ಸಿನಿಮಾ, ತಲೆಮಾರುಗಳ ಕಲ್ಪನೆಯನ್ನು ಸೆರೆಹಿಡಿಯುತ್ತದೆ, ಸಮಾಜವನ್ನು ಪ್ರತಿಬಿಂಬಿಸುತ್ತದೆ, ನೆನಪುಗಳನ್ನು ಸಂರಕ್ಷಿಸುತ್ತದೆ ಮತ್ತು ಸಾಂಸ್ಕೃತಿಕ ಅಸ್ಮಿತೆಗಳನ್ನು ರೂಪಿಸುತ್ತದೆ. ಪರದೆಯ ಮೇಲಿನ ಚಲಿಸುವ ಚಿತ್ರಗಳ ಆಚೆಗೆ, ಸಿನಿಮೀಯ ಭೂದೃಶ್ಯವನ್ನು ರೂಪಿಸುವ ಆಲೋಚನೆಗಳು, ಸೃಜನಶೀಲ ಪ್ರಕ್ರಿಯೆಗಳು ಮತ್ತು ಪಯಣಗಳನ್ನು ದಾಖಲಿಸುವಲ್ಲಿ ಪುಸ್ತಕಗಳು ಅಷ್ಟೇ ಪ್ರಮುಖ ಪಾತ್ರ ವಹಿಸುತ್ತವೆ. ಈ ಮಹತ್ವವನ್ನು ಗುರುತಿಸಿ, ಪ್ರಕಟಣಾ ವಿಭಾಗವು (Publications Division) 57 ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (IFFI) 2026 ರಲ್ಲಿ ಭಾರತದ ಸಿನಿಮಾ ಪರಂಪರೆಯ ವಿವಿಧ ಆಯಾಮಗಳನ್ನು ಸಂಭ್ರಮಿಸುವ ಎರಡು ಪುಸ್ತಕಗಳನ್ನು ಬಿಡುಗಡೆ ಮಾಡಿತು.
_20261121192235_b759c7.jpeg)
ಈ ಸಂದರ್ಭದಲ್ಲಿ ಮಾತನಾಡಿದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಚಂಚಲ್ ಕುಮಾರ್ ಅವರು, ಚಲನಚಿತ್ರಗಳ ಹಿಂದಿನ ಸೃಜನಶೀಲ ಪಯಣಗಳನ್ನು ದಾಖಲಿಸುವ ಮತ್ತು ಮುಂದಿನ ಪೀಳಿಗೆಗಾಗಿ ಭಾರತದ ಶ್ರೀಮಂತ ಸಿನಿಮಾ ಪರಂಪರೆಯನ್ನು ಸಂರಕ್ಷಿಸುವ ಮಹತ್ವವನ್ನು ಒತ್ತಿ ಹೇಳಿದರು. ಸಿನಿಮಾ ಕೇವಲ ಮನರಂಜನೆಯ ಮಾಧ್ಯಮವಲ್ಲ, ಅದು ಸಮಾಜ, ವಿವಿಧ ತಲೆಮಾರುಗಳ ಸ್ಪೂರ್ತಿ ಮತ್ತು ವಿಕಸನಗೊಳ್ಳುತ್ತಿರುವ ಆಲೋಚನೆಗಳ ಪ್ರತಿಬಿಂಬವೂ ಆಗಿದೆ ಎಂದು ಅವರು ಅಭಿಪ್ರಾಯಪಟ್ಟರು. "ಚಲನಚಿತ್ರಗಳು ನಮಗೆ ಒಂದು ಕಥೆಯನ್ನು ಹೇಳುತ್ತವೆ. ಸಿನಿಮಾ ಕುರಿತ ಪುಸ್ತಕಗಳು ಈ ಕಥೆಗಳು ಹೇಗೆ ಜೀವ ತಳೆದವು ಎಂಬುದನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತವೆ" ಎಂದು ಹೇಳಿದ ಅವರು, ಚಲನಚಿತ್ರ ನಿರ್ಮಾಪಕರ ಅನುಭವಗಳು, ಸಿನಿಮೀಯ ತಂತ್ರಗಳ ವಿಕಸನ ಮತ್ತು ಭಾರತೀಯ ಸಿನಿಮಾವನ್ನು ರೂಪಿಸಿದ ಆಲೋಚನೆಗಳ ಕುರಿತು ಪ್ರಕಟಣೆಗಳು ಹೇಗೆ ಮೌಲ್ಯಯುತ ಒಳನೋಟಗಳನ್ನು ನೀಡುತ್ತವೆ ಎಂಬುದನ್ನು ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು.
ಈ ಸಂದರ್ಭದಲ್ಲಿ ಬಿಡುಗಡೆಯಾದ ಎರಡು ಪುಸ್ತಕಗಳೆಂದರೆ, ಶ್ರೀ ರಾಜೇಂದ್ರ ಭಟ್ ಅವರು ಸಂಕಲಿಸಿದ 'ಸಿನಿಮಾ: ವಿವಿಧ ಆಯಾಮ್' (Cinema: Vividh Aayam) ಮತ್ತು ಶ್ರೀ ವಿನೋದ್ ಕೌಲ್ ಅವರು ರಚಿಸಿದ 'ಅವತಾರ್ ಕೌಲ್: ದಿ (ಇನ್)ಕಂಪ್ಲೀಟ್ ಸ್ಟೋರಿ' (Awtar Kaul: The (In)Complete Story). ಮೊದಲನೆಯದು ಸಿನಿಮಾದ ಕುರಿತಾದ ಪ್ರಮುಖ ಬರಹಗಳು ಮತ್ತು ದೃಷ್ಟಿಕೋನಗಳನ್ನು ಒಟ್ಟುಗೂಡಿಸಿ ಹಿಂದಿ ಓದುಗರಿಗೆ ಲಭ್ಯವಾಗುವಂತೆ ಮಾಡಿದರೆ, ಎರಡನೆಯದು ಚಲನಚಿತ್ರ ನಿರ್ಮಾಪಕ ಅವತಾರ್ ಕೌಲ್ ಅವರ ಜೀವನ ಮತ್ತು ಅಪೂರ್ಣ ಸೃಜನಶೀಲ ಪರಂಪರೆಯನ್ನು ದಾಖಲಿಸುತ್ತದೆ.

'ಸಿನಿಮಾ: ವಿವಿಧ ಆಯಾಮ್' ಕೃತಿಯನ್ನು ಉಲ್ಲೇಖಿಸಿದ ಶ್ರೀ ಚಂಚಲ್ ಕುಮಾರ್ ಅವರು, ಖ್ಯಾತ ಚಲನಚಿತ್ರಗಳು, ಚಲನಚಿತ್ರ ನಿರ್ಮಾಣ ಮತ್ತು ವಿಶ್ವ ಸಿನಿಮಾದ ಕುರಿತು ಒಳನೋಟಗಳನ್ನು ನೀಡುವ ಚಲನಚಿತ್ರ ನಿರ್ಮಾಪಕರು ಮತ್ತು ವಿದ್ವಾಂಸರ ಬರಹಗಳ ಸಂಗ್ರಹವನ್ನು ಶ್ಲಾಘಿಸಿದರು. ಈ ಕೃತಿಗಳನ್ನು ಹಿಂದಿ ಓದುಗರಿಗೆ ತಲುಪಿಸುವ ಪ್ರಯತ್ನವನ್ನು ಅವರು ವಿಶೇಷವಾಗಿ ಮೆಚ್ಚಿಕೊಂಡರು. 'ಅವತಾರ್ ಕೌಲ್: ದಿ (ಇನ್)ಕಂಪ್ಲೀಟ್ ಸ್ಟೋರಿ' ಕುರಿತು ಮಾತನಾಡಿದ ಅವರು, ಚಲನಚಿತ್ರ ನಿರ್ಮಾಪಕ ಅವತಾರ್ ಕೌಲ್ ಅವರ ಪರಂಪರೆಯನ್ನು ಸ್ಮರಿಸಿದರು; ಅವರ ಏಕೈಕ ಚಿತ್ರ '27 ಡೌನ್' (1974) ಭಾರತೀಯ ನವ ಅಲೆ (New Wave) ಸಿನಿಮಾದ ಒಂದು ಮೈಲಿಗಲ್ಲಾಯಿತು.
ಪ್ರಕಟಣಾ ವಿಭಾಗ, ಶ್ರೀ ರಾಜೇಂದ್ರ ಭಟ್, ಶ್ರೀ ವಿನೋದ್ ಕೌಲ್ ಮತ್ತು ಈ ಪ್ರಕಟಣೆಗಳೊಂದಿಗೆ ಸಂಬಂಧ ಹೊಂದಿರುವ ಎಲ್ಲರನ್ನೂ ಅಭಿನಂದಿಸಿದ ಕಾರ್ಯದರ್ಶಿಯವರು, ಈ ಪುಸ್ತಕಗಳು ವಿದ್ಯಾರ್ಥಿಗಳು, ಚಲನಚಿತ್ರ ನಿರ್ಮಾಪಕರು ಮತ್ತು ಸಿನಿಮಾ ಆಸಕ್ತರಿಗೆ ಭಾರತದ ಸಿನಿಮಾ ಪರಂಪರೆಯನ್ನು ಇನ್ನಷ್ಟು ಆಳವಾಗಿ ಅನ್ವೇಷಿಸಲು ಸ್ಫೂರ್ತಿ ನೀಡುತ್ತವೆ ಎಂದು ಆಶಯ ವ್ಯಕ್ತಪಡಿಸಿದರು.

ಪ್ರಕಟಣಾ ವಿಭಾಗದ ಮಹಾನಿರ್ದೇಶಕಿ ಶ್ರೀಮತಿ ಕಾಂಚನ್ ಪ್ರಸಾದ್ ಅವರು, ಸಿನಿಮಾದೊಂದಿಗಿನ ವಿಭಾಗದ ದೀರ್ಘಕಾಲದ ಒಡನಾಟ ಮತ್ತು ಭಾರತದ ಸಾಂಸ್ಕೃತಿಕ ಹಾಗೂ ಸೃಜನಶೀಲ ಪರಂಪರೆಯನ್ನು ದಾಖಲಿಸುವಲ್ಲಿ ಅದರ ಪಾತ್ರದ ಕುರಿತು ಒತ್ತಿ ಹೇಳಿದರು. ಸಿನಿಮಾ, ಕಾಲದ ಕ್ಷಣಗಳನ್ನು ಸೆರೆಹಿಡಿದರೆ, ಪುಸ್ತಕಗಳು ಆ ಕ್ಷಣಗಳನ್ನು ಸಂರಕ್ಷಿಸುವುದನ್ನು ಖಚಿತಪಡಿಸುತ್ತವೆ ಎಂದು ಅಭಿಪ್ರಾಯಪಟ್ಟ ಅವರು, ಸೃಜನಶೀಲ ಪಯಣಗಳನ್ನು ದಾಖಲಿಸಲು, ಕಥೆಗಳನ್ನು ಸಂರಕ್ಷಿಸಲು ಮತ್ತು ಭಾರತದ ಸಾಂಸ್ಕೃತಿಕ ಅಸ್ಮಿತೆಯನ್ನು ರೂಪಿಸಿದವರ ಕೊಡುಗೆಗಳನ್ನು ಸಂಭ್ರಮಿಸಲು ವಿಭಾಗವು ನಡೆಸುತ್ತಿರುವ ಪ್ರಯತ್ನಗಳ ಕುರಿತು ಮಾತನಾಡಿದರು.
ಶ್ರೀ ರಾಜೇಂದ್ರ ಭಟ್ ಅವರು, 'ಸಿನಿಮಾ: ವಿವಿಧ ಆಯಾಮ್' ಹಿಂದಿನ ಸಂಪಾದಕೀಯ ಪಯಣವನ್ನು ವಿವರಿಸಿದರು, ಸಿನಿಮಾದ ಕುರಿತಾದ ಪ್ರಮುಖ ಬರಹಗಳನ್ನು ಹಿಂದಿ ಓದುಗರಿಗೆ ತಲುಪಿಸುವ ಉಪಕ್ರಮವನ್ನು ಪ್ರಕಟಣಾ ವಿಭಾಗವು ಹೇಗೆ ಮುನ್ನಡೆಸಿತು ಎಂಬುದನ್ನು ತಿಳಿಸಿದರು.
ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಪ್ರಭಾತ್ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಜಂಟಿ ಕಾರ್ಯದರ್ಶಿ ಡಾ. ಕೆ. ಕೆ. ನಿರಾಲಾ ಅವರ ಉಪಸ್ಥಿತಿಯಲ್ಲಿ, ಪತ್ರಿಕಾ ಮಾಹಿತಿ ಕಾರ್ಯಾಲಯದ (PIB) ಮಹಾನಿರ್ದೇಶಕಿ ಶ್ರೀಮತಿ ಸ್ಮಿತಾ ವತ್ಸ್ ಶರ್ಮಾ ಅವರು ಈ ಗೋಷ್ಠಿಯನ್ನು ನಿರ್ವಹಿಸಿದರು.

ಪುಸ್ತಕಗಳ ಕುರಿತು
ಅವತಾರ್ ಕೌಲ್: ದಿ (ಇನ್)ಕಂಪ್ಲೀಟ್ ಸ್ಟೋರಿ
ಶ್ರೀ ವಿನೋದ್ ಕೌಲ್ ಅವರು ಇಂಗ್ಲಿಷ್‌ನಲ್ಲಿ ರಚಿಸಿರುವ ಈ ಪುಸ್ತಕವು ಪತ್ರಗಳು, ಛಾಯಾಚಿತ್ರಗಳು, ನೆನಪುಗಳು ಮತ್ತು ಸಂಭಾಷಣೆಗಳ ಮೂಲಕ ಚಲನಚಿತ್ರ ನಿರ್ಮಾಪಕ ಅವತಾರ್ ಕೌಲ್ ಅವರ ಜೀವನ ಮತ್ತು ಅಪೂರ್ಣ ಪರಂಪರೆಯನ್ನು ದಾಖಲಿಸುತ್ತದೆ. ಅವರ ಏಕೈಕ ಚಿತ್ರ '27 ಡೌನ್' (1974), ಭಾರತೀಯ ನವ ಅಲೆ ಸಿನಿಮಾದ ಮೈಲಿಗಲ್ಲಾಯಿತು ಮತ್ತು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಅವರು ತಮ್ಮ 34 ನೇ ವಯಸ್ಸಿನಲ್ಲಿ, ಮುಂಬೈನಲ್ಲಿ ಸ್ನೇಹಿತನನ್ನು ರಕ್ಷಿಸಲು ಪ್ರಯತ್ನಿಸುತ್ತಿರುವಾಗ, ದುರಂತಮಯವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ದಿನದಂದೇ ಈ ಪ್ರಶಸ್ತಿಯನ್ನು ಘೋಷಿಸಲಾಗಿತ್ತು.
ಸಿನಿಮಾ: ವಿವಿಧ ಆಯಾಮ್
ಶ್ರೀ ರಾಜೇಂದ್ರ ಭಟ್ ಅವರು ಹಿಂದಿಯಲ್ಲಿ ಸಂಕಲಿಸಿರುವ ಈ ಸಂಕಲನವು, ಎಫ್‌ಟಿಐಐ (FTII) ನಿಯತಕಾಲಿಕೆ 'ಲೆನ್ಸೈಟ್'ನ (Lensight) ರೂಪಾಂತರಿಸಿದ ಲೇಖನಗಳು ಮತ್ತು ಸಂವಾದಗಳನ್ನು ಒಟ್ಟುಗೂಡಿಸುತ್ತದೆ. ಇದು ಚಲನಚಿತ್ರ ಇತಿಹಾಸ, ಸಿನಿಮಾಟೋಗ್ರಫಿ, ವಿಶ್ವ ಸಿನಿಮಾ ಮತ್ತು ಚಲನಚಿತ್ರ ನಿರ್ಮಾಣದ ಹಿಂದಿನ ಸೃಜನಶೀಲ ಪ್ರಕ್ರಿಯೆಗಳ ಕುರಿತು ಒಳನೋಟಗಳನ್ನು ನೀಡುತ್ತದೆ, ಸಿನಿಮಾದ ಕುರಿತಾದ ವೈವಿಧ್ಯಮಯ ದೃಷ್ಟಿಕೋನಗಳನ್ನು ವಿಶಾಲ ಹಿಂದಿ ಓದುಗ ವರ್ಗಕ್ಕೆ ತಲುಪಿಸುತ್ತದೆ.
ಐಎಫ್‌ಎಫ್‌ಐಲಾಯ್ಡ್ (IFFILOID) ಅನ್ನು ಇಲ್ಲಿ ಓದಿ: https://www.pib.gov.in/iffi/57/iffiLoid.aspxyr=2026&lang=1®=48
*************