ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಿಯವರೊಂದಿಗಿನ ಸಂವಾದದ ವೇಳೆ ತಮ್ಮ ಯಶೋಗಾಥೆಯನ್ನು ಹಂಚಿಕೊಂಡ ಪ್ರಧಾನಮಂತ್ರಿ ಮುದ್ರಾ ಯೋಜನೆಯ ಫಲಾನುಭಾವಿಗಳು 

Posted On: 11 APR 2018 7:40PM by PIB Bengaluru

ಪ್ರಧಾನಿಯವರೊಂದಿಗಿನ ಸಂವಾದದ ವೇಳೆ ತಮ್ಮ ಯಶೋಗಾಥೆಯನ್ನು ಹಂಚಿಕೊಂಡ ಪ್ರಧಾನಮಂತ್ರಿ ಮುದ್ರಾ ಯೋಜನೆಯ ಫಲಾನುಭಾವಿಗಳು 
 

ಪ್ರಧಾನಮಂತ್ರಿ ಮುದ್ರಾ ಯೋಜನೆಯ ದೇಶಾದ್ಯಂತದ 100 ಫಲಾನುಭವಿಗಳು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರೊಂದಿಗೆ ಅವರ ನಿವಾಸದಲ್ಲಿ ಸಂವಾದ ನಡೆಸಿದರು.

ಶ್ರೀ ನರೇಂದ್ರ ಮೋದಿ ಅವರೊಂದಿಗಿನ ಅನೌಪಚಾರಿಕ ಸಂವಾದದ ವೇಳೆ ಹಲವು ಫಲಾನುಭವಿಗಳು, ತಮಗೆ ಮಂಜೂರಾದ ಮುದ್ರಾ ಸಾಲದ ಮೂಲಕ ತಮ್ಮ ಬದುಕು ಹೇಗೆ ಸುಧಾರಿಸಿತು ಎಂಬುದನ್ನು ವಿವರಿಸಿದರು.

2 ಲಕ್ಷ ಸಾಲ ಪಡೆದಿರುವ ಜಾರ್ಖಂಡ್ ನ ಬೊಕಾರೋವಿನ ಶ್ರೀಮತಿ. ಕಿರಣ್ ಕುಮಾರಿ, ತಮ್ಮದೇ ಸ್ವಂತ ಆಟಿಕೆ ಮತ್ತು ಉಡುಗೊರೆಯ ಅಂಗಡಿಯನ್ನು ತಾವು ಹೇಗೆ ಆರಂಭಿಸಿದೆ ಎಂಬುದನ್ನು ವಿವರಿಸಿದರು. ಇದಕ್ಕೂ ಮುನ್ನ ತಾವು ಮತ್ತು ತಮ್ಮ ಪತಿ ಬೀದಿಗಳಲ್ಲಿ ಆಟಿಕೆ ಮಾರುತ್ತಾ ಜೀವನ ನಡೆಸುತ್ತಿದ್ದುದಾಗಿ ಹೇಳಿದರು. ಸಾಲ ಪಡೆದ ತರುವಾಯ ಅವರು ತಮ್ಮನ್ನು ತಾವು ಯಶಸ್ವಿ ಉದ್ದಿಮೆದಾರರಾಗಿ ಗುರುತಿಸಿಕೊಂಡಿದ್ದಾರೆ.

ಸೂರತ್ ನ ಶ್ರೀಮತಿ ಮುನೀರಾಬಾನು ಶಬ್ಬೀರ್ ಹುಸೇನ್ ಮಲೇಕ್ 1.77 ಲಕ್ಷ ರೂಪಾಯಿ ಮುದ್ರಾ ಸಾಲ ಪಡೆದಿದ್ದಾರೆ. ಅವರು ತಾವು ಹೇಗೆ ಎಲ್.ಎಂ.ವಿ. ಚಾಲನಾ ತರಬೇತಿ ಪಡೆದು, ಈಗ ಆಟೋ ರಿಕ್ಷಾ ಓಡಿಸುವ ಮೂಲಕ ಮಾಸಿಕ 25,000 ರೂಪಾಯಿ ಗಳಿಸುತ್ತಿರುವುದನ್ನು ವಿವರಿಸಿದರು.

ಕೇರಳದ ಕಣ್ಣೂರಿನ ಶ್ರೀ ಸಿಜೇಶ್ ಪಿ, 8 ವರ್ಷಗಳ ಕಾಲ ವಿದೇಶದಲ್ಲಿ ಕೆಲಸ ಮಾಡಿದವರು. ಭಾರತಕ್ಕೆ ಮರಳಿದ ಬಳಿಕ, ಅವರು ವೈದ್ಯಕೀಯ ಘಟಕದಲ್ಲಿ ಮಾರಾಟದ ವ್ಯವಸ್ಥಾಪಕರಾಗಿ ಕೆಲಸ ಮಾಡಿದರು. ಅವರು ಪ್ರಧಾನಿಯವರಿಗೆ ಗಿಡಮೂಲಿಕೆಯ ದಂತ ಮಂಜನ ತಯಾರಿಕಾ ಘಟಕ ಸ್ಥಾಪಿಸಲು ಸಾಧ್ಯವಾದ್ದನ್ನು ವಿವರಿಸಿದರು. 8.55 ಲಕ್ಷ ರೂಪಾಯಿ ಮುದ್ರಾ ಸಾಲಕ್ಕೆ ಧನ್ಯವಾದ ಅರ್ಪಿಸಿದರು. ಅವರು ಪ್ರಧಾನಿಯವರಿಗೆ ಕೆಲವು ಮಾದರಿಗಳನ್ನುಅರ್ಪಿಸಿದರು.

ತೆಲಂಗಾಣದ ಶ್ರೀ. ಸಲೇಹುಂದುಂ ಗಿರಿಧರ್ ರಾವ್ ಅವರು ಪ್ರಧಾನಿಯವರೊಂದಿಗೆ ತಮ್ಮ ಉದ್ಯಮಶೀಲತೆಯ ಗಾಥೆಯನ್ನು ಹಂಚಿಕೊಂಡರು. ಅವರು 9.10 ಲಕ್ಷ ರೂಪಾಯಿಗಳ ಸಾಲವನ್ನು ಪಡೆದಿದ್ದು, ಡೈ ಕ್ಯಾಸ್ಟಿಂಗ್ ಮತ್ತು ಅಚ್ಚುಗಳ ಉದ್ದಿಮೆಯ ವಿಸ್ತರಣೆಗೆ ಬಳಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಕತುವಾ ಜಿಲ್ಲೆಯ ಶ್ರೀಮತಿ ವೀಣಾ ದೇವಿ ನೇಕಾರರಾಗಿ ಕೆಲಸ ಮಾಡುತ್ತಿದ್ದರು. ಅವರು 1 ಲಕ್ಷ ರೂಪಾಯಿ ಮುದ್ರಾ ಸಾಲ ಪಡೆದರು. ಈಗ ಅವರು ತಮ್ಮ ಪ್ರದೇಶದಲ್ಲಿ ಪಶ್ಮೀನಾ ಶಾಲುಗಳ ಪ್ರಮುಖ ಉತ್ಪಾದಕರಾಗಿದ್ದಾರೆ. ಇಂದು ಅವರು ಒಂದು ಪಶ್ಮೀನಾ ಶಾಲನ್ನು ಪ್ರಧಾನಮಂತ್ರಿ ಅವರಿಗೆ ಸಂವಾದದ ವೇಳೆ ಅರ್ಪಿಸಿದರು.

ಡೆಹರಾಡೂನ್ ನ ಶ್ರೀ ರಾಜೇಂದ್ರ ಸಿಂಗ್ ಮಾಜಿ ಯೋಧರು. ಅವರು ಪೊರಕೆ ತಯಾರಿಸಿ ಚಿಲ್ಲರೆ ವ್ಯಾಪಾರಿಗಳಿಗೆ ಪೂರೈಸುವ ತಮ್ಮ ವ್ಯಾಪಾರದ ಬಗ್ಗೆ ಪ್ರಧಾನಿಯವರಿಗೆ ತಿಳಿಸಿದರು. ಇದನ್ನು ಮುದ್ರಾಯೋಜನೆಯಿಂದ ಪಡೆದ 5 ಲಕ್ಷ ರೂಪಾಯಿಗಳಿಂದ ಸಾಧಿಸಿದ್ದಾಗಿ ತಿಳಿಸಿದರು. ಅವರು ಯಶಸ್ವಿಯಾಗಿ ವಾಣಿಜ್ಯ ಸ್ಥಾಪಿಸಿದ್ದಷ್ಟೇ ಅಲ್ಲ, ಜೊತೆಗೆ ಇತರ ಕೆಲವರಿಗೂ ಉದ್ಯೋಗ ಸೃಷ್ಟಿಸಿದ್ದಾರೆ. ಚೆನ್ನೈನ ಶ್ರೀ. ಟಿ.ಆರ್. ಸಂಜೀವನ್ 10 ಲಕ್ಷ ರೂಪಾಯಿ ಮುದ್ರಾ ಸಾಲ ಪಡೆದಿದ್ದಾರೆ. ಅವರು ಈಗ ತಾವು ಹೇಗೆ ಫೌಂಡರಿಗಳಿಗೆ ಜಾಬ್ ವರ್ಕ್ ಮಾಡಿಕೊಡುತ್ತಿದ್ದಾರೆ ಎಂಬುದನ್ನು ವಿವರಿಸಿದರು.

ಜಮ್ಮುವಿನ ಶ್ರೀ ಸತೀಶ್ ಕುಮಾರ್, ಅವರು 5 ಲಕ್ಷ ರೂಪಾಯಿಗಳ ಸಾಲ ಪಡೆದಿದ್ದಾರೆ. ಈ ಮುನ್ನ ಅವರು ನಿರುದ್ಯೋಗಿಯಾಗಿದ್ದರು. ಈಗ ಅವರು ಸ್ಟೀಲ್ ಉತ್ಪನ್ನ ಉತ್ಪಾದಿಸುವ ಮತ್ತು ಮಾರುವ ವಾಣಿಜ್ಯ ನಡೆಸುತ್ತಿದ್ದಾರೆ. ಅವರು ಇಂದು ಪ್ರಧಾನಿಯವರೊಂದಿಗೆ ತಮ್ಮ ಅನುಭವ ಹಂಚಿಕೊಂಡರು.

ಉತ್ತರಾಖಂಡದ ಉಧಾಮ್ ಸಿಂಗ್ ನಗರದ ಶ್ರೀ ವಿಪ್ಲವ ಸಿಂಗ್, ಒಂದು ಔಷಧ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಅವರಿಗೆ ತಮ್ಮದೇ ಸ್ವಂತ ವ್ಯಾಪಾರ ಆರಂಭಿಸುವ ಅಭಿಲಾಷೆ ಇತ್ತು. ಮುದ್ರಾದಿಂದ 5 ಲಕ್ಷ ರೂಪಾಯಿ ಸಾಲ ಪಡೆದು, ಅವರು ಕೀಟನಾಶಕ ಮತ್ತು ರಸಗೊಬ್ಬರ ಮಾರಾಟ ಮಾಡುವ ಸ್ವಂತ ವ್ಯಾಪಾರ ನಡೆಸುತ್ತಿದ್ದಾರೆ ಜೊತೆಗೆ ಇತರ ಹಲವರಿಗೆ ಉದ್ಯೋಗವನ್ನೂ ಸೃಷ್ಟಿಸಿಕೊಟ್ಟಿದ್ದಾರೆ. ಅವರು ಇಂದು ಪ್ರಧಾನಮಂತ್ರಿಯವರೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಇತರ ಹಲವು ಫಲಾನುಭವಿಗಳು ಕೂಡ ತಮ್ಮ ಅನುಭವಗಳನ್ನು ವಿನಿಮಯ ಮಾಡಿಕೊಂಡರು.

ಮುದ್ರಾ ಸಾಲವನ್ನು ಉತ್ತಮವಾಗಿ ಬಳಸಿಕೊಂಡ ಉದ್ಯಮಿಗಳ ಪ್ರಯತ್ನವನ್ನು ಪ್ರಧಾನಮಂತ್ರಿ ಶ್ಲಾಘಿಸಿದರು. ಈವರೆಗೆ 11 ಕೋಟಿ ಮಂದಿ ಪ್ರಧಾನಮಂತ್ರಿ ಮುದ್ರಾ ಯೋಜನೆಯ ಪ್ರಯೋಜನ ಪಡೆದಿದ್ದಾರೆ ಎಂದು ಅವರು ತಿಳಿಸಿದರು. ಈ ಯೋಜನೆಯ ಗುರಿಗಳಲ್ಲಿ ಜನರಲ್ಲಿ ಆತ್ಮ ವಿಶ್ವಾಸ ಹೆಚ್ಚಿಸುವುದೂ ಒಂದಾಗಿದೆ ಎಂದರು. ಈವರೆಗೆ ಉದ್ಯೋಗ ಸಾರ್ವಜನಿಕ ವಲಯದಲ್ಲಿ ಅಥವಾ ಖಾಸಗಿ ವಲಯದಲ್ಲಿ ಮಾತ್ರವೇ ಸೃಷ್ಟಿಯಾಗುತ್ತದೆ ಎಂಬ ಸಾಂಪ್ರದಾಯಿಕ ಚಿಂತನೆ ಇತ್ತು. ಈ ಯೋಜನೆ, ಸ್ವಯಂ ಉದ್ಯೋಗ ಮತ್ತು ಜೀವನೋಪಾಯದ ಮೂಲಕ ಪರ್ಸನಲ್ ಸೆಕ್ಟಾರ್ (ಸ್ವಯಂ ವಲಯ) ಅಭಿವೃದ್ಧಿಗೆ ನೆರವಾಗಿದೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ಮತ್ತು ಫಲಾನುಭವಿಗಳ ನಡುವಿನ ಅನೌಪಚಾರಿಕ ಸಂವಾದ, ಒಂದು ಗಂಟೆಗಳಿಗೂ ಹೆಚ್ಚು ಕಾಲ ನಡೆಯಿತು. ಹಣಕಾಸು ಖಾತೆ ಸಹಾಯಕ ಸಚಿವ, ಶ್ರೀ ಪೊನ್ ರಾಧಾಕೃಷ್ಣನ್ ಮತ್ತು ಶಿವ್ ಪ್ರತಾಪ್ ಶುಕ್ಲಾ ಈ ಸಂದರ್ಭದಲ್ಲಿ ಹಾಜರಿದ್ದರು.
 

***


(Release ID: 1528768) Visitor Counter : 135