ರಕ್ಷಣಾ ಸಚಿವಾಲಯ

COVID-19 ಸವಾಲಿಗೆ ಸಜ್ಜಾಗಿರುವ ಕಂಟೋನ್ಮೆಂಟ್ ಮಂಡಳಿಗಳು

Posted On: 27 MAR 2020 3:20PM by PIB Bengaluru

COVID-19 ಸವಾಲಿಗೆ ಸಜ್ಜಾಗಿರುವ ಕಂಟೋನ್ಮೆಂಟ್ ಮಂಡಳಿಗಳು


ದೇಶಾದ್ಯಂತ ಅಂದರೆ 19 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶದಲ್ಲಿ ವ್ಯಾಪಿಸಿರುವ 68 ಕಂಟೋನ್ಮೆಂಟ್‌ ಮಂಡಳಿಗಳು ಹಾಗೂ ಅಂದಾಜು 21 ಲಕ್ಷ (ಮಿಲಿಟರಿ ಮತ್ತು ನಾಗರೀಕರು ಸೇರಿದಂತೆ) ಜನರು ಕೊರೊನಾವೈರಸ್‌ (COVID-19) ಸವಾಲನ್ನು ಎದುರಿಸಲು ಸಜ್ಜಾಗಿದ್ದಾರೆ. ಯಾವುದೇ ಸಾಧ್ಯತೆ ಎದುರಾದರೂ ಆಸ್ಪತ್ರೆಗಳು / ಆರೋಗ್ಯ ಕೇಂದ್ರಗಳು ಮತ್ತು ಅತಿಥಿ ಗೃಹಗಳಲ್ಲಿನ ಹಾಸಿಗೆಗಳನ್ನು ಗುರುತಿಸಲು ಎಲ್ಲ ಕಂಟೋನ್ಮೆಂಟ್ ಮಂಡಳಿಗಳಿಗೆ ಸೂಚಿಸಲಾಗಿದೆ. 
ಕಂಟೋನ್ಮೆಂಟ್ ಮಂಡಳಿಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಆಯಾ ಪ್ರದೇಶಗಳಲ್ಲಿನ ನಾಗರಿಕ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತಾರೆ ಹಾಗೂ ಅಗತ್ಯವಿದ್ದಾಗ ಅವಶ್ಯ ನೆರವು ನೀಡುತ್ತಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನೀಡಿರುವ ಎಲ್ಲ ಸಲಹೆಗಳನ್ನು ಎಲ್ಲ ಕಂಟೋನ್‌ಮೆಂಟ್‌ ಮಂಡಳಿಗಳು ಕಟ್ಟುನಿಟ್ಟಾಗಿ ಪಾಲಿಸುತ್ತಿವೆ.
ಎಲ್ಲಾ ಕಂಟೋನ್ಮೆಂಟ್ ಕಚೇರಿಯ ಕಟ್ಟಡ, ವಸತಿ ಪ್ರದೇಶ, ಶಾಲಾ ಆವರಣ, ಗ್ರಂಥಾಲಯ, ಉದ್ಯಾನವನ ಮತ್ತು ಮಾರುಕಟ್ಟೆಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಲಾಗುತ್ತಿದೆ. ಎಲ್ಲ ಪ್ರಮುಖ ಸ್ಥಳಗಳು, ಕಚೇರಿಗಳು ಮತ್ತು ಕಂಟೋನ್ಮೆಂಟ್‌ಗಳಲ್ಲಿ ಮಾರುಕಟ್ಟೆ ಪ್ರದೇಶಗಳಲ್ಲಿ ಪ್ರದರ್ಶಿಸಲಾಗಿರುವ ಧ್ವನಿವರ್ಧಕಗಳು, ತಿಳಿವಳಿಕೆ ಸೂಚನೆಗಳು, ಹೋರ್ಡಿಂಗ್‌ಗಳು / ಕರಪತ್ರಗಳು ಸೇರಿದಂತೆ ಸಾರ್ವಜನಿಕ ಪ್ರಕಟಣೆಗಳ ಮೂಲಕ ಅಲ್ಲಿನ ನಿವಾಸಿಗಳು COVID-19 ಬಗ್ಗೆ ಪ್ರಜ್ಞೆಯನ್ನು ಹೊಂದಿದ್ದಾರೆ. ವೈದ್ಯಕೀಯ ಅಧಿಕಾರಿಗಳು ಅಗತ್ಯ ಸೇವೆಗಳೊಂದಿಗೆ ವ್ಯವಹರಿಸುವ ಎಲ್ಲ ಸಿಬ್ಬಂದಿಗಳಿಗೆ ಕಾರ್ಯಾಗಾರಗಳನ್ನು ಆಯೋಜಿಸುತ್ತಿದ್ದಾರೆ.  COVID-19 ಹರಡುವುದನ್ನು ತಪ್ಪಿಸಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳನ್ನು ಪ್ರದರ್ಶಿಸುತ್ತಿದ್ದು, ಏಕಕಾಲದಲ್ಲಿ ಯಾವುದೇ ತುರ್ತು ಪರಿಸ್ಥಿತಿ ಎದುರಾದರೂ ಪರಿಸ್ಥಿತಿಯನ್ನು ನಿಭಾಯಿಸಲು ಕಂಟೋನ್ಮೆಂಟ್ ಜನರಲ್ ಆಸ್ಪತ್ರೆ (ಸಿಜಿಹೆಚ್) ಅನ್ನು ಸಿದ್ಧಪಡಿಸುತ್ತಿದ್ದಾರೆ. ರಕ್ಷಣಾ ಎಸ್ಟೇಟ್‌ನ ಮಹಾನಿರ್ದೇಶಕರ (ಡಿಜಿಡಿಇ) ನಿರ್ದೇಶನದಡಿ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಲಾಗಿದೆ. ಅಗತ್ಯವಿರುವ ವೈದ್ಯಕೀಯ ನೆರವು ನೀಡಲು ಎಲ್ಲಾ ಸಿಜಿಎಚ್‌ಗಳು ಪೂರ್ತಿ ಸಮಯ ಕಾರ್ಯನಿರ್ವಹಿಸುತ್ತಿವೆ.
ಕಂಟೋನ್ಮೆಂಟ್‌ ಮಂಡಳಿಗೆಳು ತನ್ನ ಎಲ್ಲ ಸಿಬ್ಬಂದಿಗೆ ಮುಖಗವುಸು, ಕೈಗವುಸು, ಸ್ಯಾನಿಟೈಜರ್ ಬಾಟಲಿಗಳನ್ನು ಒದಗಿಸುತ್ತಿವೆ. ಕಂಟೋನ್ಮೆಂಟ್ ಪ್ರದೇಶಗಳಲ್ಲಿನ ಎಲ್ಲ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಸಲಹೆಯನ್ನು ಕಟ್ಟುನಿಟ್ಟಾಗಿ ಅನುಸರಿಸಲು ನಿರ್ದೇಶಿಸಲಾಗಿದೆ.
ಅಗತ್ಯ ಸರಕು, ಆಹಾರ ಪದಾರ್ಥಗಳು ಸೇರಿದಂತೆ ಇತ್ಯಾದಿಗಳ ಸರಬರಾಜನ್ನು ಖಚಿತಪಡಿಸಿಕೊಳ್ಳಲು ಕಚೇರಿ ಸಿಬ್ಬಂದಿಯನ್ನು ಒಳಗೊಂಡ ಕಾರ್ಯಪಡೆಗಳನ್ನು ಸ್ಥಾಪಿಸಲಾಗಿದೆ. ವಿಶೇಷವಾಗಿ ಕಂಟೋನ್ಮೆಂಟ್‌ ಪ್ರದೇಶಗಳಲ್ಲಿ ವಾಸಿಸುವ ಬಡ ಜನರ ಬಗ್ಗೆ ವಿಶೇಷ ಕಾಳಜಿ ವಹಿಸಲಾಗಿದೆ. ಎಲ್ಲ ದಿನಸಿ / ಕಿರಾಣಿ ಮಳಿಗೆಗಳು ಕಾಳಸಂತೆ, ಹೆಚ್ಚು ಜನರು ಸೇರುವುದನ್ನು ತಪ್ಪಿಸುವುದು ಮತ್ತು ಲಾಕ್‌ಡೌನ್ ಮಾರ್ಗಸೂಚಿಗಳನ್ನು ಅನುಸರಿಸುವುದರ ಬಗ್ಗೆ ವಿಶೇಷ ನಿಗಾ ವಹಿಸಲಾಗಿದೆ.  ಕಂಟೋನ್ಮೆಂಟ್‌ ಮಂಡಳಿಗಳು ನಿರಂತರ ನೀರು ಸರಬರಾಜು ವ್ಯವಸ್ಥೆಗಳ ಜತೆಗೆ ಬೀದಿ ದೀಪ ಸೇವೆಗಳನ್ನೂ ಖಾತ್ರಿಪಡಿಸುತ್ತಿವೆ. ಕಂಟೋನ್ಮೆಂಟ್‌ನ ಹೆಚ್ಚಿನ ಭಾಗಗಳಲ್ಲಿ ನಿವಾಸಿಗಳಿಗೆ ಅನುಕೂಲವಾಗಲೆಂದು ಸಹಾಯವಾಣಿ ಸಂಖ್ಯೆಯನ್ನು ಆರಂಭಿಸಲಾಗಿದೆ.
ಕಂಟೋನ್ಮೆಂಟ್‌ ಪ್ರದೇಶಗಳ ಒಟ್ಟಾರೆ ಪುರಸಭೆಯ ಆಡಳಿತವು ಪ್ರಜಾಪ್ರಭುತ್ವ ಸಂಸ್ಥೆಗಳಾದ ಕಂಟೋನ್ಮೆಂಟ್ ಮಂಡಳಿಗಳಡಿ ಬರುತ್ತದೆ. ಕಂಟೋನ್ಮೆಂಟ್ ಪ್ರದೇಶಗಳ ಈ ವಿಶಿಷ್ಟ ರಚನೆಯನ್ನು ಯಶಸ್ವಿಯಾಗಿ ನಿರ್ವಹಿಸಲಾಗುತ್ತಿದೆ. ಕಂಟೋನ್ಮೆಂಟ್ ಪ್ರದೇಶಗಳು ಮುಖ್ಯವಾಗಿ ಮಿಲಿಟರಿ ಜನಸಂಖ್ಯೆ ಮತ್ತು ಅವುಗಳ ಸ್ಥಾಪನೆಗಳಿಗೆ ಅನುಗುಣವಾಗಿರುತ್ತವೆ. ಕಂಟೋನ್ಮೆಂಟ್‌ಗಳು ಮಿಲಿಟರಿ ಕೇಂದ್ರಗಳಿಗಿಂತ ಭಿನ್ನವಾಗಿದ್ದು, ಇದರಲ್ಲಿ ಮಿಲಿಟರಿ ಕೇಂದ್ರಗಳು ಸಶಸ್ತ್ರ ಪಡೆಗಳ ಬಳಕೆ ಮತ್ತು ವಸತಿ ಉದ್ದೇಶದಿಂದ ಮಾತ್ರ ಸ್ಥಾಪನೆಯಾಗಿವೆ. ಇವುಗಳನ್ನು ಕಾರ್ಯನಿರ್ವಾಹಕ ಆದೇಶದಡಿ ಸ್ಥಾಪಿಸಲಾಗಿದೆ. ಕಂಟೋನ್ಮೆಂಟ್‌ಗಳು ಮಿಲಿಟರಿ ಮತ್ತು ನಾಗರಿಕ ಜನಸಂಖ್ಯೆಯನ್ನು ಒಳಗೊಂಡಿರುವ ಪ್ರದೇಶಗಳಾಗಿವೆ.

 



(Release ID: 1608572) Visitor Counter : 149