ಸಂಪುಟ
ಕೇಂದ್ರದ ಮಾಜಿ ಸಚಿವೆ ಶ್ರೀಮತಿ ಸುಷ್ಮಾ ಸ್ವರಾಜ್ ನಿಧನಕ್ಕೆ ಸಂತಾಪ ಸೂಚಿಸಿದ ಸಂಪುಟ ಸಭೆ
प्रविष्टि तिथि:
13 AUG 2019 1:49PM by PIB Bengaluru
ಕೇಂದ್ರದ ಮಾಜಿ ಸಚಿವೆ ಶ್ರೀಮತಿ ಸುಷ್ಮಾ ಸ್ವರಾಜ್ ನಿಧನಕ್ಕೆ ಸಂತಾಪ ಸೂಚಿಸಿದ ಸಂಪುಟ ಸಭೆ
ನವದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ 2019ರ ಆಗಸ್ಟ್ 6ರಂದು ನಿಧನಹೊಂದಿದ ಕೇಂದ್ರದ ಮಾಜಿ ಸಚಿವೆ ಶ್ರೀಮತಿ ಸುಷ್ಮಾ ಸ್ವರಾಜ್ ಅವರ ನಿಧನಕ್ಕೆ ಕೇಂದ್ರ ಸಚಿವ ಸಂಪುಟ ತೀವ್ರ ಶೋಖ ವ್ಯಕ್ತಪಡಿಸಿದೆ. ಅವರ ಅಗಲಿಕೆಯಿಂದ ದೇಶ ಗೌರವಾನ್ವಿತ ನಾಯಕಿ ಹಾಗೂ ಅತ್ಯುತ್ತಮ ಸಂಸದೀಯ ಪಟುವನ್ನು ಕಳೆದುಕೊಂಡಿದೆ.
ನಿರ್ಣಯದ ವಿಷಯ ಈ ಕೆಳಗಿನಂತಿದೆ:-
“ 1952ರ ಫೆಬ್ರವರಿ 14ರಂದು ಹರಿಯಾಣದ ಅಂಬಾಲಾದಲ್ಲಿ ಜನಿಸಿದ ಶ್ರೀಮತಿ ಸುಷ್ಮಾ ಸ್ವರಾಜ್ ಅಂಬಾಲಾದ ಸನಾತನ ಧರ್ಮ ಕಾಲೇಜಿನಿಂದ ಪದವಿ ಪಡೆದರು ಮತ್ತು ಚಂಡೀಗಢದ ಪಂಜಾಬ್ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದರು. ಕಾನ್ಪುರದ ಕೃಷಿ ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು. 1973ರಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ ವಕೀಲರಾಗಿ ಸೇವೆ ಆರಂಭಿಸಿದರು.
ಶ್ರೀಮತಿ ಸುಷ್ಮಾ ಸ್ವರಾಜ್ 1977ರಲ್ಲಿ ತಮ್ಮ 25ನೇ ವಯಸ್ಸಿನಲ್ಲೇ ಹರಿಯಾಣ ವಿಧಾನಸಭೆಗೆ ಆಯ್ಕೆಯಾಗುವ ಮೂಲಕ ಸಾರ್ವಜನಿಕ ಜೀವನಕ್ಕೆ ಪದಾರ್ಪಣೆ ಮಾಡಿದರು ಮತ್ತು ಹರಿಯಾಣ ರಾಜ್ಯ ಸರ್ಕಾರದಲ್ಲಿ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಂಪುಟ ದರ್ಜೆ ಸಚಿವರಾದರು. ಮತ್ತೆ ಹರಿಯಾಣ ವಿಧಾನಸಭೆಗೆ ಆಯ್ಕೆಯಾದ ಅವರು 1987-1990ರ ಅವಧಿಯಲ್ಲಿ ಸಂಪುಟ ದರ್ಜೆ ಸಚಿವರಾಗಿ ಶಿಕ್ಷಣ, ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ನಿರ್ವಹಿಸಿದರು.
1990ರಲ್ಲಿ ಅವರು ರಾಜ್ಯಸಭೆಗೆ ಆಯ್ಕೆಯಾದರು, 1996ರಲ್ಲಿ 11ನೇ ಲೋಕಸಭೆಯ ಸದಸ್ಯರಾಗಿ ಅವರು ಕೇಂದ್ರ ಸಮಾಚಾರ ಮತ್ತು ಪ್ರಸಾರ ಖಾತೆ ಸಚಿವರಾಗಿ ಸೇವೆ ಸಲ್ಲಿಸಿದರು. 1998ರಲ್ಲಿ ಮತ್ತೆ 12ನೇ ಲೋಕಸಭೆಗೆ ಆಯ್ಕೆಯಾದ ಅವರು ಸಮಾಚಾರ ಮತ್ತು ಪ್ರಸಾರ ಸಚಿವಾಲಯದ ಸಂಪುಟ ದರ್ಜೆಯ ಜೊತೆಗೆ ಹೆಚ್ಚುವರಿಯಾಗಿ ದೂರಸಂಪರ್ಕ ಖಾತೆಯನ್ನೂ ನಿರ್ವಹಿಸಿದರು. 1998ರ ಅಕ್ಟೋಬರ್ ನಲ್ಲಿ ಅವರು ದೆಹಲಿಯ ಪ್ರಥಮ ಮಹಿಳಾ ಮುಖ್ಯಮಂತ್ರಿಯಾದರು. ನಂತರ ಏಪ್ರಿಲ್ 2000ದಲ್ಲಿ ರಾಜ್ಯಸಭೆಗೆ ಪುನರಾಯ್ಕೆಯಾದ ಅವರು, ಸೆಪ್ಟೆಂಬರ್ 2000ದಿಂದ ಜನವರಿ 2003ರವರೆಗೆ ಸಮಾಚಾರ ಮತ್ತು ಪ್ರಸಾರ ಖಾತೆ ಸಚಿವರಾದರು ಬಳಿಕ 2003 ಜನವರಿಯಿಂದ 2004 ಮೇ ವರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದರು. ಏಪ್ರಿಲ್ 2006ರಲ್ಲಿ ರಾಜ್ಯಸಭೆಗೆ ಅವರು ಪುನರಾಯ್ಕೆಯಾದರು. 2009ರಲ್ಲಿ 15ನೇ ಲೋಕಸಭೆಗೆ ಆಯ್ಕೆಯಾದ ಅವರು ಡಿಸೆಂಬರ್ 2009ರಿಂದ ಮೇ 2014ರವರೆಗೆ ಪ್ರತಿಪಕ್ಷ ನಾಯಕಿಯಾಗಿದ್ದರು. 16ನೇ ಲೋಕಸಭೆಗೆ ಆಯ್ಕೆಯಾದ ಅವರು, ಮೇ 2014ರಿಂದ ಮೇ 2019ರವರೆಗೆ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವರಾಗಿದ್ದರು.
ಶ್ರೀಮತಿ ಸುಷ್ಮಾ ಸ್ವರಾಜ್ ತಮ್ಮ ಅದ್ಭುತ ವಾಕ್ಚಾತುರ್ಯ ಮತ್ತು ಸಹಾನುಭೂತಿಯ ನಿಲುವಿನಿಂದ ಸದಾ ಸ್ಮರಣೆಯಲ್ಲಿರುತ್ತಾರೆ. ಸಮರ್ಥ ಆಡಳಿತಗಾರರಾಗಿದ್ದ ಅವರು ಮಾನವೀಯತೆಯ ಸಾಕಾರಮೂರ್ತಿಯಾಗಿ ವಿದೇಶದಲ್ಲಿ ಸಂಕಷ್ಟದಲ್ಲಿ ಸಿಲುಕಿದ್ದ ಭಾರತೀಯರಿಗೆ ನೆರವಿನ ಹಸ್ತ ಚಾಚುವ ಮೂಲಕ ಎಲ್ಲರ ಹೃದಯ ಗೆದ್ದಿದ್ದರು. ಈ ಎಲ್ಲ ಗುಣಗಳಿಂದ ಅವರು 2017ರಲ್ಲಿ ವಾಲ್ ಸ್ಟ್ರೀಟ್ ಜರ್ನಲ್ ದೈನಿಕದಿಂದ “ಭಾರತದ ಅತ್ಯಂತ ಪ್ರೀತಿಪಾತ್ರ ರಾಜಕಾರಣಿ’’ ಎಂದು ಘೋಷಿಸಲ್ಪಟ್ಟಿದ್ದರು.
ಸಂಪುಟವು ವಿವಿಧ ಸ್ಥಾನಮಾನಗಳಿಂದ ಶ್ರೀಮತಿ ಸುಷ್ಮಾ ಸ್ವರಾಜ್ ಅವರು ಈ ದೇಶಕ್ಕೆ ನೀಡಿದ ಸೇವೆಯನ್ನು ಮೆಚ್ಚುಗೆಯೊಂದಿಗೆ ದಾಖಲಿಸಿಡುತ್ತದೆ. ಸಂಪುಟವು ಸರ್ಕಾರದ ಪರವಾಗಿ ಮತ್ತು ಇಡೀ ದೇಶದ ಪರವಾಗಿ ದುಃಖತಪ್ತ ಕುಟುಂಬಕ್ಕೆ ಹೃದಯಾಂತರಾಳದ ಸಂತಾಪವನ್ನು ಸಲ್ಲಿಸುತ್ತದೆ..”
(रिलीज़ आईडी: 1581909)
आगंतुक पटल : 208