ಪ್ರಕಟಣಾ ದಿನಾಂಕ:
06 NOV 2026 2:54PM by PIB Bengaluru
ರಾಷ್ಟ್ರೀಯ ಉದ್ದೇಶದ ಸಾಧನೆಯತ್ತ ತನ್ನ ಸಂಸ್ಥೆಯ ಬದ್ಧತೆಯನ್ನು ಪ್ರದರ್ಶಿಸಿರುವ ಹಣಕಾಸು ಸೇವೆಗಳ ಇಲಾಖೆಯು, ತನ್ನ ಆಡಳಿತಾತ್ಮಕ ನಿಯಂತ್ರಣದ ವ್ಯಾಪ್ತಿಯಲ್ಲಿರುವ ಸಂಸ್ಥೆಗಳ ಸೌರ ವಿದ್ಯುತ್ ಅಳವಡಿಕೆಗೆ ಸಾಧ್ಯವಿರುವ ಎಲ್ಲ ಗುರುತಿಸಲಾದ ಕಟ್ಟಡಗಳಲ್ಲೂ ಶೇ. 100ರಷ್ಟು ಗುರಿಯನ್ನು ಯಶಸ್ವಿಯಾಗಿ ಸಾಧಿಸಿದೆ. ಒಟ್ಟು 4,144 ಕಟ್ಟಡಗಳ ಪೈಕಿ, ಛಾವಣಿಯ ಬಳಕೆಯ ಹಕ್ಕುಗಳು, ಕಟ್ಟಡದ ಮಾಲೀಕತ್ವ, ನೆರಳಿನ ಸ್ಥಿತಿಗತಿ ಮತ್ತು ಭಾರ ಹೊರುವ ಸಾಮರ್ಥ್ಯ ಸೇರಿದಂತೆ ತಾಂತ್ರಿಕ ಹಾಗೂ ರಚನಾತ್ಮಕ ಸಾಧ್ಯತೆಗಳ ಮೌಲ್ಯಮಾಪನ ನಡೆಸಿದ ಬಳಿಕ, ಸೌರ ವಿದ್ಯುತ್ ವ್ಯವಸ್ಥೆ ಅಳವಡಿಕೆಗೆ ಸೂಕ್ತವಾದ 2,576 ಕಟ್ಟಡಗಳನ್ನು ಗುರುತಿಸಲಾಯಿತು. ಹಣಕಾಸು ಸೇವೆಗಳ ಇಲಾಖೆಯ ಅಧೀನದಲ್ಲಿರುವ ಸಂಸ್ಥೆಗಳು ಈ ಎಲ್ಲ 2,576 ಕಟ್ಟಡಗಳ ಮೇಲ್ಛಾವಣಿಗಳಲ್ಲಿ ಸೋಲಾರ್ ಪಿವಿ ವಿದ್ಯುತ್ ಘಟಕಗಳನ್ನು ಸಂಪೂರ್ಣವಾಗಿ ಸ್ಥಾಪಿಸಿ ಕಾರ್ಯಾರಂಭಗೊಳಿಸಿವೆ. ಈ ಮೂಲಕ ಒಟ್ಟು 61.50 ಮೆಗಾವಾಟ್ ಸ್ಥಾಪಿತ ಶುದ್ಧ ಇಂಧನ ಸಾಮರ್ಥ್ಯವನ್ನು ಸಾಧಿಸಿವೆ.
ಈ ಮಹತ್ವದ ಸಾಧನೆಯನ್ನು ಪರಿಗಣಿಸಿ, ಹಣಕಾಸು ಸೇವೆಗಳ ಇಲಾಖೆಗೆ 05.11.2026ರಂದು ನವದೆಹಲಿಯ ಭಾರತ್ ಮಂಟಪಂನಲ್ಲಿ “ಕೇಂದ್ರ ಸಚಿವಾಲಯಗಳು/ಇಲಾಖೆಗಳ ಪೈಕಿ ಅತಿ ಹೆಚ್ಚು ಸರ್ಕಾರಿ ಕಟ್ಟಡಗಳಿಗೆ ಸೌರ ವಿದ್ಯುತ್ ವ್ಯವಸ್ಥೆ ಅಳವಡಿಕೆ” ವಿಭಾಗದಲ್ಲಿ ಪಿಎಂ ಸೂರ್ಯ ಘರ್ ಶ್ರೇಷ್ಠತಾ ಪ್ರಶಸ್ತಿ (ದ್ವಿತೀಯ ಸ್ಥಾನ) ನೀಡಿ ಗೌರವಿಸಲಾಯಿತು.

ಭಾರತ್ ರಿನ್ಯೂವಬಲ್ ಎನರ್ಜಿ ಶೃಂಗಸಭೆ ಮತ್ತು ಎಕ್ಸ್ಪೋ 2026ರ (ಬಿಆರ್ಇ ಶೃಂಗಸಭೆ) ಸಮಾರೋಪ ಅಧಿವೇಶನದ ಸಂದರ್ಭದಲ್ಲಿ ನಡೆದ ಪಿಎಂ ಸೂರ್ಯ ಘರ್ ಶ್ರೇಷ್ಠತಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತದ ಉಪರಾಷ್ಟ್ರಪತಿಯವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು (ಎಂಎನ್ಆರ್ಇ), 9ನೇ ಅಂತಾರಾಷ್ಟ್ರೀಯ ಸೌರ ಒಕ್ಕೂಟದ (ಐಎಸ್ಎ) ಸಾಮಾನ್ಯ ಸಭೆ ಹಾಗೂ 4ನೇ ಅಂತಾರಾಷ್ಟ್ರೀಯ ಹಸಿರು ಹೈಡ್ರೋಜನ್ ಸಮ್ಮೇಳನದ (ಐಸಿಜಿಎಚ್) ಜೊತೆಗೆ ಈ ಶೃಂಗಸಭೆಯನ್ನು ಆಯೋಜಿಸಿತ್ತು.
ಪಿಎಂ ಸೂರ್ಯ ಘರ್ ಶ್ರೇಷ್ಠತಾ ಪ್ರಶಸ್ತಿಯ ಪ್ರದಾನವು ಭಾರತದ ವಿಶಾಲವಾದ ನಿವ್ವಳ ಶೂನ್ಯ ಹೊರಸೂಸುವಿಕೆ ಗುರಿಗಳ ಸಾಧನೆಗೆ ಹಣಕಾಸು ಸೇವೆಗಳ ಇಲಾಖೆಯು ನೀಡುತ್ತಿರುವ ನಿರಂತರ ಕೊಡುಗೆಯನ್ನು ಎತ್ತಿಹಿಡಿಯುತ್ತದೆ. ಮೂಲಸೌಕರ್ಯ ಅಭಿವೃದ್ಧಿಯ ಮೂಲಕ ಸುಸ್ಥಿರ ಅಭಿವೃದ್ಧಿಗೆ ಉತ್ತೇಜನ ನೀಡುವಲ್ಲಿ ಹಣಕಾಸು ಸಂಸ್ಥೆಗಳ ಸಕ್ರಿಯ ಪಾತ್ರವನ್ನೂ ಇದು ಮತ್ತಷ್ಟು ಬಲಪಡಿಸುತ್ತದೆ.
*****