ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ನೊವೆಲ್ ಕೊರೊನಾವೈರಸ್ (COVID 19) ಕುರಿತ ಮತ್ತಷ್ಟು ಸಿದ್ಧತೆಗಳು ಮತ್ತು ಕೈಗೊಂಡ ಕ್ರಮಗಳನ್ನು ಪರಿಶೀಲಿಸಿದ ಡಾ. ಹರ್ಷವರ್ಧನ್
Posted On:
18 MAR 2020 3:24PM by PIB Bengaluru
ನೊವೆಲ್ ಕೊರೊನಾವೈರಸ್ (COVID 19) ಕುರಿತ ಮತ್ತಷ್ಟು ಸಿದ್ಧತೆಗಳು ಮತ್ತು ಕೈಗೊಂಡ ಕ್ರಮಗಳನ್ನು ಪರಿಶೀಲಿಸಿದ ಡಾ. ಹರ್ಷವರ್ಧನ್
"ನಿರ್ಬಂಧಿಸಿದ (ಕ್ವಾರಂಟೈನ್) ಸೌಲಭ್ಯಗಳ ಅವಲೋಕನ ಮತ್ತು ಮೇಲ್ವಿಚಾರಣೆಗಾಗಿ ಮೀಸಲಾದ ತಂಡಗಳು ನಿಯಮಿತವಾಗಿ ಭೇಟಿ ನೀಡಲಿವೆ"
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ಅವರು ಇಂದು ಸಚಿವಾಲಯದ ಹಿರಿಯ ಅಧಿಕಾರಿಗಳು, ಕೇಂದ್ರ ಸರ್ಕಾರಿ ಆಸ್ಪತ್ರೆಗಳಾದ ಸಫ್ದುರ್ಜಂಗ್, ಡಾ.ಆರ್.ಎಂ.ಎಲ್ ಮತ್ತು ಏಮ್ಸ್ ನಿರ್ದೇಶಕರೊಂದಿಗೆ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿದರು.
ಸಭೆಯ ಆರಂಭದಲ್ಲಿ, ಕೇಂದ್ರ ಆರೋಗ್ಯ ಸಚಿವರು ಕೇಂದ್ರ ಮಟ್ಟದಲ್ಲಿ ವಿವಿಧ ಸಚಿವಾಲಯಗಳು, ರಾಜ್ಯಗಳು ಮತ್ತು ವಿದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿಗಳೊಂದಿಗೆ ನಿಕಟ ಸಮನ್ವಯದಿಂದ ಕೈಗೊಳ್ಳುತ್ತಿರುವ ವಿವಿಧ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಕ್ರಿಯ ಕಣ್ಗಾವಲು, ಪರಿಣಾಮಕಾರಿ ಸಂಪರ್ಕ ಪತ್ತೆಹಚ್ಚುವಿಕೆ ಮತ್ತು COVID-19 ನಿಗ್ರಹಿಸಲು ಮತ್ತು ನಿರ್ವಹಿಸಲು ಕೈಗೊಂಡಿರುವ ಸಿದ್ಧತೆಗಾಗಿ ಅವರು ರಾಜ್ಯಗಳನ್ನು ಶ್ಲಾಘಿಸಿದರು.
ಆಸ್ಪತ್ರೆಯ ನಿರ್ವಹಣೆಗೆ ಸಂಬಂಧಿಸಿದ ಹೊರ ರೋಗಿ ವಿಭಾಗಗಳು, ಪರೀಕ್ಷಾ ಕಿಟ್‌ಗಳ ಲಭ್ಯತೆ, ವೈಯಕ್ತಿಕ ರಕ್ಷಣಾ ಸಾಧನಗಳು (ಪಿಪಿಇ), ಔಷಧಿಗಳು ಮತ್ತು ಸಾಕಷ್ಟು ಪ್ರತ್ಯೇಕ (ಐಸೋಲೇಷನ್) ವಾರ್ಡ್‌ಗಳ ಸಿದ್ಧತೆಯ ಬಗ್ಗೆ ಅವರು ಪರಿಶೀಲಿಸಿದರು. ಎಲ್ಲಾ ಆರೋಗ್ಯ ಕಾರ್ಯಕರ್ತರಿಗೆ ರಕ್ಷಣಾ ಸಾಧನಗಳ ಸಮರ್ಪಕ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವಂತೆ ಅವರು ಆಸ್ಪತ್ರೆಗಳಿಗೆ ನಿರ್ದೇಶನ ನೀಡಿದರು. ಭವಿಷ್ಯದ ಯಾವುದೇ ಬೇಡಿಕೆಯನ್ನು ಎದುರಿಸಲು ಸಂಗ್ರಹವನ್ನು ನಿರ್ವಹಿಸುವುದರ ಜೊತೆಗೆ ಬೇಡಿಕೆಯ ಪ್ರಕಾರ ಗೊತ್ತುಪಡಿಸಿದ ಸ್ಥಳಗಳಿಗೆ ಸಾಕಷ್ಟು ಪ್ರಮಾಣದ ವೈಯಕ್ತಿಕ ರಕ್ಷಣಾ ಉಪಕರಣಗಳು (ಪಿಪಿಇ), ಮುಖಗವಸುಗಳು, ಸ್ಯಾನಿಟೈಜರ್‌ಗಳು, ಹ್ಯಾಂಡ್ಹೆಲ್ಡ್ ಥರ್ಮಾಮೀಟರ್ ಇತ್ಯಾದಿಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಸಚಿವರಿಗೆ ಮಾಹಿತಿ ನೀಡಲಾಯಿತು.
ವಿಮಾನ ನಿಲ್ದಾಣಗಳು ಹಾಗೂ ಇತರ ಪ್ರಮುಖ ಸಾರಿಗೆ ಕೇಂದ್ರಗಳಲ್ಲಿ, ಪ್ರಯಾಣಿಕರನ್ನು ಬೇರ್ಪಡಿಸುವುದು, ನಿರ್ಬಂಧಿಸಿದ ಸೌಲಭ್ಯಗಳಿಗೆ ಅವರನ್ನು ಸಾಗಿಸುವುದು, ಆರೋಗ್ಯ ತಪಾಸಣೆ ಇತ್ಯಾದಿ ಸೌಲಭ್ಯಗಳನ್ನು ಡಾ.ಹರ್ಷವರ್ಧನ್ ಸವಿವರವಾಗಿ ಪರಿಶೀಲಿಸಿದರು. ಅಗತ್ಯ ಸೌಕರ್ಯಗಳು ಮತ್ತು ಸೌಲಭ್ಯಗಳನ್ನು ಒದಗಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ನಿರ್ಬಂಧಿತ ಸೌಲಭ್ಯಗಳಿಗೆ ನಿಯಮಿತವಾಗಿ ಭೇಟಿ ನೀಡಿ ಪರಿಶೀಲನೆ ಮತ್ತು ಮೇಲ್ವಿಚಾರಣೆ ಮಾಡಲು ತಂಡಗಳನ್ನು ನಿಯೋಜಿಸುವಂತೆ ಆರೋಗ್ಯ ಸಚಿವರು ನಿರ್ದೇಶನ ನೀಡಿದರು. ಅವುಗಳನ್ನು ಸುಧಾರಿಸುವ ಉದ್ದೇಶದಿಂದ ತಾವು ಪ್ರತಿದಿನವೂ ಇದೇ ರೀತಿ ಪರಿಶೀಲನೆ ನಡೆಸುವುದಾಗಿ ಸಚಿವರು ಹೇಳಿದರು. ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಪರಿಸ್ಥಿತಿಯನ್ನು ಪರಿಶೀಲಿಸುತ್ತಿರುವುದಾಗಿ ಅವರು ಹೇಳಿದರು.
ಬಿಕ್ಕಟ್ಟಿನ ನಿರ್ವಹಣೆಯಲ್ಲಿ ಪರಿಣಾಮಕಾರಿ ಸಂವಹನದ ನಿರ್ಣಾಯಕ ಮಹತ್ವವನ್ನು ಒತ್ತಿ ಹೇಳಿದ ಡಾ. ಹರ್ಷವರ್ಧನ್ ಅವರು, ತಡೆಗಟ್ಟುವ ಕ್ರಮಗಳು, ಮಿಥ್ಯೆಗಳ ಬಗ್ಗೆ ಅರಿವು ಮೂಡಿಸುವುದು, ಮಾರ್ಗಸೂಚಿಗಳು, ಸಲಹೆಗಳು, ಪರೀಕ್ಷಾ ಪ್ರಯೋಗಾಲಯಗಳಂತಹ ಮಾಹಿತಿಯೊಂದಿಗೆ ಜನಸಾಮಾನ್ಯರನ್ನು ಸಜ್ಜುಗೊಳಿಸುವುದು ಮುಂತಾದ ಅಂಶಗಳನ್ನು ಕೇಂದ್ರೀಕರಿಸುವ ಬಹು-ಮಾಧ್ಯಮ ಸಂವಹನ ಅಭಿಯಾನಗಳನ್ನು ನಡೆಸುವಂತೆ ಸಲಹೆ ನೀಡಿದರು.
***
(Release ID: 1606938)
Visitor Counter : 155
Read this release in:
Bengali
,
English
,
Urdu
,
Hindi
,
Marathi
,
Assamese
,
Punjabi
,
Gujarati
,
Odia
,
Tamil
,
Telugu