ರಾಷ್ಟ್ರಪತಿಗಳ ಕಾರ್ಯಾಲಯ

ಗಣರಾಜ್ಯ ದಿನ 2020ರ ಮುನ್ನಾದಿನ ಭಾರತದ ಗೌರವಾನ್ವಿತ ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿಂದ್ ಅವರ ಭಾಷಣ

Posted On: 25 JAN 2020 7:39PM by PIB Bengaluru

ಗಣರಾಜ್ಯ ದಿನ 2020 ಮುನ್ನಾದಿನ ಭಾರತದ ಗೌರವಾನ್ವಿತ ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿಂದ್ ಅವರ ಭಾಷಣ

 

ಪ್ರೀತಿಯ ದೇಶವಾಸಿಗಳೇ,

1. ನಮ್ಮ 71ನೇ ಗಣರಾಜ್ಯ ದಿನದ ಮುನ್ನಾದಿನ ಭಾರತ ಮತ್ತು ವಿದೇಶಗಳಲ್ಲಿ ನೆಲೆಸಿರುವ ನಿಮ್ಮೆಲ್ಲರಿಗೂ ನನ್ನ ಆತ್ಮೀಯ ಅಭಿನಂದನೆಗಳು.

2. ಏಳು ದಶಕಗಳ ಹಿಂದೆ ಇದೇ ಜನವರಿ 26ರಂದು ನಮ್ಮ ಸಂವಿಧಾನ ಅನುಷ್ಠಾನಕ್ಕೆ ಬಂತು. ಅದಕ್ಕೂ ಹಿಂದೆಯೇ ದಿನಾಂಕ ವಿಶೇಷ ಪ್ರಾಮುಖ್ಯತೆಯನ್ನು ಗಳಿಸಿತ್ತು. ಸಂಪೂರ್ಣ ಸ್ವರಾಜ್ಯ ಗಳಿಸಲು ದೃಢ ಸಂಕಲ್ಪ ಮಾಡಿದ್ದ ನಮ್ಮ ರಾಷ್ಟ್ರ 1930ರಿಂದ 1947ರವರೆಗೂ ಪ್ರತಿ ವರ್ಷ ಜನವರಿ 26ರಂದು ಸಂಪೂರ್ಣ ಸ್ವರಾಜ್ಯ ದಿನವನ್ನಾಗಿ ಆಚರಿಸುತ್ತಿತ್ತು. ಹೀಗಾಗಿಯೇ ನಾವು ನಮ್ಮ ಸಂವಿಧಾನದ ತತ್ವಗಳಿಗೆ ಅನುಗುಣವಾಗಿ 1950 ಜನವರಿ 26ರಂದು ಗಣರಾಜ್ಯದ ಪ್ರಜೆಗಳಾಗಿ ನಮ್ಮ ಪಯಣವನ್ನು ಆರಂಭಿಸಿದೆವು. ಅಂದಿನಿಂದ ಪ್ರತಿ ವರ್ಷ ನಾವು ಜನವರಿ 26ರಂದು ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಾ ಬಂದಿದ್ದೇವೆ.

3. ಆಧುನಿಕ ದೇಶದ ಆಡಳಿತ ವ್ಯವಸ್ಥೆ ಮೂರು ಅಂಗಗಳನ್ನು ಒಳಗೊಂಡಿದೆ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಹಾಗೂ ಇವು ಮೂರೂ ಪರಸ್ಪರ ಸಂಪರ್ಕಿತವಾಗಿವೆ ಮತ್ತು ಪರಸ್ಪರ ಅವಲಂಬಿತವಾಗಿವೆ. ವಾಸ್ತವವಾಗಿ ಜನರಿಂದಲೇ ರಾಷ್ಟ್ರದ ನಿರ್ಮಾಣವಾಗುತ್ತಿದೆ. ದೇಶದ ಜನರಾದ ನಾವು, ಗಣರಾಜ್ಯದ ಸಂಚಾಲಕರಾಗಿದ್ದೇವೆ. ಭಾರತದ ಪ್ರಜೆಗಳಾದ ನಮ್ಮಲ್ಲಿ ನಮ್ಮ ಸಮೂಹಿಕ ಭವಿಷ್ಯವನ್ನು ನಿರ್ಧರಿಸುವ ನಿಜವಾದ ಅಧಿಕಾರ ಅಡಗಿದೆ.

4. ನಮ್ಮ ಸಂವಿಧಾನ ಒಂದು ಸ್ವತಂತ್ರ ಪ್ರಜಾಪ್ರಭುತ್ವ, ದೇಶದ ಪ್ರಜೆಗಳಾದ ನಮಗೆ ಕೆಲವು ಹಕ್ಕುಗಳನ್ನು ಪ್ರದಾನ ಮಾಡಿದೆ ಅದೇ ರೀತಿ ನಮ್ಮ ಪ್ರಜಾಪ್ರಭುತ್ವದ ಪ್ರಧಾನ ತತ್ವಗಳಾದ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವಗಳಿಗೆ ಸದಾ ನಿಷ್ಠೆಯಿಂದ ಇರಬೇಕಾದ ಹೊಣೆಗಾರಿಕೆಯನ್ನೂ ವಹಿಸಿದೆ. ರಾಷ್ಟ್ರಪಿತ ಗಾಂಧೀಜಿಯವರ ಜೀವನ ಮತ್ತು ಆದರ್ಶಗಳನ್ನು ನಾವು ಗಮನದಲ್ಲಿಟ್ಟುಕೊಂಡರೆ, ಸಾಂವಿಧಾನಿಕ ಆದರ್ಶಗಳನ್ನು ಆಚರಿಸುವುದು ನಮಗೆ ಹೆಚ್ಚು ಸುಲಭವಾಗುತ್ತದೆ. ರೀತಿ ಮಾಡುವುದರಿಂದ ನಾವು ಆಚರಿಸಲಿರುವ ಗಾಂಧೀಜಿಯವರ 150ನೇ ಜನ್ಮ ಜಯಂತಿಗೆ ಒಂದು ಅರ್ಥಪೂರ್ಣ ಆಯಾಮವನ್ನು ನಾವು ನೀಡಿದಂತೆ ಆಗುತ್ತದೆ.

ಪ್ರೀತಿಯ ದೇಶವಾಸಿಗಳೇ,

5. ಸರ್ಕಾರ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಆರಂಭಿಸಿದೆ, ಇವುಗಳಲ್ಲಿ ವಿಶೇಷ ಗಮನಾರ್ಹ ಅಂಶವೆಂದರೆ, ಪ್ರಜೆಗಳು ಕಾರ್ಯಕ್ರಮಗಳನ್ನು ಸ್ವಪ್ರೇರಣೆಯಿಂದ ಜನಪ್ರಿಯ ಜನಾಂದೋಲನವನ್ನಾಗಿ ಮಾಡಿದ್ದಾರೆ. ಸ್ವಚ್ಛ ಭಾರತ ಅಭಿಯಾನ ಅಲ್ಪಾವಧಿಯಲ್ಲಿಯೇ ಅತ್ಯದ್ಭುತ ಯಶಸ್ಸು ಸಾಧಿಸಿದೆ. ಇದೇ ಉತ್ಸಾಹವನ್ನು ಇತರ ಕಾರ್ಯಕ್ರಮಗಳಲ್ಲೂ ನಾವು ಕಾಣಬಹುದಾಗಿದೆ. ಅಡುಗೆ ಅನಿಲ ಇಂಧನದ ಸಬ್ಸಿಡಿಯನ್ನು ಬಿಟ್ಟುಕೊಡುವ ಮೂಲಕ ಅಥವಾ ಡಿಜಿಟಲ್ ಪಾವತಿಗಳಿಗೆ ಒತ್ತು ನೀಡುವ ಮೂಲಕ ಜನಸಾಮಾನ್ಯರು ಸರ್ಕಾರಿ ಕಾರ್ಯಕ್ರಮಗಳನ್ನು ತಮ್ಮದೇ ಕಾರ್ಯಕ್ರಮಗಳನ್ನಾಗಿ ಪರಿವರ್ತಿಸಿ, ಅವುಗಳನ್ನು ನಿಜವಾಗಿ ಪರಿಣಾಮಕಾರಿಯಾಗಿ ಮಾಡಿದ್ದಾರೆ. 8 ಕೋಟಿ ಫಲಾನುಭವಿಗಳ ಗುರಿಯನ್ನು ಹೊಂದಿದ್ದ ಪ್ರಧಾನಮಂತ್ರಿ ಉಜ್ವಲ ಯೋಜನೆ ಗುರಿಯನ್ನು ಸಾಧಿಸಿದ್ದು, ಯೋಜನೆಯ ಯಶಸ್ಸು ಹೆಮ್ಮೆಯ ಸಂಗತಿಯಾಗಿದೆ. ಯೋಜನೆಯಿಂದ ಸ್ವಚ್ಛ ಇಂಧನದ ಅಗತ್ಯ ಇರುವವರಿಗೆ ಸೌಲಭ್ಯ ದೊರೆಯುವಂತಾಗಿದೆ. ‘ಸೌಭಾಗ್ಯ ಎಂಬ ಹೆಸರಿನಪ್ರಧಾನಮಂತ್ರಿ ಸಹಜ ವಿದ್ಯುತ್ ಪ್ರತಿ ಮನೆಗೆ’ ಯೋಜನೆಯು ಸಹ ಜನರ ಜೀವನವನ್ನು ಬೆಳಗಿಸಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 14 ಕೋಟಿಗೂ ಹೆಚ್ಚು ರೈತ ಕುಟುಂಬಗಳು ಆರು ಸಾವಿರ ರೂಪಾಯಿಗಳ ನಿಶ್ಚಿತ ವಾರ್ಷಿಕ ವರಮಾನ ಪಡೆಯಲು ಅರ್ಹರಾಗಿದ್ದಾರೆ. ಇದರಿಂದ ನಮಗೆ ಅನ್ನ ಕೊಡುವ ರೈತರು ಗೌರವದ ಜೀವನ ನಡೆಸುವುದು ಸಾಧ್ಯವಾಗಿದೆ.

6. ಹೆಚ್ಚುತ್ತಿರುವ ನೀರಿನ ಸಂಕಷ್ಟಗಳ ಸವಾಲನ್ನು ಪರಿಣಾಮಕಾರಿಯಾಗಿ ಎದುರಿಸಲು ಜಲಶಕ್ತಿ ಸಚಿವಾಲಯವನ್ನು ಸ್ಥಾಪಿಸಲಾಗಿದೆ. ಜಲ ಸಂರಕ್ಷಣೆ ಮತ್ತು ಜಲ ನಿರ್ವಹಣೆಗೆ ಉನ್ನತ ಆದ್ಯತೆ ನೀಡಲಾಗುತ್ತಿದೆ. ‘ಸ್ವಚ್ಛ ಭಾರತ ಅಭಿಯಾನದಂತೆಜಲ ಜೀವನ ಅಭಿಯಾನ ಸಹ ಜನಪ್ರಿಯ ಚಳವಳಿಯ ಸ್ವರೂಪವನ್ನು ಪಡೆಯುತ್ತದೆ ಎಂಬ ವಿಶ್ವಾಸ ನನಗಿದೆ.

7. ಅತಿ ಹೆಚ್ಚು ಅಗತ್ಯವಿರುವ ಜನರ ಕಲ್ಯಾಣದ ಗುರಿಯ ಜೊತೆಗೆ ಸರ್ಕಾರ ಕೈಗೊಳ್ಳುವ ಪ್ರತಿಯೊಂದು ನೀತಿಯೂ ದೇಶ ಮೊದಲು ಎಂಬ ತತ್ವದ ಮಾರ್ಗದರ್ಶನವನ್ನು ಅನುಸರಿಸುತ್ತದೆ. ಸರಕು ಮತ್ತು ಸೇವಾ ತೆರಿಗೆಜಿಎಸ್ಟಿಯನ್ನು ಅನುಷ್ಠಾನಗೊಳಿಸಿದ್ದು, ಒಂದು ದೇಶ - ಒಂದು ತೆರಿಗೆ- ಒಂದು ಮಾರುಕಟ್ಟೆ ಎಂಬ ನಮ್ಮ ಪರಿಕಲ್ಪನೆಯನ್ನು ಸಾಕಾರಗೊಳಿಸಿದೆ. ಇದಕ್ಕೆ ಪೂರಕವಾಗಿರುವ -ನಾಮ್ ಯೋಜನೆ ಒಂದು ದೇಶಕ್ಕೆ ಒಂದು ಮಾರುಕಟ್ಟೆ ಸೃಷ್ಟಿಸುವ ಪ್ರಕ್ರಿಯೆಯನ್ನು ಬಲಪಡಿಸುತ್ತಿದ್ದು, ಇದರಿಂದ ರೈತರಿಗೆ ಪ್ರಯೋಜನವಾಗುತ್ತಿದೆ. ಜಮ್ಮುಕಾಶ್ಮೀರ ಮತ್ತು ಲಡಾಕ್ ಆಗಿರಬಹುದು, ಈಶಾನ್ಯದ ರಾಜ್ಯಗಳಾಗಿರಬಹುದು ಅಥವಾ ಹಿಂದೂ ಮಹಾ ಸಾಗರದ ನಮ್ಮ ದ್ವೀಪಗಳೇ ಆಗಿರಬಹುದುದೇಶದ ಪ್ರತಿಯೊಂದು ಭಾಗದ ಒಟ್ಟಾರೆ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಸತತ ಪ್ರಯತ್ನ ಮಾಡುತ್ತಿದೆ. ಬಲವಾದ ಆಂತರಿಕ ಭದ್ರತೆ ದೇಶದ ಅಭಿವೃದ್ಧಿಗೆ ಅತ್ಯಗತ್ಯ. ಆದ್ದರಿಂದ ಆಂತರಿಕ ಭದ್ರತಾ ವ್ಯವಸ್ಥೆಯನ್ನು ಬಲಪಡಿಸಲು ಸರ್ಕಾರ ಅನೇಕ ದೃಢ ಕ್ರಮಗಳನ್ನು ಕೈಗೊಂಡಿದೆ.

8. ಆರೋಗ್ಯ ಮತ್ತು ಶಿಕ್ಷಣ ಸೌಲಭ್ಯಗಳು ಎಲ್ಲರ ಕೈಗೆಟಕುವಂತೆ ಮಾಡುವುದು ಉತ್ತಮ ಆಡಳಿತದ ಬುನಾದಿ ಎಂದು ಪರಿಗಣಿಸಲಾಗಿದೆ. ಕಳೆದ ಏಳು ದಶಕಗಳಲ್ಲಿ ಎರಡೂ ವಲಯಗಳಲ್ಲಿ ನಾವು ಸಾಕಷ್ಟು ಪ್ರಗತಿ ಸಾಧಿಸಿದ್ದೇವೆ. ಸರ್ಕಾರ ತನ್ನ ಮಹತ್ವಾಕಾಂಕ್ಷೆಯ ಉಪಕ್ರಮಗಳೊಂದಿಗೆ, ಆರೋಗ್ಯ ವಲಯದ ಮೇಲೆ ಗಮನ ಕೇಂದ್ರೀಕರಿಸಿರುವುದು ಸೂಕ್ತವಾದುದಾಗಿದೆ. ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯೊಂದಿಗೆ ಮೊದಲುಗೊಂಡು, ಸರ್ಕಾರಿ ವೆಚ್ಚದಲ್ಲಿ ನಡೆಯುವ ಜಗತ್ತಿನ ಅತ್ಯಂತ ದೊಡ್ಡ ಸಾರ್ವತ್ರಿಕ ಆರೋಗ್ಯ ಆರೈಕೆ ಕಾರ್ಯಕ್ರಮವಾದ ಆಯುಷ್ಮಾನ್ ಭಾರತಕ್ಕೆ ವಿಸ್ತರಣೆಗೊಂಡಿರುವ ಕಾರ್ಯಕ್ರಮದಿಂದ ಸರ್ಕಾರ ಬಡಜನರ ಯೋಗಕ್ಷೇಮದ ಬಗ್ಗೆ ತನಗಿರುವ ಕಾಳಜಿಯನ್ನು ತೋರಿಸಿದೆ. ಆರೋಗ್ಯ ಆರೈಕೆಯ ಗುಣಮಟ್ಟ ಸುಧಾರಿಸಿದೆ ಹಾಗೂ ಅದರ ವ್ಯಾಪ್ತಿಯೂ ಉತ್ತಮಗೊಂಡಿದೆ. ಜನೌಷಧಿ ಯೋಜನೆ ಉತ್ತಮ ಗುಣಮಟ್ಟದ, ಸಾರ್ವತ್ರಿಕ ಬಳಕೆಯ ಔಷಧಗಳನ್ನು ಕೈಗೆಟಕುವ ದರದಲ್ಲಿ ಒದಗಿಸುವ ಮೂಲಕ ದೇಶದ ಸಾಮಾನ್ಯ ಜನರ ಆರೋಗ್ಯ ರಕ್ಷಣೆಯ ವೆಚ್ಚವನ್ನು ತಗ್ಗಿಸಿದೆ.

ಪ್ರೀತಿಯ ದೇಶವಾಸಿಗಳೇ,

9. ಪ್ರಾಚೀನ ಕಾಲದಲ್ಲಿ ನಳಂದ ಮತ್ತು ತಕ್ಷಶಿಲೆಯಂತಹ ಮಹಾನ್ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿ, ಒಂದು ಸದೃಢ ಶಿಕ್ಷಣ ವ್ಯವಸ್ಥೆಗೆ ಬುನಾದಿಯನ್ನು ದೇಶದಲ್ಲಿ ಹಾಕಲಾಗಿತ್ತು. ಭಾರತದಲ್ಲಿ ಅಧಿಕಾರ, ಖ್ಯಾತಿ ಅಥವಾ ಸಂಪತ್ತಿಗಿಂತಲೂ ಜ್ಞಾನ ಹೆಚ್ಚು ಅಮೂಲ್ಯವಾದದ್ದು ಎಂದು ಸದಾ ಪರಿಗಣಿಸಲಾಗಿದೆ. ನಮ್ಮ ಪರಂಪರೆಯಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ಕಲಿಕೆಯ ದೇವಾಲಯಗಳೆಂದು ಗೌರವಿಸಲಾಗುತ್ತದೆ. ದೀರ್ಘ ವಸಾಹತುಶಾಹಿ ಆಳ್ವಿಕೆಯಿಂದಾಗಿ ಹಿಂದಕ್ಕೆ ತಳ್ಳಲಾಗಿದ್ದ ನಮ್ಮ ದೇಶ ಶಿಕ್ಷಣದಿಂದಾಗಿ ಚೇತರಿಕೆಯ ಪಥವನ್ನು ಕಂಡುಕೊಂಡಿತು. ಸ್ವಾತಂತ್ರ್ಯಾನಂತರವೇ ನಮ್ಮ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ ಪ್ರಾರಂಭವಾದರೂ ಸಹ, ಸಂಪನ್ಮೂಲಗಳ ಕೊರತೆಯ ಪರಿಸ್ಥಿತಿಯಲ್ಲಿಯೂ ಶಿಕ್ಷಣ ಕ್ಷೇತ್ರದ ನಮ್ಮ ಸಾಧನೆಗಳು ಗಮನಾರ್ಹ ಪಥದಲ್ಲಿ ಸಾಗಿವೆ. ಯಾವ ಮಗುವೂ, ಬಾಲಕ ಅಥವಾ ಬಾಲಕಿಯರು ಶಿಕ್ಷಣದಿಂದ ವಂಚಿತರಾಗದಂತೆ ಖಾತ್ರಿ ಪಡಿಸಿಕೊಳ್ಳುವುದು ನಮ್ಮ ಪ್ರಯತ್ನವಾಗಿದೆ. ಅದೇ ಸಮಯದಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಸತತವಾಗಿ ಸುಧಾರಣೆ ಮಾಡುವ ಮೂಲಕ ಜಾಗತಿಕ ಶಿಕ್ಷಣ ಮಟ್ಟವನ್ನು ತಲುಪಲು ನಾವು ಶ್ರಮಿಸಬೇಕಾದ ಅಗತ್ಯವೂ ಇದೆ.

10. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ - ಇಸ್ರೋ ಸಾಧನೆಗಳ ಬಗ್ಗೆ ಭಾರತ ಹೆಮ್ಮೆ ಪಡುತ್ತದೆ. ಸಂಸ್ಥೆ ಗಗನಯಾನ ಕಾರ್ಯಕ್ರಮದಲ್ಲಿ ಪ್ರಗತಿ ಸಾಧಿಸುತ್ತಿದ್ದು, ಭಾರತದ ಮಾನವ ಸಹಿತ ಬಾಹ್ಯಾಕಾಶ ಯಾತ್ರೆ ಕಾರ್ಯಕ್ರಮ ವರ್ಷ ಇನ್ನಷ್ಟು ಆವೇಗ ಪಡೆದುಕೊಳ್ಳುತ್ತಿರುವುದನ್ನು ದೇಶ ಉತ್ಸುಕತೆಯಿಂದ ಎದಿರು ನೋಡುತ್ತಿದೆ.

11. ಟೋಕಿಯೋದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟವೂ ಇದೇ ವರ್ಷ ನಡೆಯಲಿದೆ. ಅನೇಕ ಕ್ರೀಡೆಗಳಲ್ಲಿ ಭಾರತ ಪಾರಂಪರಿಕವಾಗಿ ಉತ್ತಮ ಸಾಧನೆ ತೋರಿದೆ ಹಾಗೂ ಇತ್ತೀಚಿನ ವರ್ಷಗಳಲ್ಲಿ ಕ್ರೀಡಾಪಟುಗಳು ಮತ್ತು ಅಥ್ಲೀಟ್ ಗಳ ಹೊಸ ಪೀಳಿಗೆ ಅನೇಕ ಕ್ರೀಡಾ ವಿಭಾಗಗಳಲ್ಲಿ ದೇಶಕ್ಕೆ ಇನ್ನೂ ಹೆಚ್ಚಿನ ಕೀರ್ತಿ ಗಳಿಸಿಕೊಟ್ಟಿದೆ. 2020 ಒಲಿಂಪಿಕ್ಸ್ ಸ್ಪರ್ಧೆಗಳಲ್ಲಿ ಭಾರತದ ಕ್ರೀಡಾಪಟುಗಳಿಗೆ ಕೋಟ್ಯಂತರ ಭಾರತೀಯರ ಉತ್ತೇಜನ, ಶುಭಾಕಾಂಕ್ಷೆಗಳ ಬೆಂಬಲವಿರುತ್ತದೆ.

12. ವಿದೇಶಗಳಲ್ಲಿರುವ ಅನಿವಾಸಿ ಭಾರತೀಯರು ನಮ್ಮ ದೇಶದ ಹೆಮ್ಮೆಗೆ ಮತ್ತೊಂದು ಮೂಲವಾಗಿದ್ದಾರೆ. ನಾನು ವಿದೇಶಗಳಿಗೆ ಭೇಟಿ ನೀಡಿದಾಗ, ಅಲ್ಲಿ ನೆಲೆಸಿರುವ ಭಾರತೀಯರು ತಾವು ನೆಲೆಸಿರುವ ದೇಶಗಳು ಪ್ರಗತಿ ಸಾಧಿಸುವುದಕ್ಕೆ ಶ್ರಮಿಸುತ್ತಿರುವುದೇ ಅಲ್ಲದೆ, ಜಾಗತಿಕ ಸಮುದಾಯದ ಮುಂದೆ ಭಾರತದ ಘನತೆಯನ್ನು ಹೆಚ್ಚಿಸಿದ್ದಾರೆ ಎಂಬುದನ್ನು ಗಮನಿಸಿದ್ದೇನೆ. ಅವರಲ್ಲಿ ಹಲವರು ವಿವಿಧ ಕ್ಷೇತ್ರಗಳಲ್ಲಿ ಶ್ರೇಷ್ಠ ಕೊಡುಗೆಗಳನ್ನು ನೀಡಿದ್ದಾರೆ.

ಪ್ರೀತಿಯ ದೇಶವಾಸಿಗಳೇ,

13. ನಮ್ಮ ಸಶಸ್ತ್ರ ಪಡೆಗಳು, ಅರೆ ಸೇನಾ ಪಡೆಗಳು ಮತ್ತು ಆಂತರಿಕ ಭದ್ರತಾ ಪಡೆಗಳನ್ನು ನಾನು ಮುಕ್ತಕಂಠದಿಂದ ಪ್ರಶಂಸಿಸುತ್ತೇನೆ. ನಮ್ಮ ದೇಶದ ಸಮಗ್ರತೆ ಮತ್ತು ಏಕತೆಯನ್ನು ಕಾಪಾಡಲು ಪಡೆಗಳು ಮಾಡಿರುವ ತ್ಯಾಗ, ಸಾಹಸ ಮತ್ತು ಶಿಸ್ತಿನ ಸರಿಸಾಟಿಯಿಲ್ಲದ ವೀರಗಾಥೆಗಳನ್ನು ಸಾರುತ್ತವೆ. ನಮ್ಮ ರೈತರು, ವೈದ್ಯರು ಮತ್ತು ದಾದಿಯರು, ಶಿಕ್ಷಣ ನೀಡುವ ಹಾಗೂ ಮೌಲ್ಯಗಳನ್ನು ಬಿತ್ತುವ ಶಿಕ್ಷಕರು, ವಿಜ್ಞಾನಿಗಳು ಮತ್ತು ಎಂಜಿನಿಯರುಗಳು, ಜಾಗೃತರಾಗಿರುವ ಮತ್ತು ಕ್ರಿಯಾಶೀಲರಾಗಿರುವ ಯುವಜನರು, ನಮ್ಮ ಕಾರ್ಮಿಕ ಬಲದ ಶ್ರಮಿಕ ಸದಸ್ಯರು, ನಮ್ಮ ಆರ್ಥಿಕ ಸಂಪತ್ತಿಗೆ ಕೊಡುಗೆ ನೀಡುತ್ತಿರುವ ಉದ್ಯಮಿಗಳು, ನಮ್ಮ ಸಂಸ್ಕೃತಿಯನ್ನು ಶ್ರೀಮಂತಗೊಳಿಸುತ್ತಿರುವ ಕಲಾವಿದರು, ಜಾಗತಿಕ ಮೆಚ್ಚುಗೆ ಗಳಿಸಿರುವ ನಮ್ಮ ಸೇವಾ ವಲಯದ ಪರಿಣತರು, ಅನೇಕ ಕಾರ್ಯಕ್ಷೇತ್ರಗಳಲ್ಲಿ ಕೊಡುಗೆ ಸಲ್ಲಿಸುತ್ತಿರುವ ನಮ್ಮ ದೇಶವಾಸಿಗಳು ಹಾಗೂ ವಿಶೇಷವಾಗಿ ಅನೇಕ ತೊಡಕುಗಳು ಮತ್ತು ನಿರ್ಬಂಧಗಳ ನಡುವೆಯೂ ಸಾಧನೆಗಳ ಹೊಸ ಶಿಖರ ತಲುಪುತ್ತಿರುವ ನಮ್ಮ ಚೈತನ್ಯಶೀಲ ಹೆಣ್ಣು ಮಕ್ಕಳು ಇವರೆಲ್ಲರೂ ನಮ್ಮ ದೇಶಕ್ಕೆ ಹೆಮ್ಮೆ ತಂದುಕೊಟ್ಟಿದ್ದಾರೆ.

14. ತಿಂಗಳ ಆರಂಭದಲ್ಲಿ ಅನೇಕ ಕ್ಷೇತ್ರಗಳಲ್ಲಿ ಪ್ರಶಂಸನಾರ್ಹ ಕಾರ್ಯ ಮಾಡಿದ ಅನೇಕ ಸಾಧಕರೊಡನೆ ಸಂವಾದ ನಡೆಸುವ ಅವಕಾಶ ನನಗೆ ಲಭಿಸಿತ್ತು. ವಿಜ್ಞಾನ, ನಾವಿನ್ಯತೆ, ಕ್ರೀಡೆ, ದಿವ್ಯಾಂಗರ ಸಲಬೀಕರಣ, ಕೃಷಿ ಮತ್ತು ಅರಣ್ಯವರ್ಧನೆ, ಮಹಿಳೆಯರು ಮತ್ತು ಮಕ್ಕಳ ಸಬಲೀಕರಣ, ಶಿಕ್ಷಣ, ಆರೋಗ್ಯ ಆರೈಕೆ, ಹಳೆಯ ಕಲಾ ರೂಪಗಳ ಪುನಶ್ಚೇತನ ಹಾಗೂ ತುಂಬಾ ಅಗತ್ಯವಿರುವವರಿಗೆ ಆಹಾರ ಮತ್ತು ಪೌಷ್ಟಿಕ ಆಹಾರ ಒದಗಿಸುವುದು ಮುಂತಾದ ಕ್ಷೇತ್ರಗಳಲ್ಲಿ ಮೌನವಾಗಿ ಶ್ರಮಿಸುತ್ತಾ ಅಗಾಧ ಕೊಡುಗೆಗಳನ್ನು ಸಾಧಕರು ನೀಡಿದ್ದಾರೆ. ಉದಾಹರಣೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸುಶ್ರೀ ಅರಿಫಾ ಜಾನ್ ನುಮ್ದಾ ಕರಕುಶಲ ಕಲೆಗೆ ಮರು ಜೀವ ನೀಡಿದ್ದಾರೆ. ಸುಶ್ರೀ ರತ್ನಾವಳಿ ಕೊತ್ತಪಲ್ಲಿ, ತೆಲಂಗಾಣದಲ್ಲಿ ಥಲಸ್ಸೇಮಿಯಾ ರೋಗಕ್ಕೆ ತುತ್ತಾಗಿರುವ ರೋಗಿಗಳ ಸೇವೆಯಲ್ಲಿ ತೊಡಗಿದ್ದಾರೆ, ಶ್ರೀಮತಿ ದೇವಕಿ ಅಮ್ಮ ಕೇರಳದಲ್ಲಿ ತಮ್ಮ ವೈಯಕ್ತಿಕ ಶ್ರಮದಿಂದ ಅರಣ್ಯ ಸಂಪತ್ತನ್ನು ವೃದ್ಧಿಸಿದ್ದಾರೆ, ಮಣಿಪುರದಲ್ಲಿ ಶ್ರೀ ಜಾಮ್ ಖೋಜಂಗ್ ಮಿಸಾವೋ ತಮ್ಮ ಸಮುದಾಯ ಅಭಿವೃದ್ಧಿ ಪ್ರಯತ್ನಗಳಿಂದ ಅನೇಕರ ಜೀವನದ ಸ್ಥಿತಿಗತಿಗಳನ್ನು ಸುಧಾರಿಸಿದ್ದಾರೆ ಹಾಗೂ ಪಶ್ಚಿಮ ಬಂಗಾಳದಲ್ಲಿ ಶ್ರೀ ಬಾಬರ್ ಅಲಿ ಬಾಲ್ಯದಿಂದಲೇ ಅವಕಾಶ ವಂಚಿತ ಮಕ್ಕಳಿಗೆ ಶಿಕ್ಷಣ ನೀಡುತ್ತಾ ಬಂದಿದ್ದಾರೆ. ಇಂತಹ ಅಸಂಖ್ಯಾತ ಉದಾಹರಣೆಗಳು ನಮ್ಮ ಮುಂದಿವೆ ಹಾಗೂ ನಾನು ಕೆಲವನ್ನು ಮಾತ್ರವೇ ಇಲ್ಲಿ ಹೇಳಿದ್ದೇನೆ. ಸಾಮಾನ್ಯ ಜನರು ಅಸಾಮಾನ್ಯವಾದ ಕೊಡುಗೆಗಳನ್ನು ನೀಡಬಲ್ಲರು ಎಂಬುದಕ್ಕೆ ಇವರು ಉದಾಹರಣೆಗಳಾಗಿದ್ದಾರೆ. ರಾಷ್ಟ್ರ ನಿರ್ಮಾಣದ ಮಹತ್ವದ ಕಾರ್ಯದಲ್ಲಿ ಕೊಡುಗೆ ನೀಡುತ್ತಿರುವ ಹಾಗೂ ಸರ್ಕಾರದ ಕಾರ್ಯಕ್ರಮಗಳಿಗೆ ಪೂರಕವಾಗಿ ಶ್ರಮಿಸುತ್ತಿರುವ ಅನೇಕ ಸ್ವಯಂ ಸೇವಾ ಸಂಸ್ಥೆಗಳೂ ಇವೆ.

ದೇಶವಾಸಿಗಳೇ,

15. ನಾವೀಗ 21ನೇ ಶತಮಾನದ ಮೂರನೆಯ ದಶಕದಲ್ಲಿದ್ದೇವೆ. ನವ ಭಾರತದ ಹಾಗೂ ಭಾರತೀಯರ ಹೊಸ ಪೀಳಿಗೆಯ ಉತ್ಕರ್ಷದ ದಶಕ ಇದಾಗಲಿದೆ. ಶತಮಾನದಲ್ಲಿ ಹುಟ್ಟಿದವರಲ್ಲಿ ಹೆಚ್ಚಿನವರು ರಾಷ್ಟ್ರೀಯ ಸಂವಾದದಲ್ಲಿ ಭಾಗವಹಿಸುತ್ತಿದ್ದಾರೆ. ಸಮಯ ಕಳೆದಂತೆ, ನಾವು ನಮ್ಮ ಮಹಾನ್ ಸ್ವಾತಂತ್ರ್ಯ ಯೋಧರ ಸಜೀವ ಸಂಪರ್ಕವನ್ನು ಕ್ರಮೇಣ ಕಳೆದುಕೊಳ್ಳುತ್ತಿದ್ದೇವೆಯಾದರೂ, ಹೋರಾಟಕ್ಕೆ ಮಾರ್ಗದರ್ಶನ ನೀಡಿದ ನಂಬಿಕೆಗಳು ಮುಂದುವರಿಯುತ್ತಿರುವ ಬಗ್ಗೆ ಚಿಂತಿಸುವುದಕ್ಕೆ ಕಾರಣವಿಲ್ಲ. ತಂತ್ರಜ್ಞಾನದಲ್ಲಿ ಆಗುತ್ತಿರುವ ಮುನ್ನಡೆಗಳಿಂದಾಗಿ ಇಂದಿನ ಯುವ ಜನರು ಹೆಚ್ಚು ಪ್ರಾಜ್ಞರಾಗಿದ್ದಾರೆ ಮತ್ತು ಹೆಚ್ಚು ಆತ್ಮ ವಿಶ್ವಾಸದಿಂದ ಕೂಡಿದ್ದಾರೆ. ಮುಂದಿನ ಪೀಳಿಗೆ ನಮ್ಮ ದೇಶದ ಮೂಲ ಮೌಲ್ಯಗಳಿಗೆ ಬಲವಾಗಿ ಬದ್ಧವಾಗಿದೆ. ನಮ್ಮ ಯುವಜನರಿಗೆ ದೇಶ ಸದಾ ಮೊದಲು. ಅವರಿಂದಾಗಿ ನಾವು ನವ ಭಾರತದ ಉದಯವನ್ನು ಕಾಣುತ್ತಿದ್ದೇವೆ.

16. ಮಹಾತ್ಮಾ ಗಾಂಧಿಯವರ ಆದರ್ಶಗಳು ರಾಷ್ಟ್ರ ನಿರ್ಮಾಣದ ನಮ್ಮ ಪ್ರಯತ್ನಗಳಿಗೆ ಇನ್ನೂ ಪ್ರಸ್ತುತವಾಗಿಯೇ ಇವೆ. ನಮ್ಮ ಕಾಲಘಟ್ಟದಲ್ಲಿ ಇನ್ನಷ್ಟು ಮುಖ್ಯವಾಗಿ ಪರಿಣಮಿಸಿರುವ ಗಾಂಧೀಜಿಯವರ ಸತ್ಯ ಮತ್ತು ಅಹಿಂಸೆಯ ಸಂದೇಶದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವುದು ನಮ್ಮ ದಿನಚರಿಯ ಒಂದು ಭಾಗವಾಗಬೇಕು. ಒಂದು ಧ್ಯೇಯಕ್ಕಾಗಿ ಹೋರಾಡುವಾಗ ಜನರು, ಅದರಲ್ಲೂ ಯುವಜನರು, ಗಾಂಧೀಜಿ ಮನುಕುಲಕ್ಕೆ ನೀಡಿದ ಅಹಿಂಸೆಯ ಉಡುಗೊರೆಯನ್ನು ಮರೆಯಬಾರದು. ಒಂದು ಕೃತ್ಯ ಸರಿಯೋ ತಪ್ಪೋ ಎಂದು ತೀರ್ಮಾನಿಸಲು ಗಾಂಧೀಜಿಯವರು ಬಳಸಿದ ಒರೆಗಲ್ಲು ನಮ್ಮ ಪ್ರಜಾಪ್ರಭುತ್ವದ ಕಾರ್ಯನಿರ್ವಹಣೆಗೂ ಅನ್ವಯಿಸುತ್ತದೆ. ಸರ್ಕಾರ ಮತ್ತು ವಿರೋಧ ಪಕ್ಷಗಳೆರಡೂ ಪ್ರಮುಖ ಪಾತ್ರವನ್ನು ವಹಿಸಬೇಕಾಗುತ್ತದೆ. ತಮ್ಮ ರಾಜಕೀಯ ವಿಚಾರಗಳನ್ನು ಅಭಿವ್ಯಕ್ತಗೊಳಿಸುವಾಗ, ದೇಶದ ಅಭಿವೃದ್ಧಿ ಮತ್ತು ಜನತೆಯ ಕ್ಷೇಮ ಸತತವಾಗಿ ಹೆಚ್ಚಾಗಿರುವುದನ್ನು ಖಾತ್ರಿಪಡಿಸಿಕೊಳ್ಳಲು ಎರಡೂ ಜೊತೆ ಜೊತೆಯಾಗಿ ಮುಂದೆ ಸಾಗಬೇಕು.

ಪ್ರೀತಿಯ ದೇಶವಾಸಿಗಳೇ,

17. ನಮ್ಮ ಗಣರಾಜ್ಯ ದಿನವು ಸಂವಿಧಾನದ ಬಗ್ಗೆ ಸಂಭ್ರಮಿಸುವ ದಿನವಾದ್ದರಿಂದ ಅದರ ಮುಖ್ಯ ಶಿಲ್ಪಿಯಾದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಾತುಗಳೊಂದಿಗೆ ನನ್ನ ಭಾಷಣವನ್ನು ಮುಗಿಸುತ್ತೇನೆ.

(ಉಲ್ಲೇಖ) ಕೇವಲ ರೂಪದಲ್ಲಷ್ಟೇ ಅಲ್ಲದೆ ವಾಸ್ತವವಾಗಿ ಪ್ರಜಾಪ್ರಭುತ್ವವನ್ನು ನಿರ್ವಹಿಸಲು ನಾವು ಇಚ್ಛಿಸುವುದಾದರೆ ನಾವೇನು ಮಾಡಬೇಕು? ನನ್ನ ತೀರ್ಮಾನದಲ್ಲಿ ನಾವು ಮೊದಲಿಗೆ ಮಾಡಬೇಕಾದ್ದು ಏನೆಂದರೆ, ನಮ್ಮ ಸಾಮಾಜಿಕ ಮತ್ತು ಆರ್ಥಿಕ ಗುರಿಗಳನ್ನು ಈಡೇರಿಸಲು ಸಾಂವಿಧಾನಿಕ ವಿಧಾನಗಳಿಗೆ ಕಟಿಬದ್ಧವಾಗಿರುವುದೇ ಆಗಿದೆ. (ಉಲ್ಲೇಖ ಮುಗಿಯಿತು)

ಮಾತುಗಳು ನಮ್ಮ ದಾರಿಯಲ್ಲಿ ಸದಾ ಬೆಳಕು ಚೆಲ್ಲಿವೆ. ಹೊಸ ಕೀರ್ತಿ ಗಳಿಸಲು ಮಾತುಗಳು ಮುಂದಿನ ದಾರಿಯನ್ನು ತೋರಿಸುತ್ತವೆ.

ಪ್ರೀತಿಯ ದೇಶವಾಸಿಗಳೇ,

18. ವಸುಧೈವ ಕುಟುಂಬಕಂ ಎಂಬ ನಮ್ಮ ಸಂದೇಶದಲ್ಲಿ ಅಡಗಿರುವ ವಿಶ್ವವೇ ಉತ್ತಮವಾಗಿ ಒಗ್ಗೂಡಿದ ಒಂದು ಕುಟುಂಬ ಎಂಬ ವಿಚಾರ ಇತರ ದೇಶಗಳೊಂದಿಗೆ ನಾವು ಹೊಂದಿರುವ ಸಂಬಂಧಗಳನ್ನು ಬಲಪಡಿಸುತ್ತದೆ. ನಮ್ಮ ಪ್ರಜಾಸತ್ತಾತ್ಮಕ ಆದರ್ಶಗಳು ಮತ್ತು  ಅಭಿವೃದ್ಧಿ ಫಲಗಳನ್ನು ನಾವು ಇಡೀ ಜಗತ್ತಿನೊಂದಿಗೆ ಹಂಚಿಕೊಳ್ಳುತ್ತಾ ಬಂದಿದ್ದೇವೆ.

ನಮ್ಮ ಗಣರಾಜ್ಯ ದಿನದ ಸಂಭ್ರಮಾಚರಣೆಯಲ್ಲಿ ಭಾಗವಹಿಸಲು ವಿದೇಶಗಳ ಗಣ್ಯರನ್ನು ಆಹ್ವಾನಿಸುವ ಸಂಪ್ರದಾಯವನ್ನು ನಾವು ಹೊಂದಿದ್ದೇವೆ. ವರ್ಷ ನಮ್ಮ ಗಣ್ಯ ಗೆಳೆಯ ಬ್ರೆಜಿಲ್ ದೇಶದ ಅಧ್ಯಕ್ಷ ಶ್ರೀ ಹಾಯರ್ ಬೋಲ್ಸೋನಾರೋ ನಾಳೆ ನಮ್ಮ ಗಣರಾಜ್ಯ ದಿನದ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಭಾರತ ಮತ್ತು ಭಾರತೀಯರು ಮುನ್ನಡೆಯುತ್ತಿದ್ದಂತೆ, ನಮಗಾಗಿ ಮತ್ತು ಇಡೀ ಮನುಕುಲಕ್ಕಾಗಿ ಒಂದು ಸುಭದ್ರ ಮತ್ತು ಅಭ್ಯುದಯದ ಭವಿಷ್ಯವನ್ನು ನಿರ್ಮಿಸಲು ಜಾಗತಿಕ ಸಮುದಾಯದೊಂದಿಗೆ ಕೈಜೋಡಿಸಲು ನಾವು ಬದ್ಧರಾಗಿದ್ದೇವೆ.

19. ನಿಮ್ಮೆಲ್ಲರಿಗೂ ನಾನು ಮತ್ತೊಮ್ಮೆ ಗಣರಾಜ್ಯ ದಿನದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಹಾಗೂ ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ಜೈಹಿಂದ್, ಜೈಹಿಂದ್, ಜೈಹಿಂದ್.

 

 (Release ID: 1600583) Visitor Counter : 578