ಪ್ರಧಾನ ಮಂತ್ರಿಯವರ ಕಛೇರಿ
ಸ್ವಚ್ಛ ಭಾರತ ಅಭಿಯಾನಕ್ಕಾಗಿ ‘ಜಾಗತಿಕ ಗೋಲ್ ಕೀಪರ್ ಪ್ರಶಸ್ತಿ’ ಸ್ವೀಕರಿಸಿದ ಪ್ರಧಾನಿ
Posted On:
25 SEP 2019 7:15AM by PIB Bengaluru
ಸ್ವಚ್ಛ ಭಾರತ ಅಭಿಯಾನಕ್ಕಾಗಿ ‘ಜಾಗತಿಕ ಗೋಲ್ ಕೀಪರ್ ಪ್ರಶಸ್ತಿ’ ಸ್ವೀಕರಿಸಿದ ಪ್ರಧಾನಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಸ್ವಚ್ಛ ಭಾರತ ಅಭಿಯಾನ ಕೈಗೊಂಡಿದ್ದಕ್ಕಾಗಿ ಬಿಲ್ ಮತ್ತು ಮೆಲಿಂದಾ ಗೇಟ್ಸ್ ಫೌಂಡೇಶನ್ ನಿಂದ ‘ಜಾಗತಿಕ ಗೋಲ್ ಕೀಪರ್ ಪ್ರಶಸ್ತಿ’ಯನ್ನು 2019ರ ಸೆಪ್ಟೆಂಬರ್ 24ರಂದು ಸ್ವೀಕರಿಸಿದರು. ನ್ಯೂಯಾರ್ಕ್ ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನ(ಯು ಎನ್ ಜಿಎ) ನೇಪಥ್ಯದಲ್ಲಿ ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ಪ್ರಧಾನಮಂತ್ರಿ ಅವರು ಸ್ವಚ್ಛ ಭಾರತ ಅಭಿಯಾನವನ್ನು ಜನಾಂದೋಲನವನ್ನಾಗಿ ಪರಿವರ್ತಿಸಿದ ಎಲ್ಲ ಭಾರತೀಯರಿಗೆ ಮತ್ತು ಅದನ್ನು ತಮ್ಮ ದೈನಂದಿನ ಜೀವನದ ಭಾಗವನ್ನಾಗಿ ಮಾಡಿಕೊಂಡಿರುವವರಿಗೆ ಪ್ರಶಸ್ತಿಯನ್ನು ಸಮರ್ಪಿಸಿದರು.
‘ಸ್ವಚ್ಛ ಭಾರತ ಯೋಜನೆಯ ಯಶಸ್ಸಿಗೆ ಭಾರತದ ಜನರೇ ಕಾರಣ ಅವರು ತಮ್ಮದೇ ಚಳವಳಿ ಎಂದು ಭಾವಿಸಿದ್ದರು ಮತ್ತು ಅದರಿಂದಾಗಿ ನಿರೀಕ್ಷಿತ ಯಶಸ್ಸುಗಳಿಸಲು ಸಾಧ್ಯವಾಯಿತು’ ಎಂದು ಪ್ರಧಾನಮಂತ್ರಿ ಅವರು ಪ್ರಶಸ್ತಿ ಸ್ವೀಕರಿಸಿದ ನಂತರ ಹೇಳಿದರು.
ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮದಿನೋತ್ಸವದ ವೇಳೆ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದು ವೈಯಕ್ತಿಕವಾಗಿ ತಮಗೆ ಮಹತ್ವದ ಕ್ಷಣ ಎಂದು ಬಣ್ಣಿಸಿದ ಪ್ರಧಾನಮಂತ್ರಿ ಅವರು, ಸ್ವಚ್ಛ ಭಾರತ ಅಭಿಯಾನ ಭಾರತದ 130 ಕೋಟಿ ಜನರು ಎಂತಹುದೇ ಸವಾಲನ್ನು ಎದುರಿಸಲು ಪಣ ತೊಟ್ಟರೆ ಅದು ಸಾಧ್ಯವಾಗಲಿದೆ ಎಂಬುದಕ್ಕೆ ನಿದರ್ಶನವಾಗಿದೆ ಎಂದರು. ಮಹಾತ್ಮ ಗಾಂಧೀಜಿ ಅವರ ಸ್ವಚ್ಛ ಭಾರತ ಸ್ವಚ್ಛ ಭಾರತ ಕನಸು ನನಸಾಗುವ ನಿಟ್ಟಿನಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ಅವರು ಹೇಳಿದರು.
‘ಕಳೆದ ಐದು ವರ್ಷಗಳಿಂದೀಚೆಗೆ ದಾಖಲೆಯ 11 ಕೋಟಿಗೂ ಅಧಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ದೇಶದ ಮಹಿಳೆಯರು ಮತ್ತು ಬಡವರಿಗೆ ಈ ಯೋಜನೆ ಅತ್ಯಂತ ಉಪಯುಕ್ತವಾಗಿದೆ’’ ಎಂದು ಪ್ರಧಾನಮಂತ್ರಿ ಹೇಳಿದರು. ಅಲ್ಲದೆ ಆರೋಗ್ಯ ಮತ್ತು ನೈರ್ಮಲ್ಯ ಸುಧಾರಣೆಯಾಗಿದ್ದು, 11 ಕೋಟಿ ಶೌಚಾಲಯಗಳ ನಿರ್ಮಾಣದಿಂದ ಗ್ರಾಮಗಳಲ್ಲಿ ಆರ್ಥಿಕ ಚಟುವಟಿಕೆ ಉತ್ತೇಜನಗೊಂಡಿದೆ ಎಂದರು.
ಜಾಗತಿಕ ನೈರ್ಮಲೀಕರಣ ವ್ಯಾಪ್ತಿ ಸುಧಾರಣೆಯಾಗುತ್ತಿರುವ ಕುರಿತು ಮಾತನಾಡಿದ ಪ್ರಧಾನಮಂತ್ರಿ, ಭಾರತ ತನ್ನ ಪರಿಣಿತಿ ಮತ್ತು ಅನುಭವವನ್ನು ಇತರೆ ದೇಶಗಳೊಂದಿಗೆ ಹಂಚಿಕೊಳ್ಳಲು ಸಿದ್ಧವಿದೆ. ಆ ಮೂಲಕ ಸಾಮೂಹಿಕ ಪ್ರಯತ್ನದಿಂದ ನೈರ್ಮಲೀಕರಣ ಹೆಚ್ಚಿಸಬಹುದಾಗಿದೆ ಎಂದರು.
ಫಿಟ್ ಇಂಡಿಯಾ ಅಭಿಯಾನ ಮತ್ತು ಜಲಜೀವನ್ ಮಿಷನ್ ಮೂಲಕ ಆರೋಗ್ಯ ರಕ್ಷಣೆ ಮುನ್ನೆಚ್ಚರಿಕೆ ಕ್ರಮಗಳ ನಿಟ್ಟಿನಲ್ಲಿ ಭಾರತ ಕೈಗೊಂಡಿರುವ ಕ್ರಮಗಳನ್ನು ಪ್ರಧಾನಮಂತ್ರಿಗಳು ಉಲ್ಲೇಖಿಸಿದರು.
**************
(Release ID: 1586674)
Visitor Counter : 159