ಪ್ರಧಾನ ಮಂತ್ರಿಯವರ ಕಛೇರಿ

ವಿಜ್ಞಾನ ಮತ್ತು ತಂತ್ರಜ್ಞಾನಕ್ಕಾಗಿ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ ಪ್ರದಾನ ಮಾಡಿದ ಪ್ರಧಾನಮಂತ್ರಿ

Posted On: 28 FEB 2019 6:41PM by PIB Bengaluru

ವಿಜ್ಞಾನ ಮತ್ತು ತಂತ್ರಜ್ಞಾನಕ್ಕಾಗಿ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ ಪ್ರದಾನ ಮಾಡಿದ ಪ್ರಧಾನಮಂತ್ರಿ



ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ನವದೆಹಲಿಯ ವಿಜ್ಞಾನಭವನದಲ್ಲಿ ನಡೆದ ಸಮಾರಂಭದಲ್ಲಿ 2016, 2017 ಮತ್ತು 2018ನೇ ಸಾಲಿನ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. 

ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದ ಪ್ರಧಾನಮಂತ್ರಿಯವರು, ವಿಜ್ಞಾನ, ತಂತ್ರಜ್ಞಾನ ಮತ್ತು ನಾವಿನ್ಯತೆ ಸಮಾಜದ ಅಶೋತ್ತರ ಮತ್ತು ಅಗತ್ಯಗಳಿಗೆ ಸಂಪರ್ಕಿತವಾಗಿರಬೇಕು ಎಂದು ಹೇಳಿದರು. ನಮ್ಮ ವೈಜ್ಞಾನಿಕ ಸಂಸ್ಥೆಗಳು ಭವಿಷ್ಯದ ಅಗತ್ಯಗಳೊಂದಿಗೆ ಹೊಂದಿಕೊಳ್ಳಬೇಕು ಮತ್ತು ಸ್ಥಳೀಯ ಸಮಸ್ಯಗಳಿಗೆ ಪರಿಹಾರ ಹುಡುಕಬೇಕು ಎಂದು ಹೇಳಿದರು.

ಬೃಹತ್ ದತ್ತಾಂಶ, ಮೆಷೀನ್ ಲರ್ನಿಂಗ್, ಬ್ಲಾಕ್ ಚೈನ್ ಮತ್ತು ಕೃತಕ ಬುದ್ಧಿಮತ್ತೆಯಂಥ ನೂತನ ಹಾಗೂ ಹೊರ ಹೊಮ್ಮುತ್ತಿರುವ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ನಡೆಸುವ ಅಗತ್ಯವನ್ನು ಪ್ರತಿಪಾದಿಸಿದರು. 

ಈ ಕ್ಷೇತ್ರಗಳಲ್ಲಿ ಅಂತರ ಶಿಸ್ತೀಯ ಸೈಬರ್ ಬೌದ್ಧಿಕ ವ್ಯವಸ್ಥೆ ಕುರಿತ ರಾಷ್ಟ್ರೀಯ ಅಭಿಯಾನವು ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಸುಧಾರಿಸುತ್ತದೆ ಎಂದು ಅವರು ಹೇಳಿದರು. ನಾಲ್ಕನೇ ಕೈಗಾರಿಕಾ ಕ್ರಾಂತಿಯ ಲಾಭ ಪಡೆದು, ಭಾರತವನ್ನು ಜ್ಞಾನ ಮತ್ತು ತಂತ್ರಜ್ಞಾನ ಆಧಾರಿತ ಕೈಗಾರಿಕೆಗಳ ಉತ್ಪಾದಕತೆಯ ಜಾಗತಿಕ ತಾಣವಾಗಿ ಮಾಡಲು ತಂತ್ರಜ್ಞಾನ ರೂಪಿಸುವಂತೆ ವೈಜ್ಞಾನಿಕ ಸಮುದಾಯಕ್ಕೆ ಅವರು ಕರೆ ನೀಡಿದರು. 

ಸೀಮಿತ ಸಂಪನ್ಮೂಲದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ ವಿಶ್ವದರ್ಜೆಯ ಸಾಧನೆ ಮಾಡುತ್ತಿರುವ ವೈಜ್ಞಾನಿಕ ಸಮುದಾಯವನ್ನು ಅವರು ಶ್ಲಾಘಿಸಿದರು. ಈ ನಿಟ್ಟಿನಲ್ಲಿ ಭಾರತದ ಅತ್ಯಂತ ಯಶಸ್ವಿ ಇಸ್ರೋ ಬಾಹ್ಯಾಕಾಶ ಕಾರ್ಯಕ್ರಮಗಳು, ಭಾರತೀಯ ಔಷಧ ಕ್ಷೇತ್ರದಲ್ಲಿನ ಅದ್ಭುತ ವೃದ್ಧಿ ಮತ್ತು ವಿವಿಧ ಸಿ.ಎಸ್.ಐ.ಆರ್. ಉಪಕ್ರಮಗಳ ಪ್ರಸ್ತಾಪ ಮಾಡಿದರು. 

ಕಂದಕಗಳಾಚೆ ಚಿಂತಿಸುವ ಕುರಿತಂತೆ ಮಾತನಾಡಿದ ಪ್ರಧಾನಮಂತ್ರಿಯವರು, ವಿಜ್ಞಾನಿಗಳು ಮತ್ತು ಸಂಶೋಧಕರು ಅಂತರ ಶಿಸ್ತೀಯ ನಿಲುವು ಹೊಂದಿರಬೇಕು ಎಂದರು. ಇಂಥ ನಿಲುವು ಹಲವು ವೈಜ್ಞಾನಿಕ ಪ್ರಶ್ನೆಗಳಿಗೆ ತ್ವರಿತ ಮತ್ತು ಉತ್ತಮ ಪರಿಹಾರ ಪಡೆಯಲು ನೆರವಾಗುತ್ತದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. 

ಕೇಂದ್ರ ಸರ್ಕಾರದ ನೀತಿಗಳು ಭಾರತದ ಜನಸಂಖ್ಯೆ, ಪ್ರಜಾಪ್ರಭುತ್ವ ಮತ್ತು ದೇಶದಲ್ಲಿನ ಬೇಡಿಕೆಯ ಪ್ರಯೋಜನ ಪಡೆಯುವ ಗುರಿಯನ್ನು ಹೊಂದಿವೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಭಾರತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರವನ್ನು ಬಲಪಡಿಸಲು ಮತ್ತು ನಾವಿನ್ಯತೆಯನ್ನು ಹೆಚ್ಚಿಸಲು ಸರ್ಕಾರ ಕೈಗೊಂಡಿರುವ ವಿವಿಧ ಉಪಕ್ರಮಗಳ ಬಗ್ಗೆ ಉಲ್ಲೇಖಿಸಿದರು. 

ವಿಜ್ಞಾನ ಮತ್ತು ತಂತ್ರಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ಭಾರತೀಯರ ಅನುಪಮ ಕಾರ್ಯವನ್ನು ಗುರುತಿಸಿ ಪ್ರತಿ ವರ್ಷ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿಯನ್ನು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ ಸ್ಥಾಪಕ ನಿರ್ದೇಶಕ ಡಾ. ಶಾಂತಿ ಸ್ವರೂಪ್ ಭಟ್ನಾಗರ್ ಹೆಸರಿನಲ್ಲಿ ನೀಡಲಾಗುತ್ತದೆ. 
 

***



(Release ID: 1566923) Visitor Counter : 229