ಪ್ರಕಟಣಾ ದಿನಾಂಕ:
17 NOV 2026 12:25PM by PIB Bengaluru
ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಮತ್ತು ಗ್ರಾಮೀಣ ಅಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಇಂದು 2025-26ನೇ ಸಾಲಿನ ತೋಟಗಾರಿಕೆ ಬೆಳೆಗಳ ಪ್ರದೇಶ ಮತ್ತು ಉತ್ಪಾದನೆಯ ಮೂರನೇ ಮುಂಚಿತ ಅಂದಾಜುಗಳನ್ನು ಬಿಡುಗಡೆ ಮಾಡುವ ಮೂಲಕ ದೇಶದ ರೈತರಿಗೆ ಪ್ರೋತ್ಸಾಹಕಾರಿ ಸುದ್ದಿ ನೀಡಿದರು. ಇತ್ತೀಚಿನ ಅಂದಾಜುಗಳ ಪ್ರಕಾರ, 2025-26 ರಲ್ಲಿ ಭಾರತದ ಒಟ್ಟು ತೋಟಗಾರಿಕೆ ಉತ್ಪಾದನೆ 3,869.15 ಲಕ್ಷ ಟನ್ ತಲುಪಲಿದೆ ಎಂದು ನಿರೀಕ್ಷಿಸಲಾಗಿದೆ, ಇದು 2024-25 ರಲ್ಲಿ ದಾಖಲಾಗಿರುವ 3,707.38 ಲಕ್ಷ ಟನ್ ಗಳಿಗಿಂತ 161.77 ಲಕ್ಷ ಟನ್ ಅಥವಾ 4.36% ಹೆಚ್ಚಳವಾಗಿದೆ. ನಿರೀಕ್ಷಿತ ಬೆಳವಣಿಗೆಯ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿದ ಶ್ರೀ ಚೌಹಾನ್, ತೋಟಗಾರಿಕೆ ಉತ್ಪಾದನೆಯಲ್ಲಿ ಗಮನಾರ್ಹ ಹೆಚ್ಚಳವು ಭಾರತದ ರೈತರ ಕಠಿಣ ಪರಿಶ್ರಮ ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ರೈತ ಸ್ನೇಹಿ ನೀತಿಗಳ ಪರಿಣಾಮವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. ಈ ದಾಖಲೆಯ ಉತ್ಪಾದನೆಯು ದೇಶದ ಪೌಷ್ಟಿಕಾಂಶದ ಭದ್ರತೆಯನ್ನು ಬಲಪಡಿಸುವುದಲ್ಲದೆ, ತೋಟಗಾರಿಕಾ ರೈತರ ಆದಾಯವನ್ನು ಹೆಚ್ಚಿಸಲು ನೇರವಾಗಿ ಕೊಡುಗೆ ನೀಡುತ್ತದೆ ಎಂದು ಸಚಿವರು ತಿಳಿಸಿದರು. ರೈತರ ಈ ಪ್ರಯತ್ನಗಳಿಗಾಗಿ ದೇಶಾದ್ಯಂತ ಇರುವ ರೈತರನ್ನು ಅವರು ಅಭಿನಂದಿಸಿದರು ಹಾಗೂ ಈ ಬೆಳವಣಿಗೆಯು ಭಾರತೀಯ ಕೃಷಿ ಸಮುದಾಯದ ಸಮರ್ಪಣೆ ಮತ್ತು ಕಠಿಣ ಪರಿಶ್ರಮವನ್ನು ತೋರಿಸುತ್ತದೆ ಎಂದು ಹೇಳಿದರು.
ಭಾರತೀಯ ಕೃಷಿಯು ಗಮನಾರ್ಹ ಮತ್ತು ಉತ್ತೇಜಕ ವೈವಿಧ್ಯೀಕರಣವನ್ನು ಕಾಣುತ್ತಿದೆ, ರೈತರು ಸಾಂಪ್ರದಾಯಿಕ ಬೆಳೆಗಳನ್ನು ಮೀರಿ ಹಣ್ಣುಗಳು,ತರಕಾರಿಗಳು, ಹೂವುಗಳು, ಸಾಂಬಾರ ಪದಾರ್ಥಗಳು, ಗೋಡಂಬಿ, ತೆಂಗು ಮತ್ತು ಕೋಕೋ ನಂತಹ ತೋಟದ ಬೆಳೆಗಳು ಹಾಗೂ ಸುಗಂಧ ಮತ್ತು ಔಷಧೀಯ ಸಸ್ಯಗಳ ಕೃಷಿಯತ್ತ ಮುಖ ಮಾಡುತ್ತಿದ್ದಾರೆ ಎಂದು ಶ್ರೀ ಚೌಹಾಣ್ ಗಮನ ಸೆಳೆದರು. ವಾಣಿಜ್ಯ ಮತ್ತು ಹೆಚ್ಚು ಮೌಲ್ಯದ ಬೆಳೆಗಳ ಮೇಲಿನ ಈ ಬೆಳೆಯುತ್ತಿರುವ ಆಸಕ್ತಿಯು ರೈತರಿಗೆ ಆದಾಯದ ಹೊಸ ಮಾರ್ಗಗಳನ್ನು ತೆರೆಯುತ್ತಿರುವುದರ ಜೊತೆಗೆ ಕೃಷಿ ವಲಯದಲ್ಲಿ ಸ್ವಾವಲಂಬನೆ ಮತ್ತು ಬೆಳವಣಿಗೆಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ ಎಂದರು. ಸಚಿವರ ಪ್ರಕಾರ, ತೋಟಗಾರಿಕೆ ಅಡಿಯಲ್ಲಿನ ಪ್ರದೇಶದ ಕಡಿತದ ನಡುವೆಯೂ ಉತ್ಪಾದನೆಯಲ್ಲಿ ಆದ ಹೆಚ್ಚಳವು ಇತ್ತೀಚಿನ ಅಂದಾಜುಗಳ ಪ್ರಮುಖ ಅಂಶವಾಗಿದೆ. ತೋಟಗಾರಿಕಾ ಬೆಳೆಗಳ ಒಟ್ಟು ವಿಸ್ತೀರ್ಣವು 2024-25ರಲ್ಲಿದ್ದ 301.36 ಲಕ್ಷ ಹೆಕ್ಟೇರ್ಗೆ ಹೋಲಿಸಿದರೆ, 2025-26ರಲ್ಲಿ ಅಂದಾಜು 297.21 ಲಕ್ಷ ಹೆಕ್ಟೇರ್ ಎಂದು ಅಂದಾಜಿಸಲಾಗಿದೆ. ಸಾಗುವಳಿ ಪ್ರದೇಶ ಇಳಿಕೆಯಾದರೂ, ಹಣ್ಣುಗಳು,ತರಕಾರಿಗಳು, ಹೂವುಗಳು, ತೋಟದ ಬೆಳೆಗಳು ಮತ್ತು ಸುಗಂಧ ಹಾಗೂ ಔಷಧೀಯ ಸಸ್ಯಗಳಲ್ಲಿ ಉತ್ಪಾದನೆ ಹೆಚ್ಚಾಗುವ ನಿರೀಕ್ಷೆಯಿದೆ.
ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಇತರ ಸರ್ಕಾರಿ ಏಜೆನ್ಸಿಗಳಿಂದ ಪಡೆದ ಮಾಹಿತಿಯ ಆಧಾರದ ಮೇಲೆ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯು ಬಿಡುಗಡೆ ಮಾಡಿರುವ ಈ ಅಂದಾಜುಗಳು, ವಲಯದ ನಿರಂತರ ಬೆಳವಣಿಗೆ ಮತ್ತು ಸುಧಾರಿತ ಉತ್ಪಾದಕತೆಯನ್ನು ಪ್ರತಿಬಿಂಬಿಸುತ್ತವೆ.
ಹಣ್ಣಿನ ಉತ್ಪಾದನೆ ಶೇ. 4.60 ರಷ್ಟು ಹೆಚ್ಚಳದ ನಿರೀಕ್ಷೆ
ಹಣ್ಣಿನ ಉತ್ಪಾದನೆಯು 2024-25ರಲ್ಲಿದ್ದ 1,176.49 ಲಕ್ಷ ಟನ್ಗಳಿಂದ 2025-26ರಲ್ಲಿ 1,230.66 ಲಕ್ಷ ಟನ್ಗಳಿಗೆ ಅಂದರೆ 54.18 ಲಕ್ಷ ಟನ್ (ಶೇ. 4.60 ರಷ್ಟು) ಏರಿಕೆಯಾಗುವ ಅಂದಾಜಿದೆ. ಬಾಳೆ, ಮಾವು, ಪಪ್ಪಾಯಿ, ಸೇಬು, ದಾಳಿಂಬೆ ಮತ್ತು ಹಲಸಿನ ಹಣ್ಣಿನ ಉತ್ತಮ ಉತ್ಪಾದನೆಯೇ ಈ ಸುಧಾರಿತ ಇಳುವರಿಗೆ ಪ್ರಮುಖ ಕಾರಣ.
ತರಕಾರಿ ಉತ್ಪಾದನೆ 2,272.68 ಲಕ್ಷ ಟನ್ ತಲುಪುವ ನಿರೀಕ್ಷೆ
ತರಕಾರಿ ಕೃಷಿಯಲ್ಲೂ ರೈತರು ಉತ್ತಮ ಬೆಳವಣಿಗೆಯನ್ನು ದಾಖಲಿಸಿದ್ದಾರೆ. ತರಕಾರಿಗಳ ವಿಸ್ತೀರ್ಣ 117.91 ಲಕ್ಷ ಹೆಕ್ಟೇರ್ನಿಂದ 119.31 ಲಕ್ಷ ಹೆಕ್ಟೇರ್ಗೆ ಹೆಚ್ಚಾಗುವ ಅಂದಾಜಿದೆ. ತರಕಾರಿ ಉತ್ಪಾದನೆಯು 2024-25ರ 2,177.97 ಲಕ್ಷ ಟನ್ಗಳಿಂದ 2025-26ರಲ್ಲಿ ಶೇ. 4.35ರಷ್ಟು ಹೆಚ್ಚಾಗಿ 2,272.68 ಲಕ್ಷ ಟನ್ಗಳಿಗೆ ಏರಿಕೆಯಾಗುವ ನಿರೀಕ್ಷೆಯಿದೆ. ಆಲೂಗಡ್ಡೆ, ಟೊಮೆಟೊ,ಬದನೆಕಾಯಿ, ಸೋರೆಕಾಯಿ, ಸೌತೆಕಾಯಿ, ಎಲೆಕೋಸು, ಹುರಳಿಕಾಯಿ, ಮತ್ತು ಬಟಾಣಿಗಳ ಹೆಚ್ಚಿನ ಉತ್ಪಾದನೆಯಿಂದ ಈ ಹೆಚ್ಚಳವಾಗಿದೆ. ಆಲೂಗಡ್ಡೆ ಮತ್ತು ಟೊಮೆಟೊ ಉತ್ಪಾದನೆಗಳೆರಡರಲ್ಲೂ ಬಲವಾದ ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ. ಆಲೂಗಡ್ಡೆ ಉತ್ಪಾದನೆಯು ಕಳೆದ ವರ್ಷದ 585.71 ಲಕ್ಷ ಟನ್ಗಳಿಂದ ಶೇ. 11.95ರಷ್ಟು ಏರಿಕೆಯಾಗಿ 655.70 ಲಕ್ಷ ಟನ್ ಎಂದು ಅಂದಾಜಿಸಲಾಗಿದೆ. ಟೊಮೆಟೊ ಉತ್ಪಾದನೆಯು 205.99 ಲಕ್ಷ ಟನ್ಗಳಿಂದ 214.11 ಲಕ್ಷ ಟನ್ಗಳಿಗೆ ಹೆಚ್ಚಾಗುವ ನಿರೀಕ್ಷೆಯಿದೆ. ಈರುಳ್ಳಿ ಉತ್ಪಾದನೆಯನ್ನು 288.96 ಲಕ್ಷ ಟನ್ ಎಂದು ಅಂದಾಜಿಸಲಾಗಿದೆ.
ಹೂವಿನ ಉತ್ಪಾದನೆಯಲ್ಲಿ ಸುಮಾರು ಶೇ. 14.5ರಷ್ಟು ಬೆಳವಣಿಗೆ ದಾಖಲು
ಹೂವಿನ ಉತ್ಪಾದನೆಯಲ್ಲೂ ಗಮನಾರ್ಹ ಏರಿಕೆ ನಿರೀಕ್ಷಿಸಲಾಗಿದೆ. ಹೂಗಳ ಉತ್ಪಾದನೆಯು 2024-25ರಲ್ಲಿದ್ದ 42.65 ಲಕ್ಷ ಟನ್ಗಳಿಂದ 2025-26ರಲ್ಲಿ 48.82 ಲಕ್ಷ ಟನ್ಗಳಿಗೆ ಅಂದರೆ ಸುಮಾರು ಶೇ. 14.45 ರಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. ಹೂವಿನ ಕೃಷಿಯ ವಿಸ್ತೀರ್ಣವೂ 4.10 ಲಕ್ಷ ಹೆಕ್ಟೇರ್ಗೆ ಏರಿಕೆಯಾಗಿದೆ.
ತೋಟದ ಬೆಳೆಗಳು ಮತ್ತು ಔಷಧೀಯ ಸಸ್ಯಗಳ ಬೆಳವಣಿಗೆ
ಅಡಿಕೆ, ತೆಂಗು, ಗೋಡಂಬಿ, ವೀಳ್ಯದೆಲೆ ಮತ್ತು ಕೋಕೋ ಸೇರಿದಂತೆ ತೋಟದ ಬೆಳೆಗಳ ವಿಸ್ತೀರ್ಣ ಮತ್ತು ಉತ್ಪಾದನೆ ಎರಡರಲ್ಲೂ ಹೆಚ್ಚಳವಾಗಿರುವುದನ್ನು ಮೂರನೇ ಮುಂಗಡ ಅಂದಾಜುಗಳು ಸೂಚಿಸುತ್ತವೆ. ಅವುಗಳ ಒಟ್ಟು ಉತ್ಪಾದನೆಯು ಶೇ. 7.56ರಷ್ಟು ಹೆಚ್ಚಾಗಿ 182.64 ಲಕ್ಷ ಟನ್ಗಳಿಗೆ ತಲುಪುವ ಅಂದಾಜಿದೆ. ಸುಗಂಧ ಮತ್ತು ಔಷಧೀಯ ಸಸ್ಯಗಳ ಉತ್ಪಾದನೆಯು 9.01 ಲಕ್ಷ ಟನ್ಗಳಿಂದ 9.28 ಲಕ್ಷ ಟನ್ಗಳಿಗೆ ಏರಿಕೆಯಾಗುವ ನಿರೀಕ್ಷೆಯಿದೆ.
ಸಾಂಬಾರ ಪದಾರ್ಥಗಳ ಉತ್ಪಾದನೆ 123.54 ಲಕ್ಷ ಟನ್ ಅಂದಾಜು
ಅಡಿಕೆ ಮತ್ತು ಸಾಂಬಾರ ಪದಾರ್ಥಗಳ ಅಭಿವೃದ್ಧಿ ನಿರ್ದೇಶನಾಲಯದ ದತ್ತಾಂಶದ ಪ್ರಕಾರ, ಅರಿಶಿನ, ಬೆಳ್ಳುಳ್ಳಿ, ಕರಿಬೇವಿನ ಎಲೆಗಳು ಮತ್ತು ಏಲಕ್ಕಿಯ ಉತ್ತಮ ಉತ್ಪಾದನೆಯು ಸಾಂಬಾರ ಪದಾರ್ಥಗಳ ವಲಯದ ಬೆಳವಣಿಗೆಗೆ ಬೆಂಬಲ ನೀಡುವ ನಿರೀಕ್ಷೆಯಿದೆ. 2025-26ರಲ್ಲಿ ಸಾಂಬಾರ ಪದಾರ್ಥಗಳ ಅಡಿಯಲ್ಲಿನ ಒಟ್ಟು ಬೆಳೆ ವಿಸ್ತೀರ್ಣ 47.56 ಲಕ್ಷ ಹೆಕ್ಟೇರ್ ಎಂದು ಅಂದಾಜಿಸಲಾಗಿದ್ದು, ಉತ್ಪಾದನೆಯು 123.54 ಲಕ್ಷ ಟನ್ಗಳಷ್ಟು ಇರಲಿದೆ ಎಂದು ನಿರೀಕ್ಷಿಸಲಾಗಿದೆ.
*****