ಸಂಪುಟ
ಯುವ ವಿಚಾರಗಳ ಸಹಕಾರಕ್ಕಾಗಿ ಭಾರತ ಮತ್ತು ತಜಕಿಸ್ತಾನ್ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಸಮ್ಮತಿ
ಪ್ರಕಟಣಾ ದಿನಾಂಕ:
22 NOV 2018 1:34PM by PIB Bengaluru
ಯುವ ವಿಚಾರಗಳ ಸಹಕಾರಕ್ಕಾಗಿ ಭಾರತ ಮತ್ತು ತಜಕಿಸ್ತಾನ್ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಸಮ್ಮತಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಯುವ ವಿಚಾರಗಳ ಕುರಿತ ಸಹಕಾರಕ್ಕಾಗಿ ಭಾರತ ಮತ್ತು ತಜಕಿಸ್ತಾನ್ ನಡುವೆ ಆಗಿರುವ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಕ್ಕೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ. .
ಎರಡೂ ದೇಶಗಳ ನಡುವೆ ಯುವ ವಿಚಾರಗಳಲ್ಲಿ ಸಹಕಾರ ಉತ್ತೇಜಿಸಲು ಭಾರತ ಮತ್ತು ತಜಕೀಸ್ತಾನಗಳ ನಡುವೆ 8/10/2018ರಂದು ದುಶಾಂಬೆಯಲ್ಲಿ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲಾಗಿತ್ತು. ಈ ತಿಳಿವಳಿಕೆ ಒಪ್ಪಂದಕ್ಕೆ ಭಾರತ ಸರ್ಕಾರದ ಕ್ರೀಡಾ ಮತ್ತು ಯುವಜನ ವ್ಯವಹಾರಗಳ ಪರವಾಗಿ ತಜಕಿಸ್ತಾನದಲ್ಲಿನ ಭಾರತೀಯ ರಾಯಭಾರಿ ಶ್ರೀ ಸೋಮನಾಥ್ ಘೋಷ್ ಮತ್ತು ತಜಕಿಸ್ತಾನ್ ಗಣರಾಜ್ಯ ಸರ್ಕಾರದ ಯುವಜನ ಮತ್ತು ಕ್ರೀಡಾ ವ್ಯವಹಾರಗಳ ಸಮಿತಿಯ ಅಧ್ಯಕ್ಷ ಶ್ರೀ ಅಬ್ದುಲ್ಲೋಜೋಡಾ ಅಹತಮ್ ರುಸ್ತುಂ ಸಹಿ ಹಾಕಿದ್ದರು.
ಈ ತಿಳಿವಳಿಕೆ ಒಪ್ಪಂದವು ಐದು(5) ವರ್ಷಗಳವರೆಗೆ ಸಿಂಧುವಾಗಿರುತ್ತದೆ. ಯುವ ವಿಚಾರಗಳಲ್ಲಿನ ಸಹಕಾರದ ಕ್ಷೇತ್ರಗಳಲ್ಲಿ ಯುವಜನರ, ಯುವ ಸಂಘಟನೆಗಳ ಪ್ರತಿನಿಧಿಗಳ ಮತ್ತು ಯುವಜನರಿಗಾಗಿ ನೀತಿ ರೂಪಿಸುವ ಸರ್ಕಾರಿ ಅಧಿಕಾರಿಗಳ ವಿನಿಮಯ, ಎರಡೂ ರಾಷ್ಟ್ರಗಳಲ್ಲಿ ನಡೆಯುವ ಯುವ ವಿಚಾರಗಳ ಕುರಿತ ಅಂತಾರಾಷ್ಟ್ರೀಯ ಸಮಾವೇಶ ಮತ್ತು ವಿಚಾರಗೋಷ್ಠಿಗಳಿಗೆ ಆಮಂತ್ರಣ ನೀಡುವುದು, ಯುವಜನರ ವಿಚಾರಕ್ಕೆ ಸಂಬಂಧಿಸಿದ ಮುದ್ರಿತ ವಸ್ತುಗಳು, ಚಲನಚಿತ್ರ, ಅನುಭವ, ಸಂಶೋಧನೆ ಹಾಗೂ ಇತರ ಮಾಹಿತಿಗಳ ವಿನಿಮಯ, ಎರಡೂ ರಾಷ್ಟ್ರಗಳಲ್ಲಿ ನಡೆಯುವ ಯುವ ಕ್ಯಾಂಪಸ್, ಯುವ ಉತ್ಸವ ಮತ್ತು ಇತರ ಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ ಮತ್ತು ಎರಡೂ ರಾಷ್ಟ್ರಗಳ ಸೂಕ್ತ ಕಾನೂನು ಮತ್ತು ನಿಯಮಗಳ ಅಡಿಯಲ್ಲಿ ಜಂಟಿಯಾಗಿ ಅನುಮೋದನೆಗೊಂಡ ಯುವ ವಿಚಾರಗಳಿಗೆ ಸಂಬಂಧಿಸಿದಂತೆ ಯಾವುದೇ ಇತರ ಸಹಕಾರ ಚಟುವಟಿಕೆ ಇದರಲ್ಲಿ ಸೇರಿರುತ್ತದೆ. ಎರಡೂ ಕಡೆಗಳಲ್ಲಿ, ಆಯೋಜಿಸುವ ಕಾರ್ಯಕ್ರಮ ಮತ್ತು ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು, ಮಾಹಿತಿ ಮತ್ತು ಜ್ಞಾನ ಹಂಚಿಕೆ ಮತ್ತು ಯುವಜನರ ವಿನಿಮಯದ ಮೂಲಕ ತಾಜಾಕಿಸ್ತಾನ್ ಜೊತೆ ಯುವ ವಿಚಾರಗಳ ಮೇಲಿನ ಸಹಕಾರವನ್ನು ಬಲಪಡಿಸುವುದು ಎಂ.ಓ.ಯು.ನ ಉದ್ದೇಶವಾಗಿದೆ.
ಪ್ರಯೋಜನಗಳು:
ಈ ಒಪ್ಪಂದವು ಯುವ ವ್ಯವಹಾರಗಳ ಕ್ಷೇತ್ರದಲ್ಲಿ ವಿನಿಮಯ ಕಾರ್ಯಕ್ರಮಗಳಿಗೆ ಅವಕಾಶ ಕಲ್ಪಿಸುತ್ತದೆ, ಇದು ಕಲ್ಪನೆಗಳ ವಿನಿಮಯಕ್ಕೆ, ಯುವಜನರಲ್ಲಿ ಮೌಲ್ಯ ಮತ್ತು ಸಂಸ್ಕೃತಿ ಬೆಳೆಸಲು ಮತ್ತು ಭಾರತ ಮತ್ತು ತಜಕಿಸ್ತಾನಗಳ ನಡುವೆ ಸ್ನೇಹಪರ ಬಾಂಧವ್ಯಕ್ಕೆ ಉತ್ತೇಜನ ನೀಡಲು ನೆರವಾಗುತ್ತದೆ. ಎರಡೂ ದೇಶಗಳ ನಡುವಿನ ಅಂತಹ ದ್ವಿಪಕ್ಷೀಯ ವಿನಿಮಯ ಕಾರ್ಯಕ್ರಮಗಳಿಂದ ದೊರಕುವ ಪ್ರಯೋಜನಗಳು ಜಾತಿ, ಧರ್ಮ ಮತ್ತು ಲಿಂಗವನ್ನು ಹೊರತುಪಡಿಸಿ ಎಲ್ಲಾ ಯುವಜನರಿಗೆ ಸಮಾನವಾಗಿ ದೊರಕುತ್ತವೆ. ಇದು ಯವಜನರಲ್ಲಿ ಅಂತಾರಾಷ್ಟ್ರೀಯ ಪಾಲ್ಗೊಳ್ಳುವಿಕೆಯನ್ನು ಅಭಿವೃದ್ಧಿಪಡಿಸಲು ನೆರವಾಗುತ್ತದೆ ಮತ್ತು ಯುವ ವ್ಯವಹಾರಗಳ ಕ್ಷೇತ್ರದಲ್ಲಿ ಅವರ ಪರಿಣತಿ ಮತ್ತು ಜ್ಞಾನವನ್ನು ವಿಸ್ತರಿಸುತ್ತದೆ.
*******
(ಪ್ರಕಟಣೆ ಐ.ಡಿ.: 1553521)
ವಿಸಿಟರ್ ಕೌಂಟರ್ : 126