ಪ್ರಧಾನ ಮಂತ್ರಿಯವರ ಕಛೇರಿ

COVID-19 ನಿಯಂತ್ರಣಕ್ಕೆ ಸಾರ್ಕ್ ನಾಯಕರೊಂದಿಗೆ ಪ್ರಧಾನಿ ಮಾತುಕತೆ ತುರ್ತು ನಿಧಿ ಸ್ಥಾಪನೆಗೆ ಪ್ರಧಾನಿ ಪ್ರಸ್ತಾಪ

Posted On: 15 MAR 2020 6:58PM by PIB Bengaluru

ಸಾರ್ಕ್ ರಾಷ್ಟ್ರಗಳಾದ್ಯಂತ COVID-19 ಅನ್ನು ಎದುರಿಸಲು ಒಂದು ಸಾಮಾನ್ಯ ಕಾರ್ಯತಂತ್ರವನ್ನು ರೂಪಿಸುವ ಬಗ್ಗೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಸಾರ್ಕ್ ರಾಷ್ಟ್ರಗಳ ಮುಖಂಡರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದರು.

ಇತಿಹಾಸದ ಪಾಲು - ಸಾಮೂಹಿಕ ಭವಿಷ್ಯ

ಅಲ್ಪ ಸಮಯದ ಸೂಚನೆಯಲ್ಲಿಯೇ ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿದ ನಾಯಕರಿಗೆ ಪ್ರಧಾನಿ ಧನ್ಯವಾದ ಅರ್ಪಿಸಿದರು. ಪ್ರಾಚೀನ ಜನರ- ಜನರ ನಡುವಿನ ಸಂಬಂಧಗಳು ಮತ್ತು ಸಾರ್ಕ್ ದೇಶಗಳ ಸಮಾಜಗಳ ಪರಸ್ಪರ ಸಂಬಂಧವನ್ನು ಒತ್ತಿಹೇಳಿದ ಅವರು, ಸವಾಲನ್ನು ಎದುರಿಸಲು ರಾಷ್ಟ್ರಗಳು ಒಟ್ಟಾಗಿ ಸಿದ್ಧತೆ ನಡೆಸುವುದು ಕಡ್ಡಾಯವಾಗಿದೆ ಎಂದು ಹೇಳಿದರು.

ಭವಿಷ್ಯದ ಹಾದಿ

ಸಹಯೋಗ ಮನೋಭಾವದಲ್ಲಿ, ಪ್ರಧಾನಿ ಮೋದಿ ಅವರು ಎಲ್ಲಾ ದೇಶಗಳ ಸ್ವಯಂಪ್ರೇರಿತ ಕೊಡುಗೆಗಳ ಆಧಾರದ ಮೇಲೆ COVID-19 ತುರ್ತು ನಿಧಿಯನ್ನು ರಚಿಸುವಂತೆ ಪ್ರಸ್ತಾಪಿಸಿದರು. ಭಾರತವು ಆರಂಭದಲ್ಲಿ ಈ ನಿಧಿಗೆ 10 ಮಿಲಿಯನ್ ಅಮೆರಿಕನ್ ಡಾಲರ್ ನೀಡುವುದಾಗಿ ಹೇಳಿದರು. ತಕ್ಷಣದ ಕ್ರಮಗಳ ವೆಚ್ಚವನ್ನು ಭರಿಸಲು ಯಾವುದೇ ಸದಸ್ಯ ರಾಷ್ಟ್ರಗಳು ಈ ನಿಧಿಯನ್ನು ಬಳಸಬಹುದು. ಅಗತ್ಯವಿದ್ದಲ್ಲಿ, ದೇಶಗಳ ನೆರವಿಗಾಗಿ ಕಳುಹಿಸಲು ಪರೀಕ್ಷಾ ಕಿಟ್‌ಗಳು ಮತ್ತು ಇತರ ಸಲಕರಣೆಗಳೊಂದಿಗೆ ಭಾರತವು ವೈದ್ಯರು ಮತ್ತು ತಜ್ಞರ ಕ್ಷಿಪ್ರ ಪ್ರತಿಕ್ರಿಯೆ ತಂಡವನ್ನು ರೂಪಿಸುತ್ತಿರುವುದಾಗಿ ಅವರು ಮಾಹಿತಿ ನೀಡಿದರು.

ನೆರೆಯ ರಾಷ್ಟ್ರಗಳ ತುರ್ತು ಪ್ರತಿಕ್ರಿಯೆ ತಂಡಗಳಿಗೆ ಆನ್‌ಲೈನ್ ತರಬೇತಿ ವ್ಯವಸ್ಥೆ ಮಾಡಲು ಮತ್ತು ಸಂಭವನೀಯ ವೈರಸ್ ವಾಹಕಗಳನ್ನು ಮತ್ತು ಅವರು ಸಂಪರ್ಕಿಸಿದ ಜನರನ್ನು ಪತ್ತೆಹಚ್ಚಲು ನೆರವಾಗಲು ಭಾರತದ ಸಮಗ್ರ ರೋಗ ಕಣ್ಗಾವಲು ಪೋರ್ಟಲ್‌ನ ಸಾಫ್ಟ್‌ವೇರ್ ಹಂಚಿಕೊಳ್ಳುವುದಾಗಿ ಪ್ರಧಾನಿ ತಿಳಿಸಿದರು. ಪರಸ್ಪರರ ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು ಸಾರ್ಕ್ ವಿಪತ್ತು ನಿರ್ವಹಣಾ ಕೇಂದ್ರದಂತಹ ಅಸ್ತಿತ್ವದಲ್ಲಿರುವ ಕಾರ್ಯವಿಧಾನಗಳನ್ನು ಬಳಸಿಕೊಳ್ಳಬಹುದು ಎಂದು ಅವರು ಸಲಹೆ ನೀಡಿದರು.

ದಕ್ಷಿಣ ಏಷ್ಯಾ ಪ್ರದೇಶದ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸುವ ಸಂಶೋಧನೆಗಳ ಹೊಂದಾಣಿಕೆಗಾಗಿ ಸಾಮಾನ್ಯ ಸಂಶೋಧನಾ ವೇದಿಕೆಯನ್ನು ರಚಿಸುವಂತೆ ಅವರು ಸಲಹೆ ನೀಡಿದರು. COVID-19 ರ ದೀರ್ಘಕಾಲೀನ ಆರ್ಥಿಕ ಪರಿಣಾಮಗಳ ಬಗ್ಗೆ ಮತ್ತು ಆಂತರಿಕ ವ್ಯಾಪಾರ ಮತ್ತು ಸ್ಥಳೀಯ ಮೌಲ್ಯ ಸರಪಳಿಗಳನ್ನು ಅದರ ಪ್ರಭಾವದಿಂದ ರಕ್ಷಿಸುವ ಬಗ್ಗೆ ತಜ್ಞರಿಂದ ಮತ್ತಷ್ಟು ಅಧ್ಯಯನಕ್ಕೆ ಅವರು ಸೂಚಿಸಿದರು.

ಒಟ್ಟಾಗಿ ಹೋರಾಡುವ ಸಂಕಲ್ಪವನ್ನು ಪುನರುಚ್ಚರಿಸಿದ ಪ್ರಧಾನಿಯವರು, ಸಾರ್ಕ್ ರಾಷ್ಟ್ರಗಳ ನೆರೆಹೊರೆಯ ಸಹಯೋಗವು ಜಗತ್ತಿಗೆ ಮಾದರಿಯಾಗಬೇಕು ಎಂದು ಹೇಳಿದರು. ಉದ್ದೇಶಿತ ಉಪಕ್ರಮಗಳಿಗಾಗಿ ನಾಯಕರು ಪ್ರಧಾನಿಯವರಿಗೆ ಧನ್ಯವಾದ ಅರ್ಪಿಸಿದರು.

ಅನುಭವವನ್ನು ಹಂಚಿಕೊಳ್ಳುವುದು

"ಸಿದ್ಧರಾಗಿ, ಆದರೆ ಭಯಪಡಬೇಡಿ" ಇದು ಭಾರತದ ಮಾರ್ಗದರ್ಶಿ ಮಂತ್ರ ಎಂದು ಪ್ರಧಾನಿ ಹೇಳಿದರು. ಶ್ರೇಣೀಕೃತ ಪ್ರತಿಕ್ರಿಯೆ ಯಾಂತ್ರಿಕ ವ್ಯವಸ್ಥೆ, ದೇಶಕ್ಕೆ ಪ್ರವೇಶಿಸುವವರನ್ನು ಪರೀಕ್ಷಿಸುವುದು, ಟಿವಿ, ಮುದ್ರಣ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಸಾರ್ವಜನಿಕ ಜಾಗೃತಿ ಅಭಿಯಾನಗಳು, ದುರ್ಬಲ ವರ್ಗಗಳನ್ನು ತಲುಪಲು ವಿಶೇಷ ಪ್ರಯತ್ನಗಳು, ರೋಗನಿರ್ಣಯದ ಸೌಲಭ್ಯಗಳನ್ನು ಹೆಚ್ಚಿಸುವುದು ಮತ್ತು ಸಾಂಕ್ರಾಮಿಕ ರೋಗವನ್ನು ನಿರ್ವಹಿಸುವ ಪ್ರತಿಯೊಂದು ಹಂತದಲ್ಲೂ ಪ್ರೋಟೋಕಾಲ್‌ಗಳನ್ನು ಅಭಿವೃದ್ಧಿಪಡಿಸುವುದೂ ಸೇರಿದಂತೆ ಹಲವಾರು ಪೂರ್ವಭಾವಿ ಕ್ರಮಗಳ ಬಗ್ಗೆ ಅವರು ತಿಳಿಸಿದರು.

ಭಾರತವು ಸುಮಾರು 1400 ಭಾರತೀಯರನ್ನು ವಿವಿಧ ದೇಶಗಳಿಂದ ಯಶಸ್ವಿಯಾಗಿ ಸ್ಥಳಾಂತರಿಸಿದೆ . ಇದಲ್ಲದೆ ‘ನೆರೆಹೊರೆಯವರು ಮೊದಲು ನೀತಿಗೆ’ ಅನುಗುಣವಾಗಿ ನೆರೆಯ ರಾಷ್ಟ್ರಗಳ ಕೆಲವು ನಾಗರಿಕರನ್ನೂ ಸ್ಥಳಾಂತರಿಸಿದೆ ಎಂದು ಅವರು ಹೇಳಿದರು.

ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಅವರು ಮಾತನಾಡಿ, ಅಫ್ಘಾನಿಸ್ತಾನದ ಬಹುದೊಡ್ಡ ದುರ್ಬಲತೆಯೆಂದರೆ ಇರಾನ್‌ನೊಂದಿಗಿನ ಗಡಿ ಮುಕ್ತವಾಗಿರುವುದು ಎಂದರು. ಮಾಡೆಲಿಂಗ್ ಪ್ರಸರಣ ಮಾದರಿಗಳು, ಟೆಲಿಮೆಡಿಸಿನ್‌ಗಾಗಿ ಸಾಮಾನ್ಯ ಚೌಕಟ್ಟನ್ನು ರೂಪಿಸುವುದು ಮತ್ತು ನೆರೆಯ ರಾಷ್ಟ್ರಗಳಲ್ಲಿ ಹೆಚ್ಚಿನ ಸಹಕಾರವನ್ನು ಅವರು ಪ್ರಸ್ತಾಪಿಸಿದರು.

COVID-19 ಪ್ರಕರಣಗಳನ್ನು ನಿಭಾಯಿಸಲು ವೈದ್ಯಕೀಯ ನೆರವು ನೀಡಿದ್ದಕ್ಕಾಗಿ ಮತ್ತು ಒಂಬತ್ತು ಮಂದಿ ಮಾಲ್ಡೀವ್ಸ್ ಪ್ರಜೆಗಳನ್ನು ವುಹಾನ್‌ನಿಂದ ಸ್ಥಳಾಂತರಿಸಿದ್ದಕ್ಕಾಗಿ ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೊಲಿಹ್ ಭಾರತ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು. COVID-19 ದೇಶದ ಪ್ರವಾಸೋದ್ಯಮ ಮತ್ತು ಆರ್ಥಿಕತೆಯ ಮೇಲೆ ಬೀರಿರುವ ಪ್ರಭಾವವನ್ನು ಅವರು ಎತ್ತಿ ತೋರಿಸಿದರು. ದೇಶಗಳ ಆರೋಗ್ಯ ತುರ್ತು ಏಜೆನ್ಸಿಗಳ ನಡುವೆ ನಿಕಟ ಸಹಕಾರ, ಆರ್ಥಿಕ ಪರಿಹಾರ ಪ್ಯಾಕೇಜ್ ರೂಪಿಸುವುದು ಮತ್ತು ಈ ಪ್ರದೇಶಕ್ಕೆ ದೀರ್ಘಾವಧಿಯ ಚೇತರಿಕೆ ಯೋಜನೆಯನ್ನು ಅವರು ಪ್ರಸ್ತಾಪಿಸಿದರು.

ಕಷ್ಟದ ಸಮಯದಲ್ಲಿ ಆರ್ಥಿಕ ಏರಿಳಿತಕ್ಕೆ ಸಹಾಯ ಮಾಡಲು ಸಾರ್ಕ್ ನಾಯಕರು ಒಟ್ಟಾಗಿ ಕೆಲಸ ಮಾಡಬೇಕು ಎಂದು ಶ್ರೀಲಂಕಾ ಅಧ್ಯಕ್ಷ ಗೋಟಬಯಾ ರಾಜಪಕ್ಸೆ ಶಿಫಾರಸು ಮಾಡಿದರು. COVID-19 ಅನ್ನು ಎದುರಿಸಲು ಉತ್ತಮ ಅಭ್ಯಾಸಗಳನ್ನು ಪರಸ್ಪರ ಹಂಚಿಕೊಳ್ಳಲು ಮತ್ತು ಪ್ರಾದೇಶಿಕ ವಿಷಯಗಳ ಹೊಂದಾಣಿಕೆಗಾಗಿ ಸಾರ್ಕ್ ಸಚಿವಾಲಯ ಮಟ್ಟದ ತಂಡವನ್ನುಸ್ಥಾಪಿಸಲು ಅವರು ಶಿಫಾರಸು ಮಾಡಿದರು.

ವುಹಾನ್‌ನಲ್ಲಿ ದಿಗ್ಬಂಧನದಲ್ಲಿದ್ದ ಭಾರತೀಯ ವಿದ್ಯಾರ್ಥಿಗಳೊಂದಿಗೆ 23 ಬಾಂಗ್ಲಾದೇಶಿ ವಿದ್ಯಾರ್ಥಿಗಳನ್ನು ವಾಪಸ್ ಕರೆತಂದ ಪ್ರಧಾನಿ ಮೋದಿಯವರಿಗೆ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಧನ್ಯವಾದ ಅರ್ಪಿಸಿದರು. ಆರೋಗ್ಯ ಸಚಿವರು ಮತ್ತು ಈ ಪ್ರದೇಶದ ಕಾರ್ಯದರ್ಶಿಗಳ ನಡುವೆ ವಿಡಿಯೋ ಕಾನ್ಫರೆನ್ಸ್ ಮೂಲಕ ತಾಂತ್ರಿಕ ಮಟ್ಟದಲ್ಲಿ ಸಂವಾದವನ್ನು ಮುಂದುವರಿಸಲು ಅವರು ಪ್ರಸ್ತಾಪಿಸಿದರು.

COVID-19 ಎದುರಿಸಲು ನೇಪಾಳ ಕೈಗೊಂಡ ಕ್ರಮಗಳ ಬಗ್ಗೆ ಅಲ್ಲಿನ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಸಾರ್ಕ್ ಮುಖಂಡರಿಗೆ ತಿಳಿಸಿದರು. ಎಲ್ಲಾ ಸಾರ್ಕ್ ರಾಷ್ಟ್ರಗಳ ಸಾಮೂಹಿಕ ವಿವೇಕ ಮತ್ತು ಪ್ರಯತ್ನಗಳು ಸಾಂಕ್ರಾಮಿಕ ರೋಗವನ್ನು ಎದುರಿಸಲು ದೃಢವಾದ ಮತ್ತು ಪರಿಣಾಮಕಾರಿ ಕಾರ್ಯತಂತ್ರವನ್ನು ರೂಪಿಸಲು ಸಹಾಯ ಮಾಡುತ್ತವೆ ಎಂದು ಅವರು ಹೇಳಿದರು.

ಸಾಂಕ್ರಾಮಿಕ ರೋಗವು ಭೌಗೋಳಿಕ ಗಡಿಗಳನ್ನು ನೋಡುವುದಿಲ್ಲ. ಆದ್ದರಿಂದ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡುವುದು ಬೇರಾವುದಕ್ಕಿಂತಲೂ ಮುಖ್ಯವಾಗಿದೆ ಎಂದು ಭೂತಾನ್ ಪ್ರಧಾನಿ ಡಾ. ಲೋಟೇ ತ್ಸೆರಿಂಗ್ ಹೇಳಿದರು. COVID-19 ರ ಆರ್ಥಿಕ ಪರಿಣಾಮದ ಬಗ್ಗೆ ಮಾತನಾಡಿದ ಅವರು, ಸಾಂಕ್ರಾಮಿಕ ರೋಗವು ಸಣ್ಣ ಮತ್ತು ದುರ್ಬಲ ಆರ್ಥಿಕತೆಗಳ ಮೇಲೆ ಭಾರೀ ಪರಿಣಾಮ ಬೀರುತ್ತದೆ ಎಂದರು.

ನೈಜ ಸಮಯದಲ್ಲಿ ಆರೋಗ್ಯ ಮಾಹಿತಿ, ದತ್ತಾಂಶ ವಿನಿಮಯ ಮತ್ತು ಸಮನ್ವಯಕ್ಕಾಗಿ ರಾಷ್ಟ್ರೀಯ ಅಧಿಕಾರಿಗಳ ಕಾರ್ಯನಿರತ ಗುಂಪನ್ನು ಸ್ಥಾಪಿಸಲು ಸಾರ್ಕ್ ಸಚಿವಾಲಯವನ್ನು ಕಡ್ಡಾಯಗೊಳಿಸಬೇಕು ಎಂದು ಪಾಕಿಸ್ತಾನದ ಡಾ. ಜಾಫರ್ ಮಿರ್ಜಾ ಪ್ರಸ್ತಾಪಿಸಿದರು. ರೋಗದ ಕಣ್ಗಾವಲು ಡೇಟಾವನ್ನು ನೈಜ ಸಮಯದಲ್ಲಿ ಹಂಚಿಕೊಳ್ಳಲು ಸಾರ್ಕ್ ಆರೋಗ್ಯ ಸಚಿವರ ಸಮಾವೇಶ ಮತ್ತು ಪ್ರಾದೇಶಿಕ ಕಾರ್ಯವಿಧಾನಗಳ ಅಭಿವೃದ್ಧಿಯನ್ನು ಅವರು ಪ್ರಸ್ತಾಪಿಸಿದರು.



(Release ID: 1606688) Visitor Counter : 261