ವೇವ್ಸ್ ಫಿಲ್ಮ್ ಬಜಾರ್‌ನ 20ನೇ ಆವೃತ್ತಿಯಲ್ಲಿ 471 ಖರೀದಿದಾರರು ಸೇರಿದಂತೆ 54 ದೇಶಗಳ 2,288 ಪ್ರತಿನಿಧಿಗಳು ಭಾಗವಹಿಸಿದರು. ಈ ಮೂಲಕ ಚಲನಚಿತ್ರ ನಿರ್ಮಾಪಕರನ್ನು ಒಗ್ಗೂಡಿಸುವ, ಪ್ರತಿಭೆಗಳನ್ನು ಪೋಷಿಸುವ ಹಾಗೂ ಭಾರತೀಯ ಮತ್ತು ಅಂತಾರಾಷ್ಟ್ರೀಯ ಸಿನಿಮಾಗಳ ನಡುವೆ ಸಂಪರ್ಕ ಬೆಸೆಯುವ ಎರಡು ದಶಕಗಳ ಪಯಣಕ್ಕೆ ಈ ಆವೃತ್ತಿ ಸಾಕ್ಷಿಯಾಯಿತು. 57ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (ಐಎಫ್‌ಎಫ್‌ಐ) ಜತೆಗೆ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮವು (ಎನ್‌ಎಫ್‌ಡಿಸಿ) ಆಯೋಜಿಸಿದ್ದ ಐದು ದಿನಗಳ ಈ ಮಾರುಕಟ್ಟೆಯಲ್ಲಿ ಭಾರತ–ಚಿಲಿ ಸಹನಿರ್ಮಾಣಗಳಿಗೆ ಸಂಬಂಧಿಸಿದ ಎರಡು ಉದ್ದೇಶ ಪತ್ರಗಳಿಗೆ ಸಹಿ ಹಾಕಲಾಯಿತು. ವ್ಯವಹಾರಿಕ ಸಂವಾದಗಳ ಫಲವಾಗಿ 14 ತಿಳಿವಳಿಕೆ ಒಪ್ಪಂದಗಳು ಹಾಗೂ ಒಪ್ಪಂದಗಳು ಅಂತಿಮಗೊಳ್ಳುವ ಹಂತದಲ್ಲಿವೆ.
ಭಾರತೀಯ ವಾರ್ತಾ ಶಾಖೆ (ಪಿಐಬಿ) ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಪ್ರಮುಖ ಫಲಿತಾಂಶಗಳನ್ನು ಹಂಚಿಕೊಂಡ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಪ್ರಭಾತ್, ಸಹನಿರ್ಮಾಣ ಮಾರುಕಟ್ಟೆಯಡಿ ಪೂರ್ವನಿಗದಿತ ಸುಮಾರು 220 ಮುಖಾಮುಖಿ ಸಭೆಗಳಿಗೆ ಅವಕಾಶ ಕಲ್ಪಿಸಲಾಯಿತು ಎಂದು ತಿಳಿಸಿದರು.
ಐಎಫ್‌ಎಫ್‌ಐ ಉತ್ಸವ ನಿರ್ದೇಶಕ ಶ್ರೀ ಆಶುತೋಷ್ ಗೋವಾರಿಕರ್, ಎನ್‌ಎಫ್‌ಡಿಸಿ ವ್ಯವಸ್ಥಾಪಕ ನಿರ್ದೇಶಕ ಶ್ರೀ ಧೀರಜ್ ಸಿಂಗ್ ಹಾಗೂ ವೇವ್ಸ್ ಫಿಲ್ಮ್ ಬಜಾರ್‌ನ ವಿಶೇಷ ಕರ್ತವ್ಯಾಧಿಕಾರಿ ಶ್ರೀ ಶ್ರೀರಾಗ್ ಎಂ. ಅವರೂ ಸಂವಾದದಲ್ಲಿ ಭಾಗವಹಿಸಿದ್ದರು.

20ನೇ ಆವೃತ್ತಿಯ ಪ್ರಮುಖಾಂಶಗಳು
ಸಹನಿರ್ಮಾಣ ಮಾರುಕಟ್ಟೆ
- ಎಂಟು ದೇಶಗಳು ಹಾಗೂ 13 ಭಾರತೀಯ ಭಾಷೆಗಳು ಸೇರಿದಂತೆ 16 ಭಾಷೆಗಳನ್ನು ಪ್ರತಿನಿಧಿಸುವ 25 ಯೋಜನೆಗಳು ಮಾರುಕಟ್ಟೆಯಲ್ಲಿ ಭಾಗವಹಿಸಿದ್ದವು.
- ಹೆಚ್ಚುವರಿ ವ್ಯವಹಾರಿಕ ಸಂವಾದಗಳ ಜತೆಗೆ, ಪೂರ್ವನಿಗದಿತ ಸುಮಾರು 220 ಮುಖಾಮುಖಿ ಸಭೆಗಳು ನಡೆದವು.
- ಆಯ್ಕೆಯಾದ ಪೂರ್ಣಾವಧಿ ಚಲನಚಿತ್ರ ಯೋಜನೆಗಳಲ್ಲಿ ಒಂದಾದ ‘ಹುರ್ದಾ (ದಟ್ ಟೈಟ್ ಗ್ರೀನ್ ಟಾಪ್)’ಗೆ ಖಾನ್ & ಕುಮಾರ್ ಮೀಡಿಯಾ ನಿರ್ಮಾಣ ಸಂಸ್ಥೆ ನಿರ್ಮಾಪಕನಾಗಿ ಸೇರ್ಪಡೆಗೊಂಡಿತು.
- ಭಾರತ–ಚಿಲಿ ಸಹನಿರ್ಮಾಣಗಳಿಗೆ ಸಂಬಂಧಿಸಿದ ಎರಡು ಉದ್ದೇಶ ಪತ್ರಗಳಿಗೆ ಸಹಿ ಹಾಕಲಾಯಿತು.
ಯೋಜನೆಗಳ ಅಭಿವೃದ್ಧಿ ಮತ್ತು ಚಿತ್ರೋದ್ಯಮದ ಅವಕಾಶಗಳು
ವೇವ್ಸ್ ಫಿಲ್ಮ್ ಬಜಾರ್ ತನ್ನ ಸಹನಿರ್ಮಾಣ ಮಾರುಕಟ್ಟೆ, ಚಿತ್ರಬರಹಗಾರರ ಪ್ರಯೋಗಾಲಯ, ನಿರ್ಮಾಣ ಹಂತದ ಚಿತ್ರಗಳ ಪ್ರಯೋಗಾಲಯ ಹಾಗೂ ವೀಕ್ಷಣಾ ಕೊಠಡಿಯ ಮೂಲಕ ಅಭಿವೃದ್ಧಿಯ ವಿವಿಧ ಹಂತಗಳಲ್ಲಿರುವ ಯೋಜನೆಗಳಿಗೆ ಬೆಂಬಲ ನೀಡಿತು.
- ವೀಕ್ಷಣಾ ಕೊಠಡಿಗೆ 170 ಯೋಜನೆಗಳ ನೋಂದಣಿಗಾಗಿ ಬಂದಿದ್ದವು. ಸುಮಾರು 100 ಗಂಟೆಗಳ ಅವಧಿಯಲ್ಲಿ 608 ಸಂದರ್ಶಕರು 155 ಚಿತ್ರಗಳನ್ನು ವೀಕ್ಷಿಸಿದರು. ಈ ಯೋಜನೆಗಳು 11 ದೇಶಗಳು ಹಾಗೂ ವೈವಿಧ್ಯಮಯ ಭಾಷೆಗಳನ್ನು ಪ್ರತಿನಿಧಿಸಿದ್ದವು.
- ಬೆಂಗಳೂರು ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವವು ತನ್ನ ಉತ್ಸವದ ಕಾರ್ಯಕ್ರಮಕ್ಕೆ ಪರಿಗಣಿಸಲು ವೀಕ್ಷಣಾ ಕೊಠಡಿಯಿಂದ ನಾಲ್ಕು ಕಿರುಚಿತ್ರಗಳನ್ನು ಆಯ್ಕೆ ಮಾಡಲಿದೆ. ಚಿತ್ರಮಂದಿರ ವಿತರಣೆ, ವಿಮಾನಯಾನದಲ್ಲಿನ ಮನರಂಜನೆ ಹಾಗೂ ಚಿತ್ರಮಂದಿರೇತರ ಪ್ರದರ್ಶನ ಹಕ್ಕುಗಳಿಗಾಗಿ ಪನೋರಮಾ ಸ್ಟುಡಿಯೋಸ್ ಕೆಲವು ಯೋಜನೆಗಳನ್ನು ಪರಿಗಣಿಸುತ್ತಿದೆ.
- ನಿರ್ಮಾಣ ಹಂತದ ಚಿತ್ರಗಳ ಪ್ರಯೋಗಾಲಯ ವಿಭಾಗಕ್ಕೆ ಬಂದ 53 ಯೋಜನೆಗಳಲ್ಲಿ ಐದು ಯೋಜನೆಗಳನ್ನು ಆಯ್ಕೆ ಮಾಡಲಾಯಿತು. ಪ್ರತಿ ಯೋಜನೆಗೂ ಚಿತ್ರೋದ್ಯಮದ ಮಾರ್ಗದರ್ಶಕರಿಂದ ಮೂರು ಪ್ರತಿಕ್ರಿಯಾ ಗೋಷ್ಠಿಗಳನ್ನು ಒದಗಿಸಲಾಯಿತು.
- ಚಿತ್ರಕಥೆಗಾರರ ಪ್ರಯೋಗಾಲಯದಲ್ಲಿ ಆಯ್ಕೆಯಾದ ಸಂಚಿತಾ ಸಿನ್ಹಾ ಅವರ ‘ದಿ ಜಪಾನೀಸ್ ವೈಫ್’ ಯೋಜನೆಗೆ ಚಿತ್ರನಿರ್ಮಾಪಕ ಸಂತೋಷ್ ಸಿಂಗ್ ನಿರ್ದೇಶಕರಾಗಿ ಹಾಗೂ ಸೂಪರ್ ಝೀರೋ ಫಿಲ್ಮ್ಸ್ ಸಹನಿರ್ಮಾಪಕ ಸಂಸ್ಥೆಯಾಗಿ ಸೇರ್ಪಡೆಗೊಂಡರು. ಟ್ರಾವೆಲಿನ್ ಬೋನ್ ಎಂಟರ್‌ಟೇನ್‌ಮೆಂಟ್ ಕೂಡ ಈ ಯೋಜನೆಯ ಭಾಗವಾಗಿದೆ.
ಪ್ರಶಸ್ತಿಗಳು ಮತ್ತು ವೃತ್ತಿಪರ ನೆರವು
- ವೇವ್ಸ್ ಫಿಲ್ಮ್ ಬಜಾರ್ ನಗದು ಅನುದಾನ, ವಿತರಣಾ ಅವಕಾಶಗಳು, ಫೆಲೋಶಿಪ್‌ಗಳು, ಪಾತ್ರಗಳಿಗೆ ಕಲಾವಿದರ ಆಯ್ಕೆ ಸೇವೆ ಹಾಗೂ ನಿರ್ಮಾಣೋತ್ತರ ನೆರವಿನ ಮೂಲಕ ಯೋಜನೆಗಳಿಗೆ ಆರ್ಥಿಕ ಮತ್ತು ವೃತ್ತಿಪರ ಬೆಂಬಲ ನೀಡಿತು.
ಎನ್‌ಎಫ್‌ಡಿಸಿ ನಗದು ಅನುದಾನಗಳು:
- ಗರಿಮಾ ಪುರಾ ನಿರ್ದೇಶನದ ‘ನೋಸ್ ಬೋನ್’ಗೆ 10,000 ಅಮೆರಿಕನ್ ಡಾಲರ್.
- ರಿಧಮ್ ಜಾನ್ವೆ ನಿರ್ದೇಶನದ ‘ಗುಡ್‌ಬೈ ಮಿಸ್ಟರ್ ಡಿ’ಮೆಲ್ಲೊ’ ಹಾಗೂ ಶ್ರೀಮಯೀ ಸಿಂಗ್ ನಿರ್ದೇಶನದ ‘ಫೈರ್‌ಫ್ಲವರ್ಸ್’ಗೆ ತಲಾ 5,000 ಅಮೆರಿಕನ್ ಡಾಲರ್.
ಇತರೆ ಪ್ರಶಸ್ತಿಗಳು ಮತ್ತು ನೆರವು:
- ರಿಬಾರ್ನ್ ಇಂಡಿಯಾ ಫಿಲ್ಮ್ ನಗದು ಅನುದಾನ: ಕುಶಾಲ್ ಕಿಶೋರ್ ಮತ್ತು ಕುಶಾಗ್ರ ಕಿಶೋರ್ ನಿರ್ದೇಶನದ ‘ಆ್ಯಂಡ್ ಆನ್ ದಟ್ ಡೇ…’ಗೆ 1 ಲಕ್ಷ ರೂ.
- ಮುಕೇಶ್ ಛಾಬ್ರಾ ಕಾಸ್ಟಿಂಗ್ ಪ್ರಶಸ್ತಿ: ‘ಗುಡ್‌ಬೈ ಮಿಸ್ಟರ್ ಡಿ’ಮೆಲ್ಲೊ’ಗೆ ಉಚಿತ ಕಲಾವಿದರ ಆಯ್ಕೆ ಸೇವೆ.
- ಪ್ರಸಾದ್ ಕಾರ್ಪೊರೇಷನ್ ನಿರ್ಮಾಣೋತ್ತರ ಪ್ರಶಸ್ತಿ: ಆದಿತ್ಯ ವೆಂಪಟಿ ನಿರ್ದೇಶನದ ‘ನದಿ’ಗೆ.
- ಮೈಕಾ ಕ್ರಿಯೇಟಿವ್ ಫೆಲೋಶಿಪ್: ಅಜಿತ್ ವೇಲಾಯುಧನ್ ನಿರ್ದೇಶನದ ‘ಆಟ್ಟುಮಾಲಿ (ಬೈ ದಿ ರಿವರ್)’ಗೆ.
- ಮೂವಿಬಫ್ ನಿರ್ಮಾಣೋತ್ತರ ಪ್ರಶಸ್ತಿಗಳು: ‘ಆರಾಮ್ ನಗರ್’, ‘ಕಾರೆಂಗ್’ ಮತ್ತು ‘ಚಕಚೌಂಧ್’ಗೆ.
- ರಿಬಾರ್ನ್ ಇಂಡಿಯಾ ಫಿಲ್ಮ್ ವಿತರಣಾ ಪ್ರಶಸ್ತಿ: ಮನೀಶ್ ಸೈನಿ ನಿರ್ದೇಶನದ ‘ಭಾಯ್ ಬಂದ್ (ಒನ್ ಟೂ ತ್ರೀ ಮೈಕ್ ಚೆಕ್)’ಗೆ.
ನಿರ್ಮಾಣ ಹಂತದ ಚಿತ್ರಗಳ ಪ್ರಯೋಗಾಲಯ ಪ್ರಶಸ್ತಿಗಳು:
- ‘ದಿ ಗಾರ್ಡನ್ ಆಫ್ ಅಸ್’ಗೆ ಪ್ರಸಾದ್ ಕಾರ್ಪೊರೇಷನ್ ನಿರ್ಮಾಣೋತ್ತರ ಪ್ರಶಸ್ತಿ. ‘ಫ್ಯಾಮಿಲಿ ಮ್ಯಾಟರ್’, ‘ಸಾಜಾ (ದಿ ಬ್ಲಾಕ್‌ಸ್ಟೋನ್ ರೇಶಿಯೊ)’ ಮತ್ತು ‘ವೇರ್ ಹ್ಯಾಸ್ ದಿ ರಿವರ್ ಗಾನ್’ಗೆ ವಿಶೇಷ ಪ್ರಶಸ್ತಿ.
- ‘ಆಟ್ಟುಮಾಲಿ (ಬೈ ದಿ ರಿವರ್)’ಗೆ ನ್ಯೂಬ್ ಸ್ಟುಡಿಯೋ ನಿರ್ಮಾಣೋತ್ತರ ಪ್ರಶಸ್ತಿ.
- ‘ದಿ ಗಾರ್ಡನ್ ಆಫ್ ಅಸ್’ಗೆ ಐಐಸಿಟಿ ನಿರ್ಮಾಣ ಹಂತದ ಚಿತ್ರಗಳ ಪ್ರಯೋಗಾಲಯ ಪ್ರಶಸ್ತಿ.
ಮಳಿಗೆಗಳು, ತಂತ್ರಜ್ಞಾನ ಮತ್ತು ನವೋದ್ಯಮಗಳು
- 12 ರಾಜ್ಯ ಮಳಿಗೆಗಳು(ಪೆವಿಲಿಯನ್) ಹಾಗೂ ನಾಲ್ಕು ದೇಶಗಳ ಮಂಟಪಗಳನ್ನು ಆಯೋಜಿಸಲಾಗಿತ್ತು. ರಷ್ಯಾ ಪಾಲುದಾರ ದೇಶವಾಗಿ ಭಾಗವಹಿಸಿತ್ತು.
- ಮಾರುಕಟ್ಟೆಯಲ್ಲಿ 22 ವಾಣಿಜ್ಯ ಮಳಿಗೆಗಳಿದ್ದವು.
- ತಂತ್ರಜ್ಞಾನ ವಿಭಾಗದಲ್ಲಿ ನೆಟ್‌ಫ್ಲಿಕ್ಸ್ ಮತ್ತು ಡಾಲ್ಫಿನ್ ಎಐ ಸೇರಿದಂತೆ ಹಲವು ಕಂಪನಿಗಳು ಭಾಗವಹಿಸಿದ್ದವು. ಡಾಲ್ಫಿನ್ ಎಐ ತನ್ನ ಎಐ ಸ್ಟುಡಿಯೋವನ್ನು ಮಾರುಕಟ್ಟೆಯಲ್ಲಿ ಆರಂಭಿಸಿತು.
- ವೇವ್‌ಎಕ್ಸ್ ನವೋದ್ಯಮ ಪ್ರದರ್ಶನವು ಮಾಧ್ಯಮ, ಮನರಂಜನೆ ಹಾಗೂ ಉದಯೋನ್ಮುಖ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 10 ನವೋದ್ಯಮಗಳನ್ನು ಒಗ್ಗೂಡಿಸಿತು.
- ಕಾರ್ಯಕ್ರಮದ ಬಳಿಕ ಸಂಗ್ರಹಿಸಿದ ಪ್ರತಿಕ್ರಿಯೆಗಳ ಪ್ರಕಾರ, ಭಾಗವಹಿಸಿದ್ದ ನವೋದ್ಯಮಗಳು 299ಕ್ಕೂ ಹೆಚ್ಚು ಸಭೆಗಳು ನಡೆದಿರುವುದಾಗಿ ವರದಿ ಮಾಡಿವೆ. ಆರು ನವೋದ್ಯಮಗಳಿಗೆ ಸಂಬಂಧಿಸಿದಂತೆ ಒಂದು ತಿಳಿವಳಿಕೆ ಒಪ್ಪಂದ ಸೇರಿದಂತೆ 14 ವ್ಯವಹಾರಗಳು ಮತ್ತು ಒಪ್ಪಂದಗಳು ನಡೆದಿವೆ.

ಜ್ಞಾನ ಸರಣಿ
ನವೆಂಬರ್ 21ರಿಂದ 24ರವರೆಗೆ ನಡೆದ ನಾಲ್ಕು ದಿನಗಳ ಜ್ಞಾನ ಸರಣಿಯಲ್ಲಿ 25 ಗೋಷ್ಠಿಗಳು ನಡೆದವು. ಭಾರತ ಮತ್ತು ವಿದೇಶಗಳ ಸುಮಾರು 127 ಗೋಷ್ಠಿ ತಜ್ಞರು ಹಾಗೂ 17 ಸಂಚಾಲಕರ ಜತೆಗೆ ನೆಟ್‌ಫ್ಲಿಕ್ಸ್ ಇಂಡಿಯಾ, ಪ್ರೈಮ್ ವಿಡಿಯೊ ಮತ್ತು ಅಮೆಜಾನ್ ಎಂಜಿಎಂ ಸ್ಟುಡಿಯೋಸ್‌ನಂತಹ ಪ್ರಮುಖ ಉದ್ಯಮ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಚರ್ಚೆಗಳು ಈ ವಿಷಯಗಳನ್ನು ಒಳಗೊಂಡಿದ್ದವು:
- ಭಾರತೀಯ ಕಥೆಗಳು ಮತ್ತು ಜಾಗತಿಕ ಬೌದ್ಧಿಕ ಆಸ್ತಿಯಾಗಿ ಅವುಗಳ ವಿಕಸನ.
- ಸ್ಟ್ರೀಮಿಂಗ್ ಪ್ರವೃತ್ತಿಗಳು ಮತ್ತು ಬದಲಾಗುತ್ತಿರುವ ಮನರಂಜನಾ ಕ್ಷೇತ್ರ.
- ಸ್ವತಂತ್ರ ಸಿನಿಮಾ ಮತ್ತು ಅಂತಾರಾಷ್ಟ್ರೀಯ ಸಹನಿರ್ಮಾಣಗಳು.
- ಚಲನಚಿತ್ರಗಳಿಗೆ ಹಣಕಾಸು ನೆರವು ಮತ್ತು ಪ್ರಾದೇಶಿಕ ಚಿತ್ರನಿರ್ಮಾಣದ ಪೂರಕ ವ್ಯವಸ್ಥೆಗಳು.
- ಅನಿಮೇಷನ್, ದೃಶ್ಯ ಪರಿಣಾಮಗಳು, ಗೇಮಿಂಗ್, ಕಾಮಿಕ್ಸ್ ಮತ್ತು ವಿಸ್ತೃತ ವಾಸ್ತವಿಕತೆ (ಎವಿಜಿಸಿ–ಎಕ್ಸ್‌ಆರ್), ಕೃತಕ ಬುದ್ಧಿಮತ್ತೆ ಹಾಗೂ ಉದಯೋನ್ಮುಖ ತಂತ್ರಜ್ಞಾನಗಳು.
- ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದಲ್ಲಿ ಭವಿಷ್ಯಕ್ಕೆ ಅಗತ್ಯವಾದ ಸೃಜನಶೀಲ ಕೌಶಲಗಳು ಹಾಗೂ ಅವಕಾಶಗಳು.
ಈ ಗೋಷ್ಠಿಗಳು ಚಿತ್ರನಿರ್ಮಾಪಕರು, ನಟರು, ನಿರ್ಮಾಪಕರು, ಒಟಿಟಿ ಕಾರ್ಯನಿರ್ವಾಹಕರು, ಚಿತ್ರೋತ್ಸವದ ಕಾರ್ಯಕ್ರಮ ರೂಪಿಸುವವರು, ವಿತರಕರು, ನೀತಿ ನಿರೂಪಕರು, ಹೂಡಿಕೆದಾರರು ಹಾಗೂ ತಂತ್ರಜ್ಞಾನ ವೃತ್ತಿಪರರನ್ನು ಒಗ್ಗೂಡಿಸಿದವು.
ಈ ಮಾರುಕಟ್ಟೆಯ ಪರಿಣಾಮಗಳು ಕಾಲಕ್ರಮೇಣ ಗೋಚರಿಸಲಿವೆ ಎಂದು ಅಭಿಪ್ರಾಯಪಟ್ಟ ಶ್ರೀ ಪ್ರಭಾತ್, ‘‘ಈ ಸಂವಾದಗಳು, ಇಷ್ಟೊಂದು ಬಿ2ಬಿ ಸಭೆಗಳು ಮತ್ತು ಚೈತನ್ಯಭರಿತ ಚರ್ಚೆಗಳು ಬಹುಶಃ ಮುಂದಿನ ವರ್ಷ, ಅದರ ಮುಂದಿನ ವರ್ಷ ಅಥವಾ ಮುಂಬರುವ ಮೂರು–ನಾಲ್ಕು ವರ್ಷಗಳಲ್ಲಿ ಫಲಿತಾಂಶ ನೀಡಲಿವೆ,’’ ಎಂದರು.
ಮಾನವ ಸೃಜನಶೀಲತೆ ಮತ್ತು ಭಾವನೆಗಳ ಕೇಂದ್ರಸ್ಥಾನವನ್ನು ಉಳಿಸಿಕೊಂಡೇ ಉದಯೋನ್ಮುಖ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಅಗತ್ಯತೆಯನ್ನು ಶ್ರೀ ಆಶುತೋಷ್ ಗೋವಾರಿಕರ್ ಬಲವಾಗಿ ಪ್ರತಿಪಾದಿಸಿದರು. ಎಐ ಚಿತ್ರನಿರ್ಮಾಪಕರಿಗೆ ನೆರವಾಗುವ ಸಾಧನವಾಗಬಹುದೇ ಹೊರತು ಮಾನವ ಹಸ್ತಕ್ಷೇಪವನ್ನು ಬದಲಿಸಲು ಸಾಧ್ಯವಿಲ್ಲ ಎಂದು ಹೇಳಿದರು. ತಾಂತ್ರಿಕ ಪ್ರಗತಿಯು ವಸ್ತುಪ್ರಧಾನ ಚಿತ್ರಗಳ ಮಹತ್ವವನ್ನು ಕುಗ್ಗಿಸದೆ, ಸಿನಿಮಾದ ಅಭಿವ್ಯಕ್ತಿಯ ಸಾಧ್ಯತೆಗಳನ್ನು ವಿಸ್ತರಿಸಲಿದೆ ಎಂದು ಅವರು ತಿಳಿಸಿದರು.
ಸ್ವತಂತ್ರ ಭಾರತೀಯ ಸಿನಿಮಾಗೆ ಈ ವೇದಿಕೆ ನೀಡುತ್ತಿರುವ ಕೊಡುಗೆಯನ್ನು ಶ್ರೀ ಎಂ. ಶ್ರೀರಾಗ್ ವಿವರಿಸಿದರು. ವೇವ್ಸ್ ಫಿಲ್ಮ್ ಬಜಾರ್‌ನ ಬೆಂಬಲ ಪಡೆದು, ಬಳಿಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮನ್ನಣೆ ಗಳಿಸಿದ ಯೋಜನೆಗಳಿಗೆ ಉದಾಹರಣೆಯಾಗಿ ‘ಆಟ್ಟಂ’, ‘ಬೂಮ್’ ಮತ್ತು ‘ಅಂಗ್’ ಚಿತ್ರಗಳನ್ನು ಅವರು ಉಲ್ಲೇಖಿಸಿದರು.
ಸುದ್ದಿಗೋಷ್ಠಿಯನ್ನು ಶ್ರೀ ಸಯ್ಯದ್ ರಬೀಹಾಶ್ಮಿ ನಿರ್ವಹಿಸಿದರು.
Read IFFILOID here: https://www.pib.gov.in/iffi/57/iffiLoid.aspx?yr=2026&lang=1®=48
*****