ್ಲಿ ಬಹಳ ಕಷ್ಟದಿಂದ ನಿಮಗೆ ಇಂತಹ ಒಂದು ಕ್ಷಣ ಸಿಗುತ್ತಿದೆ, ಇದರಿಂದ ಬರೀ ನಿಮ್ಮೊಂದಿಗೆ ನೀವು ಬೆಸೆದುಕೊಳ್ಳುವ ಅವಕಾಶ, ನೀವು ನಿಮ್ಮ ಉತ್ಕಟಾಪೇಕ್ಷೆಯೊಂದಿಗೆ ಕೂಡ ಬೆಸೆದುಕೊಳ್ಳುತ್ತೀರಿ. ನಿಮಗೆ ನಿಮ್ಮ ಹಳೆಯ ಸ್ನೇಹಿತರು ಮತ್ತು ಪರಿವಾರದವರ ಜೊತೆಗೆ ಸೇರಿಕೊಳ್ಳುವ ಸಂಪೂರ್ಣ ಅವಕಾಶ ಸಿಗುತ್ತದೆ.

ನಮೋ ಆಪ್ ನಲ್ಲಿ ರೂರ್ಕಿ ಯಿಂದ ಶಶಿ ಅವರು ಲಾಕ್‍ಡೌನ್ ಸಮಯದಲ್ಲಿ ನಾನು ನನ್ನ ಫಿಟ್ನೆಸ್ ಗಾಗಿ ಏನು ಮಾಡುತ್ತೇನೆ? ಈ ಪರಿಸ್ಥಿತಿಯಲ್ಲಿ ನವರಾತ್ರಿಯ ಉಪವಾಸ ಹೇಗೆ ಮಾಡುತ್ತೇನೆ?” ಎಂದು ಕೇಳಿದ್ದಾರೆ.  ನಾನು ನಿಮಗೆ ಮತ್ತೊಮ್ಮೆ ಹೇಳುತ್ತಿದ್ದೇನೆ ನಾನು ನಿಮಗೆ ಹೊರಗೆ ಬರುವುದಕ್ಕೆ ಅನುಮತಿ ನೀಡಿಲ್ಲ, ಆದರೆ ನಿಮಗೆ ನಿಮ್ಮೊಳಗೆ ಇಣುಕಿ ನೋಡಿಕೊಳ್ಳುವುದಕ್ಕೆ ಅವಕಾಶ ಕೂಡ ಮಾಡಿಕೊಟ್ಟಿದ್ದೇನೆ. ಹೊರಗೆ ಬರಬೇಡಿ, ಆದರೆ ನಿಮ್ಮೊಳಗೆ ನೀವು ಪ್ರವೇಶಿಸಿ, ನಿಮ್ಮನ್ನು ನೀವು ಅರ್ಥ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸಿ. ಇನ್ನು ನವರಾತ್ರಿಯ ಉತ್ಸವದ ವಿಷಯಕ್ಕೆ ಬಂದರೆ ಇದು ನನ್ನ ಶಕ್ತಿ ಮತ್ತು ಭಕ್ತಿಯ ನಡುವಿನ ವಿಷಯ. ಇನ್ನು ಫಿಟ್ನೆಸ್ ವಿಷಯಕ್ಕೆ ಬಂದರೆ ಮಾತು ಉದ್ದವಾಗುತ್ತದೆ ಎಂದು ನನಗನ್ನಿಸುತ್ತದೆ ನಾನು ಹೀಗೆ ಮಾಡುತ್ತೇನೆ - ನಾನು ಏನು ಮಾಡುತ್ತೇನೆ ಎನ್ನುವ ವಿಷಯದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ವೀಡಿಯೊಗಳನ್ನು ಹಾಕುತ್ತೇನೆ.  Namo App ನಲ್ಲಿ ನೀವು ಆ ವೀಡಿಯೊಗಳನ್ನು ಅವಶ್ಯಕವಾಗಿ ನೋಡಬಹುದು. ನಾನೇನು ಮಾಡುತ್ತೇನೆ ಎನ್ನುವುದರಲ್ಲಿ ಕೆಲವು ವಿಷಯಗಳು ಬಹುಶಃ ನಿಮಗೆ ಉಪಯೋಗವಾಗಬಹುದು, ಆದರೆ ನಾನು ಫಿಟ್ನೆಸ್ ಎಕ್ಸ್ಪರ್ಟ್ ಅಲ್ಲ ಅಥವಾ ನಾನು ಯೋಗ ಗುರು ಅಲ್ಲ, ಕೇವಲ ಒಬ್ಬ ಅಭ್ಯಾಸಿ ಎನ್ನುವ ಒಂದು ಮಾತನ್ನು ಮಾತ್ರ ನೀವು ತಿಳಿದುಕೊಳ್ಳಿ.  ಯೋಗದ ಕೆಲವು ಆಸನಗಳಿಂದ ನನಗೆ ಬಹಳ ಲಾಭವಾಗಿದೆ ಎನ್ನುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಲಾಕ್‍ಡೌನ್ ದೆಸೆಯಿಂದ ನಿಮಗೂ ಸಹ ಈ ಮಾತುಗಳು ಸ್ವಲ್ಪ ಉಪಯೋಗಕ್ಕೆ ಬರಬಹುದು.

ಮಿತ್ರರೇ, ಕೊರೊನಾದ ವಿರುದ್ಧದ ಈ ಯುದ್ಧ ಅಭೂತಪೂರ್ವವಾದುದು ಮತ್ತು ಸವಾಲಿನದು. ಆದ್ದರಿಂದ ಇದರ ಸಲುವಾಗಿ ತೆಗೆದುಕೊಳ್ಳುವ ನಿರ್ಧಾರಗಳು ಕೂಡ ಹೇಗಿವೆ ಎಂದರೆ ಜಗತ್ತಿನ ಇತಿಹಾಸದಲ್ಲೇ ಎಂದಿಗೂ ನೋಡುವುದಕ್ಕೂ, ಕೇಳುವುದಕ್ಕೂ ಸಿಕ್ಕಿರುವುದಿಲ್ಲ, ಹಾಗಿವೆ. ಕೊರೊನಾವನ್ನು ತಡೆಗಟ್ಟುವ ಸಲುವಾಗಿ ಸಮಸ್ತ ಭಾರತೀಯರು ತೆಗೆದುಕೊಂಡಿರುವ, ಈಗ ನಾವು ಏನು ಪ್ರಯತ್ನಿಸುತ್ತಿದ್ದೇವೆ ಆ ಹೆಜ್ಜೆ ಅದೇ ಭಾರತಕ್ಕೆ ಕೊರೊನಾ ಮಹಾಮಾರಿಯ ವಿರುಧ್ಧ ಜಯ ತಂದುಕೊಡುತ್ತದೆ. ಪ್ರತಿಯೊಬ್ಬ ಭಾರತೀಯನ ಸಂಯಮ ಮತ್ತು ಸಂಕಲ್ಪ ಕೂಡ ನಮ್ಮನ್ನು ಕಡುಕಷ್ಟದ ಸ್ಥಿತಿಯಿಂದ ಹೊರಗೆ ತರುತ್ತದೆ. ಜೊತೆಜೊತೆಗೆ ಬಡವರಿಗಾಗಿ ನಮ್ಮ ಸಂವೇದನೆ ಇನ್ನಷ್ಟು ಹೆಚ್ಚಾಗಬೇಕು. ಎಲ್ಲಿಯಾದರೂ ಯಾರಾದರೂ ಬಡವ ದುಃಖದಿಂದ, ಹೊಟ್ಟೆ ಹಸಿವಿನಿಂದ ಕಾಣಸಿಕ್ಕರೆ ಇಂತಹ ಸಂಕಷ್ಟದ ಸಮಯದಲ್ಲಿ ಮೊದಲು ನಾವು ಅವರ ಹೊಟ್ಟೆ ತುಂಬಿಸೋಣ, ಅವನ ಅವಶ್ಯಕತೆಗಳ ಬಗ್ಗೆ ಯೋಚಿಸೋಣ, ನಮ್ಮ ಮಾನವೀಯತೆಯ ಗಮ್ಯ ಇದರಲ್ಲಿದೆ. ಇದನ್ನು ಹಿಂದುಸ್ತಾನವು ಮಾಡಬಹುದು, ಮಾಡುತ್ತದೆ. ಇದು ನಮ್ಮ ಸಂಸ್ಕಾರ, ಇದು ನಮ್ಮ ಸಂಸ್ಕೃತಿ.

ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ಪ್ರತಿಯೊಬ್ಬ ಭಾರತೀಯನೂ ತಮ್ಮ ಜೀವನದ ರಕ್ಷಣೆಗಾಗಿ ಮನೆಯಲ್ಲಿ ಬಂದಿಯಾಗಿದ್ದಾನೆ, ಆದರೆ ಮುಂಬರುವ ಸಮಯದಲ್ಲಿ ಇದೇ ಭಾರತೀಯರು ತಮ್ಮ ದೇಶದ ಅಭಿವೃದ್ಧಿಗಾಗಿ ಎಲ್ಲಾ ಅಡೆತಡೆಗಳನ್ನೂ ದಾಟಿ ಮುಂದೆ ನಡೆದರೆ ದೇಶವನ್ನು ಮುಂದೆ ತೆಗೆದುಕೊಂಡು ಹೋಗುತ್ತೀರಿ. ನೀವು ನಿಮ್ಮ ಕುಟುಂಬದವರೊಂದಿಗೆ ಮನೆಯಲ್ಲೇ ಇರಿ, ಸುರಕ್ಷಿತವಾಗಿ ಮತ್ತು ಸಮಾಧಾನದಿಂದ ಇರಿ, ನಾವು ಈ ಯುದ್ಧವನ್ನು ಗೆಲ್ಲಬೇಕಿದೆ, ಖಂಡಿತವಾಗಿಯೂ ಗೆಲ್ಲುತ್ತೇವೆ. ಅನಂತಾನಂತ ಧನ್ಯವಾದಗಳು. ಮನದ ಮಾತಿಗಾಗಿ ಮತ್ತೆ ಮುಂದಿನ ತಿಂಗಳು ಭೇಟಿಯಾಗೋಣ ಮತ್ತು ಅಲ್ಲಿಯವರೆಗೆ ಈ ಸಂಕಟವನ್ನು ಹೊಡೆದೋಡಿಸಲು ನಾವು ಸಫಲರಾಗಿರುತ್ತೇವೆ ಎನ್ನುವ ಒಂದು ಯೋಚನೆಯೊಂದಿಗೆ, ಈ ಒಂದು ಆಶಾವಾದದೊಂದಿಗೆ ನಿಮಗೆಲ್ಲಾ ಅನಂತಾನಂತ ಧನ್ಯವಾದಗಳು.       

 

****



(Release ID: 1609115) Visitor Counter : 435