57th International Film Festival of India 2026
20 – 28 Nov 2026

ಚಿತ್ರೋತ್ಸವದ ಮಧ್ಯಂತರ ಸಿನಿಮಾ ‘ಐ ಮ್ಯಾಟರ್’ ಗುರುತು, ಆತ್ಮೀಯತೆ ಮತ್ತು ಮಾನವೀಯತೆಯ ಅನೇಕ ಸ್ತರಗಳನ್ನು ಅನ್ವೇಷಿಸುತ್ತದೆ: ಐಎಫ್‌ಎಫ್‌ಐ 2026 ರಲ್ಲಿ ನಿರ್ದೇಶಕರಾದ ಅಲಿನಾ ಸೆರ್ಬನ್


ಮುಖ್ಯ ಪಾತ್ರದಲ್ಲಿ ನಟಿಸಿದ್ದು, ನನ್ನ ರೋಮಾ (Roma) ಮೂಲಗಳನ್ನು ಹೆಮ್ಮೆಯಿಂದ ಅಪ್ಪಿಕೊಳ್ಳಲು ನನಗೆ ಸಹಾಯ ಮಾಡಿತು: ನಟಿ ಡೆನಿಸಾ ಫಾರ್ಕಾಸ್

ಪ್ರಕಟಣಾ ದಿನಾಂಕ: 24 NOV 2026 8:18PMby PIB Bengaluruಪ್ರಕಟಣೆ ಐ.ಡಿ.: 2341115Views: 3

ರೋಮಾ ಸಮುದಾಯಕ್ಕೆ ಸಂಬಂಧಿಸಿದ, ಇನ್ನೂ ಹೊರಬರದ ಅನೇಕ ಕಥೆಗಳು ಬೆಳಕಿಗೆ ಬರಲು ಕಾಯುತ್ತಿವೆ ಎಂದು ರೊಮೇನಿಯನ್-ರೋಮಾ ಚಲನಚಿತ್ರ ನಿರ್ಮಾಪಕಿ ಅಲಿನಾ ಶೆರ್ಬಾನ್ ಹೇಳಿದ್ದಾರೆ. ಅವರು ಗೋವಾದಲ್ಲಿ ನಡೆಯುತ್ತಿರುವ 57ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಐಎಫ್‌ಎಫ್‌ಐ) 'ಐ ಮ್ಯಾಟರ್' ಎಂಬ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಇಂದು ಐಎಫ್‌ಎಫ್‌ಐ ಸಂದರ್ಭದಲ್ಲಿ 'ಪ್ರೆಸ್ ಇನ್ಫರ್ಮೇಷನ್ ಬ್ಯೂರೋ' ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶೆರ್ಬಾನ್, ಈ ಚಿತ್ರದ ಹಿಂದಿನ ಸ್ಫೂರ್ತಿ, ಇದರಲ್ಲಿ ರೋಮಾ ಸಮುದಾಯವನ್ನು ಚಿತ್ರಿಸಿರುವ ರೀತಿ ಮತ್ತು ಚಲನಚಿತ್ರದ ಮೂಲಕ ರೂಢಿಗತ ನಂಬಿಕೆಗಳನ್ನು ಪ್ರಶ್ನಿಸುವ ಮಹತ್ವದ ಬಗ್ಗೆ ವಿವರಿಸಿದರು. ಈ ಸಂವಾದದಲ್ಲಿ ಚಿತ್ರದ ಪ್ರಮುಖ ನಟಿಯರಾದ ಡೆನಿಸಾ ಫಾರ್ಕಾಸ್ ಮತ್ತು ವನೆಸ್ಸಾ ಡಾನ್ಸಿಯಾ ಕೂಡ ಭಾಗವಹಿಸಿದ್ದರು.

ರೊಮೇನಿಯನ್ ಮತ್ತು ರೋಮಾನಿ ಭಾಷೆಗಳಲ್ಲಿ ಸಂಭಾಷಣೆಗಳನ್ನು ಒಳಗೊಂಡಿರುವ 'ಐ ಮ್ಯಾಟರ್' ಚಿತ್ರದ ಭಾರತೀಯ ಪ್ರಥಮ ಪ್ರದರ್ಶನವು ಇಂದು ಐಎಫ್‌ಎಫ್‌ಐನಲ್ಲಿ ನಡೆಯಿತು. ರೊಮೇನಿಯಾ, ಜರ್ಮನಿ ಮತ್ತು ಬೆಲ್ಜಿಯಂ ದೇಶಗಳ ಸಹಯೋಗದಲ್ಲಿ ನಿರ್ಮಾಣವಾದ ಈ ಚಿತ್ರವು; ಅಸ್ತಿತ್ವ, ಕುಟುಂಬ, ಒಡೆತನದ ಭಾವನೆ ಮತ್ತು ಗತಕಾಲವನ್ನು ಮೀರಿ ಭವಿಷ್ಯವನ್ನು ರೂಪಿಸಿಕೊಳ್ಳುವ ಪ್ರಯತ್ನಗಳನ್ನು ಪರಿಶೋಧಿಸುತ್ತದೆ. ಇದು ಅನಾಥಾಶ್ರಮವನ್ನೇ ತನ್ನ ಮನೆಯನ್ನಾಗಿಸಿಕೊಂಡಿದ್ದ ರೆಬೆಕಾ ಎಂಬ ಯುವ ರೋಮಾ ಮಹಿಳೆಯ ಕಥೆಯನ್ನು ಹೇಳುತ್ತದೆ. ಜೈಲಿನಿಂದ ಬಿಡುಗಡೆಯಾಗಲಿರುವ ತನ್ನ ತಂದೆಯೊಂದಿಗೆ ಮತ್ತೆ ಒಂದಾಗಲು ಮತ್ತು ತಾನು ಸದಾ ಕನಸು ಕಂಡಿದ್ದ ಕುಟುಂಬವನ್ನು ಕಟ್ಟಿಕೊಳ್ಳಲು ಆಕೆ ಬಯಸುತ್ತಾಳೆ. ಇದೇ ಸಮಯದಲ್ಲಿ, ನಟನೆಯನ್ನು ಅಧ್ಯಯನ ಮಾಡಲು ವಿಶ್ವವಿದ್ಯಾಲಯಕ್ಕೆ ಪ್ರವೇಶ ಪಡೆಯುವುದು ಆಕೆಯ ಜೀವನದಲ್ಲಿ ಒಂದು ಹೊಸ ಆರಂಭಕ್ಕೆ ದಾರಿ ಮಾಡಿಕೊಡುತ್ತದೆ.

ಚಲನಚಿತ್ರದ ಮೂಲಕ ರೂಢಿಗತ ನಂಬಿಕೆಗಳನ್ನು ಪ್ರಶ್ನಿಸುವ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಚಿತ್ರವು ಮಾನವೀಯತೆಯ ವಿವಿಧ ಆಯಾಮಗಳನ್ನು ಅನ್ವೇಷಿಸಲು ಪ್ರಯತ್ನಿಸುತ್ತದೆ ಎಂದು ಹೇಳಿದರು. "ಮಾನವನಾಗಿ ಪರಿಗಣಿಸಲ್ಪಡಲು ಯಾರು ಅರ್ಹರು ಎಂಬ ಪ್ರಶ್ನೆಯನ್ನು ಈ ಚಿತ್ರ ಎತ್ತುತ್ತದೆ. ನಾನು ಮಾನವೀಯತೆಯ ವಿವಿಧ ಸ್ತರಗಳನ್ನು ತೆರೆದಿಡಲು ಬಯಸುತ್ತೇನೆ," ಎಂದು ಅವರು ತಿಳಿಸಿದರು. ಅಲ್ಲದೆ, ಐಎಫ್‌ಎಫ್‌ಐ ನ ಭಾಗವಾಗಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ ಅವರು, ಭಾರತಕ್ಕೆ ಬಂದಿರುವುದನ್ನು 'ತನ್ನ ಮನೆಗೆ ಮರಳಿದ ಅನುಭವ' ಎಂದು ಬಣ್ಣಿಸಿದರು.

ತೆರೆಯ ಮೇಲೆ ರೋಮಾ ಸಮುದಾಯವನ್ನು ಪ್ರತಿನಿಧಿಸುವಲ್ಲಿರುವ ಸವಾಲುಗಳನ್ನು ಉಲ್ಲೇಖಿಸಿದ ಶೆರ್ಬಾನ್, ಈ ಸಮುದಾಯವು ಗಮನಾರ್ಹ ಸಾಂಸ್ಕೃತಿಕ ಪ್ರಭಾವವನ್ನು ಹೊಂದಿದ್ದರೂ, ಸಮಾಜದ ಅಂಚಿನಲ್ಲೇ ಉಳಿದುಕೊಂಡಿದೆ ಎಂದು ವಿಷಾದಿಸಿದರು. "ಫ್ಲೆಮೆಂಕೊ ನಂತಹ ನಮ್ಮ ಸಂಸ್ಕೃತಿಯು ಜಾಗತಿಕ ಸಂಸ್ಕೃತಿಯ ಮೇಲೆ ಪ್ರಭಾವ ಬೀರಿದೆ. ಆದರೂ, ನಾವು ಇನ್ನೂ ಸಮಾಜದ ಅಂಚಿನಲ್ಲಿದ್ದೇವೆ. ನಾವು ಇತರ ಜನರೊಂದಿಗೆ ಬಹಳ ಹತ್ತಿರದಲ್ಲಿ ವಾಸಿಸುತ್ತಿದ್ದರೂ, ಅವರಿಗೆ ನಮ್ಮ ಬಗ್ಗೆ ಇನ್ನೂ ತಿಳಿದಿಲ್ಲ" ಎಂದು ಅವರು ಹೇಳಿದರು.

ಚಿತ್ರವು ಸಬಲೀಕರಣದ ಸಂದೇಶವನ್ನು ಸಾರುತ್ತದೆ ಎಂದು ಒತ್ತಿ ಹೇಳಿದ ಶೆರ್ಬಾನ್, ವಿಶೇಷವಾಗಿ ಹಿಂದುಳಿದ ಹಿನ್ನೆಲೆಯಿಂದ ಬಂದ ಯುವಜನರನ್ನು ತಲುಪಲು ತಾನು ಬಯಸುವುದಾಗಿ ತಿಳಿಸಿದರು. "ಮುಖ್ಯವಾಗಿ, ಹಿಂದುಳಿದ ವರ್ಗಗಳ ಯುವಜನರಿಗೆ ಶಕ್ತಿ ತುಂಬುವಂತಹ ಕಥೆಯೊಂದನ್ನು ಹೇಳಲು ನಾನು ಬಯಸಿದೆ. ನನಗೂ ಒಂದು ಕಾಲದಲ್ಲಿ ಕೇಳಿಸಿಕೊಳ್ಳುವ ಅಗತ್ಯವಿದ್ದ ವಿಷಯವನ್ನೇ ನಾನು ಅವರಿಗೆ ಹೇಳಲು ಬಯಸಿದೆ: 'ನಾನು ಎಲ್ಲವನ್ನೂ ನಿಭಾಯಿಸಬಲ್ಲೆ' ಮತ್ತು 'ಈ ಜಗತ್ತಿನಲ್ಲಿ ನಮ್ಮಲ್ಲಿ ಪ್ರತಿಯೊಬ್ಬರಿಗೂ ಒಂದು ಸಣ್ಣ ಜಾಗವಿದೆ'," ಎಂದು ಅವರು ಹೇಳಿದರು.

ಚಿತ್ರದಲ್ಲಿ 'ರೆಬೆಕಾ' ಪಾತ್ರವನ್ನು ನಿರ್ವಹಿಸಿರುವ ನಟಿ ಡೆನಿಸಾ ಫಾರ್ಕಾಸ್, ಈ ಚಲನಚಿತ್ರವು ತನ್ನ ವೈಯಕ್ತಿಕ ಅಸ್ತಿತ್ವದೊಂದಿಗಿನ ಸಂಬಂಧವನ್ನೇ ಬದಲಾಯಿಸಿದ, ಅತ್ಯಂತ ಆಪ್ತವಾದ ಅನುಭವ ಎಂದು ಬಣ್ಣಿಸಿದರು.  'ರೋಮಾ' ಜನಾಂಗೀಯ ಹಿನ್ನೆಲೆಯನ್ನು ಒಪ್ಪಿಕೊಳ್ಳಲು ಆರಂಭದಲ್ಲಿ ತಮಗಿದ್ದ ಹಿಂಜರಿಕೆಯನ್ನು ನೆನಪಿಸಿಕೊಂಡ ಅವರು, "ಮೊದಲ ಬಾರಿಗೆ, ನಾನು ರೋಮಾ ಜನರನ್ನು ಸಕಾರಾತ್ಮಕ ದೃಷ್ಟಿಕೋನದಿಂದ ನೋಡಿದೆ," ಎಂದು ಹೇಳಿದರು. ಈ ಪಾತ್ರವನ್ನು ನಿರ್ವಹಿಸುವುದು, ತಮ್ಮ ಅಸ್ತಿತ್ವಕ್ಕೆ ಸಂಬಂಧಿಸಿದ ಅವಮಾನದ ಭಾವನೆಯನ್ನು ಹೋಗಲಾಡಿಸಲು ಮತ್ತು ತಮ್ಮ ಮೂಲವನ್ನು ಹೆಮ್ಮೆಯಿಂದ ಸ್ವೀಕರಿಸಲು ಸಹಾಯ ಮಾಡಿತು ಎಂದು ಅವರು ತಿಳಿಸಿದರು. "ನಾನು ರೋಮಾ ಜನಾಂಗಕ್ಕೆ ಸೇರಿದವಳು ಎಂಬ ಬಗ್ಗೆ ನನಗೆ ಹೆಮ್ಮೆಯಿದೆ," ಎಂದು ಹೇಳಿದ ಅವರು, ತಮ್ಮ ಸಮುದಾಯದ ಮತ್ತು ಅಲ್ಲಿನ ಮಕ್ಕಳ ಕಥೆಗಳು ಅಂತಿಮವಾಗಿ ಜಗತ್ತಿಗೆ ಕೇಳಿಸುತ್ತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು.

ಈ ಅಧಿವೇಶನವನ್ನು ಪ್ರಾಂಜಲ್ ರೈ ಅವರು ನಿರ್ವಹಿಸಿದರು.

Read IFFILOID here: https://www.pib.gov.in/iffi/57/iffiLoid.aspx?yr=2026&lang=1&reg=48

 

*****


Great films resonate through passionate voices. Share your love for cinema with #IFFI2026 and #StoriesWithoutBorders. Tag us @pibindia on Instagram and @PIB_India on X, and we will help amplify your festival moments!

For accredited journalists, critics, bloggers, and vloggers seeking 1-on-1 interviews with filmmakers and festival juries, write to us at:
iffi.mediadesk@pib.gov.in with the subject line: Take One with PIB.


Official Release ID: 2341115
•
Media Centre: Goa
•
Festival Dates: Nov 20 – 28, 2026